Friday, July 6, 2012

ಓದಿ, ನೋಡಿ ಮರುಳಾದದ್ದು..


ವಾಗ  ಮೈಸೂರಿನ ಹಾಸ್ಟೆಲಿನಲ್ಲಿದ್ದೆವು. ಕಾಲೇಜು ಮುಗಿದ ನಂತರ ಲೈಬ್ರರಿ ಆಮೇಲೆ ಸಿನಿಮಾ ಇವೆರೆಡೇ ಆಯ್ಕೆಗಳಿದ್ದ ಟೈಮ್ ಅದು. ತರಗತಿ ಮುಗಿಸಿ, ಒಂದಷ್ಟು ಹರಟೆ ಹೊಡೆದು ಲೈಬ್ರರಿಯಲ್ಲೊಂದಷ್ಟು ಕಾಲವನ್ನು ವ್ಯಯಿಸಿ, ಊಟದ ಆಜುಬಾಜು ಸಮಯಕ್ಕೆ ಹಾಸ್ಟೆಲಿನ ಅಂಗಳದಲ್ಲಿ ಪ್ರತ್ಯಕ್ಷವಾಗಿ ಊಟ ಮುಗಿಸಿದರೆ ಮತ್ತೆ ಸಿನಿಮಾದ ಕಡೆ ಗಮನ ಹೋಗಿಬಿಡುತ್ತಿತ್ತು. ಆವಾಗ, ಈವಾಗಲೂ ನನಗೊಂದು ಚಟ ಇದೆ. ಸಿನಿಮಾ ಹೇಗೇ ಇರಲಿ ಕನ್ನಡವಾದರೇ ಅದನ್ನೊಮ್ಮೆ ನೋಡಲೇಬೇಕು, ನಾಯಕ, ನಾಯಕಿ, ನಿರ್ದೇಶಕ ಯಾರಾದರೂ ನನಗೆ ಅಷ್ಟೊಂದು ಮುಖ್ಯವೆನಿಸುತ್ತಿರಲಿಲ್ಲ. ಅದರಲ್ಲೂ ಹೊಸಬರ ಸಿನಿಮಾವಾದರಂತೂ ಏನನ್ನೂ ಕೇಳದೇ ಚಿತ್ರಮಂದಿರದೊಳಕ್ಕೆ ನುಗ್ಗಿ ಬಿಡುತ್ತಿದ್ದೆ. ಇಂಥ ಸುಮಾರು ಸಿನಿಮಾ ನೋಡಿ ನೋಡಿ ಹಿಂಸೆ ಪಟ್ಟುಕೊಂಡಿದ್ದಷ್ಟೇ ಅಲ್ಲ, ಗೆಳೆಯರಿಗೂ ಹಿಂಸೆ ಕೊಟ್ಟಿದ್ದೆ. ಆವಾಗ ಒಂದು ಹೊಸ ಸಿನಿಮಾ ಬಿಡುಗಡೆಯಾಗಿತ್ತು. ಯಾವುದೇ ನಿರೀಕ್ಷೆಗಳಿಲ್ಲದ, ಚೆನ್ನಾಗಿರೊಲ್ಲವೇನೋ ಎಂದು ಅನುಮಾನ ತರಿಸುವ  ಸಿನಿಮಾ ಅದು. ನನಗೋ ಒಮ್ಮೆ ನೋಡಲೇಬೇಕೆಬ್ಬಿಸಿತ್ತಾದರೂ ಗೆಳೆಯ ಚಂದ್ರ ಬೇಕಾದರೆ ಕತ್ತು ಕತ್ತರಿಸಿಕೊಳ್ಳುತ್ತೇನೆ, ಸಿನಿಮಾಕ್ಕೆ ಮಾತ್ರ ಬರಲು ತಯಾರಿಲ್ಲ ಎಂದು ಹಠ ಹಿಡಿದುಬಿಟ್ಟ. ಆಮೇಲೆ ಅವನೇ ಇರು ಒಂದು ಐಡಿಯ ಮಾಡೋಣ ಎಂದ. ನಮ್ಮ ರೂಮಲ್ಲಿದ್ದ ಇನ್ನಿಬ್ಬರು ರೂಮೇಟುಗಳನ್ನು ಹೇಗಾದರೂ ಮಾಡಿ ಸಿನಿಮಾಕ್ಕೆ ಕಳುಹಿಸುವುದು, ಅವರ ಅಭಿಪ್ರಾಯ ಕೇಳಿಕೊಂಡು ಸಿನಿಮಾಕ್ಕೆ ಹೋಗುವುದೋ ಬೇಡವೋ ನಿರ್ಧರಿಸುವುದೇ ಅವನ ಐಡಿಯ. ಸರಿ ಎಂದದ್ದೇ ಅವರು ರೂಮಲ್ಲಿದ್ದಾಗ ಊಟಕ್ಕೂ ಮುಂಚೆ ಮದ್ಯಾಹ್ನ ಒಂದು ಸಿನಿಮಾ ನೋಡಿದೆವು..ಎಂಥ ಅದ್ಭುತ ಸಿನಿಮಾ ಗೊತ್ತಾ..ಈವತ್ತು ಒಳ್ಳೇ ಸಿನಿಮಾಕ್ಕೇ ಪಬ್ಲಿಸಿಟೀನೆ ಕೊಡಲ್ಲಾ ಮಾರಾಯಾ..ಎಂದೆಲ್ಲಾ ಬೂಸಿಬಿಟ್ಟು, ಆ ಸಿನಿಮಾವನ್ನು ಆ ಕ್ಷಣ ನೋಡದಿದ್ದರೇ ಬದುಕಿದ್ದೂ ವ್ಯರ್ಥ ಎನ್ನುವ ರೇಂಜಿಗೆ ಹೇಳಿಬಿಟ್ಟೆವು. ಅವರಿಬ್ಬರು ತುರಾತುರಿಯಿಂದ ಊಟ ಮುಗಿಸಿದ್ದೇ ಸಿನಿಮಾಕ್ಕೇ ಓಡಿಬಿಟ್ಟರು. ನಾವು ನೆಮ್ಮದಿಯಾಗಿ ಮಲಗಿದೆವು.
ಸೆಕೆಂಡ್ ಶೋ ಮುಗಿಸಿ, ಸಿನಿಮಾದ ನರಕಯಾತನೇ ಮುಗಿಸಿಬಂದವರು ನಿದ್ರೆ ಮಾಡುತ್ತಿದ್ದರೂ ಬಿಡದೇ ನಮ್ಮನ್ನು ಎಬ್ಬಿಸಿದಾಗ, ಅವರ ಮುಖದಲ್ಲಿ ಚಿಮ್ಮುತ್ತಿದ್ದ ರೋಷಾವೇಶದ ಭಾವಗಳನ್ನು ನೋಡಿದಾಗ ನಮಗೆ ಆ ಸಿನಿಮಾದ ಬಗ್ಗೆ ಸಂಪೂರ್ಣ ತಿಳಿದುಹೋಗಿತ್ತು. ಮುಂದಿನದ್ದು ನೀವೇ ಊಹಿಸಬಹುದು.
ಮೊನ್ನೆ ಫೇಸ್‌ಬುಕಿನಲ್ಲಿ ನನ್ನ ಸ್ಟೇಟಸ್ ಅಪ್‌ಡೇಟ್ ಮಾಡುವಾಗ ಆ ವಾರ ಬಿಡುಗಡೆಯಾದ ಎಲ್ಲಾ ಮೂರು ಚಿತ್ರಗಳನ್ನೂ ನೋಡಿದ್ದನು ಹಂಚಿಕೊಂಡಿದ್ದೆ. ಆಗ ಗೆಳೆಯರೆಲ್ಲಾ ಅದನ್ನೂ ನೋಡಿದಾ..ನೀನು ಬಿಡು ಯಾವುದನ್ನೂ ಬಿಡಲ್ಲಾ ಎಂದೆಲ್ಲಾ ಫೋನ್ ಮಾಡಿ ಹೀಗೆಳೆದಿದ್ದರು. ಆದರೆ ನನಗೆ ಬರೀ ಕನ್ನಡದಲ್ಲಷ್ಟೇ ಅಲ್ಲ. ಬೇರೆಲ್ಲಾ ಭಾಷೆಯಲ್ಲೂ ಅತೀ ಕೆಟ್ಟದಾದ ಅರ್ಥವೇ ಇಲ್ಲದ ಸಿನಿಮಾಗಳನ್ನು ನೋಡಿಬಿಟ್ಟಿರುವುದರಿಂದ ಈವಾಗಾವಾಗ ಸಿನಿಮಾ ಚೆನ್ನಾಗಿಲ್ಲದಿದ್ದರೂ ತೀರಾ ಕೆಟ್ಟದಾಗಿಲ್ಲದಿದ್ದರೇ ಬೇಸರವೆನಿಸುತ್ತದೆ. ಅಲ್ಲಿನ ಬಾಲಿಶ ದೃಶ್ಯಗಳು, ಅರ್ಥವೇ ಇಲ್ಲದ ಮಾತುಗಳು, ಸುಖಾಸುಮ್ಮನೆ ಹೊಡೆತ ತಿನ್ನುವ ಖಳರು, ನೋಡಿದ ಘಳಿಗೆಯೇ ಯುಗಳಗೀತೆಯನ್ನು ಹಾಡಲು ಬೆಟ್ಟದ ತಪ್ಪಲಿಗೋ, ಪಾರ್ಕಿಗೋ ಓಡಿಹೋಗುವ ನಾಯಕ-ನಾಯಕಿಯರು... ನೆನಪಿಸಿಕೊಂಡು ನಗಲು ಇನ್ನೇನು ಬೇಕು..
ಸಿಡ್ನೀ ಶೆಲ್ಡನ್ ಬರೆದ ಮಾಸ್ಟರ್ ಆಫ್ ದಿ ಗೇಮ್ ಓದಿದೆ. ಪ್ರಾರಂಭದಲ್ಲಿ ತುಂಬಾ ರೋಚಕವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ತದನಂತರ ತಣ್ಣಗೆ ಏರಿಳಿತಗಳಿಲ್ಲದೇ ಬರೇ ಒಂದು ತಲೆಮಾರಿನ ಕಥೆಯನ್ನು ತೆರೆದಿಡುತ್ತದೆ.ಬಡತನದ ಬೇಗೆಯಲ್ಲಿ ಬೆಂದ ಹುಡುಗನೊಬ್ಬ ಆಫ್ರಿಕಾಗೆ ವಜ್ರದ ನಿಕ್ಷೇಪ ಹುಡುಕಿಕೊಂಡು ಹೋಗುತ್ತಾನೆ. ಯಾವೊಂದು ಪೂರ್ವ ತಯಾರಿಯೂ ಇಲ್ಲದೇ ಬರೇ ಗುರಿಯೊಂದನ್ನೇ ಅಚಲವಾಗಿಟ್ಟುಕೊಂಡು ಹೋಗುವ ಹುಡುಗ, ಏನೆಲ್ಲಾ ಕಷ್ಟ ಕಾರ್ಪಣ್ಯ ಅನುಭವಿಸಿ, ಮೋಸಹೋಗಿ ಹೇಗೆ ದೊಡ್ಡ ಶ್ರೀಮಂತನಾಗುತ್ತಾನೆ, ಆನಂತರ ಅವನ ತಲೆಮಾರು ಹೇಗೆ ನಡೆದುಕೊಂಡು ಬರುತ್ತದೆ ಎನ್ನುವುದನ್ನು ತುಂಬಾ ವಿವರವಾಗಿ ಬರೆದಿದ್ದಾನೆ ಶೆಲ್ಡನ್.
ಅವನ ಇನ್ನೊಂದು ಕಾದಂಬರಿ ಟೆಲ್ ಮಿ ಯುವರ್ ಡ್ರೀಮ್ಸ್ ಸ್ಪ್ಲಿಟ್ ಪರ್ಸನಾಲಿಟಿಯ ಬಗೆಗಿನ ಕಾದಂಬರಿ. ಇಲ್ಲಿ ಮೂರು ವಿಭಿನ್ನ ವ್ಯಕ್ತಿತ್ವ ಹೊಂದಿದ ನಾಯಕಿ ತನಗರಿವಿಲ್ಲದೇ ಸಾಲು ಸಾಲು ಕೊಲೆಗಳನ್ನು ಮಾಡುತ್ತಾ ಸಾಗುತ್ತಾಳೆ. ಅವಳನ್ನು ಪತ್ತೆ ಹಚ್ಚುವುದೇ ದೊಡ್ದ ಸಾಹಸವಾದರೂ ಶೆಲ್ಡನ್ ಕಾದಂಬರಿಯನ್ನು ಅಷ್ಟಕ್ಕೆ ಮುಗಿಸದೆ ಅಂಥವರನ್ನು ಗುಣ ಪಡಿಸುವ ಬಗೆಯನ್ನು ಬೋರ್ ಹೊಡೆಸದಂತೆ ತುಂಬಾ ವೈಜ್ಞಾನಿಕ ಅಂಶಗಳ ಸಹಾಯದೊಂದಿಗೆ ವಿವರಿಸುತ್ತಾ ಹೋದರೂ ರಹಸ್ಯವನ್ನು ಕೊನೆಯ ಪುಟದವರೆಗೂ ಕಾಪಾಡಿಕೊಂಡಿದ್ದಾನೆ.
ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಗುತ್ತಿದ್ದ ಜೋಗಿಯವರ ಗುರುವಾಯನ ಕೆರೆ ಮುಗಿದಿದ್ದು ಒಂದು ರೀತಿಯಲ್ಲಿ ಬೇಸರ ತರಿಸಿದೆ. ತೀರಾ ರಾಜಕೀಯ ವಿಷಯಗಳಿದ್ದಾಗೆಲ್ಲಾ ನನಗೆ ಅದರ ಬಗ್ಗೆ ಆಸಕ್ತಿಯಿಲ್ಲದ ಕಾರಣ ಹಾಯ್ ಬೆಂಗಳೂರ್ ಪತ್ರಿಕೆಯನ್ನು ಸಹನೀಯ ಮಾಡಿದ್ದೇ ಈ ಗುರುವಾಯನ ಕೆರೆ. ಜೋಗಿ ಬರಹಗಳು, ಅವರ ಪದಸಂಪತ್ತು, ಅವರ ಜ್ಞಾನಸಂಪತ್ತು ಯಾವಾಗಲೂ ಆಶ್ಚರ್ಯತರಿಸುತ್ತದೆ. ಯಾವುದೇ ಗಂಭೀರ ಜಟಿಲ ವಿಷಯವನ್ನೂ ಮನ ಮುಟ್ಟುವ ಹಾಗೆ ಸರಳವಾಗಿ ಬರೆಯುವ ಜೋಗಿಯವರ ಬರಹಗಳನ್ನು ನಾನು ಓದದೇ ಇರುವುದಿಲ್ಲ.
ಹಾಗೇ ಕ್ಲೋಪ್ಕ-ದಿ ಟ್ರ್ಯಾಪ್ ಎನ್ನುವ ಸೆರ್ಬಿಯನ್ ಭಾಷೆಯ ಚಲನಚಿತ್ರ ನೋಡಿದ ಮೇಲೆ ಒಂದು ಒಳ್ಳೆಯ ಥ್ರಿಲ್ಲರ್ ನೋಡಿದ ಅನುಭವವಾಯಿತು. ತುಂಬಾ ಸರಳ ಕಥೆಯ ಚಿತ್ರವಾದರೂ ನಿರ್ದೇಶಕ ನಿರೂಪಿಸಿರುವ ರೀತಿ ತುಂಬಾ ಪರಿಣಾಮಕಾರಿಯಾಗಿದೆ. ಮಗನಿಗೆ ಮಾರಣಾ೦ತಿಕ ಖಾಯಿಲೆಯಿದೆ. ಆಪರೇಶನ್ ಗೆ ಸುಮಾರು ಹಣ ಬೇಕು. ಆಪರೇಶನ್ ಮಾಡಿಸದಿದ್ದರೆ ಮಗ ಬದುಕುವುದಿಲ್ಲ. ಹಣ ಹೊಂದಿಸಲು ಸಮಯದ ಅಭಾವವಿದೆ. ಹಾಗೆ ಸುಲಭಕ್ಕೆ ಹಣ ಸಿಗುವ ಯಾವ ಮಾರ್ಗವೂ ಇಲ್ಲ. ಈ ಸಂದರ್ಭದಲ್ಲಿ ಒಂದು ಪತ್ರಿಕೆಯೊ೦ದಕ್ಕೆ ಗಂಡ ಹೆಂಡತಿ ಜಾಹಿರಾತು ನೀಡುತ್ತಾರೆ...ಆಗೊಬ್ಬ ವ್ಯಕ್ತಿ ಆಪರೇಶನ್ ಹಣ ಜೊತೆಗೆ ಓಡಾಟದ ಖರ್ಚು ಕೊಡುತ್ತೀನಿ,..ಬದಲಿಗೆ ನೀನೊಬ್ಬ ವ್ಯಕ್ತಿಯನ್ನು ಕೊಲ್ಲಬೇಕೆನ್ನುತ್ತಾನೆ...ಈ ಸಂಧಿಗ್ದ ಪರಿಸ್ಥಿತಿಯಲ್ಲಿ ನಾಯಕ ಒಪ್ಪಿಕೊಂಡು ಕೊಲೆ ಮಾಡುತ್ತಾನೆ..? ಮು೦ದೆನಾಗುತ್ತದೆ...ಸಮಯ ಸಿಕ್ಕಾಗ ಸಿನಿಮಾ ನೋಡಿ.

4 comments:

  1. Hai Ravi
    i know ur film fantasy, once u had taken us to a new movie, i don't remmember its name, it was sooooooooooooooooo bad... so bad, i n manju scolded u and chandru till the end of BEd.
    Anyhow i have those Shledon's two books with me, i took them for u
    Anyway we will discuss after reading,tomorrow is happy saturday, i got the Machenist from lib, i'll watch it.

    thanks keep writing
    Madhu

    ReplyDelete
  2. Not finding 'the trap' in downloads :-(
    malathi S

    ReplyDelete
  3. try this link...

    http://kat.ph/klopka-2007-domaci-film-t3539429.html

    ನೋಡಿ ನೋಡಿ ಮರುಳಾಗಿ...

    ReplyDelete
  4. This comment has been removed by the author.

    ReplyDelete