Saturday, April 8, 2017

ಕಾಟ್ರು ವೆಲಿಯಾಡು:

ಸುಮ್ಮನೆ ಯಾರನ್ನಾದರೂ ಮಣಿರತ್ನಂ ಅವರ ಚಿತ್ರ ಚೆನ್ನಾಗಿದೆಯಾ..?
ಎಂದು ಕೇಳಿ. ಒಂದೇ ಶಬ್ಧದಲ್ಲಿ ಉತ್ತರ ಬರುವುದೇ ಇಲ್ಲ. ಬದಲಿಗೆ ಫೋಟೋಗ್ರಫಿ,ಹಾಡುಗಳು.. ಅದೂ ಇದೂ ಎಂದು ಮಾತು ಮುಂದುವರೆಯುತ್ತದೆ. ಅದೆಲ್ಲ ಇರಲಿ ಗುರು ಸಿನಿಮಾ ಹೇಗಿದೆ..?
ಸ್ವಲ್ಪ ಓಕೆ.....ಎನ್ನಲು ಸಿನಿರಸಿಕ ತಡಕಾಡುತ್ತಾನೆ.
ಮಣಿರತ್ನಂ..ಸಿನಿಮಾಗಳು ಲಯ ಕಳೆದುಕೊಂಡು ದಶಕಗಳಾಗಿವೆ. ಆದರೆ ಮಣಿರತ್ನಂ ಬಗೆಗೆ ಅಷ್ಟು ಸುಲಭವಾಗಿ ಕೇವಲವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಭಟ್ಟರನ್ನು ಸಾರಾಸಗಟಾಗಿ ಆಡಿಕೊಂಡಂತೆ, ರಾಮಗೋಪಾಲ್ ವರ್ಮರನ್ನು ನಿವಾಳಿಸಿ ಎಸೆದಂತೆ ಮಣಿರತ್ನಂನನ್ನು ಅವರ ಚಿತ್ರಗಳನ್ನು ಸಿನಿಕರ್ಮಿಗಳು ಎಸೆಯುವುದಿಲ್ಲ. ಅದಕ್ಕೆ ಕಾರಣಗಳೇನು..? ರೋಜಾ ನಂತರ ಮಣಿರತ್ನಂ ಚಿತ್ರಗಳನ್ನು ತೆಗೆದುಕೊಳ್ಳಿ. ಹಾಗೆಯೇ ರೋಜಾ ಚಿತ್ರದ ಹಿಂದಿನ ಚಿತ್ರಗಳನ್ನೂ ತುಲನೆ ಮಾಡಿ. ಮಣಿರತ್ನಂ ಒಬ್ಬ ಪ್ರಾಮಾಣಿಕ ವಸ್ತು ನಿಷ್ಠ ನಿಖರತೆಯ ನಿರ್ದೇಶಕ. ಪ್ರತಿದೃಶ್ಯದ ಶೃಂಗಾರ, ಅದಕ್ಕೊಪ್ಪುವ ತಾಂತ್ರಿಕ ಅಂಶದ ಜೊತೆಗೆ ಕಲಾವಿದರ ಕಟ್ಟುನಿಟ್ಟಾದ ಅಭಿನಯವನ್ನು ತುಂಬದೆ ದೃಶ್ಯವನ್ನು ಫೈನಲ್ ಮಾಡುವುದಿಲ್ಲ. ಮಳೆ ಇಲ್ಲ ಎಂದರೆ ಮಳೆಗಾಗಿ ವರ್ಷಗಟ್ಟಲೆ ಕಾಯುವ, ಸಿನಿಮಾ ನೋಡಿದ ನಂತರ ಇಷ್ಟವಾಗದಿದ್ದರೆ ಮುಲಾಜಿಲ್ಲದೆ ಕತ್ತರಿಸಿ, ಪುನರ್ಚಿತ್ರಿಸುವ ಛಾತಿ ಅವರದ್ದು.
ಕನ್ನಡ, ಮಲಯಾಳಂ, ತಮಿಳು ಭಾಷೆಗಳಲ್ಲಿ ತಲಾ ಒಂದೊಂದು ಚಿತ್ರ ನಿರ್ದೇಶಿಸಿದ ಮಣಿರತ್ನಂ ಮೂರು ಚಿತ್ರಗಳಲ್ಲಿ ಸೋಲನ್ನುಂಡವರು. ಆದರೆ ಅವರ ಬೆನ್ನಲ್ಲೇ ನಿರ್ಮಾಪಕ ಸಂಬಂಧಿಗಳಿದ್ದರು, ಸ್ವತಃ ತಾವೇ ನಿರ್ಮಾಪಕರು ಆದ್ದರಿಂದ ಅವರ ಚಿತ್ರಯಾತ್ರೆಗೆ ಧಕ್ಕೆ ಬರಲಿಲ್ಲ.ಆನಂತರ ಇದಯ ಕೊವಿಲ್ ಚಿತ್ರದ ಮೂಲಕ ಯಶಸ್ಸು ಕಂಡ ಮಣಿರತ್ನಂ ಸತತ ಹಿಟ್ ಚಿತ್ರಗಳನ್ನು ಕೊಟ್ಟು ಜೊತೆಗೆ ಪ್ರಶಸ್ತಿಗಳನ್ನು ಬಾಚಿ ಕೊಂಡವರು. ಆನಂತರ ಮತ್ತೆ ಅವರ ಗ್ರಾಫ್ ಇಳಿಮುಖವಾದರೂ ದಳಪತಿ ಕಮರ್ಷಿಯಲ್ ಗಾದಿಗೆ ಅವರನ್ನು ತಂದು ನಿಲ್ಲಿಸಿದರೆ, ರೋಜಾ ಅವರನ್ನು ಉತ್ತುಂಗಕ್ಕೆ ಏರಿಸಿದ ಚಿತ್ರ. ಆನಂತರ ಮಣಿರತ್ನಂ ತಿರುಗಿನೋಡಿದ್ದು ಕಡಿಮೆಯೇ. ಅವರ ಅಂದುಕೊಂಡದ್ದನ್ನು, ಅವರಿಗೆ ಇಷ್ಟ ಆದದ್ದನ್ನು ಮಾಡುತ್ತಲೇ ಹೋದರು, ಆದರೆ ಆನಂತರ ಹೆಚ್ಚು ಹೆಚ್ಚು ತಮ್ಮ ಹೆಸರಿಗೆ, ಅದಕ್ಕಿರುವ ಪ್ರಸಿದ್ಧಿಗೆ ಬೆಲೆ ಕೊಟ್ಟ ಮಣಿರತ್ನಂ ಸಿನಿಮಾ ಕಸುಬುದಾರಿಕೆ, ಕುಸುರಿಗೆ ಒತ್ತುಕೊಟ್ಟರು. ಅಷ್ಟರಲ್ಲಾಗಲೇ ಮಣಿರತ್ನಂ ಸಿನಿಮಾ ಎಂದರೆ ಅದು ಬೇರೆ ಏನೋ ಎನ್ನುವ ಹೆಸರು ಗಳಿಸಿದ್ದರಿಂದ ಸಿನಿಮಾ ಸೋತರೂ ಬಂಡವಾಳಕ್ಕೆ ಮೋಸವಿಲ್ಲ ಎನ್ನುವಂತಾಗಿತ್ತು. ಇತ್ತೀಚಿಗೆ ಕಡಲ್ ಎನ್ನುವ ಚಿತ್ರ ಮಾಡಿದ್ದರು. ಅರ್ಧಘಂಟೆ ಆಕಳಿಸದೆ ಸಿನಿಮಾ ನೋಡಲು ಸಾಧ್ಯವೇ...?
ಸಧ್ಯಕ್ಕೆ ಕಾಟ್ರು ವಲಿಯಾಡು. ಮಣಿರತ್ನಂ ಸ್ಪಷ್ಟವಾಗಿದ್ದಾರೆ. ಆದರೆ ನೋಡುತ್ತ ನೋಡುತ್ತಾ ಪಾತ್ರಗಳು ಒಳಕ್ಕಿಳಿಯುವುದು ಕಷ್ಟವೇ..? ಪ್ರತಿಸಾರಿಯೂ ಇದು ಮಣಿರತ್ನಂ ಚಿತ್ರ ಎಂದುಕೊಂಡೋ ಏನೋ ಒಂದು ಇರುತ್ತದೆ ಎಂದುಕೊಂಡೋ ಸಿನಿಮಾ ನೋಡುವ ಸಿನಿಕರ್ಮಿಗೂ, ಮನರಂಜನೆಗಾಗಿ ಸಿನಿಮಾ ನೋಡುವ ಸಿನಿರಸಿಕನಿಗೂ ವ್ಯತ್ಯಾಸ ಇದ್ದೇ ಇರುತ್ತದೆ. ಹಾಗಾಗಿ ಕಾಟ್ರು ನೋಡುತ್ತಾ ನೋಡುತ್ತಾ ಹಿಂಸೆಯಾಗಿಬಿಡುತ್ತದೆ. ದೇಶಗಳ ಸಂಘರ್ಷದಿಂದ ಪ್ರಾರಂಭವಾಗುವ ಚಿತ್ರ ಎರಡು ಹೃದಯಗಳ ಸಂಘರ್ಷಕ್ಕೆ ತೆರೆದುಕೊಳ್ಳುತ್ತದೆ. ಆದರೆ ದೃಶ್ಯಗಳು, ನಿರೂಪಣಾ ತಂತ್ರ ಖುಷಿ, ಮುದ ಎರಡೂ ನೀಡದೆ ಆಕಳಿಕೆ ತರಿಸುತ್ತದೆ. ಕೊನೆ ಕೊನೆಗೆ ಸಿನಿಮಾ ಮುಗಿಯುವುದು ಯಾವಾಗ ಎನಿಸಿಬಿಡುತ್ತದೆ.

ಅನಿಸಿದ್ದನೆಲ್ಲಾ ಹಿಂದೆ ಮುಂದೆ ನೋಡದೆ ಯೋಚನೆ ಮಾಡದೆ ಅಧ್ಯಯನ ಮಾಡದೆ ಸಿನಿಮಾ ಮಾಡಿ ಮೂಲೆಗುಂಪಾದದ್ದು ರಾಮ್ ಗೋಪಾಲ್ ವರ್ಮ. ಇಮೇಜ್ ಗೆ ಕಟ್ಟು ಬೀಳದೆ ಸಿನಿಮಾ ಮಾಡಿದ್ದು, ಅದರಲ್ಲಿ ಇಮೇಜ್ ಪಡೆದುಕೊಂಡದ್ದು, ಇಡೀ ಬಾಲಿವುಡ್ ಒಂದು ದಿಕ್ಕಾದರೆ ವರ್ಮರದ್ದೆ ಮತ್ತೊಂದು ಬಾಲಿವುಡ್ ಎನ್ನುವಂತಾದದ್ದು ಅವರ ವಿಶೇಷ. ಆದರೆ ಅವರ ಆ ಕಾರ್ಯವೇ ಕೊನೆ ಕೊನೆಗೆ ಅವರ ಬಾಲಿವುಡ್ ಬಿಟ್ಟು ತೆಲುಗಿಗೆ ಅಲ್ಲಿಗೆ ಇಲ್ಲಿಗೆ ನೆಲೆಯಿಲ್ಲದಂತೆ ಓಡಾಡಿದ್ದಾಯಿತು. ಆದರೆ ಮಣಿರತ್ನಂ ಘನತೆ ಗಾಂಭೀರ್ಯ ಕಾಯ್ದುಕೊಂಡವರು. ಆದರೆ ಅವರು ಸಾಮಾನ್ಯ ಪ್ರೇಕ್ಷಕರನ್ನು ಗಣನೆಗೆ ತೆಗೆದುಕೊಳ್ಳದೆ, ಅಂತರರಾಷ್ಟ್ರೀಯ ವೀಕ್ಷಕರನ್ನು, ಪ್ರೌಢವೀಕ್ಷಕರನ್ನು ಜ್ಯೂರಿಗಳನ್ನಷ್ಟೇ ತಲೆಯಲ್ಲಿಟ್ಟುಕೊಂಡು ಸಿನಿಮಾ ಮಾಡುತ್ತಾರೆನೋ ಎನಿಸಿಬಿಡುತ್ತದೆ. ಅದಕ್ಕೆ ಉದಾಹರಣೆಯಾಗಿ ಕಡಲ್, ಓಕೆ ಕಣ್ಮಣಿ, ಕಾಟ್ರು ವೆಲಿಯಾಡು, ರಾವಣ್ ಇಂಬು ಒದಗಿಸುತ್ತವೆ.

Sunday, February 5, 2017

ಪ್ರತಿಭಾನ್ವಿತರನ್ನು ಸೃಷ್ಟಿಸಿ...ಟಿಆರ್ ಪಿಯನ್ನಲ್ಲ...

ಕಿರುತೆರೆ ವಾಹಿನಿಯಲ್ಲಿ ವಾರಕ್ಕೊಂದು ಹೊಸ ಹೊಸ ಧಾರಾವಾಹಿಗಳು ಶುರುವಾಗುತ್ತಿವೆ. ಅವುಗಳ ಚಿತ್ರೀಕರಣ ಮತ್ತು ನಿರ್ಮಾಣ ಶೈಲಿಗಳನ್ನು ಕಂಡಾಗ ನಮಗೆ ಅಂದರೆ ಸಿನೆಮಾಜನಕ್ಕೆ ಹೊಟ್ಟೆಕಿಚ್ಚು ಬರುವಂತಿದೆ. ಅಂತಹ ಅದ್ದೂರಿತನ ಶ್ರೀಮಂತಿಕೆ ಕಂಡು ಬರುತ್ತಿವೆ. ಆದರೆ ಸುಮ್ಮನೆ ಅವುಗಳ ಜನಪ್ರಿಯತೆಯ ಅಂಕಗಳನ್ನು ತೆರೆದುನೋಡಿದರೆ ಹಳೆಯ ಧಾರಾವಾಹಿಗಳು ಬಿಟ್ಟರೆ ಹೊಸವುಗಳು ಯಾವುದೂ ಪಟ್ಟಿಯಲ್ಲಿಲ್ಲ. ಈವತ್ತು ಶುರುವಾಗುವ ವಾಹಿನಿಯ ಧಾರಾವಾಹಿಗಳ ಪೋಸ್ಟರ್ ಗಳು ಸಿನೆಮಾಕ್ಕಿಂತಲೂ ಹೆಚ್ಚಾಗಿ ಗೋಡೆಗಳ ಮೇಲೆ ರಾರಾಜಿಸುತ್ತವೆ.ಅವುಗಳ ದೊಡ್ಡ ದೊಡ್ಡ ಹೋರ್ಡಿಂಗ್ಸ್  ಗಳು ಬಣ್ಣಬಣ್ಣವಾಗಿ ಇಡೀ ಬೆಂಗಳೂರು ಸುತ್ತಾಮುತ್ತಾ ಕಣ್ಣು ಕೊರೈಸುತ್ತವೆ.ಪ್ರಾರಂಭದ ಕಂತುಗಳನ್ನು ಕರ್ನಾಟಕದ ಆಚೆಯೂ, ಅಥವಾ ಅದ್ದೂರಿಯಾದ ಸೆಟ್ ನಲ್ಲಿ, ಭಾರೀ ಭರ್ಜರಿಯಾಗಿ ಚಿತ್ರೀಕರಿಸಲಾಗುತ್ತದೆ. ಪ್ರಸಾರದ ಮುನ್ನ ದಿನದಿಂದಲೇ ಕ್ಷಣಗಣನೆ ಶುರು ಮಾಡುತ್ತಾರೆ ವಾಹಿನಿಯವರು. ಜೊತೆಗೆ ಬೇರೆ ಬೇರೆ ವಾಹಿನಿಗಳಲ್ಲಿ ಲಕ್ಷಾಂತರ ಖರ್ಚು ಮಾಡಿ ಜಾಹಿರಾತು ನೀಡುತ್ತಾರೆ, ದಿನಪತ್ರಿಕೆಗಳಲ್ಲಿ ಚಿತ್ರದ ಪ್ರಚಾರ ಚಿತ್ರ ಅರ್ಧ ಪುಟದವರೆಗೆ ಮೆರವಣಿಗೆಯಾಗುತ್ತದೆ. ಮತ್ತೂ ಇಷ್ಟೆಲ್ಲಾ ಅದ್ದೂರಿತನದೊಂದಿಗೆ ಧಾರಾವಾಹಿಯ ಮೊದಲ ಕಂತು ಪ್ರಸಾರವಾಗುತ್ತದೆ. ಆ ವಾರ ಬಿಡಿ, ಒಂದೇ ತಿಂಗಳಿನಲ್ಲಿ ಧಾರಾವಾಹಿ ತನ್ನ ಮಾನದಂಡ ಕಳೆದುಕೊಳ್ಳುತ್ತದೆ. ನೂರು ಕಂತು ಮೀರುವಷ್ಟರಲ್ಲಿ ವೈಂಡ್ ಅಪ್ ಎನ್ನುತ್ತದೆ ವಾಹಿನಿ. ಮತ್ತೊಂದು ಹೊಸ ಧಾರಾವಾಹಿ ಇಷ್ಟರಲ್ಲೇ, ಹೊಸ ಕತೆಯೊಂದಿಗೆ ಎನ್ನುವ ಜಾಹಿರಾತು ಶುರುವಾಗಿರುತ್ತದೆ.
ಯಾಕೆ ಹೀಗೆ..?
ಈವತ್ತು ಯಾವುದೇ ವಾಹಿನಿಯಲ್ಲಿ ಅಥವಾ ಕನ್ನಡದ ಮುಖ್ಯ ವಾಹಿನಿಗಳಲ್ಲಿ ಬರುತ್ತಿರುವ ಧಾರಾವಾಹಿಗಳಲ್ಲಿ ನಂಬರ್ 1 ಸ್ಥಾನದಲ್ಲಿರುವ ಧಾರಾವಾಹಿಗಳು ಹಳೆಯವೇ. ಹಾಗಾದರೆ ಹೊಸ ಧಾರಾವಾಹಿಗಳು ಎಲ್ಲಿ ಹೋದವು..?
ಇನ್ನೊಂದು ಪ್ರಶ್ನೆ ಕೇಳಿಕೊಳ್ಳೋಣ..ಈವತ್ತಿನ ಅಷ್ಟೂ ಧಾರಾವಾಹಿಯನ್ನು ತೆಗೆದುಕೊಳ್ಳಿ. ನಿರ್ದೇಶಕ ಯಾರು ಎಂಬೊಂದು ಪ್ರಶ್ನೆಗೆ ನಿಮಗೆ ಉತ್ತರ ಸುಲಭವಾಗಿ ಸಿಗುವುದಿಲ್ಲ. ಬದಲಿಗೆ ಹುಡುಕಾಡಬೇಕಾಗುತ್ತದೆ. ಮೊದಲೆಲ್ಲಾ ಮಾಯಾಮೃಗ, ಮುಕ್ತಾ, ಸಿಲ್ಲಿ ಲಲ್ಲಿ, ಪಾಪಪಾಂಡು, ಅದಕ್ಕೂ ಹಿಂದಿನ ವಠಾರ, ಸಂಕ್ರಾಂತಿ, ಮನೆತನ, ಸಾಧನೆ ...ಸಿಹಿಕಹಿ, ಕಂಡಕ್ಟರ್ ಕರಿಯಪ್ಪ, ಎತ್ತಂಗಡಿ ವೆಂಕಟಪ್ಪ, ಕ್ರೇಜಿ ಕೆರ್ನಲ್, ಹೊಸ ಹೆಜ್ಜೆ, ..ಹೀಗೆ ಧಾರಾವಾಹಿಗಳ ಹೆಸರುಗಳನ್ನೂ ಹೇಳುತ್ತಾ ಹೋದಂತೆ ಅದರ ಕರ್ತೃ ಕಣ್ಮುಂದೆ ಬಂದು ನಿಲ್ಲುತ್ತಾರೆ. ಆ ಹೆಸರಿನಿಂದಲೇ ಆ ಧಾರಾವಾಹಿಗಳಿಗೊಂದು ಕಳೆ-ಬೆಲೆ ಇದ್ದದ್ದು ಸುಳ್ಳಲ್ಲ. ಹಾಗಾಗಿಯೇ ಟಿ.ಏನ್.ಸೀತಾರಾಂ ಅವರ ಹೊಸ ಧಾರಾವಾಹಿ ಎಂದಾಕ್ಷಣ ಗಟ್ಟಿ ಕತೆಯ ಅದಕ್ಕೂ ಮೀರಿದ ಸಂಭಾಷಣೆ ಕಣ್ಮುಂದೆ ಸರಿಯುತ್ತಿತ್ತು, ಹಾಗೆಯೇ ಸಿಹಿಕಹಿ ಚಂದ್ರು ಎಂದಾಕ್ಷಣ ನಗು ಮೂಡುತ್ತಿತ್ತು. ಬಿ.ಸುರೇಶ, ರವಿಕಿರಣ್, ರಮೇಶ್ ಭಟ್, ರವಿಗರಣಿ,.. ಹೀಗೆ ಹೇಳುತ್ತಾ ಹೋದರೆ ಅವರ ಪ್ರತಿಭೆ ಕಣ್ಮುಂದೆ ಸಾದರ ಪಡಿಸುವ ವಾಹಿನಿಯ ಧಾರಾವಾಹಿಗಳು ಕಣ್ಣಲ್ಲಿ ಸುಳಿದು ರೋಮಾಂಚನ ಉಂಟು ಮಾಡುತ್ತಿದ್ದದ್ದು ಸಹಜ. ಆದರೆ ಈವತ್ತಿಗೆ ಸಧ್ಯಕ್ಕೆ ಅದೆಲ್ಲೂ ಕಂಡುಬರುತ್ತಿಲ್ಲ.
ಬಹುಶಃ ವಾಹಿನಿಯವರೇ ಕತೆಯಿಂದ ಹಿಡಿದು ಎಲ್ಲವನ್ನು ತಮ್ಮ ಕಣ್ಣಳತೆಯಲ್ಲಿಯೇ ಮಾಡಿ ಮುಗಿಸುವುದರಿಂದ ನಿರ್ದೇಶಕ ಬರೀ ನಿರ್ವಾಹಕನಾಗಿರುವುದು ಬೇಸರದ ಸಂಗತಿ. ಇದು ಸುಮ್ಮನೆ ಆಡಿದ ಮಾತಲ್ಲ. ನೀವೇ ಯಾವುದೇ ವಾಹಿನಿಗೆ ಕತೆಯೊಂದನ್ನೋ ಅಥವಾ ಹೊಸ ಐಡಿಯಾ ಒಂದನ್ನೂ ಹಿಡಿದುಹೋಗಿ, ಎಲ್ಲವನ್ನು ಕೇಳಿಕೊಳ್ಳುವ ಅವರು ಕೊನೆಯಲ್ಲಿ ಹೇಳುವ ಮಾತೊಂದೇ, ಇದಕ್ಕೂ ವಿಭಿನ್ನವಾದ ಹೊಸತನದ ಕತೆ ನಿಮ್ಮಲ್ಲಿದೆಯೇ..? ಆದರೆ ಇಲ್ಲ ಎಂದು ತಲೆಯಲ್ಲಾಡಿಸಿ ಎದ್ದು ಬಂದು ಟಿವಿ ಆನ್ ಮಾಡಿದರೆ ನಿಮಗೆ ಸಿಗುವುದೇ ಅದೇ ರಿಮೇಕ್ ಅಥವಾ ಹಳಸಲು ಸರಕು. ಹಾಗಾಗಿ ನಿರ್ದೇಶಕ ಕೈಗೊಂಬೆಯಾಗಿ ಬಿಡುವ ಅನಿವಾರ್ಯತೆ ಎದುರಾಗುತ್ತದೆ. ಕತೆಯ ಆಯ್ಕೆ, ಚಿತ್ರಕತೆಯ ರಚನೆಯಿಂದ ಹಿಡಿದು ಕಲಾವಿದರ ಆಯ್ಕೆಯವರೆಗೂ ನಿರ್ದೇಶಕ ದೃಷ್ಟಿ ಬೊಂಬೆ ಎನಿಸಿಬಿಡುತ್ತಾನೆ. ಅದೆಲ್ಲವನ್ನೂ ವಾಹಿನಿಯವರೇ ಮುಂದೆ ನಿಂತು ಮಾಡಿಮುಗಿಸುತ್ತಾರೆ. ಅಲ್ಲಿಗೆ ನಿರ್ದೇಶನ ಎನ್ನುವ ಕೆಲಸ ನಿರ್ವಹಣೆಗಷ್ಟೇ ಸೀಮಿತವಾಗಿಬಿಡುತ್ತದೆ. ಒಬ್ಬ ಸೃಜನಶೀಲ ನಿರ್ದೇಶಕ ಹಿಂತಹ ಸಂದರ್ಭದಲ್ಲಿ ಅನಿವಾರ್ಯಕಾರಣಗಳಿಂದ ಕೆಲಸ ಒಪ್ಪಿಕೊಂಡರೂ ತದನಂತರ ಆತನಿಗೆ ಐಡೆಂಟಿಟಿ ಇಲ್ಲ ಎನಿಸಿದಾಗ ಮುಂದುವರೆಯಲು ಇಷ್ಟಪಡುವುದಿಲ್ಲ. ಅಥವಾ ಅದೊಂದು ಕೆಲಸ ಯಾಂತ್ರಿಕವಾಗಿ ಸಾಗಿಬಿಡುತ್ತದೆ. ನಿರ್ದೇಶನ ಎಂಬುದು ಯಾಂತ್ರಿಕ ಕೆಲಸವಲ್ಲ, ಅದೊಂದು ಸೃಜನಶೀಲ ನಿರ್ವಹಣೆ. ಕತೆಯ ಮೂಲದಿಂದ, ಸಂಭಾಷಣೆ ಸತ್ವದಿಂದ ಕಲಾವಿದನ ಪ್ರತಿಭೆಯಿಂದ ಸಂಕಲನಕಾರನ ಕೈಚಳಕದಿಂದ, ಹಿನ್ನೆಲೆ ಸಂಗೀತದ ಮೆರಗಿನವರೆಗೆ ನಿರ್ದೇಶಕ ಖುದ್ದಾಗಿ ನಿಂತು ಮಾಡಿಸಬೇಕಾದ, ಅದಕ್ಕೂ ಮುನ್ನ ಅದನ್ನು ಕಲ್ಪಿಸಿಕೊಳ್ಳಬೇಕಾದ ಕೆಲಸವದು.
ವಾಹಿನಿ ಎಂದಮೇಲೆ ಸ್ಪರ್ಧೆ ಅನಿವಾರ್ಯ. ಒಂದು ಧಾರಾವಾಹಿ ಒಂದು ವಾಹಿನಿಯಲ್ಲಿ ಎರ್ರಾಬಿರ್ರಿ ಹಿಟ್ ಆಗಿಬಿಟ್ಟರೆ ಮತ್ತೊಂದು ವಾಹಿನಿ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳುವುದು ಈವತ್ತಿನ ಮಾತಲ್ಲ. ಆದರೆ ಮೊದಲೆಲ್ಲಾ ಅದೇ ಸಮಯಕ್ಕೆ ಮತ್ತೊಂದು ಹೊಸ ಕತೆಯನ್ನು ಬೇರೊಂದು ವಾಹಿನಿ ಪ್ರಸಾರ ಮಾಡಿ, ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನವನ್ನು ಪಡುತ್ತಿತ್ತು. ಆದರೆ ಈವತ್ತು ಆಗಿರುವುದೇ ಬೇರೆ. ಇಲ್ಲೊಂದು ದೆವ್ವದ ಕತೆ ಶುರುವಾದರೆ, ಪಕ್ಕದ ವಾಹಿನಿಯು ಅದೇ ಸಮಯಕ್ಕೆ ಅದೇ ತರಹದ ದೆವ್ವದ ಕತೆ ಶುರು ಮಾಡುತ್ತದೆ, ಇಲ್ಲಿ ದೇವಿಯಾದರೆ, ಅಲ್ಲೂ ದೇವಿ, ಇಲ್ಲಿ ಹಳ್ಳಿ ಕತೆಯಾದರೆ, ಅಲ್ಲೂ ಹಳ್ಳಿ ಕತೆ., ಇಲ್ಲಿ ಹಾವು ಅಲ್ಲೂ ಹಾವು.. ಹೀಗೆ. ವಾಹಿನಿಗಳು ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನಕ್ಕಿಂತ ಪಕ್ಕದ ವಾಹಿನಿಯ ಪ್ರೇಕ್ಷಕರನ್ನು ಕಡಿಮೆಗೊಳಿಸುವ ಅಥವಾ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತವೆ. ಇದು ಆರೋಗ್ಯಕರ ಸ್ಪರ್ಧೆ ಎನಿಸದೆ ಪ್ರೇಕ್ಷಕನಿಗೆ ಬೋರ್ ಆಗಿ ಎಲ್ಲಾಕಡೆ ಅದೇ ಗುರು ಎಂದುಕೊಳ್ಳುವ ಮಟ್ಟಕ್ಕೆ ತಲುಪುವಂತೆ ವಾಹಿನಿಗಳೇ ಮಾಡುತ್ತಿವೆ.
ಇದರ ಜೊತೆಗೆ ಮತ್ತೊಂದು ವಿಷಯವೆಂದರೆ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುವ ಪ್ರಕ್ರಿಯೆಗೆ ಯಾವ ವಾಹಿನಿಗಳೂ ಕೈ ಹಾಕಿಲ್ಲ. ಬದಲಿಗೆ ಅವರೇ ನಿಮಗೆ ಹೇಳಿಬಿಡುತ್ತಾರೆ, ನಮಗೆ ಇಷ್ಟು ಜನ ಇಂತಹ ಕಾರ್ಯಕ್ರಮಗಳನ್ನೂ ನೋಡುತ್ತಾರೆ, ಹಾಗಾಗಿ ನಮಗೆ ಇಂತಹದ್ದೇ ಬೇಕು ಎನ್ನುತ್ತಾರೆ, ಅದು ಇಂತಹದ್ದೇ ಸಾಕು ಎನ್ನುವ ಅರ್ಥವನ್ನೂ ಕೊಡುತ್ತದೆ.
ಇಲ್ಲಿ ತಪ್ಪುತ್ತಿರುವುದು ಎಲ್ಲಿ ಎನ್ನುವುದು ಬಹುದೊಡ್ಡ ಪ್ರಶ್ನೆ. ನನ್ನ ಲೆಕ್ಕ ತೆಗೆದುಕೊಂಡರೆ ನಾನು ನೂರು ಕಂತುಗಳಷ್ಟು ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದೇನೆ. ಅಲ್ಲಿ ಸೃಜನಶೀಲತೆಗೆ ಬೆಲೆ ಕಟ್ಟುವ ಹಾಗಿಲ್ಲ, ಬದಲಿಗೆ ನಿಮಿಷಕ್ಕೆ ಬೆಲೆ ಕಟ್ಟಬೇಕಾಗುತ್ತದೆ. ಅದರಲ್ಲೂ ರಿಮೇಕ್ ಧಾರಾವಾಹಿ ಒಪ್ಪಿಕೊಂಡರೆ ಮುಗಿಯಿತು, ಅಲ್ಲಿನ ಶಾಟ್ ಇಲ್ಲಿ ಏರುಪೇರಾದರೆ ಅದ್ಯಾಕಾಯಿತು ಎಂದು ಕೇಳುವವರು ಮೇಲಿನವರಲ್ಲ, ಬದಲಿಗೆ ಕಡಿಮೆ ಅನುಭವ ಇರುವ ಮತ್ತು ಅಷ್ಟೇ ಕೆಲಸ ಮಾಡುವವರು. ಏಕಧಂ ರಿಜೆಕ್ಟ್ ಮಾಡಿಬಿಡುವ ಅಧಿಕಾರ ಅವರಿಗೆ ಇರುತ್ತದೆಯಾದ್ದರಿಂದ “ಸರ್.. ಹಾಗೆ ಬರಬೇಕು ಸಾರ್..” ಎನ್ನುತ್ತಾರೆ. ಇಲ್ಲಮ್ಮಾ.. ಹೀಗೂ ಚಿತ್ರೀಕರಿಸಬಹುದು ಎಂದು ಸಮಜಾಯಿಸಿಕೊಡಲು ನೋಡಿ, ಕೇಳಿಸಿಕೊಳ್ಳದೆ ಆಕೆ ವಯ್ಯಾರವಾಗಿ ಮತ್ತೊಮ್ಮೆ ಚಿತ್ರೀಕರಿಸಿ ಎಂದು ಬೆನ್ನುತಿರುಗಿಸಿ ಹೋಗಿಬಿಡುತ್ತಾರೆ.
ಚಲನಚಿತ್ರ ಮತ್ತು ಕಿರುತೆರೆ ಮಾಧ್ಯಮಗಳಿಗೆ ಅದರದೇ ಆದ ವಿಶೇಷಗಳಿವೆ. ಹಾಗೆ ಮಿತಿಯೂ ಇದೆ. ಸಿನಿಮಾಕ್ಕೆ ಅವಧಿಯ ಮಿತಿಯಿದೆ. ಏನೇ ಉದ್ದ ಚಿತ್ರೀಕರಿಸುತ್ತೇವೆ ಎಂದರೂ ಮೂರು ಘಂಟೆಗೆ ಸೀಮಿತವಾಗುತ್ತದೆ. ಆದರೆ ಧಾರಾವಾಹಿ ಆಗಲ್ಲ. ಉದಾಹರಣೆಗೆ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ರಾಮಾಯಣ, ಮಹಾಭಾರತ ಮುಂತಾದವುಗಳನ್ನು ಎರಡೂವರೆ-ಮೂರು ಘಂಟೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ವಿಸ್ತೃತವಾಗಿ ತೋರಿಸುವುದು ಅಸಾಧ್ಯ. ಹಾಗೂ ಪ್ರಯತ್ನಿಸಿದರೆ ಎಷ್ಟೋ ವಿವರಗಳು, ವಿಶೇಷಗಳು ಎಗರಿಹೋಗುತ್ತವೆ. ಮತ್ತು ಅಂತಹ ಮಹಾನ್ ಕೃತಿಗಳಿಗೆ ನ್ಯಾಯ ದೊರಕಿಸಿಕೊಡಲು ಹೆಣಗಬೇಕಾಗುತ್ತದೆ ಮತ್ತು ಅದರಲ್ಲಿ ಯಶಸ್ಸು ಕಡಿಮೆಯೇ. ಹಾಗಾಗಿ ಇಂತಹ ಸಂದರ್ಭದಲ್ಲಿ ಕಿರುತೆರೆವಾಹಿನಿ ವರದಾನ ಎನಿಸಿಕೊಳ್ಳುತ್ತದೆ. ಹಾಗಾಗಿ ಚಿತ್ರರಂಗದಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದರೂ ಶಂಕರ್ ನಾಗ್ ಮಾಲ್ಗುಡಿ ಡೇಸ್ ಅನ್ನು ಕಿರುತೆರೆಗೆ ತರುತ್ತಾರೆ. ಅಷ್ಟೂ ಕತೆಗಳಿಗೆ ನ್ಯಾಯ ಒದಗಿಸಲು ಸಿನಿಮಾ ಮಾಧ್ಯಮದಲ್ಲಿ ಕಷ್ಟ ಎಂಬುದರ ಅರಿವಿದ್ದದರಿಂದ ಶಂಕರ್ ನಾಗ್ ಈ ನಿರ್ಧಾರ ತೆಗೆದುಕೊಂಡದ್ದು. ಹಾಗಾಗಿಯೇ ಈವತ್ತಿಗೂ ಮಾಲ್ಗುಡಿ ಡೇಸ್ ಮಾಸ್ಟರ್ ಪೀಸ್ ಎನಿಸಿಕೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವಾಹಿನಿಯವರು ಈ ಮಹತ್ವವನ್ನು ಪಕ್ಕಕ್ಕೆ ಸರಿಸಿ ಟಿಆರ್ಪಿ ಬೆನ್ನು ಬಿದ್ದಿದ್ದಾರೆ. ಜನ ಯಾವುದನ್ನು ತೋರಿಸಿದರೆ ನೋಡುತ್ತಾರೆ ಎಂಬುದನ್ನು ಗಮನಿಸಿ, ಅದನ್ನೇ ಹಿಂದೆ ಮುಂದೆ ನೋಡದೆ ಪ್ರಸಾರ ಮಾಡಲು ಹಾತೊರೆಯುವ ಮನಸ್ಥಿತಿ ಅವರದ್ದಾಗಿದೆ. ಹಾಗಾಗಿಯೇ ಹಳೆಯ ಧಾರಾವಾಹಿಗಳು ಮರುಪ್ರಸಾರವಾಗುತ್ತವೆ, ಸ್ಟಾರ್ ನಟನ ಮದುವೆ ವೀಡಿಯೊ ಪ್ರಸಾರವಾಗುತ್ತದೆ, ರಿಮೇಕ್ ಧಾರಾವಾಹಿಗಳು, ರಿಮೇಕ್ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ.

ಕಿರುತೆರೆ ಎನ್ನುವುದು ಪ್ರತಿಭೆಗೆ ದಾರಿದೀಪವಾಗಿತ್ತು ಮತ್ತು ಆಗಿರಬೇಕು. ಈವತ್ತಿನ ಬಹುತೇಕ ಸ್ಟಾರ್ ನಟರುಗಳು ಪಾದಾರ್ಪಣೆ ಮಾಡಿದ್ದು ಕಿರುತೆರೆಗಳಿಂದಲೇ. ಹಾಗಾಗಿ ಕಿರುತೆರೆಯ ಮಹತ್ವ ದೊಡ್ಡದಿದೆ. ಹೊಸ ಪ್ರತಿಭಾನ್ವಿತರನ್ನು ಹುಟ್ಟುಹಾಕುವ ಅವರ ಪ್ರತಿಭೆಗಳನ್ನು ಗುರುತಿಸುವ ಕೆಲಸ ಕಿರುತೆರೆಗಳಿಂದ ಆಗಬೇಕಾಗುತ್ತದೆ. ಕೇವಲ ಟಿ.ಆರ್.ಪಿ. ಓಟದ ಸ್ಪರ್ಧೆಯಲ್ಲಿ ಹಿಂದೆ ಮುಂದೆ ನೋಡದೆ ಓಡುವುದರಿಂದ ಸೃಜನಶೀಲತೆಗೆ ಧಕ್ಕೆ ಬರುತ್ತದೆ. ಒಬ್ಬ ಪ್ರತಿಭಾನ್ವಿತ ನಿರ್ದೇಶಕ, ಬರಹಗಾರ, ನಟ, ನಟಿ ವಾಹಿನಿಗಳ ಮೂಲಕ ಬೆಳಕು ಕಾಣುವ ಅವಕಾಶವಿದೆ. ಸಧ್ಯಕ್ಕೆ ಅದು ಮರೀಚಿಕೆಯಾಗಿದೆ.

Wednesday, February 1, 2017

ಆಸ್ಕರ್ ಕಣದಲ್ಲಿ ನಾವೇಕೆ ಗೆಲ್ಲುತ್ತಿಲ್ಲ...

ಸಧ್ಯಕ್ಕೆ ಆಸ್ಕರ್ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ. ಭಾರತಕ್ಕೆ ಇನ್ನೂ ಮರೀಚಿಕೆಯಾಗಿರುವ ಪ್ರಶಸ್ತಿಯಿದು. ಈ ಸಾರಿ ತಮಿಳಿನ ವಿಸಾರನೈ ಚಿತ್ರವನ್ನು ಆಸ್ಕರ್ ವಿಭಾಗಕ್ಕೆ ಅದ್ಯಾವ ಪುಣ್ಯಾತ್ಮ ಕಳುಹಿಸಿದ್ದರೋ? ಹಾಗೆ ನೋಡಿದರೆ ಸುಮ್ಮನೆ ಇಷ್ಟು ವರ್ಷಗಳ ಆಸ್ಕರ್ ಇತಿಹಾಸ ತೆರೆದು ನೋಡಿದರೆ ಯಾವ ಯಾವ ರೀತಿಯ ಚಿತ್ರಗಳು ಪುರಸ್ಕಾರಕ್ಕೆ ಒಳಗಾಗಿವೆ ಎನ್ನುವ ಅಂದಾಜು ಸಿಕ್ಕಿಬಿಡುತ್ತದೆ. ಆದರೆ ಭಾರತೀಯ ಚಿತ್ರಗಳನ್ನು ಇಲ್ಲಿಂದಲೇ ಆಯ್ಕೆ ಮಾಡಿ ಕಳುಹಿಸುವ ನಮ್ಮ ತೀರ್ಪುದಾರರ ಆಯ್ಕೆಯಲ್ಲಿಯೇ ಎಡವಟ್ಟುಗಳಿರುತ್ತವೆ.
ವಿಸಾರನೈ ಒಳ್ಳೆಯ ಚಿತ್ರವಿರಬಹುದು. ವಾಸ್ತವವನ್ನು ಎದುರಿಗೆ ತಂದುನಿಲ್ಲಿಸುವ ದುರಂತಮಯ ಚಿತ್ರವಿರಬಹುದು. ಆದರೆ ಆಸ್ಕರ್ ಗೆ ಅದೇಕೆ ಅರ್ಹವಾಗುತ್ತದೆ..? ಮದರ್ ಇಂಡಿಯ ಚಿತ್ರದಿಂದ ಪ್ರಾರಂಭವಾಯಿತು ನಮ್ಮ ಆಸ್ಕರ್ ಪಯಣ. ಇಲ್ಲಿಯವರೆಗೆ ಸರಿಸುಮಾರು ನಲವತ್ತೊಂಭತ್ತು ಚಿತ್ರಗಳು ಆಸ್ಕರ್ ಬಾಗಿಲು ತಟ್ಟಿ ವಾಪಸ್ಸಾಗಿವೆ. ಆದರೆ ನಾಮ ನಿರ್ದೇಶನ ವಾಗಿರುವುದು ಕೇವಲ ಮೂರೇ ಮೂರು ಚಿತ್ರಗಳು. ಜಗತ್ತಿನಲ್ಲಿಯೇ ಚಲನಚಿತ್ರಗಳನ್ನು ಅತಿ ಹೆಚ್ಚು ಸಿನಿಮಾಗಳನ್ನು ತಯಾರಿಸುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.  ದಾಖಲೆ ಸಂಖ್ಯೆಯ ಚಿತ್ರಗಳನ್ನು ನಿರ್ಮಿಸುವ ನಮ್ಮ ಭಾರತೀಯ ಚಿತ್ರರಂಗದ ಒಂದೇ ಒಂದು ಚಿತ್ರವೂ ಆಸ್ಕರ್ ಕಣದಲ್ಲಿ ಗೆದ್ದು ಬರದೆ ಇರುವುದು ಬೇಸರದ ಸಂಗತಿಯ ಜೊತೆಗೆ ಸಿನೆಮಕರ್ಮಿಗಳು ಗಂಭೀರವಾಗಿ ತೆಗೆದುಕೊಳ್ಳಬಹುದಾದ ವಿಷಯವೂ ಆಗಿದೆ. ಇಷ್ಟೆಲ್ಲಾ ಚಿತ್ರಗಳನ್ನು ಎಲ್ಲಾ ವಿಭಾಗದಲ್ಲೂ ತಯಾರಿಸುವ ನಾವುಗಳು ಅದೆಲ್ಲಿ ಸೋಲುತ್ತಿದ್ದೇವೆ. ತಾಂತ್ರಿಕವಾಗಿ, ಸೈದ್ಧಾಂತಿಕವಾಗಿ ಸಿನೆಮಾಗಳಲ್ಲಿ ಒಂದು ಮಟ್ಟ ಮೇಲಿರುವ ನಮ್ಮ ಸಿನೆಮಾಗಳೂ ಅದೆಲ್ಲಿ ಸೋಲುತ್ತಿವೆ ಎಂಬುದೇ ಪ್ರಶ್ನೆ.ಸುಮ್ಮನೆ ಗಮನಿಸಿದರೆ ನಮ್ಮ ಆಸ್ಕರ್ ಕಣದಲ್ಲಿ ತೀರ್ಪುಗಾರರ ಆಯ್ಕೆಗಿಂತಲೂ ಅಲ್ಲಿಗೆ ಚಿತ್ರಗಳನ್ನು ಆಯ್ಕೆ ಮಾಡಿ ಕಳುಹಿಸುವ ನಮ್ಮ ತೀರ್ಪುಗಾರರ ಆಯ್ಕೆ ಸಮಂಜಸ ಅಲ್ಲವೇನೋ ಎನಿಸುತ್ತದೆ.
ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗೆ ಒಂದಷ್ಟು ಮಾನದಂಡಗಳು ಇದ್ದೆ ಇರುತ್ತವೆ. ಅದರಲ್ಲೂ ಆಸ್ಕರ್ ಕಣಕ್ಕೆ ಸಿನಿಮಾ ಕಳುಹಿಸುವಾಗ ಸಿನಿಮಾದ ಸುಮಾರು ಮೂರು ನೂರು ಡಿವಿಡಿ ಪ್ರತಿಗಳನ್ನು  ಕಳುಹಿಸಿಕೊಡಬೇಕು ಎಂದರೆ ಅದರ ಮುಂದಿನ ಆಯ್ಕೆಯ ಪ್ರಕ್ರಿಯೆಗಳ ಕ್ಲಿಷ್ಟತೆ ಅಂದಾಜಿಗೆ ಬರುತ್ತದೆ. ಹಾಗೆಯೇ ಅದರ ಬಗೆಗಿನ ಮಾಹಿತಿಯನ್ನು ಹೆಕ್ಕಿ ತೆಗೆಯುವುದು ಈವತ್ತು ಬೆರಳಿನ ತುದಿಯಲ್ಲಿದೆ. ಗೂಗಲ್ ಮಾಡಿದರೆ ಎಲ್ಲವೂ ಅಂಗೈಯಲ್ಲಿರುತ್ತದೆ. ಆದರೆ ಅದಕ್ಕೂ ಮೀರಿ ಆಸ್ಕರ್ ಜಯಿಸಿದ ಚಿತ್ರಗಳನ್ನು ಅವುಗಳ ವಿಶೇಷತೆಗಳನ್ನೂ ಅಧ್ಯಯನ ಮಾಡಬೇಕಾಗುತ್ತದೆ. ಅದನ್ನೆಲ್ಲಾ ಅರ್ಥೈಸಿಕೊಂಡು ಸಿನಿಮಾ ಆಯ್ಕೆ ಮಾಡುವುದು ಕಷ್ಟದ ಕೆಲಸ ನಿಜ. ಹಾಗೆಯೇ ಪ್ರಶಸ್ತಿಗಾಗಿಯೇ ಸಿನಿಮಾ ನಿರ್ದೇಶಿಸಿ ಎಂದು ನಿರ್ದೇಶಕರಿಗೆ ತಾಕೀತು ಮಾಡಲಾಗುತ್ತದೆಯೇ?  ಸಿನಿಮಾ ಒಂದು ಕತೆಯ ನಿರೂಪಣ ಮಾಧ್ಯಮ. ಹಾಗಾಗಿ ಒಂದೊಳ್ಳೆ ಕತೆಯನ್ನು ಒಂದು ಪರಿಣಾಮಕಾರಿ ನಿರೂಪಣೆಯ ಮೂಲಕ ಪರದೆಯ ಮೇಲೆ ತೆರೆದಿಡುವುದು ಸಿನಿಮಾ. ಹಾಗೆ ನಿರೂಪಿಸಲಾಗುವ ನಮ್ಮದೇ ಚಿತ್ರಕ್ಕೆ ನಮ್ಮದೇ ಸೊಗಡಿನ ನಮ್ಮದೇ ಸಂಸ್ಕೃತಿ ಇತಿಹಾಸವನ್ನು ಹೇಳುವ ಹಾಗೆಯೇ ಒಂದು ಕತೆಯನ್ನು ಅಷ್ಟೇ ಅರ್ಥಗರ್ಭಿತವಾಗಿ ತೆರೆದಿಡುವ ಚಿತ್ರಕ್ಕೆ ಪ್ರಶಸ್ತಿ ಸಿಗುತ್ತದೆ. ಹಾಗಾದರೆ ನಮ್ಮಲ್ಲಿ ಅಂತಹ ಚಿತ್ರ ಬಂದೆ ಇಲ್ಲವೇ ಎನ್ನುವುದೇ ಪ್ರಶ್ನೆ.
ಆದರೆ ಇತಿಹಾಸ ಗಮನಿಸಿದಾಗ ಭಾರತದಿಂದ ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗಕ್ಕೆ ಕಳುಹಿಸಲಾದ ಸಿನಿಮಾಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಅವುಗಳ ಆಯ್ಕೆ ಸರಿಯಾದುದೇ ಎನ್ನುವ ಪ್ರಶ್ನೆ ಹುಟ್ಟೇ ಹುಟ್ಟುತ್ತದೆ. ಅಥವಾ ಆ ವರ್ಷದಲ್ಲಿ ಆ ಸಿನಿಮಾ ಬಿಟ್ಟು ಅದಕ್ಕಿಂತ ಒಳ್ಳೆಯ ಗುಣಮಟ್ಟವುಳ್ಳ ಚಿತ್ರ ಬಂದಿರಲಿಲ್ಲವೇ ಎನ್ನುವ ಸಂಶಯವೂ ಕಾಡುತ್ತದೆ. ಮದರ್ ಇಂಡಿಯಾ ನಮ್ಮ ದೇಶದಿಂದ ಆಯ್ಕೆಯಾದ ಮೊದಲ ಚಿತ್ರ. ಅದಾದ ನಂತರ ಗಮನಿಸಿದರೆ ಕೇವಲ ಒಂದಷ್ಟು ಸಿನೆಮಾಗಳ ಆಯ್ಕೆ ಸಮಾಧಾನ ತರಿಸುತ್ತದೆ. ತಮಿಳಿನ ನಾಯಗನ್, ದೈವ ಮಗನ್, ಕುರುದಿಪುನಲ್, ಅಂಜಲಿ, ದೇವರ ಮಗನ್, ಇಂಡಿಯನ್, ಜೀನ್ಸ್, ಹೇರಾಮ್ ಹಾಗೆಯೇ ಹಿಂದಿಯ ಸಾಗರ್, ಹೆನ್ನಾ, ಏಕಲವ್ಯ ಮುಂತಾದ ಚಿತ್ರಗಳನ್ನು ಅದ್ಯಾವ ಭರವಸೆಯ ಮೇಲೆ ಆಯ್ಕೆ ಮಾಡಿ ಕಳುಹಿಸಲಾಗಿತ್ತು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ ಎನ್ನಬಹುದು. ಏಕೆಂದರೆ ಆಸ್ಕರ್ ಕಣಕ್ಕೆ ಕಳುಹಿಸಲಾದ ಚಿತ್ರಗಳಲ್ಲಿ ಕೆಲವು ಹಾಲಿವುಡ್, ವಿದೇಶಿ, ಹಿಂದಿ ಚಿತ್ರದ ನಕಲಾಗಿದ್ದವು. ಮತ್ತವು ಇಲ್ಲಿಯ ಮಟ್ಟಕ್ಕೆ ಉತ್ತಮ ಎನಿಸುತ್ತಿತ್ತಾದರೂ ಆಸ್ಕರ್ ಕಣಕ್ಕೆ ಬೇಕಾದ ಯಾವ ಅಂಶಗಳು ಆಯ್ಕೆ ಮಾಡುವವರಿಗೆ ಕಾಣಿಸಿದವು ಎಂಬುದು ಪ್ರಶ್ನೆ ಅಲ್ಲವೇ..ಉದಾಹರಣೆಗೆ ತಮಿಳಿನ ಜೀನ್ಸ್ ತಾಂತ್ರಿಕವಾಗಿ ಅದ್ಭುತವಾಗಿದ್ದ ಚಿತ್ರ ನಿಜ. ಆದರೆ ಜೀನ್ಸ್ ಚಿತ್ರ ಅತ್ಯುತ್ತಮ ವಿಶುಯಲ್ ಎಫೆಕ್ಟ್ಸ್ ವಿಭಾಗಕ್ಕೆ ಅದು ಸ್ಪರ್ಧಿಸಿರಲಿಲ್ಲ ಅಲ್ಲವೇ..? ಅತ್ಯುತ್ತಮ ವಿದೇಶಿ ಚಿತ್ರ ವಿಭಾಗಕ್ಕೆ ಜೀನ್ಸ್ ಚಿತ್ರವನ್ನು ಆಯ್ಕೆ ಮಾಡಿದ್ದು ಯಾಕೆ? ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಸ್ವಂತಿಕೆಯನ್ನು ಬಿತ್ತರಿಸುತ್ತ ಸೊಗಡನ್ನು ಬೆಸೆದುಕೊಂಡ, ಇಲ್ಲಿಯದ್ದೆ ಕತೆ ಎನಿಸುವ, ಇಲ್ಲಿಯದೇ ನಿರೂಪಣೆ ಎನಿಸುವ ಯಾವುದೇ ನಿರೂಪಣೆ ಕಾಣದ ಚಿತ್ರಗಳನ್ನು ಆಸ್ಕರ್ ಕಣಕ್ಕೆ ಕಳುಹಿಸಿದ ಪರಿಣಾಮಕ್ಕೆ ಫಲಿತಾಂಶ ಸಿಕ್ಕೆ ಸಿಕ್ಕಿದೆ. ಈ ಸಾರಿಯೂ ತಮಿಳಿನ ವಿಸಾರನೈ ಚಿತ್ರ ಆಯ್ಕೆ ಮಾಡಿದ್ದು ಯಾಕೆ ಎಂಬುದು ಪ್ರಶ್ನೆ. ಆರು ದಶಕಗಳಿಂದ ಭಾರತ ಸ್ಪರ್ಧೆಯಲ್ಲಿ ಮೊದಲ ಪ್ರಾರಂಭದ ಕದವನ್ನೂ ತಟ್ಟದೆ ಹಾಗೆಯೇ ಬೌನ್ಸ್ ಆಗಿತ್ತಿರುವುದಕ್ಕೆ ಏಕೆ ಎಂಬುದನ್ನು ಅರ್ಥೈಸಿಕೊಳ್ಳದೆ, ವಿಸ್ತೃತವಾಗಿ ಚರ್ಚಿಸದೆ ತೆಗೆದುಕೊಳ್ಳುವ ನಿರ್ಧಾರವೇ ಇದಕ್ಕೆ ಕಾರಣ ಎಂಬುದಾಗಿ ಸ್ಪಷ್ಟವಾಗಿ ಹೇಳಬಹುದು. ನಮ್ಮ ದೇಶದ ಮಾನದಂಡಗಳಿಗೆ ಸಿನಿಮಾ ಆಯ್ಕೆ  ಮಾಡುವುದು ಬೇರೆ, ವಿದೇಶಿ ನೆಲಕ್ಕೆ ಆಯ್ಕೆ ಮಾಡುವುದು ಬೇರೆ. ಎರಡಕ್ಕೂ ವ್ಯತ್ಯಾಸವಿರುತ್ತದೆ. ಅದನ್ನು ಮೊದಲಿಗೆ ನಮ್ಮ ಫಿಲಂ ಫೆಡರೇಶನ್ ಆಫ್ ಇಂಡಿಯಾ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿನ ಸದಸ್ಯರು ಅಧ್ಯಯನ ಮಾಡಬೇಕಾಗುತ್ತದೆ. ಬಂದು ಬೀಳುವ ರಾಶಿಗಟ್ಟಲೆ ಸಿನೆಮಾಗಳಲ್ಲಿ ಸೋಸಿ ಕಳುಹಿಸುವ ಕೆಲಸ ಸುಲಭದ್ದಲ್ಲವಾದರೂ ವಿಸ್ತೃತವಾದ ಅಧ್ಯಯನ ಮತ್ತು ಚರ್ಚೆಯಿಂದ ಅದನ್ನು ಸಾಧ್ಯವಾಗಿಸಬಹುದು. ಕನ್ನಡದ ತಾಯಿ ಮಮತೆ ಸೂಪರ್ ಹಿಟ್ ಆಗಿರಬಹುದು, ಅದನ್ನು ಆಸ್ಕರ್ ಕಣಕ್ಕೆ ಕಳುಹಿಸಲಾಗುತ್ತದೆಯೇ.. ಇಲ್ಲ ಎಂದಾದಲ್ಲಿ ಅದರ ಮೂಲ ತಮಿಳು ಚಿತ್ರವನ್ನು ಕಳುಹಿಸಿದ್ದು ಹೇಗೆ..?
ಇಲ್ಲಿ ಸಿನಿಮಾದ ವಸ್ತುವುಗಿಂತ ಅದರ ಹಿನ್ನೆಲೆ ಕೆಲಸ ಮಾಡಿರುವುದು ಹಲವು ಬಾರಿ ಎಲ್ಲರ ಗಮನಕ್ಕೆ ಬಂದಿದೆ. ಆಮೀರ್ ಖಾನ್ ನಿರ್ಮಾಣದ ಧೋಬಿ ಘಾಟ್ ಮತ್ತು ಅನುರಾಗ್ ಕಶ್ಯಪ್ ನಿರ್ಮಾಣದ ಉಡಾನ್ ಚಿತ್ರಗಳ ಕಣದಲ್ಲಿ ಕೊನೆಗೆ ಆಯ್ಕೆಯಾದದ್ದು ಧೋಬಿ ಘಾಟ್. ಹಾಗೆ ನೋಡಿದರೆ ಉಡಾನ್ ಚಿತ್ರದಲ್ಲಿನ ದಟ್ಟತೆ ಧೋಬಿಘಾಟ್ ಚಿತ್ರದಲ್ಲಿರಲಿಲ್ಲ. ಹಾಗೆಯೇ ಏಕಲವ್ಯ ಚಿತ್ರವನ್ನು ಆಯ್ಕೆ ಮಾಡಿದ್ದು ಅಷ್ಟು ಸಮಂಜಸ ಅಲ್ಲವೇ ಅಲ್ಲ. ಪಾಶ್ಚಿಮಾತ್ಯ ಚಿತ್ರಗಳ ನಿರೂಪಣೆಯನ್ನೇ ಅನುಕರಿಸುವ ನಮ್ಮಲ್ಲಿನ ಚಿತ್ರಗಳು ನಮಗೆ ಅದ್ಭುತ ಎನಿಸಬಹುದು. ಆದರೆ ಆಸ್ಕರ್ ಕಣಕ್ಕೆ ಬೇಕಾದದ್ದು ದಟ್ಟವಾದ ಭಿನ್ನ ನಿರೂಪಣೆಯ ಹಾಗೂ ಆಯಾ ದೇಶವನ್ನು ಪ್ರತಿನಿಧಿಸುವ ಚಿತ್ರಗಳು. ಆ ನಿಟ್ಟಿನಲ್ಲಿ ನಮ್ಮಲ್ಲಿನ ಆಯ್ಕೆ ಓಕೆ ಎನಿಸುವುದಿಲ್ಲ.
ಅದರಲ್ಲೂ ಈ ವಿಷಯದಲ್ಲಿ ನಾವು ಅಂದರೆ ಕನ್ನಡದವರು ಲೆಕ್ಕದಲ್ಲೇ ಇಲ್ಲ. ಮೂರು ಸಾವಿರ ಸಿನೆಮಾಗಳ ಸರದಾರರು ನಾವು. ರಾಷ್ಟ್ರ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ನಮ್ಮದಾಗಿಸಿಕೊಂಡವರು. ನಮ್ಮ ಸಿನೆಮಾಗಳತ್ತ ಆಸ್ಕರ್ ಆಯ್ಕೆ ಸಮಿತಿ ಕಣ್ಣೆತ್ತಿ ನೋಡುವುದಿಲ್ಲವೋ ಅಥವಾ ನಮ್ಮವರೇ ನಮಗಲ್ಲ ಆಸ್ಕರ್ ಎಂದು ಸುಮ್ಮನಿದ್ದು ಬಿಡುತ್ತಾರೋ ಗೊತ್ತಿಲ್ಲ. ಮಾತೆತ್ತಿದರೆ ತಮಿಳು ಚಿತ್ರರಂಗದ ಅದರಲ್ಲೂ ಕಮಲ್ ಹಾಸನ್ ಅಭಿನಯದ ಚಿತ್ರಗಳನ್ನು ಹಿಂದೆ ಮುಂದೆ ನೋಡದೆ ಆಯ್ಕೆ ಮಾಡಿ ಬಿಡುವ ಸಮಿತಿ ಬೇರೆ ಭಾಷೆಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡ ಉದಾಹರಣೆ ತೀರಾ ಕಡಿಮೆ. ಎರಡು ಬೆಂಗಾಲಿ, ಮೂರು ಮರಾಠಿ,  ಒಂದು ತೆಲುಗು, ಎರಡು ಮಲಯಾಳಂ, ಒಂದು ಗುಜರಾತಿ ಬಿಟ್ಟರೆ ಹಿಂದಿ ಮತ್ತು ತಮಿಳು ಚಿತ್ರಗಳನ್ನೇ ಆಯ್ಕೆ ಸಮಿತಿ ಆಯ್ಕೆ ಮಾಡಿ ಕಳುಹಿಸಿಬಿಟ್ಟಿದೆ. ಆದರೆ ಅವುಗಳನ್ನು ಬುದ್ದಿವಂತಿಕೆಯಿಂದ ಆಯ್ಕೆ ಮಾಡದೆ ಪೂರ್ವಗ್ರಹಗಳನ್ನೊಳಗೊಂಡ ಮಾನದಂಡದ ಮೂಲಕ ಆಯ್ಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಹಾಗಾಗಿ ಬೇರೆ ಬೇರೆ ಭಾಷೆಗಳಲ್ಲಿನ ಉತ್ತಮವಾದ ಅರ್ಹ ಚಿತ್ರಗಳು ಇಲ್ಲಿಂದಲೇ ಅನರ್ಹಗೊಂಡಿವೆ.

ಆಸ್ಕರ್ ದೊಡ್ಡ ಪ್ರಶಸ್ತಿಯೇ ಇರಬಹುದು, ಆದರೆ ಅದೇ ಅಂತಿಮವಲ್ಲ, ಅದಕ್ಕೂ ಮೀರಿದ್ದು ಸಿನಿಮಾ ಎಂದೆಲ್ಲಾ ಮಾತನಾಡಬಹುದು. ಆದರೆ ಅದೆಲ್ಲಾ ಹುಳಿ ದ್ರಾಕ್ಷಿ ಕತೆಯಂತಾಗಿಬಿಡುತ್ತದೆ. ಹಾಗಾಗಿ ಸಾವಿರಾರು ಚಿತ್ರಗಳು ವರ್ಷಕ್ಕೆ ತಯಾರಾಗುವ ಭಾರತದಲ್ಲಿ ಆಸ್ಕರ್ ಪ್ರಶಸ್ತಿಯನ್ನು ನಮ್ಮದಾಗಿಸಿಕೊಳ್ಳುವ ಚಿತ್ರ ಖಂಡಿತ ಇದ್ದೇ ಇದೆ. ಅಂತಹ ಪ್ರತಿಭಾವಂ ನಿರ್ದೇಶಕರೂ ಚಿತ್ರಕರ್ಮಿಗಳೂ ಇದ್ದಾರೆ. ಆದರೆ ಅದನ್ನು ಹೆಕ್ಕಿ ತೆಗೆದು ಗುರುತಿಸಿ ಕಳುಹಿಸುವಲ್ಲಿ ಆಯ್ಕೆ ಸಮಿತಿ ನಿಗಾವಹಿಸಬೇಕಾಗುತ್ತದೆ. ಹಾಗಾದಾಗ ಖಂಡಿತ ಆಸ್ಕರ್ ಕಣದಲ್ಲಿ ಭಾರತದ ಬಾವುಟ ಹಾರಾಡದೆ ಇರದು.

Sunday, January 29, 2017

ಆಟೋಗ್ರಾಫ್ ಮತ್ತು ಜೋಗಿ...

ನಮ್ಮೂರಿನಲ್ಲಿದ್ದ ವಿಷ್ಣು ಅಭಿಮಾನಿಯೊಬ್ಬ ವಿಷ್ಣುವರ್ಧನ್ ಅವರಿಗೆ ನಾನು ನಿಮ್ಮ ಅಭಿಮಾನಿ ಎಂದು ಪತ್ರ ಬರೆದಿದ್ದ. ವಿಷ್ಣುವರ್ಧನ್ ತಮ್ಮ ಫೋಟೋವೊಂದಕ್ಕೆ ಸಹಿ ಹಾಕಿ ಕಳುಹಿಸಿದ್ದರು, ಅವನು ಊರಿಗೆಲ್ಲಾ ತೋರಿಸಿಕೊಂಡು ಸಂಭ್ರಮ ಪಟ್ಟಿದ್ದ.
ನಾನು ಅಭಿಮಾನದ ಆಟೋಗ್ರಾಫ್ ಗೆ ತೆರೆದುಕೊಂಡದ್ದು ಹೀಗೆ. ನೆಚ್ಚಿನ ನಟ, ನಿರ್ದೇಶಕ ನಟಿ ಹೀಗೆ ಯಾರೇ ಸಿಕ್ಕರೂ ಅವರದ್ದೊಂದು ಆಟೋಗ್ರಾಫ್ ಪಡೆದುಕೊಳ್ಳಬೇಕು ಎಂಬುದು ಆವಾಗ ಗೊತ್ತಾಯಿತು. ಸರಿ, ಅದನ್ನು ಇಟ್ಟುಕೊಂಡು ಏನು ಮಾಡುವುದು? ನಾನು ಅದನ್ನೇ ಕೇಳಿದ್ದೆ. ಅವನು ಇದು ಅಣ್ಣನ ಆಟೋಗ್ರಾಫ್..ಅದಿದ್ರೆ ವಿಷ್ಣು ಅಣ್ಣಾನೆ ಹತ್ರ ಇದ್ದಂಗೆ ಎಂದೇನೋ ಹೇಳಿ, ಆನಂತರ ಮುಂದೇನು ಹೇಳಬೇಕೆಂದುಗೊತ್ತಾಗದೆ ಸುಮ್ಮನಾಗಿದ್ದ.
ಆದರೆ ನಾನು ಆಟೋಗ್ರಾಫ್ ಗಳನ್ನೂ ತೆಗೆದುಕೊಳ್ಳಲು ಶುರು ಮಾಡಿದ್ದಕ್ಕೆ ಕಾರಣರಾದದ್ದು ಯಂಡಮೂರಿ ವೀರೇಂದ್ರನಾಥ್. ನಾನು ಮೊದಲ ಪಿಯುಸಿಯಲ್ಲಿದ್ದಾಗ ಅವರ ದುಡ್ಡು ಪವರ್ ಆಫ್ ದುಡ್ಡು ಓದಲು ಸಿಕ್ಕಿತ್ತು. ಅದಕ್ಕೂ ಮುನ್ನ ಯಾವಾಗಲೊಮ್ಮೆ ತುಷಾರ, ಮಯೂರ ಮುಂತಾದ ಸಾಪ್ತಾಹಿಕ, ಮಾಸಿಕಗಳನ್ನ ತಂದಾಗ ಅದರಲ್ಲಿ ಯಂಡಮೂರಿ ಅವರ ಧಾರಾವಾಹಿಗಳ ಬಗ್ಗೆ ತಿಳಿದಿದ್ದೆ. ಆದರೆ ಕಂತು ಕಂತು ಕೂಡಿಟ್ಟುಕೊಂಡು ಓದುವುದು ಸಾಧ್ಯವಿರಲಿಲ್ಲ. ಆದರೆ ನಂಜನಗೂಡಿನ ಗ್ರಂಥಾಲಯವನ್ನು ಸೋಸುತ್ತಿದ್ದಾಗ ಅಚಾನಕ್ ಆಗಿ ಸಿಕ್ಕಿದ್ದು ಯಂಡಮೂರಿ ವೀರೇಂದ್ರನಾಥ್ ಅವರ ದುಡ್ಡು ಟು ದಿ ಪವರ್ ಆಫ್ ದುಡ್ಡು. ಒಂದೇ ಗುಕ್ಕಿನಲ್ಲಿ ಇಡೀ ಕಾದಂಬರಿ ಓದಿ ಮುಗಿಸಿದ್ದೆ. ಅಷ್ಟರಲ್ಲಾಗಲೇ ಕನ್ನಡದ ಬಹುತೇಕ ಗಣ್ಯರ ಬರಹ-ಕಾದಂಬರಿಗಳನ್ನು ಓದಿ ಬಿಟ್ಟಿದ್ದೆ. ಎಸ್.ಎಲ್. ಭೈರಪ್ಪನವರ ಆವತ್ತಿನವರೆಗೆ ಬಿಡುಗಡೆಯಾಗಿದ್ದ ಅಷ್ಟೂ ಕಾದಂಬರಿಗಳನ್ನು ಎರಡೆರೆಡು ಬಾರಿ ಓದಿ ಮುಗಿಸಿದ್ದೆ. ಆನಕೃ, ತರಾಸು, ಮಾಸ್ತಿ, ಬೇಂದ್ರೆ, ಕುವೆಂಪು, ಕಾರಂತರು, ತ್ರಿವೇಣಿ, ಎಂ.ಕೆ.ಇಂದಿರಾ.... ಹೀಗೆ ಎಲ್ಲರೂ ಮುಗಿದಿತ್ತು. ಗೀತಾ ನಾಗಭೂಷಣ್, ಈಚನೂರು ಶಾಂತ, ಈಚನೂರು ಜಯಲಕ್ಷ್ಮಿ, ರೇಖಾ ಕಾಖಂಡಕಿ, ಮಹಾಬಲಮೂರ್ತಿ, ಎಂ ಎಚ್ ನಾಯಕಬಾಡ, ಕುಂವಿ, ಸಾಯಿಸುತೆ, ... ಹೀಗೆ ಕೈಗೆ ಸಿಕ್ಕಿದವರ ಬರವಣಿಗೆಗಳನ್ನೂ ಓದಿಯಾಗಿತ್ತು. ಅಂತಹ ಸಂದರ್ಭದಲ್ಲಿ ಸಿಕ್ಕಿದ್ದು ಯಂಡಮೂರಿ. ಓದಿದ್ದೆ, ಓದಿದ್ದೆ. ಒಂದೇ ವರ್ಷದಲ್ಲಿ ಅವರ ಆವತ್ತಿಗ್ಗೆ ಬಿಡುಗಡೆಯಾಗಿದ್ದ ನಲವತ್ತನಾಲ್ಕು ಪುಸ್ತಕಗಳನ್ನು ಓದಿ ಬಿಟ್ಟೆ. ಆ ಮಧ್ಯದಲ್ಲಿ ಸಿಕ್ಕಿದ್ದೇ ಗ್ರಾಫಾಲಜಿ. ಕೈಬರಹ ನೋಡಿ, ವ್ಯಕ್ತಿತ್ವ ಅಂದಾಜು ಮಾಡುವ ಬಗೆಗಿನ ಪುಸ್ತಕ. ಅಲ್ಲಿಂದ ಶುರುವಾಯಿತು ನೋಡಿ, ಹಸ್ತಾಕ್ಷರ ಪರೀಕ್ಷಿಸುವ ಅಭ್ಯಾಸ. ಆ ಕಾರಣಕ್ಕಾಗಿ ಆಟೋಗ್ರಾಫ್ ತೆಗೆದುಕೊಂಡು ಮನೆಯಲ್ಲಿ ಹೋಗಿ ಅದರ ಅಧ್ಯಯನ ಮಾಡುತ್ತಿದ್ದೆ. ಅದೆಷ್ಟರ ಮಟ್ಟಿಗೆ ಆ ಬರಹದವರ ವ್ಯಕ್ತಿತ್ವ ತಿಳಿಯಿತೋ ಅಥವಾ ತಿಳಿದು ಅದೇನು ಮಾಡಿದೆನೋ ಗೊತ್ತಾಗಲಿಲ್ಲ. ಆದರೆ ಅದೊಂದು ಚಾಳಿ ಮಾತ್ರ ಮುಂದುವರೆಯಿತು. ಸುತ್ತಮುತ್ತಲಿನವರ, ಗೆಳೆಯರ ಕೈಬರಹ ಮುಗಿದ ಮೇಲೆ ಸಾಧಕರ ಹಸ್ತಾಕ್ಷರ ಹುಡುಕುವುದಕ್ಕೆ ಶುರು ಮಾಡಿದೆ. ಸಾಹಿತಿಗಳ, ಚಿತ್ರತಾರೆಗಳ, ಗಾಯಕರ... ಹೀಗೆ ಯಾರೇ ಸಿಕ್ಕರೂ ಪಕ್ಕಾಭಿಮಾನಿಯಂತೆ ಹಸ್ತಾಕ್ಷರ ತೆಗೆದುಕೊಳ್ಳುತ್ತಿದೆ. ಮನೆಯಲ್ಲಿ ಅದನ್ನೇ ನೋಡುತ್ತಾ ಅದೇನೋ ಹುಡುಕುತ್ತಿದ್ದೆ.
ಹಾಗೆಯೇ ಮೊನ್ನೆ ಅಂಕಿತ ಪ್ರಕಾಶನದ ಪುಸ್ತಕದ ಅಂಗಡಿಗೆ ಹೋಗಿದ್ದಾಗ ಎದುರಿಗೆ ಸಿಕ್ಕವರು ಲೇಖಕ ಜೋಗಿ. ನನ್ನ ನೋಡಲೇ ಬೇಕಾದ ನೂರೊಂದು ಚಿತ್ರಗಳು ಪುಸ್ತಕ ಬಿಡುಗಡೆ ಮಾಡಿದವರು. ಬರೀ ಫೋನಿನಲ್ಲಿ ಮಾತನಾಡಿ ಬಿಡುಗಡೆ ನೀವೇ ಮಾಡಬೇಕು ಎಂದಾಗ, ಖಂಡಿತ ಬರುತ್ತೇನೆ, ಆದರೆ ಮುಂದಿನವಾರ ನನ್ನ ಪುಸ್ತಕ ಬಿಡುಗಡಿಯಿದೆ ನೀವು ಬರಲೇಬೇಕು ಎಂದವರು ಸಮಯಕ್ಕೆ ಸರಿಯಾಗಿ ಬಂದಿದ್ದರು. ಆನಂತರ ಒಂದಷ್ಟು ಮಾತನಾಡಿದ್ದು ಬಿಟ್ಟರೆ ಅಂತಹ ಮಾತುಕತೆ ಇರಲಿಲ್ಲ. ಹಾಗಾಗಿ ಎದುರಿಗೆ ಸಿಕ್ಕಾಗ ಮತ್ತೆ ನನ್ನದೇ ಹಿಂಜರಿಕೆ ನನ್ನನ್ನು ಕಾಡತೊಡಗಿತ್ತು. ನಾನು ಇವರಿಗೆ ನೆನಪಿರಬಹುದಾ..?ಅದೊಂದು ಹಿಂಜರಿಕೆ ನನ್ನನ್ನೂ ಯಾವತ್ತಿಗೂ ಕಾಡುತ್ತದೆ. ನಾನು ಹಲವಾರು ಸೆಲೆಬ್ರಿಟಿಗಳ ಜೊತೆಯಲ್ಲಿ ಕೆಲಸ ಮಾಡಿದ್ದೇನೆ. ಆದರೆ ಕೆಲಸದ ನಂತರ ನಾನು ಅವರೊಂದಿಗೆ ಅಂತಹ ಗೆಳೆತನವನ್ನು ಇಟ್ಟುಕೊಳ್ಳುವುದಿಲ್ಲ. ಅದೇಕೋ ಏನೋ? ನನ್ನ ಮೊದಲ ಚಿತ್ರದ ನಾಯಕ ನಾಯಕಿ, ಕಲಾವಿದರು ಹೀಗೆ. ಯಾರೊಂದಿಗೂ ನನ್ನ ಗೆಳೆತನವಿಲ್ಲ. ಆದರೆ ನನ್ನ ಗೆಳೆಯರ ಬಳಗದಲ್ಲಿರುವವರೆ ಬೇರೆ. ಅದರಲ್ಲೂ ಹೆಸರು ಮಾಡಿದವರು ನನಗೆ ಪರಿಚಯವಿದ್ದರೂ ಅಚಾನಕ್ ಆಗಿ ಎಲ್ಲಾದರೂ ಸಿಕ್ಕಾಗ ಮಾತನಾಡಿಸಲು ಹಿಂದೆ ಮುಂದೆ ನೋಡುತ್ತೇನೆ. ಕಾರಣ ಇಷ್ಟೇ.. ಅವರಿಗೆ ನನ್ನ ನೆನೆಪಿರಬಹುದೇ..? ಅವರಿಗೆ ನನ್ನ ಪರಿಚಯ ಇರಬಹುದೇ..? ಅಕಸ್ಮಾತ್ ಮರೆತಿದ್ದರೆ ಅದನ್ನು ನೆನಪಿಸುವ ಸರ್ಕಸ್ ದೊಡ್ಡದು... ಆದರೆ ಇದೆ ನನ್ನ ಮೇಲಿನ ಇಮೇಜ್ ಅನ್ನು ಋಣಾತ್ಮಕವಾಗಿಯೂ ಕೆಲವೊಮ್ಮೆ ಧನಾತ್ಮಕವಾಗಿಯೂ ರೂಪಿಸುತ್ತದೆ.ಗೊತ್ತಿದ್ದರೂ ಮಾತನಾಡಿಸಲಿಲ್ಲ, ಅವನಿಗೆ ದುರಹಂಕಾರ ಎನ್ನುವ ಹಣೆಪಟ್ಟಿಯನ್ನು ವಿನಾಕಾರಣ ಹೊತ್ತುಕೊಳ್ಳುವಂತೆ ಮಾಡಿಬಿಡುತ್ತದೆ
ಆದರೆ ಜೋಗಿ ಮಾತನಾಡಿಸಿ, ಹೇಗಿದ್ದೀರಾ..? ಎಂದರು. ನಾನು ಅವರನ್ನೇ ನೋಡಿದೆ. ನನ್ನಂತಹ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಬರಹಗಾರ ಜೋಗಿ. ಯಾವುದೇ ವಿಷಯದ ಬಗ್ಗೆಯೂ ಅನಿಸಿದ್ದನ್ನು ಅನಿಸಿದ ಹಾಗೆ ಬರೆಯುವ ಜೋಗಿಗೆ ನನ್ನ ನೆನಪಿರಬಹುದಾ..? ಎಂಬ ಪ್ರಶ್ನೆ ಆ ಕ್ಷಣದಲ್ಲಿ ಕಾಡದೆ ಇರಲಿಲ್ಲ. ಮಾತನಾಡಿಸಿ, ಅವರದೇ ಪುಸ್ತಕಕ್ಕೆ ಹಸ್ತಾಕ್ಷರ ತೆಗೆದುಕೊಂಡೆ.

ಕತೆ ಚಿತ್ರ ಕತೆ ಸಂಭಾಷಣೆ ಜೋಗಿ ಬರೆದ ಇತ್ತೀಚಿನ ಪುಸ್ತಕ. ಅವರೇ ಹೇಳುವಂತೆ ಚಿತ್ರರಂಗದ ಜೊತೆಗಿನ ಅವರ ಪ್ರಯೋಗವನ್ನು ಪುಸ್ತಕ ತೆರೆದಿಡುತ್ತದೆ. ಆದರೆ ಚಿತ್ರಕತೆಯ ಆಳಕ್ಕೆ ಪುಸ್ತಕ/ಬರಹ ಇಳಿಯುವುದಿಲ್ಲ. ಒಬ್ಬ ಬರಹಗಾರನಾಗಿ ಜೋಗಿ ತಾನು ಕಂಡುಕೊಂಡ ದೃಶ್ಯಮಾಧ್ಯಮದ ಮಜಲುಗಳನ್ನು ಅಕ್ಷರ ರೂಪಕ್ಕೆ ತಂದಿದ್ದಾರೆ. ಕೆಲವು ಅಧ್ಯಾಯಗಳು ಖುಷಿ ನೀಡಿದರೆ ಕೆಲವು ಅಪೂರ್ಣ ಎನಿಸಿದ್ದು ನನ್ನ ವೈಯಕ್ತಿಕ ಅಭಿಪ್ರಾಯ.

Wednesday, January 25, 2017

ಅವರು ಗಡ್ಡಪ್ಪ.. ನಾವೂ ದಡ್ಡಪ್ಪ...


ನಾವು ಚಿತ್ರಕರ್ಮಿಗಳು ಸ್ಫೂರ್ತಿಗೊಳಗಾಗುವುದು ತಪ್ಪಲ್ಲ. ಯಾವುದೇ ಕತೆ ಕವನ ಸ್ಫೂರ್ತಿಯಿಲ್ಲದೆ ಹುಟ್ಟುವ ಸಂಭವ ಕಡಿಮೆ. ಸಿನಿಮಾಕ್ಕೆ, ಪುಸ್ತಕಕ್ಕೆ ಅಥವಾ ವರದಿಗಳಿಗೆ ಒಂದಷ್ಟು ಬರೆಯಬಹುದೇನೋ? ಆದರೆ ಸ್ಫುರಿಸದೆ ಜನ್ಮ ತಾಳುವ ಕತೆಗೆ ಆಯಸ್ಸು ಕಡಿಮೆಯೇ..?
ಹಾಗಾದರೆ ನಾವು ಯಾವುದರಿಂದ ಸ್ಫೂರ್ತಿಗೊಳ್ಳಬೇಕು ಎಂಬುದು ಪ್ರಶ್ನೆ. ಸಧ್ಯಕ್ಕೆ ಒಂದು ಸಿನಿಮಾ ಎರ್ರಾಬಿರ್ರಿ ಯಶಸ್ವೀಯಾಗಿಬಿಡುತ್ತದೆ. ಆ ತಕ್ಷಣಕ್ಕೆ ನಮಗದು ಸ್ಫೂರ್ತಿ. ಈ ತರಹದ ಚಿತ್ರವನ್ನು ನಾವೂ ಮಾಡಬೇಕು ಎನಿಸುತ್ತದೆ. ಅಥವಾ ಅದರಲ್ಲಿನ ಕತೆಯ ಎಳೆ ನಮ್ಮ ಮನದಾಳದಲ್ಲಿ ಈ ಮೊದಲೆಲ್ಲೋ ಜನ್ಮ ತಾಳಿದ್ದರೆ ಆಗ ಅದಕ್ಕೆ ಹುರುಪು ಬಂದು, ನಾನು ಮೊದಲೇ ಈ ಐಡಿಯಾ ಅಂದುಕೊಂಡಿದ್ದೆನಲ್ಲಾ .. ಎನಿಸಿ ಮತ್ತೆ ಅದಕ್ಕೆ ಮಸಾಲೆ ಅರೆಯಲು ಪ್ರಾರಂಭಿಸುತ್ತೇವೆ. ಇದು ಸರಿಯಾದದ್ದೇ. ಆದರೆ ಕೆಲವೊಮ್ಮೆ ಅಥವಾ ಬಹುತೇಕ ನಾವುಗಳ ಮೂಲಕೃತಿಯ ಅಂತಃಸತ್ವವನ್ನು ಅರಿತುಕೊಳ್ಳುವುದಿಲ್ಲ. ಅಥವಾ ಅಭ್ಯಾಸ, ಅಧ್ಯಯನ ಮಾಡುವುದಿಲ್ಲ.
ಈಗ ಸಧ್ಯಕ್ಕೆ ತಿಥಿ ಚಿತ್ರವನ್ನೇ ತೆಗೆದುಕೊಳ್ಳಿ. ಅದರಲ್ಲಿದ್ದ ಪಾತ್ರಗಳು ಪಾತ್ರಧಾರಿಗಳು ಕತೆ ಎಲ್ಲವೂ ಉತ್ತಮವಾದದ್ದೇ. ಮತ್ತದು ನೈಜವಾಗಿ ಬರಲು ಅದರ ಬರಹಗಾರ/ನಿರ್ದೇಶಕರ ವಿಷನ್, ಪ್ರತಿಭೆ ಕಾರಣ. ಅದೆಲ್ಲದರ ಜೊತೆಗೆ ಅದರಲಿದ್ದ ಕತೆ. ತಿಥಿಯ ಬಗ್ಗೆ ಒಂದು ಸಿನಿಮಾ ಮಾಡಿದ್ದಾರೆ, ನಾವು ಮದುವೆ ಇಟ್ಟುಕೊಂಡು ಸಿನಿಮಾ ಮಾಡಿಬಿಡೋಣ ಎಂದುಕೊಂಡು ಹೊರಡುವುದು ಜಾಣತನ ಎನಿಸುವುದಿಲ್ಲ. ತಿಥಿಯಲ್ಲಿ ದೃಶ್ಯದಿಂದ ದೃಶ್ಯಕ್ಕೆ ಕುತೂಹಲ ಕೆರಳಿಸುವ ಕತೆ ಇದೆ. ಹುಡುಗಿಯ ಹಿಂದೆ ಬೀಳುವ ಹುಡುಗನಿಗೆ ಹುಡುಗಿ ಸಿಗುತ್ತಾಳಾ ಎನ್ನುವ ಕತೆಯ ಜೊತೆಗೆ, ಹಣಕ್ಕಾಗಿ ಪರಿಪಾಟಲು ಪಡುವ ತಮ್ಮಣ್ಣ, ಸುತ್ತಿ ಬಳಸಿ ಅಲ್ಲಲ್ಲೇ ಓಡಾಡುವ ಗಡ್ಡಪ್ಪ ಅವರ ಮುಂದಿನ ನಡೆಗಳು ಕುತೂಹಲ ಹುಟ್ಟಿಸುತ್ತವೆ. ಪ್ರಾರಂಭದಿಂದ ತಮ್ಮಣ್ಣನಿಗೆ ಹಣ ಸಿಕ್ಕೆಬಿಟ್ಟಿತು, ಆಲ್ ಇಸ್ ವೆಲ್ ಎಂದುಕೊಂಡರೆ ಕೊನೆಯಲ್ಲಿ ಉಲ್ಟಾ ಆಗುತ್ತದೆ, ಹಾಗೆಯೇ ಪ್ರಾರಂಭದಿಂದಲೂ ಸ್ವಲ್ಪವೂ ಮೃದುಧೋರಣೆ ತೋರದೆ ತಿರಸ್ಕರಿಸುತ್ತಲೇ ಸಾಗುವ ಕಾವೇರಿ, ಕೊನೆಯಲ್ಲಿ ಅಚಾನಕ್ ಆಗಿ ಅಭಿಗೆ ಒಲಿಯುತ್ತಾಳೆ. ನಿರೀಕ್ಷೆ ಮೀರಿ ಇದೆಲ್ಲವೂ ಚಿತ್ರದಲ್ಲಿ ಸಾಗುತ್ತದೆ. ಹಾಗಾಗಿಯೇ ತಿಥಿ ಕಲಾತ್ಮಕವಾಗಿಯೂ, ಕಮರ್ಷಿಯಲ್ ಆಗಿಯೂ ಸೂಪರ್ ಎನಿಸಿಕೊಳ್ಳುತ್ತದೆ. ಈ ಅಂತಃಸತ್ವವನ್ನು ಅರಿತುಕೊಳ್ಳದೆ ಬರೀ ತಿಥಿಯ ಮೇಲ್ಪದರವನ್ನು ಕಣ್ಣಿಗೊತ್ತಿಕೊಂಡಾಗ ವಿಕೃತಿಗಳು ಜನ್ಮ ತಾಳುತ್ತವೆ.
ಹಾಗೆಯೇ ತಿಥಿಯ ಕಲಾವಿದರನ್ನು ತೆಗೆದುಕೊಳ್ಳೋಣ. ಕ್ಯಾಮೆರಾ ಎದುರಿಸಿ ಗೊತ್ತಿಲ್ಲದ, ಹಳ್ಳಿಜನ ಅವರು. ನಿರ್ದೇಶಕರು/ಬರಹಗಾರರು ಅವರನ್ನು ಅರ್ಥೈಸಿಕೊಂಡು, ಅಧ್ಯಯನ ಮಾಡಿ, ಅವರ ವ್ಯಕ್ತಿತ್ವ, ಶಕ್ತಿಯನ್ನು ಅರಿತುಕೊಂಡು, ದೌರ್ಬಲ್ಯಗಳನ್ನು ನೆನಪಲ್ಲಿಟ್ಟುಕೊಂಡು ಪಾತ್ರ ಹೆಣೆದಿದ್ದು ಗೊತ್ತೇ ಇದೆ. ಹಾಗೆಯೇ ಸಂಭಾಷಣೆಗಳೂ ಕೂಡ ಆ ಸಂದರ್ಭಕ್ಕೆ ಅವರು ಮಾತಾಡುವುದೇ ಆಗಿತ್ತು.
ಆದರೆ ನಾವು ಅದನ್ನು ತಪ್ಪಾಗಿ ಅರ್ಥೈಸಿಕೊಂಡೆವು. ತಿಥಿ ಕಲಾವಿದರ ಬಲ ಎಂದರೆ ದ್ವಂದ್ವಾರ್ಥ ಪೋಲಿ ಮಾತುಗಳು ಎಂದುಕೊಂಡದ್ದೆ ಪುಂಖಾನುಪುಂಖವಾಗಿ ಅದನ್ನು ಬರೆದು ಅವರನ್ನು ಬಳಸಿಕೊಂಡು ಸಿನಿಮಾ ಮಾಡಲು ತೊಡಗಿದೆವು. ತಿಥಿಯ ನಂತರ ಈವರೆಗೆ ಎರಡು ಚಿತ್ರಗಳು ಬಿಡುಗಡೆಯಾಗಿವೆ, ಇನ್ನು ಮೂರ್ನಾಲ್ಕು ಚಿತ್ರಗಳು ಇಷ್ಟರಲ್ಲೇ ಬಿಡುಗಡೆಯಾಗಲಿವೆ. ಎಲ್ಲದರಲ್ಲೂ ಸಾಮಾನ್ಯವಾದ ಒಂದೇ ಅಂಶ ಎಂದರೆ ಅದು ದ್ವಂದ್ವಾರ್ಥ, ಪೋಲಿ, ಅಶ್ಲೀಲ ಬೈಗುಳಯುಕ್ತ ಮಾತುಗಳು.ಸುಮ್ಮನೆ ಗಮನಿಸಿ, ನಮಗೊಂದಿಷ್ಟು ಕಲಾವಿದರಿದ್ದಾರೆ, ಅವರಿಗೆ ಅವರದೇ ಆದ ಬಲಾಬಲಗಳಿವೆ ಎಂಬುದನ್ನು ಅರ್ಥೈಸಿಕೊಂಡು, ಅವರನ್ನು ಬಳಸಿಕೊಂಡರೆ, ಹಣ ಹಾಕಲು ನಿರ್ಮಾಪಕರು ಸಿಗುತ್ತಾರೆ ಎಂದುಕೊಳ್ಳುವುದಾದರೆ, ಒಂದೊಳ್ಳೆ ಹಳ್ಳಿಸೊಗಡಿನ ಚಿತ್ರವನ್ನೇ ಮಾಡಬಹುದಲ್ಲವೇ? ಬದಲಿಗೆ ಅವಸರದ ಅಡುಗೆಯಿಂದ ಲಾಭವಿದೆಯೇ? ಇಷ್ಟಕ್ಕೂ ಸಿನಿಮಾ ದೃಶ್ಯ ಮಾಧ್ಯಮವಲ್ಲವೇ? ಬರೀ ಅಶ್ಲೀಲ ದ್ವಂದ್ವಾರ್ಥದ ಮಾತುಗಳಿಂದಲೇ ಯಶಸ್ಸಿದೆಯೇ..? ಖಂಡಿತಾ ಇಲ್ಲ.
ಚಿತ್ರರಂಗಕ್ಕೆ ಇದೇನೂ ಹೊಸದಲ್ಲ. ನಮ್ಮಲ್ಲಿ ಅಂತಃಸತ್ವ ಅರಿಯದೆ ಸಿನಿಮಾ ಮಾಡುವವರು ಕಡಿಮೆಯೇನಲ್ಲ. ಪೋಲಿಸ್ ಸ್ಟೋರಿ ಬಂದಾಕ್ಷಣ ಅಕ್ಕನ್-ಅಮ್ಮನ್ ಬೈಗುಳದ ಸಿನಿಮಾಗಳು ಸಾಲು ಸಾಲಾಗಿ ಬಂದವು, ಆದರೆ ಮಾಸ್ಟರ್ ಪೀಸ್ ಎನಿಸಿಕೊಂಡದ್ದು ಪೋಲಿಸ್ ಸ್ಟೋರಿ ಮಾತ್ರ. ಹಾಗೆಯೇ ಓಂ ಬಂದಾಕ್ಷಣ ಲಾಂಗು ಹಿಡಿದು ಝಳಪಿಸುವ ಚಿತ್ರಗಳು ಅಬ್ಬರಿಸಿದವು. ಆದರೆ ಓಂ ಮೀರಿಸಿದ ಚಿತ್ರ ಬರಲಿಲ್ಲ. ಎ ಚಿತ್ರದ ನಂತರ ತಿಕ್ಕಲು ನಿರೂಪಣೆಯ, ಮುಂಗಾರುಮಳೆ ನಂತರ ಮಾತಿನ ಮಂಟಪದ ಚಿತ್ರಗಳು ಬಂದವು, ಹೋದವು. ಹೊಸಬರು, ಯುವ ನಿರ್ದೇಶಕರು ಎಲ್ಲರೂ ಜಾಲಾಡಿದರು, ಆದರೆ ಸಿನೆಮಾಗಳ ಗುಣಮಟ್ಟ ಕುಸಿಯಿತೆ ಹೊರತು ಮೇಲೇಳಲಿಲ್ಲ.
ಇನ್ನು ಟ್ರೈಲರ್ ಗಳದ್ದೂ ಅದೇ ಕತೆ. ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಕನ್ನಡದ ಮಟ್ಟಿಗೆ ಟ್ರೈಲರ್ ಜಗತ್ತಿನಲ್ಲಿ ಅಬ್ಬರಿಸಿದ ಚಿತ್ರ. ಅದರಲ್ಲಿ ದ್ವಂದ್ವಾರ್ಥ ಇತ್ತಾದರೂ ಅದಕ್ಕೂ ಮೀರಿದ ತುಂಟತನವಿತ್ತು, ಮಾಧುರ್ಯವಿತ್ತು, ಭಾವನೆ ಇತ್ತು. ಆದರೆ ಅದು ಎರ್ರಾಬಿರ್ರಿ ಹಿಟ್ ಆದದ್ದೇ ಆದದ್ದು ಅದರ ಅಂತಃಸತ್ವ ಅರಿಯದ ಗೆಳೆಯರು ದ್ವಂದ್ವಾರ್ಥ ತುಂಬಿದ ಕಿವಿ ಮುಚ್ಚಿಕೊಳ್ಳುವ, ನಾಲ್ಕುಜನ ಗೆಳೆಯರು, ಖಾಸಗಿಯಾಗಿ ಮಾತಾಡಿಕೊಳ್ಳುವ ಭಾಷೆಯನ್ನೂ ಹೆಣ್ಣು ಗಂಡು ಬೇಧವಿಲ್ಲದೆ, ವಯೋಮಿತಿಯ ಅಂತರವಿಲ್ಲದೆ ಆಡುವ ಅಸಹ್ಯಗಳನ್ನು ಟ್ರೈಲರ್ ನಲ್ಲಿ ಬಿತ್ತರಿಸಿದರು. ಡಬಲ್ ಮೀನಿಂಗ್ ಇದ್ದರೆ ಯೂ ಟ್ಯೂಬ್ ಗೆ ಲೈಕ್ಸ್ ಜಾಸ್ತಿಯಾಗುತ್ತದೆ ಎಂದು ಅದ್ಯಾವ ಪುಣ್ಯಾತ್ಮ ಹೇಳಿದನೋ? ಈವತ್ತಿಗೆ ಸುಮ್ಮನೆ ತೆರೆದುನೋಡಿ, ಒಳ್ಳೊಳ್ಳೆ ಚಿತ್ರದ ಟ್ರೈಲರ್ ಗಿಂತ ಅಶ್ಲೀಲ-ದ್ವಂದ್ವಾರ್ಥ ಸಂಭಾಷಣೆ ಇರುವ ಟ್ರೈಲರ್ ಗಳು ಲೆಕ್ಕವಿಲ್ಲದಷ್ಟು ಸಿಗುತ್ತವೆ. ಹುಡುಗ ಹುಡುಗಿ ಮಾತಾಡುವ ಮಾತಿನಲ್ಲಿ ಸೆಕ್ಸ್ ಒಂದೇ ತುಂಬಿರುತ್ತದೆ, ಎನ್ನುವ ಕಲ್ಪನೆ ನೀಡುವ ಟ್ರೈಲರ್ ಗಳು ನೋಡಲು ಖುಷಿ ಕೊಡುತ್ತವೆಯೋ ಅಥವಾ ಮುಜುಗರ ತರುತ್ತವೋ? ಅವರವರ ಭಾವಕ್ಕೆ ಭಕುತಿಗೆ ಎಂದುಕೊಂಡು ಅವರವರವ ಇಷ್ಟಕ್ಕೆ ಬಿಟ್ಟುಬಿಡಬಹುದೇನೋ?ಆದರೆ ಇಂದಿನ ಯುವಜನಾಂಗ ಬರೀ ಸೆಕ್ಸ್ ಬಗ್ಗೆಯೇ ತಲೆ ಕೆಡಿಸಿಕೊಳ್ಳುತ್ತದೆ, ಅಶ್ಲೀಲವಾಗಿ ಲಿಂಗ ತಾರತಮ್ಯವಿಲ್ಲದೆ ಹಿಗ್ಗಾಮುಗ್ಗಾ ಪೋಲಿ ಮಾತುಗಳನ್ನು ಆಡುತ್ತದೆ, ಜವಾಬ್ದಾರಿಯುತವಾಗಿ ಮುಂದಿನ ಪೀಳಿಗೆಗೆ ಮಾದರಿಯಾಗುವುದಿಲ್ಲ ಎಂಬಿತ್ಯಾದಿ  ಸಂದೇಶಗಳನ್ನು ನಮ್ಮ ಸಿನೆಮಾಗಳ ಮೂಲಕ ಸಾರ್ವಜನಿಕರಿಗೆ ನಾವೇ ಉಣ ಬಡಿಸಿದಂತಾಗುತ್ತದೆ ಅಲ್ಲವೇ?
ಇದರ ಜೊತೆಗೆ ನಾವು ಅಂದರೆ ಚಿತ್ರಕರ್ಮಿಗಳು ಒಂದು ಮಿತಿಯನ್ನು ನಾವೇ ಹಾಕಿಕೊಂಡಹಾಗಾಗುತ್ತದೆಯಲ್ಲದೇ, ಪ್ರೇಕ್ಷಕರನ್ನೂ ನಿರ್ಧಿಷ್ಟಮಿತಿಗೆ ಸೀಮಿತಗೊಳಿಸಿದಂತಾಗುತ್ತದೆಯಲ್ಲವೇ? ಚಿತ್ರರಂಗದ ಗುಣಮಟ್ಟವೂ ಕುಸಿಯುವುದರ ಜೊತೆಗೆ ಸಿನಿಮಾ ಎಂದರೆ ಒಂದು ಕತೆಯ ದೃಶ್ಯಕಾವ್ಯ ಎಂಬುದು ಹಾರಿಹೋಗಿ, ಸಿನಿಮಾ ಎಂದರೆ ಪೋಲಿಮಾತುಗಳು, ಸಿನಿಮಾ ಎಂದರೆ ಬೈಗುಳಗಳೂ ಎನಿಸಿಬಿಡುತ್ತದಂತೂ ಸತ್ಯ.ಏನಂತೀರಿ..?

Monday, January 23, 2017

ನಿನ್ನ ಕಣ್ಣ ನೋಟದಲ್ಲಿ ನೂರು ಅಸೆ ಕಂಡೆನು

“ಮುಖದಲ್ಲಿನ ಸೌಂದರ್ಯ ಮೋಸ ಮಾಡಬಹುದು, ಆದರೆ ಕಣ್ಣಲ್ಲಿನ ಸತ್ಯವನ್ನು ಮರೆ ಮಾಚಲು ಸಾಧ್ಯವಾಗದು..” ಎನ್ನುವ ಮಾತಂತೂ ಖಂಡಿತ ಸತ್ಯ. ಕಣ್ಣುಗಳು ಕತೆ ಹೇಳುತ್ತವೆ, ಭಾವ ವ್ಯಕ್ತ ಪಡಿಸುತ್ತವೆ, ಸೆಳೆಯುತ್ತವೆ, ತಿರಸ್ಕರಿಸುತ್ತವೆ.. ವ್ಯಕ್ತಿ ಎದುರಿದ್ದಾಗಲೂ ಅಷ್ಟೇ, ಅಥವಾ ಆತನ/ಆಕೆಯ ಫೋಟೋ ನೋಡಿದಾಗಲೂ ಅಷ್ಟೇ. ಅಯ್ಯೋ ಫೋಟೋದಲ್ಲಿ ನೋಡಿದ್ರೆ ಎದುರಿಗೆ ಬಂದಂಗಾಗುತ್ತೆ ಎನ್ನುವಂತೆ ಮಾಡುವ ಶಕ್ತಿ ಇರುವುದು ಕಣ್ಣುಗಳಿಗೆ ಕಾಂತಿಗೆ ಮಾತ್ರ.
ಎಲ್ ಸೀಕ್ರೆಟೋ ಡಿ ಸುಸ್ ಒಜೋಸ್ ಎನ್ನುವ ಸ್ಪ್ಯಾನಿಷ್ ಭಾಷೆಯ ಚಿತ್ರವಿದೆ. ಅದನ್ನೇ ಅದೇ ಅರ್ಥದ ಇಂಗ್ಲೀಷ್ ನಲ್ಲಿ ದಿ ಸೀಕ್ರೆಟ್ ಇನ್ ದೈರ್ ಐಯ್ಸ್ ಎಂದು ಹಾಲಿವುಡ್ ನಲ್ಲಿ ರಿಮೇಕ್ ಮಾಡಿದ್ದರು. ಒಬ್ಬ ಸುಂದರಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ಬರ್ಬರವಾಗಿ ಕೊಲೆಯಾಗಿ ಬಿಡುತ್ತಾಳೆ. ಅದರ ಪತ್ತೆಯ ಜಾಡು ಹಿಡಿದುಹೊರಡುವ ಪತ್ತೆದಾರನಿಗೆ ಸಿಗುವ ಫೋಟೋ, ಅದರಲ್ಲಿದ್ದ ವ್ಯಕ್ತಿಯ ಕಣ್ಣುಗಳು ಸತ್ಯ ಹೇಳಿಬಿಡುತ್ತವೆ.
ನಮ್ಮ ಶಾಲಾ, ಕಾಲೇಜು ದಿನಗಳಲ್ಲಿ, ಈಗಲೂ ಮೊದಲ ಆಕರ್ಷಣೆ ಕಣ್ಣುಗಳೇ ಎಂಬುದನ್ನು ಒಪ್ಪಿಕೊಳ್ಳಬೇಕು. ಫೋಟೋ ನೋಡಿದ ತಕ್ಷಣ ಸೆಳೆಯುವುದು ನನ್ನ ಮಟ್ಟಿಗೆ ಕಣ್ಣುಗಳೇ.ಅರಳುಗಣ್ಣು, ಬೆಕ್ಕಿನ ಕಣ್ಣು, ಸೂಜಿಗಣ್ಣು, ಬಟ್ಟಲು ಕಣ್ಣು, ಬೆಕ್ಕಿನಕಣ್ಣು, ಮೀನಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ, ಗಿಣಿ ಕಣ್ಣು, ನವಿಲುಕಣ್ಣು, ಜಿಂಕೆ ಕಣ್ಣು... ಹೀಗೆ ಕಣ್ಣುಗಳ ಬಗ್ಗೆ ಬರೆಯುತ್ತೇವೆ. ಹಾಗೆಯೇ ನಿಸ್ತೇಜ ಕಣ್ಣು, ಭಾವರಹಿತ ಕಣ್ಣು ಎಂತಲೂ ಬರೆಯುತ್ತೇವೆ. ಕಣ್ಣುಗಳಲ್ಲಿ ಕಾಂತಿ ಇರಲಿಲ್ಲ, ದುರುಗುಟ್ಟಿ ನೋಡಿದ, ಅವನಿಗೆ ಜೊತೆಯಲ್ಲಿರಲು ಇಷ್ಟವಿರಲಿಲ್ಲ ಎಂಬುದು ಅವನ ದೃಷ್ಟಿಯಲ್ಲಿಯೇ ಗೊತ್ತಾಗುತ್ತಿತ್ತು, ಕಣ್ಸನ್ನೆಯಲ್ಲಿ ಕರೆದಳು.. ಹೀಗೆ ನಾವು ಒಂದಲ್ಲ ಒಂದು ರೀತಿಯಲ್ಲಿ ಕಣ್ಣಿನ ಸತ್ಯಕ್ಕೆ ತೆರೆದುಕೊಂಡದ್ದು ಅಪ್ಪಿಕೊಂಡದ್ದು ಇದ್ದೇ ಇದೆ. ಇಷ್ಟವಾದವರೂ ಅದೆಷ್ಟೇ ದೂರವಿದ್ದರೂ, ಕಣ್ಣುಗಳು ಸಂಧಿಸಿ ಮಾತಾಡುವ ಪರಿಗೆ ಅದೇಗೆ ವಿವರಣೆ ಕೊಡಲು ಸಾಧ್ಯ ನೀವೇ ಹೇಳಿ? ಅದ್ಯಾವ ಜೂಮ್ ಲೆನ್ಸ್ ಇದಕ್ಕೆ ಸರಿಗಟ್ಟಲು ಸಾಧ್ಯ?
ಆ ಸುಂದರಿ ಅವನನ್ನು ಕೊಲೆ ಮಾಡಿದಳು ಎನ್ನುವ ಹೆಡ್ ಲೈನ್ ಬರೆಯುತ್ತೇವೆ, ನಾನು ಮಾಧ್ಯಮದಲ್ಲಿ  ಕೆಲಸ ಮಾಡುತ್ತಿದ್ದಾಗ ಕೆಲವೊಬ್ಬರನ್ನು ಸಂಧಿಸುವ ಅವಕಾಶ ಒದಗುತ್ತಿತ್ತು. ಇಷ್ಟು ಚಂದನೆಯ ಹುಡುಗಿ ಕೊಲೆ ಮಾಡಿಸಲು ಸಾಧ್ಯವೇ? ಅದಕ್ಕೆ ಪ್ಲಾನ್ ಮಾಡಲು, ಅದರ ಪ್ರತಿಕ್ಷಣದ ವರದಿ ತರಿಸಿಕೊಳ್ಳಲು ಸಾಧ್ಯವೇ ಎಂದೆಲ್ಲಾ ಯೋಚಿಸುತ್ತಿತ್ತು, ಆದರೆ ಎದುರಿಗೆ ಕಂಡಾಗ ಕಣ್ಣುಗಳಲ್ಲಿ ಕ್ರೌರ್ಯ ಇಣುಕುತ್ತಿತ್ತು. ಮುಖದಲ್ಲಿನ ಅಮಾಯಕತೆಯ ಮುಖವಾಡವನ್ನು ಅದು ಕ್ಷಣ ಮಾತ್ರದಲ್ಲಿ ನಿವಾಳಿಸಿ ಎಸೆದುಬಿಡುತ್ತಿತ್ತು. ಕಣ್ಣುಗಳು ಹೇಗಿದ್ದರೆ ಚಂದ ಎನ್ನುವುದು ಮಿಲಿಯನ್ ಡಾಲರು ಪ್ರಶ್ನೆ. ಮುಖ ಅಂದಕ್ಕೆ ಕಾಣಬೇಕಾದರೆ ಬಟ್ಟಲುಗಣ್ಣು ಇರಬೇಕೆ? ಅಥವಾ ಸೂಜಿ ಗಣ್ಣು ಇರಬೇಕೆ? ಆದರೆ ಕಣ್ಣುಗಳಲ್ಲಿ ಭಾವ ಇರಬೇಕು, ಮತ್ತದು ಮನದಾಳದ ಭಾವವಾಗಿರಬೇಕು. ಹಾಗಾದಾಗಲೇ ವ್ಯಕ್ತಿ ಇಷ್ಟವಾಗುತ್ತ ಹೋಗುವುದಲ್ಲವೇ? ಫೋಟೋ ನೋಡಿ, ಎಷ್ಟು ಚಂದ ಇದ್ದಾಳೆ ಎಂದುಕೊಂಡು ಸಾಂಗತ್ಯ ಬೆಳಸಿದರೆ ಹತ್ತಿರಕ್ಕೆ ನೋಡಿದಾಗ ಅದರಲ್ಲಿ ಕೃತಕತೆ ಕಾಣಿಸಿಬಿಟ್ಟರೆ..? ಅದಕ್ಕೆ ಹೇಳುವುದು ಕಣ್ಣಲ್ಲಿನ ಸತ್ಯವನ್ನು ಮರೆಮಾಚುವುದು ಕಷ್ಟದ ಕೆಲಸ ಎಂದು.
ಆದರೂ ಕೆಲವು ಸುಂದರಿಯರ ಕಣ್ಣುಗಳು ಅಚಾನಕ್ ಆಗಿ ಸೆಳೆದುಬಿಡುತ್ತದೆ. ಯಾವುದೋ ಜನಜಂಗುಳಿಯಲ್ಲಿರಬಹುದು, ನಾವು ಕೆಲಸ ಮಾಡುವ ಜಾಗದಲ್ಲಿರಬಹುದು, ಅವರು ಪರಿಚಿತರಿರಬಹುದು, ಅಪರಿಚಿತರಿರಬಹುದು.. ನನಗಂತೂ ತುಂಬಾ ಸಲ ಆಗಿದೆ, ಈ ಫೇಸ್ಬುಕ್ ನಲ್ಲಿನ ಕೆಲವು ಫೋಟೋಗಳು ಸೆಳೆದಿವೆ. ಅವರ ಕಣ್ಣಲ್ಲಿನ ಕಾಂತಿಗೆ, ಭಾವಕ್ಕೆ ಸೆಳೆತಕ್ಕೆ ಬೀಳದೆ, ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎನಿಸಿದೆ.. ಸೆಳೆಯುವ ಸುಂದರಿಗೆ ದುಂಬಾಲು ಬೀಳುವ ಮನಸ್ಸನ್ನು ಹತೋಟಿಗೆ ತರುವುದು ಸಾಧ್ಯವೇ?
ಇನ್ನು ಸಿನೆಮಾಗಳಲ್ಲಿ ಕಣ್ಣುಗಳನ್ನೂ ವರ್ಣಿಸಿದ ಹಾಡುಗಳಿಗೆ ಬರವಿಲ್ಲ.
“ನಿನ್ನ ಕಣ್ಣ ನೋಟದಲ್ಲಿ  ನೂರು ಅಸೆ ಕಂಡೆನು..”
“ಕಣ್ಣಂಚಿನ ಈ ಮಾತಲಿ...”
“ನಿನ್ನ ಕಣ್ಣುಗಳು ..”
“ನಯನ ನಯನ ಮಿಲನ..”
“ನಗುವ ನಯನ, ಮಧುರ ಮೌನ..”
“ನಯನದಲ್ಲಿ ನೀನಿರಲು..”
“ನಯನದಲಿ ನೀನಿರಲು...”


ಹೀಗೆ ಪಟ್ಟಿ ಉದ್ದವಾಗುತ್ತದೆ. ನಿನ್ನ ಕಣ್ಣ ನೋಟದಲ್ಲಿ ಹಾಡು ಕೇಳುತ್ತಾ ಕೇಳುತ್ತಾ ನನ್ನಲ್ಲೇ ಕಳೆದುಹೋದೆ ನೋಡಿ, ಇಷ್ಟೆಲ್ಲಾ ಬರೆಯಬೇಕಾಯಿತು. ಸೆಳೆಯುವ, ಆಕರ್ಷಣೀಯ ಎಂದು ನಿಮಗನಿಸಿದ ಕಣ್ಣು ಯಾರದು..?

Sunday, January 15, 2017

ಚಿತ್ರಸಂತೆಯಲ್ಲಿ ಒಂದು ಕನವರಿಕೆ:

ಬಿಎಡ್ ನಲ್ಲಿ ಟೀಚಿಂಗ್ ಏಡ್ ಇರುತ್ತದೆ. ಅಂದರೆ ವಿದ್ಯಾರ್ಥಿ ಶಿಕ್ಷಕರು ಪಾಠ ಮಾಡುವಾಗ ಪಾಠವನ್ನು ಪರಿಣಾಮಕಾರಿಯನ್ನಾಗಿ ಮಾಡಲು ಆ ಪಾಠಕ್ಕೆ ಸಂಬಂಧಿಸಿದ ಚಿತ್ರಗಳನ್ನು ಮಕ್ಕಳಿಗೆ ತೋರಿಸಿದರೆ ಪಾಠ ಮಕ್ಕಳ ಮನಸ್ಸಿಗೆ ಇಳಿಯುತ್ತದೆ ಎಂಬುದಾಗಿ. ನನಗೆ ಟೀಚಿಂಗ್ ಏಡ್ ಅತೀ ಸುಲಭದ ಕೆಲಸವಾಗಿತ್ತು. ಹಾಗೆಯೇ ನಮ್ಮ ವಾರಾಂತ್ಯದ ಖರ್ಚಿಗೆ ದಾರಿಯೂ ಆಗಿತ್ತು. ಕುವೆಂಪು, ಕಾರಂತ ಮುಂತಾದ ಲೇಖಕರ, ಗಾಂಧೀ, ಬೋಸ್, ಮುಂತಾದ ಸ್ವಾತಂತ್ರ್ಯ ಹೋರಾಟಗಾರರ, ವಿಜ್ಞಾನಿಗಳ ಭಾವಚಿತ್ರಗಳು, ಪರಿಸರ, ನದಿ, ಸೇತುವೆ, ಉಪಕರಣಗಳು, ನಕ್ಷೆಗಳು... ಹೀಗೆ ಇವೆಲ್ಲವನ್ನೂ ನಮ್ಮ ಹಾಸ್ಟೆಲ್ ರೂಮಿಗೆ ವಿದ್ಯಾರ್ಥಿಗಳು ತೆಗೆದುಕೊಂಡು ಬಂದು ಕೊಡುತ್ತಿದ್ದರು, ಒಂದು ಡ್ರಾಯಿಂಗ್ ಶೀಟ್ನ ಜೊತೆಗೆ. ದಿನಕ್ಕೆರೆಡು ಬರೆದರೆ ಆವತ್ತಿನ ಹಾಸ್ಟೆಲ್ ಊಟಕ್ಕೆ ಬೈ ಹೇಳಿ, ಹೋಟೆಲ್ಲಿಗೆ ನುಗ್ಗಲು ಅಣಿಯಾಗುತ್ತಿದ್ದೆವು. ನಾಲ್ಕೈದು ಬರೆದರಂತೂ ಸಿನಿಮಾ, ಊಟ ಎಲ್ಲದಕ್ಕೂ ಹಣ ಆಗುತ್ತಿತ್ತು. 
ಬೆಂಗಳೂರಿಗೆ ಸಿನಿಮಾ ಜಗತ್ತಿಗೆ ಬಂದಾಗ ಮತ್ತದೇ ಚಿತ್ರಕಲೆ ನನಗೆ ಸಹಾಯ ಮಾಡಿದ್ದಂತೂ ಸತ್ಯ. ಹಾಗೆಯೇ ನನ್ನ ಮೊದಲ ಚಿತ್ರವೂ ಅಚ್ಚುಕಟ್ಟಾಗಿ ಮೂಡಿ ಬರಲು ಕಾರಣ ನನ್ನದೇ ಚಿತ್ರಕಲೆ. ಆವಾಗ ಸ್ಟೋರಿ ಬೋರ್ಡ್ ಅಪರೂಪವಾಗಿತ್ತು. ನಾನು ಮಾತ್ರ ನನ್ನ ಚಿತ್ರದ ಪ್ರಮುಖ ದೃಶ್ಯಗಳಿಗೆ ಸ್ಟೋರಿ ಬೋರ್ಡ್ ಮಾಡಿದ್ದೆ. ಹಾಗಾಗಿ ಹಣ, ಸಮಯ ಎರಡೂ ಉಳಿದಿತ್ತು.
ಇಂತಹದ್ದೇ ಸಮಯದಲ್ಲಿ ಚಿತ್ರಸಂತೆ ಬಂದಿತ್ತು. ನಾನು ಚಿತ್ರ ಬರೆಯುವುದನ್ನು ನೋಡಿದ ನಾದಿನಿ ಮಾನಸ ಬರೆಯಲು ಹುರಿದುಂಬಿಸಿದಳು. ಸಹನಾ,ಸ್ವಸ್ತಿಕ ಬರೆಯಲೇ ಬೇಕೆಂದು ಹಠ ಹಿಡಿದರು. ಅವರ ಆಸಕ್ತಿಯಿಂದಾಗಿ ಆ ವರ್ಷದ ಚಿತ್ರಸಂತೆಯಲ್ಲಿ ಒಂದು ಪ್ರದರ್ಶನ ಇಟ್ಟುಬಿಡೋಣ ಎಂದುಕೊಂಡು ಪೇಯಿಂಟ್ ಬ್ರಷ್ ಕೈಗೆತ್ತಿಕೊಂಡಿದ್ದೆ. ಒಂದು ತಿಂಗಳ ಸಮಯದಲ್ಲಿ ಒಂದಷ್ಟು ಪೇಯಿಂಟ್ ಮಾಡಿದೆ. ಅವೆಲ್ಲವನ್ನೂ ಚಿತ್ರಸಂತೆಯಲ್ಲಿ ಪ್ರದರ್ಶನಕ್ಕಿಟ್ಟೆ. ಬೇರೆ ಬೇರೆ ಕಾರಣಗಳಿಂದ ನಮಗೆ ಸಿಕ್ಕಿದ್ದ ಜಾಗ ಬದಲಾಗಿ, ಚಿತ್ರಸಂತೆಯ ಆಯೋಜಕರು ದಿಕ್ಕಾಪಾಲಾಗಿ ಅವ್ಯವಸ್ತೆಯುಂಟಾಗಿ ನಮಗೆ ಬದಲಿ ಜಾಗವನ್ನು ಕೊಡುವಾಗಲೇ ಮದ್ಯಾಹ್ನವಾಗಿತ್ತು. ಆದರೆ ಆವಾಗ ಸಿಕ್ಕ ಪ್ರೋತ್ಸಾಹ ಮುಂದಿನ ಚಿತ್ರಸಂತೆಯಲ್ಲಿ ಇನ್ನಷ್ಟು ಚಿತ್ರಗಳನ್ನು ಬರೆದು ಪ್ರದರ್ಶನಕ್ಕಿಡಬೇಕು ಎನಿಸಿಬಿಟ್ಟಿತ್ತು, ವ್ಯವಸ್ತಿತವಾಗಿ ಮತ್ತು ಚಿಂತಾನಾತ್ಮಕವಾಗಿ ಬೇರೆ ಬೇರೆ ಶೈಲಿಯಲ್ಲಿ ಚಿತ್ರಗಳನ್ನು ರಚಿಸಲು ಮನಸ್ಸು ಸಿದ್ಧಗೊಂಡಿತ್ತು.
ಆದರೆ ಆನಂತರ ಮತ್ತೆ ಬ್ರಷ್ ಹಿಡಿಯಲು ಸಾಧ್ಯವಾಗಿಲ್ಲ. ಪೇಂಟಿಂಗ್ ಗಳನ್ನೂ ನೋಡಿದಾಗ ಬರೆಯಲು ಮನಸ್ಸಾಗುತ್ತದೆಯಾದರೂ ಅದೇಕೋ ಏನೋ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈವತ್ತು ಚಿತ್ರಸಂತೆಗೆ ಹೋದಾಗ ಇದೆಲ್ಲಾ ನೆನಪಾಯಿತು, ಬರುವ ವರ್ಷದ ಚಿತ್ರಸಂತೆಗೆ ಭಾಗವಹಿಸಲೇಬೇಕು ಎಂದು ನಿರ್ಧರಿಸಿದೆ.

ಸಾಧ್ಯವಾಗುತ್ತದಾ..?