Monday, February 8, 2016

ಮೋಹನಸ್ವಾಮಿಗಳು...

ನಾನಾಗ ಕಾಲೇಜಿನಲ್ಲಿ ಓದುತ್ತಿದ್ದಾಗ ಅಲ್ಲೊಬ್ಬ ವ್ಯಕ್ತಿಯಿದ್ದ. ಆಗಲೇ ಆತನ ವಯಸ್ಸು ಮೂವತ್ತೈದು ಮೀರಿತ್ತು. ಯಾವುದೋ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ ಆತ ಮದುವೆಯಾಗಿರಲಿಲ್ಲ. ತನ್ನೊಬ್ಬನಿಗೆ ಮನೆಯೊಂದನ್ನು ಮಾಡಿಕೊಂಡಿದ್ದ. ಟಿವಿ ಇದ್ದುದರಿಂದ ನಮ್ಮಲ್ಲಿನ ಕೆಲವು ಕ್ರಿಕೆಟ್ ಪ್ರೇಮಿಗಳು ಕಾಲೇಜಿಗೆ ಬಂಕ್ ಮಾಡಿ ಅವನ ಮನೆಗೆ ಹೋಗಿ ಬಿಡುತ್ತಿದ್ದರು. ಅಲ್ಲೇ ಊಟ ಮಾಡುತ್ತಿದ್ದರು. ಊರಿಗೆ ಹೋಗುವ ಕಡೆಯ ಬಸ್ ಮಿಸ್ಸಾದಾಗ ಪರಿಚಯದವನು ತಾನೇ ಎಂದು ಆ ರಾತ್ರಿ ಅಲ್ಲೇ ಮಲಗಲು ಹೋಗುತ್ತಿದ್ದರು. ಆದರೆ ಸರಿರಾತ್ರಿಯಲ್ಲಿ ಆತ ಅವರ ಮೈಮೇಲೆಲ್ಲಾ ಕೈಯಾಡಿಸಿಬಿಡುತ್ತಿದ್ದ. ಕೆಲವೊಮ್ಮೆ ಅದೆಲ್ಲ ಅದೆಷ್ಟು ಹಿಂಸಾತ್ಮಕ ಎಂದರೆ ಕೆಲವರು ಮಲಗಿ ನಿದ್ರೆ ಮಾಡುವವನಂತೆ ನಟಿಸಿ, ಅಸ್ಯಹಿಸಿ ಸೋತು ಹೋಗುತ್ತಿದ್ದರು. ಕೆಲವರು ಅಲ್ಲೇ ಕೊಸರಿಕೊಂಡು ಎದ್ದು ಕೈ ಬೀಸಾಕಿ ಜಗಳ ಮಾಡುತ್ತಿದ್ದರು. ಹೊಡೆದಾಟಗಳೂ ಆಗುತ್ತಿದ್ದವು. ಮಾರನೆಯ ದಿನ ಅವರು ಬಂದು ಕತೆಗಳನ್ನ ಹೇಳಿದಾಗ ನಾವೆಲ್ಲಾ ಅದ್ಯಾರೂ ಆ ಪುಣ್ಯಾತ್ಮ ಎಂದು ಬಸ್ ಸ್ಟಾಂಡ್ ನಲ್ಲಿ ಕಾಯುತ್ತಿದ್ದೆವು. ಅವನನ್ನು ನೋಡಿ ಮುಸಿ ಮುಸಿ ನಗುತ್ತಿದ್ದೆವು. ಅವನೊಡನೆ ಯಾರಾದರೂ ಇದ್ದರೆ ಅವನು ಅತ್ತ ಹೋದೊಡನೆಯೇ ಇವನನ್ನು ರೇಗಿಸಿ ಗೋಳುಹೊಯ್ದುಕೊಳ್ಳುತ್ತಿದ್ದೆವು.
ಅದ್ಯಾಕೆ ಹಾಗೆ ಮಾಡುತ್ತಿದ್ದೆವು? ಅದು ನಗುವ ವಿಷಯವಾಗಿರಲಿಲ್ಲ. ಆದರೆ ಆತ ತನ್ನ ಸಂಗಾತಿಯನ್ನು ಹುಡುಕಿಕೊಳ್ಳುವಲ್ಲಿ ಸೋಲುತ್ತಿದ್ದ ಎನಿಸುತ್ತದೆ. ಈ ಪೋಲಿ ಹುಡುಗರು ಇಷ್ಟವಿಲ್ಲದ ಹುಡುಗಿಯನ್ನು ರೇಗಿಸಿ ಕಿಚಾಯಿಸಿ ಉಗಿಸಿಕೊಳ್ಳುವಂತೆ ಸಿಕ್ಕ ಸಿಕ್ಕ ಹುಡುಗರಿಗೆ ಕೈ ಹಾಕುತ್ತಿದ್ದ.
ಬಹುಶ ಇಂತಹ ಘಟನೆಗಳೆ ನಮಗೆ ಸಲಿಂಗಿ ಎಂದರೆ ಬೇರೆಯದೇ ಆದ ಭಾವವನ್ನು ಮೂಡುವಂತೆ ಮಾಡಿದ್ದಿರಬಹುದೇನೋ?
ಇಷ್ಟಕ್ಕೂ ಸಲಿಂಗಿ ಎಂಬುದು ನಮಗೆ ನಿಲುಕದ ವಸ್ತುವಲ್ಲ. ಅದವರ ಖಾಸಗಿ ಕೋಣೆಯ ವಿಷಯವಷ್ಟೇ ಎಂಬುದಷ್ಟೇ ಸರಳವಾಗಿ ಮತ್ತು ಸಹಜವಾಗಿ ತೆಗೆದುಕೊಳ್ಳಲು ಮನಸ್ಸು ಸಿದ್ಧವಾಗಿಲ್ಲದೆ ಇದ್ದದ್ದು ಇದೇ ಕಾರಣವೇನೋ?. ಎಲ್ಲೋ ಬಸ್ಸಿನಲ್ಲಿ ಹೋಗುವಾಗ ವಿಚಿತ್ರವಾಗಿ ಸ್ಪರ್ಶಿಸಿ ನಗುವವರು, ಸೂಸು ಮಾಡುವಾಗ ಬಗ್ಗಿ ನೋಡುವವರು, ಕೈ ಕುಲುಕಿದರೆ ಅದನ್ನೇ ಹಿಸುಕುತ್ತಾ ನಿಲ್ಲುವವರು ನಮಗೆ ಈ ಭಾವವನ್ನು ಮೂಡಿಸಿರಬೇಕು. ಅವನು ಗೇ ಅಂತೆ ಎಂಬುದು ನಮ್ಮಲ್ಲಿ ಅಸಹನೀಯ ವಾಗುವುದಕ್ಕೆ ಕಾರಣವಾದರೂ ಏನು? ಪಕ್ಕದ ಮನೆಯವನು ಜೈಲಿಗೆ ಹೋಗಿಬಂದನಂತೆ, ಅವನ್ಯಾರೋ ಕುಡಿದು ಬಿದ್ದಿದ್ದನಂತೆ ಎಂಬೆಲ್ಲಾ ವಿಷಯಗಳು ನಮಗೆ ಪರವಾಗಿಲ್ಲ ಎನಿಸಿದರೂ ಇದ್ಯಾಕೆ ನಮಗೆ ಸಹಜ ಎಣಿಸಿಲ್ಲ ಎಂಬುದು ಪ್ರಶ್ನೆ. ಏಕೆಂದರೆ ನಾನೇ ಎಷ್ಟೋ ಸಾರಿ ಹೊಸಬರು/ಪರಿಚಿತರು ತೀರಾ ಹೆಗಲ ಮೇಲೆ ಕೈ ಹಾಕಿದರೆ, ಕೈ ಹಿಡಿದುಕೊಂಡರೆ, ಅನುಮಾನದಿಂದ ನೋಡಿದ್ದಿದ್ದೆ.
ವಸುಧೇಂದ್ರ ನನಗೆ ಕಾಲೇಜು ದಿನಗಳಲ್ಲಿ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಕತೆಗಳ ಮೂಲಕ ಪರಿಚಯವಾಗಿದ್ದರು.ಅವರ ಬರಹಗಳು, ಕತೆಗಳು ಎಂದರೆ ನನಗೆ ತುಂಬಾ ಇಷ್ಟವಾಗುತ್ತಿತ್ತು. ಹಾಗೆಯೇ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಬಂದಾಗ ವಾಹಿನಿಯೊಂದರ ಕಾರ್ಯಕ್ರಮದಲ್ಲಿ  ಸಂಚಿಕೆ ನಿರ್ದೇಶನಾಗಿದ್ದಾಗ ಒಮ್ಮೆ ಕತೆಗಾರ ವಸುಧೇಂದ್ರ ಅವರ ಸಂದರ್ಶನ ತೆಗೆದುಕೊಳ್ಳಿ ಎಂದಾಗ ಖುಷಿಯಾಗಿದ್ದೆ. ಫೋನ್ ನಂಬರ್ ತೆಗೆದುಕೊಂಡು ಮಾತಾಡಿ, ಅವರ ಕತೆಗಳ ಬಗ್ಗೆ ಮಾತನಾಡಿದೆ. ಅವರೂ ಖುಷಿಯಾಗಿದ್ದರು. ಆನಂತರ ಅವರ ಮನೆಗೆ ಚಿತ್ರೀಕರಣಕ್ಕೆ ಹೋದಾಗ ಒಂದಷ್ಟು ಮಾತನಾಡಿದೆವು. ಎಷ್ಟೆಲ್ಲಾ ಓದಿದ್ದೀಯಲ್ಲ ನೀನು, ಖುಷಿಯಾಗುತ್ತದೆ ಎಂದಿದ್ದರು ವಸುಧೇಂದ್ರ. ಅವರ ಕತೆಗಳು ಪ್ರಕಟವಾಗುತ್ತಿದ್ದಾಗ ಪತ್ರಿಕೆಯಲ್ಲಿ ಅವರ ಮೀಸೆ ಇರುವ ಫೋಟೋ ಒಂದು ಪ್ರಕಟವಾಗಿತ್ತು. ಆದರೆ ಎದುರಿಗಿದ್ದ ವಸುಧೇಂದ್ರರಿಗೆ ಮೀಸೆ ಇರಲಿಲ್ಲ. ನಾನದನ್ನು ಕೇಳಿಯೇ ಇದ್ದೆ, ಅದಕ್ಕೆ ಅವರು ಅದು ಹಳೆಯ ಫೋಟೋ ಕಣೋ ಎಂದಿದ್ದರು. ಆನಂತರ ಅವರ ಪುಸ್ತಕ ಬಿಡುಗಡೆಯ ಕಾರ್ಯಕರ್ಮಕ್ಕೆ ಚಿಕ್ಕ ವೀಡಿಯೊ ಬೇಕು ಎಂದಿದ್ದರು. ಆಗೊಂದಷ್ಟು ದಿನ ಅವರ ಜೊತೆ ಓಡಾಡಿದ್ದೆ. ಇವರ್ಯಾಕೆ ಮದುವೆಯಾಗಿಲ್ಲ, ಮಾತಾಡುವಾಗ ಸ್ವಲ್ಪ ವ್ಯತ್ಯಾಸವಿದೆಯಲ್ಲ..  ಎಂದೆಲ್ಲಾ ಎನಿಸಿತ್ತು. ಆದರೆ ಅದೆಲ್ಲದಕ್ಕೂ ಮೀರಿದ ಅವರ ಬರಹ, ಸಿನಿಮಾ ಜ್ಞಾನ ನನ್ನನ್ನು ಮೂಕವನ್ನಾಗಿಸಿತ್ತು. ಆನಂತರ ಅವರ ಮೋಹನ ಸ್ವಾಮಿ ಬಂದಾಗ ಇವರು ಸಲಿಂಗಿ ಇರಬಹುದು ಎನ್ನಿಸಿತ್ತು. ಇಲ್ಲವಾದಲ್ಲಿ ಅಷ್ಟು ಚೆನ್ನಾಗಿ ಅದೇಗೆ ಹಾಗೆ ಬರೆಯಲು ಸಾಧ್ಯ..? ಆ ಸಂವೇದನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಎನಿಸಿತ್ತು.
ಆದರೆ ಆವಾಗ ನನಗೆ ಕಾಡುತ್ತಿದ್ದ ಪ್ರಶ್ನೆ ಇಷ್ಟೇ. ಆರ್ಥಿಕವಾಗಿ ಸಾಮಾಜಿಕವಾಗಿ ವೈಚಾರಿಕವಾಗಿ ಸದೃಢವಾಗಿರುವ ಇವರು ಯಾಕೆ ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ..? ಬ್ರೋಕ್ ಬ್ಯಾಕ್ ಮೌಂಟನ್ , ಮಿಲ್ಕ್ ಮುಂತಾದ ಚಿತ್ರಗಳನ್ನು ನೋಡಿದಾಗ ಅದೇಕೋ ಒಳಗೆ ಸೇರಿರಲಿಲ್ಲ. ಆದರೆ ನೇಪಾಳಿ ಚಿತ್ರ ಸೂನ್ಗವಾ ನೋಡಿದಾಗ ಸಾಯುವಷ್ಟು ಇಷ್ಟವಾಗಿತ್ತು. ಯಾಕೆಂದರೆ ಅಲ್ಲಿದ್ದವರು ಸ್ತ್ರೀಸಲಿಂಗಿಗಳು. ಅಲ್ಲಿದ್ದ ಎರಡು ಹೆಣ್ಣುಮಕ್ಕಳು ಇಷ್ಟವಾಗಿದ್ದರಿಂದ ಸಿನಿಮಾ ಇಷ್ಟವಾಗಿತ್ತೇನೋ? ಆದರೆ ಸಲಿಂಗಿ ಎನ್ನುವ ವಿಷಯವೇ ನಮ್ಮದಲ್ಲ ಎನಿಸಿತ್ತು. ಆದರೆ ನಮ್ಮದಲ್ಲ ಎಂದಾದ ಮಾತ್ರಕ್ಕೆ ಜಗತ್ತಿನಲ್ಲಿ ಇರಲೇ ಬಾರದು ಎನ್ನುವುದಕ್ಕೆ ನಾವಾದರೂ ಯಾರು? ಮೊದಲೇ ಹೇಳಿದಂತೆ ಇದು ಅವರ ಅಂತಃಪುರದ ವಿಷಯ.
ಈಗ ವಸುಧೇಂದ್ರ ಒಪ್ಪಿಕೊಂಡಿದ್ದಾರೆ. ಮೊನ್ನೆ ಅವರ ಸಂದರ್ಶನ ಓದಿದಾಗ ನನ್ನಲ್ಲಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ಕೂಡ ಸಿಕ್ಕಿದೆ. ಅದು ಹೌದೋ ಅಲ್ಲವೋ..? ಸರಿಯೋ ತಪ್ಪೋ.. ಅವರವರ ಭಾವನೆ ಅವರದ್ದು. ಅವರವರ ಆಯ್ಕೆ ಅವರದ್ದು. ಮತ್ತದೇ ಸಹಜತೆ ಎನಿಸುತ್ತದೆ.