Saturday, January 12, 2013

ಜನವರಿ 12 ರಂದು..

ಒಮ್ಮೆ ಹಿಂದಿರುಗಿ 2012 ನ್ನೊಮ್ಮೆ ಅವಲೋಕಿಸಿದರೆ:
ಪ್ರಾರಂಭದಲ್ಲಿ ಏನೇನೋ ಅನಿಸಿತ್ತು. ಸುಮಾರು ಯೋಜನೆಗಳಿದ್ದವು.ಹಾಗೆ ಕನಸುಗಳೂ ಆಶಾದಾಯಕವಾಗಿದ್ದವು.. ನನ್ನ ಸಿನೆಮಾ ಮಾರ್ಚ್ 23 ಈ ವರ್ಷ ಬಿಡುಗಡೆಯಾಗಿಬಿಡುತ್ತದೆ. ಏನೋ ಒಂದಾಗುತ್ತದೆ. ಎಲ್ಲವೂ ಫಲಪ್ರದವಾಗುತ್ತದೆ ಎಂದೆನಿಸಿತ್ತು.
ಆದರೆ ನೋಡನೋಡುತ್ತಾ 2012 ಹಾಗೆಯೇ ಕಳೆದುಹೋಯಿತು. ನನ್ನ ಯಾವೊಂದು ಕೆಲಸಗಳು ಸಂಪೂರ್ಣವಾಗಲಿಲ್ಲ. ನಮ್ಮ ಸಿನೆಮಾದ ಕೆಲಸಗಳು ಕಾರಣಾಂತರಗಳಿಂದ ತಡವಾಗಿ ತಡವಾಗಿ ಸಂಪೂರ್ಣವಾಗಲು ವರ್ಷಾಂತ್ಯ ಬೇಕಾಯಿತು. ಚಿತ್ರ ಮುಗಿದು ಎಲ್ಲಾ ಕಡೆ ಪ್ರಸಂಶೆ ಬಂದರೂ ಯಾರೂ ಸ್ಟಾರ್ ಗಳಿರದ ಕಾರಣ ಚಿತ್ರವನ್ನ ಬಿಡುಗಡೆ ಮಾಡಲು ಯಾರು ಮುಂದೆ ಬರಲಿಲ್ಲ. ಹೀಗೆ..ಒಂದೇ ಒಂದು ಚಿತ್ರವನ್ನೂ ಕೈಯಲ್ಲಿ ಹಿಡಿದುಕೊಂಡು ಅದರ ಬಿಡುಗಡೆಗೆ ಕಾಯುತ್ತ ಕುಳಿತ ನನ್ನ ಇಡೀ ವರ್ಷದ ಸಂಪಾದನೆ ನೆನಪಿಸಿಕೊಂಡರೆ ..
ಕಳೆದ ವರ್ಷ ನಾನು ಮಾಡಬೇಕೆಂದುಕೊಂಡ ಕೆಲಸಗಳು ಹಲವಾರು, ಭೇಟಿ ಮಾಡಿದ ವ್ಯಕ್ತಿಗಳು ನೂರಾರು ಆದರೆ ಯಾವುದೂ ಕೆಲಸಕ್ಕೆ ಬರಲಿಲ್ಲ. ದಿನಗಳು ಕಣ್ಣ ಮುಂದೆಯೇ ನಿರಾಶಾದಾಯಕವಾಗಿ, ಏನೂ ಲಾಭವಿಲ್ಲದೆ ಕಳೆದುಹೋದವು.
ಈ ವರ್ಷದ ಹಾದಿಯಲ್ಲಿ ನನಗೆ ಎಲ್ಲಾ ಕೆಲಸಗಳ ಫಲಿತಾಂಶ ಕಾದಿದೆ. ನನ್ನ ಪುಸ್ತಕ ಬಿಡುಗಡೆಯಾಗುವುದರಲ್ಲಿದೆ..ಅದರ ಫಲಿತಾಂಶ ಏನು ನೋಡಬೇಕು. ನಮ್ಮ ಸಿನೆಮಾ ಕೂಡ ಬಿಡುಗಡೆಯಾಗುತ್ತದೆ ಅದರ ಭವಿಷ್ಯ ನನ್ನ ಭವಿಷ್ಯವನ್ನ ಹೊತ್ತು ನಿಂತಿದೆ.
'ಸರ್ವ ವಸ್ತು೦ ಭಯಾನ್ವಿತಂ
ಭುವಿನೃಣಾ೦  ವೈರಾಗ್ಯ ಮೇವಭಯಂ '
ಇದು ಸ್ವಾಮೀ ವಿವೇಕಾನಂದರಿಗೆ ಇಷ್ಟವಾದ ನುಡಿ. ಇದು ನನಗೂ ಇಷ್ಟವಾದದ್ದು ಯಾಕೋ ನನಗೆ ಗೊತ್ತಿಲ್ಲ. ಅದರ ತಾತ್ಪರ್ಯ ಮಾತ್ರ ನನ್ನ ಮನದಾಳದಲ್ಲಿ ಉಳಿದುಬಿಟ್ಟಿತ್ತು. ನಾನಾಗ ಕಾಲೇಜಿಗೆ ಹೋಗುತ್ತಿದ್ದೆ. ಬೆಳಿಗ್ಗೆ ಒಂಬತ್ತಕ್ಕೆ ಕಾಲೇಜು   ಪ್ರಾರಂಭವಾದರೂ ನಾನು ಮನೆಯನ್ನ ಆರು ಘಂಟೆಗೆ ಬಿಡುತ್ತಿದ್ದೆ. ಯಾಕೆಂದರೆ ನಮ್ಮೂರಿನಿಂದ ನಂಜನಗೂಡಿಗೆ ಕೇವಲ ಮುಕ್ಕಾಲು ಘಂಟೆಯ ಹಾದಿಯಾದರೂ ಬಸ್ಸುಗಳು ಮಾತ್ರ ಇದ್ದದ್ದು ಕೆಲವೇ ಕೆಲವು. ಅವುಗಳಲ್ಲಿ ಹಿಂದಿನ ಊರಿನಲ್ಲಿ ಜನ ತುಂಬಿದ್ದರೆ ನಮ್ಮ ಊರಿನಲ್ಲಿ ನಿಲ್ಲಿಸುತ್ತಿರಲಿಲ್ಲ. ಹಾಗಾಗಿ ಬೆಳಿಗ್ಗೆಯೇ ಎದ್ದು ಹೊರಟು ಬಿಡುತ್ತಿದ್ದೆ. ಏಳು ಘಂಟೆಗೆ ನಂಜನಗೂಡು. ಲೈಬ್ರರಿ ತೆರೆಯುವುದು ಎಂಟು ಘಂಟೆಗೆ. ಹಾಗಾಗಿ ಒಂದು ಘಂಟೆ ಅಲ್ಲಿ ಪತ್ರಿಕೆಗಳನ್ನೂ ವಿತರಿಸುವವರನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದೆ. ಆಮೇಲೆ ಬೇಸರ ಕಳೆಯಲು ಪಕ್ಕದಲ್ಲಿದ್ದ ದೇವಸ್ಥಾನಕ್ಕೆ ಹೋಗಿ ಕುಳಿತುಕೊಂಡು ಸುಮ್ಮನೆ ಹೋಗಿ ಬರುವವರನ್ನು ನೋಡುತ್ತಿದ್ದೆ. ಯೋಚಿಸುತ್ತ ಯೋಚಿಸುತ್ತಾ ಯಾಕೋ ಈ ಬದುಕೇ ವ್ಯರ್ಥ ಎನಿಸುತ್ತಿತ್ತು. ಎಲ್ಲವನ್ನೂ ತೊರೆದು ಹೋಗಿಬಿಡಬೇಕು ಎನಿಸುತ್ತಿತ್ತು. ಯಾಕಾಗಿ ಇಷ್ಟೆಲ್ಲಾ ಹೋರಾಡಬೇಕು ಎನಿಸುತ್ತಿತ್ತು. ನನ್ನ ಕಾಲೇಜು ಜೀವನದಲ್ಲಿ ನನ್ನ ತರಗತಿಯಲ್ಲಿದ್ದ ವಿದ್ಯಾರ್ಥಿಗಳಲ್ಲಿ ನಾನೊಬ್ಬನೇ ಹುಡುಗ. ಉಳಿದವರೆಲ್ಲರೂ ಹುಡುಗಿಯರೇ. ಹಾಗಾಗಿ ನನಗೆ ಗೆಳೆಯರೇ ಇರಲಿಲ್ಲ. ಸಿನಿಮಾಕ್ಕೆ, ಸುತ್ತಾಡಲು ಎಲ್ಲದಕ್ಕೂ ನಾನೊಬ್ಬನೇ. ತರಗತಿಗೆ ಬಂದಾಗ ನಾನು ಮುಂದೆ ಕುಳಿತುಕೊಳ್ಳುತ್ತಿದ್ದರೆ ನನ್ನ ಹಿಂದೆ ಹುಡುಗಿಯರ ಹಿಂಡು ಕುಳಿತುಕೊಳ್ಳುತ್ತಿತ್ತು..ನನಗೋ ಎಂಥದೋ ಮುಜುಗರವಾಗಿತ್ತಿತ್ತು. ಅವರವರಲ್ಲಿ  ಏನಾದರೂ ಮಾತಾಡಿಕೊಂಡು ನಕ್ಕರೆ ನನಗೆ ಏನೋ ಕಸಿವಿಸಿಯಾಗುತ್ತಿತ್ತು. ಆದರೆ ನಮ್ಮ ತರಗತಿಯ ವಿದ್ಯಾರ್ಥಿನಿಯರು ಒಳ್ಳೆಯವರಿದ್ದರು. ನಾನೊಬ್ಬನೇ ಹುಡುಗ ಎಂಬ ಕನಿಕರ ಅವರಲ್ಲಿತ್ತು. ತಮ್ಮ ಪಾಡಿಗೆ ತಾವಿರುತ್ತಿದ್ದರು.ಇಡೀ ಬಿ..ಎಸ್ಸಿ. ಹೀಗೆ ಕಳೆಯಿತು. ಗೆಳೆಯರಿಲ್ಲದೆ, ಸುತ್ತಾಟವಿಲ್ಲದೆ ಒಂಟಿಯಾಗಿ. ಆ ಸಮಯದಲ್ಲಿ ನಾನು ಸ್ವಾಮೀ ವಿವೇಕಾನಂದರ ಭಕ್ತನಾಗಿದ್ದು. ಎಲ್ಲಾ ಆಸೆಯನ್ನೂ ಬಿಡಬೇಕು ಎಂದು ನಿರ್ಧರಿಸಿದ್ದೆ. ನನ್ನ ಬಗ್ಗೆಯೇ ಪ್ರಯೋಗಗಳನ್ನು ಮಾಡಿಕೊಳ್ಳಲು ನಿರ್ಧರಿಸಿದ್ದೆ. ಮುಖದಲ್ಲಿ ಮೊಡವೆ ಬರುತ್ತಿದ್ದರಿಂದ ಮುಖ ನೋಡಿದಾಗ ಚಿಂತೆಯಾಗುತ್ತದೆಂದು ಆರು ತಿಂಗಳು ನನ್ನ ಮುಖವನ್ನೂ ಕನ್ನಡಿಯಲ್ಲಿ, ಎಲ್ಲೇ ಆಗಲಿ ನಾನು ನೋಡಿರಲಿಲ್ಲ. ಸ್ನಾನ ಮಾಡಿ ಒಂದು ಅಂದಾಜಿಗೆ ತಲೆ ಬಾಚಿಕೊಳ್ಳುತ್ತಿದ್ದೆ. ಹೆಚ್ಚು ಅದ್ಯಾತ್ಮಿಕ ಪುಸ್ತಕ ಓದಲು ಪ್ರಾರಂಭಿಸಿದ್ದೆ. ಅವರ ನುಡಿಗಳು ತಲೆಯಲ್ಲಿತ್ತು. ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಕೋಪವನ್ನು ಕಡಿಮೆಮಾಡಿಕೊಂಡೆ.ಎಲ್ಲವನ್ನೂ ಎಲ್ಲಾ ಸಂದರ್ಭದಲ್ಲೂ ವಿವೇಚನೆಯಿಂದ, ತಾಳ್ಮೆಯಿಂದ ವರ್ತಿಸುವುದನ್ನು ಕಲಿತೆ.ನನಗೆ ಇದಕ್ಕೆ ಸಾಥ್ ನೀಡಿದ್ದು ಯಂಡಮೂರಿಯವರ 'ಅಂತರ್ಮುಖ ' ಕಾದಂಬರಿ. ಅದನ್ನು ಸುಮಾರಿ ಸಾರಿ ಓದಿದೆ. ಸ್ವಕರುಣೆಯನ್ನು ಮನಸ್ಸಿನಿಂದ ಕಿತ್ತುಹಾಕಿದೆ.
ಹಾಗಾಗಿ ನನಗೆ ಸ್ವಾಮೀ ವಿವೇಕಾನಂದರ ಬದುಕು ಸ್ಫೂರ್ತಿಯಾಯಿತು.ಯಾವುದನ್ನೂ ಹೀಗೆಳೆಯದ, ಪ್ರತಿಯೊಂದಕ್ಕೂ ಅದರದೇ ಬೆಲೆಯಿದೆ ಎನ್ನುವ ಸಿದ್ಧಾಂತ ನನಗೂ ಮನದಟ್ಟಾಯಿತು.
ಅವರಿಗೆ, ಅವರ ಜನ್ಮದಿನವಾದ ಜನವರಿ 12 ರಂದು ನನ್ನ ಶುಭಾಶಯಗಳು.
ಇನ್ನೊಂದು ವಿಷಯ, ಜನವರಿ 12 ನನ್ನ ಜನ್ಮ ದಿನವೂ ಹೌದು.

Wednesday, January 9, 2013

ನಮ್ಮ ಚಿತ್ರರಂಗದಲ್ಲೂ ದಂತಕಥೆಗಳಿವೆ..

ರಭಾಷಾ ಚಿತ್ರರಂಗದಲ್ಲಿ ನಡೆಯುವ ವಿಶೇಷ ಘಟನೆಗಳು ದಂತಕಥೆಗಳಾಗಿ ಪ್ರಸಿದ್ಧವಾಗುತ್ತವಲ್ಲದೆ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗುತ್ತವೆ. ಆದರೆ ನಮ್ಮಲ್ಲೇ ನಡೆಯುವ ಘಟನೆಗಳ ಬಗ್ಗೆ ಯಾರೂ ಮಾತಾಡುವುದಿಲ್ಲ.
ನಮ್ಮ ಪುಸ್ತಕ ಬರೆಯುವ ಸಮಯದಲ್ಲಿ ಶಂಖನಾದ ಚಿತ್ರ ನನ್ನ ಗಮನ ಸೆಳೆದದ್ದು ಅದರ ವಿಶೇಷ ಕಥೆಯಿಂದಾಗಿ. ಮನೆಮನೆ ಅಲೆವ ದಾಸಯ್ಯನೊಬ್ಬ  ಅನಿರೀಕ್ಷಿತವಾಗಿ ಪಂಚಾಯತಿ ಚೇರ್ಮನ್ ಆಗಿಬಿಡುತ್ತಾನೆ. ಆನಂತರದ ಮತ್ತು ಅದಕ್ಕೂ ಮೊದಲಿನ ಘಟನೆಗಳು ನಮ್ಮನ್ನು ಆವತ್ತಿನ ಈವತ್ತಿನ ಮತ್ತು ಯಾವತ್ತಿನ ರಾಜಕೀಯ ಪರಿಸ್ಥಿತಿಯ ವಿಡಂಬನಾತ್ಮಕ ಲೋಕಕ್ಕೆ ಕರೆದುಕೊಂಡು ಹೋಗಿಬಿಡುತ್ತವೆ. ನನಗೆ ನಿರ್ದೇಶಕ ಉಮೇಶ್ ಕುಲಕರ್ಣಿ  ಯಾರೆಂಬುದು ಗೊತ್ತಿರಲಿಲ್ಲ. ಇಡೀ ಅಂತರ್ಜಾಲ ಹುಡುಕಾಡಿದಾಗಲೂ ಅದ್ಯಾರೋ ಮರಾಠಿ ಚಿತ್ರರಂಗದ ಉಮೇಶ್ ಕುಲಕರ್ಣಿಯ ವಿವರ ಸಿಕ್ಕಿತೆ ಹೊರತು ನನಗೆ ನಮ್ಮ ನಿರ್ದೇಶಕರ ಬೇರಾವ ವಿಷಯವೂ ದೊರೆಯಲಿಲ್ಲ. ಆದರೆ ಕಾನ್ಸೈನ್ಸ್ ಒಫ್ ದಿ ರೇಸ್' ಪುಸ್ತಕದಲ್ಲಿ  ಕನ್ನಡದ ಉಮೇಶ್ ಕುಲಕರ್ಣಿಯ ಬಗ್ಗೆ ಸ್ವಲ್ಪೇ ಸ್ವಲ್ಪ ವಿವರವಿತ್ತು. ನನಗೆ ಅವರನ್ನೊಮ್ಮೆ ಭೇಟಿಯಾಗಲೇ ಬೇಕೆಂಬ ಹಠ ಬಂದುಬಿಟ್ಟಿದ್ದೆ, ಹೇಗೇಗೋ ಮಾಡಿ ಅವರ ಮೊಬೈಲ್ ನಂಬರ್ ಸಂಪಾದಿಸಿದೆ. ಮಲ್ಲೇಶ್ವರಂ ನಲ್ಲಿರುವ ಅವರ ಮನೆಯ ಹತ್ತಿರ ಹೋದಾಗ ಅತ್ಯಂತ ಆತ್ಮೀಯತೆಯಿಂದ ಬರಮಾಡಿಕೊಂಡರು ಉಮೇಶ್ ಕುಲಕರ್ಣಿ. ನಾನು ನನ್ನ ಉದ್ದೇಶ ಹೇಳಿದಾಗ ತುಂಬಾ ಸಂತೋಷ ಪಟ್ಟರು. ಅವರ ಶಂಖನಾದ ಚಿತ್ರದ ಬಗ್ಗೆ ಕೆಲವು ವಿವರಗಳನ್ನು ತೆರೆದಿಟ್ಟರು.
ಅತೀ  ಕಡಿಮೆ ಬಜೆಟ್ಟಿನಲ್ಲಿ ತಯಾರಾದ ಶಂಖನಾದ ಚಿತ್ರದಲ್ಲಿ ಯಾವ ಸ್ಟಾರ್ ಗಳಿರಲಿಲ್ಲ. ಹಾಗಾಗಿ ಚಿತ್ರವನ್ನೂ ಗಾಂಧಿನಗರದ ಹಂಚಿಕೆದಾರರು ಬಿಡುಗಡೆ ಮಾಡಲು ಮುಂದೆ ಬರಲಿಲ್ಲ. ಇದು ಚಿತ್ರತಂಡವನ್ನು ಧೃತಿಗೆಡಿಸಿತ್ತು. ಮುಂದೆ ಬೇರೆ ದಾರಿ ಕಾಣದೆ ಚಿತ್ರವನ್ನೂ ತುಮಕೂರಿನ ಪಕ್ಕದ ಸಂಪಿಗೆಹಳ್ಳಿಯ ಟೆಂಟ್ ಒಂದರಲ್ಲಿ ಬಿಡುಗಡೆ ಮಾಡಲು ಚಿತ್ರತಂಡದವರು ನಿರ್ಧರಿಸಿದರು.ಕಾರಣ ಈ ಚಿತ್ರದ ಚಿತ್ರೀಕರಣ ನಡೆದಿದ್ದು ಅಲ್ಲಿಯೇ. ಅಲ್ಲಿ ಬಿಡುಗಡೆಯಾದ ಚಿತ್ರ ಭರ್ಜರಿ ಪ್ರದರ್ಶನ ಕಂಡಿತ್ತು. ಆನಂತರವಷ್ಟೇ ಅಲ್ಲಿಂದ ಬೆಂಗಳೂರಿನ ಕೈಲಾಶ್ ಚಿತ್ರಮಂದಿರದಲ್ಲಿ, ಮೈಸೂರಿನ ವುಡ್ ಲ್ಯಾಂಡ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಶತದಿನೋತ್ಸವ ಆಚರಿಸಿತು. ಇದೊಂದು ದಾಖಲೆಯೇ ಸರಿ. ಆನಂತರ ಈ ಚಿತ್ರವನ್ನ ರಾಜ್ಯ ಪ್ರಶಸ್ತಿಗೆ ಕಳುಹಿಸಿದರಾದರೂ ಕರ್ನಾಟಕ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿ ಈ ಚಿತ್ರವನ್ನ ಪರಿಗಣಿಸಲಿಲ್ಲ. ಆದರೆ ಇದೆ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿ ಗಳಿಸಿತು.
ಈ ವಿಷಯಕ್ಕೆ ಬಂದಾಗ ಎಲ್ಲರೂ ಉದಾಹರಣೆ ಕೊಡುವುದು ತಮಿಳು ಚಿತ್ರ 'ಸೇತು' ವನ್ನ. ಹಣಕಾಸಿನ ತೊಂದರೆಯಿಂದಾಗಿ ಮುಖ್ಯ ಕೇಂದ್ರದಲ್ಲಿ ಚಿತ್ರವನ್ನೂ ಬಿಡುಗಡೆ ಮಾಡಲು ಸಾಧ್ಯವಾಗದಿದ್ದಾಗ ಅದನ್ನು ಇದೆ ತರಹ ಬೇರೆ ಕಡೆ ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾದ ಮೇಲೆ ಚೆನ್ನೈನ ಪ್ರಮುಖ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ದ್ದರು. ಇದನ್ನು ಉದಾಹರಿಸುವ ನಮ್ಮವರು ಶಂಖನಾದವನ್ನು ಉದಾಹರಿಸುವುದಿಲ್ಲ.
ಉಮೇಶ್ ಕುಲಕರ್ಣಿ ನಿರ್ದೇಶಕ , ಸಂಕಲನಕಾರ ಮತ್ತು ಲೇಖಕರು ಕೂಡ. ಇತ್ತೀಚಿಗೆ ಅವರ 'ಅಂಚೆ ಅಂಟು-ಪರದೆ ನಂಟು' ಎಂಬ ಕೃತಿ ಕೂಡ ಬಿಡುಗಡೆಯಾಗಿದೆ. ಸುಮಾರು ಹೊತ್ತು ತಮ್ಮ ಕಾಲದ ಚಿತ್ರರಂಗದಲ್ಲಿ ನಡೆದ ಘಟನೆಗಳನ್ನೂ ನನ್ನ ಜೊತೆ ಹರಟಿದರು.ಅದರಲ್ಲಿ ಅವರು ಹೇಳಿದ ಬಾಲು ಮಹೇಂದ್ರರ ಕೋಕಿಲ ಚಿತ್ರದ ವಿಷಯ ನನಗೆ ಅದ್ಭುತ ಎನಿಸಿತು.
ಮೂಲತಹ ಶ್ರೀಲಂಕಾದವರಾದ ಬಾಲು ಮಹೇಂದ್ರ ರ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ಗೊತ್ತಿಲ್ಲ. ಅವರ ವಿರುದ್ಧ ಸುಳ್ಳು ಪಾಸ್ ಪೋರ್ಟ್ ದ ಆರೋಪ ಕೂಡ ದಾಖಲಾಗಿತ್ತಲ್ಲದೆ, ಅವರ ಚಿತ್ರದಲ್ಲಿ ನಟಿಸಿದ್ದ ನಟಿಯ ಸಾವಿಗೆ ಬಾಲು ಮಹೇಂದ್ರರು ಕಾರಣ ಎಂಬ ಆರೋಪವೂ ಇತ್ತು. ಕನ್ನಡದ ಪ್ರೇಕ್ಷಕರು ಚಿಂತನಾಶೀಲರು ಇಲ್ಲಿಯೇ ನನ್ನ ಮೊದಲ ಚಿತ್ರ ಮಾಡುತ್ತೇನೆ ಎಂದು ಅವರು ನಿರ್ದೇಶಿಸಿದ ಚಿತ್ರ 'ಕೋಕಿಲ' ಅದಕ್ಕೆ ಸಂಕಲನ ಇದೆ ಉಮೇಶ್ ಕುಲಕರ್ಣಿಯವರದು.
ಕೋಕಿಲ ಚಿತ್ರ ಎಲ್ಲಾ ಕಡೆ ಯಶಸ್ವಿಯಾಯಿತಲ್ಲದೆ, ಕನ್ನಡದ ಅವತರಣಿಕೆಯೇ ಬಾಂಬೆ, ಹೈದರಾಬಾದ್, ಚೆನ್ನೈ ನಲ್ಲಿ ಬಿಡುಗಡೆಯಾಯಿತು. ರಷ್ಯಾದ ಜಕೊಸ್ಲೋವಾಕಿಯಾದ ದೂರದರ್ಶನದಲ್ಲಿ 'ಚಾಯ್ಸ್ ಆಫ್ ಯುವರ್ ಮೂವಿ' ಎಂಬ ಕಾರ್ಯಕ್ರಮವಿದೆ. ಪ್ರೇಕ್ಷಕರು ಇಷ್ಟ ಪಟ್ಟ ಚಿತ್ರವನ್ನ ಆ ಕಾರ್ಯಕ್ರಮದಲ್ಲಿ ಪ್ರದರ್ಶಿಸುತ್ತಾರೆ. ನಮ್ಮಲ್ಲಿನ ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಕಾರ್ಯಕ್ರಮದ ತರಹ. ಅಲ್ಲಿ ಸುಮಾರು ಏಳು ಸಾರಿ 'ಕೋಕಿಲ' ಚಿತ್ರ ಪ್ರದರ್ಶನಗೊಂಡಿದೆ. ಅಲ್ಲಿನ ಕೆಲವರು ಬಾಲು  ಮಹೆಂದ್ರರನ್ನು 'ಇಲ್ಲೇ ಬಾ..ಚಿತ್ರ ಮಾಡು ' ಎಂದು ಕರೆದಿದ್ದರೂ ಇವರ ಮೇಲೆ 'ಪೋಲಿಸ್ ಕೇಸ್ ' ಇದ್ದದ್ದರಿಂದ ದೇಶ ಬಿಟ್ಟು ಹೋಗಲು ಸಾಧ್ಯವಾಗಲಿಲ್ಲ.
ಇದೆಲ್ಲಾ ಗೊತ್ತಾದಮೇಲೆಯೇ ನನಗನಿಸಿದ್ದು 'ನಮ್ಮಲ್ಲೂ ದಂತಕಥೆಗಳಿವೆ..ಇತಿಹಾಸ ಪುರುಷರಿದ್ದಾರೆ ಎಂಬುದು.'
ಓದಿ  ಮೆಚ್ಚಿದ್ದು:
ಉದಯ ಹೆಗ್ಡ ಎನ್ನುವವರ ಬ್ಲಾಗ್ ಒಂದರಲ್ಲಿ ಅತ್ಯುತ್ತಮ ಫೋಟೋಗಳಿವೆ. ತನ್ನನ್ನು ತಾನು ಅಮೆಚ್ಯೂರ್ ಎಂದು ಕರೆದುಕೊಳ್ಳುವ ಉದಯ್ ತಮ್ಮ ಬ್ಲಾಗ್ ನಲ್ಲಿನ ಫೋಟುಗಳಲ್ಲಿ ಆ ಕುರುಹು ಬಿಟ್ಟುಕೊಟ್ಟಿಲ್ಲ. ನೀರಿನ ಚಿತ್ತಾರದ ಫೋಟೋ ನಿಜಕ್ಕೂ ಅದ್ಭುತವಾಗಿದೆ. ಆ ಬೆಳಕಿನ ಸಂಯೋಜನೆ, ವರ್ಣ ವಿನ್ಯಾಸ ನೀವೇ ನೋಡಿ. ನಾನು ಸುಮ್ಮನೆ ಒಂದಷ್ಟು ಚಿತ್ರಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಸಿಕ್ಕಿದ ಬ್ಲಾಗ್ ಇದು.

Tuesday, January 8, 2013

ಮೊದಲು ಸುಳ್ಳು ಹೇಳಿದ್ದು...


ನಾನಾಗ ಮೂರನೆಯ ತರಗತಿಯಲ್ಲಿದ್ದೆ. ಸಂತೋಷಪ್ಪ ಎಂಬ ಕನ್ನಡ ಇತಿಹಾಸ ಮತ್ತು ಗಣಿತ ಮೂರನ್ನೂ ಕಲಿಸುತ್ತಿದ್ದ ಮಾಸ್ಟರೊಬ್ಬರಿದ್ದರು. ಉದ್ದನೆಯ ಜುಬ್ಬಾದಂತಹ ಉದ್ದನೆಯ ಶರ್ಟು, ದೊಗಳೆ ಪ್ಯಾಂಟು ಧರಿಸಿ, ಕೈಯಲ್ಲೊಂದು ಜೋಳಿಗೆಯಂತಹ ಬ್ಯಾಗು ಹಿಡಿದುಕೊಂಡು, ತಲೆಗೆ ಎಣ್ಣೆಹಾಕಿ ಕೂದಲನ್ನು ಅಂಟಿಸಿದಂತೆ ಬಾಚಿಕೊಂಡು ಬರುತ್ತಿದ್ದರು. ಅವರು ಅದೇನು ಪಾಠ ಮಾಡುತ್ತಿದ್ದರೋ ದೇವರಾಣೆಗೂ ಇಂದಿಗೂ ನೆನಪಿಲ್ಲದಿದ್ದರೂ ಅವರ ಕಂಚಿನಂತಹ ಕಂಠವನ್ನೂ ಮಾತ್ರ ಮರೆಯಲು ಸಾಧ್ಯವೇ ಇಲ್ಲ. ಆದರೆ ಮದ್ಯಾಹ್ನ ಹನ್ನೆರೆಡು ಗಂಟೆಯಾಗುತ್ತಿದ್ದಂತೆಯೇ ಮೇಜಿನ ಮೇಲೆ ಜೋರಾಗಿ ಕೋಲಿನಿಂದ ಬಡಿದು ಎಲ್ಲರನ್ನೂ ಬೆಚ್ಚಿಬೀಳಿಸಿ, ಲೋ ಇಲ್ಲಿ ಕೇಳ್ರೋ..ಎಂದದ್ದೇ ಮುಂದಿನ ಸಾಲಿನ ರಮೇಶನಿಂದ ಪ್ರಾರಂಭಿಸುತ್ತಿದ್ದರು. ಏನ್ಲಾ ಈವತ್ತು ನಿಮ್ಮನೇಲೆ ಸಾರು..
ಈವತ್ತು ಉಪ್ಪೆಸ್ರು ಸಾ..
ಅದ್ಯಾವನು ತಿಂತಾನೆ..ರುದ್ರಪ್ಪ ನಿಮ್ಮನೇಲಿ..
ಬೇಳೆ ಸಾರು ಸಾ
ತಥ್ ನೀವಳ್ಳಿ ಜನ ಯಾವತ್ತೂ ಚನ್ನಾಗಿರ್ತೀರೋ..
ನಿಮ್ಮನೇಲೇನೋ..
ಮೊಳುಲ್ಲಿ ಸಾರು
ನಿನ್ನೇನೂ ಅದೇ ಅಲ್ವಾ..ತಂಗಳಿರಬೇಕು..ನಿಮ್ಮನೇಲಿ..
ಅವರೆಕಾಲು ಸಾರು
ಗ್ಯಾಸು ಕಣೋ..
ಹೀಗೆ ಮುಂದಿನ ಮೂರು ಸಾಲುಗಳನ್ನು ಕೇಳಿ ಆನಂತರ ಅಷ್ಟು ಸಾರುಗಳಲ್ಲಿ ತಮಗೆ ರುಚಿಯೆನಿಸಿದ ಒಂದು ಸಾರನ್ನು ಮದ್ಯಾಹ್ನದ ಊಟಕ್ಕೆ ತರಿಸುತ್ತಿದ್ದರು. ಅದೇನೆ ಆದರೂ ಅವರು ನಾಲ್ಕನೇ ಸಾಲಿನತ್ತ ತಮ್ಮ ಸಾರಿನ ಸಂಭಾಷಣೆಯನ್ನು ಹರಿಯಬಿಡುತ್ತಿರಲಿಲ್ಲ. ಮೂರನೆಯ ಸಾಲಿನ ಕೊನೆ ವಿದ್ಯಾರ್ಥಿಯ ಮನೆಯ ಸಾರು ಇಷ್ಟವಾಗದಿದ್ದರೆ ವಾಪಸು ಮತ್ತೆ ಒಂದನೆಯ ಸಾಲಿನ ವಿದ್ಯಾರ್ಥಿಗೆ ಪ್ರಶ್ನೆ ವರ್ಗಾಯಿಸಿ ಸಾರು ತರಿಸುತ್ತಿದ್ದರು. ಅವರ್ಯಾಕೆ ನಾಲ್ಕನೇ ಸಾಲಿನ ಹುಡುಗನನ್ನು ಕೇಳುತ್ತಿರಲಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿ ಬಹುದಿನಗಳವರೆಗೆ ನನ್ನನ್ನು ಕಾಡುತ್ತಿತ್ತು. ನಾಲ್ಕನೆಯ ಸಾಲಿನ ವಿದ್ಯಾರ್ಥಿಗಳು ಕೀಳುಜಾತಿಯವರಾದ್ದರಿಂದ ಅವರ ಮನೆಯ ಅಡುಗೆಯನ್ನು ಮೇಸ್ಟ್ರು ತಿನ್ನುವುದಿಲ್ಲ ಎಂಬುದು ಸುಮಾರು ದಿನದ ನಂತರ ನನಗೆ ಗೊತ್ತಾದ್ದಷ್ಟೇ ಅಲ್ಲ, ನಾಲ್ಕನೇಯ ಸಾಲಿನ ವಿದ್ಯಾರ್ಥಿಗಳನ್ನು ಮುಟ್ಟಿಸಿಕೊಳ್ಳದಿದ್ದರೆ,  ಅವರ ಊಟ ಮಾಡದಿದ್ದರೆ ನಾವು ಮೇಲೆಂಬ ಭಾವನೆ ನನ್ನಲ್ಲಿ ಆ ವಯಸ್ಸಿನಲ್ಲಿ ನೆಲೆಯೂರುವಂತೆ ಮಾಡಿತ್ತು. ಆದರೆ ಮೇಷ್ಟ್ರು ಮಾತ್ರ ಕುಲವೊಂದೇ ನೆಲವೊಂದೇ..ಜಲವೊಂದೇ ಎಂದು ಪಾಠದ ಹೊತ್ತಿನಲ್ಲಿ ಗಂಟಲು ಹರಿದುಕೊಳ್ಳುತ್ತಿದ್ದರು.
ಕೆಲವು ಪಾಠಗಳನ್ನು ಅಥವಾ ನಮ್ಮ ವರ್ತನೆಗಳನ್ನು ನಾವು ಕಲಿತಿದ್ದಾದರೂ ಎಲ್ಲಿ? ಹೇಗೆ? ಎಂಬ ಪ್ರಶ್ನೆ ಆವಾಗಾವಾಗ ಕಾಡುತ್ತಲೇ ಇರುತ್ತದೆ. ಅಂಗನವಾಡಿ, ಪ್ರಾಥಮಿಕ , ಪ್ರೌಢಶಿಕ್ಷಣ ಹೀಗೆ ಮಾತು ಬರುವ ಮುನ್ನವೇ ಪ್ರಾರಂಭವಾಗುವ ನಮ್ಮ ನಡೆ ನುಡಿ ತಿದ್ದುವ , ಒಳ್ಳೆಯದು-ಕೆಟ್ಟದನ್ನು ಮನವರಿಕೆ ಮಾಡಿಕೊಡುವ ಕಾರ್ಯ ಮುಂದುವರೆಯುತ್ತಲೇ ಇರುತ್ತವೆ. ಆದರೂ ನಾವೇಕೆ ಸುಳ್ಳರಾಗುತ್ತೇವೆ, ಭ್ರಷ್ಟರಾಗುತ್ತೇವೆ, ಅಷ್ಟೆಲ್ಲಾ ನೀತಿ ಕಥೆಗಳನ್ನು ಕೇಳಿದರೂ, ಮಾಸ್ಟರುಗಳು ಹೇಳಿಕೊಟ್ಟರೂ ನಾವೇಕೆ ಶಿಸ್ತಿನ ಸಿಪಾಯಿಗಳಾಗುವುದಿಲ್ಲ. ಗಾಂಧಿ-ಸತ್ಯಹರಿಶ್ಚಂದ್ರರ ಕಥೆಗಳನ್ನು ಓದಿಕೊಂಡೇ ನಾವು ಅದೇಗೆ ಸುಳ್ಳರಾಗುತ್ತೇವೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.  ಆದರೆ ಮೊಟ್ಟಮೊದಲಿಗೆ ನಾನು ಸುಳ್ಳು ಹೇಳಿದ್ದು ಯಾವಾಗ, ಅದು ಯಾರಿಂದ ಪ್ರೇರೇಪಿತವಾದದ್ದು, ಹೇಗೆ ನಾನೊಂದು ಸುಳ್ಳನ್ನು ಸೃಷ್ಟಿಸಿದೆ, ನಾನು ಮೊಟ್ಟಮೊದಲಿಗೆ ಲಂಚ ಕೊಟ್ಟದ್ದಾದರೂ ಏಕೆ? , ಅದ್ಯಾರು ನಾನು ಲಂಚಕೊಡುವುದನ್ನು ಪ್ರೋತ್ಸಾಹಿಸಿದವರು ಅಥವಾ ಅದೇಕೆ ಬೈಯದೇ ಇದ್ದರು? ಎಂಬುದನ್ನು ಮೆಲುಕುಹಾಕಿದಾಗ ಕೆಲವು ಅಚ್ಚರಿಯ ಘಟನೆಗಳು ನೆನಪಿಗೆ ಬರುತ್ತವೆ.
ನಮ್ಮೂರಿನ ಶಾಲೆಯಲ್ಲಿ ನಮ್ಮನ್ನು ಬೆಳಿಗ್ಗೆ ಹತ್ತಕ್ಕೆ ಕೋಣೆಯೊಳಗೆ ಕೂಡಿಹಾಕಿ ಮದ್ಯಾಹ್ನ ಒಂದರವರೆಗೆ ಒಬ್ಬರಾದ ಮೇಲೊಬ್ಬರು ಅದೇನೇನೋ ಕೊರೆಯುತ್ತಿದ್ದದ್ದು ನಮಗೆ ಯಾವ ಜೈಲಿನ ಶಿಕ್ಷೆಗಿಂತಲೂ ಕಡಿಮೆಯೆನಿಸಿರಲಿಲ್ಲ. ಭಾನುವಾರವೆಂಬುದು ಉಳಿದೆಲ್ಲಾ ದಿನಗಳಿಗಿಂತ ಅದ್ಭುತ ದಿನವೆನಿಸುತ್ತಿತ್ತು. ಆದರೆ ಅದು ವಾರಕ್ಕೊಮ್ಮೆ ಮಾತ್ರ ಬರುತ್ತಿದ್ದುದರಿಂದ ಅದರ ಇರುವಿಕೆಯ ಸಂಭ್ರಮ ಕ್ಷಣದಂತೆ ಮಾಯವಾಗಿಬಿಡುತ್ತಿತ್ತು.ಉಳಿದ ದಿನಗಳಲ್ಲಿ ಒಂದು ದಿನವೂ ನಾವು ಶಾಲೆಗೆ ತಪ್ಪಿಸುವಂತಿರಲಿಲ್ಲ. ಅಕಸ್ಮಾತ್ ತಪ್ಪಿದರೇ ಎರಡೆರೆಡು ಕಡೆ ಹೊಡೆತ ಬೀಳುತ್ತಿದ್ದವು.ಆದರೆ ಜಾತ್ರೆ, ಹಬ್ಬ, ಮನೆಯಲ್ಲೇನಾದರೂ ಸಮಾರಂಭಗಳಾದರೆ ಮಾತ್ರ ಒಂದು ದಿನ ಮುಂಚೆಯೇ ಮನೆಯವರೇ ಶಾಲೆಗೆ ಹೋಗಬಾರದೆಂದು, ಕೆಲಸ ಮಾಡಬೇಕೆಂದೂ ತಾಕೀತುಮಾಡುತ್ತಿದ್ದರು. ಅದು ನಮ್ಮ ಮಾವನ ನಿಶ್ಚಿತಾರ್ಥದ ಸಮಾರಂಭದ ಸಿದ್ಧತೆಯ ದಿನಗಳು. ನಮ್ಮಮ್ಮ ನನ್ನನ್ನು ಕರೆದು ನಾಳೆಯಿಂದ ನಿಶ್ಚಿತಾರ್ಥ ಮುಗಿಯೋವರ್ಗೂ ಸ್ಕೂಲಿಗೆ ಹೋಗಬೇಡ ಅಂದರು. ನಿಶ್ಚಿತಾರ್ಥಕ್ಕೆ ಇನ್ನೂ ಮೂರು ದಿನವಿತ್ತು. ಅಷ್ಟು ದಿನ ಶಾಲೆಗೆ ತಪ್ಪಿಸಿಕೊಳ್ಳುವುದು ಖುಷಿಯೇ. ಆದರೆ ನಾಲ್ಕನೆಯ ದಿನ ಇರುತ್ತಿತ್ತಲ್ಲ ಶಿಕ್ಷೆ! ಅದನ್ನು ನೆನಪಿಸಿಕೊಂಡರೇ ಚಡ್ಡಿ ಒದ್ದೆಯಾಗುತ್ತಿತ್ತು.ಕೈಗೆ ರಪರಪನೇ ಭಾರಿಸುತ್ತಿದ್ದರು, ಹುಡುಗಿಯರ ಮುಂದೆಯೇ ಕಿವಿ ಹಿಂಡಿ, ಕುಕ್ಕರುಗಾಲಿನಲ್ಲಿ ಕೂರಿಸಿ, ಕುಂಡೆ ಮೇಲೆತ್ತಿ, ಕಾಲಿನ ಸಂಧಿಯಿಂದ ಕೈಯನ್ನು ತಂದು ಕಿವಿ ಹಿಡಿಸಿ ಕುಂಡೆಗೆ ಬಾಸುಂಡೆ ಬರುವವರೆಗೆ ಭಾರಿಸುತ್ತಿದ್ದರು, ದಿನಗಟ್ಟಲೇ ತರಗತಿಯಲ್ಲಿ ನಿಲ್ಲಿಸುತ್ತಿದ್ದರು..! ಅಮೌ ಸ್ಕೂಲಲ್ಲಿ ಬೈತಾರೆ ತಪ್ಪಿಸಿಕೊಂಡ್ರೆ.. ಎಂದವನಿಗೆ, ಹುಷಾರಿರ್ನಿಲ್ಲಾನ್ನು..ಜೊರ ಬಂದಿತ್ತೂನ್ನು.. ಎಂದು ಅಮ್ಮ ಹೇಳಿದ್ದಳು. ಆದ್ರೆ ಜೊರ ಬಂದಿಲ್ವಲ್ಲಾ.. ಅಮ್ಯಾಕೆ ಸುಳ್ಳು ಹೇಳಿದ್ರೆ ಮೇಸ್ಟ್ರು ಹೊಡಿತಾರೆ.. ಎಂದರೆ ನೀಯೇನ್ ಸತ್ಯಹರಿಶ್ಚಂದ್ರನ ತುಂಡಾ..ಸುಮ್ಕೆ ಹೇಳೋಗು.. ಎಂದು ಗದರಿದ್ದರಲ್ಲದೇ ತಾನೇ ಶಾಲೆಯ ಹತ್ತಿರ ಬಂದು ನಿನ್ನೆಯಿಂದ ನಮ್ಮುಡುಗನಿಗೇ ಹುಶಾರಿಲ್ಲ ಸಾರ್ ಎಂದು ಸುಳ್ಳು ಹೇಳಿಬಿಟ್ಟಿದ್ದಳು. ಅದನ್ನೆ ನಾನು ಆನಂತರ ಚೆನ್ನಾಗಿ ಕಲಿತುಬಿಟ್ಟಿದ್ದೆ. ಮಾವಿನ ತೋಪಿನಲ್ಲಿ ದಿನಗಟ್ಟಲೇ ಕಳೆದು ಮನೆಯಲ್ಲಿ ಶಾಲೆಗೆ ಹೋಗಿದ್ದವೆಂದೂ, ಶಾಲೆಯಲ್ಲಿ ಹುಷಾರಿರಲಿಲ್ಲವೆಂದು ಆರಾಮವಾಗಿ ಸುಳ್ಳು ಹೇಳಿಬಿಡುತ್ತಿದ್ದೆ. ಆದರೆ ಅದೇಗೋ ಏನೋ ಸಿಕ್ಕಿ ಹಾಕಿಕೊಳ್ಳುತ್ತಿದ್ದೆ. ಆಗ ಕೋಲಿನಿಂದ ರಪರಪನೇ ಭಾರಿಸಿ ಈ ವಯಸ್ಗೇ ಸುಳ್ಳು ಹೇಳೀಯ..ಬಾ ನಿನಗೆ ಮೇಸ್ಟ್ರ ಕೈಲಿ ಮಾಡಿಸ್ತೀನಿ ಎಂದು ಶಾಲೆಯ ಹತ್ತಿರ ದರದರನೇ ಎಳೆದುಕೊಂಡೋಗಿ ಸಾರ್..ನೋಡಿ ಸುಳ್ಳು ಹೇಳೋದು ಜಾಸ್ತಿಯಾಗಿದೆ ಇತ್ತೀಚೆಗೆ.. ಎಂದು ಆರೋಪಿಸುತ್ತಿದ್ದದ್ದು ಅದೇ ಅಮ್ಮ. ಮೇಸ್ಟ್ರಂತೂ ಕೋಲು ತೆಗೆದುಕೊಂಡು ಸುಳ್ಳು ಹೇಳ್ತೀಯ..ಸುಳ್ಳು ಹೇಳೋದು ತಪ್ಪು ಅಂತ ಹೇಳೀಕೊಟ್ಟಿಲ್ಲ.. ಎಂದು ಆವತ್ತೆಲ್ಲಾ ಮನಸೋ ಇಚ್ಛೆ ಭಾರಿಸುತ್ತಿದ್ದರು.
ಅದೊಂದು ದಿನ ತರಗತಿಯಲ್ಲಿ ನಾವೆಲ್ಲ ತೂಕಡಿಸುತ್ತ ಕುಳಿತಿದ್ದೆವು. ಆಗ ಮೇಸ್ಟ್ರು ಬರಬರನೇ ತರಗತಿಗೆ ನುಗ್ಗಿಬಂದವರೇ ನೋಡ್ರೋ ಈಗ ಇನ್ಸ್‌ಪೆಕ್ಟ್ರು ಬತ್ತಾರೆ.. ಅವರು ಕೇಳಿದ್ರೆ ಎಲ್ಲಾ ಪಾಠ ಮುಗಿದಿದೇ ಅಂತ ಹೇಳಬೇಕು..ಸಾರು ವಿಷ್ಯ, ಟೀ ವಿಷ್ಯ ಯಾವನಾದ್ರು ಬಾಯಿ ತೆಗೆದ್ರಾ ಚಮ್ಡಾ ಸುಲಿತೀನಿ.. ಎಂದು ಸತ್ಯ ಹೇಳದಿರುವಂತೆ ನಮಗೆ ಧಮಕಿಹಾಕಿದ್ದರು.
ನಾನು ಪಿಯುಸಿಗೆ ಬಂದಾಗ ಗ್ರಾಮೀಣವಿದ್ಯಾರ್ಥಿಯ ಸೆರ್ಟಿಪಿಕೇಟು ಬೇಕಾಗಿದ್ದರಿಂದ ತಾಲೂಕು ಆಫೀಸಿಗೆ ಹೋಗಬೇಕಿತ್ತು. ಆಗ ಮನೆಯಲ್ಲಿ ನೀನು ಹೋಗಿ ಅಲೀ ಬೇಕಾಯ್ತದೆ..ಅದ್ಕೆ ಅಲ್ಲಿ ರಮೇಶಪ್ಪ ಅನ್ನೋನು ಇರ್ತಾನೆ ಅವನತ್ರ ಐವತ್ತು ರೂಪಾಯ್ ಕೊಟ್ಟು ಬಾ..ಒಂದ ದಿನಕ್ಕೆ ರೆಡಿ ಮಾಡಿಸ್ಕೊಡ್ತಾನಾ..ಎಂದು ಹೇಳಿದ್ದರು. ನಾನು ಅದ್ಯಾವುದೋ ಫೀಸು ಇರಬೇಕೆಂದುಕೊಂಡಿದ್ದದು ಲಂಚವಾಗಿತ್ತು. ಎರಡು ದಿನ ಅಲೆದರೂ ಪರ್ವಾಗಿಲ್ಲ..ನಿನಗೇನಂತಹ ಕೆಲ್ಸ ಇದೆ..ಹೋಗಿ ಸೆರ್ಟಿಫಿಕೇಟ್ ಮಾಡಿಸಿಕೊಂಡು ಬಾ..ಲಂಚ ಕೊಡುವುದು ತಪ್ಪು ಎಂದು ಮನೆಯವರೇಕೆ ಹೇಳಲಿಲ್ಲ ಎಂಬ ಪ್ರಶ್ನೆ ನನ್ನನೂ ಈಗಲೂ ಕಾಡುತ್ತಿದೆ.
ಮೊನ್ನೆ ಭಾನುವಾರ ಯಾವುದು ಹೋಟೆಲಿಗೆ ಊಟಕ್ಕೆ ಹೋಗಿದ್ದೆ.ಮದ್ಯಾಹ್ನವಾದ್ದರಿಂದ ಮತ್ತು ರಜಾದಿನವಾದ್ದರಿಂದ ಹೋಟೆಲಿನ ತುಂಬ ಜನವೋ ಜನ. ಬಂದವರೆಲ್ಲಾ ಕ್ಯೂ ನಿಲ್ಲಲೇ ಬೇಕಾಗಿತ್ತು. ನನ್ನ ಟೇಬಲ್ಲಿನ ಹಿಂದೆ ಪುಟ್ಟ ಹುಡುಗಿಯೊಬ್ಬಳು ಬಂದು ನಿಂತುಕೊಂಡಳು. ನಾನು ತಲೆ ತಿರುಗಿ ನೋಡಿದರೆ ಅವಳ ಕಣ್ಣು ನನ್ನ ತಟ್ಟೆಯ ಮೇಲೇ ಇತ್ತು. ನನಗೆ ಒಂದು ತರವಾದರೂ ತಿನ್ನುವುದನ್ನು ಮುಂದುವರೆಸಿದೆ.. ಆಗ ಆ ಹುಡುಗಿಯ ಹತ್ತಿರಕ್ಕೆ ಬಂದ ಆಕೆಯ ತಾಯಿ ಇಲ್ಲೇ ನಿಂತಿರು..ಆದ ತಕ್ಷಣ ನನ್ನ ಕೂಗು.. ಎಂದವಳು ಇನ್ನೊಂದು ಮಗುವನ್ನು ಕಂಕುಳಲ್ಲಿ ಹೊತ್ತುಕೊಂಡು ಆಚೆ ಹೋದಳು..ಸ್ವಲ್ಪ ಹೊತ್ತಿನಲ್ಲಿ ಆ ಹುಡುಗಿ ಮಮ್ಮಿ ಮಮ್ಮಿ ಕಮ್ ಹಿಯರ್..ಈ ಅಂಕಲ್‌ದು ಇನ್ನು ಸ್ವಲ್ಪನೇ ಇದೆ..ಇನ್ನರ್ಧ ಚಪಾತಿ ಇದೆ.. ಎಂದು ಅಮ್ಮನಿಗೆ ಕೂಗಿ ಕೂಗಿ ಹೇಳತೊಡಗಿದಳು.ಅವರಮ್ಮ ಅಲ್ಲಿಂದಲೇ ಬೇಬಿ ಸಿಟ್ ದೇರ್ ಇಮ್ಮಿಡಿಯೇಟಲಿ.. ಎಂದು ಕಿರುಚಿಹೇಳಿದಳು. ಬೆಂಗಳೂರಿನ ಇನ್ನೊಂದು ಸಂಸ್ಕೃತಿಯನ್ನು ಕಂಡು ನನಗೆ ಇರುಸುಮುರುಸಾಗಿ ಊಟ ಬೇಗಬೇಗನೇ ಮುಗಿಸಿ ಅವರಿಗೆ ಜಾಗ ಬಿಟ್ಟುಕೊಟ್ಟೆ..! ಇದು ನನಗೆ ಮದುವೆಯ ಊಟದ ಸಾಲಿನಲ್ಲಿ ಬಹಳಷ್ಟು ಬಾರಿ ಆಗಿದೆ.
ಒಮ್ಮೆ ನನ್ನ ಗೆಳೆಯನೊಬ್ಬ ಮನೆಗೆ ಹೋಗಿ ಅವನ ಪುಟ್ಟ ಹುಡುಗನ ಜೊತೆ ಮಾತಿಗಿಳಿದಿದ್ದೆ. ಅವನು ಕಾನ್ವೆಂಟಿನಲ್ಲಿ ಕನ್ನಡ ಮಾತಾಡುವ ಹಾಗಿಲ್ಲ..ಅಪ್ಪಿತಪ್ಪಿ ಮಾತಾಡಿದರೆ ಫೈನ್ ಹಾಕುತ್ತಾರೆ, ರಾಷ್ಟ್ರಗೀತೆ ಹಾಡಿಸುವುದಿಲ್ಲ ಎಂಬಿತ್ಯಾದಿ ವಿಷಯಗಳನ್ನು ಕೇಳಿದಾಗ ಆಶ್ಚರ್ಯವಾಗಿತ್ತು. ಅಲ್ಲಯ್ಯ ಇದೇನಿದು ಅತಿರೇಕ.. ಎಂದು ಗೆಳೆಯನನ್ನು ಕೇಳಿದ್ದಕ್ಕೆ ಇಲ್ಲಾಪ್ಪಾ..ಹಾಗೆ ಮಾಡಿದಾಗಲೆ ಮಕ್ಕಳು ಕಲಿಯೋದು..ಅವರ ಫ್ಯೂಚರ್ ಬ್ರೈಟಾಗಬೇಕಂದ್ರೆ ಇವೆಲ್ಲಾ ಬೇಕು.. ಎಂದ. ಅಂದರೆ ಅಷ್ಟು ದುಡ್ಡು ಕೊಟ್ಟು ಸೇರಿಸುವ ಶಾಲೆಯಲ್ಲಿ ದೇಶಭಕ್ತಿ, ಭಾಷಾಪ್ರೇಮವಿರುವುದಿಲ್ಲವಾದರೆ ಅದೆಂತಹ ವಿದ್ಯಾಭ್ಯಾಸ.. ಎಂದದ್ದಕ್ಕೆ ಅವನಲ್ಲಿ ಉತ್ತರವಿರಲಿಲ್ಲ. 
ಯಾವುದೆ ಮಗುವು ಹೆಚ್ಚಾಗಿ ಕಲಿಯುವುದು ಅನುಸರಿಸುವಿಕೆಯಿಂದ. ಮಾತಾಡುವುದನ್ನು, ಬೈಯುವುದನ್ನು ಹೊಡೆಯುವುದನ್ನು ಮಗು ಗಮನಿಸಿಯೇ ಕಲಿಯುತ್ತದೆ. ಮೊದಮೊದಲಿಗೆ ಮಕ್ಕಳು ಮಾಡುವುದು ಮುದ್ದಾಗಿ ಕಂಡರೂ ಅಂಥವುಗಳನ್ನು ಬೆಳೆಯಲು ಬಿಡಬಾರದು ಎಂದು ಹಿರಿಯರೇಕೆ ಯೋಚಿಸುವುದಿಲ್ಲ. ಬಾಲ್ಯದಿಂದಲೇ ತಪ್ಪುಗಳ ಅರಿವು ಗೊತ್ತಾಗಿಬಿಡಬೇಕೆಂದರೆ ಹಿರಿಯರು ಸರಿಯಾದುದನ್ನೇ ಮಾಡಬೇಕು. ಆದರೆ ಅವರು ಒಳ್ಳೆಯದು ಎಂಬುದನ್ನು ಬಾಯಲ್ಲಿ ಹೇಳುತ್ತಾರೆಯೇ ಹೊರೆತು ಕೃತಿಯಲ್ಲಲ್ಲ. ಈಗಂತೂ ಅದು ಇನ್ನೂ ಮುಂದುವರೆದಿದೆ. ಮನೆಯಲ್ಲಿಯೇ ಕುಳಿತು, ಯಾವುದಾದರೂ ಫೋನು ಬಂದಾಗ ಅಪ್ಪಾ ಮನೇಲಿಲ್ಲಾಂತ ಹೇಳು.. ಎನ್ನುವುದು ಸುಳ್ಳಿನ ಮೊದಲಪಾಠವಾಗುತ್ತದೆ. ಎಲ್ಲರೂ ಒಮ್ಮೊಮ್ಮೆ ನಾನೇಕೆ ಮೊದಲ ಬಾರಿಗೆ ಸುಳ್ಳು ಹೇಳಿದೆ? ಅದಕ್ಕೆ ಕಾರಣಗಳೇನು ಎಂಬುದನ್ನು ನೆನಪಿಸಿಕೊಂಡರೆ ಅದಕ್ಕೆಲ್ಲೋ ಬಾಲ್ಯದಲ್ಲಿ ಅಡಿಪಾಯ ಸಿಕ್ಕಿದ್ದು ಸ್ಪಷ್ಟವಾಗಿ ಗೋಚರವಾಗುವುದಂತೂ ಸತ್ಯ.
ಹಾಗೇ ಯಾರಾದರೂ ಬುದ್ದಿವಾದ ಹೇಳಿದರೆ, ಅವನು ನನ್ ಮಗ ಅವನ್ನ ಹೆಂಗೆ ಬೆಳೆಸಬೇಕಂತ ನಂಗೆ ಗೊತ್ತು.. ಎಂದು ಮಗ ಮಾಡಿದ್ದನ್ನು ಸಮರ್ಥಿಸಿಕೊಳ್ಳುವ ತಾಯಂದಿರನ್ನು ನಾನು ನೋಡಿದ್ದೇನೆ.
ಶಿಸ್ತು, ಪ್ರಾಮಾಣಿಕತೆ ಎಂಬುದು ಮನೆಯಲ್ಲೇ ಪ್ರಾರಂಭವಾಗಿಬಿಟ್ಟರೇ ಅದು ಮುಂದಿನ ಪೀಳಿಗೆಗೆ ಸರಾಗವಾಗಿ ಹರಿದುಬರುತ್ತದೆ. ಹಾಗೆ ಅದು ಬಲವಾಗಿ ಬೇರೂರುತ್ತದೆ ಎಂಬುದು ನನಗೆ ಮೊನ್ನೆ ಮೊನ್ನೆ ಯವರೆಗೂ ಗೊತ್ತಿರಲಿಲ್ಲ.  
[ಜನವರಿ ಒಂದರ 'ಸಖಿ' ಪಾಕ್ಷಿಕದಲ್ಲಿ ಈ ಪ್ರಬಂಧ ಪ್ರಕಟವಾಗಿದೆ.]