Monday, August 5, 2013

ಕನ್ನಡದಲ್ಲಿ ಸಬ್ ಟೈಟಲ್ ಮಾಡುವುದು ಹೀಗೆ..

ಕಳೆದ ವಾರದ ಕನ್ನಡ ಅಡಿಬರಹ ಕುರಿತಾದ ಲೇಖನವನ್ನು ಹಲವಾರು ಗೆಳೆಯರು ಮೆಚ್ಚಿದ್ದಷ್ಟೇ ಅಲ್ಲ ತಾವೂ ಕೂಡ ಮಾಡಲು ಮುಂದೆ ಬಂದಿದ್ದಾರೆ. ಹಾಗಾಗಿ ನನಗೆ ಒಂದು ದೊಡ್ಡ ಶಕ್ತಿ ಬಂದಂತಾಗಿದೆ. ಯಾವ ಯಾವ ಚಿತ್ರಗಳಿಗೆ ಅಡಿಬರಹ ಮಾಡುವುದು ಎಂಬ ಪಟ್ಟಿಯ ಸಿದ್ಧತೆಯಲ್ಲಿದ್ದೇನೆ.
ಅಡಿಬರಹ ಮಾಡುವುದು ತುಂಬಾ ಸುಲಭ. ಅದಕ್ಕೆ ಬೇಕಿರುವುದು ಮೊದಲಿಗೆ ಆಸಕ್ತಿ ಮತ್ತು ಎರಡನೆಯದಾಗಿ ಕಂಪ್ಯೂಟರ್.ಅದನ್ನು ಮಾಡುವ ಬಗೆಯನ್ನು ಚಿಕ್ಕ ವಿವರಣೆಯ ಮೂಲಕ ಈ ವೀಡಿಯೊದಲ್ಲಿ ತೋರಿಸಿದ್ದೇನೆ. ಒಮ್ಮೆ ನೋಡಿದರೆ ಸಾಕು ನಿಮಗೆ ಅರ್ಥವಾಗಿ ಬಿಡುತ್ತದೆ.

ಇಷ್ಟೇ.ಇದನ್ನು ಮಾಡಿದ ನಂತರ ಪ್ಲೇಯರ್ಗಳಲ್ಲಿ ಪ್ರಿಫರೆನ್ಸಸ್ ಇರುವ ಕಡೆ ಅಡಿಬರಹದ ಲಿಪಿಯನ್ನು ಕನ್ನಡಕ್ಕೆ ಬದಲಾಯಿಸಿದರಾಯಿತು. ಹಾಗೆಯೇ ಇದನ್ನು ಡಿವಿಡಿ ಪ್ಲೇಯರ್ ಗಳಲ್ಲಿ ತೋರಿಸಬೇಕೆಂದರೆ ನಾವು ಅಡಿಬರಹವನ್ನು ವೀಡಿಯೊಗೆ ಎಂಬೆಡ್ ಮಾಡಿದರಾಯಿತು. ಅದಕ್ಕೆ ಉಚಿತವಾಗಿಯೇ ಸಿಗುವ ಹಲವಾರು ತಂತ್ರಾಂಶಗಳಿವೆ. ಹಾಗೆಯೇ ವಿ.ಎಲ್.ಸಿ ಮೀಡಿಯಾ ಪ್ಲೇಯರ್ ನಲ್ಲಿ ಕೂಡ ನಾವು ಎಂಬೆಡ್ ಮಾಡಬಹುದು.ಈ ವೀಡಿಯೊ ವನ್ನು ನೀವು ಯುಟ್ಯೂಬ್ ನಲ್ಲಿ ಈ ಕೊಂಡಿಯನ್ನು ಕ್ಲಿಕ್ ಮಾಡುವುದರ ಮೂಲಕವೂ ನೋಡಬಹುದು.
http://youtu.be/FvNtPkJTMO0
ಮತ್ತೆ ಮತ್ತೆ ದಿ ಕಲರ್ ಆಫ್ ಪ್ಯಾರಡೈಸ್ ಚಿತ್ರವನ್ನು ಕನ್ನಡದ ಅಡಿಬರಹದ ಮುಖಾಂತರ ನೋಡಿದೆ. ಅದೇನೋ ಅದರ ಅನುಭವವೇ ಬೇರೆ ಎನಿಸಿತು. ಆನಂತರ  ಬಿಹೈಂಡ್ ದಿ ಸನ್ ಚಿತ್ರವನ್ನು ಈ ಮೊದಲಿಗೆ ನೋಡಿದ್ದೆನಾದರೂ ವಸುಧೇಂದ್ರ ತಾವು ಮಾಡಿದ ಕನ್ನಡ ಅಡಿಬರಹವನ್ನು ಕೊಟ್ಟ ಮೇಲೆ ಮತ್ತೊಮ್ಮೆ ನೋಡಿದೆ. ನಿರ್ದೇಶಕ ವಾಲ್ಟರ್ ಸಾಲ್ಸ್ ಬಗ್ಗೆ ನೀವು ಕೇಳಿರಬಹುದು. ಚೆಗುವಾರ ನ ಕಥೆಯಾಧಾರಿತ ದಿ ಮೋಟಾರ್ ಸೈಕಲ್ ಡೈರೀಸ್ ಚಿತ್ರವನ್ನು ತೆರೆಗೆ ತಂದ ಅದ್ಭುತ ನಿರ್ದೇಶಕ. ಅವನ ಸೆಂಟ್ರಲ್ ಸ್ಟೇಷನ್ ಚಿತ್ರದ ಸೊಬಗೆ ಬೇರೆ. ಈ ಚಿತ್ರವೂ ಸಹ ವಾಲ್ಟರ್ ನಿರ್ದೇಶನದ ಚಿತ್ರ.ಒಂದು ದ್ವೇಷದ ಕಥೆಯನ್ನು ಮಾನವೀಯ ಸಂಬಂಧಗಳ ಸೂಕ್ಷ್ಮಗಳ ಅಡಿಪಾಯದ ಜೊತೆಗೆ ತೆರೆಗೆ ತಂದಿರುವ ಪರಿ ಅನನ್ಯವಾದದ್ದು . ಚಿತ್ರವನ್ನು ನೋಡಿ ಅನುಭವಿಸಿದರಷ್ಟೇ ಚಂದ. ಅದರಲ್ಲೂ ನನ್ನ ಮೆಚ್ಚಿನ ಬರಹಗಾರ ವಸುಧೇಂದ್ರರ ಅಡಿಬರಹದ ಜೊತೆ ನೋಡುವುದೂ ಇನ್ನೂ ಖುಷಿ ತರುವ ಸಂಗತಿ ಎನ್ನಬಹುದು. ಆ ಚಿತ್ರವನ್ನು ನೋಡಿಲ್ಲವಾದರೆ ಒಮ್ಮೆ ನೋಡಿ. ಬೇಕಿದ್ದರೆ ಕನ್ನಡದ ಅಡಿಬರಹಕ್ಕೆ ಇಮೇಲ್ ಮಾಡಿದರೆ ಕಳುಹಿಸುತ್ತೇನೆ.ನೀವು ಯಾವ ಚಿತ್ರಕ್ಕೆ ಅಡಿಬರಹ ಮಾಡಲು ಸಿದ್ಧರಿದ್ದೀರಾ ಎಂಬುದೇ ಈ ಸಲದ ಪ್ರಶ್ನೆ..?