Thursday, November 8, 2012

VFX-ಮಾಯಾಜಾಲದ ಬೆನ್ನುಬಿದ್ದು..

ಸ್ಮಿತ್ ಕೆಮೆರಾ.
ಜಾರ್ಜ್ ಮೆಲಿಸ್.
ನಮ್ಮ ಸಿನೆಮಾದ ಶೀರ್ಷಿಕೆಯ ಗ್ರಾಫಿಕ್ಸ್ ಹೀಗೆಯೇ ಬರಬೇಕು ಎಂಬ ಕಲ್ಪನೆ ನನ್ನಲ್ಲಿತ್ತು.ಹಾಗಾಗಿ ಬಜೆಟ್ಟಿನ ಮಿತಿಯಲ್ಲಿ ಅದೇಗೆ ನಾನಂದುಕೊಂಡದ್ದನ್ನು ಮಾಡಿಸುವುದು ಎಂಬ ಜಿಜ್ಞಾಸೆಗೆ ಬಿದ್ದಿದ್ದೆ. ಗ್ರಾಫಿಕ್ಸ್, VFX ಎಲ್ಲಾ ಹೇಗೆ ಮಾಡುತ್ತಾರೆಂಬ ಕಲ್ಪನೆ ಇರಲಿಲ್ಲ . ಹೆಸರಾಂತ ಸ್ಟುಡಿಯೋಗೆ ಕೆಲಸ ವಹಿಸಿ ಆರಾಮವಾಗಿದ್ದರೆ ಮುಗೀತು. ಅವರೊಂದು ಪ್ರೂಫ್ ಕೊಟ್ಟು ಓಕೆ ಎಂದಾಕ್ಷಣ ಅಂತಿಮ ರೂಪ ಕೊಟ್ಟು ಬಿಡುತ್ತಿದ್ದರು. ಅದೆಲ್ಲಾ ಸೆಕೆಂಡಿನ ಲೆಕ್ಕದಲ್ಲಿ ನಡೆಯುತ್ತಿದ್ದ ಕೆಲಸ . ಪ್ರತಿ ಫ್ರೇಮಿಗೂ ದುಡ್ಡು. ಆದರೆ ನಮ್ಮ ಸಿನೆಮಾದಲ್ಲಿ ಕೋಟಿ ಕೋಟಿ ಬಜೆತ್ತಿರಲಿಲ್ಲ. ಹಾಗಂತ ಗುಣಮಟ್ಟದಲ್ಲಿ ರಾಜಿಯಾಗುವುದಾದರೂ ಹೇಗೆ?   ಅದಕ್ಕೆ ನನಗೆ ಪಕ್ಕ ಕೆಲಸಗಾರನೋಬ್ಬನ ಅವಶ್ಯಕತೆ ಇತ್ತು. ಆವಾಗ ನನಗೆ ಸಿಕ್ಕಿದ್ದು ಪ್ರದೀಪ್. VFX ವಿಷಯದಲ್ಲಿ ಸಾಕಷ್ಟು ತಿಳಿದುಕೊಂಡಿದ್ದ ವ್ಯಕ್ತಿ. ನಮ್ಮ ಸಿನೆಮಾಗೆ ಕೆಲಸ ಮಾಡುತ್ತೇನೆ ಎಂದಾಗ ಅನುಮಾನದಿಂದ ಒಪ್ಪಿಕೊಂಡಿದ್ದೆ.. ಆದರೂ ಮೊದಲು ನನಗೆ ನಿಮ್ಮ ಕೆಲಸ ತೋರಿಸಿ ಎಂದಿದ್ದೆ. ಆಗ ಅವರು ತೋರಿಸಿದ ಒಂದೆರೆಡು ತುಣುಕುಗಳನ್ನು ಕಂಡು ನನಗೆ ಖುಷಿಯಾಯಿತು. ಅವರಿಗೆ ನನ್ನ ಸಿನೆಮಾದ ಶೀರ್ಷಿಕೆಯ ಕೆಲಸ ವಹಿಸಿದೆ. ತುಂಬಾ ಅದ್ಭುತವಾಗಿ ಕೆಲಸ ಮಾಡಿಕೊಟ್ಟರು. ಆಮೇಲೆ ನಮ್ಮ ಸಿನೆಮಾದ ಇನ್ನಿತರ ಕೆಲಸಗಳು ಸ್ವಲ್ಪ ತಡವಾದವು. ಆ ಸಂದರ್ಭದಲ್ಲಿ ನನಗೆ ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಯಿತು.
ಅರ್.ಡಬ್ಲ್ಯೂ.ಪಾಲ್
ನಾವೂ ಕೂಡ 2012 ಅಥವಾ ಜುರಾಸಿಕ್ ಪಾರ್ಕ್ ತರಹದ ಸಿನೆಮಾ ಮಾಡಲು ಸಾಧ್ಯವೇ ..? ಆ ಮಟ್ಟದ ಗ್ರಾಫಿಕ್ಸ್ ನಮ್ಮಲ್ಲಿ ಸಾಧ್ಯವೇ   ಎಂಬ ಪ್ರಶ್ನೆ ಕಾಡತೊಡಗಿತು.  ಹಣ ತಂತ್ರಜ್ಞಾನ ಯಾವುದು ಇದಕ್ಕೆ ಅಡ್ಡಗಾಲು ಹಾಕಬಹುದು..? ನಮ್ಮಲ್ಲೂ ನೂರಾರು ಪುರಾಣದ             ರೋಮಾಂಚಕ ಕಥೆಗಳಿವೆ. ಅವುಗಳನ್ನು ಪರಿಣಾಮಕಾರಿಯಾಗಿ ತೆರೆಯ ಮೇಲೆ ತರಬೇಕೆಂದರೆ VFX ಅಗತ್ಯ. ಅದೇ ಸಮಯಕ್ಕೆ ಬಂದ ಪ್ರದೀಪ್ 'ಸಾರ್ ಹೇಗೂ ಫ್ರೀ ಇದ್ದೀರಾ ನೀವೇ ಸ್ಟಡಿ ಮಾಡಬಹುದು 'ಎಂದು ಒಂದೆರೆಡು ಗ್ರಾಫಿಕ್ಸ್ ತಂತ್ರಜ್ಞಾನದ ತಂತ್ರಾಂಶಗಳನ್ನು ನನ್ನ ಕಂಪ್ಯೂಟರಿಗೆ ತುಂಬಿಹೋದರು. ಅದಕ್ಕೂ ಮುನ್ನ ಒಂದಷ್ಟು ಅಭ್ಯಾಸ ಮಾಡಿದೆ. ಅದರ ಬಗ್ಗೆ ಅದ್ಯಯನ ಮಾಡಿದೆ. ಆನಂತರ ನಾನು ನಿಧಾನಕ್ಕೆ trial and error ಮಾಡುತ್ತಾ ಹೋದೆ . ಇಂಟರ್ನೆಟ್ ಸಹಾಯದಿಂದ ಒಂದಷ್ಟು ಕಲಿತೆ. ಗೆಳೆಯ ಪಿಲಿಪ್ ಒಂದಷ್ಟು ಸಾಮಗ್ರಿ ಒದಗಿಸಿದರು. ಕಲಿಯುತ್ತ ಹೋದಂತೆ ನನ್ನ ಮುಂದೆ ಒಂದು ಹೊಸ ಪ್ರಪಂಚವೇ ತೆರೆದುಕೊಂಡಿತು. ನಮ್ಮ ಇತಿಮಿತಿಯಲ್ಲಿ ದೃಶ್ಯ ವೈಭವದಲ್ಲಿ ಸಾಧಿಸಬಹುದಾದ ಸಾಧ್ಯತೆಗಳ ಅಂದಾಜು ಗೋಚರವಾಯಿತು .
 ಪ್ರಾಯೋಗಿಕವಾಗಿ ನಾನು ಕಲಿಯುತ್ತಾ ಹೋದಂತೆ ನನ್ನ ಆಸಕ್ತಿ, ಕುತೂಹಲ ಇಮ್ಮಡಿಯಾಯಿತು. VFX ನ ಇತಿಹಾಸದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಎನಿಸಿತು. ಯಾವಾಗ ಯಾವಾಗ ಸಿನಿಮಾದಲ್ಲಿ ಬಳಕೆಯ ಪ್ರಾರಂಭವಾಯಿತು. ? ಹೇಗೆ ಅದರ ಸಾಧ್ಯತೆಗಳು ಹೆಚ್ಚಾದವು ಎಂಬ ಸಂಗತಿ ತಿಳಿದುಕೊಳ್ಳಬೇಕೆಂಬಾಸೆಯಾಯಿತು.. ಒಂದು ಗಣಕಯಂತ್ರದಲ್ಲಿ ಒಂದು ಜಗತ್ತನ್ನೇ ಸೃಷ್ಟಿಸಿಬಿಡುವ ತಂತ್ರಜ್ಞಾನಕ್ಕೆ ಸಲಾಮು ಹೊಡೆಯದೆ ಬೇರೆ ಮಾರ್ಗವಿರಲಿಲ್ಲ .ನನ್ನ ಆ ಅಭ್ಯಾಸದ ಹಾದಿಯಲ್ಲಿ ನಾನು ಕಂಡುಕೊಂಡ, ತಿಳಿದುಕೊಂಡ ವಿಷಯಗಳನ್ನು ಸುಮ್ಮನೆ ಬರೆಯುತ್ತಾ ಹೋಗುವ ಎನಿಸಿತು. 
 ಈವತ್ತು ದೃಶ್ಯ ವೈಭವ ಅಥವಾ VFX ಸಾಕಷ್ಟು ಸಾಧನೆಯ ಹೆಜ್ಜೆಗಳನ್ನಿಟ್ಟಿದೆ.  ಸ್ಪೆಷಲ್ ಎಫೆಕ್ಟ್ ನ ಮೊದಲು ಸಿನೆಮಾದಲ್ಲಿ ಬಳಸಿದ್ದು ಜಾರ್ಜ್ ಮೆಲಿಸ್. ಇತ್ತೀಚಿಗೆ ಬಂದ ಹ್ಯೂಗೋ ಸಿನೆಮಾ ನೋಡಿರಬಹುದು. ಅದು ಇದೆ ಮೆಲಿಸ್ ನ ಜೀವನಚರಿತ್ರೆ ಆಧರಿಸಿದ ಚಿತ್ರ.  VFX ನ ಪಿತಾಮಹ ಈ ಜಾರ್ಜ್ ಮೆಲಿಸ್ ಎಂದು ಹೇಳಬಹುದು.. ಚಿತ್ರ ಮಾಧ್ಯಮದಲ್ಲಿ ಹೊಸಹೊಸದನ್ನು ತೋರಿಸಲು ಆತ ಕಂಡು ಕೊಂಡ ಉಪಾಯಗಳು ನಮ್ಮನ್ನು ಬೆರಗುಗೊಳಿಸದೆ ಇರದು. ಸಿನೆಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಡಬಲ್ ಎಕ್ಸ್ ಪೋಸರ್ ಬಳಸಿದ್ದು ಇದೆ ಮೆಲಿಸ್. ಒಂದು ಕಡೆಯ ನೆಗಟಿವ್ ಅನ್ನು ಮುಚ್ಚಿ ಮತ್ತೊಂದು ಕಡೆ ಮಾತ್ರ ಎಕ್ಸ್ ಪೋಸ್ ಮಾಡಿ ಅದರಲ್ಲಿ ಚಿತ್ರೀಕರಿಸಿ, ಆನಂತರ ಉಳಿದರ್ಧದಲ್ಲಿ ಮತ್ತೆ ಚಿತ್ರೀಕರಿಸಿದ್ದು ಆ ಕಾಲಕ್ಕೆ ಒಂದು ದೊಡ್ಡ ಸಾಧನೆಯೇ ಸರಿ. 1902 ರಲ್ಲಿ ಬಂದ ಇಂಡಿಯನ್ ರಬ್ಬರ್ ಹೆಡ್ [ಇಂಡಿಯನ್ ರಬ್ಬರ್ ಹೆಡ ಚಿತ್ರದ ತುಣುಕು.]ನಲ್ಲಿ  ಈ ಉಪಾಯ ಬಳಸಿದ್ದು ಆವತ್ತಿನ ಜನರಿಗೆ ಅದ್ಭುತ ಎನಿಸದಿರಲಿಲ್ಲ . ಹಾಗೆಯೇ ಆತನ ಎ  ಟ್ರಿಪ್ ಟು ಮೂನ್  ಚಿತ್ರದಲ್ಲೂ ಕೂಡ ಒಂದಷ್ಟು ಹೊಸ ಹೊಸ ಉಪಾಯ ಬಳಸಲಾಗಿತು.
 ಮೆಲಿಸ್ ನ ನಂತರ ಈ ಕ್ಷೇತ್ರದಲ್ಲಿ ಹೆಚ್ಚು ತಲೆ ಕೆಡಿಸಿಕೊಂಡಿದ್ದು ರಾಬರ್ಟ್ ಡಬ್ಲ್ಯೂ ಪಾಲ್. ದಿ ಹಾಂಟೆಡ್ ಕ್ಯೂರಿಯಾಸಿಟಿ ಶಾಪ್ [1901] ವೀಡಿಯೊ ತುಣುಕಿಗಾಗಿ ಇಲ್ಲಿ ಕ್ಲಿಕ್ಕಿಸಿ ಚಿತ್ರದಲ್ಲಿ ಕೆಲವೊಂದು ಟ್ರಿಕ್ಕಿ ಶಾಟ್ ಗಳನ್ನ ಸಂಯೋಜಿಸಲಾಗಿತ್ತು. ಚಿತ್ರದ ಒಂದು ದೃಶ್ಯದಲ್ಲಿ ಶಾಪ್ ಒಳಗೆ ಒಂದು ಹೆಂಗಸಿನ ಅರ್ಧಭಾಗ ಮೊದಲು ಬಂದು ಅದರ ಹಿಂದೆ ಉಳಿದರ್ಧ ಭಾಗ ಬರುವಂತೆ, ಅಂಗಡಿಯವ ಆಕೆಯನ್ನು ಅಪ್ಪಿಕೊಳ್ಳಲು ಮುಂದಾದಾಗ ಆಕೆಯಾಗಿ ಮಮ್ಮಿಯಾಗಿ ರೂಪಾಂತರವಾಗಿ, ಆ ತಕ್ಷಣ ಅಸ್ಥಿಪಂಜರವಾಗುವಂತಹ ದೃಶ್ಯ ದ ಪರಿಣಾಮವನ್ನು ಸೃಷ್ಟಿಸಿದ್ದು ಪ್ರೇಕ್ಷಕರಿಗೆ ರೋಮಾಂಚನ ಉಂಟು ಮಾಡಿತ್ತು . ಈ ಚಿತ್ರದ ನಿರ್ದೇಶಕ ಡಬ್ಲ್ಯೂ.ಅರ. ಬೂತ್ ಆದರೂ ನಿರ್ಮಾಪಕನಾಗಿದ್ದ ಪಾಲ್ ನ ಸೃಜನಾತ್ಮಕತೆ ಇದರ ಹಿಂದೆ ಇದ್ದೆ ಇತ್ತು . 1906 ರಲ್ಲಿ ತೆರೆಗೆ ಬಂದ ದಿ ? ಮೊಟಾರಿಸ್ಟ್ [ವೀಡಿಯೊ ತುಣುಕಿಗಾಗಿ ಇಲ್ಲಿ ಕ್ಲಿಕ್ಕಿಸಿ.]ನ ಕಥೆ ಹೀಗಿದೆ . ಪ್ರವಾಸಕ್ಕೆ  ಹೊರಟ ದಂಪತಿಗಳ ಕಾರಿನ ವೇಗ ಮಿತಿ ಮೀರಿ ಕಾರು ಆಕಾಶಕ್ಕೆ ಜಿಗಿಯುತ್ತದೆ.. ಅಲ್ಲಿಂದ ಸೌರವ್ಯೂಹಕ್ಕೆ ಹೋಗಿ ಮಂಗಳ   ಗ್ರಹದ ಹೊರ ಉಂಗುರವನ್ನು ರಸ್ತೆಯನ್ನಾಗಿಸಿಕೊಳ್ಳುತ್ತದೆ .ಯಾವ ಗಣಕಯಂತ್ರವೂ ಇರದ ಕಾಲದಲ್ಲಿ ಸಿನೆಮಾ ಮಾಧ್ಯಮದಲ್ಲಿ ಏನೇ ಹೊಸದನ್ನು ಮಾಡಿದರೂ ಆವತ್ತಿಗೆ ಕ್ಯಾಮೆರಾದಲ್ಲೇ ಮಾಡಬೇಕಾಗಿತ್ತು. ಹಾಗಾಗಿ ಚಿತ್ರೀಕರಿಸುವಾಗಲೇ ಅಂದರೆ ಎಕ್ಸ್ ಪೋಸ್ ಮಾಡುವಾಗ ಬೇಕು ಬೇಕಾದ ಭಾಗಗಳನ್ನು ನೆಗಟಿವ್ ಮೇಲೆ ಎಕ್ಸ್ ಪೋಸ್ ಮಾಡಿಕೊಂಡು ಅಂತಿಮರೂಪು ಕೊಡುವುದು ಸುಲಭದ ಮಾತಾಗಿರಲಿಲ್ಲ.  ಆವತ್ತಿಗೆ ಅದೇ ಗಣನೀಯ ಸಾಧನೆ ಎಂದೇ ಹೇಳಬಹುದು. ಅದರೂ ಜಾರ್ಜ್ ಮೆಲಿಸ್ನಂತೆ ಪಾಲ್ ಚಿತ್ರಕರ್ಮಿಯಲ್ಲ  . ತನ್ನ ಕಂಪನಿಯ ಪರಿಕರಗಳನ್ನು ಮಾರಾಟಮಾಡಲು ಚಲನಚಿತ್ರವನ್ನು ಬಳಸಿಕೊಂಡನಷ್ಟೇ ಆದರೂ ಆತ ಅದಕ್ಕಾಗಿ ತಲೆಕೆಡಿಸಿಕೊಂಡದ್ದು ಮಾತ್ರ ಪ್ರಶಂಸನೀಯ. 1910ರ ವೇಳೆಗೆ ಚಿತ್ರ ನಿರ್ಮಾಣದಿಂದ ಹಿಂದೆ ಸರಿದ ಪಾಲ್ ತನ್ನ ಸ್ಟುಡಿಯೋ ಮಾರಿ ತನ್ನ ಸಿನಿಮಾಗಳನ್ನು ಸುಟ್ಟು ಹಾಕಿಬಿಟ್ಟ.
 ಈ ವಿಷಯದಲ್ಲಿ ಹೆಸರಿಸ ಬೇಕಾದ ಮತ್ತೊಬ್ಬ ಚಿತ್ರಕರ್ಮಿ ಛಾಯಾಗ್ರಾಹಕ ಜಿ.ಎ.ಸ್ಮಿತ್.1897ರಲ್ಲಿ ಸ್ವತಹ ಕೆಮೆರಾ ತಯಾರಿಸಿಕೊಂಡು  ಚಿತ್ರ ನಿರ್ಮಾಣಕ್ಕಿಳಿದ ಸ್ಮಿತ್ ಸುಮಾರು ಕಾಲ್ಪನಿಕ ಕಥಾ ಹಂದರದ ಸಿನೆಮಾಗಳನ್ನು ನಿರ್ಮಿಸಿದ.   [ಸಶೇಷ]

Tuesday, November 6, 2012

ಸೆನ್ಸಾರ್ ಪರೀಕ್ಷೆ ಪಾಸಾದದ್ದು...


ಸಿನೆಮಾವೆಲ್ಲಾ ಮಾಡಿಯಾದ ಮೇಲೆ ಜನರ ಮುಂದಿಡುವುದಕ್ಕೂ ಮುನ್ನ ದೊಡ್ಡ ಪರೀಕ್ಷೆಯೊಂದನ್ನು ಎದುರಿಸಬೇಕಾಗುತ್ತದೆ . ಅದೇ ಸೆನ್ಸಾರ್. ಸೆನ್ಸಾರ್ ಮಂಡಳಿ ಅವರ ನೀತಿ ನಿಯಮಗಳಿಗೆ ತಕ್ಕಂತೆ ಕೆಲಸ ಮಾಡುತ್ತಾರೆ. ಆದರೆ ಅದೇ ಕೆಲವೊಮ್ಮೆ ಚಿತ್ರ ನಿರ್ಮಾಪಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿ ಬಿಡುತ್ತದೆ. ಚಿತ್ರದಲ್ಲಿ ಸಿಗರೇಟು ಸೇದುವ ದೃಶ್ಯ ಇದ್ದರೆ ಆ ಶಾಟ್  ನಲ್ಲಿ ಧೂಮಪಾನ ಸೇವನೆಯ ಎಚ್ಚರಿಕೆಯ ಸಂದೇಶವನ್ನು ಹಾಕಿಬಿಡಿ ಎನ್ನುತ್ತಾರೆ. ಆದರೆ ಅದಕ್ಕೆ ನಿರ್ಮಾಪಕ/ನಿರ್ದೇಶಕ ಸಂಕಲನ ಕೇಂದ್ರ ಕ್ಕೆ ಹೋಗಿ ಆ ಶಾಟ್ ಗಳನ್ನೂ ಬೇರ್ಪಡಿಸಿ, ಅದರ ಕೆಳಗೆ ಆ ಸಂದೇಶವನ್ನು ಸೇರಿಸಿ, ಆನಂತರ ಅದನ್ನು ಆಪ್ತಿಕಲ್ಸ್  ಮಾಡಿಸಿ ನೆಗೆಟಿವ್ ಪ್ರಿಂಟ್ ಹಾಕಿಸಿ, ಆಮೇಲೆ ಅದನ್ನು ತರಬೇಕು. ಅಷ್ಟರವರೆಗೆ ಹಣ ಸಮಯ ಎರಡೂ  ಸಾಕಷ್ಟು ಖರ್ಚಾಗಿರುತ್ತದೆ. ಅದೇ ರೀತಿ ಯಾವುದಾದರೂ ಆಕ್ಷೇಪಣಾರ್ಹ ದೃಶ್ಯವೇನಾದರೂ ಇದ್ದರೆ ಅದನ್ನು ಅದನ್ನು ತೆಗೆದುಬಿಡಿ, ಅಕಸ್ಮಾತ್ ಅದರ ಗತಿಯಲ್ಲಿ ಕುಂದುಂಟಾಗುತ್ತದೆಂದರೆ ಅದಷ್ಟೇ ಅಳಿಸಿಬಿಡಿ ಎನ್ನುತಾರೆ . ಆಗಲೂ  ಮತ್ತದೇ ಪ್ರಕ್ರಿಯೆ...
ಹಾಗಾಗಿಯೇ ಸಿನಿಮಾದವರ ನಡುವೆ ಮತ್ತು ಸೆನ್ಸಾರ್ ಅಧಿಕಾರಿಗಳ ನಡುವೆ ಆಗಾಗ ಜಗ್ಗಾಟವಾಗುವುದುಂಟು.
 ಸೆನ್ಸಾರ್ ಮಂಡಳಿಯ ಉದ್ದೇಶವಿಷ್ಟೇ. ಒಬ್ಬ ನೋಡುಗನಿಗೆ ಆ  ಸಿನೆಮಾ ಯಾವುದೇ ರೀತಿಯ ದುಷ್ಪರಿಣಾಮ, ದುಷ್ಕೃತ್ಯಕ್ಕೆ  ಪ್ರೇರೇಪಣೆಯಾಗಬಾರದು ಎನ್ನುವುದು. 
ನನಗೆ ಅಲ್ಪಸ್ವಲ್ಪ ಸೆನ್ಸಾರ್ ಮಂಡಳಿಯ ಬಗ್ಗೆ ಅರಿವು ಇದ್ದುದರಿನದಲೇ ನಾನು ನಮ್ಮ ಸಿನಿಮಾ ಮಾರ್ಚ್ 23 ನ್ನು ಸಂಕಲನ ಕೇಂದ್ರದಲ್ಲೇ ಒಂದಷ್ಟು ತುಂಡರಿಸಿಬಿಟ್ಟಿದ್ದೆ. ದೃಶ್ಯ ರೂಪದಲ್ಲಿ ಯಾವುದೇ ಕತ್ತರಿಯಾಗದಂತಾಗಲು ಪ್ರಯತ್ನಿಸಿದ್ದೆ. ಮಾತಿನಲ್ಲಂತೂ ಯಾವುದೇ ರೀತಿಯ ದ್ವಂದ್ವಾರ್ಥ ಇಲ್ಲದ್ದರಿಂದ ನಮ್ಮ ಸಿನಿಮಾಕ್ಕೆ ಯಾವುದೇ ರೀತಿಯ ಕಟ್ ಬರಲಾರದು ಎನಿಸಿತ್ತು.
 ಸೆನ್ಸಾರ್ ಕಮಿಟಿಯಲ್ಲಿ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ಸದಸ್ಯರಿರುತ್ತಾರೆ. ಅವರಿಗೂ ತಾವು ಯಾವ ಸಿನೆಮಾವನ್ನು ನೋಡಲು ಹೋಗುತ್ತೇವೆ ಎಂಬುದರ ಅರಿವು ಕೊನೆಯ ಕ್ಷಣದವರೆಗೂ ಇರುವುದಿಲ್ಲ .ನಾವು ಅಂದರೆ ಸಿನಿಮಾ ನಿರ್ದೇಶಕ, ನಿರ್ಮಾಪಕರು ಸಿನಿಮಾ ಪ್ರದರ್ಶನ ಏರ್ಪಡಿಸಿ ಚಿತ್ರಮಂದಿರದ ಹೊರಗೆ ಕಾಯುತ್ತಾ ಕುಳಿತುಕೊಳ್ಳಬೇಕು. ಅವರ ಬಳಿ, ಸಿನಿಮಾದ ಸಂಪೂರ್ಣ ಬರಹದ ಪ್ರತಿ ಇರುತ್ತದೆ. ಅವರು ಸಿನಿಮಾ ನೋಡುತ್ತಾ ನೋಡುತ್ತಾ ಏನಾದರೂ ಇದ್ದಲ್ಲಿ ಅದನ್ನು ನೋಟ್ ಮಾಡಿಕೊಳ್ಳುತ್ತಾರೆ.
ನಮ್ಮ ಸಿನೆಮಾ ನೋಡುವವರೆಗೂ ಹೊರಗಡೆ ನಾನು ಗಿರಿಬಾಲು ಏನೇನೋ ಹರಟುತ್ತಾ. ಕುಳಿತಿದ್ದೆವು.  ಸಿನಿಮಾ ಮುಗಿಯಿತು. ಚಿತ್ರಮಂದಿರದಿಂದ ಹೊರಬಂದ ಸದಸ್ಯರೊಬ್ಬರು ಅಲ್ಲಿ ಇನ್ನೊಂದು ಸಿನೆಮಾ ನೋಡಲು  ಕುಳಿತಿದ್ದ ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿಯವರ ಬಳಿ ಹೋಗಿ ' ಒಳ್ಳೆ ಸಿನಿಮಾರಿ..ಚೆನ್ನಾಗಿತ್ತು...ವೆರಿ ಇಂಟರೆಸ್ಟಿಂಗ್ ' ಎಂದರು. ಅಷ್ಟರಲ್ಲಿ ಹೊರಬಂದ ಇನ್ನೊಬ್ಬ ಸದಸ್ಯರು 'ಸೂಪರ್ ಪಿಚ್ಚರ್ ಕಣ್ರೀ .....ಎಲ್ಲಿ ಅದರ ಡೈರಕ್ಟರ್  ' ಎಂದರು. ನಾನು ಕೇಳಿಯೂ ಕೇಳಿಸದವನಂತೆ ಕುಳಿತುಬಿಟ್ಟೆ. ಆಮೇಲೆ ನಿರ್ಮಾಪಕರು ಬಂದರು. ಪರಸ್ಪರ ಪರಿಚಯ ಮಾಡಿಕೊಂಡ ಮೇಲೆ 'ತುಂಬಾ ಒಳ್ಳೆ ಪಿಕ್ಚರ್ ಮಾಡಿದ್ದೀರಾ..ಎಲ್ಲಿ ನಿರ್ದೇಶಕರು?' ಎಂದರು. ಇವರೇ ಎಂದು ನಿರ್ಮಾಪಕರು ನನ್ನೆಡೆಗೆ ತೋರಿಸಿದಾಗ ಅವರು '  ಏನ್ರಿ ನಾನು ಎಲ್ಲಿ ಎಲ್ಲಿ ಅಂತ ಹುಡುಕ್ತಿದೀನಿ.. ನೀವು ಇಲ್ಲೇ ಇದ್ದು ಮಾತಾಡಲೇ ಇಲ್ಲ.. 'ಎಂದವರು ಮೆಚ್ಚುಗೆಯ ಮಾತುಗಳನ್ನಾಡಿ ಹೊರಟುಹೋದರು. 
ಆನಂತರ ಸೆನ್ಸಾರ್ ಮಂಡಳಿಯ ಅಧ್ಯಕ್ಷರು  ಕರೆದು ಎರಡು ಮಾತುಗಳನ್ನೂ , ಸ್ವಾಮೀ ನಿತ್ಯಾನಂದ ವಿಡಿಯೋವನ್ನು ಹೋಲುವ ದೃಶ್ಯವನ್ನು ಕತ್ತರಿಸುವಂತೆ ಹೇಳಿದರು.
'ಎಲ್ರೂ ಮಾಡಿದ್ದೆ ಮಾಡ್ತಾರೆ..ಕುಯ್ದದ್ದೆ ಕುಯ್ತಾರೆ..ನೀವು ಅದು ಬಿಟ್ಟು ಬೇರೇನೋ ಮಾಡಿದ್ದೀರಿ...ಗುಡ್ ಅಟ್ಟೆಂಪ್ಟ್ .ಆಲ್ ದಿ ಬೆಸ್ಟ್ ' ಎಂದರು..
ಭರವಸೆ ಮತ್ತೆ ಗರಿಗೆದರಿತು.



Sunday, November 4, 2012

ಕನ್ನಡದ ಕ್ರಾಂತಿಕಾರಿ ರಾಯಣ್ಣ ಮತ್ತು ಇಂಗ್ಲಿಷಿನ 007

ಈ ವಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ  ಬಿಡುಗಡೆಯಾಗಿದೆ. ಚಿತ್ರದ ಬಜೆಟ್ ವಿಷಯದಲ್ಲಾಗಲಿ  ಬಿಡುಗಡೆಯಾದ ಚಿತ್ರ ಮಂದಿರಗಳ
ವಿಷಯದಲ್ಲಾಗಲಿ ಕನ್ನಡಕ್ಕೊಂದು ದಾಖಲೆ ಬರೆದ ಚಿತ್ರ ಎಂದೇ  ಹೇಳಬಹುದು. ಕನ್ನಡದ  ಸೂಪರ್ ಸ್ಟಾರ್ ದರ್ಶನ್   ಚಿತ್ರ ಕನ್ನಡ  ಚಿತ್ರರಂಗದಲ್ಲೇ ಅತ್ಯಂತ ವೆಚ್ಚದ ಚಿತ್ರ ಎನ್ನುವುದು ನಿಜ . ಕನ್ನಡದ ಮಟ್ಟಿಗೆ ಒಂದು ಐತಿಹಾಸಿಕ ಸಿನೆಮಾಕ್ಕೆ ಇಷ್ಟು ಖರ್ಚು ಮಾಡಿರುವುದು ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯೇ. ತಮಿಳು ತೆಲುಗಲ್ಲಿ ಬಹುವೆಚ್ಚದ ಸಿನೆಮಾಗಳು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಮೊನ್ನೆ ಮೊನ್ನೆ ಮಲಯಾಳಂ ಭಾಷೆಯಲ್ಲೂ ' ಪಳಸಿ ರಾಜ' ಎನ್ನುವ ಅದ್ದೂರಿ ವೆಚ್ಚದ ಸಿನೆಮಾ ಬಂದಿತ್ತು . ನಮ್ಮ ಕನ್ನಡದಲ್ಲಿ ಆ ಮಟ್ಟಿಗೆ ಅಂದರೆ ಹಣಕಾಸು ವೆಚ್ಚ ಮಾಡಿ ಸಿನಿಮಾ ಮಾಡುವುದು ಸಾಧ್ಯವಾದೀತಾ..? ಎನ್ನುವ ಪ್ರಶ್ನೆಗೆ ಉತ್ತರವಾಗಿ ಸಂಗೊಳ್ಳಿ ರಾಯಣ್ಣ ಬಂದಿದೆ .
 ಇದೊಂದು ಸಿನಿಮಾವನ್ನು ನಾವು ನೋಡಲೇ ಬೇಕು. ಮತ್ತು ಮೂವತ್ತು ಕೋಟಿ ವೆಚ್ಚದ ಸಿನೆಮಾವನ್ನು ನಾವು ಉಳಿಸಿಕೊಳ್ಳಲೇಬೇಕು. ಯಾಕೆಂದರೆ ಈ ಸಿನೆಮಾ  ನಿಂತರೆ ಕನ್ನಡ ಚಿತ್ರರಂಗದ ಮಾರುಕಟ್ಟೆ  ವಿಸ್ತಾರವಾಗುವುದರಲ್ಲಿ ಸಂದೇಶವಿಲ್ಲ . ನಿರ್ಮಾಪಕರಲ್ಲಿ ಕೋಟಿ  ಕೋಟಿ  ಬಂಡವಾಳ ಹೂಡಿದರೂ ನಾವು ಗೆಲ್ಲಬಹುದು ಎಂಬ ಧೈರ್ಯ ಬರುತ್ತದೆ. ಕನ್ನಡದಲ್ಲಿ ಕೋಟಿ ಕೋಟಿ ಬಾಚಿದ ಸಿನೆಮಾಗಳಿವೆ. ಆದರೆ ಅವ್ಯಾವುವು ನಿರೀಕ್ಷಿತವಲ್ಲ . ಗಂಡುಗಲಿ ರಾಮನ ಸೋಲಿನಿಂದಾಗಿ ಕನ್ನಡ ಚಿತ್ರರಂಗ ಒಬ್ಬ ನಿರ್ಮಾಪಕನನ್ನು ದೂರಮಾಡಿಕೊಳ್ಳುವಂತಾಗಿದ್ದು ಎಲ್ಲರಿಗೂ ಗೊತ್ತಿದೆ . ಹಾಗಾಗಿ ಸಂಗೊಳ್ಳಿ ರಾಯಣ್ಣ ನ  ಯಶಸ್ಸು ಕನ್ನಡಿಗರ ಮಟ್ಟಿಗೆ, ಚಿತ್ರರಂಗದ ಮಟ್ಟಿಗೆ  ಅತ್ಯವಶ್ಯವಾಗಿದೆ.
   
ನಿರ್ದೇಶಕ ಸ್ಯಾಮ್ ಮೆಂಡೆಸ್ ಬಾಂಡ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆಂಬ ಸುದ್ಧಿ ಬಂದಾಗಲೇ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿತ್ತು . ಕಾರಣ ಸ್ಯಾಮ್ ಮೆಂಡೆಸ್ ಹೊಡೆದಾಟದ ಚಿತ್ರಗಳಿಗಿಂತ ಭಾವಾಭಿನಯದ, ಅತ್ಯುತ್ತಮ ಸೂಕ್ಷ್ಮ ಸಂವೇದಿ  ಕಥೆಯ ಸಿನಿಮಾಗಳಿಗೆ ಹೆಸರುವಾಸಿ. ಆತನ ಅಮೆರಿಕನ್ ಬ್ಯೂಟಿ , ರೋಡ್ ಟು ಪರ್ಡಿಶನ್  ಮತ್ತು ರೆವಲ್ಯೂಷನರಿ ರೋಡ್    ಇದಕ್ಕೆ ಸಾಕ್ಷಿ . ಈಗ ಸ್ಕ್ಯಫಾಲ್  ಬಂದಿದೆ. ಚಿತ್ರದ ವಿಶೇಷವೆಂದರೆ ಇಲ್ಲಿನ ಬಾಂಡ್ ಬೇರೆ ಬಾಂಡ್ ಚಿತ್ರಗಳಂತೆ ದೇಶ ದೇಶ ಸುತ್ತುವುದಿಲ್ಲ . ತೀರಾ  ತಂತ್ರಜ್ಞಾನದ  ಹಿಂದೆ ಬೀಳುವುದಿಲ್ಲ . ಈತ ಹೊಡೆದಾಟಕ್ಕೂ ಸೈ , ಶೂಟ್ ಮಾಡಲು ಸೈ ...ಚಿತ್ರದ ಪ್ರಾರಂಭದಲ್ಲಿ ಬರುವ ಚೇಸ್ ದೃಶ್ಯ ಮೈನವಿರೇಳಿಸುತ್ತದೆ . ಕಥೆ ಹೇಳುವ ಅವಶ್ಯಕತೆ ಇಲ್ಲ . ಒಂದಷ್ಟು ಜನ ಸಮಾಜ ಕಂಟಕರಿದ್ದಾರೆ. ಬಾಂಡ್ ಗೆ ಕೈ ತುಂಬಾ ಕೆಲಸವಿದೆ. ಸಹಾಯಕ್ಕೆ ಬಾಂಡ್ ಹುಡುಗಿಯಿದ್ದಾಳೆ .ನೋಡಲು ನಾವು ನೀವು ಇದ್ದೇವೆ ...