[ಇತ್ತೀಚಿಗೆ ಗ್ರಂಥ ಪುಸ್ತಕದಲ್ಲಿ ಪ್ರಕಟವಾದ ನನ್ನ ಕಥೆ]
ಓಬವ್ವ
ಒಮ್ಮೆ ಡಿವಿಡಿ ಪ್ಲೇಯರ್ ನತ್ತ ನೋಡಿದಳು.ಹೊರಕ್ಕೆ ತೆಗೆದುಕೊಂಡುಹೋಗಿ ಬೀಸಾಡಿಬಿಡಬೇಕೆನ್ನುವಷ್ಟು
ಕೋಪ ಬಂದಿತು ಆ ಡಿವಿಡಿ ಪ್ಲೆಯರಿನ ಮೇಲೆ. ಆದರೆ ಅದನ್ನ ನೋಡುತ್ತಿದ್ದಂತೆ ಅದು ಹೇಗೋ ಕೋಪವೆಲ್ಲ ಭರ್ರನೇ
ಒಂದೇ ಸಲಕ್ಕೇ ಇಳಿದುಹೋಗಿ ಅದರ ಮೇಲೆ ಒಂದು ರೀತಿಯ ಪ್ರೀತಿ ಉಕ್ಕಿಹರಿಯತೊಡಗಿತು.ಒಂದು ಕೈಯನ್ನು ಮಂಡಿಯ
ಮೇಲೂರಿ ಇನ್ನೊಂದನ್ನು ನೆಲಕ್ಕೆ ಊರಿ ‘ಅಯ್ಯೋ
ಸಿವ್ನೇ..ಅದೇಕಪ್ಪಾ ವಯಸ್ಸಾದ್ಮೇಲೂ ನಮ್ಮೋಂತೋರ್ನ ಇಟ್ಕಂಡೈ..ಸುಮ್ಕೆ ಕರ್ಕೊಂಡೋಗ್ಬುಡದಲ್ವ..’ಎಂಬೊಂದು ರಿಪೀಟೆಡ್ ಡೈಲಾಗ್ ಉದುರಿಸಿ ನಿಧಾನಕ್ಕೆ
ಎದ್ದು ಡಿವಿಡಿ ಪ್ಲೇಯರಿನತ್ತ ನಡೆದಳು. ಮನೆಯಲ್ಲಿದ್ದ ಒಂದೇಒಂದು ಕುರ್ಚಿಯನ್ನು ಬಂದಕ್ಷಣದಿಂದಲೇ
ತನ್ನದಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದ ಡಿವಿಡಿ ಪ್ಲೇಯರ್ ಒಮ್ಮೆ ಓಬವ್ವನ ಕಡೆ ನೋಡಿತು. ಬೆಳ್ಳಿಬಣ್ಣದ
ಡಿವಿಡಿ ಪ್ಲೇಯರ್ ಆ ಕ್ಷಣದಲ್ಲಿ ಚಿನ್ನ ಬೆಳ್ಳಿಗಿಂತ ಅಮೂಲ್ಯವಾದ ಆಭರಣದಂತೆ ಕಂಡಿತು. ಹತ್ತಿರಕ್ಕೆ
ಬಂದ ಓಬವ್ವ ತನ್ನ ಸುಕ್ಕುಗಟ್ಟಿದ ಕೈಗಳಿಂದ ಅದನ್ನು ನೇವರಿಸಿದಳು.ತನ್ನ ಕೈಯಲ್ಲಿನ ಸುಕ್ಕಿನಿಂದಾಗಿ
ಅದೆಲ್ಲಿ ಸ್ಕ್ರಾಚಾಗುವುದೊ ಎಂಬ ದಿಗಿಲು ಅವಳನೊಮ್ಮೆ ಕಾಡದೇ ಇರಲಿಲ್ಲ. ಅದರ ಪಕ್ಕದಲ್ಲೆ ಇದ್ದ ರೀಮೋಟ್
ಕೂಡ ಇನ್ನೂ ಮುದ್ದುಮುದ್ದಾಗಿ ಕಂಡು, ಅದನ್ನೊಮ್ಮೆ ಕೈಗೆತ್ತಿಕೊಂಡ ಓಬವ್ವ ಅದರ ಬಟನ್ನುಗಳನ್ನು ಸೂಕ್ಷ್ಮವಾಗಿ ಒತ್ತಿ ಮತ್ತೆ ಅದರ
ಜಾಗದಲ್ಲಿ ಜೋಪಾನವಾಗಿರಿಸಿ ಯಥಾಪ್ರಕಾರ ಮತ್ತೆ ತನ್ನ ಜಾಗಕ್ಕೆ ಹೋಗಿ ಕುಳಿತುಕೊಂಡಳು.‘ಈಗ ಧಾರಾವಾಹಿ ಶುರುವಾಗಿರ್ಬೇಕು..ಈವತ್ತೇನಾದದ್ದು..’ತನ್ನ ಮನಸ್ಸಿನಲ್ಲೇ ಹೇಳಿಕೊಂಡು ಅದರ ಬಗ್ಗೆ ಯೋಚಿಸ
ತೊಡಗಿದಳು.‘ತಾನು ಕೊನೆಯದಾಗಿ ಧಾರಾವಾಹಿ ನೋಡುವುದನ್ನು ನಿಲ್ಲಿಸಿದ್ದು
ಯಾವಾಗ...ಹೋದ ಪೋರ್ಣಮಿಯ ದಿವ್ಸವೇ ಕೊನೇ..ಅಮೇಲಿಂದ ರುಕ್ಮಿಣಮ್ಮನ ಮನೆ ಕಡೆ ಹೋಗಿರಲೇ ಇಲ್ಲ..ಅಂದರೆ
ಸರಿ ಸುಮಾರು ಹದಿನೈದು ದಿನವೇ ಆಗಿಹೋಗಿವೆ..ಏನಾಗಿಹೋಗಿದೆಯೊ..ಯಾರ ಪಾಡು ಏನಾಗಿದೆಯೊ..’ಎಂದು ಧಾರಾವಾಹಿಯ ಪಾತ್ರಗಳನ್ನು ನೆನೆಪಿಸಿಕೊಂಡು
ಅಲವತ್ತುಗೊಂಡಳು.
ಓಬವ್ವನ ದಿನಚರಿಯೇ ಹಾಗಿತ್ತು. ಸಂಜೆ ಮನೆಗೆ ಬಂದವಳು
ಕೈಕಾಲು ಮುಖ ತೊಳೆದು ದೇವರ ಪೋಟೋಗೆ ಕೈಮುಗಿದು,ಸತ್ತ ಗಂಡನನ್ನು ನೆನಪಿಸಿಕೊಂಡು ಮದ್ಯಾಹ್ನದ ಅರ್ಧ ಮುದ್ದೆ ಸಾರು ತಿಂದು ರುಕ್ಮಿಣಮ್ಮನ
ಮನೆಗೆ ಹೊರಟುಬಿಡುತ್ತಿದ್ದಳು, ಟಿವಿ ನೋಡಲಿಕ್ಕೆ.ಇವಳು ಹೋಗುವ ಸಮಯಕ್ಕೆ
ಸರಿಯಾಗಿ ಶುರುವಾಗುವ ಧಾರಾವಾಹಿಗಳು ರುಕ್ಮಿಣಮ್ಮ ಮತ್ತು ಓಬವ್ವರನ್ನು ಆಕ್ರಮಿಸಿಕೊಂಡುಬಿಡುತ್ತಿದ್ದವು.
ತುಂಬಾ ಆಸಕ್ತಿಯಿಂದ ನೋಡುತ್ತಿರುವಾಗಲೇ ವಕ್ಕರಿಸುವ ಜಾಹಿರಾತುಗಳನ್ನು ‘ಒಳ್ಳೇ ಟೈಮ್ಗೆ ಶನಿಕಣಂಗೆ ವಕ್ಕರಿಸ್ಕತವೇ..ದರಿದ್ರದವು..’ ಎಂದು ಬೈದು, ಅವುಗಳ ಜೊತೆಗೆ ಧಾರಾವಾಹಿಯ ಪಾತ್ರಗಳ ಒಳ್ಳೇತನಕ್ಕೆ ಶಬಾಸ್‌ಗಿರಿ ಕೊಟ್ಟು, ಕೆಟ್ಟತನಕ್ಕೆ ಅಲ್ಲೇ ಕ್ಯಾಕರಿಸಿ ಉಗಿದು ‘ಈಯಮ್ಮ ನಂಕೈಗೆ ಸಿಕ್ಬೇಕು ಒಂದ್ಸಲಾ..ಚಮ್ಡಾ ಸುಲ್ದುಬುಡ್ತೀನಿ..ಎಂಗಾಡ್ತಳಾ
ನೋಡು ಮಿಟಕಲಾಡಿ..’ ಎಂದೆಲ್ಲಾ ಬೈದಾಡುತ್ತಿದ್ದಳು.
ಅದರ ಜೊತೆಜೊತೆಗೆ ಊರಿನ ಆಗುಹೋಗುಗಳ ಬಗ್ಗೆ ಸಾದ್ಯಂತವಾದ ಚರ್ಚೆಯನ್ನು ಮಾಡಿ, ಏನಾದರೊಂದು ಮುಖವೆನಿಸುವ ವಿಷಯ ಹೇಳಲು ‘ಇರು ರುಕ್ಮಿಣಮ್ಮೋ..ಒಸಿ ಅಡ್ವಟೈಜು ಬಂದ್ಬಿಡ್ಲೀ..ಯೋಳ್ತೀನಿ..’ ಎಂದು ಜಾಹಿರಾತಿಗೆ ಕಾಯ್ದು,
‘ಇನ್ನೂ ಯಾಕೋ ಬರ್ತಿಲ್ಲವೆನಿಸಿ, ‘ನೋಡು ..ದರಿದ್ರದವು..ಬೇಕೂ ಅಂದಾಗ ಎಂಗೆ ಆಟ ಆಡುಸ್ತವೆ..’ ಎಂದು ಅದಕ್ಕೂ ಬೈಯುತ್ತಿದ್ದದ್ದುಂಟು.
ಈಗ ಹದಿನೈದು ದಿನದಿಂದ ಅದೂ ತಪ್ಪಿಹೋಗಿತ್ತು.ಎಲ್ಲಾ
ಆದದ್ದೂ ಈ ಡಿವಿಡಿ ಪ್ಲೇಯರಿನಿಂದ.
ಓಬಳಮ್ಮನ ಗಂಡ ಸಿದ್ದಯ್ಯ ಸತ್ತು ಸರಿಸುಮಾರು ಹನ್ನೆರಡು
ವರುಷಗಳೇ ಕಳೆದುಹೋಗಿತ್ತು.ಅವನ ಕೈಯಲ್ಲಿ ಯಾವಾಗಲೂ ಇರುತ್ತಿದ್ದ ಬೀಡಿ ತುಂಡಿನ ಜೊತೆಗೆ ಸಾರಾಯಿ ಪಾಕೆಟ್ಟು
ಕೂಡ ರಾತ್ರಿ ಹೊತ್ತು ಸೇರಿಕೊಂಡು ಪಿತೂರಿ ನಡೆಸಿ ಕೆಮ್ಮಿಸಿಕೆಮ್ಮಿಸಿ ಇಡೀ ದೇಹವನ್ನೇ ತರತರ ನಡುಗಿಸಿ
ಅದೊಂದು ದಿನ ಮಲಗಿದ್ದಲ್ಲಿಯೇ ಕೊಂದುಬಿಟ್ಟಿದ್ದವು. ಇರುವ ಒಬ್ಬಳೇ ಮಗಳು ರೇಣುಕಳನ್ನು ದೂರದ ಬೆಂಗಳೂರಿಗೆ
ಮದುವೆ ಮಾಡಿಕೊಟ್ಟಾಗಿತ್ತು. ಗಂಡ ಸತ್ತ ಮೇಲೆ ಮಗಳು ಬೆಂಗಳೂರಿಗೆ ಬಂದು ತನ್ನ ಜೊತೆ ಇದ್ದು ಬಿಡು
ಎಂದು ಅಂಗಲಾಚಿದರೂ ಓಬವ್ವ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ‘ತನ್ನ ಗಂಡ, ನಾನು ಬಾಳಿ ಬದುಕಿದ ಊರಿದು..ಅದು ಬಿಟ್ಟು ಬ್ಯಾರೆ ಕಡೆ
ಬಂದು ಪರ್ದೇಸಿ ಹಂಗೆ ಸಾಯ್ಲಾ ನಾನು..’
ಎಂದು ತಾನೂ ಊರಲ್ಲೇ ಇರುವುದಕ್ಕೆ ಕಾರಣವನ್ನೂ ಕೊಟ್ಟಿದ್ದಲ್ಲದೇ ‘ಬೆಂಗ್ಳೂರು ಅಂದ್ರೆ ಊರಮ್ಮಿ ಅದೂ..ಥೂತ್..ಜನ ಬದ್ಕಕಾತದಾ..ಹತ್ತಿ
ಹಣ್ಣೊಲ್ಗಿರಾ ಹುಳುಗಳಾದ್ರೂ ವಾಸಿ..ಚಂದಾಗಿ ಬದುಕ್ತವಾ..ಇನ್ನಷ್ಟು ವರ್ಸ ನೋಡ್ಕಾ..ಬೆಂಗ್ಳೂರು ಮುಳ್ಗೋಯ್ತದೆ..’ ಎಂಬ ಅರ್ಥವಿಲ್ಲದ, ತರ್ಕಕ್ಕೆ ನಿಲುಕದ ನುಡಿಮುತ್ತು ಉದುರಿಸಿ ಬೆಂಗಳೂರಿಗರನ್ನು ನರಕವಾಸಿಗಳೆಂಬಂತೆ ಚಿತ್ರಿಸಿದ್ದಳು.ಊರಲ್ಲಿದ್ದ
ಎರಡು ಗುಂಟೆ ಜಮೀನನ್ನು ಕರಿಬಸಪ್ಪನಿಗೆ ‘ವಾರ’ಕ್ಕೆ ಕೊಟ್ಟಿದ್ದಳು.ಅವನು ಅದರಲ್ಲಿ ಉತ್ತಿಬೆಳೆದು
ವರ್ಷಕ್ಕಿಷ್ಟು ಅಂತ ಕೊಡಬೇಕಿದ್ದರೂ ಅವನು ವರ್ಷಕ್ಕೆ ಕೊಡುತ್ತಿರಲಿಲ್ಲ. ‘ಎಲ್ಲಾನೂ ಮನೇಲಿಟ್ಕಂಡು ಏನ್ಮಾಡಿಯಾ..ಹುಡುಗ್ರು
ಊರ್ಲಿ ಪೋಲಿಬಿದ್ದೋಗವೆ..ಇಸ್ಪೇಟು ಆಡೋಕು ಕಾಸಿನಾಟ ಆಡಕೂ ಕಾಸಿಲ್ಲಾಂದ್ರೆ ಮನೆಗೆ ನುಗ್ಗಲ್ಲಾಂತ
ಏನ್ ಗ್ಯಾರಂಟೀ..ಅದ್ಕೆ ಬೇಕಾದಗ್ ಬೇಕಾದಗ್ ಬಂದು ಈಸ್ಕೊಂಡು ಹೋಗಯಂತೆ..’ಎಂದಿದ್ದನು. ಮತ್ತು ನೀಯತ್ತಿನಿಂದ ಹಾಗೆ ನಡೆದುಕೊಳ್ಳುತ್ತಿದ್ದನು.
‘ಬಸಣ್ಣ..ರಾಗಿ ಮುಗ್ದೋಗದಕಯ್ಯೋ..’ ಎಂದು ಕೇಳಿದರೆ ‘ಮನೆತವ್ಕ ಬವ್ವೋ..ಅಮ್ಯಾಕೆ ರಾಗಿ ಈಸ್ಕಂಡೋಗಿ ಮುದ್ಕಿ
ನೀನು ಮಿಲ್ಲುಗೂ ಮನ್ಗೂ ಓಡಾಡೀಯಾ..ಎಷ್ಟುಬೇಕಷ್ಟು ರಾಗಿ ಹಿಟ್ನೇ ಈಸ್ಕಂಡುಹೋಗು..’ಎನ್ನುತ್ತಿದ್ದನು.‘ಖರ್ಚಿಗೇನಾರ ಬೇಕಮ್ಮೋ..’ ಎಂದೂ ಕೇಳುತ್ತಿದ್ದನು.ಮಗಳು
ವರ್ಷಕ್ಕೊಮ್ಮೆ ಮನೆಗೆ ಬಂದಾಗ ‘ಅಮ್ಮೋ..ನಿನ್ನ್ ಮಗಳೇನಾರ ರಾಗಿಜೋಳ ಮನೆಗೆ ತಗೊಂಡೋದಳಾ ಕೇಳು..ಬೆಂಗ್ಳೂರಂದ್ರೆ
ಎಲ್ಲಕೂ ಖರ್ಚು..’ಎಂದೂ ತಾನೇ ವಿಚಾರಿಸುತ್ತಿದ್ದನಲ್ಲದೇ ಒಂದೆರೆಡು
ಕೊಳಗ ರಾಗಿಯನ್ನೋ,ಜೋಳವನ್ನೋ ಕೊಟ್ಟುಕಳುಹಿಸುತ್ತಿದ್ದನು.‘ಅದ್ಕೆ ಕಣಪ್ಪ..ದೇವ್ರು ನಿನ್ನಾ ಬಂಗಾರದಂಗಿಟ್ಟಿರಾದು..ನೀನು
ನೂರ್ಕಾಲ ಬಾಳಪ್ಪ..’ ಎಂದು ಮನಸಾರೆ ಹರಸುತ್ತಿದ್ದಳು.
ಬೆಳಗೆದ್ದ ತಕ್ಷಣ ಹೊಲದ ಕಡೆಗೆ ನಡೆದುಬಿಡುವ ಓಬವ್ವ ಅಲ್ಲಿ ಓಡಾಡಿ ಕಳೆಕಿತ್ತು ಬರುತ್ತಾಳೆ. ಕೆಲಸ
ನಡೆಯುವಾಗಲಂತೂ ತಾನು ಬೇರೆಯವರಿಗೆ ವಾರಕ್ಕೆ ಹಾಕಿದ್ದೇನೆ ಎಂಬುದನ್ನು ಮರೆತು ತನ್ನದೇ ಹೊಲ ಎಂಬಂತೆ
ಕೆಲಸ ಮಾಡುತ್ತಾಳೆ.ದಿನವೆಲ್ಲಾ ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾಳೆ. ಪ್ರತಿ ತಿಂಗಳೂ ಮಗಳು
ಕಳಿಸುವ ‘ನೂರೈವತ್ತು ರೂಪಾಯಿಗಳ ಮನಿಯಾರ್ಡರ್ ಅನ್ನು ಜೋಪಾನವಾಗಿಟ್ಟುಕೊಳ್ಳುತಾಳೆ.
ತನ್ನ ಗುಡಿಸಲಿಗಿಂತ ಸ್ವಲ್ಪ ಚೆನ್ನಾಗಿರುವ ಮನೆಯಲ್ಲಿ ಮದ್ಯಾಹ್ನ ಯಾವುದಾದರೊಂದು ಬಟ್ಟೆಗೆ ತೇಪೆಹಾಕುತ್ತಾಳೆ.ಸಂಜೆಯಾಗುತ್ತಿದ್ದಂತೆ
ರುಕ್ಮಿಣಮ್ಮನ ಮನೆಕಡೆಗೆ ಟಿವಿ ನೋಡಲು ಹೊರಟುಬಿಡುತ್ತಾಳೆ. ರುಕ್ಮಿಣಮ್ಮನೂ ಅಷ್ಟೇ..ರಾಜ್ಕುಮಾರ್
ಸಿನಿಮಾಗಳು, ದೇವರ ಸಿನಿಮಾಗಳಿದ್ದರೆ
ಅಡ್ವಾನ್ಸಾಗಿ ಹೇಳಿಬಿಡುತ್ತಾಳೆ.ಸಂಜೆ ಏಳು ಗಂಟೆಯಿಂದ ಓಬವ್ವನಿಗೆ ಬೇರೇಯದೇ ಪ್ರಪಂಚ ತೆರೆದುಕೊಳ್ಳುತ್ತದೆ.ಅದು
ನೆನೆಪಿನಾಳದಲ್ಲಿ ನಶಿಸಿಹೋಗುತ್ತಿರುವ ತನ್ನಪ್ಪ ಅಮ್ಮರ ನೆನಪು , ತನ್ನೂರು
ಬಾಲ್ಯಗಳನ್ನೂ ನೆನೆಪಿಸುತ್ತದೆ. ಒಮ್ಮೊಮ್ಮೆ ಎಲ್ಲಾ ಕಳೆದೇಹೋಯಿತೆ..ಅಂತಲೂ ಅನಿಸಲಿಕ್ಕೆ ಶುರುವಾದರೂ
ಮಗಳ ನೆನಪು ಮೊಮ್ಮಕ್ಕಳ ನೆನಪು ಅವಳನ್ನು ಆ ವಿಷಾದದ ಭಾವದಿಂದ ಹೊರತರುತ್ತದೆ.
ಈಗ್ಗೆ ತಿಂಗಳ ಹಿಂದೆ ಮಗಳು ರೇಣುಕ ಊರಿಗೆ ಬಂದವಳು
‘ಸುಮ್ಕೆ ನನ್ ಜೊತೆ ಹದಿನೈದಿನ ಇದ್ದೋಗವಂತೆ ಬಾಮ್ಮ..ಎಂದು
ಬಲವಂತ ಮಾಡಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಳು.ಒಂದು ಸಾರಿ ನೋಡಿಯೇ ಬಿಡೋಣ ಎಂದು ಮನಸ್ಸಿನಲ್ಲೇ
ನಿರ್ಧಾರ ಮಾಡಿದ್ದ ಓಬವ್ವನೂ ಮಗಳ ಜೊತೆ ಬೆಂಗಳೂರಿನ ಬಸ್ಸತ್ತಿಬಿಟ್ಟಿದ್ದಳು.ಪ್ರತಿ ಸ್ಟಾಪು ಬಂದಾಗಲೂ
‘ಈಗ ಇಳಿಯಬೇಕೇನೋ..’ ಎಂಬಂತೆ ಮಗಳ ಕಡೆ ನೋಡಿದರೆ ಮಗಳು
ಆ ಯಾವ ಲಕ್ಷಣವನ್ನೂ ತೋರಿಸದೆ ನಿದ್ರೆಯಲ್ಲಿಯೇ ಇರುತ್ತಿದ್ದಳು. ಬಸ್ಸು ಹೋಗುತ್ತಲೇ ಇದ್ದದ್ದನ್ನು
ಕಂಡ ಓಬವ್ವನಿಗೆ ಇದ್ಯಾವುದೋ ಬೇರೆಯದೆ ದೇಶಕ್ಕೆ ಹೋಗುತ್ತಿದ್ದೇನೆ ಎನಿಸಿಬಿಟ್ಟಿತ್ತು. ಹೋದಷ್ಟು
ಮುಗಿಯದ ಪಯಣ ಓಬವ್ವನಿಗೆ ಅದೆಷ್ಟು ರೇಜಿಗೆ ತಂದಿತೆಂದರೆ ‘ಬರುವಾಗ ಹೇಗಪ್ಪಾ ಬರುವುದು’..ಎಂಬ ಚಿಂತೆಯನ್ನು ಹೋಗುವಾಗಲೇ
ಹತ್ತಿಸಿ ಹಿಂಡಿ ಹಿಪ್ಪೆ ಮಾಡಿತ್ತು. ಅಂತೂ ಇಂತೂ ಬೆಂಗಳೂರು ತಲುಪಿದಾಗ ಸಂಜೆ ಆರಾಗಿತ್ತು. ಮೆಜಸ್ಟಿಕ್ಕಿನಲ್ಲಿಳಿದಾಗ
ಅಲ್ಲಿನ ಜನಜಂಗುಳಿ ನೋಡಿ ಓಬವ್ವ ಹೌಹಾರಿದ್ದಳು. ತನ್ನೂರಿನ ವಾರಕ್ಕೊಮ್ಮೆ ನಡೆಯುವ ಸಂತೆಯಲ್ಲಿರಲಿ,
ವರ್ಷಕ್ಕೊಮ್ಮೆ ನಡೆಯುವ ತನ್ನೂರ ದೊಡ್ಡ ಜಾತ್ರೆಯಲ್ಲೂ ಇಂಥ ಜನಸಂಖ್ಯೆಯನ್ನು ಕಂಡಿರಲಿಲ್ಲ. “ಯಾನವ್ವ ಏನಾರ ಇಸೇಸ ಇದ್ದದ್ದ ಈವತ್ತು..ಈಪಾಟಿ ಜನ ಅವ್ರಲ್ಲಾ..” ಎಂದು ಮಗಳನ್ನು ಕೇಳಿದ್ದಕ್ಕೆ
“ಇಲ್ಲಿ ದಿನ ಹಿಂಗಿಯಕಮ್ಮಾ..ಬೇಗಬೇಗ ಹೆಜ್ಜೆಹಾಕು
ಇಲ್ಲಾಂದ್ರೆ ಬಸ್ಸಿಗಲ್ಲ..” ಎಂದು ಓಡುವ ತರದಲ್ಲಿ ಓಬವ್ವನನ್ನು
ನಡೆಸಿದ್ದಳು. ಕಿಕ್ಕಿರಿದು ತುಂಬಿದ್ದ ಬಸ್ಸಿನಲ್ಲಿ ತೂರಿಕೊಂಡು ಮೈಯನ್ನೆಲ್ಲ ನುಜ್ಜುಗುಜ್ಜಾಗಿಸಿಕೊಂಡು
ಮನೆಗೆ ತಲುಪವಷ್ಟರಲ್ಲಿ ಓಬವ್ವನಿಗೆ ಮತ್ತೊಮ್ಮೆ ಹುಟ್ಟಿಬಂದಂತಾಗಿತ್ತು. ಮಗಳ ಮನೆಯಲ್ಲಿ ವಾರ ಕಳೆಯುವಷ್ಟರಲ್ಲಿ
ಓಬವ್ವನಿಗೆ ಅದ್ಯಾವಾಗ ತನ್ನೂರಿಗೆ ಹೋಗಿಬಿಡುತ್ತೇನೋ ಎಂದು ನೂರಾರು ಬಾರಿ ಅನ್ನಿಸಿಬಿಟ್ಟಿತ್ತು.
ಅಳಿಯ ಸದಾಶಿವ ಮುನ್ಸಿಪಾಲಿಟಿಯ ನೌಕರನಾಗಿದ್ದ. ಮಗಳು ನಾಲ್ಕಾರು ಮನೆಯಲ್ಲಿ ಮುಸುರೆ ಕೆಲಸ ಮಾಡುತ್ತಿದ್ದಳು.ಬೆಳಿಗ್ಗೆದ್ದ
ತಕ್ಷಣ ಇಬ್ಬರು ಹೊರಟುಬಿಡುತ್ತಿದ್ದರು. ಮನೆಯಲ್ಲಿ ಓಬವ್ವ ಒಂಟಿಯಾಗಿಬಿಡುತ್ತಿದ್ದಳು. ಅದೊಂದು ದಿನ
“ಮನೇಲಿ ಕೂತ್ಕಂಡು ಏನ್ಮಾಡಿಯವ್ವೋ..ಬಾ ಸುಮ್ಕೆ
ನಂಜೊತೆ..” ಎಂದು ರೇಣುಕ ತಾನು ಕೆಲಸ ಮಾಡುವ
ಮನೆಗೆ ಕರೆದುಕೊಂಡು ಹೋಗಿದ್ದಳು. ಅವರು ಆವತ್ತು ಹೇಗೊ ರಜಾದಿನವಾದ್ದರಿಂದ ಬಿಗ್ ಬಜಾರಿಗೆ ತಮ್ಮ ಕಾರಿನಲ್ಲೇ
ಕರೆದುಕೊಂಡು ಹೋಗಿದ್ದಲ್ಲದೆ ಓಬವ್ವನಿಗೆ ಮುನ್ನೂರು ರೂಪಾಯಿಗಳ ಸೀರೆ ಕೊಡಿಸಿದ್ದರು.ಅದು ಹಬ್ಬದ ಸಮಯವಾದ್ದರಿಂದ
ಬಿಗ ಬಜಾರಿನಲ್ಲಿ ಸೀರೆ ಕೊಂಡಾಗ ಅದರ ಜೊತೆ ಕೂಪನ್ ಕೂಡ ಕೊಟ್ಟಿದ್ದರು. ರೇಣುಕ ಅದನ್ನು ತೆಗೆದುಕೊಂಡಳು
‘ಇದೆಲ್ಲಾ ಸುಮ್ಕೆ..’ ಎಂದದ್ದಲ್ಲದೆ ಅದರಲ್ಲಿ ಓಬವ್ವನ
ಹೆಸರು ಬರೆದು ಡಬ್ಬಿಗೆ ಹಾಕಿದ್ದಳು.
ಎಲ್ಲಾ ಮುಗಿಸಿ ಬಿಗ್ ಬಜಾರಿನಲ್ಲೆಲ್ಲಾ ಸುತ್ತಾಡಿದರು.
ಓಬವ್ವನಿಗಂತೂ ಅದೆಂತದೋ ಬೆರಗು..!ಮನೆಯವರು ತಾವು ಹೋಗುತ್ತೇವೆ ಎಂದಾಗ ‘ಅಮ್ಮಾವ್ರೆ ನಾವು ಬಸ್ಸಲ್ಲಿ ಹೋಯ್ತೀವಿ ನೀವೋಗಿ..’ ಎಂದು ರೇಣುಕಾಳೇ ಅವರನ್ನು ಕಳುಹಿಸಿ
ತನ್ನವ್ವನನ್ನು ಸುತ್ತಾಡಿಸಿದ್ದಳು. ಸಂಜೆಯಾಗುವರೆಗೂ ಅಲ್ಲೇ ಕಳೆದು ಇನ್ನೇನು ಮನೆಗೆ ಹೋಗಲು ನೆಲಮಹಡಿಯತ್ತ
ಧಾವಿಸುತ್ತಿದ್ದಾಗ ಅಲ್ಲಿ ಜನರೆಲ್ಲಾ ನೆರೆದಿರುವುದು ಕಾಣಿಸಿತು. ಏನಿರಬಹುದೆಂಬ ಕುತೂಹಲದಿಂದ ಅಮ್ಮನನ್ನು
ಎಳೆದುಕೊಂಡು ಅತ್ತ ಸಾಗಿದಳು. ಅಲ್ಲಿ ಆವತ್ತು ಚಿತ್ರನಟಿ ಬಂದಿದ್ದಳು. ಆವತ್ತು ಕೂಪನ್ನುಗಳ ಡ್ರಾ
ದಿನವಾದರಿಂದ ಸಣ್ಣಮಟ್ಟದ ಸಂಗೀತವೂ ಅಲ್ಲಿತ್ತು. ಓಬವ್ವನಂತೂ ವರ್ಣಿಸಲಾಗದ ಭಾವನೆಯೊಂದಿಗೆ ಮಗಳ ಕೈಯನ್ನು
ಭದ್ರವಾಗಿ ಹಿಡಿದುಕೊಂಡೇ ನಿಂತಿದ್ದಳು. ಸುತ್ತಮುತ್ತಲ ಜನಜಂಗುಳಿ, ಅವರ
ಸಂಭ್ರಮಗಳು ಮುಂತಾದವುಗಳನ್ನು ಎವೆಯಕ್ಕದೆ ನೋಡುತ್ತಿರುವ ಅಮ್ಮನನ್ನು ಕಂಡು ರೇಣುಕಳಿಗೆ ಕೂಡ ಎಂಥದೋ
ಖುಷಿಯಾಗಿತ್ತು..ಅದೇ ಖುಷಿಯಲ್ಲಿದ್ದವಳಿಗೇ ಯಾರೋ ಓಬವ್ವ ಎಂದು ಕೂಗಿದ ಹಾಗೆ ಭಾಸವಾಗಿತ್ತು.ಹೌದು
ಕರೆಯುತ್ತಿದ್ದರು..ಅದೂ ಮೈಕಿನಲ್ಲಿ..ರೇಣುಕಾಳಿಗೆ ಮೊದಲಿಗೆ ಗಾಬರಿಯಾಗಿತ್ತು..ಆದರೆ ವಿಷಯ ತಿಳಿದ
ಮೇಲೆ ಖುಷಿಯಾಗಿತ್ತು. ಓಬವ್ವನ ಹೆಸರಿನಲ್ಲಿ ಹಾಕಿದ್ದ ಲಕ್ಕಿ ಡ್ರಾ ಕೂಪನ್ನಿಗೆ ನಾಲ್ಕನೇ ಬಹುಮಾನ
ಬಂದಿತ್ತು. ‘ಇಲ್ಲಿದ್ದರೆ ಈಗಲೇ ಬಂದು ತೆಗೆದುಕೊಂಡು ಹೋಗಬಹುದು..ಇಲ್ಲವಾದಲ್ಲಿ
ನಾವು ಕರೆ ಮಾಡಿ ತಿಳಿಸುತ್ತೇವೆ..’ ಮೈಕಿನಲ್ಲಿ ಅನೌನ್ಸ್ ಮಾಡುತ್ತಿದ್ದರು. ರೇಣುಕಾ ಖುಷಿಯಿಂದ ಹೋದಾಗ ಅವರು ಓಬವ್ವಳೇ ಬರಬೇಕೆಂದು
ಜೊತೆಗೆ ಏನಾದರೂ ಗುರುತಿನ ಚೀಟಿ ತರಬೇಕೆಂದೂ ಹೇಳಿ ಇಕ್ಕಟ್ಟಿಗೆ ಸಿಲುಕಿಸಿದ್ದರು. ಅದರಲ್ಲೂ ಓಬವ್ವನನ್ನು
ಸ್ಟೇಜಿನ ಮೇಲಕ್ಕೆ ಕರೆದುಕೊಂಡು ಹೋಗುವಷ್ಟರಲ್ಲಿ ರೇಣುಕಾಳಿಗೆ ಸಾಕು ಸಾಕಾಗಿತ್ತು. ಕೊನೆಗೆ ಜೋರಾಗಿ
ಗದರಿದ ಮೇಲೆಯೇ ಓಬವ್ವ ಸ್ಟೇಜು ಹತ್ತಿದ್ದು.ಆಗ ತಾನೆ ಕೊಂಡಿದ್ದ ಸೀರೆ, ಕೂಪನ್ನಿನ ಅರ್ಧಭಾಗವನ್ನೆಲ್ಲಾ ತೋರಿಸಿದ ಮೇಲೆ ಆಯೋಜಕರು ಗಿಫ಼್ಟ್ ಬಾಕ್ಸ್ ಕೊಟ್ಟು ಕಳುಹಿಸಿದ್ದರು.
ಮನೆಗೆ ಬಂದವರೇ ಆ ಡಬ್ಬದಲ್ಲಿ ಏನಿರಬಹುದೆಂದು ಕುತೂಹಲದಿಂದ
ತೆಗೆದುನೋಡಿದರೆ ಅದೊಂದು ಡಿವಿಡಿ ಪ್ಲೇಯರ್ ಆಗಿತ್ತು. ಈಗಾಗಲೇ ರೇಣುಕಾಳ ಮನೆಯಲ್ಲಿ ಒಂದು ಡಿವಿಡಿ
ಪ್ಲೇಯರ್ ಇತ್ತಾದ್ದರಿಂದ ಈ ಡಿವಿಡಿ ಪ್ಲೇಯರನ್ನು ಮಾರಿ ಬಿಡೋಣವೆನ್ನಿಸಿದರೂ ಓಬವ್ವನ ಜೀವಮಾನದಲ್ಲಿ
ಬಂದ ಮೊಟ್ಟಮೊದಲ ಬಹುಷ ಕಟ್ಟ ಕಡೆಯ ಕೊಡುಗೆ ಅದಾದ್ದರಿಂದ ಅದನ್ನು ಮಾರಲು ಮನಸು ಒಪ್ಪಿರಲಿಲ್ಲ. ‘ಕೊಡದ್ಕೊಡ್ತಾ ನನ್ಮಕ್ಳು ಸೀರನಾ ಬಟ್ಟೆನಾ ಪಾತ್ರನಾ
ಪಗಡಾನ ಕೊಡಕಾಗ್ಲಿಲ್ವಾ..’ ಎಂದು ರೇಣುಕಾ ಬೈದುಕೊಂಡಿದ್ದಳು.
ಓಬವ್ವನಿಗೂ ಇದ್ದಕ್ಕಿದ್ದಂತೆ ದಕ್ಕಿದ ಅನಿರೀಕ್ಷಿತ ಡಿವಿಡಿ ಪ್ಲೇಯರ್ ಒಂದು ವರದಂತೆಯೇ ಕಂಡಿತು.
ಎಲ್ಲೋ ಇದ್ದ ತನ್ನನ್ನು ಈ ಬೆಂಗಳೂರಿಗೆಳೆತಂದು ದೇವರು ಅದ್ಯಾವುದೊ ಸಕಾರಣಕ್ಕಾಗಿಯೇ ತನಗೀ ಕೊಡುಗೆ
ನೀಡಿರಬೇಕೆಂದು ಓಬವ್ವ ಬಲವಾಗಿ ನಂಬಿಬಿಟ್ಟಳಲ್ಲದೆ ‘ಬುಡವ್ವಾ ನಾ ಅದ್ನ ಊರ್ಗೆ ತಕ್ಕಂಡೋಯ್ತೀನಿ..’ ಎಂದಳು. ಅದಕ್ಕೆ ವಿಚಿತ್ರವಾಗಿ
ಅವ್ವನನ್ನೇ ನೋಡಿದ ರೇಣುಕಾ, ‘ಅಮೌ
ಅದನ್ನೇನಂತ ತಿಳ್ಕಂದಿದೈ..ಡಿವಿಡಿ ಪ್ಲೇಯರು..ಸೀಡಿ ಕ್ಯಾಸೆಟ್ಟು ತಕ್ಕಂಬಂದು ಸಿಲ್ಮಾ ನೋಡದು..ಬರೀ
ಅದ್ನ ತಕ್ಕಂಡೋಗಿ ಏನ್ಮಾಡೀಯಾ..ಟಿವಿನೂ ಬೇಕು ಅದ್ರ ಜೊತೆಗೆ..ಮುಂಡ ಮಕ್ಳು ಬರೀ ಡಿವಿಡಿ ಪ್ಲೇಯರ್ರು
ಕೊಟ್ಟವ್ರಲ್ಲಾ..ಟಿವೀನಾ ಅವ್ರಪ್ಪಂದ್ರು ಕೊಟ್ಟಾರಾ..?’ ಎಂದು ಆಯೋಜಕರನ್ನು ಬೈದಿದ್ದಳು.
‘ನಂಗ ಅಷ್ಟೂ ಗೊತ್ತಿಲ್ಲ್ವಮ್ಮೀ ..ನಿಮ್ಮನೇಲೇ ಇಲ್ವಾ..ನಾಯೇನ
ಪೆದ್ದಿ ಅನ್ಕಂಡ್ಯಾ..ಗೊತ್ತು ಕಣಮ್ಮಿ..ಅಲ್ಲಿ ಎಂಗಿದ್ರೂ ರುಕ್ಮಿಣಮ್ಮನ ಮನೇಲಿ ‘ಇದಿಲ್ಲಾ ಒಂದ ತಕ್ಕ ಬೇಕೂಂತಿದ್ದಳು..ಅವ್ರಿಗೆ
ಕೊಟ್ರಾಯ್ತು..ಎಂಗಿದ್ರೂ ಊರ್ನಲ್ಲಿ ನೋಡ್ಕಬೇಕಾದವ್ರು ಅವ್ರು ತಾನೆ..ಕಷ್ಟಸುಖಕ್ಕ ನಿನ್ನ ನೆಚ್ಚಿಕೊಳ್ಳಕಾಯ್ತದಾ..ನೀ
ಈ ಊರಿಂದ ಬರಗಂಟ ನನ್ನ ಹೆಣ ಮಣ್ಣಲ್ಲಿ ಮಣ್ಣಾಗೋಗಿರುತ್ತಾ ..ಅಷ್ಟಿಯ..ಕೊಡು ಅವ್ರಿಗೆ ಕೊಡ್ತೀನಿ..’ ಎಂದಿದ್ದಳು. ಅದ್ಯಾಕೆ ಹಾಗೆ
ಸುಳ್ಳು ಹೇಳಿದ್ದಳೋ ಓಬವ್ವನಿಗೂ ಗೊತ್ತಿರಲಿಲ್ಲ.ಒಟ್ಟಿನಲ್ಲಿ ತನಗದು ಸೇರಿದ್ದು ಎಂಬ ಭಾವ ಅವಳನ್ನಾಕ್ರಮಿಸಿಕೊಂಡಿತ್ತು.ರೇಣುಕಾಳಿಗೆ
ಆ ಡಿವಿಡಿ ಪ್ಲೇಯರನ್ನು ಓಬವ್ವನಿಗೆ ಕೊಡದೇ ಬೇರೆ ದಾರಿಯಿರಲಿಲ್ಲ.
ಡಿವಿಡಿ ಪ್ಲೇಯರಿನೊಂದಿಗೆ ತನ್ನೂರಿಗೆ ಬಂದ ಓಬವ್ವನಿಗೆ
ರಾಜ್ಯವನ್ನು ಗೆದ್ದು ತನ್ನ ಜೊತೆ ತೆಗೆದುಕೊಂಡು ಬಂದಷ್ಟೇ ಸಂತೋಷವಾಗಿತ್ತು. ಬಂದ ತಕ್ಷಣವೇ ಅದನ್ನು
ಜೋಪಾನದಿಂದ ಹೊರತೆಗೆದು ತನ್ನ ಗುಡಿಸಲು ಬಾಗಿಲು ಮುಚ್ಚಿ ತಿರುಗಿಸಿ ಮುರುಗಿಸಿ ನೋಡಿದಳು. ನಂತರ ಮನೆಯಲ್ಲಿದ್ದ
ಒಂದೇ ಒಂದು ಕುರ್ಚಿಯನ್ನು ಪ್ರಯಾಸದಿಂದ ಹೊತ್ತು ತಂದು ಮೂಲೆಯಲ್ಲಿಟ್ಟು ಅದನ್ನು ಚೆನ್ನಾಗಿ ತಿಕ್ಕಿ
ತಿಕ್ಕಿ ಒರೆಸಿದಳು. ಆಮೇಲೆ ಅದರ ಮೇಲೆ ತನ್ನ ಸೀರೆಯನ್ನು ಮಡಚಿಟ್ಟಳು. ಆನಂತರ ಡಿವಿಡಿ ಪ್ಲೇಯರ್ ಮತ್ತು
ಅದರ ರಿಮೋಟನ್ನು ಪ್ರತಿಷ್ಟಾಪಿಸಿದವಳು ಆ ಕುರ್ಚಿಯ ಮುಂದೆ ಕುಳಿತು ಸುಮಾರು ಹೊತ್ತು ಅದರೆಡೆಗೇ ದೃಷ್ಟಿ
ನೆಟ್ಟುಕೊಂಡು ಕುಳಿತ್ತಿದ್ದಳು. ಆವತ್ತು ರುಕ್ಮಿಣಮ್ಮನ ಮನೆಗೂ ಹೋಗಲಿಲ್ಲ.
ಮಾರನೆಯ ದಿನ ಆ ಡಿವಿಡಿ ಪ್ಲೇಯರನ್ನು ಏನು ಮಾಡುವುದೆಂದು
ಯೋಚಿಸತೊಡಗಿದಳು. ಟಿವಿಯಿಲ್ಲದ ಆ ಡಿವಿಡಿ ಯಾತಕ್ಕೂ ಬಾರದ ವಸ್ತುವಾದರೂ ಓಬವ್ವನಿಗೆ ಹಾಗೆನಿಸಲಿಲ್ಲ.
ಹೇಗೋ ಏನೋ ಮಾಡಿ ಒಂದು ಟಿವಿಯನ್ನು ತಂದುಬಿಟ್ಟರೆ ತನ್ನಿಷ್ಟ ಬಂದ ರಾಜ್ಕುಮಾರು, ದೇವರ ಸಿನಿಮಾಗಳನ್ನು ನೋಡಬಹುದೆನಿಸಿತು.
ಅದಕ್ಕಾಗಿಯೇ ಇರಬೇಕು ದೇವರು ತನಗಿದನ್ನು ಕರುಣಿಸಿರಬೇಕೆಂದು ಬಲವಾಗಿ ಓಬವ್ವನಿಗೆ ಅನಿಸತೊಡಗಿತು.
ಊರಿಗೆ ಬಂದು ಎರಡು ದಿನವಾದರೂ ಓಬವ್ವ ಮನೆಬಿಟ್ಟು ಹೊರಬರಲಿಲ್ಲ. ಯಾರಾದರೂ ಡಿವಿಡಿ ಪ್ಲೇಯರ್ ಕದ್ದುಬಿಟ್ಟರೇ..?
ಎಂಬ ಭಯ ಅವಳನ್ನು ಕಾಡತೊಡಗಿತ್ತು. ಹಾಗೆಯೇ ಮಗಳು ಕೊಟ್ಟಿದ್ದ ರಾಜ್ಕುಮಾರ ಚಿತ್ರಗಳ ಸಿಡಿಗಳನ್ನೂ ಪ್ಲೇಯರಿನ ಮೇಲೆಯೇ ಇಟ್ಟಿದ್ದಳು.
ತಾನು ಟಿವಿ ತಂದರೆ ಇದನ್ನೆಲ್ಲಾ ಹೇಗೆ ಫ಼ಿಕ್ಸ್ ಮಾಡುವುದು ಎಂಬ ಯೋಚನೆ ಬಂದರೂ ಮೇಲಿನಮನಿ ವೀರಭದ್ರನನ್ನು ಕರೆಸಿ ಎಲ್ಲಾ
ರೆಡಿ ಮಾಡಿಸಿ ಬರೀ ಸ್ವಿಚ್ಚು ಹಾಕುವ ಹಾಗೆ ಮಾಡಿಕೊಂಡರಾಯಿತು ಎಂದು ತನ್ನನ್ನೇ ಸಮಾಧಾನ ಮಾಡಿಕೊಂಡಿದ್ದಳು.
ಮೂರನೆಯ ದಿನ ಮನೆಯಿಂದ ಹೊರಗೆ ಹೊರಟ ಓಬವ್ವ ಬಾಗಿಲ್ಲನ್ನು
ಎರೆಡೆರೆಡು ಬಾರಿ ಎಳೆದೆಳೆದು ಭದ್ರವಾಗಿದೆ ಎಂಬುದನ್ನು ಖಾತ್ರಿಮಾಡಿಕೊಂಡಿದ್ದಳು. ಅದಕ್ಕೂ ಮುನ್ನ
ಡಿವಿಡಿ ಪ್ಲೇಯರಿನ ಮೇಲೆ ಒಂದು ಬಟ್ಟೆ ಹೊದಿಸಿ ಅದರ ಮೇಲೆ ಒಂಚೂರು ಅರಿಶಿನ ಕುಂಕುಮ ಸಿಂಪಡಿಸಿದ್ದಳು.ಯಾರಾದರೂ
ಬಂದರೆ ಏನೋ ದೇವರದ್ದು ಎಂದುಕೊಂಡು ಮುಟ್ಟದೆ ಇರಲಿ ಎಂದು ಹಾಗೆ ಮಾಡಿದ್ದಳು. ಆದರೆ ರುಕ್ಮಿಣಮ್ಮನ
ಮನೆಗೆ ಕಾಲಿಡುತ್ತಿದ್ದಂತೆಯೇ ರುಕ್ಮಿಣಮ್ಮ ‘ಓಬವ್ವ ಅದೇನ ಡಿವಿಡೀ ಪ್ಲೇಯರು ತಕ್ಕಬಂದಿದ್ದಿಯಂತಲ್ಲ..ನಿನ ಮಗ್ಳು ಫೋನು
ಮಾಡಿದ್ಲು..ಎಲ್ಲಿ ತಕ್ಕಂಡೇ ಬರ್ನಿಲ್ಲಾ..’
ಎಂದು ಬಿಟ್ಟಿದ್ದು ರುಕ್ಮಿಣಮ್ಮನಿಗೆ ಮಗಳ ಮೇಲೆ ಅಸಾಧ್ಯವಾದ ಕೋಪ ಬರಿಸಿಬಿಟ್ಟಿತ್ತು.
‘ತಕ್ಕಬರವು ಅನ್ಕಂಡಿದ್ದಿ..ಮರ್ತೋದಿ..ನಾಳ ತಕ್ಕಂಬತ್ತೀನಿ..’ ಹೇಗೋ ಸಾವರಿಸಿಕೊಂಡು ಉತ್ತರಕೊಟ್ಟಳು.
‘ಮರಿಬ್ಯಾಡಕನವ್ವೋ..ನಾನು ಅದ್ಕಿಯ ನನ್ ಮಗನ್ನ ಕೈಲಿ
ಒಂದೆರೆಡು ದೇವ್ರು ಪಿಚ್ಚರ್ದು ಕ್ಯಾಸೆಟ್ಟು ತರ್ಸಿವ್ನಿ..ಇಬ್ರು ಕುಂತ್ಕಂದು ನೋಡವು..’ ಎಂದಾಗ ಓಬವ್ವನಿಗೆ ಹೇಗೇಗೊ ಆಯಿತು.ಆವತ್ತು
ಇಡೀ ದಿನ ಯಾವ ಧಾರಾವಾಹಿಯ ಕಥೆಯೂ ಓಬವ್ವನಿಗೆ ತಟ್ಟಲಿಲ್ಲ.
ಆವತ್ತೇ ಕೊನೆ ಆಮೇಲಿನಿಂದ ರುಕ್ಮಿಣಮ್ಮನ ಮನೆ ಕಡೆಗೆ
ತಲೆ ಹಾಕಿರಲಿಲ್ಲ.. ಎಲ್ಲಾದರೂ ದಾರಿಯಲ್ಲಿ ಸಿಕ್ಕಿಬಿಟ್ಟಾಳು ಎಂದು ನೋಡಿಕೊಂಡೆ ಓಡಾಡುತ್ತಿದ್ದಳು.
ಆದರೂ ಅದ್ಯಾವ ಮಾಯೆಯಲ್ಲೋ ದಾರಿಯಲ್ಲಿ ಅದೊಂದು ದಿನ ರುಕ್ಮಿಣಮ್ಮನೇ ಎದುರಾಗಿಬಿಟ್ಟಿದ್ದಳು..ಆಗ ಓಬವ್ವ
ಎರಡ್ಮೂರು ಬಾರಿ ಕೆಮ್ಮಿ ‘ಯಾನ ಗೊತ್ತಿಲ್ಲಕವ್ವ..ಸ್ಯಾನೆ ಕೆಮ್ಮು..ಅದ್ಕೆ
ಬಂದಿರ್ಲಿಲ್ಲ..ನಾಳೆಯಿಂದ ಬತ್ತೀನಿ..ವಯಸ್ಸಾದ್ಮ್ಯಾಲ ನಿಂಗೆ ಗೊತ್ತಲ್ಲವಾ..’ ಎಂದು ಅವಳೆದುರು ಜೋರಾಗಿ ಕೆಮ್ಮಿ
ಕೆಮ್ಮಿ ಅಲ್ಲಿಂದ ತಪ್ಪಿಸಿಕೊಂಡಿದ್ದಳು.
ಮೆಕ್ಯಾನಿಕ್ ರಂಗನ ಅಂಗಡಿಗೆ ಹೋದ ಓಬವ್ವ ‘ಒಂದ್ ಟಿವಿ ಎಷ್ಟಾದ್ದಪ್ಪಾ..’ ಎಂದು ವಿಚಾರಿಸಿದ್ದಳು. ರಂಗ
ಯಾವುದೋ ಟಿವಿಯ ಹಿಂಭಾಗಕ್ಕೆ ತಲೆ ತುರುಕಿಕೊಂಡಿದ್ದವನು ತಲೆ ಹೊರಗೆ ಹಾಕಿ ಓಬವ್ವನನ್ನು ಒಂದೆರೆಡು
ಕ್ಷಣ ದಿಟ್ಟಿಸಿ ಯಾರ್ಗೆಮ್ಮ..ಎಂದು ಕೇಳಿದ್ದನು. ‘ಯ್ಯೋ ಯಾರ್ಗಾದ್ರ ನಿಂಗೇನಾಪ್ಪ..ಎಷ್ಟಾದದ್ದು ಯೋಳು..ನಂಗಿಯ
ಕಣಪ್ಪ..ಬರ ವರ್ಷದಿಂದ ನನ್ನ ಅಳಿಯ ಮಕ್ಳು ಇಲ್ಗೇ ಬಂದ್ಬುಟ್ಟರಂತೆ..ಅದ್ಕೆ ಕಣ ಯೋಳಪ್ಪ..’ ಎಂದಿದ್ದಳು, ಕೋಪವನ್ನು ತಡೇದುಕೊಂಡು. ‘ಹೊಸದ ಹಳೇದಾ ..’
ರಂಗ ಮತ್ತೆ ಟಿವಿಯೊಳಕ್ಕೆ ತಲೆ ತುರುಕಿಸಿಕೊಳ್ಳುತ್ತ ಕೇಳಿದನು. ‘ಹಳೆದಾದ್ರ ಸಾಕು ಕಣಪ್ಪ..ಚಂದಾಗಿ ಬಂದ್ರ ಸಾಕು..’ ‘ಹಂಗಾರೆ ಎರಡ್ಸಾವ್ರ ತಕ್ಕಂಬಾ ಸೂಪರ್ರಾಗಿರ ಟಿವಿ ಕೊಡ್ತೀನಿ..ಥೇಟು ಹೊಸದರಂಗೇ
ಅದ..’ ಟಿವಿಯೊಳಗಿಂದಲೇ ರಂಗ ಮಾತಾಡುತ್ತಿದ್ದದ್ದು
ಓಬವ್ವನಿಗೆ ಟಿವಿಯೇ ಮಾತಾಡುತ್ತಿದೆ ಎನಿಸಿತ್ತು. ‘ಒಸಿ ಕಮ್ಮಿ ಮಾಡ್ಕಪ್ಪಾ..’ ಅಂದದ್ದಕ್ಕೆ , ‘ಮೌ..ಇದೇನ್ ಕಳ್ಳೇಪುರಿ ಯಾಪಾರ ಅನ್ಕಂಡ್ಯಾ..ಚೌಕಾಸಿ
ಮಾಡಕ..ಎರಡ್ಸಾವ್ರ ಅಂದ್ರ ಎರಡ್ಸಾವ್ರ..ಅದು ಈ ವಾರದ ಒಳ್ಗ ಬಂದ್ರೆ ಇಲ್ಲಾಂದ್ರೆ ಯಾರ ಬತ್ತಾರೋ ಅವ್ರಿಗೆ
ಕೊಟ್ಬಿಡ್ತೀನಿ..’ ಎಂದು ಟಿವಿಯೊಳಗಿಂದಲೇ ಗದರಿಕೊಂಡನು.
‘ಸರಿ ಕಣಪ್ಪಾ ..ಯಾರ್ಗೂ ಕೊಡಕೋಬ್ಯಾಡ..ನಾನೆ ದುಡ್ಡು
ತಕ್ಕಂಬತ್ತೀನಿ..’ ಎಂದು ಹೇಳಿ ಒಂದು ನಿಮಿಷವೂ ಅಲ್ಲಿ
ನಿಲ್ಲದೆ ಬರಬರನೇ ತರಗೆಲೆಯಂತೆ ಮನೆಗೆ ಓಡಿಬಂದಿದ್ದಳು. ಮನೆಯಲ್ಲಿದ್ದ ಹಣವನ್ನೆಲ್ಲ ಓಟ್ಟಾಗಿಸಿ ನೋಡಿದಾಗ
ಅಲ್ಲಿದ್ದದ್ದು ಏಳುನೂರು ರೂಪಾಯಿಗಳು ಮಾತ್ರ. ಉಳಿದ ಸಾವಿರದಿನ್ನೂರೈವತ್ತು ರೂಪಾಯಿಗಳಿಗೆ ಏನು ಮಾಡುವುದು
ಎಂದು ಯೋಚಿಸತೊಡಗಿದಳು.ಕೊನೆಗೆ ನಾಳೆ ಬೆಳಿಗ್ಗೆಯೇ ಕರಿಬಸಪ್ಪನ ಹತ್ತಿರಹೋಗಿ ಸಾಲ ಕೇಳುವುದೆಂದು ನಿರ್ಧರಿಸಿದಳು.
ಮಾರನೆಯ ದಿನ ಬೆಳಿಗ್ಗೆಯೇ ಕರಿಬಸಣ್ಣನ ಮನೆ ಕಡೆಗೆ
ಹೊರಟಳು. ದಾರಿಯುದ್ದಕ್ಕೂ ಈಗ ಕರಿಬಸಣ್ಣನಿಗೆ ಏನು ಹೇಳುವುದು ಎಂಬ ಯೋಚನೆಯೇ ಕಾಡತೊಡಗಿತ್ತು. ಏಕಾಏಕಿ
ಅಷ್ಟೊಂದು ದುಡ್ಡು ನಿನಗ್ಯಾಕೆ ಎಂದರೆ ಏನು ಮಾಡುವುದು..ಕರಿಬಸಣ್ಣನ ಮನೆ ಬರುವವರೆಗೂ ಏನು ಕಾರಣಕೊಡುವುದೆಂದು
ಎಷ್ಟು ಯೋಚಿಸಿದರೂ ತೋಚಲಿಲ್ಲ. ಕರಿಬಸಣ್ಣ ಓಬವ್ವಳನ್ನು ನೋಡಿದಾಕ್ಷಣ ಒಂದು ಪರಿಚಯದ ನಗೆ ನಕ್ಕು, ‘ಬಾಮ್ಮೋ..ಟಿವಿ ತಕ್ಕತ್ತಿದ್ದೆಯಂತೇ..ಅದೇನು ನಿನ್ನಳಿಯ ಮಕ್ಳು ಇಲ್ಲಿಗೆ ಬಂದಾರಂತೆಲ್ಲಾ..ಏನು
ವಿಷಯ..’ ಎಂದು ಕೇಳಿಯೇ ಬಿಟ್ಟನು. ಓಬವ್ವನಿಗೆ
ಒಂದು ಘಳಿಗೆ ಆಶ್ಚರ್ಯವಾದರೂ ‘ಇದು
ಮೆಕಾನಿಕ್ ರಂಗನ ಕರಾಮತ್ತು’ ಎನ್ನುವುದನ್ನು ಕ್ಷಣಾರ್ಧದಲ್ಲಿ
ಅರ್ಥ ಮಾಡಿಕೊಂಡು ಒಂದು ಪೆಚ್ಚು ನಗೆ ನಕ್ಕಳು. ‘ಅಲ್ಲ ಕಣವ್ವಾ..ಈಗ ಟಿವಿ ತಕ್ಕಂಡೋಯ್ತೀಯ ಅನ್ಕ..ಅದ್ಕ
ಕೇಬಲ್ ಬ್ಯಾಡವಾ? ತಿಂಗಳಿಗಾ ಏನಿಲ್ಲಾಂದ್ರೂ
ನೂರುಪಾಯಿ..ಆಮ್ಯಾಕೆ ಕರೆಂಟು ಬಿಲ್ಲು ಬ್ಯಾರೆ ಜಾಸ್ತಿಯಾಯ್ತದ..ನಿನ್ ಮಗಳು ಬಂದ ಮ್ಯಾಲ ಅವರ ಪಾಡು..ಅವ್ರು
ಬರಾಗಂಟ ನೀನೆ ಮೆಂಟೇನ್ ಮಾಡಬೇಕಲ್ಲಾ..ದುಡ್ಡು ಎಲ್ಲಿಂದ ಮಾಡೀಯಾ..?” ಎಂದವನು ‘ಮಗಳಿಗೆ ಯೋಳು ತಿಂಗ್ಳು ಕಳಿಸ್ತಿದ್ದದ್ದಕ್ಕಿನ್ನ
ಒಸಿ ಜಾಸ್ತಿ ಕಳಿಸಕಾ..’ ಎಂದು ಮುಂದುವರೆಸಿದನು. ಓಬವ್ವ
ಇದಾವುದನ್ನೂ ಯೋಚಿಸಿಯೇ ಇರಲಿಲ್ಲ. ಕರಿಬಸಣ್ಣನ ಮಾತಲ್ಲೂ ಸತ್ಯ ಇದೆ ಎನಿಸಿತು. ಇಷ್ಟಕ್ಕೊ ‘ಅದೆಷ್ಟು ಕ್ಯಾಸೆಟ್ಟು ತೆಗೆದುಕೊಂಡು ಹೋಗಿ ನೋಡಕಾದದ್ದು..ದಿಟ!
ಟಿವಿ ತಕ್ಕಂಡ್ರೆ ಬೇಕಾದ ಪಿಚ್ಚರ್ರು ನೋಡಬಹುದು..ಮನೇಲೇ ಕುಂತ್ಕಂಡು ಧಾರಾವಾಯಿಗಳ್ನೂ ನೋಡಬೌದು..ಸಾಯ
ಕಡೆಗಾಲದಲ್ಲಿ ಇಸ್ಟೂ ಸುಕ ಪಡದೆರಾ ಅದೆಂತಾ ಬಾಳು..?’ ಎಂದುಕೊಂಡವಳು ‘ಅಯ್ಯಾ ಬುಡಪ್ಪಾ..ಈಗೇನ್ಮಾಡಕಾದದ್ದು..” ಎಂದು ಸ್ವಲ್ಪಹೊತ್ತು ಅವನನ್ನೇ
ನೋಡಿ, ‘ಬಸಣ್ಣಾ..ಅದ್ಕೆ ಒಂಚೂರು ಕಾಸ್ ಬೇಕಿತ್ತು ಕಣಪ್ಪಾ..?’
ಎಂದು ಅವನನ್ನೇ ನೋಡುತ್ತಾ ನಿಂತಳು. ‘ಮೊನ್ನೇ ತಾನೇ ಕಳ ಕೀಳಿಸ್ಬಿಟ್ಟೆ ಓಬವ್ವ..ಕಾಸಿಲ್ಲ..ಐನೂರ
ಆರ್ನೂರಾದ್ರೆ ಕೊಡ್ತೀನಿ ನೋಡು..ಸಾವ್ರಗಟ್ಟಲೇ ಬೇಕಾದ್ರ ಇನ್ನೇಡು ತಿಂಗ್ಳು ಕಾಯ್ಬೇಕಾಯ್ತದಾ..’ ಎಂದವನು ಓಬವ್ವನ ಪ್ರತಿಕ್ರಿಯೆಗೂ
ಕಾಯದೆ ‘ಲೇ ಇವ್ಳೇ ಓಬವ್ವಂಗ ಆರ್ನೂರುಪಾಯಿಟ್ಟಿದ್ದೀನಿ
ಅಲ್ಲಿ ಕೊಡು..’ ಎಂದು ಅದೇ ವೇಗದಲ್ಲಿ ‘ವೋಗು ಓಬವ್ವ ಈಸ್ಕ..” ಎಂದನು.ಓಬವ್ವ ಮುಂದಕ್ಕೆ ಮಾತಾಡಲಿಲ್ಲ
ಅಥವಾ ಕರಿಬಸವಣ್ಣ ಅದಕ್ಕೆ ಅನುವು ಮಾಡಿಕೊಡಲಿಲ್ಲಎಲ್ಲಾ ಮೊದಲೇ ಮಾತಾಡಿಕೊಂಡಂತಿತ್ತು.
ಮನೆಯಲ್ಲಿ ಹಣವನ್ನೆಲ್ಲಾ ಒಟ್ಟುಗೂಡಿಸಿ ಹತ್ತಿಪ್ಪತ್ತು
ಸಾರಿ ಲೆಕ್ಕ ಹಾಕಿದರೂ ಅದು ಎರಡುಸಾವಿರ ಮುಟ್ಟಲಿಲ್ಲ. ಈಗೇನು ಮಾಡುವುದು? ಮಗಳಿಗೊಂದು ಫೋನು ಮಾಡಿಸುವುದಾ..?ತನ್ನ ಹುಚ್ಚಾಟಕ್ಕೆ ಮಗಳು ಬರೀ ನಗುವುದಿಲ್ಲ ಬೈಯ್ದು ಮಂಗಳಾರತಿ ಎತ್ತೇ ಎತ್ತುತ್ತಾಳೆ..ಅವಳಿಗೇನು
ಗೊತ್ತು ನನ್ನ ಕಷ್ಟ..ಒಂಟಿಯಾಗಿ ಅವರಿವರ ಮನೇಗೋಗಿ ಅವರ ಹಾಕಿದ್ದ ನೋಡ್ಕಂದು ಬರ್ಬೇಕು...ಎಂದು ಮಗಳಿಗೆ
ಮನಸಲ್ಲಿ ಬೈದುಕೊಂಡಳು.
ಮೂರು ದಿನವಾದರೂ ಓಬವ್ವನ ಕೈಯಲ್ಲಿ ಹಣ ಹೊಂದಿಸಲು
ಸಾಧ್ಯವಾಗಲಿಲ್ಲ.ಅವನು ಬೇರೆ ಯಾರಿಗಾದರೂ ಟಿವಿ ಮಾರಿಬಿಟ್ಟನಾ ಹೇಗೆ..?ಯಾವುದಕ್ಕೂ ಒಂದ್ಸಾರಿ ಹೋಗಿ ನೋಡಿಕೊಂಡು ಬಂದು ಬಿಡಬೇಕು ಎಂದುಕೊಂಡ
ಮೇಲೆ ಓಬವ್ವ ಒಂದು ಘಳಿಗೆಯನ್ನೂ ವೇಸ್ಟ್ ಮಾಡಲಿಲ್ಲ.ಬರಬರನೇ ತರಗೆಲೆಯಂತೆ ಹೊರಟೇಬಿಟ್ಟಳು.ಅಂಗಡಿಯ
ಮುಂದೆ ಕರಿಬಸವಪ್ಪ ಬೀಡಿ ಸೇದುತ್ತಾ ಆರಾಮವಾಗಿ ರಂಗನೊಂದಿಗೆ ಮಾತಾಡುತ್ತ ಕುಳಿತಿದ್ದ. ಯಥಾಪ್ರಕಾರ
ಟಿವಿಯೊಳಗೆ ಮುಖ ತೂರಿಸಿಕೊಂಡಿದ್ದ ರಂಗ ಟಿವಿಯೇ ಜೀವಂತವಾಗಿ ಮಾತಾಡುತ್ತಿದೆ ಎಂಬ ಭ್ರಮೆ ತುಂಬಿಸುವಲ್ಲಿ
ಯಶಸ್ವಿಯಾಗಿದ್ದ. ‘ಯಾನ ಓಬವ್ವಾ..ಇನ್ನೂ ಟಿವಿ ತಕ್ಕಳ್ನಿಲವಾ...”. ಎಂದ. ‘ಇಲ್ಲಾ ಕಣಪ್ಪೋ..ಮಗಳು ಬಾಕಿ ಹಣ ಕಳಿಸ್ತೀನಿ
..’ ಅಂದವ್ಳೇ..ಅದ್ಕೆ ಕಾಯ್ತೋವ್ನಿ..ಎಂದು
ಸುಳ್ಳು ಹೇಳಿದಳು.ಅದ್ಕಿಯ ವಿಚಾರಿಸ್ಕೊಂಡೋಗವು ಅಂತ ಬಂದಿ ಕಣಪ್ಪ..ಇಂವ ಯಾರಿಗಾದ್ರೂ ಮಾರ್ಬುಟ್ನಾ
ಹೆಂಗೆ ಅಂತ..’ ಎಂದು ರಂಗನ ಕಡೆ ನೋಡಿದಳು. ‘ಅದೆಂಗ್ ಮಾರಿಬುಟ್ಟನು..ಲೇ ರಂಗ ಮಾರ್ಬುಟ್ಯಾ’ ಎಂದು ಜಬರ್ದಸ್ತಿನಲ್ಲಿ ಕೇಳಿದಕ್ಕೆ
ರಂಗ ತಲೆಯೆತ್ತಿ ಓಬವ್ವನ ಕಡೆ ನೋಡಿ ‘ಇಲ್ಲಾ ಕಣಣ್ಣೋ..ಈವಮ್ಮಂಗೆ ಕಾಯ್ದಿಟ್ಟುಕೊಂಡೀನಿ..ಆದ್ರೂ ಎಷ್ಟ್ ದಿನ ಅಂತ
ಕಾಯಕ್ಕಾದ್ದು ಯೋಳಣ್ಣ..ಟಿವಿಯೇನ್ ನಂದಾ..ಮೇಗಲ್ಮನಿ ರಾಜಣ್ಣಂದು..ಅಂವ ದಿನಾ ಹೋಗಬರಾ ಲೋ ಮಾರ್ದ್ಯಾ..ಅಂತ
ಕೇಳಿ ಪ್ರಾಣ ತಿಂತವ್ನಾ..?’ ಎಂದು ತನ್ನ ಮಾತು ಮುಗಿಯುವುದರೊಳಗೆ
ಮತ್ತೇ ಟಿವಿಯೊಳಗೆ ತೂರಿಕೊಂಡನು. ‘ಅದೂ ಸರಿ ಅನ್ನು..ಓಬವ್ವ ನಿನ ಮಗಳಿಗೇ ಯೋಳು..ಅವ್ಳಿಗೂ ಬುದ್ದಿಲ್ಲಾ ಕಣ ತಗವ್ವ..ಅಲ್ಲಾ
ಟಿವಿ ಬದಲ್ಗೆ ಒಂದ್ ಮೊಬೈಲ್ ಫೋನ್ ತಕ್ಕೋಟ್ಟಿದ್ರಾ ಅವ್ವನ್ನ ಆವಾಗಾವಾಗ ಇಚಾರಿಸ್ಕ ಬಹುದಿತ್ತಲ್ಲವಾ..ಟಿವಿ
ನೋಡ್ಕಂದು ಏನ್ಮಾಡದು..’ ಎಂದು ಹೇಳಿದನು.
ವಾಪಸ್ಸು ಮನೆಗೆ ಬರುವವರೆಗೂ ಕರಿಬಸಣ್ಣನ ಮಾತುಗಳು
ಅವನೇ ಬಂದು ಕಿವಿಯಲ್ಲಿ ಪದೆಪದೇ ಹೇಳುತ್ತಿದ್ದಾನೋ ಎನ್ನುವಷ್ಟರ ಮಟ್ಟಿಗೆ ಪ್ರತಿಧ್ವನಿಸುತ್ತಿತ್ತು.ಹೌದಲ್ಲ
ಮೊಬೈಲಿದ್ದರೆ ಆವಾಗಾವಾಗ ಮಗಳಜೊತೆ ಮಾತಾಡಬಹುದಲ್ಲ..ಕಷ್ಟಸುಖ ಹೇಳಿಕೊಳ್ಳಬಹುದು..ಎಂಬಾಲೋಚನೆಯೂ ಬಂದುಹೋಯಿತು.
ಸೀದಾ ಮನೆಗೆ ಬಂದವಳು ದೇವರ ಫೋಟೊ ಇಟ್ಟಿದ್ದ ಜಾಗವನ್ನು ತೆರವುಗೊಳಿಸಿದಳು.ಅದರ ಮೇಲಿದ್ದ ಮಣ್ಣನ್ನು
ಬಗೆದುಹಾಕಿದಳು.ಕೆಳಗೆ ಹೂತಿದ್ದ ತಾಮ್ರದ ಕುಡಿಕೆಯನ್ನು ಹೊರತೆಗೆದಳು. ಅದರಲ್ಲಿದ್ದದ್ದನ್ನು ನೆಲೆಕ್ಕೆ
ಸುರುವಿದಳು. ಒಂದು ಮೂಗು ಬಟ್ಟು, ಎರೆಡು ಬೆಳ್ಳಿಯ ಗೆಜ್ಜೆಗಳು, ಒಂದು ತಾಳಿ ಇತ್ತು. ಎಲ್ಲವನ್ನು
ಗಿರವಿ ಇಟ್ಟರೆ ಎರಡು ಸಾವಿರದ ಮೇಲೆಯೇ ಬರಬಹುದು..ಬರೀ ಎರಡುಸಾವಿರ ತೆಗೆದುಕೊಳ್ಳಬೇಕು..ಎಂದು ಮನಸ್ಸಿನಲ್ಲಿಯೇ
ಗಟ್ಟಿಯಾಗಿ ನಿರ್ಧರಿಸಿಕೊಂಡವಳು, ಅಷ್ಟನ್ನೂ ಜೋಪಾನವಾಗಿ ಒಂದು ಬಟ್ಟೆಗೆ
ಗಂಟು ಕಟ್ಟಿಕೊಂಡು ಒಮ್ಮೆ ಡಿವಿಡಿ ಪ್ಲೇಯರಿನ ಕಡೆಗೊಮ್ಮೆ ನೋಡಿ ಬರಬರನೇ ಸೇಠು ಅಂಗಡಿಯ ಕಡೆಗೆ ಹೋಗಲು
ನಿರ್ಧರಿಸಿ ಮನೆಯಿಂದ ಹೊರಗೆ ಬಂದವಳು ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ಬಿಟ್ಟಳು. ಎದುರಿಗೆ ರುಕ್ಮಿಣಮ್ಮ
‘ಓಬವ್ವಾ ಏನು ಕಾಣಂಗೇ ಇಲ್ಲಾ ಉಸಾರಾ..ನಾನು ಅದ್ಕಿಯೇ
ನನ್ನ ಮಗಂಗೆ ಯೋಳಿದೆ..ಹೋಗಿ ಮನೆಯತ್ರ ನೋಡ್ಕಂದು ಬಾಂತ..ಅಂವ ಬಂದಿದ್ದಾಗ ನೀ ಇರ್ನಿಲ್ವಂತಾ..ಏನಾತೊ
ಏನಾಂತ ಗಾಬ್ರಿಯಾಗ್ಬಿಟ್ಟಿದೆ ಕಣವ್ವಾ..ಚೆಂದಾಗಿದ್ದೀಯ ತಾನೆ..ಪಾಪ ಮಗ್ಳು ಬ್ಯಾರೆ ದೂರವ್ಳೇ..ಅದ್ಕೆ
ನಾನೇ ಬಂದೇ..” ಎಂದಳು. ಓಬವ್ವಂಗೆ ಏನು ಹೇಳಬೇಕೆಂದು
ತೋಚಲಿಲ್ಲ.ಆದರೂ ಹೇಗೊ ಸಾವರಿಸಿಕೊಂಡು ‘ಯಾನ ಈಗ ಸಲ್ಪ ಹಗೂರಾಗದೆ..ಕಣವ್ವಾ..’ ಎಂದಳು. ‘ಅಷ್ಟಿದ್ರಾ ಸಾಕು ಬುಡವ್ವಾ..’ ಎಂದ ರುಕ್ಮಿಣಮ್ಮ ಮಾತಿಗೆ ಸುರುವಚ್ಚಿಕೊಂಡಳು.ನಿಂತುಹೋದ
ಧಾರಾವಾಹಿಯ ಕಥೆಗಳನ್ನೂ ಪೂರ್ಣ ಮಾಡಿದಳು. ಊರಿನ ವಿಷಯಗಳನ್ನು ಹೇಳಿದಳು. ಮಗನು ಹೊಸ ಬೈಕು ಕೊಂಡದ್ದನ್ನು
ಹೇಳಿದಳು. ತನಗೂ ಹುಷಾರು ತಪ್ಪಿದ್ದನ್ನು ಹೇಳಿದಳು.ಇಬ್ಬರು ಮುದುಕಿಯರೂ ನಿಂತುಕೊಂಡೇ ಸುಮಾರು ಹೊತ್ತು
ಹರಟಿದರು. ಆಮೇಲೆ ‘ಎಂಗೋ ಸಂಜೆಗೆ ಬತ್ತಿಯಲ್ಲವ್ವಾ ಬಾ..ಈವತ್ತು ರಾಜ್ಕುಮಾರದು
ಬಬ್ರುವಾಹನ ಪಿಚ್ಚರದೆ..ನಿನ್ನೂ ನೋಡಿದಂಗಾಯ್ತದೆ..ಹಂಗೆ ಅದ್ನೂ ಯೋಳ್ದಂಗಾಯ್ತದೆ ಅಂತ ಬಂದಿ.. ನಾನು
ಬತ್ತೀನಿ..’ ಎಂದು ಹೇಳಿದ ರುಕ್ಮಿಣಮ್ಮ ತನ್ನ
ಮನೆ ಕಡೆ ಮುಖ ಮಾಡಿದಳು. ಯಾಕೋ ಇಷ್ಟು ಪ್ರೀತಿ ತೋರಿಸುವ ರುಕ್ಮಿಣಮ್ಮನಿಗೆ ತಾನು ಮೋಸ ಮಾಡುತ್ತಿದ್ದೇನೆ
ಎನಿಸಿತು ಓಬವ್ವನಿಗೆ. ತಾನೇ ಮನೆಯಲ್ಲಿ ಕುಳಿತು ಟಿವಿ ನೋಡುವಂತಾದರೆ ನೋಡಿದ ಮೇಲೆ ಅದರ ಬಗ್ಗೆ ಯಾರೊಂದಿಗೆ
ಮಾತಾಡುವುದು ಎನಿಸಿತು.ಇಷ್ಟು ದಿನ ಬರೀ ಧಾರಾವಾಹಿ ಸಿನಿಮಾಗಳಷ್ಟೇ ಮಜಾ ಕೊಡುತ್ತಿರಲಿಲ್ಲ. ನೋಡಿದ
ಮೇಲೆ ಅದರ ಬಗ್ಗೆ ಆಡುವ ಮಾತುಗಳು ಬೈಗುಳಗಳೂ ಹೆಚ್ಚು ಪ್ರಭಾವ ಬೀರಿದ್ದು, ಅವುಗಳ ಪಾತ್ರವನ್ನು ಇನ್ನಷು ಜೀವಂತ ಮಾಡಿದ್ದು ಎನ್ನುವ ಸತ್ಯ ಓಬವ್ವನಿಗೆ ಮಿಂಚಿನಂತೆ ಹೊಳೆಯಿತು.ಓಬವ್ವ
ಮುಂದೆ ಏನನ್ನೂ ಯೋಚಿಸಲಿಲ್ಲ..ಆಗಲೆ ಮೂರ್ನಾಲ್ಕು ಮರು ದೂರ ಸಾಗಿದ್ದ ರುಕ್ಮಿಣಮ್ಮನನ್ನು ಕೂಗಿ ಕರೆದವಳು,
ಒಳಹೋಗಿ ಡಿವಿಡಿ ಪ್ಲೇಯರನ್ನು ತೆಗೆದುಕೊಂಡು ಬಂದು ಅವಳ ಮುಂದೆ ಹಿಡಿಯುತ್ತ “ಸಧ್ಯ ನೀನಾಗೇ ಬಂದಿದ್ದಯ್..ಹಂಗೆ ಇದ್ನೂ ತಗಂಡೋಗವ್ವ..ನಂಗೆ ಎತ್ಕಂಡು ಅಷ್ಟು
ದೂರ ಬರಕ್ಕಾಗಲ್ಲಾ..”ಎಂದಳು.
