Friday, June 21, 2013

ಒಬ್ಬ ಸಾಮಾನ್ಯ ಮತ್ತು ರೀಮೆಕುಗಳು

ಹಿಂದಿಯಲ್ಲಿ ಎ ವೆಡ್ನೆಸ್ ಡೆ ನನ್ನ ಅಚ್ಚುಮೆಚ್ಚಿನ ಚಿತ್ರ. ನೀರಜ್ ಪಾಂಡೆಯವರ ಬಿಗಿಯಾದ ಚಿತ್ರಕಥೆ ಚಿತ್ರದ ಪ್ರಮುಖ ಆಸ್ತಿ ಎನ್ನಬಹುದು. ಅದನ್ನು ದಿ ಕಾಮನ್ ಮ್ಯಾನ್ ಎನ್ನುವ ಹೆಸರಿನಲ್ಲಿ ಇಂಗ್ಲೀಷಿಗೆ ರೀಮೇಕ್ ಮಾಡಲಾಗಿದೆ.ಬೆನ್ ಕಿಂಗ್ ಸ್ಲೇ [ಕೃಷ್ಣ ಪಂಡಿತ್ ಭಾ೦ಜಿ]ನಮ್ಮಲ್ಲಿ ನಾಸೀರುದ್ದೀನ್ ಷಾ ಅಭಿನಯಿಸಿದ್ದ ಪಾತ್ರವನ್ನು ನಿಭಾಯಿಸಿದ್ದಾರೆ. ಇಡೀ ಚಿತ್ರ ಶ್ರೀಲಂಕಾದಲ್ಲಿ ನಡೆಯುತ್ತದೆ.ಕಥೆಯ ಬಗ್ಗೆ ಹೇಳುವುದೇನೂ ಇಲ್ಲ. ಆದರೆ ನಮ್ಮ ಷಾ ನಿರ್ವಹಿಸಿದ್ದ ಪಾತ್ರವನ್ನು ಬೆನ್ ನಿರ್ವಹಿಸುವಲ್ಲಿ ಕೊಂಚ ಎಡವಿದ್ದಾರೆ ಎನ್ನಬಹುದು. ಇಲ್ಲಿ ಬೆನ್ ನಮಗೆ ಜನಸಾಮಾನ್ಯ ಎನಿಸುವುದೇ ಇಲ್ಲ. ಪಕ್ಕಾ ಫಿಟ್ ದೇಹವನ್ನು ಹೊಂದಿರುವ ಮತ್ತು ಇನ್ ಶರ್ಟ್ ಮಾಡಿಕೊಂಡ ಬೆನ್ ನಮಗೆ ಬೇರೆ ರೀತಿಯಾಗಿಯೇ ಕಾಣುತ್ತಾರೆ. ಅದಲ್ಲದೆ ಅವರ ನಡೆ ನುಡಿ ಸಂಭಾಷಣೆ ಒಪ್ಪಿಸುವ ಪರಿ ನಮಗೆಲ್ಲೂ ಸಾಮಾನ್ಯನೊಬ್ಬ ತನ್ನ ಒಳಗುದಿಯನ್ನು ವ್ಯಕ್ತ ಪಡಿಸುವ ಹಾಗೆ ಕಾಣಿಸುವುದೇ ಇಲ್ಲ.ಅದೇ ಚಿತ್ರದ ಮೈನಸ್ ಪಾಯಿಂಟ್ ಎನ್ನಬಹುದು.
ಇದೆ ಚಿತ್ರ ತಮಿಳು/ತೆಲುಗಲ್ಲಿ ಕಮಲ್ ಹಾಸನ್ ಅಭಿನಯದಲ್ಲೂ ತೆರೆಗೆ ಬಂದಿತ್ತು. ಆದರೆ ಕಮಲ್ ಹಾಸನ್ ಕೂಡ ಒಬ್ಬ ಸಾಮಾನ್ಯ ನಾಗಿರಲಿಲ್ಲ. ಅವರ ಮಾತು, ಶೈಲಿ ಯಾವುದೂ ಸಾಮಾನ್ಯ ಎನಿಸಿರಲಿಲ್ಲ. ಚಿತ್ರದ ಕಥೆ ಎಷ್ಟೇ ಬಿಗಿಯಾಗಿದ್ದರೂ ಕಲಾವಿದ ಸರಿಯಾಗಿ ಪಾತ್ರವನ್ನು ಅಭಿನಯಿಸದಿದ್ದರೆ ಚಿತ್ರ ನಿರೀಕ್ಷಿತ ಪರಿಣಾಮ ಬೀರುವುದಿಲ್ಲ. ಕಮಲ್ ಹಾಸನ್ ಮುಖಭಾವವಾಗಲಿ, ಅವರ ದೇಹದಾರ್ಡ್ಯತೆ ಚಿತ್ರದಲ್ಲಿನ ಪಾತ್ರಕ್ಕೆ ಸಹಾಯ ಮಾಡಿರಲಿಲ್ಲ.
ರೀಮೇಕ್ ನ ಇತಿಮಿತಿಗಳೇನೆ ಇರಲಿ ಅದನ್ನು ನಿರ್ವಹಿಸುವುದು ಕಷ್ಟ ಸಾಧ್ಯದ ಕೆಲಸ. ಒಂದು ರೀಮೇಕ್ ಚಿತ್ರ ಮಾಡುವಾಗ ಕಲಾವಿದರ ಆಯ್ಕೆಯಂತೂ ಬಹಳ ಮುಖ್ಯ. ಅಲ್ಲಿ ಆ ಭಾಷೆಯಲ್ಲಿ ಪಾತ್ರ ನಿರ್ವಹಿಸಿದ್ದವನ ರೀತಿಯ ಸಮರ್ಥ ಕಲಾವಿದನನ್ನು ಹುಡುಕುವುದು ಸಾಹಸದ ಕೆಲಸವೇ.ಈಗಲೂ ನನಗೆ ಬಾಜಿಗರ್ ಚಿತ್ರವನ್ನು ಬೇರ್ಯಾವ ಭಾಷೆಯಲ್ಲಿ ನಿರ್ಮಿಸಿದರೂ ಶಾರುಕ್
ನಂತಹ ಕಲಾವಿದನನ್ನು ಎಲ್ಲಿ ಹುಡುಕುವುದು ಎನಿಸುತ್ತದೆ..?
ಹೆಚ್ಚು ಕಡಿಮೆ ರೀಮೇಕ್ ಆದ ಎಲ್ಲಾ ಭಾಷೆಯಲ್ಲೂ ಯಶಸ್ವಿಯಾದದ್ದು ತಮಿಳಿನ ಚಿನ್ನತಂಬಿ. ಆದರೆ ಎಲ್ಲಾ ಭಾಷೆಗಿಂತ ಕನ್ನಡದ ರಾಮಾಚಾರಿ ಬೆಸ್ಟ್ ವರ್ಶನ್ ಎನ್ನಬಹುದು..ಯಾಕೆಂದರೆ ರವಿಚಂದ್ರನ್ ರೀತಿಯಲ್ಲಿ ಅಮಾಯಕತೆ ತೋರಿಸುವುದು ಮತ್ತು ಆ ಪಾತ್ರವನ್ನು ನಿರ್ವಹಿಸುವುದು ಬೇರೆ ಕಲಾವಿದರಿಗೆ ಸಾಧ್ಯವಾದರೂ ಅವರ ರೂಪದಲ್ಲಿ ವ್ಯತ್ಯಾಸವಿದ್ದದ್ದೆ ಅದಕ್ಕೆ ಮುಖ್ಯ ಕಾರಣ ಎನ್ನಬಹುದು.
ಹಾಗೆಯೇ ಭಾರತದಿಂದ ಇಂಗ್ಲಿಷಿಗೆ ಅಥವಾ ಬೇರೆಯ ದೇಶಕ್ಕೆ ಹೆಚ್ಚು ಚಿತ್ರಗಳು ಹೋಗಿಲ್ಲ. ಮುನ್ನಾಭಾಯಿ ಚಿತ್ರ ಹಾಲಿವುಡ್ ನಲ್ಲಿ ರೀಮೇಕ್ ಆಗುತ್ತಿದೆ ಎಂಬ ಸುದ್ದಿ ಕೇಳಿ ಬಂದಿತ್ತಾದರೂ ಅದಿನ್ನು ಕಾರ್ಯ ರೂಪಕ್ಕೆ ಬಂದಿಲ್ಲ.  ಕೊರಿಯಾದ, ಜಪಾನಿನ ಚೀನಾದ ಕೆಲವು ಚಿತ್ರಗಳು ಹಾಲಿವುಡ್ ನಲ್ಲಿ ಪುನರ್ನಿರ್ಮಾಣವಾಗಿವೆ. ಆದರೆ ಅತಿ ಹೆಚ್ಚು ಚಿತ್ರ ನಿರ್ಮಾಣವಾಗುವ ಭಾರತದಲ್ಲಿನ ಯಾವ ಚಿತ್ರವೂ ಹಾಲಿವುಡಿನತ್ತ ಮುಖ ಮಾಡದೆ ಇರುವುದು ಬೇಸರ ತರಿಸುತ್ತದೆ.
ಹಾಲಿವುಡ್ ಗೆ ರೀಮೇಕ್ ಆದ ಭಾರತೀಯ ಚಿತ್ರಗಳು ನಿಮಗೆ ಗೊತ್ತಿದ್ದರೆ ತಿಳಿಸುವಿರಾ..?

Tuesday, June 18, 2013

ನನ್ನಿಷ್ಟ ಪುಸ್ತಕ ಮತ್ತು ರಾಮ್ ಗೋಪಾಲ್ ವರ್ಮ...

“ನನ್ನ ಪ್ಲಾಪ್ ಸಿನಿಮಾಗಳೆಲ್ಲವನ್ನೂ ನಾನು ಉದ್ದೇಶಪೂರ್ವಕವಾಗಿ ತೆಗೆದದ್ದು...ಹಾಗೂ ನನ್ನ ಹಿಟ್ ಸಿನಿಮಾಗಳೆಲ್ಲಾ ಅನಿರೀಕ್ಷಿತವಾಗಿ ಸಂಭವಿಸಿದ್ದು..”
ನಮಗೆ ನಿಮಗೆ ಗೊತ್ತಿರುವಂತೆ ಸತ್ಯ ಮತ್ತು ದಿಲ್ ಸೆ ಚಿತ್ರಗಳು ಒಂದೆ ವರ್ಷದಲ್ಲಿ ಬಿಡುಗಡೆಯಾದವು. ದಿಲ್ ಸೆ ಚಿತ್ರದಲ್ಲಿ ದಿಗ್ಗಜ ಮಣಿರತ್ನಂ ನಿರ್ದೇಶಕನ ಪಟ್ಟವನ್ನು ಅಲಂಕರಿಸಿದ್ದರು. ಸಂಗೀತ ಮಾಂತ್ರಿಕ ಎ.ಆರ್.ರಹಮಾನ್ ಸಂಗೀತ ನೀಡಿದ್ದರು. ಬಾಲಿವುಡ್ ಚಿತ್ರದ ಸೂಪರ್ ಸ್ಟಾರ್  ಶಾರುಕ್ ಖಾನ್ ಇದ್ದರು. ಹೀಗೆ ಬರೀ ದಿಗ್ಗಜರನ್ನೇ ಹೊಂದಿದ್ದ ಬಹು ನಿರೀಕ್ಷಿತ ದಿಲ್ ಸೆ ಪ್ರೇಕ್ಷಕರಿಂದಲೂ ವಿಮರ್ಶಕರಿಂದಲೂ ಗಲ್ಲಾಪೆಟ್ಟಿಗೆ ದೃಷ್ಟಿಯಿಂದಲೂ ಬಹುದೊಡ್ಡ ಸೋಲು ಕಂಡಿತ್ತು. ಆದರೆ ವರ್ಮಾ ಬಿಟ್ಟರೆ ಬೇರಾರೂ ಅಷ್ಟೊಂದು ಪರಿಚಿತರಲ್ಲದ ಸತ್ಯ ಚಿತ್ರ ಬಹುದೊಡ್ಡ ಯಶಸ್ಸು ಕಂಡಿತಲ್ಲದೆ ಮಾಸ್ಟರ್ ಪೀಸ್ ಎನಿಸಿಕೊಂಡಿತು.ವಿಷಯವೇನಪ್ಪ ಎಂದರೆ ರಾಮ್ ಗೋಪಾಲ್ ವರ್ಮರವರು ದಿಲ್ಸೆ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದರು.
ನನಗೆ ವರ್ಮಾ ಬಗ್ಗೆ ಅಚ್ಚರಿ ಎನಿಸಿದ್ದೆ ಈ ಕಾರಣದಿಂದಾಗಿ. ನಿರ್ಮಾಣ, ನಿರ್ದೇಶನ , ಬರಹ ಎಲ್ಲವನ್ನೂ ಸಮಪ್ರಮಾಣದಲ್ಲಿ ಹಂಚಿಕೊಂಡು ಹೋದ ಚಿತ್ರಕರ್ಮಿ ವರ್ಮಾ. ಮಣಿರತ್ನಂ ರವರ ತಿರುಡಾ ತಿರುಡಾ ಚಿತ್ರಕ್ಕೆ ಚಿತ್ರಕಥೆ ಬರೆದದ್ದು ಇದೆ ರಾಮ್ ಗೋಪಾಲ್ ವರ್ಮ.
ರಾಮ್ ಗೋಪಾಲ್ ವರ್ಮ ಬರೆದಿರುವ “ನನ್ನಿಷ್ಟ” ಪುಸ್ತಕವು ನಾನು ಮೊನ್ನೆ ಓದಿದೆ. ಅದು ಅಗ್ನಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದಾಗ ಒಂದೆರೆಡು ಕಂತುಗಳನ್ನು  ಓದಿದ್ದೆನಾದರೂ ಪೂರ್ತಿ ಪುಸ್ತಕಕ್ಕಾಗಿ ಕಾದಿದ್ದೆ. ಮೊನ್ನೆ ಕೈಗೆ ಸಿಕ್ಕಾಗ ಸುಮಾರು ನೂರ ಅರವತ್ತೇಳು ಪುಟಗಳ ಪುಸ್ತಕವನ್ನು ಒಂದೆ ಗುಕ್ಕಿನಲ್ಲಿ ಓದಿ ಮುಗಿಸಿದೆ. ಪುಸ್ತಕ ಅದ್ಭುತವಲ್ಲದಿದ್ದರೂ, ಪೂರ್ತಿಯಾಗಿ ರಾಮ್ ಗೋಪಾಲ್ ವರ್ಮನನ್ನು ಹಿಡಿದಿಡದಿದ್ದರೂ ವರ್ಮಾರ ಯೋಚನಾಲಹರಿಯ ಒಂದು ಭಾಗವನ್ನಾದರೂ ನಮಗೆ/ಓದುಗರಿಗೆ ವಿಶದಪಡಿಸುತ್ತದೆ. ಇಲ್ಲಿ ನಿರ್ದೇಶಕ ವರ್ಮಾ ಇದ್ದಾರೆ ಹೊರತು ವೈಯಕ್ತಿಕ ವರ್ಮರ ಕಥೆಯಿಲ್ಲ. ಅವರು ಹುಟ್ಟು, ಓದು ಹೆಂಡತಿ ಮಕ್ಕಳು..ತಂದೆ ತಾಯಿ ..ಉಹೂ..ಯಾವುದೂ ಇಲ್ಲ. ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಪ್ರಸ್ತಾಪವಾಗುತ್ತದದಾದರೂ ಅದೂ ಸಿನಿಮಾದ ಒಂದು ಭಾಗಕ್ಕೆ ಸಹಾಯಮಾಡಲೆಂದೇ ಪ್ರಸ್ತಾಪವಾಗುತ್ತದೆ.
ವರ್ಮ ಭಾರತೀಯ ಚಿತ್ರರಂಗ ಕಂಡ ವಿಶಿಷ್ಟ ನಿರ್ದೇಶಕ. ಯಾವುದೇ ಇಮೇಜಿಗೆ ಗಂಟು ಬೀಳದ ತನ್ನಿಷ್ಟ ಬಂದಹಾಗೆ ಸಿನಿಮಾ ತೆಗೆಯುತ್ತಾ ಹೋದ ಚಿತ್ರಕರ್ಮಿ. ಅವರ ಸಿನಿಮಾಗಳಲ್ಲಿ ಭೂಗತ ಜಗತ್ತು ಕೊಲೆ ಸುಲಿಗೆ ಮುಂತಾದವುಗಳೇ ಮುಖ್ಯ ದ್ರವ್ಯ. ನವಿರುತನ, ತಿಳಿಹಾಸ್ಯದ ನಿರೂಪನೆಯಿರುವ ಚಿತ್ರಗಳು ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ನನಗೆ ಗೊತ್ತಿರುವ ಮಟ್ಟಿಗೆ ವಿಮರ್ಶಕರಿಂದ ಅತಿ ಹೆಚ್ಚು ಪ್ರಶಂಶೆಗೊಳಗಾದ ಹಾಗೆ ಕಟು ವಿಮರ್ಶೆಗೊಳಗಾದ ನಿರ್ದೇಶಕ ಎಂದರೆ ರಾಮ್ ಗೋಪಾಲ್ ವರ್ಮ ಎನ್ನಬಹುದು. ಆತನ ಚಿತ್ರಕ್ಕೆ ಅಗ್ಯಾತ್ ಗೆ ಬೆಂಗಳೂರ್ ಮಿರರ್ ಪತ್ರಿಕೆ ಸೊನ್ನೆ ಸ್ಟಾರ್ ನೀಡಿತ್ತು. ನಾನು ಇದುವರೆವಿಗೂ ಸೊನ್ನೆ ಸ್ಟಾರ್ ಪಡೆದ ಇನ್ನೊಂದು ಚಿತ್ರವನ್ನು ನೋಡಿಲ್ಲ. ಆದರೆ ಅವರ ಸರ್ಕಾರ್, ಸರ್ಕಾರ್ ರಾಜ್ , ಸತ್ಯ ಚಿತ್ರಗಳು ಅತ್ಯುತ್ತಮ ಚಿತ್ರ ಎಂದು ಪ್ರಶಂಶನೀಯ ವಿಮರ್ಶೆಗಳಿಸಿದ್ದವು.ತೆಲುಗಿನಲ್ಲಿ ಚಿತ್ರಯಾನ ಪ್ರಾರಂಭಿಸಿದ ವರ್ಮ ತಮಿಳು ಹಿಂದಿ ಚಿತ್ರರಂಗದಲ್ಲಿ ತಮ್ಮ ಛಾಪು ಒತ್ತಿದ್ದು ಅದೂ ಅತೀ ಕಡಿಮೆ ಸಮಯದಲ್ಲಿ ದೊಡ್ಡ ಸಾಧನೆಯಲ್ಲದೇ ಮತ್ತೇನು..?
ಪುಸ್ತಕದಲ್ಲಿ ಅವರ ಚಿತ್ರರಂಗ ಪ್ರವೇಶದಿಂದ ಹಿಡಿದು ಅವರ ಹಿನ್ನೆಲೆ, ಹುಚ್ಚು ಸಾಹಸಗಳ ವಿವರ ಇದೆ.
ಅವರ ಶ್ರೇಷ್ಠವೆನಿಸುವ ಚಿತ್ರಗಳ ಹಿಂದಿನ ಕಥೆಯಿದೆ. ಹಾಗೆ ಅವರ ಜೊತೆ ಬೆಳೆದ, ಅವರ ಸಿನಿಮಾಗಳಲ್ಲಿ ಕೆಲಸ ಮಾಡಿದ ಬರಹಗಾರ, ನಿರ್ದೇಶಕ ಬಗೆಗಿನ ಆರೋಗ್ಯಕರವಾದ ಪ್ರಸ್ತಾಪ ಇದೆ. ಹಾಗೆಯೇ ಬೇರೆಯ ನಿರ್ದೇಶಕರ ಬಗ್ಗೆ ಅವರಿಗಿರುವ ಅಭಿಪ್ರಾಯವಿದೆ. ಹಾಗೆ ನಮಗೆ/ನಿಮಗೆ ಗೊತ್ತಿಲ್ಲದ ವರ್ಮಾರ ಕಿರುಪರಿಚಯವಿದೆ.
ಒಮ್ಮೆ ಓದಿ.
ಕೆಲವು ಸಿನಿಮಾಗಳು ನೋಡುತ್ತಾ ನೋಡುತ್ತಾ ಇಷ್ಟು ಬೇಗ ಮುಗಿದುಹೊಯಿತಾ ಎನಿಸುತ್ತದೆ. ಹಾಗೆಯೇ ನಾನು ಯಂಡಮೂರಿಯವರ ಕಾದಂಬರಿಗಳನ್ನು ಓದುವಾಗ ದಿನಕ್ಕಿಷ್ಟೇ ಎಂಬಂತೆ ಓದುತಿದ್ದೆ. ಅದಕ್ಕೆ ಕಾರಣ ಒಂದೇ ದಿನಕ್ಕೆ ಓದಿ ಮುಗಿಸಿಬಿಟ್ಟರೆ ಮತ್ತೆ ಓದಲು ಮುಂದೇನು ಎಂಬ ಭಯವಿತ್ತು...ವರ್ಮಾರ ಪುಸ್ತಕವೂ ಅಷ್ಟೇ. ಇಷ್ಟೇನಾ .?ಎನಿಸುತ್ತದೆ. ಕಾರಣ ವರ್ಮಾ ಅವರ ಚಿತ್ರಗಳಿಂದಾಗಿ ನಮಗೆ ಹೆಚ್ಚು ಕುತೂಹಲಕಾರಿಯಾಗಿದ್ದಾರೆ. ಅವರ ಪುಸ್ತಕ, ಜೀವನಚರಿತ್ರೆ ಎಂದಾಗ ನಮಗೆ ಹೆಚ್ಚು ನಿರೀಕ್ಷೆ ಇದ್ದುಬಿಟ್ಟಿರುತ್ತದೆ. ಆದರೆ ಪುಸ್ತಕದಲ್ಲಿ ಅಷ್ಟು ವಿಷಯವಿಲ್ಲ. ಎಲ್ಲವೂ ಸರಳಾತಿಸರಳ  ಎನಿಸಿ, ವರ್ಮಾ ತೀರಾ ಅವರ ಒಳಗುದಿಯನ್ನು ಬಿಚ್ಚಿಟ್ಟಿಲ್ಲ , ಸುಮ್ಮನೆ ಕೆಲವು ವಿಷಯಗಳನ್ನು ತೇಲಿಸಿಬಿಟ್ಟಿದ್ದಾರೇನೋ ಎನಿಸುವುದರಿಂದ “ನನ್ನಿಷ್ಟ” ಪುಸ್ತಕ ಓದಿ ಮುಗಿಸಿದ ಮೇಲೂ ನಮ್ಮ ನಿರೀಕ್ಷೆ ತಣಿಯುವುದಿಲ್ಲ.
ಕೊಸರು:ಮೊನ್ನೆ ಕಡ್ಡಿಪುಡಿ ಚಿತ್ರ ನೋಡುತ್ತಿದ್ದಾಗ ನನಗನ್ನಿಸಿದ್ದು. ಚಿತ್ರದಲ್ಲಿ ಮೂರು ಜನ ಹಿಂಸಾವಿನೋದಿಗಳು ಕುಡಿದು ಸಿಗರೇಟು ಸೇದುತ್ತಾ ಹುಡುಗಿಯೊಬ್ಬಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡುವ ದೃಶ್ಯವೊಂದಿದೆ. ಆಗ ಆ ದೃಶ್ಯ ನಡೆಯುತ್ತಿರುವಾಗ ಕೆಳಗೆ ಧೂಮಪಾನ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶ ಬರುತ್ತಲೇ ಇರುತ್ತದೆ. ಅಲ್ಲಿ ಅವರು ಚಿತ್ರದಲ್ಲಿ ಕೊಲೆಯನ್ನೂ ಮಾಡುತ್ತಿರುತ್ತಾರೆ, ಅತ್ಯಾಚಾರ ಮಾಡುತ್ತಿರುತ್ತಾರೆ. ಅಂದರೆ ಅತ್ಯಾಚಾರ ಮಾಡಬಹುದು, ಕೊಲೆ ಮಾಡಬಹುದು...ಧೂಮಪಾನ ಮದ್ಯಪಾನ ಮಾಡಬಾರದು ಎಂದರ್ಥವೆ ಎನಿಸಿ ನಗುಬಂದಿತು.

Monday, June 17, 2013

ಪುಸ್ತಕ ಬಿಡುಗಡೆಯ ಸಂತಸ....

“ನಾನು ಬೇಕಾದರೆ ಸಹಾಯ ಮಾಡುತ್ತೇನೆ ..ರವೀಂದ್ರ ಇನ್ನೊಂದು ಪುಸ್ತಕ ಬರೆಯಲಿ..ಕನ್ನಡದಲ್ಲಿ ನೋಡಲೇ ಬಾರದ ಚಿತ್ರಗಳು ಎಂದು..” ಎಂದವರು ನಿರ್ದೇಶಕ ಗುರುಪ್ರಸಾದ್.
“ಲೇಖಕರಿಗೆ 2000 ದಿಂದ 2009 ದವರಿಗೆ ಕೇವಲ ಮೂರ್ನಾಲ್ಕು ನೋಡಲೇಬೇಕಾದ ಚಿತ್ರಗಳು ಸಿಕ್ಕಿವೆ. ಇದು ಹೀಗೆ ಮುಂದುವರೆದರೆ ರವೀಂದ್ರ ನೋಡಿದ ಮೇಲೆ ಸಾಯಲೇ ಬೇಕಾದ ಚಿತ್ರಗಳು ಪುಸ್ತಕ ಬರೆಯಬೇಕಾಗುತ್ತೇನೋ ಎಂದವರು ಬರಹಗಾರ ಜೋಗಿ.
ಕಳೆದ ಶನಿವಾರ ಬೆಳಿಗ್ಗೆ ಹತ್ತೂಮೂವತ್ತಕ್ಕೆ ನಮ್ಮ ಪುಸ್ತಕ ಬಿಡುಗಡೆ ಸಮಾರಂಭವನ್ನು ಇಟ್ಟುಕೊಂಡಿದ್ದೆವು. ಅತಿಥಿಗಳಾಗಿ ನಿರ್ದೇಶಕರುಗಳಾದ ಟಿ.ಎಸ್.ನಾಗಾಭರಣ, ಗುರುಪ್ರಸಾದ್,ಉಮೇಶ್ ಕುಲಕರ್ಣಿ, ಬರಹಗಾರರಾದ ಜೋಗಿ, ಪತ್ರಕರ್ತರಾದ ಶ್ರೀಧರಮೂರ್ತಿ ಉಪಸ್ಥಿತರಿದ್ದರು. ಎಲ್ಲರೂ ಅರ್ಥಗರ್ಭಿತವಾಗಿ ಮಾತನಾಡಿದರು. ಅದರಲ್ಲೂ ನಿರ್ದೇಶಕ ಗುರುಪ್ರಸಾದ್ ಮಾತುಗಳು ತಮಾಷೆಯಾಗೂ ಇದ್ದವು. ಚಿಂತನಾಪ್ರೇರಕವಾಗಿಯೂ ಇದ್ದವು. ನಮ್ಮಲ್ಲಿ ಎರಡು ರೀತಿಯ ನಿರ್ದೇಶಕರಿದ್ದಾರೆ ರೇಶನ್ ನಿರ್ದೇಶಕರು ಮತ್ತು ಪ್ಯಾಶನ್ ನಿರ್ದೇಶಕರು ಎಂದು ಹೊಸ ವಿಂಗಡನೆಯೊಂದನ್ನು ಹೇಳಿದರು. ಕೈಗೆ ಸಿಕ್ಕಿದನ್ನು ಸುಮ್ಮನೆ ಹಣಕ್ಕಾಗಿ ಸಿನಿಮಾ ಮಾಡುವವರು ಮೊದಲನೇ ವಿಭಾಗಕ್ಕೆ ಸೇರುತ್ತಾರೆ, ಅಂತಹ ನಿರ್ದೇಶಕರ ಸಂಖ್ಯೆ ಕನ್ನಡದಲ್ಲಿ ಜಾಸ್ತಿ ಎಂಬ ಅಭಿಪ್ರಾಯ ಅವರದು.
ನಾಗಾಭರಣ ಪುಸ್ತಕದ ಬಗ್ಗೆ ಮಾತನಾಡಿ ಪ್ರೋತ್ಸಾಹಿಸಿದರು. ಶ್ರೀಧರಮೂರ್ತಿಯವರ ಮಾತುಗಳು ಸಿನಿಮಾದೊಳಗಿನ ಹೊಸಪ್ರಪಂಚವನ್ನು ತೆರೆದಿಟ್ಟಿತು ಎನ್ನಬಹುದು. ಚಿತ್ರಕ್ಕೆ ಅದರಲ್ಲಿನ ದೃಶ್ಯಕ್ಕೆ ಹಿನ್ನೆಲೆ ಸಂಗೀತ ಭಾವ ತುಂಬುವುದರಲ್ಲಿ ಮೊದಲ ಪಾತ್ರವಹಿಸುತ್ತದೆ. ಅದನ್ನು ಅವರು ಜಿ.ಕೆ.ವೆಂಕಟೇಶ್ ರವರ ಹಿನ್ನೆಲೆ ಸಂಗೀತವನ್ನು ಕಸ್ತೂರಿ ನಿವಾಸದ ಸಿನಿಮಾದ ಉದಾಹರಣೆ  ಮೂಲಕ ವಿವರಿಸಿದರು. ಅದರಲ್ಲಿ ಹಿನ್ನೆಲೆ ಸಂಗೀತ ಸಂಯೋಜಿಸುವಾಗ ಅದಕ್ಕೊಪ್ಪುವ ಭಾವಕ್ಕೆ ತಕ್ಕಂತಹ ರಾಗಗಳನ್ನು ಬಳಸಿದ್ದನ್ನು ಹೇಳಿದರು.ಶಾಸ್ತ್ರೀಯ ಸಂಗೀತದ ರಾಗಗಳ ಬಗ್ಗೆ ನನಗೆ ಅಲ್ಪ ಜ್ಞಾನವೂ ಇಲ್ಲದಿರುವುದು ಸಿನಿಮಾದಲ್ಲಿನ ಒಂದು ಆಯಾಮವೇ ನನಗೆ ಗೊತ್ತಿಲ್ಲ ಎನ್ನುವ ಸತ್ಯ ತಿಳಿಯಿತು.ಒಟ್ಟಿನಲ್ಲಿ ಇಡೀ ಕಾರ್ಯಕ್ರಮ ಚೆನ್ನಾಗಿತ್ತು.1934 ರಿಂದ 2009 ರವರೆಗೆ ಸರಿಸುಮಾರು 2844 ಚಿತ್ರಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ನಾನು ಹೆಚ್ಚು ಕಡಿಮೆ 2800 ಕ್ಕಿಂತಲೂ ಹೆಚ್ಚು ಸಿನೆಮಾ ನೋಡಿದ್ದೇನೆ. ನನಗೆ ಗೊತ್ತಿರುವಂತೆ ಒಂದಷ್ಟು ವಯಸ್ಕರ ಚಿತ್ರಗಳನ್ನು ಮತ್ತು ಪುಸ್ತಕದಲ್ಲಿನ ಮೊದಲ ಮೂರು ಚಿತ್ರಗಳನ್ನು ಬಿಟ್ಟರೆ ಎಲ್ಲವನ್ನೂ ನೋಡಿದ್ದೇನೆ. ಪುಸ್ತಕ ಬರೆಯಲು ಪ್ರಕಾಶಕರು ಹೇಳಿದಾಗಲೇ ನಾನು ಸುಮಾರಷ್ಟು ಸಿನಿಮಾ ನೋಡಿದ್ದರಿಂದ ಒಂದೆ ತಿಂಗಳಲ್ಲಿ ಬರೆದುಬಿಡುತ್ತೇನೆ ಎಂದುಕೊಂಡೆ ಪ್ರಾರಂಭಿಸಿದ್ದೆ. ಆದರೆ ಬರೆಯುತ್ತಾ ಬರೆಯುತ್ತಾ ಸಿನಿಮಾ ನೋಡುತ್ತಾ ಒಂಬತ್ತು ತಿಂಗಳುಗಳೇ ಕಳೆದುಹೋಗಿದ್ದವು. ನೋಡಿರದ ಸಿನಿಮಾಗಳನ್ನು ದಿನಕ್ಕೆ ಐದರಂತೆ ನೋಡಿದಾಗಲೂ ಸಮಯ ವ್ಯರ್ಥವಾಗುತ್ತಿದೆಯೇನೋ ಎನಿಸುತ್ತಿತ್ತು. ನೋಡಿ ನೋಡಿ ಕಣ್ಣು ತಲೆ ಮಿದುಳು ಬಿಸಿಯಾಗುತ್ತಿತ್ತು. ನೋಡಿಯೆಲ್ಲಾ ಆದ`ಮೇಲೆ ಬರೆಯಲು ಕುಳಿತರೆ ಒಂದು ಅಕ್ಷರವೂ ಕೈಗೆ ಬರುತ್ತಿರಲಿಲ್ಲ. ಸಿನಿಮಾ ನೋಡಲೇಬೇಕಾದ ವಿಭಾಗಕ್ಕೆ ಅರ್ಹ ಎನಿಸಿದರೂ ಅದರಲ್ಲಿನ ವಿಶೇಷತೆಗಾಗಿ ಹುಡುಕಾಟ ಶುರುವಾಗುತ್ತಿತ್ತು...ಆಗಾಗ ಪ್ರಕಾಶಕ ಕೃಷ್ಣ ಕರೆಮಾಡಿ, “ಗುರು..ಒಬ್ಬ ದೊಡ್ಡ ಸಾಹಿತಿ ಕೈಲಿ ಪುಸ್ತಕ ಬರೆಸಬಹುದು...ನಿನ್ನ ಕೈಲಿ ಬರೆಸೋದು ಕಷ್ಟ ಗುರು..” ಎಂದೆಲಾ ಮೂದಲಿಸುತ್ತಿದ್ದರೂ ಕೆಲಸ ಮಾತ್ರ ಮಾಡಿದಷ್ಟೂ ಉಳಿಯುತ್ತಿತ್ತು. ಕೊನೆಗೆ ಅಂತೂ ಇಂತೂ ಪುಸ್ತಕ ಮುಗಿದಾಗ ಒಂದು ದೊಡ್ಡ ಬೆಟ್ಟವೇ ತಲೆಯಿಂದ ಕೆಳಗಿರಿಸಿದಂತಹ ಅನುಭವವಾಗಿದ್ದಂತೂ ಸತ್ಯ.
ಪುಸ್ತಕ ಮುಗಿದಾಯ್ತು..ಬಿಡುಗಡೆ ಮಾಡಿಬಿಡೋಣ..ಚಿಕ್ಕದೊಂದು ಸಮಾರಂಭ ಮಾಡೋಣ ಎನಿಸಿ ಅದಕ್ಕಾಗಿ ಯೋಜಿಸಿ ಕಾರ್ಯರೂಪಕ್ಕೆ ತರುವಲ್ಲಿ ಮೂರು ತಿಂಗಳುಗಳೇ ಕಳೆದುಹೋದವು. ಈಗ ಬಿಡುಗಡೆಯಾಗಿದೆ. ಒಮ್ಮೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ಕೊಸರು:ನಾನು ನಮ್ಮ ಕಾರ್ಯಕ್ರಮಕ್ಕಾಗಿ ಹಿರಿಯರನ್ನು ಆಹ್ವಾನಿಸಲು ಗಿರೀಶ್ ಕಾಸರವಳ್ಳಿ ಯವರನ್ನು ಕರೆದಾಗ ಅವರು ಮೊದಲೇ ತೀರ್ಥಹಳ್ಳಿಯ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದರು. ನನ್ನ ಮೊದಲ ಕಿರುಚಿತ್ರದ ಪ್ರದರ್ಶನದ ಮುಖ್ಯ ಅತಿಥಿಯಾಗಿದ್ದು ಕಾಸರವಳ್ಳಿಯವರು. ಆನಂತರ ರಮೇಶ್ ಅರವಿಂದ್, ನಾಗತಿಹಳ್ಳಿ ಚಂದ್ರಶೇಖರ್ ಕರೆದಾಗ ಅವರೂ ಬೇರೆ ಬೇರೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರು. ಅದರಲ್ಲೂ ನಾಗತಿಹಳ್ಳಿ ಚಂದ್ರಶೇಖರ್ ನನಗೆ ಫೋನಿನಲ್ಲೇ ಹಾರೈಸಿದರಲ್ಲದೆ ನನ್ನ “ರವೀಂದ್ರ ಟಾಕೀಸ್” ಬ್ಲಾಗ್ ಬಗ್ಗೆ ಮಾತನಾಡಿದರು. ನಾನದನ್ನು ಓದುತ್ತಲೇ ಇರುತ್ತೇನೆ..ಸಿನಿಮಾ ಕುರಿತಾದ ಒಳ್ಳೊಳ್ಳೆ ಮಾಹಿತಿಗಳಿರುವ ಅತ್ಯುತ್ತಮ ಬ್ಲಾಗ್ ಎಂದರು..ನನಗೆ ಆಕಾಶದಲ್ಲಿ ಹಾರಾಡಿದ ಅನುಭವವಾಯಿತು.
[ನನ್ನ ಅಂತರ್ಜಾಲ ತೊಂದರೆಯಿಂದಾಗಿ ನಾನು ಒಂದು ತಿಂಗಳು ಅಜ್ಞಾತವಾಸ ಅನುಭವಿಸಬೇಕಾಯಿತು]