Thursday, October 18, 2012

ನಿರ್ಮಾಪಕ ರಾಮುರವರ ಜೊತೆ ಮಾತಾಡಿದ್ದು..

ಆವತ್ತು ಲಾಕಪ್ ಡೆತ್ ಸಿನೆಮಾ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. ನನಗೋ ಸಂಭ್ರಮ .ಅದೊಂದು ಅದ್ಭುತ ಫೈಟಿಂಗ್ ಸಿನಿಮಾ ಎಂಬುದನ್ನು ಅವರಿವರ ಬಾಯಿಂದ ಕೇಳಿದ್ದೆ. ಪತ್ರಿಕೆಯಲ್ಲಿ ಓದಿದ್ದೆ. ಅದರ ಚಿತ್ರೀಕರಣದ ಸಮಯದಲ್ಲಿ ಅಪಘಾತವಾದದ್ದು   ಮತ್ತಿತರ ವಿವರಗಳು ಗೊತ್ತಿದ್ದವು. ಆ ಚಿತ್ರ ನಂಜನಗೂಡಿಗೆ ಬಂದಿತ್ತಾದರೂ ನಾನು ಹೋಗಿ ನೋಡಿರಲಿಲ್ಲ . ನಮ್ಮದು ನಂಜನಗೂಡಿನಿಂದ 9 ಕಿಲೋ ಮೀಟರ್ ದೂರದ ಹಳ್ಳಿ . ಹಾಗಾಗಿ ಅದೇ ಸಿನೆಮಾ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುವ  ಸುದ್ಧಿಯನ್ನು ಕಳೆದ ಭಾನುವಾರ ಮುನ್ನೋಟದಲ್ಲಿ ಕೇಳಿ ತಿಳಿದಿದ್ದ ನನಗೆ ಈ ಭಾನುವಾರ  ಅದೆಷ್ಟು ಬೇಗ ಬೇಗ ಬರುತ್ತದೋ ಎಂಬ ಕಾತರ ಹೇಳತೀರದಾಗಿತ್ತು. ಆವತ್ತು ವಿದ್ಯುತ್ ಹೋಗದಿರಲಿ ಎಂದು ದೇವರಿಗೆ ಹರಕೆ, ಪ್ರಾರ್ಥನೆ ಮಾಡಿಯೂ ಆಗಿತ್ತು. ನಮ್ಮೂರಲ್ಲಿ ಹಾಗೆಯೇ. ಭಾನುವಾರ ಬಂತೆಂದರೆ ವಿದ್ಯುತ್  ಕೈ  ಕೊಡುತ್ತಿತ್ತು ..ನೋಡಿದ್ದವರು ನಾನು ಅಷ್ಟು ಸಲ ನೋಡಿದ್ದೇನೆ , ಹಾಗಿದೆ  ಹೀಗಿದೆ ಎಂದೆಲ್ಲಾ ಕೊಚ್ಚಿ ಕೊಂಡದ್ದು ಬೇರೆ ನೋಡುವ ಕಾತರವನ್ನು ಹೆಚ್ಚಿಸಿತ್ತು. ಜೊತೆಗೆ ಚೇಸ್ ದೃಶ್ಯದ ವರ್ಣನೆಗಳು ಬೇರೆ ತಲೆಕೆಡಿಸಿದ್ದವು.
 ಚಿತ್ರದ ಪ್ರಸಾರ ಪ್ರಾರಂಭವಾಯಿತು. ಚಿತ್ರ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿತ್ತು. ಆವತ್ತು ವಿದ್ಯುತ್ ಕೂಡ ನಮ್ಮ ಜೊತೆಯಿತ್ತು . ಆಸ್ಪತ್ರೆಯಿಂದ ಪ್ರಕಾಶ ರೈ , ಶೋಭರಾಜ್ ಸಂಗಡಿಗರು ದೇವರಾಜರವರನ್ನು ಅಪಹರಿಸಿಕೊಂಡು ಹೊರಟರು. ಪೋಲಿಸರೂ ಅವರ ಬೆನ್ನು ಬಿದ್ದರು. ನಾವೆಲ್ಲಾ ಹುಡುಗರು ಮೈಯೆಲ್ಲಾ ಕಣ್ಣಾದೆವು...ಇನ್ನೇನು ಚೇಸ್ ಪ್ರಾರಂಭವಾಯಿತು ಅಂದುಕೊಂಡೆವು.....ಅಷ್ಟೇ !! ಸಲೀಸಾಗಿ ದೇವರಾಜ್ ಯಾವ ಅಡೆತಡೆಯೂ ಇಲ್ಲದೆ ಕಾಡು ಸೇರಿಕೊಂಡಿದ್ದರು. ನಮಗೆಲ್ಲಾ ಆಶ್ಚರ್ಯ ವಾಯಿತು ಇದೇನು ಪೋಲಿಸರೂ ಸುಮ್ಮನಾದರಾ?
ಕಾರಣವಿಷ್ಟೇ. ಆ ಚೇಸ್   ದೃಶ್ಯವನ್ನು ದೂರದರ್ಶನದವರು ಕತ್ತರಿಸಿಬಿಟ್ಟಿದ್ದರು.ನಮಗಾಗ ದೂರದರ್ಶನದ ಪ್ರದರ್ಶನದ ನಿಯಮಗಳ ಬಗ್ಗೆ, ಸೆನ್ಸಾರ್ ಬಗೆಗೆ ಗೊತ್ತಿಲ್ಲವಾದ್ದರಿಂದ ದೂರದರ್ಶನದವರನ್ನು   ಹಿಗ್ಗಾಮುಗ್ಗಾ ಬೈದುಕೊಂಡಿದ್ದೆವು.  
ಆನಂತರ ನಾನು ಕಾಲೇಜಿಗೆ ನಂಜನಗೂಡಿಗೆ ಬಂದೆ. ಆವಾಗೊಮ್ಮೆ ಲಾಕಪ್ ಡೆತ್ ಚಿತ್ರಮಂದಿರಕ್ಕೆ ಬಂದಿತು. ಮೂರ್ನಾಲ್ಕು ಸಾರಿ ನೋಡಿಬಿಟ್ಟೆ.
ಮೊನ್ನೆ ರಾಮು ಅವರನ್ನು ಭೇಟಿ  ಮಾಡಿದ್ದೆ . ಅವರಿಗೆ ಫೋನ್ ಮಾಡಿದಾಗ ಅವರು ಆಕಾಶ್ ಆಡಿಯೋ ಸ್ಟುಡಿಯೋಗೆ ಬನ್ನಿ  ಎಂದರು. ಮೊದಲೇ ಕೋಟಿ ರಾಮು! ಭಯದಿಂದಲೇ ಹೋದೆ. ಅದೆಷ್ಟು ಸರಳವಾಗಿದ್ದರೆಂದರೆ ನಾನು ಕಳೆದುಹೋದೆ. ಇವರೇನಾ ಕೋಟಿಕೋಟಿ ಖರ್ಚು ಮಾಡಿ ಸಿನೆಮಾ ಮಾಡಿರುವವರು ಮತ್ತು ಮಾಡುತ್ತಲೇ ಇರುವವರು ಎನಿಸಿತು. ನಾನು ನನ್ನ ಉದ್ದೇಶ ಹೇಳಿದೆ. ನಾನೊಂದು ಕಥೆ ಹೇಳಬೇಕು ಎಂದದಕ್ಕೆ 'ಅದಕ್ಕೇನು ಹೇಳಿ ..' ಎಂದರು. ನಾನು ಅನಾಮತ್ತು ನಲವತ್ತು ನಿಮಿಷ ಕಥೆ ಹೇಳಿದೆ. ಸಾವಧಾನವಾಗಿ ಕುಳಿತು ಕೇಳಿಸಿಕೊಂಡರು. ಮಧ್ಯದಲ್ಲಿ ಹತ್ತಾರು ಫೋನ್ ಬಂದರೂ ಮುಖ್ಯವಾದದದೊಂದು ಕರೆ ಮಾತ್ರ ಸ್ವೀಕರಿದರು. . ಕೇವಲ ಒಂದೇ ಒಂದು ಸಿನೆಮಾ, ಅದೂ ಬಿಡುಗಡೆಯಾಗಿಲ್ಲದ ಸಿನೆಮಾ ನಿರ್ದೇಶಕನ ಜೊತೆ ಅಷ್ಟು ದೊಡ್ಡ ನಿರ್ಮಾಪಕರು ಒಂದು ಘಂಟೆ ವ್ಯಯಿಸಿದ್ದು ನನಗೆ ಆಶ್ಚರ್ಯ ತರಿಸಿತು.  ಚಿಕ್ಕ ಪುಟ್ಟ ಕೆಲಸಗಳನ್ನು ಇಟ್ಟುಕೊಂಡು ನಾವು ಬ್ಯುಸಿ ಬ್ಯುಸಿ ಎಂದು ಕೂಗಾಡುವುದು ..ಅಷ್ಟೆಲ್ಲಾ ಸಿನೆಮಾ ಮಾಡಿದ ವ್ಯಕ್ತಿ ಅಷ್ಟು ಚೆನ್ನಾಗಿ, ಮಧ್ಯ ಮಧ್ಯ ಪ್ರಶ್ನೆ ಕೇಳುತ್ತಾ , ನನ್ನ ಕಥೆಗೆ ಸ್ಪಂದಿಸುತ್ತಾ ಸಂಪೂರ್ಣ ಕಥೆ ಕೇಳಿ ಆಮೇಲೂ ಅದರ ಬಗ್ಗೆ ಚರ್ಚಿಸಿದ್ದು ನನಗೆ ಖುಷಿಯಾದದ್ದಷ್ಟೇ ಅಲ್ಲಾ ದೊಡ್ಡವರಿಂದ ಕಲಿಯುವುದು ಸಾಕಷ್ಟಿದೆ ಎನಿಸಿತು.
'ಪ್ರತಿಯೊಬ್ಬರಿಗೂ ಸಮಯ ನೀಡುವ ವ್ಯಕ್ತಿಯೇ ನಿಜವಾಗಿಯೂ ಬ್ಯುಸಿಯಾದ ವ್ಯಕ್ತಿ..' ಎಂದು ಗೆಳೆಯ ಹೇಳಿದ್ದು ನಿಜ ಎನಿಸಿತು.

1 comment: