Wednesday, February 1, 2017

ಆಸ್ಕರ್ ಕಣದಲ್ಲಿ ನಾವೇಕೆ ಗೆಲ್ಲುತ್ತಿಲ್ಲ...

ಸಧ್ಯಕ್ಕೆ ಆಸ್ಕರ್ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ. ಭಾರತಕ್ಕೆ ಇನ್ನೂ ಮರೀಚಿಕೆಯಾಗಿರುವ ಪ್ರಶಸ್ತಿಯಿದು. ಈ ಸಾರಿ ತಮಿಳಿನ ವಿಸಾರನೈ ಚಿತ್ರವನ್ನು ಆಸ್ಕರ್ ವಿಭಾಗಕ್ಕೆ ಅದ್ಯಾವ ಪುಣ್ಯಾತ್ಮ ಕಳುಹಿಸಿದ್ದರೋ? ಹಾಗೆ ನೋಡಿದರೆ ಸುಮ್ಮನೆ ಇಷ್ಟು ವರ್ಷಗಳ ಆಸ್ಕರ್ ಇತಿಹಾಸ ತೆರೆದು ನೋಡಿದರೆ ಯಾವ ಯಾವ ರೀತಿಯ ಚಿತ್ರಗಳು ಪುರಸ್ಕಾರಕ್ಕೆ ಒಳಗಾಗಿವೆ ಎನ್ನುವ ಅಂದಾಜು ಸಿಕ್ಕಿಬಿಡುತ್ತದೆ. ಆದರೆ ಭಾರತೀಯ ಚಿತ್ರಗಳನ್ನು ಇಲ್ಲಿಂದಲೇ ಆಯ್ಕೆ ಮಾಡಿ ಕಳುಹಿಸುವ ನಮ್ಮ ತೀರ್ಪುದಾರರ ಆಯ್ಕೆಯಲ್ಲಿಯೇ ಎಡವಟ್ಟುಗಳಿರುತ್ತವೆ.
ವಿಸಾರನೈ ಒಳ್ಳೆಯ ಚಿತ್ರವಿರಬಹುದು. ವಾಸ್ತವವನ್ನು ಎದುರಿಗೆ ತಂದುನಿಲ್ಲಿಸುವ ದುರಂತಮಯ ಚಿತ್ರವಿರಬಹುದು. ಆದರೆ ಆಸ್ಕರ್ ಗೆ ಅದೇಕೆ ಅರ್ಹವಾಗುತ್ತದೆ..? ಮದರ್ ಇಂಡಿಯ ಚಿತ್ರದಿಂದ ಪ್ರಾರಂಭವಾಯಿತು ನಮ್ಮ ಆಸ್ಕರ್ ಪಯಣ. ಇಲ್ಲಿಯವರೆಗೆ ಸರಿಸುಮಾರು ನಲವತ್ತೊಂಭತ್ತು ಚಿತ್ರಗಳು ಆಸ್ಕರ್ ಬಾಗಿಲು ತಟ್ಟಿ ವಾಪಸ್ಸಾಗಿವೆ. ಆದರೆ ನಾಮ ನಿರ್ದೇಶನ ವಾಗಿರುವುದು ಕೇವಲ ಮೂರೇ ಮೂರು ಚಿತ್ರಗಳು. ಜಗತ್ತಿನಲ್ಲಿಯೇ ಚಲನಚಿತ್ರಗಳನ್ನು ಅತಿ ಹೆಚ್ಚು ಸಿನಿಮಾಗಳನ್ನು ತಯಾರಿಸುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.  ದಾಖಲೆ ಸಂಖ್ಯೆಯ ಚಿತ್ರಗಳನ್ನು ನಿರ್ಮಿಸುವ ನಮ್ಮ ಭಾರತೀಯ ಚಿತ್ರರಂಗದ ಒಂದೇ ಒಂದು ಚಿತ್ರವೂ ಆಸ್ಕರ್ ಕಣದಲ್ಲಿ ಗೆದ್ದು ಬರದೆ ಇರುವುದು ಬೇಸರದ ಸಂಗತಿಯ ಜೊತೆಗೆ ಸಿನೆಮಕರ್ಮಿಗಳು ಗಂಭೀರವಾಗಿ ತೆಗೆದುಕೊಳ್ಳಬಹುದಾದ ವಿಷಯವೂ ಆಗಿದೆ. ಇಷ್ಟೆಲ್ಲಾ ಚಿತ್ರಗಳನ್ನು ಎಲ್ಲಾ ವಿಭಾಗದಲ್ಲೂ ತಯಾರಿಸುವ ನಾವುಗಳು ಅದೆಲ್ಲಿ ಸೋಲುತ್ತಿದ್ದೇವೆ. ತಾಂತ್ರಿಕವಾಗಿ, ಸೈದ್ಧಾಂತಿಕವಾಗಿ ಸಿನೆಮಾಗಳಲ್ಲಿ ಒಂದು ಮಟ್ಟ ಮೇಲಿರುವ ನಮ್ಮ ಸಿನೆಮಾಗಳೂ ಅದೆಲ್ಲಿ ಸೋಲುತ್ತಿವೆ ಎಂಬುದೇ ಪ್ರಶ್ನೆ.ಸುಮ್ಮನೆ ಗಮನಿಸಿದರೆ ನಮ್ಮ ಆಸ್ಕರ್ ಕಣದಲ್ಲಿ ತೀರ್ಪುಗಾರರ ಆಯ್ಕೆಗಿಂತಲೂ ಅಲ್ಲಿಗೆ ಚಿತ್ರಗಳನ್ನು ಆಯ್ಕೆ ಮಾಡಿ ಕಳುಹಿಸುವ ನಮ್ಮ ತೀರ್ಪುಗಾರರ ಆಯ್ಕೆ ಸಮಂಜಸ ಅಲ್ಲವೇನೋ ಎನಿಸುತ್ತದೆ.
ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗೆ ಒಂದಷ್ಟು ಮಾನದಂಡಗಳು ಇದ್ದೆ ಇರುತ್ತವೆ. ಅದರಲ್ಲೂ ಆಸ್ಕರ್ ಕಣಕ್ಕೆ ಸಿನಿಮಾ ಕಳುಹಿಸುವಾಗ ಸಿನಿಮಾದ ಸುಮಾರು ಮೂರು ನೂರು ಡಿವಿಡಿ ಪ್ರತಿಗಳನ್ನು  ಕಳುಹಿಸಿಕೊಡಬೇಕು ಎಂದರೆ ಅದರ ಮುಂದಿನ ಆಯ್ಕೆಯ ಪ್ರಕ್ರಿಯೆಗಳ ಕ್ಲಿಷ್ಟತೆ ಅಂದಾಜಿಗೆ ಬರುತ್ತದೆ. ಹಾಗೆಯೇ ಅದರ ಬಗೆಗಿನ ಮಾಹಿತಿಯನ್ನು ಹೆಕ್ಕಿ ತೆಗೆಯುವುದು ಈವತ್ತು ಬೆರಳಿನ ತುದಿಯಲ್ಲಿದೆ. ಗೂಗಲ್ ಮಾಡಿದರೆ ಎಲ್ಲವೂ ಅಂಗೈಯಲ್ಲಿರುತ್ತದೆ. ಆದರೆ ಅದಕ್ಕೂ ಮೀರಿ ಆಸ್ಕರ್ ಜಯಿಸಿದ ಚಿತ್ರಗಳನ್ನು ಅವುಗಳ ವಿಶೇಷತೆಗಳನ್ನೂ ಅಧ್ಯಯನ ಮಾಡಬೇಕಾಗುತ್ತದೆ. ಅದನ್ನೆಲ್ಲಾ ಅರ್ಥೈಸಿಕೊಂಡು ಸಿನಿಮಾ ಆಯ್ಕೆ ಮಾಡುವುದು ಕಷ್ಟದ ಕೆಲಸ ನಿಜ. ಹಾಗೆಯೇ ಪ್ರಶಸ್ತಿಗಾಗಿಯೇ ಸಿನಿಮಾ ನಿರ್ದೇಶಿಸಿ ಎಂದು ನಿರ್ದೇಶಕರಿಗೆ ತಾಕೀತು ಮಾಡಲಾಗುತ್ತದೆಯೇ?  ಸಿನಿಮಾ ಒಂದು ಕತೆಯ ನಿರೂಪಣ ಮಾಧ್ಯಮ. ಹಾಗಾಗಿ ಒಂದೊಳ್ಳೆ ಕತೆಯನ್ನು ಒಂದು ಪರಿಣಾಮಕಾರಿ ನಿರೂಪಣೆಯ ಮೂಲಕ ಪರದೆಯ ಮೇಲೆ ತೆರೆದಿಡುವುದು ಸಿನಿಮಾ. ಹಾಗೆ ನಿರೂಪಿಸಲಾಗುವ ನಮ್ಮದೇ ಚಿತ್ರಕ್ಕೆ ನಮ್ಮದೇ ಸೊಗಡಿನ ನಮ್ಮದೇ ಸಂಸ್ಕೃತಿ ಇತಿಹಾಸವನ್ನು ಹೇಳುವ ಹಾಗೆಯೇ ಒಂದು ಕತೆಯನ್ನು ಅಷ್ಟೇ ಅರ್ಥಗರ್ಭಿತವಾಗಿ ತೆರೆದಿಡುವ ಚಿತ್ರಕ್ಕೆ ಪ್ರಶಸ್ತಿ ಸಿಗುತ್ತದೆ. ಹಾಗಾದರೆ ನಮ್ಮಲ್ಲಿ ಅಂತಹ ಚಿತ್ರ ಬಂದೆ ಇಲ್ಲವೇ ಎನ್ನುವುದೇ ಪ್ರಶ್ನೆ.
ಆದರೆ ಇತಿಹಾಸ ಗಮನಿಸಿದಾಗ ಭಾರತದಿಂದ ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗಕ್ಕೆ ಕಳುಹಿಸಲಾದ ಸಿನಿಮಾಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಅವುಗಳ ಆಯ್ಕೆ ಸರಿಯಾದುದೇ ಎನ್ನುವ ಪ್ರಶ್ನೆ ಹುಟ್ಟೇ ಹುಟ್ಟುತ್ತದೆ. ಅಥವಾ ಆ ವರ್ಷದಲ್ಲಿ ಆ ಸಿನಿಮಾ ಬಿಟ್ಟು ಅದಕ್ಕಿಂತ ಒಳ್ಳೆಯ ಗುಣಮಟ್ಟವುಳ್ಳ ಚಿತ್ರ ಬಂದಿರಲಿಲ್ಲವೇ ಎನ್ನುವ ಸಂಶಯವೂ ಕಾಡುತ್ತದೆ. ಮದರ್ ಇಂಡಿಯಾ ನಮ್ಮ ದೇಶದಿಂದ ಆಯ್ಕೆಯಾದ ಮೊದಲ ಚಿತ್ರ. ಅದಾದ ನಂತರ ಗಮನಿಸಿದರೆ ಕೇವಲ ಒಂದಷ್ಟು ಸಿನೆಮಾಗಳ ಆಯ್ಕೆ ಸಮಾಧಾನ ತರಿಸುತ್ತದೆ. ತಮಿಳಿನ ನಾಯಗನ್, ದೈವ ಮಗನ್, ಕುರುದಿಪುನಲ್, ಅಂಜಲಿ, ದೇವರ ಮಗನ್, ಇಂಡಿಯನ್, ಜೀನ್ಸ್, ಹೇರಾಮ್ ಹಾಗೆಯೇ ಹಿಂದಿಯ ಸಾಗರ್, ಹೆನ್ನಾ, ಏಕಲವ್ಯ ಮುಂತಾದ ಚಿತ್ರಗಳನ್ನು ಅದ್ಯಾವ ಭರವಸೆಯ ಮೇಲೆ ಆಯ್ಕೆ ಮಾಡಿ ಕಳುಹಿಸಲಾಗಿತ್ತು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ ಎನ್ನಬಹುದು. ಏಕೆಂದರೆ ಆಸ್ಕರ್ ಕಣಕ್ಕೆ ಕಳುಹಿಸಲಾದ ಚಿತ್ರಗಳಲ್ಲಿ ಕೆಲವು ಹಾಲಿವುಡ್, ವಿದೇಶಿ, ಹಿಂದಿ ಚಿತ್ರದ ನಕಲಾಗಿದ್ದವು. ಮತ್ತವು ಇಲ್ಲಿಯ ಮಟ್ಟಕ್ಕೆ ಉತ್ತಮ ಎನಿಸುತ್ತಿತ್ತಾದರೂ ಆಸ್ಕರ್ ಕಣಕ್ಕೆ ಬೇಕಾದ ಯಾವ ಅಂಶಗಳು ಆಯ್ಕೆ ಮಾಡುವವರಿಗೆ ಕಾಣಿಸಿದವು ಎಂಬುದು ಪ್ರಶ್ನೆ ಅಲ್ಲವೇ..ಉದಾಹರಣೆಗೆ ತಮಿಳಿನ ಜೀನ್ಸ್ ತಾಂತ್ರಿಕವಾಗಿ ಅದ್ಭುತವಾಗಿದ್ದ ಚಿತ್ರ ನಿಜ. ಆದರೆ ಜೀನ್ಸ್ ಚಿತ್ರ ಅತ್ಯುತ್ತಮ ವಿಶುಯಲ್ ಎಫೆಕ್ಟ್ಸ್ ವಿಭಾಗಕ್ಕೆ ಅದು ಸ್ಪರ್ಧಿಸಿರಲಿಲ್ಲ ಅಲ್ಲವೇ..? ಅತ್ಯುತ್ತಮ ವಿದೇಶಿ ಚಿತ್ರ ವಿಭಾಗಕ್ಕೆ ಜೀನ್ಸ್ ಚಿತ್ರವನ್ನು ಆಯ್ಕೆ ಮಾಡಿದ್ದು ಯಾಕೆ? ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಸ್ವಂತಿಕೆಯನ್ನು ಬಿತ್ತರಿಸುತ್ತ ಸೊಗಡನ್ನು ಬೆಸೆದುಕೊಂಡ, ಇಲ್ಲಿಯದ್ದೆ ಕತೆ ಎನಿಸುವ, ಇಲ್ಲಿಯದೇ ನಿರೂಪಣೆ ಎನಿಸುವ ಯಾವುದೇ ನಿರೂಪಣೆ ಕಾಣದ ಚಿತ್ರಗಳನ್ನು ಆಸ್ಕರ್ ಕಣಕ್ಕೆ ಕಳುಹಿಸಿದ ಪರಿಣಾಮಕ್ಕೆ ಫಲಿತಾಂಶ ಸಿಕ್ಕೆ ಸಿಕ್ಕಿದೆ. ಈ ಸಾರಿಯೂ ತಮಿಳಿನ ವಿಸಾರನೈ ಚಿತ್ರ ಆಯ್ಕೆ ಮಾಡಿದ್ದು ಯಾಕೆ ಎಂಬುದು ಪ್ರಶ್ನೆ. ಆರು ದಶಕಗಳಿಂದ ಭಾರತ ಸ್ಪರ್ಧೆಯಲ್ಲಿ ಮೊದಲ ಪ್ರಾರಂಭದ ಕದವನ್ನೂ ತಟ್ಟದೆ ಹಾಗೆಯೇ ಬೌನ್ಸ್ ಆಗಿತ್ತಿರುವುದಕ್ಕೆ ಏಕೆ ಎಂಬುದನ್ನು ಅರ್ಥೈಸಿಕೊಳ್ಳದೆ, ವಿಸ್ತೃತವಾಗಿ ಚರ್ಚಿಸದೆ ತೆಗೆದುಕೊಳ್ಳುವ ನಿರ್ಧಾರವೇ ಇದಕ್ಕೆ ಕಾರಣ ಎಂಬುದಾಗಿ ಸ್ಪಷ್ಟವಾಗಿ ಹೇಳಬಹುದು. ನಮ್ಮ ದೇಶದ ಮಾನದಂಡಗಳಿಗೆ ಸಿನಿಮಾ ಆಯ್ಕೆ  ಮಾಡುವುದು ಬೇರೆ, ವಿದೇಶಿ ನೆಲಕ್ಕೆ ಆಯ್ಕೆ ಮಾಡುವುದು ಬೇರೆ. ಎರಡಕ್ಕೂ ವ್ಯತ್ಯಾಸವಿರುತ್ತದೆ. ಅದನ್ನು ಮೊದಲಿಗೆ ನಮ್ಮ ಫಿಲಂ ಫೆಡರೇಶನ್ ಆಫ್ ಇಂಡಿಯಾ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿನ ಸದಸ್ಯರು ಅಧ್ಯಯನ ಮಾಡಬೇಕಾಗುತ್ತದೆ. ಬಂದು ಬೀಳುವ ರಾಶಿಗಟ್ಟಲೆ ಸಿನೆಮಾಗಳಲ್ಲಿ ಸೋಸಿ ಕಳುಹಿಸುವ ಕೆಲಸ ಸುಲಭದ್ದಲ್ಲವಾದರೂ ವಿಸ್ತೃತವಾದ ಅಧ್ಯಯನ ಮತ್ತು ಚರ್ಚೆಯಿಂದ ಅದನ್ನು ಸಾಧ್ಯವಾಗಿಸಬಹುದು. ಕನ್ನಡದ ತಾಯಿ ಮಮತೆ ಸೂಪರ್ ಹಿಟ್ ಆಗಿರಬಹುದು, ಅದನ್ನು ಆಸ್ಕರ್ ಕಣಕ್ಕೆ ಕಳುಹಿಸಲಾಗುತ್ತದೆಯೇ.. ಇಲ್ಲ ಎಂದಾದಲ್ಲಿ ಅದರ ಮೂಲ ತಮಿಳು ಚಿತ್ರವನ್ನು ಕಳುಹಿಸಿದ್ದು ಹೇಗೆ..?
ಇಲ್ಲಿ ಸಿನಿಮಾದ ವಸ್ತುವುಗಿಂತ ಅದರ ಹಿನ್ನೆಲೆ ಕೆಲಸ ಮಾಡಿರುವುದು ಹಲವು ಬಾರಿ ಎಲ್ಲರ ಗಮನಕ್ಕೆ ಬಂದಿದೆ. ಆಮೀರ್ ಖಾನ್ ನಿರ್ಮಾಣದ ಧೋಬಿ ಘಾಟ್ ಮತ್ತು ಅನುರಾಗ್ ಕಶ್ಯಪ್ ನಿರ್ಮಾಣದ ಉಡಾನ್ ಚಿತ್ರಗಳ ಕಣದಲ್ಲಿ ಕೊನೆಗೆ ಆಯ್ಕೆಯಾದದ್ದು ಧೋಬಿ ಘಾಟ್. ಹಾಗೆ ನೋಡಿದರೆ ಉಡಾನ್ ಚಿತ್ರದಲ್ಲಿನ ದಟ್ಟತೆ ಧೋಬಿಘಾಟ್ ಚಿತ್ರದಲ್ಲಿರಲಿಲ್ಲ. ಹಾಗೆಯೇ ಏಕಲವ್ಯ ಚಿತ್ರವನ್ನು ಆಯ್ಕೆ ಮಾಡಿದ್ದು ಅಷ್ಟು ಸಮಂಜಸ ಅಲ್ಲವೇ ಅಲ್ಲ. ಪಾಶ್ಚಿಮಾತ್ಯ ಚಿತ್ರಗಳ ನಿರೂಪಣೆಯನ್ನೇ ಅನುಕರಿಸುವ ನಮ್ಮಲ್ಲಿನ ಚಿತ್ರಗಳು ನಮಗೆ ಅದ್ಭುತ ಎನಿಸಬಹುದು. ಆದರೆ ಆಸ್ಕರ್ ಕಣಕ್ಕೆ ಬೇಕಾದದ್ದು ದಟ್ಟವಾದ ಭಿನ್ನ ನಿರೂಪಣೆಯ ಹಾಗೂ ಆಯಾ ದೇಶವನ್ನು ಪ್ರತಿನಿಧಿಸುವ ಚಿತ್ರಗಳು. ಆ ನಿಟ್ಟಿನಲ್ಲಿ ನಮ್ಮಲ್ಲಿನ ಆಯ್ಕೆ ಓಕೆ ಎನಿಸುವುದಿಲ್ಲ.
ಅದರಲ್ಲೂ ಈ ವಿಷಯದಲ್ಲಿ ನಾವು ಅಂದರೆ ಕನ್ನಡದವರು ಲೆಕ್ಕದಲ್ಲೇ ಇಲ್ಲ. ಮೂರು ಸಾವಿರ ಸಿನೆಮಾಗಳ ಸರದಾರರು ನಾವು. ರಾಷ್ಟ್ರ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ನಮ್ಮದಾಗಿಸಿಕೊಂಡವರು. ನಮ್ಮ ಸಿನೆಮಾಗಳತ್ತ ಆಸ್ಕರ್ ಆಯ್ಕೆ ಸಮಿತಿ ಕಣ್ಣೆತ್ತಿ ನೋಡುವುದಿಲ್ಲವೋ ಅಥವಾ ನಮ್ಮವರೇ ನಮಗಲ್ಲ ಆಸ್ಕರ್ ಎಂದು ಸುಮ್ಮನಿದ್ದು ಬಿಡುತ್ತಾರೋ ಗೊತ್ತಿಲ್ಲ. ಮಾತೆತ್ತಿದರೆ ತಮಿಳು ಚಿತ್ರರಂಗದ ಅದರಲ್ಲೂ ಕಮಲ್ ಹಾಸನ್ ಅಭಿನಯದ ಚಿತ್ರಗಳನ್ನು ಹಿಂದೆ ಮುಂದೆ ನೋಡದೆ ಆಯ್ಕೆ ಮಾಡಿ ಬಿಡುವ ಸಮಿತಿ ಬೇರೆ ಭಾಷೆಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡ ಉದಾಹರಣೆ ತೀರಾ ಕಡಿಮೆ. ಎರಡು ಬೆಂಗಾಲಿ, ಮೂರು ಮರಾಠಿ,  ಒಂದು ತೆಲುಗು, ಎರಡು ಮಲಯಾಳಂ, ಒಂದು ಗುಜರಾತಿ ಬಿಟ್ಟರೆ ಹಿಂದಿ ಮತ್ತು ತಮಿಳು ಚಿತ್ರಗಳನ್ನೇ ಆಯ್ಕೆ ಸಮಿತಿ ಆಯ್ಕೆ ಮಾಡಿ ಕಳುಹಿಸಿಬಿಟ್ಟಿದೆ. ಆದರೆ ಅವುಗಳನ್ನು ಬುದ್ದಿವಂತಿಕೆಯಿಂದ ಆಯ್ಕೆ ಮಾಡದೆ ಪೂರ್ವಗ್ರಹಗಳನ್ನೊಳಗೊಂಡ ಮಾನದಂಡದ ಮೂಲಕ ಆಯ್ಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಹಾಗಾಗಿ ಬೇರೆ ಬೇರೆ ಭಾಷೆಗಳಲ್ಲಿನ ಉತ್ತಮವಾದ ಅರ್ಹ ಚಿತ್ರಗಳು ಇಲ್ಲಿಂದಲೇ ಅನರ್ಹಗೊಂಡಿವೆ.

ಆಸ್ಕರ್ ದೊಡ್ಡ ಪ್ರಶಸ್ತಿಯೇ ಇರಬಹುದು, ಆದರೆ ಅದೇ ಅಂತಿಮವಲ್ಲ, ಅದಕ್ಕೂ ಮೀರಿದ್ದು ಸಿನಿಮಾ ಎಂದೆಲ್ಲಾ ಮಾತನಾಡಬಹುದು. ಆದರೆ ಅದೆಲ್ಲಾ ಹುಳಿ ದ್ರಾಕ್ಷಿ ಕತೆಯಂತಾಗಿಬಿಡುತ್ತದೆ. ಹಾಗಾಗಿ ಸಾವಿರಾರು ಚಿತ್ರಗಳು ವರ್ಷಕ್ಕೆ ತಯಾರಾಗುವ ಭಾರತದಲ್ಲಿ ಆಸ್ಕರ್ ಪ್ರಶಸ್ತಿಯನ್ನು ನಮ್ಮದಾಗಿಸಿಕೊಳ್ಳುವ ಚಿತ್ರ ಖಂಡಿತ ಇದ್ದೇ ಇದೆ. ಅಂತಹ ಪ್ರತಿಭಾವಂ ನಿರ್ದೇಶಕರೂ ಚಿತ್ರಕರ್ಮಿಗಳೂ ಇದ್ದಾರೆ. ಆದರೆ ಅದನ್ನು ಹೆಕ್ಕಿ ತೆಗೆದು ಗುರುತಿಸಿ ಕಳುಹಿಸುವಲ್ಲಿ ಆಯ್ಕೆ ಸಮಿತಿ ನಿಗಾವಹಿಸಬೇಕಾಗುತ್ತದೆ. ಹಾಗಾದಾಗ ಖಂಡಿತ ಆಸ್ಕರ್ ಕಣದಲ್ಲಿ ಭಾರತದ ಬಾವುಟ ಹಾರಾಡದೆ ಇರದು.

Sunday, January 29, 2017

ಆಟೋಗ್ರಾಫ್ ಮತ್ತು ಜೋಗಿ...

ನಮ್ಮೂರಿನಲ್ಲಿದ್ದ ವಿಷ್ಣು ಅಭಿಮಾನಿಯೊಬ್ಬ ವಿಷ್ಣುವರ್ಧನ್ ಅವರಿಗೆ ನಾನು ನಿಮ್ಮ ಅಭಿಮಾನಿ ಎಂದು ಪತ್ರ ಬರೆದಿದ್ದ. ವಿಷ್ಣುವರ್ಧನ್ ತಮ್ಮ ಫೋಟೋವೊಂದಕ್ಕೆ ಸಹಿ ಹಾಕಿ ಕಳುಹಿಸಿದ್ದರು, ಅವನು ಊರಿಗೆಲ್ಲಾ ತೋರಿಸಿಕೊಂಡು ಸಂಭ್ರಮ ಪಟ್ಟಿದ್ದ.
ನಾನು ಅಭಿಮಾನದ ಆಟೋಗ್ರಾಫ್ ಗೆ ತೆರೆದುಕೊಂಡದ್ದು ಹೀಗೆ. ನೆಚ್ಚಿನ ನಟ, ನಿರ್ದೇಶಕ ನಟಿ ಹೀಗೆ ಯಾರೇ ಸಿಕ್ಕರೂ ಅವರದ್ದೊಂದು ಆಟೋಗ್ರಾಫ್ ಪಡೆದುಕೊಳ್ಳಬೇಕು ಎಂಬುದು ಆವಾಗ ಗೊತ್ತಾಯಿತು. ಸರಿ, ಅದನ್ನು ಇಟ್ಟುಕೊಂಡು ಏನು ಮಾಡುವುದು? ನಾನು ಅದನ್ನೇ ಕೇಳಿದ್ದೆ. ಅವನು ಇದು ಅಣ್ಣನ ಆಟೋಗ್ರಾಫ್..ಅದಿದ್ರೆ ವಿಷ್ಣು ಅಣ್ಣಾನೆ ಹತ್ರ ಇದ್ದಂಗೆ ಎಂದೇನೋ ಹೇಳಿ, ಆನಂತರ ಮುಂದೇನು ಹೇಳಬೇಕೆಂದುಗೊತ್ತಾಗದೆ ಸುಮ್ಮನಾಗಿದ್ದ.
ಆದರೆ ನಾನು ಆಟೋಗ್ರಾಫ್ ಗಳನ್ನೂ ತೆಗೆದುಕೊಳ್ಳಲು ಶುರು ಮಾಡಿದ್ದಕ್ಕೆ ಕಾರಣರಾದದ್ದು ಯಂಡಮೂರಿ ವೀರೇಂದ್ರನಾಥ್. ನಾನು ಮೊದಲ ಪಿಯುಸಿಯಲ್ಲಿದ್ದಾಗ ಅವರ ದುಡ್ಡು ಪವರ್ ಆಫ್ ದುಡ್ಡು ಓದಲು ಸಿಕ್ಕಿತ್ತು. ಅದಕ್ಕೂ ಮುನ್ನ ಯಾವಾಗಲೊಮ್ಮೆ ತುಷಾರ, ಮಯೂರ ಮುಂತಾದ ಸಾಪ್ತಾಹಿಕ, ಮಾಸಿಕಗಳನ್ನ ತಂದಾಗ ಅದರಲ್ಲಿ ಯಂಡಮೂರಿ ಅವರ ಧಾರಾವಾಹಿಗಳ ಬಗ್ಗೆ ತಿಳಿದಿದ್ದೆ. ಆದರೆ ಕಂತು ಕಂತು ಕೂಡಿಟ್ಟುಕೊಂಡು ಓದುವುದು ಸಾಧ್ಯವಿರಲಿಲ್ಲ. ಆದರೆ ನಂಜನಗೂಡಿನ ಗ್ರಂಥಾಲಯವನ್ನು ಸೋಸುತ್ತಿದ್ದಾಗ ಅಚಾನಕ್ ಆಗಿ ಸಿಕ್ಕಿದ್ದು ಯಂಡಮೂರಿ ವೀರೇಂದ್ರನಾಥ್ ಅವರ ದುಡ್ಡು ಟು ದಿ ಪವರ್ ಆಫ್ ದುಡ್ಡು. ಒಂದೇ ಗುಕ್ಕಿನಲ್ಲಿ ಇಡೀ ಕಾದಂಬರಿ ಓದಿ ಮುಗಿಸಿದ್ದೆ. ಅಷ್ಟರಲ್ಲಾಗಲೇ ಕನ್ನಡದ ಬಹುತೇಕ ಗಣ್ಯರ ಬರಹ-ಕಾದಂಬರಿಗಳನ್ನು ಓದಿ ಬಿಟ್ಟಿದ್ದೆ. ಎಸ್.ಎಲ್. ಭೈರಪ್ಪನವರ ಆವತ್ತಿನವರೆಗೆ ಬಿಡುಗಡೆಯಾಗಿದ್ದ ಅಷ್ಟೂ ಕಾದಂಬರಿಗಳನ್ನು ಎರಡೆರೆಡು ಬಾರಿ ಓದಿ ಮುಗಿಸಿದ್ದೆ. ಆನಕೃ, ತರಾಸು, ಮಾಸ್ತಿ, ಬೇಂದ್ರೆ, ಕುವೆಂಪು, ಕಾರಂತರು, ತ್ರಿವೇಣಿ, ಎಂ.ಕೆ.ಇಂದಿರಾ.... ಹೀಗೆ ಎಲ್ಲರೂ ಮುಗಿದಿತ್ತು. ಗೀತಾ ನಾಗಭೂಷಣ್, ಈಚನೂರು ಶಾಂತ, ಈಚನೂರು ಜಯಲಕ್ಷ್ಮಿ, ರೇಖಾ ಕಾಖಂಡಕಿ, ಮಹಾಬಲಮೂರ್ತಿ, ಎಂ ಎಚ್ ನಾಯಕಬಾಡ, ಕುಂವಿ, ಸಾಯಿಸುತೆ, ... ಹೀಗೆ ಕೈಗೆ ಸಿಕ್ಕಿದವರ ಬರವಣಿಗೆಗಳನ್ನೂ ಓದಿಯಾಗಿತ್ತು. ಅಂತಹ ಸಂದರ್ಭದಲ್ಲಿ ಸಿಕ್ಕಿದ್ದು ಯಂಡಮೂರಿ. ಓದಿದ್ದೆ, ಓದಿದ್ದೆ. ಒಂದೇ ವರ್ಷದಲ್ಲಿ ಅವರ ಆವತ್ತಿಗ್ಗೆ ಬಿಡುಗಡೆಯಾಗಿದ್ದ ನಲವತ್ತನಾಲ್ಕು ಪುಸ್ತಕಗಳನ್ನು ಓದಿ ಬಿಟ್ಟೆ. ಆ ಮಧ್ಯದಲ್ಲಿ ಸಿಕ್ಕಿದ್ದೇ ಗ್ರಾಫಾಲಜಿ. ಕೈಬರಹ ನೋಡಿ, ವ್ಯಕ್ತಿತ್ವ ಅಂದಾಜು ಮಾಡುವ ಬಗೆಗಿನ ಪುಸ್ತಕ. ಅಲ್ಲಿಂದ ಶುರುವಾಯಿತು ನೋಡಿ, ಹಸ್ತಾಕ್ಷರ ಪರೀಕ್ಷಿಸುವ ಅಭ್ಯಾಸ. ಆ ಕಾರಣಕ್ಕಾಗಿ ಆಟೋಗ್ರಾಫ್ ತೆಗೆದುಕೊಂಡು ಮನೆಯಲ್ಲಿ ಹೋಗಿ ಅದರ ಅಧ್ಯಯನ ಮಾಡುತ್ತಿದ್ದೆ. ಅದೆಷ್ಟರ ಮಟ್ಟಿಗೆ ಆ ಬರಹದವರ ವ್ಯಕ್ತಿತ್ವ ತಿಳಿಯಿತೋ ಅಥವಾ ತಿಳಿದು ಅದೇನು ಮಾಡಿದೆನೋ ಗೊತ್ತಾಗಲಿಲ್ಲ. ಆದರೆ ಅದೊಂದು ಚಾಳಿ ಮಾತ್ರ ಮುಂದುವರೆಯಿತು. ಸುತ್ತಮುತ್ತಲಿನವರ, ಗೆಳೆಯರ ಕೈಬರಹ ಮುಗಿದ ಮೇಲೆ ಸಾಧಕರ ಹಸ್ತಾಕ್ಷರ ಹುಡುಕುವುದಕ್ಕೆ ಶುರು ಮಾಡಿದೆ. ಸಾಹಿತಿಗಳ, ಚಿತ್ರತಾರೆಗಳ, ಗಾಯಕರ... ಹೀಗೆ ಯಾರೇ ಸಿಕ್ಕರೂ ಪಕ್ಕಾಭಿಮಾನಿಯಂತೆ ಹಸ್ತಾಕ್ಷರ ತೆಗೆದುಕೊಳ್ಳುತ್ತಿದೆ. ಮನೆಯಲ್ಲಿ ಅದನ್ನೇ ನೋಡುತ್ತಾ ಅದೇನೋ ಹುಡುಕುತ್ತಿದ್ದೆ.
ಹಾಗೆಯೇ ಮೊನ್ನೆ ಅಂಕಿತ ಪ್ರಕಾಶನದ ಪುಸ್ತಕದ ಅಂಗಡಿಗೆ ಹೋಗಿದ್ದಾಗ ಎದುರಿಗೆ ಸಿಕ್ಕವರು ಲೇಖಕ ಜೋಗಿ. ನನ್ನ ನೋಡಲೇ ಬೇಕಾದ ನೂರೊಂದು ಚಿತ್ರಗಳು ಪುಸ್ತಕ ಬಿಡುಗಡೆ ಮಾಡಿದವರು. ಬರೀ ಫೋನಿನಲ್ಲಿ ಮಾತನಾಡಿ ಬಿಡುಗಡೆ ನೀವೇ ಮಾಡಬೇಕು ಎಂದಾಗ, ಖಂಡಿತ ಬರುತ್ತೇನೆ, ಆದರೆ ಮುಂದಿನವಾರ ನನ್ನ ಪುಸ್ತಕ ಬಿಡುಗಡಿಯಿದೆ ನೀವು ಬರಲೇಬೇಕು ಎಂದವರು ಸಮಯಕ್ಕೆ ಸರಿಯಾಗಿ ಬಂದಿದ್ದರು. ಆನಂತರ ಒಂದಷ್ಟು ಮಾತನಾಡಿದ್ದು ಬಿಟ್ಟರೆ ಅಂತಹ ಮಾತುಕತೆ ಇರಲಿಲ್ಲ. ಹಾಗಾಗಿ ಎದುರಿಗೆ ಸಿಕ್ಕಾಗ ಮತ್ತೆ ನನ್ನದೇ ಹಿಂಜರಿಕೆ ನನ್ನನ್ನು ಕಾಡತೊಡಗಿತ್ತು. ನಾನು ಇವರಿಗೆ ನೆನಪಿರಬಹುದಾ..?ಅದೊಂದು ಹಿಂಜರಿಕೆ ನನ್ನನ್ನೂ ಯಾವತ್ತಿಗೂ ಕಾಡುತ್ತದೆ. ನಾನು ಹಲವಾರು ಸೆಲೆಬ್ರಿಟಿಗಳ ಜೊತೆಯಲ್ಲಿ ಕೆಲಸ ಮಾಡಿದ್ದೇನೆ. ಆದರೆ ಕೆಲಸದ ನಂತರ ನಾನು ಅವರೊಂದಿಗೆ ಅಂತಹ ಗೆಳೆತನವನ್ನು ಇಟ್ಟುಕೊಳ್ಳುವುದಿಲ್ಲ. ಅದೇಕೋ ಏನೋ? ನನ್ನ ಮೊದಲ ಚಿತ್ರದ ನಾಯಕ ನಾಯಕಿ, ಕಲಾವಿದರು ಹೀಗೆ. ಯಾರೊಂದಿಗೂ ನನ್ನ ಗೆಳೆತನವಿಲ್ಲ. ಆದರೆ ನನ್ನ ಗೆಳೆಯರ ಬಳಗದಲ್ಲಿರುವವರೆ ಬೇರೆ. ಅದರಲ್ಲೂ ಹೆಸರು ಮಾಡಿದವರು ನನಗೆ ಪರಿಚಯವಿದ್ದರೂ ಅಚಾನಕ್ ಆಗಿ ಎಲ್ಲಾದರೂ ಸಿಕ್ಕಾಗ ಮಾತನಾಡಿಸಲು ಹಿಂದೆ ಮುಂದೆ ನೋಡುತ್ತೇನೆ. ಕಾರಣ ಇಷ್ಟೇ.. ಅವರಿಗೆ ನನ್ನ ನೆನೆಪಿರಬಹುದೇ..? ಅವರಿಗೆ ನನ್ನ ಪರಿಚಯ ಇರಬಹುದೇ..? ಅಕಸ್ಮಾತ್ ಮರೆತಿದ್ದರೆ ಅದನ್ನು ನೆನಪಿಸುವ ಸರ್ಕಸ್ ದೊಡ್ಡದು... ಆದರೆ ಇದೆ ನನ್ನ ಮೇಲಿನ ಇಮೇಜ್ ಅನ್ನು ಋಣಾತ್ಮಕವಾಗಿಯೂ ಕೆಲವೊಮ್ಮೆ ಧನಾತ್ಮಕವಾಗಿಯೂ ರೂಪಿಸುತ್ತದೆ.ಗೊತ್ತಿದ್ದರೂ ಮಾತನಾಡಿಸಲಿಲ್ಲ, ಅವನಿಗೆ ದುರಹಂಕಾರ ಎನ್ನುವ ಹಣೆಪಟ್ಟಿಯನ್ನು ವಿನಾಕಾರಣ ಹೊತ್ತುಕೊಳ್ಳುವಂತೆ ಮಾಡಿಬಿಡುತ್ತದೆ
ಆದರೆ ಜೋಗಿ ಮಾತನಾಡಿಸಿ, ಹೇಗಿದ್ದೀರಾ..? ಎಂದರು. ನಾನು ಅವರನ್ನೇ ನೋಡಿದೆ. ನನ್ನಂತಹ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಬರಹಗಾರ ಜೋಗಿ. ಯಾವುದೇ ವಿಷಯದ ಬಗ್ಗೆಯೂ ಅನಿಸಿದ್ದನ್ನು ಅನಿಸಿದ ಹಾಗೆ ಬರೆಯುವ ಜೋಗಿಗೆ ನನ್ನ ನೆನಪಿರಬಹುದಾ..? ಎಂಬ ಪ್ರಶ್ನೆ ಆ ಕ್ಷಣದಲ್ಲಿ ಕಾಡದೆ ಇರಲಿಲ್ಲ. ಮಾತನಾಡಿಸಿ, ಅವರದೇ ಪುಸ್ತಕಕ್ಕೆ ಹಸ್ತಾಕ್ಷರ ತೆಗೆದುಕೊಂಡೆ.

ಕತೆ ಚಿತ್ರ ಕತೆ ಸಂಭಾಷಣೆ ಜೋಗಿ ಬರೆದ ಇತ್ತೀಚಿನ ಪುಸ್ತಕ. ಅವರೇ ಹೇಳುವಂತೆ ಚಿತ್ರರಂಗದ ಜೊತೆಗಿನ ಅವರ ಪ್ರಯೋಗವನ್ನು ಪುಸ್ತಕ ತೆರೆದಿಡುತ್ತದೆ. ಆದರೆ ಚಿತ್ರಕತೆಯ ಆಳಕ್ಕೆ ಪುಸ್ತಕ/ಬರಹ ಇಳಿಯುವುದಿಲ್ಲ. ಒಬ್ಬ ಬರಹಗಾರನಾಗಿ ಜೋಗಿ ತಾನು ಕಂಡುಕೊಂಡ ದೃಶ್ಯಮಾಧ್ಯಮದ ಮಜಲುಗಳನ್ನು ಅಕ್ಷರ ರೂಪಕ್ಕೆ ತಂದಿದ್ದಾರೆ. ಕೆಲವು ಅಧ್ಯಾಯಗಳು ಖುಷಿ ನೀಡಿದರೆ ಕೆಲವು ಅಪೂರ್ಣ ಎನಿಸಿದ್ದು ನನ್ನ ವೈಯಕ್ತಿಕ ಅಭಿಪ್ರಾಯ.