Monday, June 4, 2012

ಓದಿದ್ದು-2


ಸಿಡ್ನೀ ಶೆಲ್ದನ್ನ್ ನ ಆತ್ಮಚರಿತ್ರೆಯಾದ ದಿ ಅದರ್‌ಸೈಡ್ ಆಫ್ ಮಿ ಯನ್ನು ಸುಮಾರು ದಿನಗಳ ಹಿಂದೆಯೇ ತಂದಿಟ್ಟುಕೊಂಡಿದ್ದೆನಾದರೂ ಓದಲು ಸಮಯ ಸಿಕ್ಕಿರಲಿಲ್ಲ. ಅಥವಾ ಓದಲಿಕ್ಕೆ ಸರಿಯಾದ ಉತ್ತೇಜನವೂ ದೊರಕಿರಲಿಲ್ಲ. ಆದರೆ ಮೊನ್ನೆ ಮತ್ತೆ ಸುಳ್ಯಕ್ಕೆ ಹೋಗಬೇಕಾಗಿತ್ತು. ಈ ಸಾರಿ ಕುಕ್ಕೆ ಸುಭ್ರಮಣ್ಯದವರೆಗೆ ರೈಲಿನಲ್ಲಿ ಹೋಗುವುದೆಂದು ನಿರ್ಧರಿಸಿದ್ದರಿಂದ ಯಾವುದಕ್ಕೂ ಇರಲಿ ಎಂದು ಚಂದ್ರೇಗೌಡರ ಜಬೀವುಲ್ಲಾ ಕೊಟ್ಟ ಕೋಳಿ ಮತ್ತು ಅದರ್ ಸೈಡ್ ಆಫ್ ಮಿ ಎರಡನ್ನು ಬ್ಯಾಗಿಗೆ ಹಾಕಿಕೊಂಡೆ. ಸುಮಾರು ಆರುಘಂಟೆಗಳ ಪ್ರಯಾಣ ಅದು. ರೈಲಿನಲ್ಲಿ ಕುಳಿತು ಅದೂ ಇದೂ ಮಾತಾಡಿದ ನಂತರ ಓದಲಿಕ್ಕೆ ಪುಸ್ತಕ ಬಿಡಿಸಿದೆ ನೋಡಿ! ಇಡೀ ಪುಸ್ತಕ ಆಮೇಲಿಂದ ನನ್ನನ್ನು ಬಿಡಲೇ ಇಲ್ಲ. ಸಿಡ್ನೀ ಶೆಲ್ಡನ್ ಎನ್ನುವ ಕಾದಂಬರಿಕಾರ, ಚಿತ್ರಕಥೆಗಾರ, ನಿರ್ದೇಶಕನ  ಅದ್ಭುತ, ವಿಭಿನ್ನ ಜೀವನದ ಮಜಲುಗಳನ್ನು ಓದುತ್ತಾ ಓದುತ್ತಾ ನನ್ನನ್ನೆ ಮರೆತುಹೋಗಿದ್ದೆ.  ಆ ಮಟ್ಟಿಗೆ ನನ್ನ ಆವತ್ತಿನ ಪಯಣ ಸಾರ್ಥಕವಾಗಿತ್ತು.
ತನ್ನ ಮೂವತ್ತನಾಲಕ್ಕನೇ ವಯಸ್ಸಿಗೆ ಚಿತ್ರಕಥಾ ಬರಹಗಾರನಾಗಿ ಹೆಸರು ಗಳಿಸಿ, ಹಾಲಿವುಡ್ಡಿನಲ್ಲಿ ಮನೆಮಾತಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದ ಸಿಡ್ನೀ ತನ್ನ ಹದಿವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಗಂಭೀರವಾಗಿ ಯೋಚಿಸಿದ್ದ. ಇನ್ನೇನು ಅವನು ಆ ಪ್ರಯತ್ನದಲ್ಲಿ ಯಶಸ್ವಿಯಾಗಬೇಕನ್ನುವಷ್ಟರಲ್ಲಿ ಅಲ್ಲಿಗೆ ಬರುವ ಅವನ ತಂದೆ ಅದನ್ನು ನೋಡುತ್ತಾನೆ. ಅವನಿಗೆ ನಿಜ ವಿಷಯದ ಅರಿವೂ ಆಗಿಬಿಡುತ್ತದೆ. ಅದಕ್ಕೆ ಅವರ ತಂದೆ ನೀನು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದೀಯ ಅಂತ ಗೊತ್ತು..ಅದನ್ನು ನಾನು ತಡೆಯಲ್ಲಾ..ಹೇಗಿದ್ರೂ ನಾಳೆ ಮನೇಲಿ ಯಾರೂ ಇರಲ್ಲ. ನಿನ್ನ ನಿರ್ಧಾರ ಅಷ್ಟೊಂದು ಅಚಲವಾಗಿದ್ದರೆ  ನಾಳೆ ನೀನು ಮಾಡಕೋಬಹುದು..ಆದರೆ ಒಂದ್ ಮಾತು ನೆನಪಿಟ್ಕೋ..ಬದುಕು ಒಂದು ಪತ್ತೆದಾರಿ ಪುಸ್ತಕ ಇದ್ದ ಹಾಗೆ..ಪ್ರತಿಪುಟಾನೂ ಆಸಕ್ತಿಕರವಾಗಿರುತ್ತೆ. ಆದರೆ ಪ್ರತಿಪುಟವನ್ನೂ ಓದದೆ ನಿನಗೇನೂ ಗೊತ್ತಾಗೊಲ್ಲ. ಬರೀ ಮೊದಲ ಪುಟಕ್ಕೆ ಪುಸ್ತಕ ಮುಗಿಸಿ ಎತ್ತಿಟ್ಟರೆ ಮುಂದಿನ ರೋಮಾಂಚನಗಳನ್ನು ಕಳೆದುಕೊಳ್ತೀಯಾ.. ಯೋಚನೆ ಮಾಡು ಅನ್ನುತ್ತಾನೆ. ಆ ಮಾತು ಸಿಡ್ನೀಯ ಮನಸ್ಸಿಗೆ ನಾಟುತ್ತದೆ.
ಸಿಡ್ನೀ ಹಣಗಳಿಸುತ್ತಾನೆ, ಯಶಸ್ಸುಗಳಿಸುತ್ತಾನೆ ಮತ್ತು ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಹೆಚ್ಚುಕಡಿಮೆ ಬರ್ಬಾದ್ ಆಗಿಹೋಗುತ್ತಾನೆ. ಸಿನಿಮಾ ಜಗತ್ತು ಅವನನ್ನು ದೂರ ಇಡುತ್ತದೆ. ಇನ್ನೇನು ಬದುಕು ಮುಗಿದೇಹೋಯಿತು ಎನ್ನುವಾಗ ತನ್ನ ಹೊಸಬದುಕು ಪ್ರಾರಂಭಿಸುತ್ತಾನೆ. ತನ್ನ ಐವತ್ತನೇ ವಯಸ್ಸಿನಲ್ಲಿ ತನ್ನ ಮೊದಲ ಕಾದ೦ಬರಿ ದಿ ನೇಕಡ್ ಫೇಸ್ ಬರೆಯುತ್ತಾನೆ. ಆನಂತರ ಅವನು ಹಿಂದಿರುಗಿನೋಡುವುದೇ ಇಲ್ಲ.
ಇಂದಿಗೂ 180 ಕ್ಕೂ ಹೆಚ್ಚು ದೇಶಗಳಲ್ಲಿ ಅವನ ಕಾದಂಬರಿಗಳು ಮಾರಾಟವಾಗುತ್ತವೆ. ಐವತ್ತೊಂದಕ್ಕೂ ಹೆಚ್ಚು ಭಾಷೆಗಳಿಗೆ ಅವನ ಕಾದಂಬರಿಗಳೂ ಅನುವಾದವಾಗಿವೆ.
ಅವನ ಮೂರ್ನಾಲ್ಕು ಕಾದಂಬರಿಗಳನ್ನು ಈವಾಗ ತಂದಿಟ್ಟುಕೊಂಡಿದ್ದೇನೆ. ಆತನ ದಿ ನೇಕೆಡ್ ಫೇಸ್ ಅರ್ಧ ಮುಗಿಸಿದ್ದೇನೆ. ತುಂಬಾ ರೋಚಕವಾದ ಕಾದಂಬರಿ ಅದು. ಸಿಕ್ಕರೆ ಬಿಡುವುಮಾಡಿಕೊಂಡು ಓದಿ.
ಹಾಗೆ  ಈ ವಾರ ದಿ ಹಿಡನ್ ಫೇಸ್ ಎನ್ನುವ ಸ್ಪ್ಯಾನಿಶ್ ಸಿನೆಮಾ ನೋಡಿದೆ. ಹಾಗೆ ಇದೆ ಶೆಲ್ಡನ್ ನ ಕಾದಂಬರಿ ಆಧಾರಿತ ದಿ ಅದರ್ ಸೈಡ್ ಒಫ್ ಮಿಡ್ ನೈಟ್ ನೋಡಿದೆ.
ಅಂದ ಹಾಗೆ ಇತ್ತೀಚೆಗೆ ನೀವ್ಯಾವ ಸಿನೆಮಾ ನೋಡಿದಿರಿ?
ದಿ ಹಿಡನ್ ಫೇಸ್