![]() |
ಗ್ಯಾಂಗ್ಸ್ ಆಫ ವಾಸ್ಸೇಪುರ್ |


ವಿಪರೀತ ಪರಿಸ್ಥಿತಿಗೆ ಕೊರಗುವುದಿಲ್ಲ, ಶಪಿಸುವುದಿಲ್ಲ. ಅದೆಲ್ಲದರ ನಡುವೆಯೇ ಅವರು ಸಿನಿಮಾದ ಚಿತ್ರಕಥೆಯ ಹೊಸಹೊಸ ಸಾಧ್ಯತೆಗಳ ಬಗ್ಗೆ,
ತಿರುವುಗಳ ಜೋಡನೆಯ ಬಗ್ಗೆ ಅಲೋಚಿಸುತ್ತಾರೆ.ಇದೊಂದು ಪುಸ್ತಕವನ್ನು ಓದಿಲ್ಲದಿದ್ದರೆ
ಒಮ್ಮೆ ಓದಿಬಿಡಿ. ಇಂಥ ಪುಸ್ತಕಗಳನ್ನೋದುವುದರಿಂದ ಅನೇಕ ಲಾಭವಿದೆ. ಆವತ್ತಿನ ರಾಜಕೀಯ ಪರಿಸ್ಥಿತಿ,
ಸಿನಿಮಾಜಗತ್ತಿನ ಸ್ಥಿತಿಗತಿ, ಆವತ್ತಿನ ತಂತ್ರಜ್ಞಾನ,
ಜನರ ದೃಷ್ಟಿ, ಕಲಾವಿದರ ವರ್ತನೆಗಳು, ಆವತ್ತಿನ ಬಜೆಟ್ ಮುಂತಾದವುಗಳೂ ಕೂಡ ಗೊತ್ತಾಗಿಬಿಡುತ್ತವೆ.
ಅನುರಾಗ್ ಕಶ್ಯಪ್ ನಿರ್ದೇಶನದ ಗ್ಯಾಂಗ್ಸ್ ಆಫ ವಾಸ್ಸೇಪುರ್ ಮತ್ತೊಂದು ರಕ್ತಚರಿತ್ರ
ಎನಿಸಿಕೊಳ್ಳುತ್ತದೆ. ಹಾಗಂತ ಅನ್ನುವುದಕ್ಕೇ ನೇರ ಕಾರಣ ನಿರೂಪಣಾ ತಂತ್ರವಲ್ಲ. ಕಥೆಯ ವಸ್ತು. ಇಸವಿ 1941ರಲ್ಲಿ ವಾಸ್ಸೇಪುರದಲ್ಲಿ ನಡೆಯುವ ರೈಲು ದರೋಡೆಯಿಂದ ಪ್ರಾರಂಭವಾಗುವ ಚಿತ್ರ ಒಂದು ಅನೂಹ್ಯ ರಕ್ತಸಿಕ್ತವೊಂದರ
ಇತಿಹಾಸವನ್ನು ತೆರೆದಿಡುತ್ತಾ
ಸಾಗುತ್ತದೆ. ನನಗೆ ಪ್ರತಿಸಾರಿಯೂ ಒಂದು ಪ್ರಶ್ನೆ ಕಾಡುತ್ತಲೇ ಇರುತ್ತದೆ:
ಮಾನವನ ಇತಿಹಾಸ ಇಷ್ಟು ಅಮಾನವೀಯವಾ? ಹೌದು ಜನ ಒಬ್ಬರನ್ನೊಬ್ಬರು ಕೊಚ್ಚಿಹಾಕುವ ಕಥೆ ರಕ್ತಚರಿತ್ರದ್ದು. ಇದು ಕೂಡ ಅಂತಹುದೇ ಕಥೆ.
ಇಲ್ಯಾರನ್ನೂ ನಾಯಕ ಎಂದು ಬಿಂಬಿಸಲಾಗುವುದಿಲ್ಲ. ಅಥವಾ ಅವನು ಮಾಡಿದ್ದು ಸರಿ, ಅವನು ಹಾಗೆಯೇ ಮಾಡಬೇಕಿತ್ತು ಎಂದು ಒಂದು ಗಟ್ಟಿ ನಿರ್ಧಾರಕ್ಕೆ ಬರಲಾಗುವುದಿಲ್ಲ. ಬದಲಿಗೆ
ಮೂರು ಹೊತ್ತು ತಿಂದು, ಚ೦ದಗೆ ಸಂಸಾರ ಮಾಡಿ ಅರವತ್ತೆಪ್ಪತ್ತು ವರ್ಷಕ್ಕೆ ಕೊನೆಯಾಗಿಬಿಡಬಹುದಾದ
ಬದುಕನ್ನೇಕೆ ರಕ್ತಸಿಕ್ತಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಕಾಡದೇ ಬಿಡುವುದಿಲ್ಲ. ಇಲ್ಲಿ ಯಾವ ಕೊಲೆಯನ್ನೂ
ನಿರ್ದೇಶಕ ವೈಭವೀಕರಿಸಿಲ್ಲ. ಅದು ಆವತ್ತು ಹೇಗೆ ನಡೆದಿತ್ತೋ ಹಾಗೆ ಚಿತ್ರೀಕರಿಸಿದ್ದಾನೆ. ಆದರೂ ಕೆಲವೊಮ್ಮೆ
ಚಿತ್ರದ ಕಥೆಯ ಬಗ್ಗೆಯೇ ರೇಜಿಗೆ ಹುಟ್ಟಿಬಿಡುವುದಂತೂ ಸತ್ಯ. ಇದು ಒಬ್ಬನ, ಒಂದು ಕುಟುಂಬದ ಕಥೆಯಲ್ಲ. ತಲೆತಲೆಮಾರುಗಳ ಸುದೀರ್ಘ ಕಥನ. ಕಥೆಯನ್ನು ಹೇಳಬೇಕೆಂದರೆ;
ಅವರಪ್ಪನನ್ನು ಕೊಂದನೆಂದು ಅವನ ಮಗ ಇವನನ್ನು ಕೊಲ್ಲಲು ಸಂಚುಮಾಡುತ್ತಾನೆ..ಮಧ್ಯದಲ್ಲಿ
ಮತ್ತೊಂದಿಷ್ಟು ಜನರು ಸಾಯುತ್ತಾರೆ, ಇವನನ್ನು ಕೊಂದರೆಂದು ಇವನ ಮಗ ಅವರ
ವಂಶವನ್ನೆ ನಿರ್ನಾಮಮಾಡಲು ನಿರ್ಧರಿಸುತ್ತಾನೆ..ಮಧ್ಯದಲ್ಲಿ ಮತ್ತೊಂದಷ್ಟು ಜನರು ಬರ್ಬರವಾಗಿ ಕೊಲೆಯಾಗುತ್ತಾರೆ..ಮತ್ತದು
ಹೀಗೆಯೇ ಮುಂದುವರೆಯುತ್ತದೆ..
ಇದೆಲ್ಲದರ ನಡುವೆಯೂ ನಮಗಿಷ್ಟವಾಗುವುದು ಮನೋಜ್ ಬಾಜಪಯಿಯವರ ಅದ್ಭುತ ಅಭಿನಯ.
ಇಡೀ ಒಂದು ಮನುಷ್ಯನ ಜೀವಿತಾವಧಿಯ ಪಾತ್ರವನ್ನು,
ಆಯಾ ವಯಸ್ಸಿನ ಭಾವನೆಗಳನ್ನು ನಡವಳಿಕೆಯನ್ನು ವ್ಯಕ್ತಪಡಿಸುವ ಅವರ ಅಭಿನಯ ಸಾಮರ್ಥ್ಯಕ್ಕೆ
ತಲೆಬಾಗಲೆಬೇಕು. ಹಾಗೇ ಯಾರ ಪರವೂ ವಹಿಸದೇ ಇದ್ದದ್ದನ್ನು ಇದ್ದ ಹಾಗೆ ತಣ್ಣಗೆ ನಿರೂಪಿಸುವ ನಿರ್ದೇಶಕ
ಅನುರಾಗ್ ಕಶ್ಯಪ್‌ಗೂ ನಮನಗಳನ್ನು ಸಲ್ಲಿಸಬೇಕಾಗುತ್ತದೆ.
ಅಂದಹಾಗೆ ಎರಡನೆಯ ಭಾಗವೂ ಬರುತ್ತದೆ ಎನ್ನುವ ಸೂಚನೆ ಕೊಡುತ್ತಾ ಚಿತ್ರವನ್ನ ಮುಗಿಸುವ ನಿರ್ದೇಶಕರು ಕಥೆಯನ್ನ ಅರ್ಧಕ್ಕೆ ನಿಲ್ಲಿಸಿಬಿಡುತ್ತಾರೆ.