Saturday, August 25, 2012

ಒ೦ದು ಪುಸ್ತಕ..ಒ೦ದು ಸಿನಿಮಾ..


ಬಿ.ಕೆ.ಶಿವರಾಂ ಅವರ ಪೊಲೀಸ್ ಕಂಡ ಕಥೆಗಳು ಓದಿಯಾಯಿತು. ಅದು ಪ್ರಜಾವಾಣಿಯಲ್ಲಿ ಬರುತ್ತಿದ್ದಾಗಲೇ ಅವಾಗಾವಾಗ ಓದುತ್ತಿದ್ದೆನಾದರೂ ಇಡಿಯ ಪುಸ್ತಕವನ್ನು ಓದುವ ಖುಷಿ ದೊಡ್ಡದು. ಅದೊಂದು ಸಮಗ್ರ ಭಾವನೆಗಳ ಕಾದಂಬರಿ ಎನ್ನಬಹುದು, ಅಥವಾ ಜಗತ್ತಿನ ಅಷ್ಟೂ ವಿಷಯಗಳ ಸಮಗ್ರ ಚಿತ್ರಣ ಎನ್ನಬಹುದು. ಯಾಕೇಂದರೆ ಇಲ್ಲಿ ಎಲ್ಲಾ ಇದೆ. ಪೋಲೀಸ್ ಜಗತ್ತಿನ ಮೂಲಕ ಪೋಲೀಸ್ ಕಣ್ಣುಗಳ ಮೂಲಕ ಒಂದಷ್ಟು ಘಟನೆಗಳನ್ನು ವಿವರಿಸುವ ಶಿವರಾಂ ಯಾವುದೇ ಉತ್ಪ್ರೇಕ್ಷೆಯ ಬರವಣಿಗೆಯ ಮಾರುಹೋಗದೆ ಸುಮ್ಮನೆ ನಡೆದಿದ್ದನ್ನು ನಡೆದ ಹಾಗೆ ಹೇಳುತ್ತಾ ಹೋಗುತ್ತಾರೆ. ಯಾರನ್ನೂ ಅತಿಯಾಗಿ  ಹೊಗಳದೆ ಆದರೆ ಅವರು ಕೆಲಸ ಮಾಡಿದ ರೀತಿ, ಅದರಿಂದಾದ ಲಾಭವನ್ನು ಶ್ಲಾಘಿಸುತ್ತಾ ಹಾಗೆಯೇ ಅವರ ಪರಿಶ್ರಮಕ್ಕೆ ಕಿರು ಶಹಬ್ಬಾಸ್ ಕೊಡುವ ಶಿವರಾಂ ಹಾಗೆಯೇ ಕೆಲವರ ಸಣ್ಣತನವನ್ನು ಅಷ್ಟೇ ನೇರವಾಗಿ, ಆದರೆ ಬೇಸರದಿಂದ ವಿವರಿಸುತ್ತಾ ಹೋಗುತ್ತಾರೆ. ಅತೀ ಚಿಕ್ಕ ಚಿಕ್ಕ ಕೇಸುಗಳಿಗೂ ಪೋಲೀಸರು ಪಡುವ ಶ್ರಮ ಎಷ್ಟಿರುತ್ತದೆ ಎಂಬುದು   ನಮಗೆ ಗೊತ್ತಾಗಬೇಕಾದರೆ ಈ ಪುಸ್ತಕವನ್ನೊಮ್ಮೆ ಓದಲೇಬೇಕು.ಪುಸ್ತಕ ಓದಿಯಾದ ಮೇಲೆ ನನಗೇ ಈಗ ಬಸ್ ನಿಲ್ದಾಣದಲ್ಲೋ, ರೈಲು ನಿಲ್ದಾಣದಲ್ಲೋ ಕಂಡು ಬರುವ ಭಿಕ್ಷುಕ, ಹಣ್ಣಿನ ವ್ಯಾಪಾರಿ, ಆಟೋ ಡ್ರೈವರ್, ಕಸ ಗುಡಿಸುವವನು ಪೊಲೀಸಿರಬಹುದಾ..? ಎನಿಸಲು ಪ್ರಾರಂಭಿಸಿಬಿಟ್ಟಿದೆ.
 ಪುಸ್ತಕದ ಇನ್ನೊಂದು ವಿಶೇಷವೆಂದರೆ ಅದರ ಕಾಲಘಟ್ಟ. ಶಿವರಾಮ್ ರವರು ತಾವು ಪೊಲೀಸಾದ ದಿನದಿಂದ ನಡೆದ ಘಟನೆಗಳನ್ನು ತೀರಾ ಕಾಲಕ್ರಮಬದ್ದವಾಗಿ ವಿವರಿಸದೇ ಹೋದರೂ 1978 ರ ನಂತರದ ಬೆಂಗಳೂರಿನ ಒಂದು ಮುಖವನ್ನು ತುಂಬಾ ಚೆನ್ನಾಗಿ ಪರಿಚಯಿಸುತ್ತಾರೆ. ಆವತ್ತಿನ ಪೋಲೀಸರ ಕಾರ್ಯ ವೈಖರಿ, ಪೇಜರ್  ಮೊಬೈಲ್ ಮುಂತಾದವುಗಳು ಬಂದ ಮೇಲೆ ಹೇಗೆ ಕಾರ್ಯವೈಖರಿ ಬದಲಾಯಿತು ಅದೇ ರೀತಿ ಅಪರಾಧ ಜಗತ್ತೂ ಹೇಗೆ ಬದಲಾಯಿತು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಹೇಗೆ ಸಂವಹನ ತಂತ್ರಜ್ಞಾನವನ್ನು ಪೊಲೀಸ್ ವ್ಯವಸ್ಥೆ ಅಪರಾಧ ತಡೆಯಲು, ಫತ್ತೆ ಮಾಡಲು ಬಳಸಿಕೊಂಡಿತೋ ಅದೇ ರೀತಿಯಾಗಿ ಪಾತಕ ಜಗತ್ತು ಕೂಡ ಆಧುನಿಕ ತಂತ್ರಜ್ಞಾನವನ್ನು ಕೂಡ ಅಪರಾಧವೆಸಗಲು ಹೆಚ್ಚಾಗಿ ಬಳಸಿಕೊಂಡಿದ್ದು ವಿಪರ್ಯಾಸವೆನಿಸುತ್ತದೆ.
ಕೆಲವು ಅಪರಾಧಿಗಳನ್ನು ಹಿಡಿಯಲು ಪೋಲೀಸರು ನಡೆಸಿದ ಕಾರ್ಯಾಚರಣೆ ಯಾವ ಪತ್ತೆದಾರಿ ಕಥೆಗೂ ಕಡಿಮೆಯಿಲ್ಲದಂತೆ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಡಾ. ರಾಜಕುಮಾರ್ ವೀರಪ್ಪನ್‌ನಿಂದ ಅಪಹರಣವಾದಾಗಿನ ಪರಿಸ್ಥಿತಿ, ಅವರ ನಿಧನ, ವೀರಪ್ಪನ್ ಕಾಲದ ಕೆಲವು ಘಟನೆಗಳುಪೊಲೀಸ್ ಭಾಷೆ, ಅಪರಾಧ ಜಗತ್ತಿನಲ್ಲಿರುವ ಪದಪುಂಜಗಳು, ಕೊತ್ವಾಲ್, ಜಯರಾಜ್ ಮುಂತಾದವರ ಭೂಗತ ಜಗತ್ತಿನ ಪರಿಚಯ, ಅವರ ಸಾವಿನ ಹಿಂದಿನ ಕಥೆಗಳು, ರಾಜಕಾರಣಿಗಳ, ಹಿರಿಯ ಅಧಿಕಾರಿಗಳ ಹಿರಿಮೆ, ಪ್ರಾಮಾಣಿಕತೆ, ಸ್ವಾರ್ಥ ಮನೋಭಾವನೆ, ಅವಕಾಶವಾದಿ ನಡವಳಿಕೆ, ಸಣ್ಣತನ, ರಾಜೀವ್ ಗಾಂಧಿ ಹತ್ಯೆ, ಹಂತಕ ಶಿವರಾಶನ್ ಮತ್ತವನ ತಂಡದ ಕೊನೆಯ ಕ್ಷಣಗಳು ಹೀಗೆ ನಮಗೆ ಗೊತ್ತಿರುವ ಘಟನೆಗಳ ಗೊತ್ತಿಲ್ಲದ ಇನ್ನೊಂದು ಮುಖವನ್ನು     ಪರಿಚಯಿಸುವ ಉತ್ತಮ ಪುಸ್ತಕ ಪೊಲೀಸ್ ಕಂಡ ಕಥೆಗಳು
ನನಗೆ ಗೊತ್ತಿರುವಂತೆ ಸುಮಾರು ಜನ ಪೊಲೀಸರನ್ನು ಮನುಷ್ಯರಂತೇ ನೋಡುವುದೇ ಇಲ್ಲ.ಅವರನ್ನು ಒಂದು ರೀತಿಯ ಕಳ್ಳರಂತೆ, ಲಂಚಕೋರರಂತೆ ನೋಡುತ್ತಾರೆ. ಅವರ ಬೆನ್ನ ಹಿಂದೆ ಬೈಯ್ದುಕೊಳ್ಳುತ್ತಾರೆ. ಅವರಿಗೇ ಏನಾದರೂ ಆದರೆ ಸರಿಯಾಯ್ತು ಅವ್ರಿಗೆ.. ಎಂದು ಖುಷಿ ಪಡುತ್ತಾರೆ.ಅದಕ್ಕೆಲ್ಲಾ ಕೆಲವು ಅಪ್ರಾಮಾಣಿಕ ಪೊಲೀಸರೇ ಕಾರಣವಾದರೂ ಪೊಲೀಸರೂ ನಮ್ಮ ನಿಮ್ಮಂತೆಯೇ ಸಾಮಾನ್ಯರೇ..ಮತ್ತವರ ಕಷ್ಟಗಳೂ ಸಾಕಷ್ಟಿರುತ್ತವೇ ಎನ್ನುವುದನ್ನು ತುಂಬಾ ಚೆನ್ನಾಗಿ ವಿಶದ ಪಡಿಸುತ್ತದೆ ಈ ಕೃತಿ.
 ಭಯೋತ್ಪಾದಕರಿಂದ ಬರ್ಬರವಾಗಿ ಕೊಲೆಯಾದ ಪತ್ರಕರ್ತ ಡೇನಿಯಲ್ ಪರ್ಲ್‌ನ ಕಥೆಯಾಧಾರಿತ ಚಿತ್ರ ಎ ಮೈಟೀ ಹಾರ್ಟ್, 9 ಸಾಂಗ್ಸ್, ಎ ಸಮ್ಮರ್ ಇನ್ ಜಿನೋವಾ ಚಿತ್ರಗಳ ನಿರ್ದೇಶಕ ಮೈಕಲ್ ವಿಂಟರ್‌ಬಾಟಮ್ ನಿರ್ದೇಶನದ ತೃಷ್ಣಾ ಚಿತ್ರ ನೋಡಲು ಬೇರೆಯದೆ ಕಾರಣಗಳಿದ್ದವು ನನಗೆ. ಅದರಲ್ಲಿ ಮುಖ್ಯವಾದವು ಆ ಸಿನಿಮಾ ಅನುರಾಗ್ ಕಶ್ಯಪ್ ಸಹಭಾಗಿತ್ವದೊಂದಿಗೆ ತಯಾರಾದ ಚಿತ್ರ ಎನ್ನುವುದು ಮುಖ್ಯವಾದದ್ದು. ನನಗೇ ಬಾಲಿವುಡ್‌ನಲ್ಲಿ ಇಷ್ಟವಾದ ಚಿತ್ರಕರ್ಮಿ ಎಂದರೆ ಅನುರಾಗ್ ಕಶ್ಯಪ್. ಬರಹಗಾರನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಆತನ ಪ್ರಯತ್ನಗಳು    ಯಾವತ್ತಿಗೂ ಶ್ಲಾಘನೀಯವೇ. ವರ್ಮಾರ ಸತ್ಯ ಚಿತ್ರದ ಬರವಣಿಗೆಯ ಮೂಲಕ ಬೆಳಕಿಗೆ ಬಂದ ಕಶ್ಯಪ್ ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಒತ್ತಿದ ವ್ಯಕ್ತಿ. ಕೌನ್, ಶೂಲ್, ಜಂಗ್,      ನಾಯಕ್,ಯುವ, ಪೈಸ ವಸೂಲ್, ವಾಟರ್, ವ್ಯಾಲಿ ಆಫ್ ಪ್ಲವರ್ಸ್, ತಲಾಶ್ ಚಿತ್ರಗಳಿಗೆ ಬರಹಗಾರನಾಗಿ, ಶೈತಾನ್, ಉಡಾನ್ನಂತಹ ಚಿತ್ರಗಳ  ನಿರ್ಮಾಪಕನಾಗಿ, ಗ್ಯಾಂಗ್ಸ್ ಆಫ್ ವಾಸ್ಸೀಪುರ್, ದೇವ್ ಡಿ, ಬ್ಲ್ಯಾಕ್ ಫ್ರೈಡೇ ನಂತಹ ಚಿತ್ರಗಳ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಕಶ್ಯಪ್ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನು ಸಿನಿಮಾದ ವಿಷಯಕ್ಕೆ ಬಂದರೆ ತೃಷ್ಣಾ ಸಿನಿಮಾ ಟಾಮ್ ಹಾರ್ಡಿಯ ಕಾದಂಬರಿ ಆಧರಿಸಿದ ಚಿತ್ರ. ಇದೇ ಕಾದಂಬರಿ ಆಧರಿಸಿ ಇದುವರೆವಿಗೆ ಮೂರ್ನಾಲ್ಕು ಸಿನಿಮಾಗಳು ಬಂದಿರಬಹುದು. ತೃಷ್ಣಾ ದುರಂತ ಹೆಣ್ಣುಮಗಳೊಬ್ಬಳ ಕಥೆ. ರಾಜಸ್ಥಾನದ ಟ್ರಕ್ ಡ್ರೈವರೊಬ್ಬನ ಮಗಳಾದ ತೃಷ್ಣಾಗೆ ಅದೊಂದು ದಿನ ಆಕಸ್ಮಿಕವಾಗಿ ಶ್ರೀಮಂತ ಕುಟುಂಬದ ಯುವಕನೊಬ್ಬ ಪರಿಚಯವಾಗುತ್ತಾನೆ. ಮುಂದೆ ಅನೂಹ್ಯ ಘಟನೆಗಳು ಜರುಗಿ ಅವರಿಬ್ಬರೂ ಒಂದಾಗುವಂತೆ ಮಾಡುತ್ತವಾದರೂ ಕೆಲವು ಅಂಶಗಳು ಸಮಾಜದಲ್ಲಿ ಅವರಿಬ್ಬರನ್ನು ಗಂಡ-ಹೆಂಡಿರಂತೆ ಬದುಕಲು ಆಸ್ಪದ   ಕೊಡುವುದಿಲ್ಲ. ಇದರಿಂದ ತುಂಬಾ ಖಿನ್ನತೆಗೊಳಗಾಗುವ ನಾಯಕಿ ಈ ಜಗತ್ತಿನ ಹಂಗೇ ಬೇಡ ಎನ್ನುವಂತೆ ಆತ್ಮಹತ್ಯೆ ಮಾಡಿಕೊಳ್ಳುವ ಅಂತ್ಯವಿರುವ ಈ 
 ಚಿತ್ರದಲ್ಲಿ ಪ್ರೀಡಾ ಪಿಂಟೊ ಸಂಯಮದ ಅಭಿನಯ ನೀಡಿದ್ದಾರೆ. ಆದರೆ ಕೆಲವು ಕಡೆ ಚಿತ್ರಕಥೆ ಇನ್ನೂ ಸೂಕ್ಷ್ಮವಾಗಿರಬೇಕಿತ್ತು ಎನಿಸುತ್ತದೆ. ಅದಕ್ಕೆ ಕಾರಣ ನಿರ್ದೇಶಕರಿರಬಹುದು. ಘಟನೆಗಳ ತೀವ್ರತೆ, ಅದರ ಪರಿಣಾಮಗಳು ಪ್ರೇಕ್ಷಕರನ್ನು ಅಷ್ಟಾಗಿ ತಟ್ಟುವುದಿಲ್ಲ. ಆದರೂ ಒಮ್ಮೆ ನೋಡಲಡ್ಡಿಯಿಲ್ಲ ಎನ್ನಬಹುದು.


Wednesday, August 22, 2012

ಕಲಾವಿದ ಡಾಲಿಯನ್ನ ಕುರಿತು....

ಚಿತ್ರ ಬರೆಯುವುದು ನಮ್ಮ ಮನೆಯಲ್ಲಿನ ಮೂವರಿಗೂ ಹುಟ್ಟಿನಿಂದಲೇ ಬಂದಿತ್ತು. ನಾನು ನಮ್ಮಣ್ಣ ಮತ್ತು ನನ್ನ ತಂಗಿ ಮೂವರು ಚಿತ್ರ ಬರೆಯುವುದರಲ್ಲಿ ಎತ್ತಿದ ಕೈ. ಆದರೆ ನಾವು ಮೂವರು ಅದನ್ನು ಮುಂದುವರೆಸಲಾಗಲಿಲ್ಲ. ನಮ್ಮಣ್ಣ ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯಲ್ಲಿ ಅದ್ಯಯನ ಮಾಡಿದನಾದರೂ ಬದುಕು ಅವನನ್ನು ಬೇರೆಯದೇ ಆದ ಕ್ಷೇತ್ರಕ್ಕೆಳೆದುಕೊಂಡುಬಿಟ್ಟಿತು. ನನಗೆ ಚಿತ್ರ ಬರೆಯುವುದು ಬರೀ 
ಹವ್ಯಾಸವಾಗಿತ್ತೇ ಹೊರತು ಸಿನಿಮಾಕ್ಷೇತ್ರವನ್ನೇ ನನ್ನ ವೃತ್ತಿ-ಪ್ರವೃತ್ತಿಯಾಗಿ ತೆಗೆದುಕೊಳ್ಳಲೇಬೇಕೆಂದು ನಾನೇ ನಿರ್ಧರಿಸಿದ್ದೆ. ಆದರೆ ನಮ್ಮಣ್ಣ ಕಾವಾದಲ್ಲಿದ್ದಾಗ ಹೊಸ ಹೊಸ ಕಲಾವಿದರ ಬಗ್ಗೆ, ಎಕ್ಸ್‌ಪ್ರೆಸನಿಮ್, ಇಂಪ್ರೆಸನಿಸ್ಮ್ ಎಂದೆಲಾ ಹೊಸಹೊಸ ಕಲಾ ಪ್ರಕಾರಗಳ ಬಗ್ಗೆಯೆಲ್ಲಾ ಹೇಳುತ್ತಿದ್ದಾಗ ನನಗೂ ಆಸಕ್ತಿ ಬಂದು ಅವನು ಮನೆಗೆ ತರುತ್ತಿದ್ದ ಪುಸ್ತಕಗಳನ್ನು ನಾನೂ ಓದುತ್ತಿದ್ದೆ. ಪಾಶ್ಚಿಮಾತ್ಯ ಕಲಾವಿದರಾದ ಡಾವಿಂಚಿ, ಟರ್ನರ್, ಎಡ್ವರ್ಡ್ ಮಾನೆ, ವ್ಯಾನ್ ಗೋ, ರಾಚಲ್ ಬೇಸ್, ಎನ್ರಿಕೊ 
ಬಾಸ್, ಜಾರ್ಜ್, ವ್ಯಾಲೆಂಟಿನ್ ಹ್ಯೂಗೋ, ಎನ್ರಿಕೊ ತಬೆರಾ, ಕಾರ್ಲ್ ಟೆಗಾ, ದೊರಾ ಮೊರ್, ಫೆಲಿಕ್ಸ್ ಅನಾಟ್, ಎಡ್ವರ್ಡ್ ಕೆಲ್ಲಿ, ಮೈಕೆಲೆಂಜಲೋ ಮುಂತಾದವರು ಹಾಗೆ ಭಾರತೀಯ ಚಿತ್ರ ಕಲಾವಿದರಾದ ರಾಜಾ ರವಿವರ್ಮಯಾಮಿನಿ ರಾಯ್, ಕೆ.ಕೆ.ಹೆಬ್ಬಾರ್,   ಅಮ್ರಿತಾ ಶೇರ್ ಗಿಲ್, ಸಿಲ್ಪಿ, ಮನಿಶ್ ಡೆ, ಮುಕುಲ್ ಚಂದ್ ಡೆ, ಕಲಿಪದ ಗೋಷಾಲ್, ಮುಂತಾದವರ ಜೊತೆಗೆ ಆಧುನಿಕ ಚಿತ್ರಕಲಾವಿದರಾದ ಎಮ್.ಎಫ್ ಹುಸೇನ್, ಯೂಸುಫ್ ಅರಕ್ಕಲ್, ಅರವಿಂದ್ ಪಾಟಿಲ್, ನೀರಜ್ ಗುಪ್ತಾ, ಪರಮಜೀತ್ ಸಿಂಗ್, ಸತೀಶ್ ಗುಜ್ರಾಲ್, ತೃಪ್ತಿ ಗುಪ್ತಾ ಇನ್ನೂ ಅನೇಕರ ಪರಿಚಯವಾಯಿತು. ನಾನು ಕೂಡ ಇವರ ಶೈಲಿ, ಅವರು ಆಯ್ಕೆ ಮಾಡಿಕೊಳ್ಳುವ ಚಿತ್ರವಸ್ತುಗಳು ಹಾಗೆ ಅಲ್ಪಸ್ವಲ್ಪ ಅವರ ಹಿನ್ನೆಲೆಗಳನ್ನೂ ತಿಳಿದುಕೊಳ್ಳತೊಡಗಿದೆ. ಆಗ ನನ್ನನ್ನು ಎಲ್ಲಾ ರೀತಿಯಿಂದಲೂ ಗಮನಸೆಳೆದವನು ಸಾಲ್ವಡಾರ್ ಡಾಲಿ. ಡಾಲಿಯ ಚಿತ್ರಗಳದ್ದೇ ಒಂದು ವಿಶೇಷವಾದ ಪ್ರಪಂಚ ಎನ್ನಬಹುದು. ಸುಮ್ಮನೆ ಅವನ ಚಿತ್ರಗಳನ್ನು 
ಗಮನಿಸುತ್ತಾ ಹೋಗಿ. ತನ್ನ ಕುಂಚದ ಮೂಲಕ ಬೇರೊಂದು ಭ್ರಾಮಕ ಲೋಕ ಸೃಷ್ಟಿಸುವ ಆತನ ಉಮ್ಮೇದು ಎದ್ದು ಕಾಣುತ್ತದೆ. ಅವನು ನನಗೇ ಇನ್ನಷ್ಟು ಇಷ್ಟವಾಗಲು ಕಾರಣ ಆತ ಚಲನಚಿತ್ರರಂಗದಲ್ಲೂ ತಲೆಕೆಡಿಸಿಕೊಂಡು ತನ್ನದೇ ಆದಂತಹ ಕಾಣಿಕೆ ನೀಡಿದ್ದು. ಗ್ರಾಫಿಕ್ಸ್ ಎಫೆಕ್ಟ್ಸ್ ಅಷ್ಟಾಗಿ ಅಭಿವೃದ್ಧಿ ಹೊಂದಿರದೇ ಇದ್ದ ಆ ಕಾಲದಲ್ಲೇ ಡಾಲಿ ತನ್ನ ಹೊಸ ಹೊಸ ಐಡಿಯಾಗಳ ಮೂಲಕ ಪರದೆಯ ಮೇಲೆ ಭಿನ್ನ ಭಿನ್ನ ಕಲಾಕೃತಿಯನ್ನು , ಮಾಯಾಲೋಕವನ್ನು ಸೃಷ್ಟಿಸಲು ಯತ್ನಿಸಿದ್ದ. ಶಿಲುಬೆಯೊಂದು ಹಾಗೆ ಅಸ್ಥಿ ಪಂಜರವಾಗಿ ಮಾರ್ಪಾಡಾಗುವ ಒಂದು 
ಪರಿಣಾಮವನ್ನು ಆವತ್ತಿನ ಧರ್ಮಾಧಿಕಾರಿಗಳು ವಿರೋಧಿಸಿದ್ದರಂತೆ. ಆತನ ಮನೆಯಲ್ಲಿದ್ದ ಸೋಫಾ ಕುರ್ಚಿ, ಹುಕ್ಕಾ ಹೀಗೆ ಎಲ್ಲೆಂದರಲ್ಲಿ ಆತನ ಕಲಾಕೃತಿ ಅರಳುತ್ತಿದ್ದುದಲ್ಲದೇ, ಆತನ ಮೀಸೆ, ಗಡ್ಡ, ಕೂದಲಿನಲ್ಲಿಯೂ ಅವು ಮುಂದುವರೆಯುತ್ತಿದ್ದವಂತೆ. ಡಿಸ್ಕ್ರೀಟ್‌ಚಾರ್ಮ್ ಆಫ್ ಬೋರ್ಜಿಯಸೆ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ತನ್ನದಾಗಿಸಿಕೊಂಡ ನಿರ್ದೇಶಕ ಲೂಯಿಸ್ ಬ್ಯುನೆಲ್ ನಿಮಗೆ ಗೊತ್ತಿರಬಹುದು. ಆತನ ಉನ್ ಚೆಯು ಆಂದಲನ್, ದಿ ಗೋಲ್ಡನ್ ಏಜ್[1930] ಚಿತ್ರಗಳಲ್ಲಿ 
ಡಾಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಈವತ್ತು ಇಷ್ಟೊಂದು ಸವಲತ್ತಿಟ್ಟುಕೊಂಡು ಒಂದು ದೃಶ್ಯಮಾಧ್ಯಮದಲ್ಲಿ ಏನನ್ನಾದರೂ ಹೊಸದನ್ನು ಸೃಷ್ಟಿಸಲು ಒದ್ದಾಡುವ ನಾವು ಇಂಥ ಪ್ರತಿಭಾವಂತರಿಂದ ಕಲಿಯಬೇಕಾಗಿರುವುದು ಸಾಗರದಷ್ಟಿದೆ. ಆತನನ್ನು ಕುರಿತಾದ ಕಿರುಚಿತ್ರವೊಂದಿದೆ. 1966ರಲ್ಲಿ ನಿರ್ಮಿತವಾದ ಈ ಕಿರುಚಿತ್ರದ ನಿರ್ಮಾತೃ ಆ೦ಡಿ ವೊರೋಲ್.
ಆತನ ಚಿತ್ರಗಳನ್ನು ನೋಡಿದರೆ ಉಪೇಂದ್ರ ಚಿತ್ರದ ಪೋಸ್ಟರ್‌ಗಳು ನೆನಪಿಗೆ ಬರುತ್ತವಲ್ಲವೇ..?

 ಕಲಾವಿದ ಡಾಲಿಯಾ ಜೀವನ ಚರಿತ್ರೆ ಅಧರಿಸಿದ ಚಲನಚಿತ್ರ 'ದಿ ಲಿಟಲ್ ಯಾಷೆಸ್' 2008ರಲ್ಲಿ ತೆರೆಗೆ ಬ೦ದ ಈ ಚಿತ್ರದ ನಿರ್ದೇಶಕ 'ಪಾಲ್ ಮೊರಿಸನ್' ಕಲಾವಿದ ಡಾಲಿ, ಚಿತ್ರ ನಿರ್ದೇಶಕ ಲುಯಿಸ್ ಬ್ಯುನಲ್, ಲೇಖಕ ಫೆಡರಿಕ್ ಗಾರ್ಸಿಯಾ ಲೋರ್ಕ ರ ನಡುವಿನ ಬಾ೦ಧವ್ಯವನ್ನು ತೆರೆದಿಟ್ಟ ಈ ಚಿತ್ರವನ್ನೊಮ್ಮೆ ಅವಶ್ಯ ನೋಡಿ. 

Monday, August 20, 2012

ನೂರೊ೦ದು ಕನ್ನಡ ಚಿತ್ರಗಳು


ಗೆಳೆಯ, ಆಸ್ಕರ್ಕನ್ನಡ ಚಲನಚಿತ್ರದ ನಿರ್ದೇಶಕ ಕೃಷ್ಣ ಮತ್ತು ನಾನು ಏನೇನೋ ಮಾತಾಡುತ್ತಾ ಕುಳಿತಿದ್ದೆವು. ಕೃಷ್ಣನನ್ನು ನಾನು ಮೈಸೂರಿನಿಂದಲೂ ಬಲ್ಲೆ. ಏನಾದರೊಂದು ಮಾಡುತ್ತಲೇ ಇರುತ್ತಾನೆ. ನಾವಾದರೋ ಬರೀ ಸಿನಿಮಾಕ್ಕೇ ಅಂಟಿಕೊಂಡಿದ್ದರೆ ಆತ ಹಾಗಲ್ಲ ವ್ಯಾವಹಾರಿಕವಾಗಿ, ಸಂಪಾದನೆಯ ನಿಟ್ಟಿನಲ್ಲಿ ಏನಾದರೊಂದು ಮಾಡೇಮಾಡುತ್ತಾನೆ. ನನ್ನ ಸಿನಿಮಾ ಮಾರ್ಚ್ 23 ಅಂತೂ ಇಂತೂ ಬಿಡುಗಡೆಯ ಹಂತದಲ್ಲಿದೆ. ನಾನು ಸಹ ನಿರ್ದೇಶಕನಾಗಿದ್ದಾಗ, ಬರಹಗಾರನಾಗಿದ್ದಾಗ ಹಣ ಸಂಪಾದನೆ ಚೆನ್ನಾಗೇ ಇತ್ತು. ಆವಾಗೆಲ್ಲಾ ಕೆಲಸ ಮಾಡುವ ರೀತಿ, ಕಸುಬುದಾರಿಕೆಯೇ ಬಂಡವಾಳ. ಆದರೆ ಒಮ್ಮೆ ಸ್ವತಂತ್ರ ನಿರ್ದೇಶಕನಾಗಿಹೋದರೆ ಕೇವಲ ಯಶಸ್ಸಷ್ಟೇ ಮಾನದಂಡ. ಆ ಸ್ವತಂತ್ರ ನಿರ್ದೇಶನದ ಸಿನಿಮಾ ಬಿಡುಗಡೆಯಾಗುವವರೆಗೆ ಬೇರೆ ಸಿನಿಮಾದಲ್ಲಿ ಸಹನಿರ್ದೇಶಕನಾಗಿಯೋ, ಬರಹಗಾರನಾಗಿಯೋ ಕೆಲಸ ಮಾಡಲಾಗುವುದಿಲ್ಲ. ಆ ಸಿನಿಮಾ ಬಿಡುಗಡೆಯಾಗಿ ಪರವಾಗಿಲ್ಲ ಎನಿಸಿಕೊಂಡರೆ ಮುಂದಿನ ದಾರಿ ಸುಲಭ. ಇಲ್ಲವಾದಲ್ಲಿ ಮತ್ತೆ ಅಆಇಈಯಿಂದಲೇ ಪ್ರಾರಂಭಿಸಬೇಕಾಗುತ್ತದೆ. ಕೃಷ್ಣ ಮಾತನಾಡುತ್ತ ಏನಪ್ಪಾ ಹೇಗಿದೆ ಸಂಪಾದನೆ ಎಂದದ್ದಕ್ಕೇ ಏನೂ ಇಲ್ಲಪ್ಪಾ ಸಧ್ಯಕ್ಕೆ ಎಂದು ಹೇಳಿದೆ.   
 ‘ಅಲ್ವೋ ಅಷ್ಟೊಂದು ಓದಿದ್ದೀಯ, ಬರೀತೀಯ..ನೀನೆ ಹೀಗಂದ್ರೆ ಹ್ಯಾಗಪ್ಪ..ಈಗೊಂದು ಕೆಲಸ ಮಾಡು..ಎಲ್ಲಾ ಹಾಲಿವುಡ್ ಸಿನಿಮಾಗಳ  ಪಟ್ಟಿಮಾಡಿ ನೋಡಲೇ ಬೇಕಾದ ನೂರೊಂದು ಸಿನಿಮಾಗಳು, ಐನೂರು ಸಿನಿಮಾಗಳು ಅಂತೆಲ್ಲಾ ಪುಸ್ತಕ ಬರೀತಾರೆ. ನೀನ್ಯಾಕೆ ನೋಡಲೇಬೇಕಾದ ಕನ್ನಡದ ನೂರೊಂದು ಚಿತ್ರಗಳು ಅಂತ ಪುಸ್ತಕ ಬರೀಬಾರ್ದು..ನೀನ್ ಬರೀತೀನಂದ್ರೆ ನಾನೆ ಪಬ್ಲಿಶ್ ಮಾಡ್ತೀನಿ..ನಿಂಗೂ ಖರ್ಚಿಗೆ ಕಾಸಾಗುತ್ತೆ..ಅಂದ. ನಾನು ಸರಿ ಎಂದೇನೋ ಒಪ್ಪಿಕೊಂಡು ಬಂದುಬಿಟ್ಟೆ. ಆದರೆ ಯಾವ ಆಧಾರದ ಮೇಲೆ ಸಿನಿಮಾಗಳನ್ನು ವಿಂಗಡಿಸುವುದು, ಮತ್ತು ಅಷ್ಟೆಲ್ಲಾ   
 ಸಿನಿಮಾಗಳನ್ನು ನಾನು ನೋಡುವುದು ಹೇಗೆ..? ಅವುಗಳು ಸಿಗುವುದೆಲ್ಲಿ..? ಎನ್ನುವ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು.ಕನ್ನಡ ಭಾಷೆಯಲ್ಲಿ ಇಲ್ಲಿಯವರೆಗೆ ಬಂದಿರುವ ಅಷ್ಟೂ ಸಿನಿಮಾಗಳಲ್ಲಿ ಕೇವಲ ನೂರೆನೂರು ಆಯ್ಕೆ ಮಾಡುವುದು ಸರಿ ಕಾಣಲಿಲ್ಲ. ಪುಟ್ಟಣ್ಣ ನಿರ್ದೇಶನದ ಬಹುತೇಕ ಸಿನಿಮಾಗಳು, ಡಾ. ರಾಜಕುಮಾರ್ ಅಭಿನಯದ ಹೆಚ್ಚುಕಡಿಮೆ ನೂರಕ್ಕೂ ಹೆಚ್ಚು ಸಿನಿಮಾಗಳು ಮಾಸ್ಟರ್‌ಪೀಸ್‌ಗಳೇ. ಅದಕ್ಕಾಗಿ ಕನ್ನಡ ಸಿನಿಮಾ ಪ್ರಾರಂಭವಾದಾಗಿನಿಂದ  ಐವತ್ತು ವರ್ಷದವರೆಗಿನ ಸಿನಿಮಾಗಳಲ್ಲಿ ನೂರೊಂದು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದೆಂದು ನಿರ್ಧರಿಸಿದೆ. ಮೊದಲಿಗೆ ಕನ್ನಡ ಚಲನಚಿತ್ರದ ಇತಿಹಾಸವನ್ನು ಅದ್ಯಯನ ಮಾಡುವುದಿತ್ತು. ಅದಕ್ಕಾಗಿ ಒಂದಷ್ಟು ಪುಸ್ತಕ ಮತ್ತು ಹಿರಿಯರ ಮೊರೆಹೋದೆ. ಹಾಲಿವುಡ್ ಸಿನಿಮಾಗಳ ಬಗ್ಗೆಯಾದರೆ ಯೋಚನೆಯಿಲ್ಲ.  ಕಂಪ್ಯೂಟರ್ ಮುಂದೆ ಕುಳಿತರೆ ಅಂತರ್ಜಾಲಕ್ಕೆ ಗಂಟುಬಿದ್ದರೆ ಹೆಚ್ಚುಕಡಿಮೆ ಅರ್ಧ ಕೆಲಸ ಆಗಿಹೋಗುತ್ತದೆ. ಆದರೆ ಭಾರತೀಯ ಸಿನಿಮಾಗಳ ಬಗ್ಗೆಯಾದರೆ, ಅದರಲ್ಲೂ ಕನ್ನಡ ಸಿನಿಮಾಗಳ ಬಗ್ಗೆ ಅಷ್ಟು ಮಾಹಿತಿ ಸಿಗುವುದಿಲ್ಲ. ನಾವು ಕನ್ನಡ ಸಿನಿಮಾ ತಯಾರಿಸುವ ಮೊದಲು ಬ್ಯಾನರ್ ನೋಂದಣಿ ಮಾಡಿಸುವಾಗ ನಮ್ಮ ಕನ್ನಡ ಚಲನಚಿತ್ರ ವಾಣಿಜ್ಯಮಂಡಳಿಯವರು ಸುಮಾರು ಪುಸ್ತಕಗಳನ್ನು ಕೊಡುತ್ತಾರೆ. ಅವುಗಳಿಂದ ಸಾಕಷ್ಟು ಉಪಯೋಗವಾಯಿತು. 1934ರಲ್ಲಿ ಸತಿ ಸುಲೋಚನದ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗ ತನ್ನ ಖಾತೆ ತೆರೆಯಿತು. ಅಲ್ಲಿಂದ 1984ರವರೆಗೆ ಸರಿಸುಮಾರು 938 ಸಿನಿಮಾಗಳು ಬಂದಿವೆ. ಮೊದಲಿಗೆ ಅಷ್ಟೂ ಸಿನಿಮಾಗಳ ಪಟ್ಟಿ ಮಾಡಿದೆ. ಅದೇ ಒಂದು ಸಾಹಸವಾಯಿತು. 1934ರ ಇಡೀ ವರ್ಷದಲ್ಲಿ ಕೇವಲ ಎರಡೇ ಎರಡು ಚಿತ್ರಗಳು ಬಿಡುಗಡೆಯಾದರೆ 1984ರಲ್ಲಿ ಸುಮಾರು 62 ಸಿನಿಮಾಗಳು ಬಿಡುಗಡೆಯಾಗಿವೆ. ಅಷ್ಟೂ ಸಿನಿಮಾಗಳ ಪಟ್ಟಿ ಮಾಡಿದ ಮೇಲೆ ನಾನು ನೋಡಿರುವ ಚಿತ್ರಗಳನ್ನು ಮೊದಲು ಪಕ್ಕಕ್ಕಿರಿಸಿದೆ. ಅದರಲ್ಲಾಗಲೇ ಅರ್ಧದಷ್ಟು ಸಿನಿಮಾ ನಾನು ನೋಡಿದ್ದೆ. ಅದಕ್ಕಾಗಿ ನಮ್ಮೂರಿನ ಚಿತ್ರಮಂದಿರ, ನಮ್ಮಜ್ಜಿ ಊರಿನ ಟೆಂಟು, ಟಿವಿ ವಾಹಿನಿಗಳು ಅದರಲ್ಲೂ ಬೆಂಗಳೂರು ದೂರದರ್ಶನಕ್ಕೆ ನಾನು ಋಣಿ. ಉಳಿದ ಸಿನಿಮಾಗಳಲ್ಲಿ ಬಹುತೇಕ ಡಿವಿಡಿ ಸಿಕ್ಕವು. ಮತ್ತಷ್ಟು ಸಿನಿಮಾಗಳು ಸಿಗಲೇ ಇಲ್ಲ. ಹಾಗಂತ ಬಿಡುವುದಾದರೂ ಹೇಗೆ. ಅದಕ್ಕಾಗಿ ಆ ಸಿನಿಮಾಗಳ ಪಟ್ಟಿ ಹಿಡಿದು ಅದರ ವಾರಸುದಾರರು, ನಿರ್ಮಾಪಕರು, ನಿರ್ದೇಶಕರು, ಲ್ಯಾಬ್ ಹೀಗೆ ಎಲ್ಲೆಂದರಲ್ಲಿ ಅಲೆದಾಡಿದ ಮೇಲೂ ಸಿಕ್ಕ ಮಾಹಿತಿ ಅಪೂರ್ಣ ಎಂದೇ ಹೇಳಬಹುದು. ಮಾಹಿತಿ ಸಿಕ್ಕರೂ ಸಿನಿಮಾ ನೋಡಲು ಸಿಗಲಿಲ್ಲ. ನಮ್ಮ ಆತ್ಮೀಯರು ಹರಿಹರಪುರ ಮಂಜುನಾಥ್ ಜೊತೆಗೆ, ಗೆಳೆಯರಾದ ಗಿರಿಬಾಲು, ಫಿಲಿಪ್ ಪಿಂಟೊ ಕೂಡ ಒಂದಷ್ಟು ಸಹಾಯ ಮಾಡಿದರು. ಈಗ ನೋಡುವಿಕೆ ಬಹುತೇಕ ಮುಗಿದಿದೆ.
ಇನ್ನೇನಿದ್ದರೂ ಬರವಣಿಗೆಯ ಕೆಲಸ.
 ಆದರೂ ಕನ್ನಡದ ಸಿನಿಮಾಗಳನ್ನು ಗುಡ್ಡೆ ಹಾಕಿಕೊಂಡು ನೋಡುತ್ತ ಬಂದರೆ ಅದರ ಅನುಭವವೇ ಬೇರೆ. ಕನ್ನಡ ಭಾಷೆ, ಆವತ್ತಿನ ಕರ್ನಾಟಕದ ಹಳ್ಳಿಗಳು, ಬೆಂಗಳೂರು, ಮೈಸೂರಿನ ಆವಾಗಿನ ಚಿತ್ರಗಳು, ನಮ್ಮದೇ ಆವಾಗಿನ ಸಂಸ್ಕೃತಿ, ಆವತ್ತಿನ ಸ್ಟೈಲ್ ಮುಂತಾದವುಗಳು ಕಣ್ಣಿಗೆ ಕಟ್ಟುತ್ತವೆ. ಅಪ್ಪ ತಾತರು ಹೇಳುತ್ತಿದ್ದ ಕಥೆಗಳಿಗೆ ಲಿಂಕ್ ಸಿಗುವುದಲ್ಲದೇ ಆ ಕಾಲದ ಅನುಭವವಾಗುತ್ತದೆ. ಆವತ್ತಿದ್ದ ವಾಹನಗಳು, ಊಟ ತಿಂಡಿ ಹೋಟೆಲುಗಳು, ವಸ್ತ್ರ ವಿನ್ಯಾಸ, ಕೇಶ ವಿನ್ಯಾಸ ಖುಷಿಕೊಡುತ್ತವೆ. ಅದೆಲ್ಲದರ ಜೊತೆಗೆ ಕನ್ನಡ ಚಿತ್ರರಂಗ ತೆರೆದುಕೊಂಡ ರೀತಿ, ಅದರ ಬೆಳವಣಿಗೆ ಹಂತಗಳು, ತಂತ್ರಜ್ಞಾನದ ಬಳಕೆಯ ಹಂತಗಳು, ಕಥಾವಸ್ತುಗಳ ಆಯ್ಕೆಯಲ್ಲಿನ ಬದಲಾವಣೆಗಳು, ನಟರ ಕಾಲಾನುಕ್ರಮೇಣದ ಬದಲಾವಣೆಗಳು ಚಿತ್ರರಂಗದ ಏಳುಬೀಳುಗಳೆಲ್ಲದರ ಬಗ್ಗೆ ವಿವರವಾದ ಅರಿವು ಮೂಡುತ್ತದೆ.
 ಈ ಪುಸ್ತಕದ ಕಾರಣದಿಂದಾಗಿ ನಮ್ಮ ಸಿನಿಮಾದ ತಲೆಬಿಸಿಯಲ್ಲೇ ಇದ್ದ ನನಗೆ ಒಂದಷ್ಟು ತಲೆಬಿಸಿ ಕಡಿಮೆಯಾಗಲು, ಹೊಸ ಅನುಭವಕ್ಕೆ ತೆರೆದುಕೊಳ್ಳಲು ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದ ಇತಿಹಾಸವನ್ನು ಅನುಭವಿಸಲು, ನನ್ನನ್ನು ನಾನು ತೊಡಗಿಸಿಕೊಳ್ಳಲು ಸಹಾಯವಾದದ್ದಂತೂ ನಿಜ. ಕೃಷ್ಣನ ಪ್ರಕಾಶನದ ಮೊದಲ ಪುಸ್ತಕ ಈಗ ಬಿಡುಗಡೆಗೆ ಸಿದ್ಧವಿದೆ.