Friday, April 12, 2013

ತೆರೆಯ ಹಿಂದೆ...

ದ್ವೀಪ ಚಿತ್ರದ ಎಲ್ಲಾ ತಯಾರಿಯಾಗಿತ್ತು. ಅದರ ಬರಹದ ಕೆಲಸವೆಲ್ಲಾ ತೃಪ್ತಿಕರವಾಗಿ ಬಂದಿತ್ತು. ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಮಳೆಯ ಅವಶ್ಯಕತೆ ಅಗತ್ಯವಿತ್ತು. ಯಾಕೆಂದರೆ ದ್ವೀಪ ಚಿತ್ರದಲ್ಲಿ ಮಳೆ ಒಂದು ಪ್ರಮುಖವಾದ ಭಾಗ ಎನ್ನಬಹುದು. ಹಾಗಾಗಿ ಚಿತ್ರೀಕರಣವನ್ನು ಆಗಸ್ಟ್ ತಿಂಗಳಿನಿಂದ ಪ್ರಾರಂಭಿಸುವ ಯೋಜನೆಹಾಕಿ ಎಲ್ಲ ತಂತ್ರಜ್ಞರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಆಗಸ್ಟ್ ತಿಂಗಳಲ್ಲಿ ಸಿದ್ಧವಾಗಿರುವಂತೆ ಹೇಳಿಯೂ ಆಗಿತ್ತು. ಆದರೆ ಅಷ್ಟರಲ್ಲೇ ಡಾ.ರಾಜ್ ಕುಮಾರ್ ರವರ ಅಪಹರಣವಾಯಿತು. ಮತ್ತದು ಸುಲಭಕ್ಕೆ ಮುಗಿಯದೆ ನೂರೆಂಟು ದಿನಗಳವರೆಗಿನ ಜಗ್ಗಾಟವಾಯಿತು. ಪ್ರಹಸನ ಸುಖಾಂತ್ಯವಾದರೂ ಮಳೆಗಾಲ ಮುಗಿದುಹೋಗಿದ್ದರಿಂದ ಚಿತ್ರೀಕರಣವನ್ನು ಮತ್ತೆ ಪ್ರಾರಂಭಿಸಲು ಮತ್ತೆ ಮಳೆಗಾಲವನ್ನು ಕಾಯುವ ಸಂದರ್ಭ ಚಿತ್ರತಂಡಕ್ಕೆ ಎದುರಾಯಿತು.
ಗಿರೀಶ್ ಕಾಸರವಳ್ಳಿಯವರು ತಮ್ಮ ತಬರನ ಕಥೆ ಚಿತ್ರ ಮಾಡುವಾಗ ಅದರ ಚಿತ್ರಕಥೆ ಆದ ಮೇಲೆ ಅದನ್ನು ಅವಲೋಕನಕ್ಕೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರಿಗೆ ಕೊಟ್ಟಾಗ ಓದಿ ಖುಷಿಯಾದ ಪೂಚಂತೆಯವರು ಚಿತ್ರಕ್ಕೆ ನಾನೇ ಸಂಭಾಷಣೆ ಬರೆಯುತ್ತೇನೆ ಎಂದರಂತೆ. ಖುಷಿಯಾದ ಕಾಸರವಳ್ಳಿಯವರು ಆ ಜವಾಬ್ದಾರಿಯನ್ನು ಅವರಿಗೆ ವಹಿಸಿದರು.ದಿನಗಳು ಕಳೆದವು. ಪೂಚಂತೆಯವರು ಕೇಳಿದಾಗಲೆಲ್ಲಾ ಈವತ್ತು ಬರೆಯುವೆ, ನಾಳೆ ಬರೆಯುವೆ ಎನ್ನುತ್ತಲೇ ಹೋದರು.ಚಿತ್ರೀಕರಣದ ಎಲ್ಲಾ ಸಿದ್ಧತೆ ಮುಗಿದರೂ ಸಂಭಾಷಣೆ ಮಾತ್ರ ಸಿದ್ಧವಾಗಿಲ್ಲ. ಗಿರೀಶರವರು ಹೋದಾಗಲೆಲ್ಲಾ 'ನಾಳೆ ಬರೆಯುತ್ತೇನೆ..ಈಗ ಮೀನು ಹಿಡಿಯಲು ಹೋಗಬೇಕು..ತೋಟದಲ್ಲಿ ಕೆಲಸವಿದೆ ಎಂದೆಲ್ಲಾ ಹೇಳುವುದನ್ನು ಮುಂದುವರೆಸಿದಾಗ ಕಾಸರವಳ್ಳಿಯವರಿಗೆ ದಿಕ್ಕೇ ತೋಚದಂತಾಯಿತಂತೆ. ಕೊನೆಗೆ ಬೇರೆ ದಾರಿ ಕಾಣದೆ ತಾವೇ ಚಿತ್ರದ ಸಂಭಾಷಣೆ ಬರೆದು ಅದನ್ನು ಪೂಚಂತೇಯವರ ಮುಂದಿಟ್ಟಾಗ ಅದನ್ನು ಓದಿದ ಪೂಚಂತೇ ಅದರ ಮೇಲೆ 'ಸಂಭಾಷಣೆಯನ್ನ ಪೂರ್ತಿ ನೀವೇ ಬರೆಯಬಹುದು' ಎಂದು ಬರೆದುಕೊಟ್ಟರಂತೆ.
 ನಾನು ಚಿತ್ರವೊಂದಕ್ಕೆ ಚಿತ್ರಕಥೆ ಬರೆಯುತ್ತಿದ್ದೆ. ಅದೊಂದು ಮಹಿಳಾಪ್ರಧಾನ ಚಿತ್ರ. ಕಥೆ ಚೆನ್ನಾಗಿತ್ತು. ನಾಯಕಿಯ ಕಡೆಯವರೇ ನಿರ್ಮಾಪಕರೂ ಆಗಿದ್ದರು. ಸಂಪೂರ್ಣ ಚಿತ್ರಕಥೆ ಮುಗಿದ ಮೇಲೆ ನಿರ್ಮಾಪಕರು ಮತ್ತು ನಾಯಕಿಯ ಮುಂದೆ ಅದನ್ನು ಸಾದರ ಪಡಿಸಿದೆ. ನಾಯಕಿ ಖುಷಿಯಾದರು. ಆಮೇಲೆ ಅವರೊಂದು ಸಲಹೆ ಕೊಟ್ಟರು. ಅವರು ಹಿಂದಿ ಚಿತ್ರವೊಂದರ ನೃತ್ಯದ ದೃಶ್ಯಕ್ಕೆ ಮಾರುಹೋಗಿದ್ದರು.ಹಾಗಾಗಿ ಆ ದೃಶ್ಯವನ್ನು ಹಗಲು ರಾತ್ರಿ ಅಭ್ಯಾಸ ಮಾಡಿಬಿಟ್ಟಿದ್ದರು. ಅದನ್ನು ನನಗೆ ಚಿತ್ರದಲ್ಲಿ ಯಾವುದಾದರೂ ಒಂದು ಮೂಲೆಯಲ್ಲಿ ಸೇರಿಸುವಂತೆ ಒತ್ತಾಯ ಮಾಡತೊಡಗಿದರು. ನನಗೀಗ ಪೀಕಲಾಟಕ್ಕಿಟ್ಟುಕೊಂಡಿತು. ಸಂದರ್ಭ ಸರಿಯಿಲ್ಲದೆ ಅದೇಗೆ ಸುಖಾ ಸುಮ್ಮನೆ ಒಂದು ಅನಾವಶ್ಯಕ, ಕಥೆಗೆ ಪೂರಕವಲ್ಲದ ದೃಶ್ಯ ವನ್ನ ಸೇರಿಸುವುದು. ನಾನು ಖಡಾಖಂಡಿತವಾಗಿ ಸಾಧ್ಯವಿಲ್ಲ ಎಂದುಬಿಟ್ಟೆ. ಆದರೆ ಆಕೆ ಅಷ್ಟಕ್ಕೇ ಬಿಡಲಿಲ್ಲ. ಸೇರಿಸಲೆಬೇಕೆ೦ದು ಒಂದೆ ಹಠಕ್ಕೆ ಬಿದ್ದರು. ನಾನು ಒಪ್ಪಲಿಲ್ಲ. ಹಾಗಾಗಿ ಆ ಚಿತ್ರದಿಂದ ಹೊರಬೀಳಬೇಕಾಯಿತು.
ನಮ್ಮ  ಹಿರಿಯ ನಿರ್ದೇಶಕರೊಬ್ಬರ ಸಿನೆಮಾ ಅದು. ನಿರ್ಮಾಪಕರು ತಾನು ಚಿಕ್ಕದಾದರೂ ಸರಿ ಒಂದು ಪಾತ್ರ ಮಾಡೇ ಮಾಡುತ್ತೇನೆಂದು ಹಠಕ್ಕೆ ಬಿದ್ದರಂತೆ. ನಿರ್ದೇಶಕರಿಗೆ ವಿಧಿಯಿಲ್ಲ. ಹಾಗಂತ ಪಾತ್ರ ಕೊಟ್ಟರೆ ಆ ಪಾತ್ರವನ್ನೂ, ಆ ಮೂಲಕ ಸಿನೆಮಾವನ್ನೂ ಹಾಳು ಮಾಡುವುದು ಗ್ಯಾರಂಟೀ. ಹಾಗಾಗಿ ಯಾವುದಕ್ಕೂ ಇರಲಿ ಎಂದು ಒಂದು ಪೋಲಿಸ್ ಪೇದೆಯ ಪಾತ್ರವನ್ನ ನಿರ್ಮಾಪಕರಿಗೆ ಕೊಟ್ಟರು. ಚಿತ್ರದಲ್ಲಿ ಒಂದು ಸಾವಾಗುತ್ತದೆ. ಅದನ್ನು ಮಹಜರು ಕಾರ್ಯದಲ್ಲಿ ಬರುವ ಪೋಲಿಸ್ ಪೇದೆಯ ಪಾತ್ರ ಅದು. ಯಾವುದೇ ಸಂಭಾಷಣೆಯಿರಲಿಲ್ಲ.  ನಿರ್ದೇಶಕರು ತಾನು ಗೆದ್ದೆ ಎಂದು  ಬೀಗಿದರು. ನಿರ್ಮಾಪಕರು ತಾವು ಕೂಡ ಒಂದು ಪಾತ್ರವನ್ನ ಮಾಡುತ್ತಿದ್ದೇನೆಂದು ತನ್ನ ಗೆಳೆಯರಿಗೆಲ್ಲಾ ಹೇಳಿದಾಗ ಅದ್ಯಾರೋ ಅವರ ಆತ್ಮೀಯರು ಪೋಲಿಸ್ ಪೇದೆಯ ಪಾತ್ರ ಚಿಕ್ಕದಾಯಿತು. ಅದಕ್ಕಿಂತ ದೊಡ್ಡ ಪಾತ್ರ ಮಾಡು...ಎಂದು ಸಲಹೆ ಕೊಟ್ಟರು. ನಿರ್ಮಾಪಕರು ಪೇದೆಗಿಂತ ದೊಡ್ಡ ಪಾತ್ರವೆಂದರೆ ಇನ್ಸ್ ಪೆಕ್ಟರ್ ಅದಕ್ಕಿಂತ ದೊಡ್ಡದೆಂದರೆ ಎಸಿಪಿ ಎಂದು ಅರ್ಥೈಸಿಕೊಂಡವರೇ ಆ ಸಮವಸ್ತ್ರವನ್ನು ಅಂದರೆ ಎ.ಸಿ.ಪಿ. ಸಮವಸ್ತ್ರವನ್ನು ಬಾಡಿಗೆಗೆ ತರಿಸಿ ಆ ದೃಶ್ಯವನ್ನು ನಿರ್ದೇಶಕರ ಅಸಹನೆಯ ನಡುವೆಯೂ ಚಿತ್ರೀಕರಿಸಿಬಿಟ್ಟರು. ಒಂದು ಚಿಕ್ಕ ಹಳ್ಳಿಯಲ್ಲಿ ಸಾಮಾನ್ಯ ಸಾವೊಂದರ ಮಹಜರು ಕಾರ್ಯವನ್ನ ಎ.ಸಿ.ಪಿ ಮಾಡುವ ದೃಶ್ಯ ಅದೆಷ್ಟು ನಗೆಪಾಟಲು ನೀವೇ ಯೋಚಿಸಿ...

ಚಿತ್ರರಂಗದ ಕಥೆಗಳನ್ನ ಕೇಳುತ್ತಿದ್ದರೆ ಅದೇ ಒಂದು ವರ್ಣಮಯ ಸಿನೆಮಾವಾಗುತ್ತದೆ. ನಾನು ಯಾರೇ ಚಿತ್ರರಂಗದ ಹಿರಿಯರು ಸಿಕ್ಕರೂ ಅದು ಇದು ಮಾತಾಡುತ್ತ ಅವರ ನೆನಪುಗಳನ್ನು, ಆ ಕಾಲದ ಘಟನೆಗಳನ್ನ ಕೇಳುತ್ತೇನೆ. ಅವೆಲ್ಲಾ ತುಂಬಾ ಆಸಕ್ತಿಕರವಾಗಿರುತ್ತವೆ.

Thursday, April 11, 2013

ತಪ್ಪುಗಳು-ಒಪ್ಪುಗಳು...

ಆಕೆ ಖಡಕ್ ಪೋಲಿಸ್ ಅಧಿಕಾರಿ. ಅವಳ ಜೀಪು ಭರ್ರನೆ ಬಂದು ಒಂದು ಕಡೆ ನಿಲ್ಲುತ್ತದೆ. ಕೆಳಗಿಳಿದವಳೇ ತನ್ನ ಎದುರಿನ ಮರದತ್ತ ಕಣ್ಣು ಹಾಯಿಸಿ ಜೀಪಿನಿಂದ ಬೈನಾಕುಲರ್ ತೆಗೆದುಕೊಂಡು ಅದರ ಮೂಲಕ ನೋಡುತ್ತಾಳೆ. ಅಲ್ಲಿ  ಕೇಡಿಯೊಬ್ಬ ಡ್ರಗ್ಸ್  ಮಾರುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಅವರೆಲ್ಲಾ ಕಾಲೇಜು ವಿದ್ಯಾರ್ಥಿಗಳು. ಬೈನಾಕುಲರ್ ಅನ್ನು ಜೀಪಿನ ಒಳಗಿಡುತ್ತಾಳೆ. ಕಾಲೇಜು ಮುಂದೆ ನಿಂತು ಒಬ್ಬ ದುಷ್ಟ ವಿದ್ಯಾರ್ಥಿ ಮಾದಕವಸ್ತುಗಳನ್ನು ಮಾರಿ, ಇನ್ನಿತರ ಒಳ್ಳೆಯ ವಿದ್ಯಾರ್ಥಿಗಳನ್ನು ಹಾಳು ಮಾಡುತ್ತಿದ್ದರೆ ಅದೇಗೆ ಸುಮ್ಮನಿರಲು ಸಾಧ್ಯ ನಮ್ಮ ಸಾಹಸಿ ನಾಯಕಿ..! ಈಗ ಆಕೆಯ ಮುಂದಿನ ನಡೆ ಏನಿರಬಹುದು..?
ಆಕೆ ಮುಂದೇನು ಮಾಡಲು ಸಾಧ್ಯ.ಬೈನಾಕುಲರ್ ನಲ್ಲಿ ನೋಡಿದ್ದಾಳೆ ಎಂದರೆ ಅವರೆಲ್ಲಾ ದೂರದಲ್ಲಿದ್ದಾರೆ ಎಂದರ್ಥ. ಹಾಗಾಗಿ ಆಕೆ ತನ್ನ ರಿವಾಲ್ವರ್ ನಿಂದ ಶೂಟ್ ಮಾಡಬಹುದು. ಆದರೆ ಅಲ್ಲಿ ನಡೆಯುವ ಕಥೆಯೇ ಬೇರೆ. ಬೈನಾಕುಲರ್ ಒಳಗಿಟ್ಟವಳು ಇಲ್ಲಿಂದಲೇ ಅಲ್ಲಿಗೆ ಹಾರಿಬಿಡುತ್ತಾಳೆ. ಹನುಮಂತನನ್ನು ಮೀರಿಸುವಂತೆ.
ಕೆಲವು ಸಿನೆಮಾಗಳನ್ನೂ ನೋಡುವಾಗ ನಗು ಉಕ್ಕಿಬರುವುದು ಇಂತಹ ದೃಶ್ಯ ರಚನೆಯಿಂದಾಗಿ. ಯಾವುದೇ ಸಿನೆಮಾದಲ್ಲಿ ಮೊದಲು ಕಥೆಯ ಎಳೆ. ಆನಂತರ ಚಿತ್ರಕಥೆ ರಚಿಸುತ್ತೇವೆ. ತದನಂತರ ಒಂದೊಂದೇ ದೃಶ್ಯವನ್ನು ಕಟ್ಟುತ್ತಾ ಅಥವಾ ಹೆಣೆಯುತ್ತಾ  ಹೋಗುತ್ತೇವೆ. ಸಿನೆಮಾಕ್ಕೆ ಇದು ಬಹಳ ಮುಖ್ಯ. ಅವನು ಬಂದ ಎಂಬುದು ಚಿತ್ರಕಥೆಯಾದರೆ ಎಲ್ಲಿಂದ ಹೇಗೆ ಬರುತ್ತಾನೆ, ಇದಕ್ಕೂ ಹಿಂದೆ ಏನಾಗಿತ್ತು , ಅದರ ಮುಂದುವರಿಕೆ ಸರಿಯಾಗಿದೆಯೇ ಎಂಬುದನ್ನೆಲ್ಲಾ ತಲೆಯಲ್ಲಿಟ್ಟುಕೊಂಡು ದೃಶ್ಯ ನಿರ್ಮಾಣ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ಲಾಜಿಕ್ ಅನ್ನು ಗಣನೆಗೆ ಸ್ವಲ್ಪವಾದರೂ ತೆಗೆದುಕೊಳ್ಳಬೇಕಾಗುತ್ತದೆ. ಹಾಗಂತ ತೀರಾ ಲಾಜಿಕ್ ಹಿಂದೆ ಬಿದ್ದರೆ ಸಿನೆಮಾದ ಮನರಂಜನೆಗೆ ಪೆಟ್ಟುಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ ಲಾಜಿಕ್ ಇಲ್ಲದಿದ್ದರೂ ಅದನ್ನು ನಂಬಿಸುವಂತಹ ಹಿನ್ನೆಲೆ ಅಲ್ಲಿರಬೇಕು.ಸ್ಪೈಡರ್ ಮ್ಯಾನ್ ನಿಗೆ ಹಾರುವುದು ಸಾಧ್ಯವಾದದ್ದು ಜೇಡ ಕಚ್ಚಿದುದರಿಂದ ಎಂಬುದನ್ನು ಪರಿಣಾಮಕಾರಿಯಾಗಿ ಹಂತಹಂತವಾಗಿ ಜನರಿಗೆ ನಂಬಿಸಬೇಕು. ನಾನು ಎಷ್ಟೋ ಚಿತ್ರದ ಚರ್ಚೆಗೆ ಕುಳಿತಾಗ ಇಂತಹ ಪ್ರಶ್ನೆಗಳನ್ನೂ ಕೇಳಿದ್ದಿದ್ದೆ. ಆಗೆಲ್ಲಾ ನಮ್ಮ ಬಾಸ್ ಗಳು "ಆದಂಗೆ ..ಸಿನೆಮಾದಲ್ಲಿ ಲಾಜಿಕ್ ಮುಖ್ಯ ಅಲ್ಲಾ..ಮ್ಯಾಜಿಕ್ ಮುಖ್ಯ ಎಂತೆಲ್ಲಾ ಹೇಳಿದ್ದಿದ್ದೆ. ಆದರೆ ಲಾಜಿಕ್ ಬಗ್ಗೆ ಯೋಚನೆ ಮಾಡದಾದಾಗ ಇಡೀ ದೃಶ್ಯವೇ ಅಪಹಾಸ್ಯಕ್ಕೀಡಾಗುತ್ತದೆ.
ಅದಕ್ಕಾಗಿಯೇ  ಕೆಲವು ಸಿನೆಮಾದ ದೃಶ್ಯ ನೋಡಿ ನಗುತ್ತಿರುತ್ತೇನೆ.
ಮೊನ್ನೆ  ಇನ್ನೊಂದು ಚಿತ್ರವನ್ನೂ ನೋಡಿದೆ. ಚಿತ್ರದ ಕೊನೆಯ ದೃಶ್ಯ . ಖಳನಾಯಕ ನಾಯಕನ ಜೊತೆ ಹೊಡಿದಾಡುತ್ತಿದ್ದಾನೆ. ಹಾಗೆಯೇ ಅದಕ್ಕೂ ಮುನ್ನ ಐದಾರು ಮಕ್ಕಳನ್ನು ಒಂದು ದೊಡ್ಡ ಮರಕ್ಕೆ ಕಟ್ಟಿ ಹಾಕಿದ್ದಾನೆ.ಅದೂ ಒಂದೆ ಒಂದು ಹಗ್ಗದಿಂದ, ಒಂದೆ ಸುತ್ತು ಹಾಕಿ. ಅದ್ಯಾವ ಮಂತ್ರದ ಹಗ್ಗದಿಂದಲೂ ಆ ರೀತಿ ನಾಲ್ಕಾರು ಜನ ಹುಡುಗರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲವೇ ಇಲ್ಲ. ಯಾಕೆಂದರೆ ಒಬ್ಬೆ ಒಬ್ಬ ಹುಡುಗ ಸುಮ್ಮನೆ ಜಾರಿಕೊಂದರೂ ಸಾಕು...ಎಲ್ಲರೂ ತಪ್ಪಿಸಿಕೊಳ್ಳಬಹುದು...ಆದರೆ ಆ ಹುಡುಗರು ಇಡೀ ಸಿನಿಮಾದಲ್ಲಿ ತುಂಟಾಟ ತೋರಿಸಿದರೂ ಈ ದೃಶ್ಯದಲ್ಲಿ ಮಾತ್ರ ಅಸಹಾಯಕರಂತೆ ನಾಯಕನನ್ನು ಕೂಗುತ್ತಿರುತ್ತಾರೆ. ನಾಯಕ ಹೇಗೋ ಸಮಯ ಸಾಧಿಸಿ ನಾಯಕಿಯನ್ನು ಬಿಡಿಸಿದಾಗ ನಾಯಕಿ ಓಡಿ ಹೋಗಿ, ಆ ಹುಡುಗರನ್ನು ಕಟ್ಟಿಹಾಕಿದ್ದ ಹಗ್ಗವನ್ನು ಬಿಚ್ಚುವ ಪರಿ ಎಲ್ಲರಿಗೂ ನಗು ಉಕ್ಕಿಸುತ್ತದೆ.
ಇನ್ನೊಂದು ಚಿತ್ರದ ದೃಶ್ಯ. ನಾಯಕ ಕೇಡಿಯಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾನೆ. ವಿಲನ್ ಬಿಟ್ಟಾನೆಯೇ...ಅವನೂ ಅಟ್ಟಾಡಿಸುತ್ತಾನೆ. ಅವನ ಕೈಯಲ್ಲಿ ಪಿಸ್ತೋಲ್. ನಾಯಕ ನಿರಾಯುಧ ಧೀರ.ಅವನು ಶೂಟ್ ಮಾಡಲು ಸಿದ್ಧನಾಗಿ ಶೂಟ್ ಮಾಡುತ್ತಾನೆ. ಈಗ ನಾಯಕ ತಪ್ಪಿಸಿಕೊಳ್ಳುವುದಾದರೂ ಹೇಗೆ...ತಿರುಗಿನಿಂತ ನಾಯಕನ ಕೊರಳಲ್ಲಿ ಅಮ್ಮ ಕೊಟ್ಟಿದ್ದ ಒಂದೆಳೆ ಸರ ಇರುತ್ತದೆ. ದಾರಕ್ಕಿಂತ ತುಸುವೇ ದೊಡ್ಡದಾದ ಸರ ಅದು. ಆದರೆ ಅಮ್ಮ ಕೊಟ್ಟಿದ್ದಲ್ಲವೇ..? ನಾಯಕ ಅದನ್ನು ಕೊರಳಿಂದ ತೆಗೆದು ಗುಂಡುಗಳನ್ನು ತಡೆದುಬಿಡುತ್ತಾನೆ. ಬರೀ ದಾರದಲ್ಲೇ ಎಲ್ಲಾ ಗುಂಡುಗಳನ್ನು ಬುಲೆಟ್ ಪ್ರೂಫ್ ಗಿಂತ ಹೆಚ್ಚಾಗಿ ತಡೆದು ಕೆಳಗೆ ಬೀಳಿಸುತ್ತಾನೆ...ಇಲ್ಲವನ ಸರವನ್ನೂ ಅಥವಾ ನಾಯಕನ ಕಣ್ಣಿನ ತೀಕ್ಷ್ನತೆಯನ್ನೋ ಹೊಗಳಬೇಕಾದದ್ದು  ಪ್ರೇಕ್ಷಕರಿಗೆ ಬಿಟ್ಟ ವಿಷಯವಾಗುತ್ತದೆ.
ಚಿತ್ರದ ನಾಯಕ ನಾಯಕಿ ಮನಸಾರೆ ಪ್ರೀತಿಸಿ ಮನೆಯಲ್ಲಿ ಮದುವೆಗೆ ಒಪ್ಪದಿದ್ದಾಗ ಒಂದಷ್ಟು ಹಣ ಆಭರಣ ಮನೆಯಿಂದ ಕದ್ದುಕೊಂಡು ಹಳ್ಳಿಯೊಂದಕ್ಕೆ  ಬರುತ್ತಾರೆ. ಅಲ್ಲಿನ ತೋಟದ ಮನೆಯಲ್ಲಿ ಉಳಿದುಕೊಳ್ಳುತ್ತಾರೆ.ಅದು ಆ ಊರಿನ ಆಸೆಬುರುಕ ಜಮೀನ್ದಾರನಿಗೆ ಗೊತ್ತಾಗಿ ಅವರ ಬಳಿ ಇರುವ ಚಿನ್ನಾಭರಣ, ಹಣವನ್ನ ಲಪಟಾಯಿಸಲು ನಿರ್ಧರಿಸುತ್ತಾನೆ. ಅದು ನಾಯಕಿಗೆ ಗೊತ್ತಾಗಿ ಚಿನ್ನಾಭರಣವನ್ನು ಒಂದು ತಾಮ್ರದ ಬಿಂದಿಗೆಗೆ ಹಾಕಿ ಅದನ್ನು ನಾಯಕನ ಕೈಯಲ್ಲಿ ಕೊಟ್ಟು ಎಲ್ಲಾದರೂ ದೂರ ಅಡಿಗಿಸಿಷ್ಟು ಬರಲು ಹೇಳುತ್ತಾಳೆ. ನಾಯಕ ಹಾಗೆ ಮಾಡಲು ಹೊರಬಂದಾಗ ಅಲ್ಲಿ ಕೇಡಿಗಳು ಬರುವುದು ಕಾಣಿಸಿ ಅಲ್ಲೇ ಇದ್ದ ಮರವೊಂದನ್ನು ಏರಿ ಬಿಂದಿಗೆಯ ಸಮೇತ ಅಲ್ಲೇ ಕುಳಿತುಕೊಳುತಾನೆ. ಖಳರು ಬಂದು ಚಿನ್ನ ಇಲ್ಲದಾದಾಗ ನಾಯಕಿಯನ್ನು ಚುಚ್ಚಿ ಕೊಲ್ಲುತ್ತಾರೆ. ಆದರೆ ಅದೇ ಮರದ ಮೇಲೆ ತಾಮ್ರದ ಬಿಂದಿಗೆಯನ್ನು ಭದ್ರವಾಗಿ ಹಿಡಿದುಕುಳಿತ ನಾಯಕನ ಕಣ್ಮುಂದೆ ನಾಯಕಿಯನ್ನು ಸಾಯಿಸುತ್ತಿದ್ದರೂ ಅವಳನ್ನು ರಕ್ಷಿಸುವ ಯಾವ ಪ್ರಯತ್ನವನ್ನೂ ಮಾಡದ ನಾಯಕ ಸುಮ್ಮನೆ ಅದೇ ಮರದ ಮೇಲೆ ಕುಳಿತಿರುತ್ತಾನೆ. ಅನಂತರ ನಾಯಕ ಹುಚ್ಚನಂತಾಗುತ್ತಾನೆ.
ಆದರೆ ಚಿತ್ರದ ಕೊನೆಯಲ್ಲಿ ಅದೇ ಕೇಡಿಗಳು ತಾಮ್ರದ ಬಿಂದಿಗೆಯನ್ನು ಕದ್ದೊಯ್ಯಲು ಯತ್ನಿಸಿದಾಗ ಅದ್ಯಾವ ಪರಿ ಹೊಡಿದಾಡುತ್ತಾನೆಂದರೆ ಬಿಂದಿಗೆಯನ್ನು ಯಾರಿಗೂ ಮುಟ್ಟಕೊಡುವುದಿಲ್ಲ.
ನಾಯಕಿಯನ್ನ ಕಣ್ಣೆದುರೆ ಸಾಯಿಸುತ್ತಿದ್ದಾಗಲೂ ಹೊಡೆದಾಡುವ ಪ್ರಯತ್ನ ಮಾಡದ ನಾಯಕ ಹಣ ಆಸ್ತಿ ದೋಚುವಾಗ ಹೊಡೆದಾಡುವ ಪರಿ ಅಚ್ಚರಿ ಎನಿಸುತ್ತದೆ.ಅಂದರೆ ಅವನ ಪ್ರೀತಿ ನಾಯಕಿಯ ಮೇಲೋ...ಹಣದ ಮೇಲೋ...ಯೋಚಿಸುವುದು ನಮಗೆ ಬಿಟ್ಟ ವಿಷಯ...
ನಾನಂತೂ ಇಂತಹ ಸುಮಾರು ಸಿನೆಮಾಗಳ ದೃಶ್ಯ ನೋಡಿಬಿಟ್ಟಿದ್ದೇನೆ.ಅದೊಂತರ ಮಜಾ. ನಗು ತರಿಸುತ್ತದೆ. ಹಿಂದೆ, ಮುಂದೆ ಕಿಂಚಿತ್ತೂ ಯೋಚಿಸದ ಚಿತ್ರಕರ್ಮಿಗಳು ಮಾತ್ರ ಇಂತಹ ದೃಶ್ಯಗಳನ್ನು ಕಟ್ಟಲು ಸಾಧ್ಯವಾಗುತ್ತದೆ.
ನಿಮಗೆ ಗೊತ್ತಿರುವ ಈ ತರಹದ ದೃಶ್ಯಗಳ ಬಗ್ಗೆ ಹೇಳಿ.. ಒಂದಷ್ಟು ನಕ್ಕು ಮಜಾ ತೆಗೆದುಕೊಳ್ಳೋಣ.

ಅರ್ಧ ಕಟ್ಟು ಕಥೆ, ಉಳಿದರ್ದ ಬರೀ ವ್ಯಥೆ-ಬಚ್ಚನ್..

ಪ್ರಾರಂಭದಲ್ಲೇ ಎರಡು ಬರ್ಬರ ಕೊಲೆ ಮಾಡುತ್ತಾನೆ ನಾಯಕ ಭರತ್. ಅದೂ ಒಬ್ಬ ಪೋಲಿಸ್ ಅಧಿಕಾರಿ ಮತ್ತು ಒಬ್ಬ ವೈದ್ಯನನ್ನು. ಅಲ್ಲಿಂದ ತಪ್ಪಿಸಿಕೊಳ್ಳುವಾಗ ಪೋಲೀಸರ ಕೈಗೆ ಸಿಕ್ಕಿಕೊಳ್ಳುತ್ತಾನೆ. ವಿಚಾರಣೆಯ ವೇಳೆಯಲ್ಲಿ ತಾನೇಕೆ ಕೊಲೆ ಮಾಡಿದೆ ಎಂಬುದನ್ನು ವಿವರವಾಗಿ ಪೋಲೀಸರ ಮುಂದೆ ಬಿಚ್ಚಿಡುತ್ತಾನೆ. ಸಿನೆಮಾದ ಇಂಟರ್ವಲ್ ನ ವರೆಗೆ ಹೇಳುವ ಕಥೆ ಒಂದಷ್ಟು ಭಾವಗಳನ್ನು ಹುಟ್ಟುಹಾಕುತ್ತದೆ. ಆದರೆ ಒಮ್ಮೆ ವಿರಾಮದ ನಂತರ ಅಷ್ಟೊತ್ತು ಹೇಳಿದ ಕಥೆ ಕಟ್ಟು ಕಥೆ ..ನಿಜವಾದ ಕಥೆ ಬೇರೆಯದೇ ಇದೆ ಎಂದು ನಾಯಕಿ ಕಥೆ ಹೇಳಲು ಶುರುಮಾಡುತ್ತಾಳೆ. ಪೋಲಿಸ್ ಅಧಿಕಾರಿಯ ಜೊತೆಗೆ ಪ್ರೇಕ್ಷಕರೂ ಬೆಚ್ಚಿಬೀಳುತ್ತಾರೆ. ನಿಜವಾದ ಕಥೆ ತೆರೆದುಕೊಂಡಂತೆ ಅಲ್ಲಿ ಮತ್ತೊಂದು ಪ್ರೇಮ ಕಥೆ, ಆ ಮೂಲಕ ಸೇಡಿನ ಕಥೆ ಬಿಚ್ಚಿಕೊಳ್ಳುತ್ತದೆ.
ಇದು ಬಚ್ಚನ್ ಚಿತ್ರದ ಸಂಕ್ಷಿಪ್ತವಾದ ಕಥೆ.ಚಿತ್ರದ ಪ್ರಾರಂಭ ಜೋರಾಗಿದೆ. ಪ್ರಾರಂಭದ ಸಾಹಸಮಯ ದೃಶ್ಯಗಳು ರೋಮಾಂಚನ ಉಂಟುಮಾಡಿದರೂ ಕೆಲವೇ ಕೆಲವು ಗ್ರಾಫಿಕ್ಸ್ ದೃಶಿಕೆಗಳು ಅದರ ಅಂದವನ್ನು ಹಾಳುಗೆಡವುತ್ತವೆ. ಚಿತ್ರದ ಕಥೆ ಆಸಕ್ತಿದಾಯಕವಾಗಿದೆ. ಆದರೆ ನಿರ್ದೇಶಕರು ಚಿತ್ರದಲ್ಲಿನ ಕಟ್ಟು ಕಥೆಗೆ ಹೆಚ್ಚು ಒತ್ತು ಮತ್ತು ಸಮಯ ಕೊಟ್ಟಿರುವುದರಿಂದ ಚಿತ್ರದಲ್ಲಿನ ನಿಜ ಕಥೆ, ನಾಯಕ-ನಾಯಕಿಯ ಪ್ರೇಮದ ಉತ್ಕಟತೆ ಪೇಲವವಾಗಿದೆ. ಹಾಗಾಗಿಯೇ ಚಿತ್ರ ನಿರೀಕ್ಷಿತ ಪರಿಣಾಮ ಬೀರುವುದಿಲ್ಲ. ಇಲ್ಲಿ ಭಾವನ ನಾಯಕಿಯಾದರೂ ಲೆಕ್ಕಕ್ಕೆ ಸಿಗುವಷ್ಟು ದೃಶ್ಯಗಳಲ್ಲಿ ಬಂದು ಹೋಗುತ್ತಾರೆ. ಅದರಲ್ಲಿ ಒಂದು ಹಾಡು ಸೇರಿಕೊಂಡಿರುವುದರಿಂದ ನಾಲ್ಕಾರು ಮಾತನಾಡಿ ಕೇಡಿಗಳ ಕೈಯಲ್ಲಿ ಸಿಕ್ಕಿ ಸಾಯುತ್ತಾರೆ. ಹಾಗೆ ಪ್ರದೀಪ್ ರಾವತ್ ಹಾಗೆ ಬಂದು ಕೊಲೆ ಮಾಡಿ ತಾವೂ ಸಾಯುತ್ತಾರೆ. ಹಾಗಾಗಿ ಅವರ ಕ್ರೌರ್ಯದ ಮುಖ ಜನರಿಗೆ ತಲುಪುವುದಿಲ್ಲ. ಇನ್ನು ಪೆರೋಲ್ ಮೊದಲಾರ್ಧದ ತುಂಬಾ ಇದ್ದರೂ ಅದು ಕಟ್ಟುಕಥೆ ಎಂದು ನಿರ್ದೇಶಕರು ಪೆರೋಲ್ ಕೈಯಲ್ಲೇ ಹೇಳಿಸುವುದರಿಂದ ಅದಷ್ಟು ಪರಿಣಾಮ ಬೀರುವುದಿಲ್ಲ. ಹಾಗಾಗಿಯೇ ಇಡೀ ಚಿತ್ರ ನಿರೀಕ್ಷಿತ ಪರಿಣಾಮ ಬೀರುವುದಿಲ್ಲ.ಎಂದು ಹೇಳಿದ್ದು.
ಹೊಡೆದಾಟದ ದೃಶ್ಯಗಳು ಚೆನ್ನಾಗಿವೆ. ಅಲ್ಲಲ್ಲಿ ಬರುವ ಗ್ರಾಫಿಕ್ಸ್ ಪಕ್ಕಾ ಇಲ್ಲದೆ ಇರುವುದು ಕಿರಿಕಿರಿ ಉಂಟುಮಾಡುತ್ತವೆಯಾದರೂ ಒಟ್ಟಾರೆ ಚಿತ್ರಕ್ಕೆ ದೊಡ್ಡ ನಷ್ಟ ಮಾಡುವುದಿಲ್ಲ.
ನಿರ್ದೇಶಕ ಶಶಾಂಕ್ ರ ಕಥೆಯ ಎಳೆ ಚೆನ್ನಾಗಿದೆ ಮತ್ತು ಕುತೂಹಲಕರವಾಗಿದೆ. ಆದರೆ ದ್ವೇಷದ ಹಿಂದಿನ ಕಾರಣದ ಕಥೆ/ದೃಶ್ಯಗಳಿಗೆ ಹೆಚ್ಚು ಅವಕಾಶವಿಲ್ಲದೆ ಇರುವುದು ಚಿತ್ರದ ನಾಯಕನ  ಒಟ್ಟಾರೆ ಯೋಜನೆಗೆ ಬಲವಾದ ಸಾಥ್ ಕೊಡುವಲ್ಲಿ ಸೋತಿದೆ. ನಾಯಕ-ನಾಯಕಿ ಅವರಿಬ್ಬರ ನಡುವಿನ ಸಂಬಂಧವನ್ನು ಇನ್ನೂ ಪರಿಣಾಮಕಾರಿಯಾಗಿ ತೋರಿಸಿದ್ದರೆ ನಾಯಕನ ಅಷ್ಟೂ ಯೋಜನೆಗೆ ದೊಡ್ಡ ಬಲಸಿಗುತ್ತಿತ್ತೇನೋ..?
ಚಿತ್ರ ಚೆನ್ನಾಗಿದೆ. ಆದರೆ ಮೇಲಿನ ಅಂಶಗಳ ಲೆಕ್ಕಾಚಾರಕ್ಕೆ ಕಾರಣ ಚಿತ್ರ ಇನ್ನೂ ಚೆನ್ನಾಗಿರುವ ಸಾಧ್ಯತೆಗಳಿದ್ದುವಲ್ಲ ಎನ್ನುವುದು. ಇವೆಲ್ಲವನ್ನೂ ಪಕ್ಕಕ್ಕೆ ಇರಿಸಿ, ಚಿತ್ರದ ಶ್ರೀಮಂತಿಕೆಗೆ / ಹೊಡೆದಾಟದ ದೃಶ್ಯಗಳಿಗೆ ಸುದೀಪ್ ಅಭಿನಯಕ್ಕಾಗಿ ಸಿನಿಮಾವನ್ನೊಮ್ಮೆ ನೋಡಬಹುದು ಹಾಗೆ ಮೆಚ್ಚಬಹುದು.