Saturday, September 12, 2015

ಕರ್ನಾಟಕದಲ್ಲಿ ಕನ್ನಡ ಸಿನಿಮಾಕ್ಕೆ ಬೇಕೇ ಇಂಗ್ಲೀಷ್ ಅಡಿಬರಹ?

ಸರ್ಕಾರದ ಘೋಷಣೆ/ಆದೇಶದಂತೆ ಧೂಮಪಾನ/ಮದ್ಯಪಾನ ಇರುವ ಕಡೆಗೆ ಆ ಚಿತ್ರಣದ ಮೇಲೆ ಧೂಮಪಾನ ವಿರೋಧದ ಸಂದೇಶ ಹಾಕಬೇಕು ಎನ್ನುವುದಕ್ಕೆ ನಾವೇ ಚಿತ್ರಕರ್ಮಿಗಳು ಗೊಣಗಿಕೊಂಡಿದ್ದೇವೆ. ಅಲ್ಲಾ, ಸಿನಿಮಾವನ್ನು ತುಂಬಾ ತನ್ಮಯನಾಗಿ ನೋಡುವ ಪ್ರೇಕ್ಷಕನ ಮನಸ್ಸನ್ನು ಕ್ಷಣಾರ್ಧವಾದರೂ ಆಚೀಚೆ ಸರಿಸಿಬಿಡುವ ಸಾಧ್ಯತೆ ಇರುವುದರಿಂದ ನಾವೇಕೆ ಅದನ್ನು ಆ ಸಮಯದಲ್ಲಿ ಹಾಕಬೇಕು ಎನ್ನುವ ಪ್ರಶ್ನೆಯನ್ನು ಎತ್ತಿದ್ದೇವೆ, ಅದರಲ್ಲೂ ಅನುರಾಗ್ ಕಶ್ಯಪ್ ಈ ವಿಷಯ ಕುರಿತು ವರ್ಷಗಟ್ಟಲೆ ಹೋರಾಡಿದ್ದಾರೆ. ನಮ್ಮ ಹಣ ಖರ್ಚು ಮಾಡಿ ನಾವು ತೆರಿಗೆ ಕಟ್ಟಿ ಮಾಡುವ ಸಿನಿಮಾದಲ್ಲಿ ಸುಖಾಸುಮ್ಮನೆ ನಾವೇಕೆ ಬಿಟ್ಟಿ ಜಾಹಿರಾತು ನೀಡಬೇಕು.. ನಿಮಗೆ ಅವಶ್ಯವಿದ್ದರೆ ನಿಮ್ಮದೇ ಅದಕ್ಕೆಂದೇ ಮೀಸಲಾದ ಹಣದಲ್ಲಿ ಜಾಹಿರಾತು ನೀಡಿ ಎನ್ನುವ ವಾದ ಅವರದು. ಹಾಗೆಯೇ ಮಧುರ ಭಂಡಾರ್ಕರ್ ತಮ್ಮ ಹೀರೋಯಿನ್ ಚಿತ್ರದಲ್ಲಿ ಆ ರೀತಿ ಹಾಕಬಾರದೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಅದಿರಲಿ. ಕನ್ನಡದ ಚಿತ್ರಗಳಿಗೆ ಇಂಗ್ಲೀಷ್ ಅಡಿಬರಹ ಹಾಕುವ ಸಂಸ್ಕೃತಿ ಇತ್ತೀಚಿನದು. ಲೂಸಿಯ ಚಿತ್ರದಲ್ಲಿ ಅಡಿಬರಹ ಹಾಕಲಾಗಿತ್ತು. ಮೊನ್ನೆ ಉಪ್ಪಿ-2 ಚಿತ್ರಕ್ಕೆ ಹಾಕಲಾಗಿತ್ತು, ಈಗ ಕೆಂಡಸಂಪಿಗೆ ಚಿತ್ರದಲ್ಲಿದೆ.
ಇದರಿಂದ ಲಾಭಗಳಿವೆಯೇ?
ಖಂಡಿತ ಇವೆ ಎನ್ನಲು ಒಂದಷ್ಟು ಕಾರಣಗಳನ್ನು ನೀಡಬಹುದೇನೋ? 
ನಮ್ಮ ಕನ್ನಡ ಚಿತ್ರಗಳನ್ನು ಭಾಷೆಯ ಕಾರಣದಿಂದ ನೋಡಲಾಗದ ಪರಭಾಷಿಗನಿಗೆ ಸಿನಿಮಾ ಅರ್ಥವಾಗುತ್ತದೆ, ಹಾಗಾಗಿ ಕನ್ನಡ ಚಿತ್ರಗಳನ್ನು ನೋಡುವವರ ಸಂಖ್ಯೆ ಹೆಚ್ಚುತ್ತದೆ. ಚಿತ್ರವನ್ನು ಕರ್ನಾಟಕದ ಹೊರಗೂ ಏಕಕಾಲದಲ್ಲಿ ಬಿಡುಗಡೆ ಮಾಡಬಹುದು ಇತ್ಯಾದಿ ಇತ್ಯಾದಿ...
ಅದು ನಿಜ ಕೂಡ ಹೌದು.
ಆದರೆ ನನ್ನ ವಾದ ಏನೆಂದರೆ ಕನ್ನಡ ಭಾಷೆ ಉಳಿಸಿ, ಡಬ್ಬಿಂಗ್ ಬೇಡ ಎನ್ನುವ ನಾವೇ ಇಲ್ಲಿನ ಭಾಷೆ ಕಲಿಯದವನಿಗೆ ಸಿನಿಮಾವನ್ನು ಸುಲಭೀಕರಿಸಿದರೆ ಹೇಗೆ? ಸಿನಿಮಾ ನೋಡಿ, ಕನ್ನಡ ಕಲಿತವರಿದ್ದಾರೆ. ನಮ್ಮಲ್ಲಿಯೇ ನಿಮಗೆ ತೆಲುಗು ಹೇಗೆ ಗೊತ್ತು, ತಮಿಳು ಹೇಗೆ ಅರ್ಥವಾಗುತ್ತದೆ ಎನ್ನುವ ಪ್ರಶ್ನೆಗೆ ಸಿನಿಮಾ ನೋಡಿ ನೋಡಿ ಕಲಿತೆ ಎನ್ನುವ ಉತ್ತರವನ್ನು ನಾನು ಸುಮಾರು ಜನರಿಂದ ಕಲಿತಿದ್ದೇನೆ. ಅಷ್ಟೇ ಏಕೆ? ಹೆಚ್ಚು ಓದಿರದ, ಕುಗ್ರಾಮದಲ್ಲಿದ್ದ  ನನ್ನ ತಂಗಿಯೇ ಬರೀ ಟಿವಿ ನೋಡಿ ಹಿಂದಿ ಅರ್ಥ ಮಾಡಿಕೊಳ್ಳುತ್ತಿದ್ದಳು. ಈವತ್ತಿಗೂ ನಾಲ್ಕನೆಯ ತರಗತಿ ಓದಿರುವ ನಮ್ಮಮ್ಮ ತಮಿಳು ತೆಲುಗು ಹಿಂದಿ ಚಿತ್ರಗಳನ್ನು ನೋಡಿ ಅರ್ಥ ಮಾಡಿಕೊಳ್ಳುತ್ತಾರೆ. ಅಡಿಬರಹವಿಲ್ಲದೆ ಚಿತ್ರದ ಕತೆ ಹೇಳುತ್ತಾರೆ. ಹಾಗೆಯೇ ವರ್ಷಗಟ್ಟಲೆ ಇಲ್ಲೇ ಬೀಡು ಬಿಟ್ಟಿರುವ ನಮ್ಮಲ್ಲಿನ ಪರಭಾಷಿಗರಿಗೆ ನಾವು ಅವರದೇ ವಾಹಿನಿಗಳು, ಪತ್ರಿಕೆಗಳು, ಅವರದೇ ಭಾಷೆಯಲ್ಲಿ ಚಿತ್ರಗಳನ್ನು ನೀಡಿದ್ದೇವೆ. ಅವರದೆ ಭಾಷೆಯಲ್ಲಿಯೇ ನಾವು ಕಷ್ಟಪಟ್ಟು ಮಾತನಾಡಿದ್ದೇವೆ. ಈಗ ಕನ್ನಡ ಚಿತ್ರದ ಅಡಿಬರಹವನ್ನು ಇಂಗ್ಲೀಷ್ ನಲ್ಲಿ ಕೊಟ್ಟರೆ ಅವರಿಗಿದ್ದ ಕೊನೆಯ ಅನಿವಾರ್ಯತೆಯನ್ನು ನಾವೇ ಅಂದರೆ ಚಿತ್ರಕರ್ಮಿಗಳೇ ಕೊಂದುಹಾಕಿದಂತಾಗುತ್ತದೆಯೇ ಎನ್ನುವ ಪ್ರಶ್ನೆ ನನ್ನದು...
ಕೆಲಸದ ನಿಮಿತ್ತ ಬಾಂಬೆನಲ್ಲಿ ಒಂದಷ್ಟು ದಿನ ಬೀಡು ಬಿಟ್ಟಿದ್ದಾಗ ಸಿಕ್ಕಿದ್ದ ಗೆಳೆಯನೊಬ್ಬ ಉಪೇಂದ್ರ ಅವರ ದೊಡ್ಡ ಅಭಿಮಾನಿಯಾಗಿದ್ದ. ಸುಮಾರು ಹದಿನಾರಕ್ಕೂ ಹೆಚ್ಚು ಬಾರಿ ಅವರ ಎ ಚಿತ್ರವನ್ನು ಲೆಕ್ಕವಿಲ್ಲದಷ್ಟು ಬಾರಿ ಉಪೇಂದ್ರ ಚಿತ್ರವನ್ನು ನೋಡಿದ್ದ ಆತ ಸ್ವಲ್ಪ ಸ್ವಲ್ಪ ಕನ್ನಡ ಉಪೇಂದ್ರ ಅವರ ಚಿತ್ರಗಳನ್ನು ನೋಡಿಯೇ ಕಲಿತೆ ಎಂದಿದ್ದ. ಆಮೇಲೆ ನಾನೇ ಒಂದಷ್ಟು ಒಳ್ಳೊಳ್ಳೆಯ ಕನ್ನಡ ಚಿತ್ರಗಳ ಸಿಡಿ ಕೊಟ್ಟಿದ್ದೆ. ತೆಲುಗಿನ ಆರ್ಯ ಚಿತ್ರಕ್ಕೆ ಮರುಳಾಗಿದ್ದ ನಾನು ತೆಲುಗು ಕಲಿಯಲು ಪ್ರಯತ್ನಿಸಿದ್ದೆ. ಆದರೆ ನಮ್ಮಲ್ಲೇ ಇಂಗ್ಲೀಷ್ ಅಡಿಬರಹ ಹಾಕಿ, ನೋಡುವ ಸಿನೆಮಾವನ್ನು ಓದುವಂತೆ ಮಾಡುವುದು ಇಲ್ಲಿ ಅಂದರೆ ನಮ್ಮದೇ ಕನ್ನಡದ ನೆಲದಲ್ಲಿ ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಶ್ನೆ.
ಹಾಗೆ ನೋಡಿದರೆ ಇಂಗ್ಲೀಷ್ ಅಡಿಬರಹ ಹಾಕುವುದರಿಂದ ಬೇರೆ ಭಾಷೆಯ ನೋಡುಗರನ್ನು ಕನ್ನಡ ಚಿತ್ರಕ್ಕೆ ಎಳೆದು ತರುವುದು ಸುಲಭ ಎನ್ನುವುದು ನಿಜವಾದರೂ ಚಿತ್ರಮಂದಿರಕ್ಕೆ ಕರೆತರುವ ಭರದಲ್ಲಿ ಅವರು ಭಾಷೆ ಕಲಿಯುವ/ಅರ್ಥೈಸಿಕೊಳ್ಳುವ ಪರಿಚಯಿಸಿಕೊಳ್ಳುವ ಅನಿವಾರ್ಯತೆ/ಅವಕಾಶವನ್ನು  ದೂರ ತಳ್ಳಿದಂತಾಗುವುದಿಲ್ಲವೇ?
ಹೊರರಾಜ್ಯದಲ್ಲಿ ಸಬ್ ಟೈಟಲ್ ಜೊತೆಗೆ, ನಮ್ಮಲ್ಲಿ ಸಬ್ ಟೈಟಲ್ ಇಲ್ಲದೆ ಬಿಡುಗಡೆ ಮಾಡಲು ತಾಂತ್ರಿಕವಾಗಿ ಒಂದಷ್ಟು ಕಾರಣಗಳಿವೆ. ಚಿತ್ರದ ಎರಡು ಆವೃತ್ತಿಯನ್ನು ಉಪಗ್ರಹ ವಿತರಣೆಗಾಗಿ ಅಪ್ಲೋಡ್ ಮಾಡಿಸಬೇಕಾಗುತ್ತದೆ. ಇಲ್ಲಿ ಎರೆಡೆರೆಡು ಖರ್ಚುಗಳಿವೆ. ಹಾಗೆಯೇ ಕ್ಯೂಬ್ ಅಥವಾ ಯು ಎಫ್ ಓ ಗಳಿಗೆ ಎರಡು ಸಿನಿಮಾದ ಖರ್ಚು ನೀಡಬೇಕಾಗಬಹುದು. ಆದರೆ ಕೋಟಿಗಟ್ಟಲೆ ಸಿನಿಮಾದಲ್ಲಿ ಲಕ್ಷದ ಖರ್ಚಿವು. 
ಏನೋ ಒಟ್ಟಿನಲ್ಲಿ ಕೆಲವು ನಮ್ಮಲ್ಲಿಯೇ ಪ್ರಾರಂಭವಾಗುತ್ತದೆ. ಒಳ್ಳೆಯದಕ್ಕೂ ಕೆಟ್ಟದ್ದಕ್ಕೋ ಎಂಬುದು ಗೊತ್ತಾಗದ ಸ್ಥಿತಿ. ನಮ್ಮ ಭಾಷೆಯ ಮೂಲಕವೇ, ನಮ್ಮ ಸಿನಿಮಾದ ಗುಣಮಟ್ಟ ವಿಶೇಷದ ಮೂಲಕವೇ ಬೇರೆ ಭಾಷಿಗರನ್ನು ತಲುಪೋಣ ಎನ್ನುವುದು ಸರಿ ಅಲ್ಲವೇ?
ಚರ್ಚಿಸಲು ಆಹ್ವಾನವಿದೆ.. ಏನಂತೀರಿ..?
ಬೇರೆ ಭಾಷೆಯ ಚಿತ್ರಗಳಿಗೆ ಕರ್ನಾಟಕದಲ್ಲಿ  ಕನ್ನಡ ಅಡಿಬರಹ ಬಳಸಿದರೆ ಎಲ್ಲರಿಗೂ ಅರ್ಥವಾಗುತ್ತದೆ ಎಂದು ನಾನು ಜಗತ್ತಿನ ಚಿತ್ರಗಳಿಗೆ ಕನ್ನಡ ಅಡಿಬರಹ ಬರೆಯುವ ಪ್ರಯತ್ನ ಮಾಡಿದ್ದೆ. ಇರಾನಿ, ಪರ್ಷಿಯನ್ ಚಿತ್ರಗಳಿಗೆ ಇಂಗ್ಲೀಷ್ ಅಡಿಬರಹವನ್ನು ಕನ್ನಡದಲ್ಲಿ ಬರೆದು ಅದನ್ನು ನೋಡಲು ಸಾಧ್ಯವಾದಾಗ ಖುಷಿಯಾಗಿದ್ದೆ. ಆದರೆ ಅದನ್ನು ಎಲ್ಲರಿಗೂ ಸಿಗುವಂತಾಗಲಿ ಎನ್ನುವ ಆಶಯದಿಂದ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಲು ನೋಡಿದಾಗ ಬೇಸರವಾಗಿತ್ತು. ಸಬ್ ಟೈಟಲ್ ಅಂತರ್ಜಾಲ ತಾಣದಲ್ಲಿ ತೆಲುಗು ತಮಿಳು ಬೆಂಗಾಲಿ ಭಾಷೆಯ ಆಯ್ಕೆ ಇತ್ತೇ ಹೊರತು ಕನ್ನಡ ಆಯ್ಕೆಗೆ ಅವಕಾಶವೇ ಇರಲಿಲ್ಲ. ಈ ಕುರಿತು ಆ ಸೈಟ್ ಗಳಿಗೆ ಇಮೇಲ್ ಮಾಡಿದ್ದೆ. ಆನಂತರ ಬೇರೆ ದಾರಿಕಾಣದೆ ಭಾರತೀಯ ಭಾಷೆಗಳ ಅಡಿಯಲ್ಲಿ ತೆಲುಗು ಭಾಷೆಯ ಅಡಿಯಲ್ಲಿ ಕನ್ನಡ ಸಬ್ ಟೈಟಲ್ ಅಪ್ಲೋಡ್ ಮಾಡಿದ್ದೆ.
ಈಗ ಕನ್ನಡ ಚಿತ್ರಗಳಿಗೆ ಇಂಗ್ಲೀಷ್ ಅಡಿಬರಹವಿದೆ.. ಬಹುಶ: ಕನ್ನಡ ಬಾರದ ಪ್ರೇಕ್ಷಕ ಧ್ವನಿ ಕೇಳಿಸಿಕೊಂಡು ಇಂಗ್ಲೀಷ್ ಓದಿಕೊಂಡು ಕನ್ನಡ ಪರಿಚಯಿಸಿಕೊಳ್ಳುವ ಉಲ್ಟಾ ಕಲಿಕೆ ನಡೆಯಬಹುದಾ? ಕಾದುನೋಡಬೇಕಾಗಿದೆ.
ಅಂದ ಹಾಗೆ ಜಪಾನಿ ಭಾಷೆಯ ಕಾದಂಬರಿ ಸಾಲ್ವೇಶನ್ ಆಫ್ ಎ ಸೈಂಟ್ ಕಾದಂಬರಿ ಓದುತ್ತಿದ್ದೇನೆ. ಇನ್ನು ಕೆಲವೇ ಪುಟಗಳಿರುವ ಕಾದಂಬರಿ ಬರೆದದ್ದು ಕಇಗೋ ಹಿಗಶಿನೋ. ಓಡಿಸಿಕೊಂಡು ಹೋಗುವ ಕಾದಂಬರಿಯ ಕಥಾವಸ್ತು ಕುತೂಹಲಕರವಾಗಿದೆ. ಆದರೆ ಹೆಸರುಗಳನ್ನೂ ನೆನಪಿಟ್ಟುಕೊಂಡು ಓದುವ ಸಾಹಸ ಮಾತ್ರ ಫಜೀತಿ. ಅಂದ ಹಾಗೆ ಹಿಗಶಿನೋ ಪರಿಚಯವಾದದ್ದು ದೃಶ್ಯಂ ಚಿತ್ರದಿಂದ. ಅದರ ಮೂಲ ಸಿನಿಮಾದ ಕಾದಂಬರಿಗಾರ ಈತ. ಆ ಕಾದಂಬರಿ ಓದಿದ ನಂತರ ಪುಣ್ಯಾತ್ಮ ಇನ್ನೇನು ಬರೆದಿರಬಹುದು ಎಂದು ಹುಡುಕಾಡಿದಾಗ ಸಿಕ್ಕಿದ್ದು ಇದು.
ಸಿಕ್ಕರೆ ಓದಿ.