Saturday, September 7, 2013

ಬಣ್ಣ ಕಾಣದ ಕಣ್ಣಲ್ಲಿ ರಂಗಿನ ಕನಸು ಕಾಣುತ್ತಾ..?

ಲೂಸಿಯ ಚಿತ್ರ ಜನ ಸಾಮಾನ್ಯರಲ್ಲಿ ನಿರೀಕ್ಷೆ ಉಂಟು ಮಾಡಿದ್ದಕ್ಕಿಂತ ಗಣಕ-ಜನರಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿತ್ತು.ಪವನ್ ಕುಮಾರ್ ಪ್ರೇಕ್ಷಕರಲ್ಲಿ ಕೈ ಯಲ್ಲಿ ಮುಂಗಡ ಹಣ ಪಡೆದು ಅವರನ್ನೇ ನಿರ್ಮಾಪಕರನ್ನಾಗಿ ಮಾಡಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದರು.
ಬಣ್ಣ ಕಾಣದ ಕಣ್ಣಲ್ಲಿ ರಂಗಿನ ಕನಸು ಕಾಣುತ್ತ ಎನ್ನುವ ಶೀರ್ಷಿಕೆಯಲ್ಲಿ ಸಂಪೂರ್ಣ ಕಥೆ ಅಡಗಿದೆ. ಅಥವಾ ಪವನ್ ತಮ್ಮ ಚಿತ್ರದಲ್ಲಿ ಮೊದಲು ತೋರಿಸುವ ನೀ ಮಾಯೆಯೊಳಗೋ ಮಾಯೆ ನಿನ್ನೊಳಗೊ ಎನ್ನುವ ದಾಸವಾಣಿಯಲ್ಲೇ ಕಥೆ ಇದೆ ಅಥವಾ ಅದೇ ಕಥೆ ಎಳೆ.
ಕ್ರಿಸ್ತೋಪರ್ ನೋಳನ್ ತಮ್ಮ ಮೆಮೆಂಟೊ ಚಿತ್ರದಲ್ಲಿ ಒಂದು ತಂತ್ರವನ್ನು ಅಳವಡಿಸಿದ್ದರು.ಇಡೀ ಚಿತ್ರದ ಕಾಲಘಟ್ಟವನ್ನು ಕಪ್ಪು-ಬಿಳುಪು ಮತ್ತು ಬಣ್ಣದ ದೃಶ್ಯಗಳ ಮೂಲಕ ವಿಂಗಡಿಸಿದ್ದರು. ಅವುಗಳನ್ನು ಸೇರಿಸುವ ಕಡೆ ಕಪ್ಪು ಬಿಳುಪಿನ ಚಿತ್ರಿಕೆಯನ್ನು ಬಣ್ಣಕ್ಕೆ ಪರಿವರ್ತಿಸಿದ್ದರು. ಲೂಸಿಯಾ ಚಿತ್ರದಲ್ಲೂ ಕನಸು-ನನಸನ್ನು ಸಂಯೋಜಿಸಲು ಅದೇ ತಂತ್ರ ಬಳಸಿದ್ದಾರೆ ನಿರ್ದೇಶಕ ಪವನ್. ಒಂದು ಕಥಾ ವಾಹಿನಿಯನ್ನು ಕಪ್ಪು ಬಿಳುಪಲ್ಲೂ ಮತ್ತೊಂದನ್ನು ಬಣ್ಣದಲ್ಲೂ ಹೇಳುತ್ತಾ ಸಾಗಿ ಒಂದೆಡೆ ಎರಡನ್ನೂ ಒಂದು ಮಾಡುತ್ತಾರೆ. ಆ ನಿಟ್ಟಿನಲ್ಲಿ ಪವನ್ ಕುಮಾರ್ ಮೆಚ್ಚುಗೆಗೆ ಪಾತ್ರವಾಗುತ್ತಾರೆ.
ಆದರೆ ಚಿತ್ರ ಹೇಗಿದೆ? ಎಂಬ ಪ್ರಶ್ನೆ ಮೂಡದಿರದು. ಅವರ ಪ್ರಯತ್ನ ಅದರ ಹಿಂದಿನ ಶ್ರಮ ಕಷ್ಟ ಮುಂತಾದವುಗಳನ್ನು ಮನದಲ್ಲಿರಿಸಿಕೊಳ್ಳದೆ ಚಿತ್ರವನ್ನು ಒಮ್ಮೆ ವಿಶ್ಲೇಷಿಸಿದರೆ ಚಿತ್ರದ ವಿಶೇಷವೆ ಚಿತ್ರದ ತೊಡಕಾಗಿರುವ ಅಂಶ ಎದ್ದು ಕಾಣುತ್ತದೆ. ಮೊದಲಾರ್ಧ ಮಜಾ ಕೊಡುತ್ತಾ ಸಾಗುವ ಚಿತ್ರದ, ಎರಡನೆಯ ಭಾಗದಲ್ಲೂ ಅದೇ ತಂತ್ರವನ್ನು ಉಪಯೋಗವಾಗಿರುವುದು ಚಿತ್ರ ನಿರೀಕ್ಷಿತವಾಗುತ್ತದೆ. ಚಿತ್ರದ ಕೊನೆ ಕೊನೆಯಲ್ಲಿ ಸಾಕಷ್ಟು ಗೊಂದಲಗಳನ್ನು ಉಂಟು ಮಾಡಿರುವ ಪವನ್ ಆ ಗೊಂದಲಗಳ ಸಿಕ್ಕು ಬಿಡಿಸಲು ಕೆಲವು ತಂತ್ರಗಳನ್ನು ಉಪಯೋಗಿಸಿದ್ದಾರೆ. ಆದರೂ ಪ್ರೇಕ್ಷಕ ತೃಪ್ತನಾಗುವುದಿಲ್ಲ. ಒಹ್..ಇದು ಕಥೆ, ಇದು ನಡೆದದ್ದು..ಎನ್ನುವ ನಿರ್ಧಾರಕ್ಕೆ ಬರಲು ಆಗುವುದಿಲ್ಲ. ಎಲ್ಲೋ ಏನೋ ಮಿಸ್ ಆಗಿದೆ ಎಂದುಕೊಳ್ಳುವಲ್ಲಿ ನಿರ್ದೇಶಕನ ಸೋಲೂ ಇದೆ, ಗೆಲುವು ಇದೆ.
ಯಾಕೆ ಹೀಗೆ..? ಪ್ರೇಕ್ಷಕನನ್ನು ಬುದ್ದಿವಂತ ಎಂದುಕೊಂಡೆ ಸಿನಿಮಾ ಮಾಡಿದಾಗಲೂ ಅವನಿಗೆ ಅರ್ಥವಾಗುವುದಿಲ್ಲವಾ ಎನ್ನುವ ಪ್ರಶ್ನೆ ಇಂತಹ ಸಿನಿಮಾ ನೋಡಿ ಅಸಂತೃಪ್ತ ಮುಖ ಹೊತ್ತು ಬರುವ ಪ್ರೇಕ್ಷಕರನ್ನು ನೋಡಿದಾಗ ಕಾಡದಿರದು. ಯಾಕೆಂದರೆ ಲೂಸಿಯಾದಲ್ಲಿ ಒಂದೊಳ್ಳೆ ಪ್ರೇಮಕಥೆಯಿದೆ, ಹೊಸದಾದ ವಿಷಯವಿದೆ, ಕಲಾವಿದರುಗಳು ಅಭಿನಯವನ್ನು ಅದ್ಭುತವಾಗಿ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಪವನ್ ಕುಮಾರ್ ಇಡೀ ಚಿತ್ರವನ್ನೂ ಎಲ್ಲೂ ಕಲಾತ್ಮಕ ರೀತಿಯಲ್ಲಿ ಶೈಲಿಯಲ್ಲಿ ನಿರೂಪಿಸಿಲ್ಲ. ಒಂದು ಮನರಂಜನೀಯ ಚಿತ್ರಗಳಿಗೆ ಬೇಕಾದ ಅಂಶಗಳಾದ ಹೊಡೆದಾಟ, ಐಟಂ ಹಾಡು, ಕುಣಿತ, ತಮಾಷೆಯ ಮಾತುಗಳು..ಹೀಗೆ ಎಲ್ಲವನ್ನು ಬೆರೆಸಿದ್ದಾರೆ.ಆದರೂ ಗೊಂದಲಗಳ ಗೂಡಾದ ಪ್ರೇಕ್ಷಕನನ್ನು ಸಂಪೂರ್ಣವಾಗಿ ಅರ್ಥಮಾಡಿಸುವಲ್ಲಿ, ಅಥವಾ ಅವರ ಗೊಂದಲ ನಿವಾರಿಸುವಲ್ಲಿ ಅಂತಹ ಯಶಸ್ಸು ಕಂಡಿಲ್ಲ ಎನ್ನಬಹುದು.
ಸುಮ್ಮನೆ ಗಮನಿಸಿ. ಮೆಮೆಂಟೊಗಿಂತ ಮುಂಚೆಯೇ ತಿರುವು ಮರುಗು ಗೊಂದಲಮಯ ನಿರೂಪಣೆಯ 'ಎ' ಚಿತ್ರವನ್ನು ಉಪೇಂದ್ರ ನಿರ್ದೇಶನ ಮಾಡಿದ್ದರು. ಮೊದಲ ಬಾರಿಗೆ ನೋಡಿದ ಬಹುತೇಕರಿಗೆ ಸಿನಿಮಾ ಅರ್ಥವೇ ಆಗಿರಲಿಲ್ಲ. ಹಾಗಾಗಿ ಅದನ್ನು ಮತ್ತೆ ಮತ್ತೆ ನೋಡಿದ್ದರು ಜನ. ಹಾಗೆ ಜನರು ಮತ್ತೆ ಮತ್ತೆ ನೋಡಲು ಪ್ರೇರೆಪಿಸಿದ್ದು ಕಥೆಯ ಗೊಂದಲಕ್ಕಿಂತ ಹೆಚ್ಚಾಗಿ ಚಿತ್ರದಲ್ಲಿದ್ದ ಕ್ಯಾಚಿ, ಮಜಾ ಕೊಡುವ ದೃಶ್ಯಗಳು. ಉಪೇಂದ್ರ ಚಿತ್ರದಲ್ಲಿ ಇನ್ನೂ ಅಧ್ವಾನ. ಚಿತ್ರವನ್ನು ಹೇಗೆ ನೋಡಬೇಕು ಎಂದು ಉಪೇಂದ್ರ ಪತ್ರಿಕೆಯಲ್ಲಿ ವಿವರಿಸಿದ್ದರು ಕೂಡ. ಈವತ್ತಿಗೂ ಮಳೆ, ಬೆಂಕಿ, ಗಾಳಿ ಮತ್ತು ಹೆಣ್ಣು ಇವುಗಳ ಕುರಿತಾದ ಉಪೇಂದ್ರ ಚಿತ್ರದ ಫಿಲಾಸಫಿ  ಅದೆಷ್ಟು ಜನಕ್ಕೆ ಅರ್ಥವಾಗಿದೆಯೋ..ಆದರೆ ಜನ ಮತ್ತೆ ಮತ್ತೆ ನೋಡಿದ್ದು ಮಾತ್ರ ಚಿತ್ರದಲ್ಲಿನ ಭಿನ್ನ, ಅತಿರೇಕದ ವನ್ಸ್ ಅಗೈನ್ ಮಜಾ ಕೊಡುವ ದೃಶ್ಯಾವಳಿಗಳಿಗಾಗಿಯೇ..
ಲೂಸಿಯಾ ಚಿತ್ರವೂ ಅಷ್ಟೇ. ಒಮ್ಮೆ ನೋಡಿದರೆ ಅಥವಾ ನೋಡುವಾಗ ಗಮನವನ್ನು ಬೇರೆಡೆಗೆ ಹರಿಸಿದರೆ ಅರ್ಥವಾಗುವುದು ಕಷ್ಟವೇ...ಕನಸು ಯಾವುದು..ಸತ್ಯ ಯಾವುದು..ಅಥವಾ ಎರಡೂ ಕನಸಾ..? ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿತಲೆ ಕೊರೆಯುವುದು ಸಹಜ. ಅದನ್ನು ನಿವಾರಿಸಿಕೊಳ್ಳಬೇಕಾದರೆ ಮತ್ತೊಮ್ಮೆ ನೋಡಬೇಕು, ಅದರ ಬಗ್ಗೆ ಒಂದಷ್ಟು ಆಲೋಚಿಸಬೇಕು..ಆದರೆ ಚಿತ್ರದಲ್ಲಿನ ದೃಶ್ಯಗಳು ಎರಡನೆಯ ಸಾರಿಯೂ ನೋಡುವಂತಿದೆಯೇ ಎನ್ನುವುದು ಪ್ರಶ್ನೆ.
ಇನ್ನುಳಿದಂತೆ ತಿನ್ನಬೇಡಕಮ್ಮಿ ಹಾಡು ಕೇಳುವಾಗ  ರಂಜಿಸುವಷ್ಟು ನೋಡುವಾಗ ರಂಜಿಸುವುದಿಲ್ಲ. ನಾಯಕನಾಗಿ ಸತೀಶ್ ನೀನಾಸಂ , ನಾಯಕಿಯಾಗು ಶ್ರುತಿ ಹರಿಹರನ್ ಸೂಪರ್. ಸಂಗೀತ ಮತ್ತು ಹಿನ್ನೆಲೆ ಸಂಗೀತ ಉತ್ತಮ. ಛಾಯಾಗ್ರಹಣ ಚಿತ್ರಕ್ಕೆ ತಕ್ಕುದಾಗಿದೆ.

Thursday, September 5, 2013

ಭೂ...-2ಅವನು ಆ ಹುಡುಗಿಯ ಮನೆಯಲ್ಲಿಯೇ ಕೆಲಸ ಮಾಡಿಕೊಂಡಿದ್ದ.ಬಡತನದ ಕುಟುಂಬ ಆತನದು. ಆದರೆ ಆಕೆಯದು ಊರಲ್ಲೇ ಸ್ಥಿತಿವಂತ ಕುಟುಂಬ.ಜೊತೆಗೆ ನಮ್ಮೂರಿನಲ್ಲಿ ಬಲವಾಗಿದ್ದ ಜಾತಿಯವರು ಬೇರೆ.ಇದೆಲ್ಲವನ್ನೂ ಮೀರಿ ಪ್ರೀತಿ ಬೆಳೆದುಬಿಡಬೇಕೆ..? ಹೌದು. ಅವರಿಬ್ಬರೂ ತಮ್ಮ ಜಾತಿ, ಮತ ಅಂತಸ್ತುಗಳನ್ನು ಮೀರಿ ಪ್ರೀತಿಸತೊಡಗಿದ್ದರು. ಆಕೆ ಓದಿದ್ದು ಕೇವಲ ಹತ್ತನೆಯ ತರಗತಿ. ಮುಂದೆ ಓದಿ ನಮ್ಮ ಮಗಳು ಯಾವೂರಲ್ಲಿಯಾದರೂ ಕೆಲಸ ಮಾಡಬೇಕಾ..? ಒಬ್ಬಳೇ ಮಗಳು ಬೇರೆ ಇರುವ ಆಸ್ತಿಯನ್ನು ನೋಡಿಕೊಳ್ಳುವ ಒಬ್ಬ ಮನೆ ಅಳಿಯ ಸಿಕ್ಕರೆ ಸಾಕು..ಎನ್ನುವ ಧೋರಣೆ ಮನೆಯವರದು. ಆ ಹುಡುಗ ನಾಲ್ಕನೆಯ ತರಗತಿಗೆ ಶಾಲೆ ಬಿಟ್ಟಿದ್ದ.
ಹುಡುಗಿಯ ಮನೆಯವರು ಅವಳ ಮದುವೆಗಾಗಿ ಓಡಾಟ ನಡೆಸತೊಡಗಿದ್ದರು. ಮನೆಮಗನಂತಿದ್ದ ಆ ಹುಡುಗನೂ ಅವರ ಜೊತೆ ಕೆಲಸ ಮಾಡುತ್ತಿದ್ದ. ಆದರೆ ಇದೆಲ್ಲದರ ನಡುವೆ ಅವರ ಪ್ರೀತಿ ಬೆಳೆದು ಹೆಮ್ಮರವಾಗುತ್ತಲೇ ಇತ್ತು. ಆದರೆ ಯಾರಿಗೆ ಹೇಳುವುದು.? ಮದುವೆ ಬೇರೊಬ್ಬ ಹುಡುಗನ ಜೊತೆ ನಿಗದಿಯಾಯಿತು. ಚಪ್ಪರಹಾಕುವುದರಿಂದ ಹಿಡಿದು ಬೇರೆಲ್ಲಾ ಕೆಲಸಗಳನ್ನೂ ತುಂಬಾ ಆಸಕ್ತಿಯಿಂದ ಮಾಡಿದ್ದ ಆತ. ಮದುವೆ ಮುಗಿಯಿತು.ಆವತ್ತು ಪ್ರಸ್ಥ. ಪ್ರಸ್ಥಕ್ಕಾಗಿ ಹಾಸಿಗೆಯನ್ನು ತರಲು ಪೇಟೆಗೆ ಇವನನ್ನೇ ಮನೆಯವರು ಕರೆದುಕೊಂಡು ಹೋಗಿದ್ದರು. ಅಲ್ಲಿ ಅದರ ಜೊತೆ ಒಂದಷ್ಟು ನಿದ್ರೆ ಮಾತ್ರೆಗಳನ್ನೂ  ತಂದಿದ್ದ ಆತ. ಪ್ರಸ್ಥದ ಶಾಸ್ತ್ರಕ್ಕೆ ಸಿದ್ಧರಾಗುವ ಹೆಂಗಸರು ಕಜ್ಜಾಯ ಪಾಯಸ ಸಿದ್ದ ಮಾಡುತ್ತಿದ್ದರು. ಪಾಯಸಕ್ಕೆ ಎಲ್ಲರ ಕಣ್ಣು ತಪ್ಪಿಸಿ ನಿದ್ರೆ ಮಾತ್ರೆ ಸುರಿದಿದ್ದ. ಊಟ ಮಾಡಿ ಬೆಳಗಿನ ಜಾವಕ್ಕೆ ಶಾಸ್ತ್ರ ಮಾಡಲು ತಿಂಡಿ ಮಾಡುತ್ತಿದ್ದ ಹೆಂಗಸರಿಗೆ ಜೋರು ನಿದ್ರೆ ಕಣ್ಣು ಹತ್ತಿದಾಗ ಬೆಳಿಗ್ಗೆ ಬೇಗನೆ ಎದ್ದು ಮಾಡಿಕೊಂಡರಾಯಿತು ಎನಿಸಿ ಅಲ್ಲಲ್ಲೇ ಮಲಗಿಬಿಟ್ಟರು. ಪ್ರಸ್ಥದ ಕೋಣೆಗೆ ಹೋದ ನವವಧು ವರನಿಗೆ ನಿದ್ರೆ ಮಾತ್ರ ಹಾಕಿದ್ದ ಹಾಲು ಕೊಟ್ಟದ್ದರಿಂದ ಸ್ವಲ್ಪ ಹೊತ್ತಿನಲ್ಲೇ ಆತ ಜೋರು ನಿದ್ರೆಗೆ ಶರಣಾಗಿದ್ದ, ಇಡೀ ಮನೆಜನ, ನಾಯಿ ಹೀಗೆ ಎಲ್ಲರೂ ನಿದ್ರೆಗೆ ಶರಣಾಗಿದ್ದ ಸಮಯದಲ್ಲಿ ಪ್ರೇಮಿಗಳಿಬ್ಬರು ಮನೆ ಬಿಟ್ಟು ಆತನ ಸೈಕಲ್ಲಿನಲ್ಲಿ ಊರು ಬಿಟ್ಟಿದ್ದರು.
ಬೆಳಗಿನ ಜಾವ ನಾಲ್ಕರ ಸಮಯ. ಪ್ರಸ್ಥದ ಶಾಸ್ತ್ರಕ್ಕೆ ಬರಲಾಗದ ಹುಡುಗಿ ಸಂಬಂಧಿಕರೊಬ್ಬರು ಬೆಳಗಿನ ಶಾಸ್ತ್ರಕ್ಕೆ ಊರ ಕಡೆಗೆ ಬರುತ್ತಿದ್ದಾಗ ದಾರಿಯಲ್ಲೇ ಅವನು ಸಿಕ್ಕಿಬಿಟ್ಟಿದ್ದಾನೆ. ಆಕೆಯನ್ನು ಪಕ್ಕದಲ್ಲೇ ಅಡಗಿಸಿಟ್ಟಿದ್ದನಾದರೂ ಅವರು ಅವನ ಬಗ್ಗೆ ವಿಚಾರಿಸಿ, ಇವನು ಹಾರಿಕೆ ಉತ್ತರ ನೀಡಿ ಅಲ್ಲಿಂದ ಹೊರಟಿದ್ದಾರೆ. ಮನೆಗೆ ಬರುವಷ್ಟರಲ್ಲಿ ದೊಡ್ಡ ರಾದ್ಧಾಂತ ಶುರುವಾಗಿದೆ, ಮದುಮಗಳು ಕಾಣುತ್ತಿಲ್ಲ ಎಂದು. ಆದರೆ ಆ ಸಂಬಂಧಿ ದಾರಿಯಲ್ಲಿ ಅವನನ್ನೂ ನೋಡಿದೆ ಎಂದು ಹೇಳಿದ ಮೇಲೆ ಎಲ್ಲರಿಗೂ ಅವನ ಮೇಲೆ ಅನುಮಾನ ಬಂದಿದೆ. ಎಲ್ಲಾ ಕಡೆ ಸಿಕ್ಕ ಸಿಕ್ಕ ವಾಹನಗಳಲ್ಲಿ ಹುಡುಕಲು ಪ್ರಾರಂಭಿಸಿದ್ದಾರೆ. ಇದು ಜಾತಿಯ ಅಂತಸ್ತಿನ ಮರ್ಯಾದೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಇದರ ಸುಳಿವು ಊಹಿಸಿದ್ದರಿಂದಲೋ,.ಅಥವಾ ಬೆಳಗಾದ್ದರಿಂದಲೋ ಅಪಾಯ ಅರಿತು ಅವನು ಆಕೆಯನ್ನು ಒಂದು ಬಸ್ ಸ್ಟಾಂಡ್ ನಲ್ಲಿ ಕೂರಿಸಿ ಅತ ಪರಾರಿಯಾಗಿದ್ದಾನೆ. ಕೈಗೆ ಸಿಕ್ಕಿದ ಆಕೆಯನ್ನು ಹಿಡಿದು ತಂದು ಬಡಿದಿದ್ದಾರೆ. ವರನ ಕಡೆಯವರು ಆಕೆಯನ್ನು ಸ್ವೀಕರಿಸಿಲ್ಲ.
ಇತ್ತ ಪರಾರಿಯಾದ ಹುಡುಗ ಹೆದರಿ ಊರು ಬಟ್ಟಿದ್ದಾನೆ. ಹುಡುಗಿ ಬೈಗಳು ತಿಂದು ಮನೆಯಲ್ಲಿದ್ದಾಳೆ. ಆದರೆ ಹುಡುಗಿಯ ಮನೆಯವರು ಹುಡುಗನನ್ನು ಹುಡುಕಿಸಲು ತುಂಬಾ ಪ್ರಯತ್ನಿಸಿದ್ದಾರೆ. ಅವರ ಮನೆಯವರನ್ನು  ಹಿಡಿದು ಹಿಂಸಿಸಿದ್ದಾರೆ. ಅವನೆಲ್ಲಿದ್ದಾನೆ ಎಂಬುದನ್ನು ಬಾಯಿ ಬಿಡಿಸಲು ಪ್ರಯತ್ನಿಸಿದ್ದಾರೆ.
ಸರಿಯಾಗಿ ಮೂರು ತಿಂಗಳ ನಂತರದ ಒಂದು ರಾತ್ರಿಯಲ್ಲಿ ಆ ಹುಡುಗ ಊರಿಗೆ ಬಂದಿದ್ದಾನೆ. ಮಧ್ಯರಾತ್ರಿ ಸಮಯ ನೋಡಿ ಆ ಮನೆಯ ಮೇಲೆ ಹತ್ತಿ ಹೆಂಚು ತೆಗೆದು ಒಳಕ್ಕೆ ಇಳಿದಿದ್ದಾನೆ. ಆಕೆಯನ್ನು ಎಬ್ಬಿಸಿದ್ದಾನೆ. ಇಬ್ಬರು ಸದ್ದು ಮಾಡದೆ ಆ ಮನೆಯಿಂದ ಹೊರಬೀಳುವ ಪ್ರಯತ್ನದಲ್ಲಿದ್ದಾಗ ಬಾಗಿಲಲ್ಲೇ ಮಲಗಿದ್ದ ಹುಡುಗಿಯ ತಾಯಿಗೆ ಎಡವಿಬಿದ್ದಿದ್ದಾರೆ.ಅಷ್ಟೇ...ಎಚ್ಚರವಾದ ತಾಯಿ ಬಾಯಿ ಬಡಿದುಕೊಂಡು ಹುಡುಗನ ಕಾಲನ್ನು ಬಲವಾಗಿ ಅಪ್ಪಿ ಹಿಡಿದಿದ್ದಾಳೆ.ಆಕೆಯ ಬೊಬ್ಬೆಗೆ ಅಕ್ಕಪಕ್ಕದ ಮನೆಯವರು ಎದ್ದು ಬಂದಿದ್ದಾರೆ. ಹುಡುಗನನ್ನು ಕಂಬಕ್ಕೆ ಕಟ್ಟಿ ಹಾಕಿ ಚೆನ್ನಾಗಿ ಥಳಿಸಿದ್ದಾರೆ. ಆದರೆ ಅಲ್ಲಿ ಕುಳಿತ ಊರವರು ಹುಡುಗನ ತಂದೆ ತಾಯಿಗೆ ಅವಹೇಳನಕಾರಿ ಪ್ರಚೋದನೆಯ ಮಾತುಗಳನ್ನಾಡಿದ್ದಾರೆ. ರೊಚ್ಚಿಗೆದ್ದ ಹುಡುಗಿಯ ತಾಯಿ ಮನೆಯೊಳಕ್ಕೆ ನುಗ್ಗಿದವಳೇ, ಕುಡುಗೋಲು ತಂದು ಎಲ್ಲರೆದುರು ಆತನನ್ನು ಕೊಚ್ಚಿದ್ದಾಳೆ. ಆತ ಕಿರುಚಿದ್ದಾನೆ..ನಾನು ಸತ್ತರೂ ನಿಮ್ಮನ್ನು ಬಿಡುವುದಿಲ್ಲ ಎಂದಿದ್ದಾನೆ...
ಆ ಹುಡುಗಿಯ ತಂದೆ ತಾಯಿ ಜೈಲಿಗೆ ಶರಣಾಗಿದ್ದಾರೆ.ಆ ಹುಡುಗಿ ಅನಾಥೆಯಾಗಿದ್ದಾಳೆ. ಒಂದು ಪ್ರೀತಿ ಬರ್ಬರ ಅಂತ್ಯವನ್ನು ಕಂಡಿದೆ. ನಾನು ಊರಿಗೆ ಹೋದಾಗ ಈ ವಿಷಯ ಕೇಳಿ ನಿಬ್ಬೆರಗಾಗಿದ್ದೆ. ನಮ್ಮೂರಿನಲ್ಲಿ ನಡೆದ ಬರ್ಬರ, ಹೀನಾಯ ಮತ್ತು ಮೊದಲ ಮತ್ತು ಕೊನೆಯ ಕೊಲೆಯದು.ಈ ಊರಲ್ಲೂ ಕೊಲೆಯಾಗುತ್ತದಾ..? ನಾನಾಗ ಬಿ.ಎಸ್ಸಿ. ಮಾಡುತ್ತಿದ್ದೆ. ಆ ಹುಡುಗ ಸತ್ತ ಜಾಗ, ನಡೆದ ರೀತಿಯನ್ನೆಲ್ಲಾ ಕುತೂಹಲಕ್ಕೊಮ್ಮೆ ನೋಡಿ ಬಂದಿದ್ದೆ. ಪೋಲಿಸ್ ನವರು ದಟ್ಟವಾಗಿ ಗುರುತಿಸಿದ್ದ ಆತ ಬಿದ್ದಿದ್ದ ರೀತಿ ನನ್ನ ಮನ ಕಲಕಿತ್ತು.
ಇದೆಲ್ಲಾ ನಡೆದು ಮೂರು ತಿಂಗಳುಗಳಾಗಿರಬೇಕು. ಸತ್ತವನ ಮನೆಯವರು ಊರಿನಿಂದ ವಕ್ಕಲೆದ್ದು ಹೋಗಿದ್ದರು. ಹುಡುಗಿಯ ತಾಯಿ  ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಳು. ಅವಳ ತಂಗಿಯ ಮಗಳು ಐದು ತಿಂಗಳ ಗರ್ಭಿಣಿ. ಹೊಲಕ್ಕೆ ಊಟ ತೆಗೆದುಕೊಂಡು ಬಂದಿದ್ದಾಳೆ.ಮದ್ಯಾಹ್ನ ಮೂರು ಘಂಟೆಯ ಸಮಯವದು. ತಲೆ ತಿರುಗಿದಂತಾಗಿದೆ. ಸ್ವಲ್ಪ ಓಲಾಡಿದ್ದಾಳೆ. ದೂರದಲ್ಲಿದ್ದ ಅವಳ ಅಪ್ಪ ಓಡಿ ಬಂದಿದ್ದಾನೆ.ಬೀಳುತ್ತಿದ್ದವಳನ್ನು ಹಿಡಿಯಲು ಹೋಗಿ ಬೆಚ್ಚಿಬಿದ್ದಿದ್ದಾನೆ. ಅವಳ ಕಣ್ಣುಗಳು ಬೆಂಕಿಯ ಉಂಡೆಗಳಾಗಿವೆ. ಒಮ್ಮೆ ಅಪ್ಪನನ್ನು ಕೆಕ್ಕರಿಸಿ ನೋಡಿದ್ದಾಳೆ. ‘ಏನೋ..ಸುಮ್ನೆ ಬಿಡಲ್ಲಾ..ನಿನ್ ವಂಶ ನಿರ್ವಂಶ ಮಾಡ್ತೀನಿ...ಹ್ಹಹ್ಹಹ್ಹ..’ ಗಂಡು ಮಿಶ್ರಿತ ಧ್ವನಿಯಲ್ಲಿ ಅಬ್ಬರಿಸಿದ್ದಾಳೆ.ಅಷ್ಟೇ ಆ ಗಾಬರಿಯಿಂದ ಅಪ್ಪ ಹೊರಬರುವಷ್ಟರಲ್ಲಿ ನೆಲಕ್ಕೆ ಕುಸಿದು ಪ್ರಾಣಬಿಟ್ಟಿದ್ದಾಳೆ.
ಅದು ಹೃದಯಾಘಾತವಾ..?
ಆದರೆ ಆಶ್ಚರ್ಯವಿದ್ದದ್ದು ಆಕೆ ಸತ್ತದ್ದರಲ್ಲ..ಸಾಯುವಾಗ ನುಡಿದ ಮಾತುಗಳಲ್ಲಿ ಮತ್ತು ಆಕೆ ಸತ್ತು ನೆಲಕ್ಕೆ ಬಿದ್ದ ಶೈಲಿಯಲ್ಲಿ. ಇಷ್ಟಕ್ಕೂ ಆಕೆಗೆ ಮದುವೆಯಾಗಿ ಆಗಲೇ ಒಂದು ವರ್ಷವಾಗಿತ್ತು. ಆ ಘಟನೆ ನಡೆದಾಗ ಆಕೆ ಗಂಡನ ಮನೆಯಲ್ಲಿದ್ದಳು. ಬಸಿರಿಯಾದ ನಂತರವಷ್ಟೇ ಆಕೆ ತವರಿಗೆ ಬಂದದ್ದು. ಆ ಸುದ್ದಿಯನ್ನು ಆಕೆ ಕೇಳಿ ತಿಳಿದಿದ್ದಳಷ್ಟೇ..
ಅವನು ಸಾಯುವಾಗ ಹೇಗೆ ಮೈ ಚೆಲ್ಲಿ ನೆಲಕ್ಕೆ ಬಿದ್ದಿದ್ದನೋ ಅದೇ ರೀತಿಯಲ್ಲಿ,ಸ್ವಲ್ಪವೂ ವ್ಯತ್ಯಾಸವಿಲ್ಲದೇ ಆಕೆಯೂ ನೆಲಕ್ಕೆ ಬಿದ್ದಿದ್ದಳು.
ಊರಿನ ಜನರೆಲ್ಲಾ ಅದು ಹುಡುಗನ ದೆವ್ವ ಎಂದು ಮಾತಾಡಿಕೊಂಡರು. ಒಂದೆ ಏಟಿಗೆ ಎರಡು ಜೀವ ಬಲಿತೆಗೆದುಕೊಂಡ ಅದು ತನ್ನ ಕೌಂಟ್ ಡೌನ್ ಶುರು ಮಾಡಿದ್ದು ಸತ್ಯವಾ..?
ಮೊದಲಿಗೆ ನಾನು ನಕ್ಕು ಅದಕ್ಕೆ ತಾರ್ಕಿಕ ಅಂಶಗಳನ್ನು ಹುಡುಕಲು ಪ್ರಯತ್ನಿಸಿದ್ದೆ. ಆಕೆಗೆ ಆ ಕಥೆ ಮನಸ್ಸಲ್ಲಿ ಉಳಿದಿರಬಹುದು., ಆ ಮಾತುಗಳು ಯಾರೋ ಹೇಳಿದ್ದು, ತಾನು ತೀರಾ ಹತ್ತಿರದ ಸಂಬಂಧಿ ಆದ್ದರಿಂದ ದೆವ್ವ ನನ್ನನ್ನೂ ಕಾಡಬಹುದು ಎನಿಸಿರಬಹುದು,,ಜೊತೆಗೆ ಬಿಸಲಿಗೆ ನೆತ್ತಿ ಕಾದು ಸುಸ್ತಾಗಿ ಹೃದಯಾಘಾತಕ್ಕೆ ಕಾರಣವಾಗಿರಬಹುದು... ಹೀಗೆ.
ಆದರೆ ಆನಂತರದ ಘಟನೆಗಳು ಆ ಮನೆಯ ಅವನತಿಯಾದ ಬಗೆ ನನಗೆ ಅದರ ಬಗ್ಗೆ ನಂಬುವಂತೆ ಮಾಡಿತ್ತು. ಈವತ್ತಿಗೂ ಆಕೆ ಅದೇ ರೀತಿಯಲ್ಲಿ ಬಿದ್ದು ಸತ್ತ ಬಗೆ ಹೇಗೆ? ಕಾಕತಾಳೀಯವಾದರೂ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಕಾಡುತ್ತದೆ...
ಆ ಮನೆ, ಮನೆಯ ಜನ ಅವನತಿಯಾದ ಬಗೆ ತೀರಾ ಕುತೂಹಲಕಾರಿಯಾದದ್ದು. ಇರಲಿ. ಮೊನ್ನೆ ಹೇಳಿದಂತೆ ಒಂದು ಹಾರರ್ ಚಿತ್ರಕ್ಕೆ ಕಥೆ ಮಾಡುವ ಮುನ್ನ ಅದಕ್ಕೆ ಸಂಬಂಧಿಸಿದ ಒಂದಷ್ಟು ಘಟನೆಗಳನ್ನು ಅದ್ಯಯನ ಮಾಡೋಣ ಎನಿಸಿದ್ದು ನಿಜ. ಈವತ್ತು ಅಂತರ್ಜಾಲದಲ್ಲಿ ಬಯಲಾಗದ ನಿಗೂಢಗಳು ಎಂಬರ್ಥದಲ್ಲಿ ಗೂಗಲ್ ನಲ್ಲಿ ಜಾಲಾಡಿದರೆ ಸುಮಾರಷ್ಟು ಮಾಹಿತಿಗಳು ಸಿಗಬಹುದು. ಆದರೆ ಅವುಗಳನ್ನು ನಂಬುವುದಾದರೂ ಹೇಗೆ..? ಹಾಗಾಗಿ ನನ್ನ ಸುತ್ತಮುತ್ತ ನಡೆದ ಘಟನೆಗಳನ್ನು, ಕೇಳಿ ತಿಳಿದ ಪ್ರಸಂಗಗಳನ್ನು ನೆನೆಪು ಮಾಡಿಕೊಂಡೆ.
ದೆವ್ವ ಭೂತ ಪಿಶಾಚಿ ಮತ್ತು ದೇವರಿಗೆ ತಾರ್ಕಿಕ ಅಂತ್ಯ ಕೊಡಲು ಸಾಧ್ಯವೇ ಇಲ್ಲ. ಆ ನಿಟ್ಟಿನಲ್ಲಿ ನನ್ನ ಮಿತಿಯಲ್ಲಿ ನಾನು ಮಾಡದ ಪ್ರಯೋಗಗಲಿಲ್ಲ. ಆದರೆ ಈವತ್ತಿಗೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಸಿನಿಮಾದ ವಿಷಯಕ್ಕೆ ಬಂದಾಗ ಅದನ್ನು ಒಂದು ವಿಷಯವನ್ನಾಗಿ ನೋಡಬೇಕೆಂಬುದು ನನ್ನ ವಾದ. ನನ್ನೊಂದಿಗೆ ಕೈ ಜೋಡಿಸಲು ಸುಮಾರು ಜನ ಮಿತ್ರರು ಮುಂದೆ ಬಂದಿದ್ದಾರೆ. ಅವರ ಜೊತೆ ಚರ್ಚಿಸಿ ಒಂದೊಳ್ಳೆ[ಕೆಟ್ಟದಾಗಿ ಹೆದರಿಸುವ] ಹಾರರ್ ಚಿತ್ರ ಕೊಡುವ ಆಶಯ ನನ್ನದು.
ನಿಮಗೂ ಆಸಕ್ತಿಯಿದ್ದರೆ ಒಮ್ಮೆ ನನ್ನೊಡನೆ ಚರ್ಚೆಗೆ ಕೂರಬಹುದಲ್ಲ..? ನನ್ನ ಮಿಂಚಂಚೆ ನಿಮಗೆ ಗೊತ್ತಿದೆ.