Sunday, January 15, 2017

ಚಿತ್ರಸಂತೆಯಲ್ಲಿ ಒಂದು ಕನವರಿಕೆ:

ಬಿಎಡ್ ನಲ್ಲಿ ಟೀಚಿಂಗ್ ಏಡ್ ಇರುತ್ತದೆ. ಅಂದರೆ ವಿದ್ಯಾರ್ಥಿ ಶಿಕ್ಷಕರು ಪಾಠ ಮಾಡುವಾಗ ಪಾಠವನ್ನು ಪರಿಣಾಮಕಾರಿಯನ್ನಾಗಿ ಮಾಡಲು ಆ ಪಾಠಕ್ಕೆ ಸಂಬಂಧಿಸಿದ ಚಿತ್ರಗಳನ್ನು ಮಕ್ಕಳಿಗೆ ತೋರಿಸಿದರೆ ಪಾಠ ಮಕ್ಕಳ ಮನಸ್ಸಿಗೆ ಇಳಿಯುತ್ತದೆ ಎಂಬುದಾಗಿ. ನನಗೆ ಟೀಚಿಂಗ್ ಏಡ್ ಅತೀ ಸುಲಭದ ಕೆಲಸವಾಗಿತ್ತು. ಹಾಗೆಯೇ ನಮ್ಮ ವಾರಾಂತ್ಯದ ಖರ್ಚಿಗೆ ದಾರಿಯೂ ಆಗಿತ್ತು. ಕುವೆಂಪು, ಕಾರಂತ ಮುಂತಾದ ಲೇಖಕರ, ಗಾಂಧೀ, ಬೋಸ್, ಮುಂತಾದ ಸ್ವಾತಂತ್ರ್ಯ ಹೋರಾಟಗಾರರ, ವಿಜ್ಞಾನಿಗಳ ಭಾವಚಿತ್ರಗಳು, ಪರಿಸರ, ನದಿ, ಸೇತುವೆ, ಉಪಕರಣಗಳು, ನಕ್ಷೆಗಳು... ಹೀಗೆ ಇವೆಲ್ಲವನ್ನೂ ನಮ್ಮ ಹಾಸ್ಟೆಲ್ ರೂಮಿಗೆ ವಿದ್ಯಾರ್ಥಿಗಳು ತೆಗೆದುಕೊಂಡು ಬಂದು ಕೊಡುತ್ತಿದ್ದರು, ಒಂದು ಡ್ರಾಯಿಂಗ್ ಶೀಟ್ನ ಜೊತೆಗೆ. ದಿನಕ್ಕೆರೆಡು ಬರೆದರೆ ಆವತ್ತಿನ ಹಾಸ್ಟೆಲ್ ಊಟಕ್ಕೆ ಬೈ ಹೇಳಿ, ಹೋಟೆಲ್ಲಿಗೆ ನುಗ್ಗಲು ಅಣಿಯಾಗುತ್ತಿದ್ದೆವು. ನಾಲ್ಕೈದು ಬರೆದರಂತೂ ಸಿನಿಮಾ, ಊಟ ಎಲ್ಲದಕ್ಕೂ ಹಣ ಆಗುತ್ತಿತ್ತು. 
ಬೆಂಗಳೂರಿಗೆ ಸಿನಿಮಾ ಜಗತ್ತಿಗೆ ಬಂದಾಗ ಮತ್ತದೇ ಚಿತ್ರಕಲೆ ನನಗೆ ಸಹಾಯ ಮಾಡಿದ್ದಂತೂ ಸತ್ಯ. ಹಾಗೆಯೇ ನನ್ನ ಮೊದಲ ಚಿತ್ರವೂ ಅಚ್ಚುಕಟ್ಟಾಗಿ ಮೂಡಿ ಬರಲು ಕಾರಣ ನನ್ನದೇ ಚಿತ್ರಕಲೆ. ಆವಾಗ ಸ್ಟೋರಿ ಬೋರ್ಡ್ ಅಪರೂಪವಾಗಿತ್ತು. ನಾನು ಮಾತ್ರ ನನ್ನ ಚಿತ್ರದ ಪ್ರಮುಖ ದೃಶ್ಯಗಳಿಗೆ ಸ್ಟೋರಿ ಬೋರ್ಡ್ ಮಾಡಿದ್ದೆ. ಹಾಗಾಗಿ ಹಣ, ಸಮಯ ಎರಡೂ ಉಳಿದಿತ್ತು.
ಇಂತಹದ್ದೇ ಸಮಯದಲ್ಲಿ ಚಿತ್ರಸಂತೆ ಬಂದಿತ್ತು. ನಾನು ಚಿತ್ರ ಬರೆಯುವುದನ್ನು ನೋಡಿದ ನಾದಿನಿ ಮಾನಸ ಬರೆಯಲು ಹುರಿದುಂಬಿಸಿದಳು. ಸಹನಾ,ಸ್ವಸ್ತಿಕ ಬರೆಯಲೇ ಬೇಕೆಂದು ಹಠ ಹಿಡಿದರು. ಅವರ ಆಸಕ್ತಿಯಿಂದಾಗಿ ಆ ವರ್ಷದ ಚಿತ್ರಸಂತೆಯಲ್ಲಿ ಒಂದು ಪ್ರದರ್ಶನ ಇಟ್ಟುಬಿಡೋಣ ಎಂದುಕೊಂಡು ಪೇಯಿಂಟ್ ಬ್ರಷ್ ಕೈಗೆತ್ತಿಕೊಂಡಿದ್ದೆ. ಒಂದು ತಿಂಗಳ ಸಮಯದಲ್ಲಿ ಒಂದಷ್ಟು ಪೇಯಿಂಟ್ ಮಾಡಿದೆ. ಅವೆಲ್ಲವನ್ನೂ ಚಿತ್ರಸಂತೆಯಲ್ಲಿ ಪ್ರದರ್ಶನಕ್ಕಿಟ್ಟೆ. ಬೇರೆ ಬೇರೆ ಕಾರಣಗಳಿಂದ ನಮಗೆ ಸಿಕ್ಕಿದ್ದ ಜಾಗ ಬದಲಾಗಿ, ಚಿತ್ರಸಂತೆಯ ಆಯೋಜಕರು ದಿಕ್ಕಾಪಾಲಾಗಿ ಅವ್ಯವಸ್ತೆಯುಂಟಾಗಿ ನಮಗೆ ಬದಲಿ ಜಾಗವನ್ನು ಕೊಡುವಾಗಲೇ ಮದ್ಯಾಹ್ನವಾಗಿತ್ತು. ಆದರೆ ಆವಾಗ ಸಿಕ್ಕ ಪ್ರೋತ್ಸಾಹ ಮುಂದಿನ ಚಿತ್ರಸಂತೆಯಲ್ಲಿ ಇನ್ನಷ್ಟು ಚಿತ್ರಗಳನ್ನು ಬರೆದು ಪ್ರದರ್ಶನಕ್ಕಿಡಬೇಕು ಎನಿಸಿಬಿಟ್ಟಿತ್ತು, ವ್ಯವಸ್ತಿತವಾಗಿ ಮತ್ತು ಚಿಂತಾನಾತ್ಮಕವಾಗಿ ಬೇರೆ ಬೇರೆ ಶೈಲಿಯಲ್ಲಿ ಚಿತ್ರಗಳನ್ನು ರಚಿಸಲು ಮನಸ್ಸು ಸಿದ್ಧಗೊಂಡಿತ್ತು.
ಆದರೆ ಆನಂತರ ಮತ್ತೆ ಬ್ರಷ್ ಹಿಡಿಯಲು ಸಾಧ್ಯವಾಗಿಲ್ಲ. ಪೇಂಟಿಂಗ್ ಗಳನ್ನೂ ನೋಡಿದಾಗ ಬರೆಯಲು ಮನಸ್ಸಾಗುತ್ತದೆಯಾದರೂ ಅದೇಕೋ ಏನೋ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈವತ್ತು ಚಿತ್ರಸಂತೆಗೆ ಹೋದಾಗ ಇದೆಲ್ಲಾ ನೆನಪಾಯಿತು, ಬರುವ ವರ್ಷದ ಚಿತ್ರಸಂತೆಗೆ ಭಾಗವಹಿಸಲೇಬೇಕು ಎಂದು ನಿರ್ಧರಿಸಿದೆ.

ಸಾಧ್ಯವಾಗುತ್ತದಾ..?