Friday, January 16, 2015

ಶಂಕರ್ ಐ

ಶಂಕರ್ ಅವರ ಬಹು ನಿರೀಕ್ಷಿತ ಚಿತ್ರವಾದ ಐ ಬಿಡುಗಡೆಯಾಗಿದೆ. ಬಹುಕೋಟಿ ವೆಚ್ಚದ ಈ ಚಿತ್ರ ತನ್ನ ನಿರೀಕ್ಷೆಯನ್ನು ಉಳಿಸಿಕೊಂಡಿದೆಯೇ ಎಂಬುದು ಪ್ರಶ್ನೆ.
ಅದಕ್ಕೆ ಉತ್ತರ ಹೌದು ಎಂದರೆ ಹೌದು ಇಲ್ಲ ಎಂದರೆ ಇಲ್ಲ.
ಶಂಕರ್ ಏನೇ ಮಾಡಿದರೂ ಮನರಂಜನೆಯ ಚೌಕಟ್ಟಿನಲ್ಲಿಯೇ ಮಾಡುತ್ತಾರೆ. ಅದವರ ಶಕ್ತಿ  ಮತ್ತದೇ ಅದೇ ಅವರ ದೌರ್ಬಲ್ಯ. ಹಾಗಾಗಿಯೇ ಶಂಕರ್ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ಕೊಡಬಲ್ಲರು. ವರ್ಷಗಟ್ಟಲೆ ಪ್ರೇಕ್ಷಕರನ್ನು ಕಾಯಿಸಿ ಅಬ್ಬಾ ಕಾಯ್ದದ್ದು ಸಾರ್ಥಕ ಎನ್ನುವಂತೆ ಮಾಡಬಲ್ಲರು. ಸ್ಟಾರ್ ನಟನನ್ನು ಚಿತ್ರಕ್ಕೆ ನಾಯಕನನ್ನಾಗಿಸಿ ಆತನ ಅಭಿಮಾನಿಗಳನ್ನು ಖುಷಿ ಪಡಿಸಬಲ್ಲರು.
ಐ ಚಿತ್ರ ಅದೇ ವಿಭಾಗದ ಚಿತ್ರ. ಕತೆ ಚಿತ್ರಕತೆಯ ವಿಷಯಕ್ಕೆ ಹೋದರೆ ಹೆಚ್ಚು ತಲೆ ಕೆಡಿಸುವ ಕತೆಯೂ ಇಲ್ಲ, ಬುದ್ದಿವಂತಿಕೆ ಎನಿಸುವ ಚಿತ್ರಕತೆಯೂ ಇಲ್ಲ. ಸಾದಾರಣದಲ್ಲಿ ಅತೀ ಸಾದಾರಣ ಕತೆ, ನೀವು ಘಜಿನಿ ಎಂದುಕೊಳ್ಳಬಹುದು, ಚಿತ್ರಕತೆಯೂ ಅಷ್ಟೇ ಫ್ಲಾಶ್ ಬ್ಯಾಕ್ ಮಗ್ಗಲಲ್ಲಿ ಕತೆ ತೆರೆಯುವ ಶಂಕರ್ ಅದರಲ್ಲೂ ಯಾವುದೇ ಹೆಚ್ಚುಗಾರಿಕೆ ತೋರಿಲ್ಲ. ಹಾಗಾದರೆ ಇದೊಂದು ಸೀದಾ ಸಾದಾ ಚಿತ್ರವೇ?
ಖಂಡಿತ ಇಲ್ಲ. ಶಂಕರ್ ಗೆಲ್ಲುವುದು ಇರುವ ಸಾದಾರಣ ಕತೆಯನ್ನು ಅಸಾದಾರಣ ದೃಶ್ಯವೈಭವದ ಜೊತೆ ಕಟ್ಟಿಕೊಡುವಲ್ಲಿ. ಇಲ್ಲಿ ಅವರದ್ದು ಎಲ್ಲವೂ ಬಿಗ್ ಸ್ಕೇಲ್. ದೊಡ್ಡ ಕ್ಯಾನ್ವಾಸ್. ಒಂದು ಗಲ್ಲಿ ಎಂದರೂ ಅಲಂಕೃತವಾಗಿ ಉದ್ದಕ್ಕೆ ಕಾಣಿಸುತ್ತದೆ, ಒಂದು ಮನೆ ಎಂದರೆ ಅದರಲ್ಲಿ ಹಲವಾರು ಮಜಲುಗಳಿವೆ, ಹೊಡೆದಾಟ ಎಂದರೆ ಸಂಖ್ಯೆ ಮೀರಿದ ಎದುರಾಳಿಗಳಿದ್ದಾರೆ, ಹಾಡು ಎಂದಾಗ ಅದರಲ್ಲೇ ಲೋ ಬಜೆಟ್ ಸಿನಿಮಾ ಮಾಡಬಹುದಾದ ವೆಚ್ಚ ಎದ್ದು ಕಾಣುತ್ತದೆ.
ಒಂದು ರೂಪದರ್ಶಿಗಳ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಕತೆ. ಆನಂತರ ತಿರುಗುವುದು ಮಸಾಲೆ ಮನರಂಜನೆಯತ್ತ. ಇಲ್ಲಿನ ಪ್ರೀತಿ ಪ್ರೇಮ ದ್ವೇಷ ಎಲ್ಲದಕ್ಕೂ ಸಿನಿಮೀಯ ತಿರುವುಗಳನ್ನೇ ನಿರ್ದೇಶಕರು ನೆಚ್ಚಿಕೊಂಡಿದ್ದಾರೆ. ಹಾಗೆಯೇ ಪ್ರತಿಕಾರಕ್ಕೂ ತಮ್ಮದೇ ಶೈಲಿಯನ್ನು ಪುನರಾವರ್ತನೆ ಮಾಡಿದ್ದಾರೆ. ನಾಯಕ ಲಿಂಗೇಶನ್ ಮಿಸ್ಟರ್ ತಮಿಳುನಾಡು ಆದರೆ ನಾಯಕಿ ಅಂತರರಾಷ್ಟ್ರೀಯ ಮಟ್ಟದ ರೂಪದರ್ಶಿ. ಆಕೆಯನ್ನು ಹೇಗಾದರೂ ಮಾಡಿ ಅನುಭವಿಸಲು ಮತ್ತೊಬ್ಬ ಕಾಯ್ದುನಿಂತಿದ್ದಾನೆ. ತನ್ನ ತೆಕ್ಕೆಗೆ ಸಿಕ್ಕುವುದಿಲ್ಲ ಎಂದು ಗೊತ್ತಾದಾಗ ಆಕೆಯ ಜಾಗಕ್ಕೆ ಬೇರೆಯವರನ್ನು ತಂದುಕೂರಿಸುತ್ತಾನೆ. ಇದರಿಂದ ಹತಾಶೆಗೊಳಗಾದ ನಾಯಕಿ ಸಿಡಿದು ನಿಂತು ಅವನ ಜಾಗಕ್ಕೆ ನಾಯಕನನ್ನು ಆಯ್ಕೆ ಮಾಡುತ್ತಾಳೆ. ನಾಯಕ ರೂಪದರ್ಶಿಯಾಗುತ್ತಾನೆ. ಮುಂದೆ..? ನಾಯಕ ಸ್ಟಾರ್ ಆದಂತೆ ಖಳನಾಯಕ ಕೆಲಸವನ್ನೂ ಕಳೆದುಕೊಳ್ಳುತ್ತಾನೆ, ಮೊದಲೇ ಹುಡುಗಿ ಸಿಕ್ಕಿರುವುದಿಲ್ಲ. ಅದರ ಜೊತೆಗೆ ಮತ್ತೊಂದು ಪ್ರೇಮಕತೆಯನ್ನು ನಿರ್ದೇಶಕರು ತಂದಿದ್ದಾರೆ. ಅದರಲ್ಲೂ ಆತ/ಆಕೆಗೆ ನಾಯಕ ತಿರಸ್ಕರಿಸಿರುತ್ತಾನೆ. ಎಲ್ಲರೂ ಒಂದಾಗುತ್ತಾರೆ. ನಾಯಕನ ಮೇಲೆ ಹಗೆ ಸಾಧಿಸುತ್ತಾರೆ... ಮುಂದೇನಾಗುತ್ತದೆ ಎಂಬುದು ಒಂದು ಸಾಲಿನ ಕತೆ. ಆದರೆ ಅದನ್ನು ನಿರ್ದೇಶಕರು ಶ್ರೀಮಂತವಾಗಿ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಅದನ್ನು ಚಿತ್ರಮಂದಿರದಲ್ಲೇ ನೋಡುವುದು ಸೊಗಸು.
ಮೂರು ಘಂಟೆ ಎಂಟು ನಿಮಿಷಗಳ ಚಿತ್ರವನ್ನು ನಿರ್ದೇಶಕರು ಬೋರ್ ಆಗದಂತೆ ನಿರೂಪಿಸಿದ್ದಾರೆ. ಇಲ್ಲಿ ಎಲ್ಲವೂ ನಿರೀಕ್ಷಿತ. ಏನಾಗುತ್ತದೆ ಎಂಬುದನ್ನು ಪ್ರೇಕ್ಷಕ ಮೊದಲೇ ಅಂದಾಜು ಮಾಡಿಬಿಡಬಲ್ಲ. ಆದರೆ ಅದು ಹೇಗೆ ಆಗುತ್ತದೆ ಎಂಬುದು ಶಂಕರ್ ಗೆ ಬಿಟ್ಟು ಬಿಡಬೇಕಾಗುತ್ತದೆ.
ನಾಯಕನಾಗಿ ವಿಕ್ರಂ ತನ್ನ ಖದರ್ ತೋರಿಸಿದ್ದಾರೆ. ಅಭಿನಯವಷ್ಟೇ ತನ್ನ ದೇಹವನ್ನು ಪಾತ್ರಕ್ಕೆ ತಕ್ಕಂತೆ ಏರುಪೇರು ಮಾಡಿಕೊಂಡಿದ್ದಾರೆ. ನಾಯಕಿಯಾಗಿ ಅಮಿ ಜಾಕ್ಸನ್ ಗ್ಲಾಮರ್ ಬೊಂಬೆ. ಇನ್ನುಳಿದಂತೆ ಉಪೇನ್ ಪಟೇಲ್, ಸುರೇಶ ಗೋಪಿ ಅವರ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ.
ಹಿನ್ನೆಲೆ ಸಂಗೀತ ಮತ್ತು ಸಂಗೀತ ಸ್ವಲ್ಪ ಮಟ್ಟಿಗೆ ನಿರಾಸೆ ಉಂಟು ಮಾಡುತ್ತದೆ. ಛಾಯಾಗ್ರಹಣ ಮತ್ತು ಪ್ರಸಾದನ ಚಿತ್ರದ ಜೀವಾಳ ಆಗಿದೆ.
ಕೊನೆ ಮಾತು: ಶಂಕರ್ ಇಷ್ಟನ್ನು ನೀಡಬಲ್ಲರು. ಆದರೆ ಚಿತ್ರ ಗ್ರೇಟ್ ಎನಿಸುವುದಿಲ್ಲ. ಅದೇಕೆ ಎನಿಸಬೇಕು ಎಂಬ ಪ್ರಶ್ನೆ ಹಠಾತ್ತನೆ ಹುಟ್ಟಬಹುದು. ಒಬ್ಬ ನಿರ್ದೇಶಕ ಒಂದಷ್ಟು ಹಣ ವೆಚ್ಚ ಮಾಡಿ  ಹೇಗೇಗೋ ಚಿತ್ರ ಮಾಡಿದಾಗ ಇಷ್ಟು ಮಾಡಿದರೆ ಸಾಕು ಎನಿಸುವುದು ಸಹಜ. ಆದರೆ ಇಷ್ಟನ್ನು ಹಲವಾರು ಬಾರಿ ಮಾಡಿರುವ ಶಂಕರ್ ಅವರಿಂದ ಮತ್ತಷ್ಟನ್ನು ನಿರೀಕ್ಷೆ ಮಾಡುವುದು ತಪ್ಪೇನಿಲ್ಲ. ಮೂರು ಗಂಟೆಗಳ ದೃಶ್ಯ ವೈಭವದಲ್ಲಿ ಬೋರ್ ಆಗದಂತೆ ಚಿತ್ರ ನಿರೂಪಿಸುವುದು ಸುಲಭದ ಕೆಲಸವಲ್ಲವಾದರೂ ಅದನ್ನು ಶಂಕರ್ ಮಾಡಬಲ್ಲರು ಎನ್ನುವುದಾದರೆ ಶಂಕರ್ ಇನ್ನು ಒಂದು ಹೆಜ್ಜೆ ಮುಂದೆ ಹೋದರೆ ಸೂಪರ್ ಹಿಟ್ ಚಿತ್ರದ ಜೊತೆಗೆ ಗ್ರೇಟ್ ಚಿತ್ರವನ್ನೂ ಕೊಡಬಹುದು.