Monday, April 23, 2012

ಅಚ್ಚರಿಯ ಬದುಕಿದು... ಬದುಕಿಬಿಡು ಒಮ್ಮೆ !-ಭಾಗ-1


{ಈ ಕಥೆ ಕಳೆದ ಭಾನುವಾರ[22/4/2012]ದ ಉದಯವಾಣಿಯ ಸಾಪ್ತಾಹಿಕ ಸಂಚಿಕೆಯಲ್ಲಿ  ಪ್ರಕಟವಾಗಿದೆ.} ರೆನ್ಸಿಯಿದ್ದೂ, ನೆಟ್‌ವರ್ಕ್‌ ಇದ್ದೂ ಬ್ಯಾಟರಿ ಸತ್ತ ಮೊಬೈಲಿನಂತಾಗಿರುವ ನಟರಾಜ ಅಲಿಯಾಸ್‌ ನಟ್ಟೂನನ್ನು ನೋಡಿ ಸುಶೀಲಮ್ಮನಿಗೇ ಅಯ್ಯೋ ಎನಿಸಿತು. ಬೆಳಗ್ಗಿಂದ ಸಂಜೆವರೆಗೆ ಟಿವಿಯಲ್ಲಿ ಒದರಿದ್ದನ್ನೇ ಒದರುವ ನ್ಯೂಸ್‌ ಚಾನಲ್ಲಿನಂತೆ ನಟ್ಟೂ ಏನೇನೋ ಗೊಣಗುವುದು, ತಲೆಯ ಮೇಲೇನೋ ಗಟ್ಟಿಯಾಗಿ ಅಂಟಿಸಿದ್ದನ್ನು ಕೆಳಬೀಳಿಸುವವನಂತೆ ತಲೆಯನ್ನು ಅತ್ತಿಂದಿತ್ತ ಜೋರಾಗಿ ಅಲ್ಲಾಡಿಸುವುದನ್ನು ಸುಮ್ಮನೇ ನೋಡುತ್ತಿದ್ದ ಸುಶೀಲಮ್ಮನಿಗೆ ಯಾಕೆ ಯಾರು ಅವನಲ್ಲಿ ಏನನ್ನೂ ಹೇಳುತ್ತಿಲ್ಲ ಎನಿಸಿ ಬಹುಶಃ ಈಗ ಹೇಳುತ್ತಾರೇನೋ ಎಂದು ಮಗ ಅಶೋಕನ ರೂಮಿನ ಕಡೆಗೊಮ್ಮೆ ಸೊಸೆ ಕಾವ್ಯಾಳ ಕೊನೆಗೊಮ್ಮೆ ನೋಡುವುದು, ಅದೇ ಸ್ಪೀಡಿನಲ್ಲಿ ಟಿವಿಯ ಕಡೆಗೆ ಕಣ್ಣು ಹಾಯಿಸಿ ಅಲ್ಲಿನ ಕಥೆಯನ್ನು ಫ‚ಾಲೋ ಮಾಡುವುದು ಮಾಡುತ್ತಿದ್ದಳು. ಸುಮಾರು ಹೊತ್ತು ಅದೇ ಪ್ರಕ್ರಿಯೆಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದ ನಟ್ಟೂ ಆಮೇಲೆ ತಲೆ ಒದರಿಕೊಳ್ಳುತ್ತಲೇ ಎದ್ದುಹೊರಗಡೆ ಹೋಗಿಬಿಟ್ಟ. ಅವನು ಹೋದದ್ದನ್ನು ಖಾತರಿ ಮಾಡಿಕೊಂಡು ಜುರಾಸಿಕ್‌ ಪಾರ್ಕಿನ ಡೈನೋಸಾರ್‌ನಂತೆ ನಿಧಾನಕ್ಕೆ ಹೆಜ್ಜೆಹಾಕುತ್ತ, ಸದ್ಯ ಜೀವ ಬಂತೆಂಬುವಂತೆ ಹೊರ ಬಂದ ಅಶೋಕ ತನ್ನನ್ನೇ ರಿಯಾಲಿಟಿ ಶೋನಲ್ಲಿ ಹಸಿಮಾಂಸ ಕಚ್ಚಿ ತಿನ್ನುತ್ತಿದ್ದ ಪೇಟೆಯ ಅನಾಗರಿಕರನ್ನು ನೋಡುವಂತೆ ನೋಡುತ್ತಿದ್ದ ಅಮ್ಮನನ್ನು ನೋಡಿ, ಬೈದರೂ ಅಂದರೂ ನಗುನಗುತ್ತಲೇ ಉತ್ತರಿಸುವ ನಿಯತ್ತಾಗಿ "ವಂದನೆಗಳು ಶುಭದಿನ' ಎನ್ನುವ ಕಸ್ಟಮರ್‌ಕೇರ್‌ ಗಿರಾಕಿಯಂತೆ, "ವರ್ಕ್‌ ಟೆನÒನ್‌ ಕಣವ್ವಾ... ನಿಂಗೇನೂ ಅರ್ಥ ಆಗಲ್ಲಾ...' ಎಂದ. ಕಾರ್ಯಕ್ರಮದ ಮಧ್ಯಮಧ್ಯ ಇಣುಕಿಹಾಕುವ ಟ್ರೆ„ಲರಿನಂತೆ ಆ ಮಾತನ್ನು ಅಮ್ಮನಿಗೇ ಈಗಾಗಲೇ ನೂರಾರು ಬಾರಿ ಹೇಳಿಬಿಟ್ಟಿದ್ದ. ಸುಶೀಲಮ್ಮ ಮಾತನಾಡಲಿಲ್ಲ. ಬದಲಿಗೆ ಯಾಕೆ ಹೀಗೆ ಅಪ್ಪಮಗನಿಗೇ ಬುದ್ಧಿ ಹೇಳಲು ಅಥವಾ ಗದರಿಸಲು ಹೆದರುತ್ತಿರುವನಾ? ಅಥವಾ ಇದ್ಯಾಕೆ ಯಾರೂ ನಟ್ಟೂನನ್ನು ಕೂರಿಸಿಕೊಂಡು ಏನಾಯಿತು... ಯಾಕೆ ಹಿಂಗೆ ಎಂದು ಕೇಳುತ್ತಿಲ್ಲ ಎನ್ನುವುದು ಕರೋಡಪತಿ ಸ್ಪರ್ಧೆಯ ಕೋಟಿ ರೂಪಾಯಿಯ ಪ್ರಶ್ನೆಯಂತೆ ಕಾಡತೊಡಗಿತು.

ಸುಶೀಲಮ್ಮ ಬೆಂಗಳೂರಿಗೆ ಬಂದು ಕೇವಲ ಆರು ತಿಂಗಳಾಗಿತ್ತು.ಅದೂ ಗಂಡ ಸತ್ತು ಒಂಬತ್ತು ವರ್ಷದ ನಂತರ. ಮಗ ಅದೆಷ್ಟೇ ಹೇಳಿದ್ದರೂ ತನ್ನೂರು ತನ್ನ ಜನ ಬಿಟ್ಟು ಬರಲು ಸುಶೀಲಮ್ಮನಿಗೇ ಯಾಕೋ ಮನಸ್ಸೇ ಒಪ್ಪಿರಲಿಲ್ಲ. ಇರುವ ಒಬ್ಬನೆ ಒಬ್ಬ ಮಗನನ್ನು ಕಷ್ಟಪಟ್ಟು ಕೂಲಿ ಮಾಡಿಯೇ ಓದಿಸಿದ್ದರು ಸಿದ್ದಪ್ಪ ಮತ್ತು ಸುಶೀಲಮ್ಮ. ಇಡೀ ತಮ್ಮ ವಂಶದಲ್ಲಿಯೇ ಯಾರು ಜಾಸ್ತಿ ಓದಿದವರಿಲ್ಲದಿದ್ದರಿಂದ ಮಗ ಅಶೋಕನನ್ನು ಓದಿಸಿಯೇ ತೀರಬೇಕೆಂಬ ಹಠ ಗಂಡ-ಹೆಂಡತಿಯರದಾಗಿತ್ತು. ಮಗ ಚೆನ್ನಾಗಿ ಓದಿ ಒಳ್ಳೆಯ ಕೆಲಸ ಹಿಡಿದು ಊರಲ್ಲಿ ಓಡಾಡಿಕೊಂಡಿದ್ದರೆ ಅದೆಷ್ಟು ಚೆನ್ನ. ತಮ್ಮ ಮೈಲೇಜು ಸರೀಕರ, ಸಂಬಂಧಿಕರ ಮುಂದೆ ಮನಸಿನ ವೇಗದಲ್ಲಿ ಓಡುತ್ತದೆ ಎಂದು ಕನಸುಕಟ್ಟಿಕೊಂಡಿದ್ದರು. ಆದರೆ, ಅಶೋಕ ಅಂಥ ಯಾವ ಆಫ‚‌ರ್‌ಗಳನ್ನೂ ತನ್ನ ತಾರೀಫಿ‚ನಲ್ಲಿ ಸೇರಿಸಿರಲಿಲ್ಲ. ಅಪ್ಪಾ$ಇದು ಚೆನ್ನಾಗಿದೆ... ಇದನ್ನ ಓದಿದರೆ ಒಳ್ಳೇ ಲಾಭವಿದೆ... ಅದಕ್ಕೆ ಇಷ್ಟು ಖರ್ಚಾಗುತ್ತದೆ ಎಂದಷ್ಟೇ ಹೇಳಿ ದುಡ್ಡು ನಮ್ಮದಾದರೂ ತರಹೇವಾರಿ ಆಫ‚‌ರ್‌ ಇಟ್ಟು ತಮಗಿಷ್ಟವಾದದ್ದನ್ನೇ ಗಿರಾಕಿಗಳಿಗೆ ತಗಲಾಕುವ ಸೂಪರ್‌ಬಜಾರುಗಳಂತೆ ಹೇಳಿ ಹಣ ಕೀಳುತ್ತಿದ್ದ. ಮೈಸೂರಿನ ಹಾಸ್ಟೆಲ್ಲಿನಲ್ಲಿಯೇ ಉಳಿದುಕೊಂಡು ವಾರಕ್ಕೊಮ್ಮೆ ರಜೆಯಿದ್ದರೂ ಮನೆಗೆ ಬರದೇ ತಾನಿಲ್ಲಿಯೇ ಓದಿಕೊಳ್ಳುತ್ತಿದ್ದೇನೆಂದು ಹೇಳಿಕಳುಹಿಸುತ್ತಿದ್ದ ಅಶೋಕ ರಜಾದಿನವನ್ನು ಮಾತ್ರ ಕಾವ್ಯಾಳಿಗಾಗಿ ಮೀಸಲಾಗಿಟ್ಟಿದ್ದ. ಕಾವ್ಯಾ ಅವನ ಸಹಪಾಠಿ. ಇನ್ನೇನು ಓದು ಮುಗಿಯಿತು, ಕೆಲಸವೂ ಸಿಗುತ್ತದೆ... ಇದೇ ಸಂದರ್ಭದಲ್ಲಿ ಸ್ಕೋಪ್‌ ತೆಗೆದುಕೊಳ್ಳುವ ಕಾರ್ಯಕ್ರಮಗಳಾದ ಮದುವೆಗೆ ಹುಡುಗಿ ನೋಡುವುದು, ಮದುವೆ-ಸಮಾರಂಭಗಳಿಗೆ ಹೋಗಿ ನಿಮ್ಮ ಮಗ ಓದುತ್ತಿದ್ದಾನಾ ಎನ್ನುವ ಪ್ರಶ್ನೆಯನ್ನು ತನ್ನ ಮಗನ ಇಂಟ್ರಡಕ್ಷನ್ನಿಗಾಗಿ ಬಳಸಿಕೊಂಡು, ಆನಂತರ ಮಗ ಹೇಗೇಗೆಲ್ಲಾ ಓದಿದ ಎನ್ನುವುದನ್ನು ಸಿನೆಮಾದ ಅವಧಿಗಿಂತ ತುಸು ಜಾಸ್ತಿಯಾಗಿ, ಧಾರಾವಾಹಿಗಿಂತ ತುಸು ಕಡಿಮೆಯಾಗಿ, ಯಕ್ಷಗಾನಕ್ಕಿಂತ ಕಡಿಮೆ ಅಬ್ಬರದಲ್ಲಿ ಕೊರೆಯಬೇಕೆಂಬ ಹುನ್ನಾರಗಳನ್ನು ಯಶಸ್ವಿಯಾಗಿಸಬೇಕೆಂದು ಸುಶೀಲಮ್ಮ ಸರ್ವರೀತಿಯಲ್ಲೂ ಸಿದ್ಧಗೊಳ್ಳುತ್ತಿದ್ದರೆ ಅತ್ತ ಮಗರಾಯ ಓದು-ಮದುವೆ-ಕೆಲಸಗಳನ್ನು ಒಂದೇ ಟೈಂಲ್ಯಾಪ್ಸಿನಲ್ಲಿ ಮುಗಿಸಿಯೇಬಿಟ್ಟು ಸುಶೀಲಮ್ಮನ ಸರ್ವ ಯೋಜನೆಗಳಿಗೂ ಸ್ಟೇ ಆರ್ಡರ್‌ ತಂದುಬಿಟ್ಟಿದ್ದನಲ್ಲದೇ ಯಾವ ಸಭೆಸಮಾರಂಭಗಳಿಗೂ ಹೋಗಲಾಗದಂತೆ ಮಾಡಿಬಿಟ್ಟಿದ್ದ.  ಆವತ್ತು ಗಂಡ-ಹೆಂಡಿರಿಬ್ಬರಿಗೂ ಎದೆಯೆ ಒಡೆದುಹೋಗಿತ್ತು. ಆದರೆ, ಅವರಿಬ್ಬರು ಯಾವ ಬೀದಿನಾಟಕದ ಪಾತ್ರಧಾರಿಗೂ ಕಮ್ಮಿಯಿಲ್ಲದಂತೆ ಒಬ್ಬರ ಮುಂದೊಬ್ಬರು ಮಗನನ್ನು  ಹೊಗಳುವ ಕೆಲಸ ಮಾಡಿದ್ದರು. ಮದುವೆಯ ಮೂರನೆಯ ದಿನಕ್ಕೇ ಬೆಂಗಳೂರಿಗೆ ಹೊರಟುನಿಂತ ಮಗ-ಸೊಸೆ ಅದೆಷ್ಟು ಬಾರಿ ತಮ್ಮೊಡನೆ ಬರಲೇಬೇಕೆಂದು ರಚ್ಚೆ ಹಿಡಿದರೂ ಬರುವುದಿಲ್ಲವೆಂದು ಇವರಿಬ್ಬರು ತಾವೂ ರಚ್ಚೆ ಹಿಡಿದು ಗೆದ್ದುಬಿಟ್ಟಿದ್ದರು. 

ಇದೆಲ್ಲಾ ಮುಗಿದ ಮೇಲೆ ಒಂದೇ ನಿಟ್ಟಿನಲ್ಲಿ ಇಪ್ಪತ್ತಮೂರು ವರ್ಷಗಳು ಕಳೆದುಹೋಗಿದ್ದವು. ಅಷ್ಟೂ ದಿನಗಳನ್ನು ಮಗನ ಓದಿಗಾಗಿ ಮಾಡಿದ ಸಾಲವನ್ನು ತಮ್ಮಲ್ಲಿರುವ ಮೊಬೈಲ್‌ ಪರದೆಯಗಲದ ಜಮೀನಿನಲ್ಲಿ ದುಡಿದು ತೀರಿಸುವುದಕ್ಕೆ ಮುಡಿಪಾಗಿಟ್ಟುಬಿಟ್ಟಿದ್ದರು. ಮಗ ಪೇಟೆಯಲ್ಲಿ ಸಾವಿರಗಳನ್ನು ಬರೀ
ಮೊಬೈಲಿನಲ್ಲಿ ಮಾತಾಡಿ ಕಳೆಯುವ ಹಣವನ್ನು ಇಲ್ಲಿವರು ಕಂತುಗಳಂತೆ ತಿಂಗಳುತಿಂಗಳು ಕಟ್ಟುತ್ತಿದ್ದರು.
ಮಗ ಅಶೋಕನಿಗೆ ಗೊತ್ತಾಗಿದ್ದರೆ ಒಂದೇ ಸಾರಿ ಕಟ್ಟಿ ಚಾಪ್ಟರ್‌ ಕ್ಲೋಸು ಮಾಡುತ್ತಿದ್ದನೇನೋ... ಆದರೆ, ಸುಶೀಲಮ್ಮ ಸಿದ್ದಪ್ಪದಂಪತಿಗಳಿಗೆ ಅದ್ಯಾಕೋ ಹೇಳಬೇಕೆನ್ನಿಸಿರಲಿಲ್ಲ. ಸಾಲ ತೀರಿದ ಮೇಲೆ ಮಗ ಹಾಕುವ ಊಟ ತಿಂದುಕೊಂಡು ಅದ್ಹೇಗೆ ಸಾಯುವವರೆಗೆ ಕಾಲ ತಳ್ಳುವುದು ಎನ್ನಿಸಿದ್ದರಿಂದ ದುಡಿಯುವ ಮತ್ತು ಸಾಲ ತೀರಿಸುವ ಕಾಯಕದಲ್ಲಿ ಕೈಲಾಸ ಕಂಡುಕೊಂಡಿದ್ದರು.
 ಅಶೋಕನಿಗೆ ಮಗುವಾಯಿತು. ಮಗ, ಬೆಂಗಳೂರಿನ ಪ್ರತಿಷ್ಠಿತ ಸ್ಕೂಲಿಗೆ ದುಬಾರಿ ಹಣತೆತ್ತು ಸೇರಿಯೂ ಆಯಿತು, ಮಗನ ಕಣ್ಣಿಗೆ ಅಪ್ಪನಿಗಿಂತ ಮೊದಲೇ ಕನ್ನಡಕವೂ ಬಂದಿತು, ಮಗ ಗುಂಡುಗುಂಡಗೆ ಬೆಳೆದುಮುದ್ದಾಗಿದ್ದವನು ಬರುಬರುತ್ತ ಡುಮ್ಮನಾಗಿದ್ದದ್ದೂ ಆಯಿತು... ಹೀಗೆ. ಪ್ರತಿಸಾರಿಯೂ ಅಜ್ಜಿಯ ಊರಿಗೆ ಬಂದಾಗ ಆಗುತ್ತಿದ್ದ ಬದಲಾವಣೆಗಳು ಮಾತ್ರ ಸುಶೀಲಮ್ಮನಿಗೆ ಅಚ್ಚರಿ ತರಿಸುತ್ತಿದ್ದವು. ಹೊರಗೆ ಹೋಗಿ ಒಂದು ಆಟವಾಡದ ಮೊಮ್ಮಗ ಮಾತ್ರ ಟಿವಿಯ ನ್ಯೂಸ್‌ ರೀಡರಿನಂತೆ ಇಂಗ್ಲೀಷ್‌ ಮಾತಾಡುವುದು ಹೆಮ್ಮೆಯೆನಿಸುತ್ತಿತ್ತು. ಗೋಡೆಯ ಮೇಲೆ ಕೈಗೆ ಸಿಕ್ಕಿದ್ದರಲ್ಲಿ ಮೊಮ್ಮಗ ನಟರಾಜು ಶಿವಪಾರ್ವತಿ ಚಿತ್ರ ಬಿಡಿಸುತ್ತಿದ್ದರೆ ಸುಶೀಲಮ್ಮನಿಗೆ ಅವನ ಕೈಚಳಕ ನೋಡಿ ಅಚ್ಚರಿಯಾಗುತ್ತಿತ್ತು. ಆದರೆ ಕಾವ್ಯಾ ಮಾತ್ರ "ಓದೊRà ಅಂದ್ರೆ ಇಲ್ಲಿ ಬಂದು ಗೀಚಿ¤àಯ...' ಎಂದು ದೊಣ್ಣೆ ಹಿಡಿದು ಟಾಮ್‌ ಅಂಡ್‌ ಜೆರ್ರಿಯ ಟಾಮ್‌ನಂತೆ ಅಟ್ಟಾಡಿಸುತ್ತಿದ್ದಳು. "ನೋಡ್ತಿರಿ ಅತ್ತೆ, ನನ್ನ ಮಗ ದೊಡ್ಡ ಇಂಜಿನಿಯರಾಗ್ತಾನೆ...
ಇವ್ರಂಗೆ ಗಂಟಲು ಹರ್ಕಂಡು ಪಾಠ ಮಾಡಿ ತಿಂಗಳಿಗೆ ಸಾವ್ರ ಎಣಿಸಲ್ಲ... ಏಸಿ ರೂಮಲ್ಲಿ ಕೂತ್ಕಂಡು ಲಕ್ಷಲಕ್ಷ ಎಣಿಸ್ತಾನೆ...' ಎನ್ನುತ್ತಿದ್ದರೆ ಸುಶೀಲಮ್ಮನಿಗೆ ಅದೇಕೋ ಮುಳ್ಳಿನ ಚಪ್ಪಲಿಯನ್ನು ರೇಷ್ಮೆಯ ಬಟ್ಟೆಗೆ ಸುತ್ತಿ ಹೊಡೆದಂತಾಗುತ್ತಿತ್ತು.

*

ಬೆಂಗಳೂರಿಗೆ ಬೆಂಗಳೂರೇ ಒಂದು ಮಾಯಾನಗರಿಯಂತೆ ಸುಶೀಲಮ್ಮನಿಗೆ ಮಗನ ಮನೆಗೆ ಬಂದ ವಾರದಲ್ಲೇ ಅನ್ನಿಸತೊಡಗಿತ್ತು. ಎಲ್ಲವನ್ನೂ ಕೈಯೊಳಗಿನ ಮೊಬೈಲೆ ಮಾಡಿ ಮುಗಿಸುತ್ತಲ್ಲಾ ಎನಿಸಿ ಆ ಮಾಯಾದಂಡದ ಮೇಲೆ ಆಸಕ್ತಿ ಮೂಡಿತ್ತು. "ಈವತ್ಯಾಕೋ ಅಡಿಗೆ ಮಾಡಕ್ಕಾಗ್ಲಿಲ್ಲ ಕಣ್ರೀ ಅದ್ಕೆà ಹೋಟೆಲ್ಲಿಂದ ಏನಾದ್ರೂ ತರಿಸ್ತಿದ್ದೀನಿ ನಿಮಗೇನು ಬೇಕು?' ಎಂಬೊಂದು ಕರೆ ಗಂಡನಿಗೆ, "ಎರಡು ಪಿಜಾ, ಒಂದು ಬರ್ಗರ್‌' ಎಂದು ಹೊಟೇಲಿನವನಿಗೆ ಕುಳಿತಲ್ಲೆ ಕರೆ ಮಾಡಿದರೆ ಮುಗಿಯಿತು... ಅಲ್ಲಿಂದ ಏಳುವಷ್ಟರಲ್ಲಿ ಮನೆಗೆ ಶರವೇಗದಲ್ಲಿ ಊಟ ತಂದು ಬೀಸಾಕಿಹೋಗುವ ಯಕ್ಷಿಣಿ ದೇವತೆಗಳು...! ಬೇಗ ಏಳಲು ಅಲಾರ್ಮ್, ರೇಡಿಯೋ, ಲೆಕ್ಕ ಮಾಡುವ ಕ್ಯಾಲ್ಕುಲೇಟರ್‌, ಟೈಮು ತೋರಿಸುವ ಗಡಿಯಾರ, ದಿನ ಲೆಕ್ಕಗಳಿಗೆ ಕ್ಯಾಲೆಂಡರು... ಹೀಗೆ, ಅದೆಷ್ಟು ಕೆಲಸಗಳನ್ನು ಮೊಬೈಲೆಂಬ ಆ ಪುಟ್ಟ ಕರೆಸಾಧನ ಮಾಡುತ್ತದಲ್ಲ ಎನಿಸಿತ್ತು. ಒಂದೇ ಏಟಿಗೆ ಬೆಳಿಗೆದ್ದು ಕೂಗುವ ಕೋಳಿ, ಅಜ್ಜಿ ಕಥೆ, ಹಬ್ಬದ ಜಾನಪದದ ಹಾಡುಗಳು, ಹತ್ತು ಬೆರಳುಗಳು, ಮತ್ತದರ ಮೂರುಮೂರು ಗೀರುಗಳು, ಅಮಾವಾಸ್ಯೆ ಹುಣ್ಣಿಮೆ, ಸೂರ್ಯ ಹೀಗೆ ಎಲ್ಲವನ್ನು ಹೊಡೆದು ಬಿಸಾಡಿಬಿಟ್ಟ ಆ ಕರೆಸಾಧನ ಯಂತ್ರರೂಪದ ರಜನೀಕಾಂತ್‌ನಂತೆ ಸುಶೀಲಮ್ಮನಿಗೆ ಭಾಸವಾಗತೊಡಗಿತ್ತು. ಆದರೆ, ಪಕ್ಕದ ಮನೆಯ ಪುಟ್ಟ ಹುಡುಗ ಬಂದು ಅಜ್ಜಿ ಈವತ್ತು ಗೊತ್ತಾ ಕುಸ್ತೀಲಿ ನಾನೇ ಗೆದ್ದಿದ್ದು.. ಎಂದಾಗ ಎಲ್ಲಿ ಆಡಿದೆ ಎಂದು ಕೇಳಿದ್ದಕ್ಕೆ ಕಂಪ್ಯೂಟರಿನಲ್ಲಿ ಎಂದುತ್ತರಿಸಿದ್ದು ಅದೇನೆಂದು ತಿಳಿದುಕೊಂಡ ಸುಶೀಲಮ್ಮನಿಗೆ ಕಂಪ್ಯೂಟರಿನ ಮುಂದೆ ಮೊಬೈಲ್‌ ತುತ್ಛವಾಗಿ ಕಾಣಿಸಿತ್ತು. ಅಲ್ಲೆ ಆಟವಾಡಬಹುದು, ಓದಬಹುದು, ಸಿನೆಮಾ ನೋಡಬಹುದು ಮದುವೆ ಹೆಣ್ಣೂ ಹುಡುಕಬಹುದು, ಕರೆಂಟುಬಿಲ್‌, ವಾಟರ್‌ಬಿಲ್‌ ಸಕಲವನ್ನೂ ಕಂಪ್ಯೂಟರೆನ್ನುವ ಡಬ್ಬವೇ ಮಾಡುತ್ತದೆ ಎಂದಾಗ ಸುಶೀಲಮ್ಮ ನಿಬ್ಬೆರಗಾಗಿ ಹೋಗಿದ್ದಳು. ದಿನ ಕಳೆದಂತೆ ಬೆಂಗಳೂರಿಗೆ ಬೆಂಗಳೂರೇ ಯಂತ್ರದ ಚಕ್ರಗಳಿಗೆ ತನ್ನನ್ನು ಅರ್ಪಿಸಿಕೊಂಡಿದೆಯೆನಿಸತೊಡಗಿತ್ತು. ವಾರಗಟ್ಟಲೆ ತಿಂಗಳುಗಟ್ಟಲೇ ಊರಿನಲ್ಲಿ ಕರೆಂಟಿಲ್ಲದಿದ್ದಾಗ ಬೇಗನೇ ಊಟ ಮುಗಿಸಿ ಮಕ್ಕಳನ್ನು ಮಲಗಿಸಿಕೊಂಡು ಕಥೆ ಹೇಳುತ್ತ ಮಲಗಿಸುತ್ತಿದ್ದದ್ದು ಸುಶೀಲಮ್ಮನಿಗೆ ನೆನಪಿಗೆ ಬಂದಿತ್ತು. ಆದರೆ, ಇಲ್ಲಿ ಅರ್ಧ ದಿನ ಕರೆಂಟಿಲ್ಲದಿದ್ದರೆ ಇಡೀ ಬದುಕೇ ಅಸ್ತವ್ಯಸ್ತವಾಗುತ್ತಿದ್ದದು ಕಂಡು ಅಚ್ಚರಿಯ ಜೊತೆಜೊತೆಗೆ ಬೇಸರವೂ ಆಗುತ್ತಿತ್ತು. ಆದರೆ, ತಿಂಗಳು ಕಳೆಯುವಷ್ಟರಲ್ಲಿ ಬೆಂಗಳೂರು ಹಣವನ್ನೇ ಅಡಿಪಾಯಮಾಡಿಕೊಂಡಿದೆ ಎನಿಸಲು ಪ್ರಾರಂಭವಾಗಿತ್ತು.
"ಅಮ್ಮ ನಾಳೆಯಿಂದ ಇವಳ ಜೊತೆ ವಾಕಿಂಗ್‌ ಹೋಗಿ ಬಾ... ನಡೆಯೋದು ಆರೋಗ್ಯಕ್ಕೇ ಒಳ್ಳೇದು...'
ಎಂದು ಮಗ ಅಶೋಕ ಅದೊಂದು ದಿನ ಹೇಳಿದಾಗ ಅವನೆಡೆಗೆ ಅಚ್ಚರಿಯ ರಿಯಾಕ್ಷನ್‌ ಕೊಟ್ಟಿದ್ದಳು. ಮೈಲುಗಟ್ಟಲೆ ನಡೆದು, ಹೊಲದ ಕೆಲಸ ಮಾಡುತ್ತಿದ್ದವಳಿಗೆ ನಡೆಯಲು ಹೇಳಿದ್ದು ಇಂಟೆರೆಸ್ಟಿಂಗಾಗಿ ಟಿವಿ ನೋಡುವಾಗ ಕರೆಂಟಿದ್ದು ಕೇಬಲ್‌ ಕನೆಕ್ಷನ್‌ ಕಡಿದುಹೋದಂತೆನಿಸಿತ್ತು.

2 comments:

  1. nice story have u interviewed her
    i feel proud of u

    keep posting
    Thanks
    Madhu

    ReplyDelete
  2. THANKS MADHU...i was in studio that day..so call me when free... thank u very much ...am also feel proud of u ...

    ReplyDelete