Tuesday, November 6, 2012

ಸೆನ್ಸಾರ್ ಪರೀಕ್ಷೆ ಪಾಸಾದದ್ದು...


ಸಿನೆಮಾವೆಲ್ಲಾ ಮಾಡಿಯಾದ ಮೇಲೆ ಜನರ ಮುಂದಿಡುವುದಕ್ಕೂ ಮುನ್ನ ದೊಡ್ಡ ಪರೀಕ್ಷೆಯೊಂದನ್ನು ಎದುರಿಸಬೇಕಾಗುತ್ತದೆ . ಅದೇ ಸೆನ್ಸಾರ್. ಸೆನ್ಸಾರ್ ಮಂಡಳಿ ಅವರ ನೀತಿ ನಿಯಮಗಳಿಗೆ ತಕ್ಕಂತೆ ಕೆಲಸ ಮಾಡುತ್ತಾರೆ. ಆದರೆ ಅದೇ ಕೆಲವೊಮ್ಮೆ ಚಿತ್ರ ನಿರ್ಮಾಪಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿ ಬಿಡುತ್ತದೆ. ಚಿತ್ರದಲ್ಲಿ ಸಿಗರೇಟು ಸೇದುವ ದೃಶ್ಯ ಇದ್ದರೆ ಆ ಶಾಟ್  ನಲ್ಲಿ ಧೂಮಪಾನ ಸೇವನೆಯ ಎಚ್ಚರಿಕೆಯ ಸಂದೇಶವನ್ನು ಹಾಕಿಬಿಡಿ ಎನ್ನುತ್ತಾರೆ. ಆದರೆ ಅದಕ್ಕೆ ನಿರ್ಮಾಪಕ/ನಿರ್ದೇಶಕ ಸಂಕಲನ ಕೇಂದ್ರ ಕ್ಕೆ ಹೋಗಿ ಆ ಶಾಟ್ ಗಳನ್ನೂ ಬೇರ್ಪಡಿಸಿ, ಅದರ ಕೆಳಗೆ ಆ ಸಂದೇಶವನ್ನು ಸೇರಿಸಿ, ಆನಂತರ ಅದನ್ನು ಆಪ್ತಿಕಲ್ಸ್  ಮಾಡಿಸಿ ನೆಗೆಟಿವ್ ಪ್ರಿಂಟ್ ಹಾಕಿಸಿ, ಆಮೇಲೆ ಅದನ್ನು ತರಬೇಕು. ಅಷ್ಟರವರೆಗೆ ಹಣ ಸಮಯ ಎರಡೂ  ಸಾಕಷ್ಟು ಖರ್ಚಾಗಿರುತ್ತದೆ. ಅದೇ ರೀತಿ ಯಾವುದಾದರೂ ಆಕ್ಷೇಪಣಾರ್ಹ ದೃಶ್ಯವೇನಾದರೂ ಇದ್ದರೆ ಅದನ್ನು ಅದನ್ನು ತೆಗೆದುಬಿಡಿ, ಅಕಸ್ಮಾತ್ ಅದರ ಗತಿಯಲ್ಲಿ ಕುಂದುಂಟಾಗುತ್ತದೆಂದರೆ ಅದಷ್ಟೇ ಅಳಿಸಿಬಿಡಿ ಎನ್ನುತಾರೆ . ಆಗಲೂ  ಮತ್ತದೇ ಪ್ರಕ್ರಿಯೆ...
ಹಾಗಾಗಿಯೇ ಸಿನಿಮಾದವರ ನಡುವೆ ಮತ್ತು ಸೆನ್ಸಾರ್ ಅಧಿಕಾರಿಗಳ ನಡುವೆ ಆಗಾಗ ಜಗ್ಗಾಟವಾಗುವುದುಂಟು.
 ಸೆನ್ಸಾರ್ ಮಂಡಳಿಯ ಉದ್ದೇಶವಿಷ್ಟೇ. ಒಬ್ಬ ನೋಡುಗನಿಗೆ ಆ  ಸಿನೆಮಾ ಯಾವುದೇ ರೀತಿಯ ದುಷ್ಪರಿಣಾಮ, ದುಷ್ಕೃತ್ಯಕ್ಕೆ  ಪ್ರೇರೇಪಣೆಯಾಗಬಾರದು ಎನ್ನುವುದು. 
ನನಗೆ ಅಲ್ಪಸ್ವಲ್ಪ ಸೆನ್ಸಾರ್ ಮಂಡಳಿಯ ಬಗ್ಗೆ ಅರಿವು ಇದ್ದುದರಿನದಲೇ ನಾನು ನಮ್ಮ ಸಿನಿಮಾ ಮಾರ್ಚ್ 23 ನ್ನು ಸಂಕಲನ ಕೇಂದ್ರದಲ್ಲೇ ಒಂದಷ್ಟು ತುಂಡರಿಸಿಬಿಟ್ಟಿದ್ದೆ. ದೃಶ್ಯ ರೂಪದಲ್ಲಿ ಯಾವುದೇ ಕತ್ತರಿಯಾಗದಂತಾಗಲು ಪ್ರಯತ್ನಿಸಿದ್ದೆ. ಮಾತಿನಲ್ಲಂತೂ ಯಾವುದೇ ರೀತಿಯ ದ್ವಂದ್ವಾರ್ಥ ಇಲ್ಲದ್ದರಿಂದ ನಮ್ಮ ಸಿನಿಮಾಕ್ಕೆ ಯಾವುದೇ ರೀತಿಯ ಕಟ್ ಬರಲಾರದು ಎನಿಸಿತ್ತು.
 ಸೆನ್ಸಾರ್ ಕಮಿಟಿಯಲ್ಲಿ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ಸದಸ್ಯರಿರುತ್ತಾರೆ. ಅವರಿಗೂ ತಾವು ಯಾವ ಸಿನೆಮಾವನ್ನು ನೋಡಲು ಹೋಗುತ್ತೇವೆ ಎಂಬುದರ ಅರಿವು ಕೊನೆಯ ಕ್ಷಣದವರೆಗೂ ಇರುವುದಿಲ್ಲ .ನಾವು ಅಂದರೆ ಸಿನಿಮಾ ನಿರ್ದೇಶಕ, ನಿರ್ಮಾಪಕರು ಸಿನಿಮಾ ಪ್ರದರ್ಶನ ಏರ್ಪಡಿಸಿ ಚಿತ್ರಮಂದಿರದ ಹೊರಗೆ ಕಾಯುತ್ತಾ ಕುಳಿತುಕೊಳ್ಳಬೇಕು. ಅವರ ಬಳಿ, ಸಿನಿಮಾದ ಸಂಪೂರ್ಣ ಬರಹದ ಪ್ರತಿ ಇರುತ್ತದೆ. ಅವರು ಸಿನಿಮಾ ನೋಡುತ್ತಾ ನೋಡುತ್ತಾ ಏನಾದರೂ ಇದ್ದಲ್ಲಿ ಅದನ್ನು ನೋಟ್ ಮಾಡಿಕೊಳ್ಳುತ್ತಾರೆ.
ನಮ್ಮ ಸಿನೆಮಾ ನೋಡುವವರೆಗೂ ಹೊರಗಡೆ ನಾನು ಗಿರಿಬಾಲು ಏನೇನೋ ಹರಟುತ್ತಾ. ಕುಳಿತಿದ್ದೆವು.  ಸಿನಿಮಾ ಮುಗಿಯಿತು. ಚಿತ್ರಮಂದಿರದಿಂದ ಹೊರಬಂದ ಸದಸ್ಯರೊಬ್ಬರು ಅಲ್ಲಿ ಇನ್ನೊಂದು ಸಿನೆಮಾ ನೋಡಲು  ಕುಳಿತಿದ್ದ ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿಯವರ ಬಳಿ ಹೋಗಿ ' ಒಳ್ಳೆ ಸಿನಿಮಾರಿ..ಚೆನ್ನಾಗಿತ್ತು...ವೆರಿ ಇಂಟರೆಸ್ಟಿಂಗ್ ' ಎಂದರು. ಅಷ್ಟರಲ್ಲಿ ಹೊರಬಂದ ಇನ್ನೊಬ್ಬ ಸದಸ್ಯರು 'ಸೂಪರ್ ಪಿಚ್ಚರ್ ಕಣ್ರೀ .....ಎಲ್ಲಿ ಅದರ ಡೈರಕ್ಟರ್  ' ಎಂದರು. ನಾನು ಕೇಳಿಯೂ ಕೇಳಿಸದವನಂತೆ ಕುಳಿತುಬಿಟ್ಟೆ. ಆಮೇಲೆ ನಿರ್ಮಾಪಕರು ಬಂದರು. ಪರಸ್ಪರ ಪರಿಚಯ ಮಾಡಿಕೊಂಡ ಮೇಲೆ 'ತುಂಬಾ ಒಳ್ಳೆ ಪಿಕ್ಚರ್ ಮಾಡಿದ್ದೀರಾ..ಎಲ್ಲಿ ನಿರ್ದೇಶಕರು?' ಎಂದರು. ಇವರೇ ಎಂದು ನಿರ್ಮಾಪಕರು ನನ್ನೆಡೆಗೆ ತೋರಿಸಿದಾಗ ಅವರು '  ಏನ್ರಿ ನಾನು ಎಲ್ಲಿ ಎಲ್ಲಿ ಅಂತ ಹುಡುಕ್ತಿದೀನಿ.. ನೀವು ಇಲ್ಲೇ ಇದ್ದು ಮಾತಾಡಲೇ ಇಲ್ಲ.. 'ಎಂದವರು ಮೆಚ್ಚುಗೆಯ ಮಾತುಗಳನ್ನಾಡಿ ಹೊರಟುಹೋದರು. 
ಆನಂತರ ಸೆನ್ಸಾರ್ ಮಂಡಳಿಯ ಅಧ್ಯಕ್ಷರು  ಕರೆದು ಎರಡು ಮಾತುಗಳನ್ನೂ , ಸ್ವಾಮೀ ನಿತ್ಯಾನಂದ ವಿಡಿಯೋವನ್ನು ಹೋಲುವ ದೃಶ್ಯವನ್ನು ಕತ್ತರಿಸುವಂತೆ ಹೇಳಿದರು.
'ಎಲ್ರೂ ಮಾಡಿದ್ದೆ ಮಾಡ್ತಾರೆ..ಕುಯ್ದದ್ದೆ ಕುಯ್ತಾರೆ..ನೀವು ಅದು ಬಿಟ್ಟು ಬೇರೇನೋ ಮಾಡಿದ್ದೀರಿ...ಗುಡ್ ಅಟ್ಟೆಂಪ್ಟ್ .ಆಲ್ ದಿ ಬೆಸ್ಟ್ ' ಎಂದರು..
ಭರವಸೆ ಮತ್ತೆ ಗರಿಗೆದರಿತು.3 comments: