Friday, July 6, 2012

ಓದಿ, ನೋಡಿ ಮರುಳಾದದ್ದು..


ವಾಗ  ಮೈಸೂರಿನ ಹಾಸ್ಟೆಲಿನಲ್ಲಿದ್ದೆವು. ಕಾಲೇಜು ಮುಗಿದ ನಂತರ ಲೈಬ್ರರಿ ಆಮೇಲೆ ಸಿನಿಮಾ ಇವೆರೆಡೇ ಆಯ್ಕೆಗಳಿದ್ದ ಟೈಮ್ ಅದು. ತರಗತಿ ಮುಗಿಸಿ, ಒಂದಷ್ಟು ಹರಟೆ ಹೊಡೆದು ಲೈಬ್ರರಿಯಲ್ಲೊಂದಷ್ಟು ಕಾಲವನ್ನು ವ್ಯಯಿಸಿ, ಊಟದ ಆಜುಬಾಜು ಸಮಯಕ್ಕೆ ಹಾಸ್ಟೆಲಿನ ಅಂಗಳದಲ್ಲಿ ಪ್ರತ್ಯಕ್ಷವಾಗಿ ಊಟ ಮುಗಿಸಿದರೆ ಮತ್ತೆ ಸಿನಿಮಾದ ಕಡೆ ಗಮನ ಹೋಗಿಬಿಡುತ್ತಿತ್ತು. ಆವಾಗ, ಈವಾಗಲೂ ನನಗೊಂದು ಚಟ ಇದೆ. ಸಿನಿಮಾ ಹೇಗೇ ಇರಲಿ ಕನ್ನಡವಾದರೇ ಅದನ್ನೊಮ್ಮೆ ನೋಡಲೇಬೇಕು, ನಾಯಕ, ನಾಯಕಿ, ನಿರ್ದೇಶಕ ಯಾರಾದರೂ ನನಗೆ ಅಷ್ಟೊಂದು ಮುಖ್ಯವೆನಿಸುತ್ತಿರಲಿಲ್ಲ. ಅದರಲ್ಲೂ ಹೊಸಬರ ಸಿನಿಮಾವಾದರಂತೂ ಏನನ್ನೂ ಕೇಳದೇ ಚಿತ್ರಮಂದಿರದೊಳಕ್ಕೆ ನುಗ್ಗಿ ಬಿಡುತ್ತಿದ್ದೆ. ಇಂಥ ಸುಮಾರು ಸಿನಿಮಾ ನೋಡಿ ನೋಡಿ ಹಿಂಸೆ ಪಟ್ಟುಕೊಂಡಿದ್ದಷ್ಟೇ ಅಲ್ಲ, ಗೆಳೆಯರಿಗೂ ಹಿಂಸೆ ಕೊಟ್ಟಿದ್ದೆ. ಆವಾಗ ಒಂದು ಹೊಸ ಸಿನಿಮಾ ಬಿಡುಗಡೆಯಾಗಿತ್ತು. ಯಾವುದೇ ನಿರೀಕ್ಷೆಗಳಿಲ್ಲದ, ಚೆನ್ನಾಗಿರೊಲ್ಲವೇನೋ ಎಂದು ಅನುಮಾನ ತರಿಸುವ  ಸಿನಿಮಾ ಅದು. ನನಗೋ ಒಮ್ಮೆ ನೋಡಲೇಬೇಕೆಬ್ಬಿಸಿತ್ತಾದರೂ ಗೆಳೆಯ ಚಂದ್ರ ಬೇಕಾದರೆ ಕತ್ತು ಕತ್ತರಿಸಿಕೊಳ್ಳುತ್ತೇನೆ, ಸಿನಿಮಾಕ್ಕೆ ಮಾತ್ರ ಬರಲು ತಯಾರಿಲ್ಲ ಎಂದು ಹಠ ಹಿಡಿದುಬಿಟ್ಟ. ಆಮೇಲೆ ಅವನೇ ಇರು ಒಂದು ಐಡಿಯ ಮಾಡೋಣ ಎಂದ. ನಮ್ಮ ರೂಮಲ್ಲಿದ್ದ ಇನ್ನಿಬ್ಬರು ರೂಮೇಟುಗಳನ್ನು ಹೇಗಾದರೂ ಮಾಡಿ ಸಿನಿಮಾಕ್ಕೆ ಕಳುಹಿಸುವುದು, ಅವರ ಅಭಿಪ್ರಾಯ ಕೇಳಿಕೊಂಡು ಸಿನಿಮಾಕ್ಕೆ ಹೋಗುವುದೋ ಬೇಡವೋ ನಿರ್ಧರಿಸುವುದೇ ಅವನ ಐಡಿಯ. ಸರಿ ಎಂದದ್ದೇ ಅವರು ರೂಮಲ್ಲಿದ್ದಾಗ ಊಟಕ್ಕೂ ಮುಂಚೆ ಮದ್ಯಾಹ್ನ ಒಂದು ಸಿನಿಮಾ ನೋಡಿದೆವು..ಎಂಥ ಅದ್ಭುತ ಸಿನಿಮಾ ಗೊತ್ತಾ..ಈವತ್ತು ಒಳ್ಳೇ ಸಿನಿಮಾಕ್ಕೇ ಪಬ್ಲಿಸಿಟೀನೆ ಕೊಡಲ್ಲಾ ಮಾರಾಯಾ..ಎಂದೆಲ್ಲಾ ಬೂಸಿಬಿಟ್ಟು, ಆ ಸಿನಿಮಾವನ್ನು ಆ ಕ್ಷಣ ನೋಡದಿದ್ದರೇ ಬದುಕಿದ್ದೂ ವ್ಯರ್ಥ ಎನ್ನುವ ರೇಂಜಿಗೆ ಹೇಳಿಬಿಟ್ಟೆವು. ಅವರಿಬ್ಬರು ತುರಾತುರಿಯಿಂದ ಊಟ ಮುಗಿಸಿದ್ದೇ ಸಿನಿಮಾಕ್ಕೇ ಓಡಿಬಿಟ್ಟರು. ನಾವು ನೆಮ್ಮದಿಯಾಗಿ ಮಲಗಿದೆವು.
ಸೆಕೆಂಡ್ ಶೋ ಮುಗಿಸಿ, ಸಿನಿಮಾದ ನರಕಯಾತನೇ ಮುಗಿಸಿಬಂದವರು ನಿದ್ರೆ ಮಾಡುತ್ತಿದ್ದರೂ ಬಿಡದೇ ನಮ್ಮನ್ನು ಎಬ್ಬಿಸಿದಾಗ, ಅವರ ಮುಖದಲ್ಲಿ ಚಿಮ್ಮುತ್ತಿದ್ದ ರೋಷಾವೇಶದ ಭಾವಗಳನ್ನು ನೋಡಿದಾಗ ನಮಗೆ ಆ ಸಿನಿಮಾದ ಬಗ್ಗೆ ಸಂಪೂರ್ಣ ತಿಳಿದುಹೋಗಿತ್ತು. ಮುಂದಿನದ್ದು ನೀವೇ ಊಹಿಸಬಹುದು.
ಮೊನ್ನೆ ಫೇಸ್‌ಬುಕಿನಲ್ಲಿ ನನ್ನ ಸ್ಟೇಟಸ್ ಅಪ್‌ಡೇಟ್ ಮಾಡುವಾಗ ಆ ವಾರ ಬಿಡುಗಡೆಯಾದ ಎಲ್ಲಾ ಮೂರು ಚಿತ್ರಗಳನ್ನೂ ನೋಡಿದ್ದನು ಹಂಚಿಕೊಂಡಿದ್ದೆ. ಆಗ ಗೆಳೆಯರೆಲ್ಲಾ ಅದನ್ನೂ ನೋಡಿದಾ..ನೀನು ಬಿಡು ಯಾವುದನ್ನೂ ಬಿಡಲ್ಲಾ ಎಂದೆಲ್ಲಾ ಫೋನ್ ಮಾಡಿ ಹೀಗೆಳೆದಿದ್ದರು. ಆದರೆ ನನಗೆ ಬರೀ ಕನ್ನಡದಲ್ಲಷ್ಟೇ ಅಲ್ಲ. ಬೇರೆಲ್ಲಾ ಭಾಷೆಯಲ್ಲೂ ಅತೀ ಕೆಟ್ಟದಾದ ಅರ್ಥವೇ ಇಲ್ಲದ ಸಿನಿಮಾಗಳನ್ನು ನೋಡಿಬಿಟ್ಟಿರುವುದರಿಂದ ಈವಾಗಾವಾಗ ಸಿನಿಮಾ ಚೆನ್ನಾಗಿಲ್ಲದಿದ್ದರೂ ತೀರಾ ಕೆಟ್ಟದಾಗಿಲ್ಲದಿದ್ದರೇ ಬೇಸರವೆನಿಸುತ್ತದೆ. ಅಲ್ಲಿನ ಬಾಲಿಶ ದೃಶ್ಯಗಳು, ಅರ್ಥವೇ ಇಲ್ಲದ ಮಾತುಗಳು, ಸುಖಾಸುಮ್ಮನೆ ಹೊಡೆತ ತಿನ್ನುವ ಖಳರು, ನೋಡಿದ ಘಳಿಗೆಯೇ ಯುಗಳಗೀತೆಯನ್ನು ಹಾಡಲು ಬೆಟ್ಟದ ತಪ್ಪಲಿಗೋ, ಪಾರ್ಕಿಗೋ ಓಡಿಹೋಗುವ ನಾಯಕ-ನಾಯಕಿಯರು... ನೆನಪಿಸಿಕೊಂಡು ನಗಲು ಇನ್ನೇನು ಬೇಕು..
ಸಿಡ್ನೀ ಶೆಲ್ಡನ್ ಬರೆದ ಮಾಸ್ಟರ್ ಆಫ್ ದಿ ಗೇಮ್ ಓದಿದೆ. ಪ್ರಾರಂಭದಲ್ಲಿ ತುಂಬಾ ರೋಚಕವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ತದನಂತರ ತಣ್ಣಗೆ ಏರಿಳಿತಗಳಿಲ್ಲದೇ ಬರೇ ಒಂದು ತಲೆಮಾರಿನ ಕಥೆಯನ್ನು ತೆರೆದಿಡುತ್ತದೆ.ಬಡತನದ ಬೇಗೆಯಲ್ಲಿ ಬೆಂದ ಹುಡುಗನೊಬ್ಬ ಆಫ್ರಿಕಾಗೆ ವಜ್ರದ ನಿಕ್ಷೇಪ ಹುಡುಕಿಕೊಂಡು ಹೋಗುತ್ತಾನೆ. ಯಾವೊಂದು ಪೂರ್ವ ತಯಾರಿಯೂ ಇಲ್ಲದೇ ಬರೇ ಗುರಿಯೊಂದನ್ನೇ ಅಚಲವಾಗಿಟ್ಟುಕೊಂಡು ಹೋಗುವ ಹುಡುಗ, ಏನೆಲ್ಲಾ ಕಷ್ಟ ಕಾರ್ಪಣ್ಯ ಅನುಭವಿಸಿ, ಮೋಸಹೋಗಿ ಹೇಗೆ ದೊಡ್ಡ ಶ್ರೀಮಂತನಾಗುತ್ತಾನೆ, ಆನಂತರ ಅವನ ತಲೆಮಾರು ಹೇಗೆ ನಡೆದುಕೊಂಡು ಬರುತ್ತದೆ ಎನ್ನುವುದನ್ನು ತುಂಬಾ ವಿವರವಾಗಿ ಬರೆದಿದ್ದಾನೆ ಶೆಲ್ಡನ್.
ಅವನ ಇನ್ನೊಂದು ಕಾದಂಬರಿ ಟೆಲ್ ಮಿ ಯುವರ್ ಡ್ರೀಮ್ಸ್ ಸ್ಪ್ಲಿಟ್ ಪರ್ಸನಾಲಿಟಿಯ ಬಗೆಗಿನ ಕಾದಂಬರಿ. ಇಲ್ಲಿ ಮೂರು ವಿಭಿನ್ನ ವ್ಯಕ್ತಿತ್ವ ಹೊಂದಿದ ನಾಯಕಿ ತನಗರಿವಿಲ್ಲದೇ ಸಾಲು ಸಾಲು ಕೊಲೆಗಳನ್ನು ಮಾಡುತ್ತಾ ಸಾಗುತ್ತಾಳೆ. ಅವಳನ್ನು ಪತ್ತೆ ಹಚ್ಚುವುದೇ ದೊಡ್ದ ಸಾಹಸವಾದರೂ ಶೆಲ್ಡನ್ ಕಾದಂಬರಿಯನ್ನು ಅಷ್ಟಕ್ಕೆ ಮುಗಿಸದೆ ಅಂಥವರನ್ನು ಗುಣ ಪಡಿಸುವ ಬಗೆಯನ್ನು ಬೋರ್ ಹೊಡೆಸದಂತೆ ತುಂಬಾ ವೈಜ್ಞಾನಿಕ ಅಂಶಗಳ ಸಹಾಯದೊಂದಿಗೆ ವಿವರಿಸುತ್ತಾ ಹೋದರೂ ರಹಸ್ಯವನ್ನು ಕೊನೆಯ ಪುಟದವರೆಗೂ ಕಾಪಾಡಿಕೊಂಡಿದ್ದಾನೆ.
ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಗುತ್ತಿದ್ದ ಜೋಗಿಯವರ ಗುರುವಾಯನ ಕೆರೆ ಮುಗಿದಿದ್ದು ಒಂದು ರೀತಿಯಲ್ಲಿ ಬೇಸರ ತರಿಸಿದೆ. ತೀರಾ ರಾಜಕೀಯ ವಿಷಯಗಳಿದ್ದಾಗೆಲ್ಲಾ ನನಗೆ ಅದರ ಬಗ್ಗೆ ಆಸಕ್ತಿಯಿಲ್ಲದ ಕಾರಣ ಹಾಯ್ ಬೆಂಗಳೂರ್ ಪತ್ರಿಕೆಯನ್ನು ಸಹನೀಯ ಮಾಡಿದ್ದೇ ಈ ಗುರುವಾಯನ ಕೆರೆ. ಜೋಗಿ ಬರಹಗಳು, ಅವರ ಪದಸಂಪತ್ತು, ಅವರ ಜ್ಞಾನಸಂಪತ್ತು ಯಾವಾಗಲೂ ಆಶ್ಚರ್ಯತರಿಸುತ್ತದೆ. ಯಾವುದೇ ಗಂಭೀರ ಜಟಿಲ ವಿಷಯವನ್ನೂ ಮನ ಮುಟ್ಟುವ ಹಾಗೆ ಸರಳವಾಗಿ ಬರೆಯುವ ಜೋಗಿಯವರ ಬರಹಗಳನ್ನು ನಾನು ಓದದೇ ಇರುವುದಿಲ್ಲ.
ಹಾಗೇ ಕ್ಲೋಪ್ಕ-ದಿ ಟ್ರ್ಯಾಪ್ ಎನ್ನುವ ಸೆರ್ಬಿಯನ್ ಭಾಷೆಯ ಚಲನಚಿತ್ರ ನೋಡಿದ ಮೇಲೆ ಒಂದು ಒಳ್ಳೆಯ ಥ್ರಿಲ್ಲರ್ ನೋಡಿದ ಅನುಭವವಾಯಿತು. ತುಂಬಾ ಸರಳ ಕಥೆಯ ಚಿತ್ರವಾದರೂ ನಿರ್ದೇಶಕ ನಿರೂಪಿಸಿರುವ ರೀತಿ ತುಂಬಾ ಪರಿಣಾಮಕಾರಿಯಾಗಿದೆ. ಮಗನಿಗೆ ಮಾರಣಾ೦ತಿಕ ಖಾಯಿಲೆಯಿದೆ. ಆಪರೇಶನ್ ಗೆ ಸುಮಾರು ಹಣ ಬೇಕು. ಆಪರೇಶನ್ ಮಾಡಿಸದಿದ್ದರೆ ಮಗ ಬದುಕುವುದಿಲ್ಲ. ಹಣ ಹೊಂದಿಸಲು ಸಮಯದ ಅಭಾವವಿದೆ. ಹಾಗೆ ಸುಲಭಕ್ಕೆ ಹಣ ಸಿಗುವ ಯಾವ ಮಾರ್ಗವೂ ಇಲ್ಲ. ಈ ಸಂದರ್ಭದಲ್ಲಿ ಒಂದು ಪತ್ರಿಕೆಯೊ೦ದಕ್ಕೆ ಗಂಡ ಹೆಂಡತಿ ಜಾಹಿರಾತು ನೀಡುತ್ತಾರೆ...ಆಗೊಬ್ಬ ವ್ಯಕ್ತಿ ಆಪರೇಶನ್ ಹಣ ಜೊತೆಗೆ ಓಡಾಟದ ಖರ್ಚು ಕೊಡುತ್ತೀನಿ,..ಬದಲಿಗೆ ನೀನೊಬ್ಬ ವ್ಯಕ್ತಿಯನ್ನು ಕೊಲ್ಲಬೇಕೆನ್ನುತ್ತಾನೆ...ಈ ಸಂಧಿಗ್ದ ಪರಿಸ್ಥಿತಿಯಲ್ಲಿ ನಾಯಕ ಒಪ್ಪಿಕೊಂಡು ಕೊಲೆ ಮಾಡುತ್ತಾನೆ..? ಮು೦ದೆನಾಗುತ್ತದೆ...ಸಮಯ ಸಿಕ್ಕಾಗ ಸಿನಿಮಾ ನೋಡಿ.

Wednesday, July 4, 2012

ಮೆಚ್ಚಿನ ಕಲಾವಿದರು-1


ಆರು ತಿಂಗಳಿನ ನ೦ತರ ಬ್ಯಾಟ್ ಮ್ಯಾನ್ ಚಿತ್ರಕ್ಕಾಗಿ..
ದಿ ಡಾರ್ಕ್  ನೈಟ್ ರೈಸೆಸ್  ಚಿತ್ರವನ್ನ ಕಾತರದಿಂದ ಎದುರು ನೋಡಲು ಎರಡು ಕಾರಣಗಳಿವೆ. ಮೊದಲನೆಯದು ನನ್ನ ಮೆಚ್ಚಿನ ನಿರ್ದೇಶಕ ಕ್ರಿಸ್ಟೋಫರ್ ನೋಳನ್ ನ ನಿರ್ದೇಶನ ಮತ್ತು ಮೆಚ್ಚಿನ ಕಲಾವಿದ ಕ್ರಿಶ್ಚಿಯನ್ ಬೇಲ್  ನಟನೆ. 2011 ರಲ್ಲಿ ಫೈಟರ್ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊ೦ಡಿರುವ ಬೇಲ್ ಪಾತ್ರಕ್ಕಾಗಿ, ಆ ಪಾತ್ರದ ಜೀವ೦ತಿಕೆಗಾಗಿ ಯಾವ ಪ್ರಯತ್ನವನ್ನೂ ಎಗ್ಗಿಲ್ಲದೆ ಭಯಪಡದೆ ಮಾಡುವ ಕಲಾವಿದ. ಹಾಲಿವುಡ್ ಚಿತ್ರಪ್ರಪ೦ಚದಲ್ಲಿ ಅತೀ ಕಡಿಮೆ ಬಜೆಟ್ಟಿನ ಚಿತ್ರಗಳಲ್ಲಿ, ಹಾಗೆಯೇ ದೊಡ್ಡ ಬಜೆಟ್ಟಿನ ಚಿತ್ರಗಳಲ್ಲಿ ಆರ್ಟ್ ಹೌಸ್ ಚಿತ್ರಗಳಲ್ಲಿ, ಸ್ವತಂತ್ರ ನಿರ್ಮಾಣ ಸಂಸ್ಥೆಗಳಲ್ಲಿ ನಟಿಸಿ ತನ್ನ ಛಾಪನ್ನು ಮೂಡಿಸಿರುವ ಪ್ರತಿಭಾವಂತ. 
ದಿ ಮೆಷಿನಿಸ್ಟ್ ಎ೦ಬ ಇಂಗ್ಲೀಷ್ ಭಾಷೆಯ ಸ್ಪ್ಯಾನಿಶ್ ನಿರ್ಮಾಣದ ಚಿತ್ರವೊ೦ದಿದೆ. 2004ರಲ್ಲಿ ತೆರೆಗೆ ಬಂದ ಈ ಮನೋವೈಜ್ಞಾನಿಕ ಚಿತ್ರದ ನಿರ್ದೇಶಕ ಬ್ರಾಡ್ ಅಂಡರ್ಸನ್. ನಿದ್ರಾಹೀನತೆಯಿಂದ ಬಳಲುವ ಕಾರ್ಮಿಕನೊಬ್ಬನ ಕಥೆ ಇದು...ಸುಮಾರು ದಿನ ನಿದ್ರೆ ಮಾಡದೇ ಇದ್ದದ್ದರಿಂದ ಕೃಶಗೊಳ್ಳುತ್ತಾ ಹೋಗುವ ಕಾರ್ಮಿಕ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸುತ್ತಾನೆ.. ಅವನ ಈ ವರ್ತನೆಯಿಂದಾಗಿ ಸಹೋದ್ಯೋಗಿಗಳು ಅವನನ್ನು ದೂರವಿಡುತ್ತಾರೆ.ಇದರ ನಡುವೆ ಇವನ ಹುಚ್ಚುತನದಿಂದಾಗಿ ಫ್ಯಾಕ್ಟರಿಯಲ್ಲಿ ಸಹೋದ್ಯೋಗಿಯೊಬ್ಬ ಕೈ ಕಳೆದುಕೊಳ್ಳಬೇಕಾಗುತ್ತದೆ..ಎಲ್ಲರೂ ಇವನ ಮೇಲೆ ದೂರಿದರೇ, ನಾಯಕ ಮಾತ್ರ ಇದಕ್ಕೆಲ್ಲಾ ಕಾರಣ ಇವಾನ್ ಎನ್ನುವ ವ್ಯಕ್ತಿ ಎ೦ದು ಹೇಳುತ್ತಾನೆ..ಇಡೀ ಕಾರ್ಮಿಕ ಪರಿವಾರಕ್ಕೇ ಆ ಇವಾನ್ ಎನ್ನುವ ವ್ಯಕ್ತಿಯ ಪರಿಚಯವಿರುವುದಿಲ್ಲ..ಮತ್ತು ಆ ಫ್ಯಾಕ್ಟರಿಯಲ್ಲಿ ಇವಾನ್ ಎಂಬ ಹೆಸರಿನ ಕಾರ್ಮಿಕನೂ ಇರುವುದಿಲ್ಲ..ಆದರೆ ನಾಯಕ ಮಾತ್ರ ತನ್ನ ಜೀವನದಲ್ಲಿ ನಡೆಯುವ ಎಲ್ಲಾ ಅವಘಢಗಳಿಗೆ ಇವಾನನೇ ಕಾರಣ ಎ೦ದು ಭಾವಿಸಿ ಅವನನ್ನು ಹುಡುಕಲು ಪ್ರಾರಂಭಿಸುತ್ತಾನೆ..ಅವನಿಗೆ ಇವಾನ್ ಸಿಗುತ್ತಾನಾ..?ಇದು ಕಥೆಯ ಹೂರಣ..ನಿಜವಾಗಿ ಅಲ್ಲಿ ಇವಾನ್ ಎನ್ನುವ ವ್ಯಕ್ತಿ ಇರುವುದೇ ಇಲ್ಲ..ಅದು ನಾಯಕನದೇ ಕಲ್ಪನೆಯ ವ್ಯಕ್ತಿ..!!
ಇಲ್ಲಿ ಬರುವ ನಾಯಕನ ಪಾತ್ರ ನಿರ್ವಹಿಸಿರುವವನು ಕ್ರಿಶ್ಚಿಯನ್ ಬೇಲ್ .ದಿನದಿನಕ್ಕೆ ಕೃಶಗೊ೦ಡು ಅಸ್ಥಿಪಂಜರದಂತಾಗುವ ನಾಯಕನ ಪಾತ್ರವನ್ನು
ಕ್ರಿಶ್ಚಿಯನ್ ಬೇಲ್ ನಿರ್ವಹಿಸಿರುವ ರೀತಿ ಅದ್ಭುತವಾದದ್ದಷ್ಟೇ ಅಲ್ಲ, ತ್ರಾಸದಾಯಕವಾದದ್ದು.ಯಾಕೇಂದರೆ ಕ್ರಿಶ್ಚಿಯನ್ ಬೇಲ್ ಈ ಚಿತ್ರಕ್ಕಾಗಿ ಅನಾಮತ್ತು ಸುಮಾರು  30 ಕೆ.ಜಿ. ತೂಕ ಕಳೆದುಕೊಂಡಿದ್ದ. ಬಹುಶ: ಚಿತ್ರ ಜಗತ್ತಿನಲ್ಲೇ ಸಿನಿಮಾಕ್ಕಾಗಿ ಇಷ್ಟೊ೦ದು ಸಣ್ಣ ಆದ ನಟ ಮತ್ತೊಬ್ಬನಿಲ್ಲ..ಕ್ರಿಶ್ಚಿಯನ್ ಬೇಲ್ ಹುಟ್ಟಿದ್ದು ಜನವರಿ,30 1974ರಲ್ಲಿ.ಪಾತ್ರಕ್ಕಾಗಿ ಎ೦ಥ ತ್ರಾಸಿಗೆ ಬೇಕಾದರೂ   ಸಿದ್ಧನಾಗುವ ಈ ಕಲಾವಿದ ಮೆಷಿನಿಸ್ಟ್ ಸಿನಿಮಾದ ನಂತರದ ಚಿತ್ರ  ಬ್ಯಾಟ್‌ಮನ್ ಬಿಗಿನ್ಸ್‌ಗಾಗಿ ಕೇವಲ ಆರು ತಿಂಗಳಲ್ಲೇ ತೂಕ ಹೆಚ್ಚಿಸಿಕೊ೦ಡು ತನ್ನ ದೇಹದಾರ್ಢ್ಯತೆಗಳಿಸಿಕೊಂಡಿದ್ದ.            
 ಪಬ್ಲಿಕ್‌ಎನಿಮೀಸ್[2009], ಟೆರ್ಮಿನೇಟರ್‌ಸಾಲ್ವೇಷನ್[2009], ದಿ ಡಾರ್ಕ್‌ನೈಟ್[2008], ಐ ಯಾಮ್‌ನಾಟ್‌ದೇರ್[2007],ದಿ ಪ್ರೆಸ್ಟೀಜ್[2006], ರೀನ್‌ ಆಫ್ ಫೈರ್[2002], ಅಮೆರಿಕನ್ ಸೈಕೋ[2000]             
ಕ್ರಿಶ್ಚಿಯನ್ ಬೇಲ್ ಅಭಿನಯಿಸಿರುವ ಯಶಸ್ವಿ ಚಿತ್ರಗಳು
ಮೇಲಿನ  ದಿ ಮಷಿನಿಸ್ಟ್ ಮತ್ತು ಬ್ಯಾಟ್ ಮ್ಯಾನ್ ಬೆಗಿನ್ಸ್ ಚಿತ್ರಗಳ ತೆರೆಚಿತ್ರಗಳನ್ನು ಗಮನಿಸಿದರೆ ಬೇಲ್ ನ ಪರಿಶ್ರಮದ ಮನವರಿಕೆಯಾಗುತ್ತದೆ.

Monday, July 2, 2012

ಒ೦ದಷ್ಟು ತಮಿಳು ಚಿತ್ರಗಳು...

ವಾಳಕು ಎನ್ 18/9
ಅಳಗಿರಿ ಸಾಮಿಯನ್ ಕುದುರೈ
ಮೊನ್ನೆ ಮೊನ್ನೆ ತಮಿಳಿನಲ್ಲಿ 'ಅಳಗಿರಿಸಾಮಿಯನ್ ಕುದುರೈ' ಎಂಬ ಕಡಿಮೆ ಬಜೆಟ್ಟಿನ ಸಿನಿಮಾ ತೆರೆಗೆ ಬಂತು.ನಿಜಕ್ಕೂ ಉತ್ತಮ ಚಿತ್ರ.  ನೀವದನ್ನು ನೋಡಿಲ್ಲವಾದರೆ ದಯವಿಟ್ಟು ಒಮ್ಮೆ ನೋಡಿಬಿಡಿ. ಸರಳ ಸುಂದರ ಸಿನೆಮಾ ಅದು. ಒಂದು ಊರು, ಅಲ್ಲಿನ ಜನಜೀವನ, ಒಂದು ಜಾತ್ರೆ, ದೇವಸ್ಥಾನದ ಒಂದು ಕುದುರೆ ಇವುಗಳೇ ಚಿತ್ರದ ಪ್ರಮುಖ ಅಂಶಗಳಾದರೂ ಸಿನಿಮಾದ ಕಥೆ ಯಾವ ಕಾಲಘಟ್ಟೆಕ್ಕೂ ನಿಲುಕದೆ ಪ್ರಸ್ತುತ ಎನಿಸುತ್ತದೆ. ಅದಕ್ಕೆ ಕಾರಣ  ಅದರಲ್ಲಿನ ಸತ್ವ ಎನ್ನಬಹುದು.ಕಥೆ-ಚಿತ್ರಕಥೆಯೇ ಚಿತ್ರದ ಜೀವಾಳ. ಚಿತ್ರದಲ್ಲಿ ನಾಯಕನಿದ್ದರೂ ಅವನು ನಾಯಕನಲ್ಲ. ಇಲ್ಲಿ ಯಾವುದೇ ನಾಯಕ, ಖಳನಾಯಕ, ಪೋಷಕ ಪಾತ್ರ ತರಹದ ವಿ೦ಗಡನೆಗಳಿಲ್ಲ. ನಮ್ಮ ಅಕ್ಕಪಕ್ಕದ ಮನೆಯವರು, ದೂರದ ಸಂಬಂಧಿಗಳು , ಗೆಳೆಯರು ಇವುಗಳೇ ಇಲ್ಲಿ ಪಾತ್ರಗಳಾಗಿ ಮೆರೆದಿವೆ.
ಎ೦ಗೆಯು೦  ಎಪ್ಪೋದಂ
ಕಳಗು
ಮೈನಾ
ಖ್ಯಾತ ನಿರ್ದೇಶಕ  ಮುರುಗದಾಸ್ ನಿರ್ಮಾಣದ ಎನ್ಗೆಯಂ ಎಪ್ಪೋದಂ ಕೂಡ ಒಂದು ಸರಳ ಸುಂದರವಾದ ಚಿತ್ರವಾದರೂ ಅದರ ಅನಿರೀಕ್ಷಿತ ಕ್ಲೈಮಾಕ್ಸ್ ನಮ್ಮನ್ನು ದ೦ಗುಬದಡಿಸುವುದ೦ತೂ ನಿಜ. ಎರಡು ಪ್ರೇಮಕಥೆಗಳನ್ನು ತುಂಬಾ ಚೆನ್ನಾಗಿ ನವಿರಾಗಿ ನಿರೂಪಿಸುತ್ತಾ ಹೋಗುವ ನಿರ್ದೇಶಕ ಕೊನೆಯಲ್ಲಿ ಒಂದು ಅಪಘಾತ ಮಾಡಿಸಿ ಚಿತ್ರವನ್ನೂ ನೋವಿನಲ್ಲಿ ಮುಗಿಸಿಬಿಡುತ್ತಾನೆ.ಅದೇ ಸಿನಿಮಾದ ಪ್ರಾರ೦ಭವೂ ಹೌದು.ಇದು ಕೂಡ ಕಡಿಮೆ ಬಜೆಟ್ಟಿನ ಚಿತ್ರವೇ..ಆದರೂ ಸ್ಕ್ರಿಪ್ಟ್ ವಿಷಯದಲ್ಲಿ ಉತ್ತಮ ಚಿತ್ರವೇ ಸರಿ. ಹಾಗೆ ನೋಡಿದರೆ 'ತಮಿಳ್ ಪಡಂ', ಮೈನಾ ಮುಂತಾದ ಚಿತ್ರಗಳೂ ಕಡಿಮೆ ಬಂಡವಾಳದ ಚಿತ್ರಗಳೇ. ಈ ಚಿತ್ರಗಳು ಯಶಸ್ಸಾದದ್ದು ಸ್ಟಾರ್ ಗಳಿಂದ ಅಲ್ಲ. ಕಥೆ-ನಿರೂಪಣೆಯಿಂದ.  ಇತ್ತೀಚಿಗೆ ಬಂದ ತಮಿಳಿನ ಕಡಿಮೆ ಬಜೆಟ್ಟಿನ ಸಿನೆಮಾಗಳಲ್ಲಿ ಅದೆಂತಹ ಸತ್ವ ಇರುತ್ತದೆ ಎನಿಸುತ್ತದೆ. ಆ ಕಥಾಹಂದರ , ಭಾಷೆ, ಜನಜೀವನದ ಸೊಬಗನ್ನು ಎಷ್ಟು ಚೆನ್ನಾಗಿ ತೆರೆಯ ಮೇಲೆ ನಿರೂಪಿಸುತ್ತಾರಲ್ಲಾ ಅದು ಖುಷಿ ಕೊಡುತ್ತದೆ. ಹಾಗೆಯೇ ಮೊನ್ನೆ ಬಿಡುಗಡೆಯಾದ ಬಾಲಾಜಿ ಶಕ್ತಿವೇಲ್ ನಿರ್ದೇಶನದ ವಾಳಕ್ ಏನ್ 18/9 ಸಿನೆಮಾ ಕೂಡ ಅದೇ ಪಟ್ಟಿಗೆ ಸೇರಿಸಬಹುದಾದ೦ತಹ  ಚಿತ್ರ. ಕಳಗು ಕಥಾವಸ್ತುವಿನ ದೃಷ್ಟಿಯಿ೦ದ ವಿಶೇಷವಾದ  ಚಿತ್ರ ಎನಿಸಿಕೊಳ್ಳುತ್ತದೆ. ಇದು ಕೂಡ ದುರಂತದಲ್ಲಿ ಕೊನೆಯಾದರೂ ಒಂದು ವಿಶಿಷ್ಟವಾದ ಜನಾಂಗದ ನಡುವೆ ಇಟ್ಟಿರುವ ಪ್ರೇಮ ಕಥೆ ನಮ್ಮನ್ನು ತಟ್ಟದಿರದು .ಬೆಟ್ಟದ ಇರುಕಲು, ಪ್ರಪಾತಕ್ಕೆ  ಬಿದ್ದ ಹೆಣಗಳನ್ನು ಎತ್ತುವುದನ್ನೇ ಕಾಯಕ ಮಾಡಿಕೊಂಡಿರುವವರ ಕಥೆ ಇದೆ. ಒಂದು ಭಿನ್ನ ಅನುಭವಕ್ಕಾಗಿ ಈ ಚಿತ್ರವನ್ನೊಮ್ಮೆ ನೋಡಬಹುದು. 
 ನಮ್ಮಲ್ಲಿ ಕಡಿಮೆ ಬಂಡವಾಳದ ಚಿತ್ರಗಳೆಂದರೆ ಕಿರುತೆರೆ ಚಿತ್ರಗಳು ಎನ್ನುವಂತಾಗಿಬಿಟ್ಟಿದೆ.  ಅಂದರೆ ಕಿರುತೆರೆಗಾಗಿ ಅತೀ ಕಡಿಮೆ ವೆಚ್ಚದಲ್ಲಿ ರೀಲು ಸುತ್ತಿ, ಆನಂತರ ನಾಮಕಾವಸ್ತೆಗೆ ಒ೦ದು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಹಣಮಾಡಿಕೊಳ್ಳುವ ಚಿತ್ರಗಳು.ಬರೀ ಎರಡ್ಮೂರು ತಿಂಗಳಿಗೆ ಒ೦ದು ಸಿನಿಮಾ ಮುಗಿದುಹೋಗುತ್ತದೆ.   ನಿರ್ಮಾಪಕರಿಗೆ ಲಾಭವಾದರೂ ಕನ್ನಡಚಿತ್ರರಂಗ ಮಾತ್ರ ಅಧೋಗತಿಗೆ ಇಳಿದುಹೋಗುತ್ತದೆ.ಈಗ ಆಗಿರುವುದೂ ಅದೇ. ಕಡಿಮೆ ವೆಚ್ಚದ ಚಿತ್ರ ಅಂದರೆ ಮೊದಲೆಲ್ಲ ಪ್ರಯೋಗಾತ್ಮಕ ಅಥವಾ ಉತ್ತಮ ಕಥೆಯುಳ್ಳ ಚಿತ್ರ ಎನ್ನುವಂತಿತ್ತು. ಆದರೆ ಈವತ್ತು ಕನ್ನಡ ಚಿತ್ರರಂಗದಲ್ಲಿ ಕಡಿಮೆ ವೆಚ್ಚದ ಚಿತ್ರಗಳೆಂದರೆ ಚಾನೆಲ್ ಚಿತ್ರಗಳು ಎನ್ನುವಂತಾಗಿದೆ. ಹಿಂದಿಯಲ್ಲೂ ಕಡಿಮೆ ಬಜೆಟ್ಟಿನ ಚಿತ್ರಗಿಗೊ೦ದು ಹೆಸರಿದೆ.ಬೆಲೆ ಇದೆ. ಆದರೆ ನಮ್ಮಲ್ಲಿ ಕೆಲವು ದುರಾಸೆಯ , ಸಿನಿಮಾ ಪ್ರೀತಿಯಿಲ್ಲದ ಜನರಿಂದಾಗಿ ಈವತ್ತಿನ ಪರಿಸ್ಥಿತಿ ಬಂದೊದಗಿದೆ.
ತಮಿಳ್ ಪಡಂ
ಹಾಗ೦ತಹ ಬೇರೆ ಭಾಷೆಗಳಲ್ಲಿ  ಕೆಟ್ಟ ಸಿನಿಮಾಗಳು ಇಲ್ಲವೆಂದಲ್ಲ. ಆದರೆ ಇಲ್ಲಿಗಿಂತ ಕಡಿಮೆ.ಮೇಲಿನ ಸಿನೆಮಾಗಳನ್ನೆಲ್ಲ ನೋಡಿಲ್ಲವಾದರೆ ಬಿಡುವು ಮಾಡಿಕೊಂಡು ಒಮ್ಮೆ ನೋಡಿ.