Monday, November 3, 2014

ದೃಶ್ಯ ಹಿಂದೆ ಬಿದ್ದು..

ಅದೇನೋ ಒಂದರ ಹಿಂದೆ ಬಿದ್ದರೆ ಸುಲಭವಾಗಿ ಅದರಿಂದ ಕಳಚಿಕೊಳ್ಳಲು ಸಾಧ್ಯವಾಗುವುದಿಲ್ಲ ನೋಡಿ. ಮೊದಲಿಗೆ ಸಸ್ಪೆಕ್ಟ್ ಎಕ್ಷ್, ಆನಂತರ ದೃಶ್ಯಂ ಆನಂತರ ದೃಶ್ಯ ಈಗ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್-ಕಾದಂಬರಿ. ಈಗಾಗಲೇ ದೃಶ್ಯಂ ನೋಡಿ, ಕೋರಿಯನ್ ಸಿನೆಮಾವನ್ನೂ ನೋಡಿ ಕಾದಂಬರಿ ಓದಿದ್ದರೆ ಮುಂದೆ ಓದಬಹುದೇನೋ? ಅಕಸ್ಮಾತ್ ಇನ್ನೂ ನೀವು ನೋಡಿಲ್ಲದಿದ್ದರೆ, ನೋಡುವ ಮನಸ್ಸಿದ್ದರೆ ನಿಮ್ಮಿಷ್ಟ.
ಒಂದು ಪುಸ್ತಕವನ್ನು ಸಿನಿಮಾಕ್ಕೆ ರೂಪಾಂತರ ಮಾಡುವಾಗ ಒಂದಷ್ಟು ಬದಲಾವಣೆ ಮಾಡುವಾಗ ಏನೇನಲ್ಲಾ ಮಾಡಬೇಕಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ.  ಸಧ್ಯಕ್ಕೆ ಈ ಕಾದಂಬರಿಯ ವಿವಾದವನ್ನೇ ತಗೆದುಕೊಳ್ಳಿ. ಮೊದಲಿಗೆ ಅದರ ಅಧಿಕೃತ ಹಕ್ಕುಗಳನ್ನು ಕೊಂಡುಕೊಂಡ ಏಕ್ತಾ ಕಪೂರ್ ಸಿನಿಮಾ ಮಾಡುವ ಮೊದಲೇ ಮಲಯಾಳಂ ನಲ್ಲಿ ಚಿತ್ರವನ್ನೇ ಬಿಡುಗಡೆ ಮಾಡಿದರು. ಆನಂತರ ಅದೆಲ್ಲಾ ಭಾಷೆಗಳಿಗೂ ರಿಮೇಕ್ ಆಗಿ ಯಶಸ್ವಿಯಾಯಿತು. ಈಗ ಹಿಂದಿಯಲ್ಲೂ ಮಾಡುತ್ತಿದ್ದಾರೆ, ಹಾಗೆಯೇ ಅಧಿಕೃತ ಪುಸ್ತಕದ ಹಕ್ಕುಗಳನ್ನು ಕೊಂಡುಕೊಂಡ ಏಕ್ತಾ ಕಪೂರ್ ಪುಸ್ತಕವನ್ನು ಚಿತ್ರವನ್ನಾಗಿಸುತ್ತಿರುವುದರಿಂದ ಸಿನಿಮಾಕ್ಕೆ ಅದರ ನಿರ್ಮಾಪಕರಿಗೆ ನೋಟೀಸ್ ಕಳುಹಿಸಿದ್ದಾರೆ.
ಹಾಗೆ ನೋಡಿದರೆ ದೃಶ್ಯಂ ಚಿತ್ರಕ್ಕೂ ಕಾದಂಬರಿಗೂ ವ್ಯತ್ಯಾಸವಿದೆ. ದೃಶ್ಯಂ ಕತೆಯೇ ಬೇರೆ, ಕಾದಂಬರಿ ಕತೆಯೇ ಬೇರೆ. ಆದರೆ ಸಾಮ್ಯತೆ ಇರುವುದು ಒಂದು ಅಂಶದಲ್ಲಿ. ಕಾದಂಬರಿಯ ನಾಯಕಿ ಒಂದು ಕೊಲೆ ಮಾಡುತ್ತಾಳೆ. ಅದು ಮಾಜಿ ಗಂಡನನ್ನು. ಕೊಲೆಯ ನಂತರ ಏನು ಮಾಡುವುದು, ಪೋಲಿಸರಿಗೆ ಶರಣಾಗುವುದಾ..? ಹಾಗಾದರೆ ಮಗಳ ಗತಿ ಏನು? ಎಂಬ ಪ್ರಶ್ನೆಗಳ ಗೊಂದಲದಲ್ಲೇ ಇದ್ದಾಗ ಪಕ್ಕದ ಮನೆಯ ಗಣಿತ ಶಿಕ್ಷಕ ಬಾಗಿಲು ತಟ್ಟುತ್ತಾನೆ. ಆನಂತರ ಅವನು ನೇರವಾಗಿ ವಿಷಯಕ್ಕೆ ಬಂದು ನನ್ನನ್ನು ನಂಬಿದರೆ ನಾನು ನಿಮ್ಮನ್ನು ಕಾಪಾಡುತ್ತೇನೆ ಎಂದಾಗ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕ ಹಾಗಾಗುತ್ತದೆ.
ಮಾರನೆಯ ದಿನ ನದಿಯ ಪಕ್ಕ ಒಂದು ಹೆಣ ಸಿಕ್ಕುತ್ತದೆ. ಅದರ ಮುಖವನ್ನು ಜಜ್ಜಿ ಹಾಕಿರುವುದರಿಂದ ಆತನ ಹಲ್ಲಿನ ದಾಖಲೆಯಿಂದ ಅವನನ್ನು ಗುರುತಿಸುವುದು ಸಾಧ್ಯವೇ ಇಲ್ಲ. ಇನ್ನು ಎರಡೂ ಹಸ್ತಗಳನ್ನು ಬೆರಳ ಸಮೇತ ಸುಟ್ಟು ಹಾಕಿರುವುದರಿಂದ ಕೈ ಬೆರಳ ಗುರುತೂ ಸಾಧ್ಯವಿಲ್ಲ.ಅವನ ಮೈ ಮೇಲಿನ ಬಟ್ಟೆ ಬಿಚ್ಚಿ ಪೂರ್ಣ ನಗ್ನಗೊಳಿಸಲಾಗಿದೆ. ಪಕ್ಕದಲ್ಲೊಂದು ಕದ್ದ ಸೈಕಲ್ ಇದೆ. ಗುರುತಿಗಾಗಿ ಪಕ್ಕದಲ್ಲೇ ಅರೆಬೆಂದ ಬಟ್ಟೆ ಇದೆ.
ಇವುಗಳನ್ನು ಹಿಡಿದುಕೊಂಡು ತನಿಖೆಗೆ ಇಳಿಯುತ್ತಾರೆ ಪೊಲೀಸರು. ಅರೆ ಬೆಂದ ಬಟ್ಟೆ, ಬಟ್ಟೆಯ ಪಕ್ಕ ಸಿಕ್ಕ ಹೋಟೆಲ್ಯ ಚಾವಿಯಿಂದ   ಆತ ನಾಯಕಿಯ ಪತಿ ಎಂಬುದನ್ನು ಕಂಡು ಹಿಡಿಯುತ್ತಾರೆ.  ಹಾಗಾದರೆ ಇಷ್ಟು ಬರ್ಬರವಾಗಿ ಕೊಲೆ ಮಾಡಿದವರ್ಯಾರು.. ಪೋಸ್ಟ್ಮೊ ಮಾರ್ಟಂ ಪ್ರಕಾರ ಕೊಲೆ ನಡೆದಿರುವುದು ಹತ್ತನೆಯ ತಾರೀಖು. ಮೊದಲಿಗೆ ಅನುಮಾನ ನಾಯಕಿಯ ಮೇಲೆ ಬರುತ್ತದೆ. ಆಕೆಯನ್ನು ಕೇಳಿದಾಗ ಆಕೆ ಹತ್ತನೆಯ ದಿನಾಂಕ ಸಿನಿಮಾ ನೋಡಿದ್ದಾಗಿ, ಅಲ್ಲಿಂದ ಹೋಟೆಲ್ಲಿಗೆ ಹೋಗಿ ಊಟ ಮಾಡಿದ್ದಾಗಿ ಹೇಳುತ್ತಾಳೆ. ಆಕೆಯ ಮಾತನ್ನು ಪರೀಕ್ಷಿಸಲು ಪೊಲೀಸರು ಎಲ್ಲಾ ತಂತ್ರ ಉಪಯೋಗಿಸುತ್ತಾರೆ. ಸಿನಿಮಾ ಮಂದಿರದ ಸಿಸಿಟಿವಿ ಫೂಟೇಜ್ ತರಿಸಿ ನೋಡುತ್ತಾರೆ, ಆಕೆಗೆ ಮಂಪರು ಪರೀಕ್ಷೆ ಮಾಡುತ್ತಾರೆ. ಎಲ್ಲವೂ ಸರಿ.
ನಾಯಕಿಗೆ ಆಶ್ಚರ್ಯವಾಗುತ್ತದೆ. ಯಾಕೆ ಎಲ್ಲರೂ ಹತ್ತನೆಯ ತಾರೀಖಿನ ಬಗ್ಗೆ ಕೇಳುತ್ತಿದ್ದಾರೆ. ಕೊಲೆ ನಡೆದಿರುವುದು ಒಂಬತ್ತು.ಎಷ್ಟೇ ಕೆದಕಿದರೂ ಪೊಲೀಸರಿಗೆ ನಾಯಕಿ ಹೇಳುತ್ತಿರುವುದು ಸುಳ್ಳು ಎನಿಸುವುದೇ ಇಲ್ಲ.
ಆದರೆ ನಿಜವಾಗಿ ನಡೆದದ್ದು ಏನು..?
ದೃಶ್ಯ ಚಿತ್ರದಲ್ಲೂ ಒಂದು ದೃಶ್ಯವನ್ನು ಸೃಷ್ಟಿ ಮಾಡುತ್ತಾನೆ ನಾಯಕ. ಕೊಲೆ ನಡೆದ ನಂತರ ಬಸ್ಸಿನಲ್ಲಿ, ಪ್ರವಚನ ಹೀಗೆ ಎಲ್ಲ ಕಡೆ ಹೋಗಿ ಕೊಲೆ ನಡೆದ ದಿನವೇ ಇಡೀ ಕುಟುಂಬ ಅಲ್ಲಿದ್ದರು ಎಂಬುದಾಗಿ ಕತೆ ಕಟ್ಟುತ್ತಾನೆ. ಅದನ್ನು ಸುಳ್ಳು ಎಂದು ಸಾಬೀತು ಮಾಡಲು ಎಷ್ಟೇ ಹೆಣಗಾಡಿದರೂ ಸಾಧ್ಯವಾಗುವುದೇ ಇಲ್ಲ.
ಇಲ್ಲೂ ಅಷ್ಟೇ. ನಾಯಕ ಒಂದು ದಿನವನ್ನು ಸೃಷ್ಟಿಸುತ್ತಾನೆ. ಒಂಬತ್ತನೆಯ ದಿನಾಂಕ ನಡೆದ ಕೊಲೆಯನ್ನು ಹತ್ತಕ್ಕೆ ವರ್ಗಾಯಿಸುತ್ತಾನೆ. ಅದಕ್ಕಾಗಿ ಆತ ಇನ್ನೊಂದು ಕೊಲೆ ಮಾಡುತ್ತಾನೆ. ನಿಜವಾದ ನಾಯಕಿಯ ಒಂಬತ್ತನೆಯ ದಿನಾಂಕ ಕೊಲೆಯಾದವನ  ಕಳೇಬರವನ್ನು ಮರೆ ಮಾಡುವ ನಾಯಕ ಆತನ ಬಟ್ಟೆ, ಹೋಟೆಲ್ ಬೀಗದ ಕೈ ತೆಗೆದುಕೊಂಡು ಇನ್ನೊಬ್ಬ ತಿರುಬೋಕಿಯನ್ನು ಹತ್ತನೆಯ ತಾರೀಖು ನದಿಯ ತೀರಕ್ಕೆ ಕರೆದೊಯ್ದು ಕೊಲೆ ಮಾಡುತ್ತಾನೆ. ಆನಂತರ ಆತನನ್ನು ನಗ್ನಗೊಳಿಸಿ ಮುಖ ಜಜ್ಜಿ ಕೈ ಬೆರಳುಗಳನ್ನು ಸುಟ್ಟು ಪಕ್ಕದಲ್ಲಿ ಬಟ್ಟೆ ಬೀಗದ ಕೈ ಅರೆಬರೆ ಸುಟ್ಟು ಪೋಲಿಸರಿಗೆ ಸಿಕ್ಕುವಂತೆ ಮಾಡುತ್ತಾನೆ. ಹಾಗಾಗಿಯೇ ಹೆಣ ನಾಯಕಿಯ ಪತಿಯದು ಮತ್ತು ಅವನ ಕೊಲೆಯಾದದ್ದು ಹತ್ತಕ್ಕೆ ಎಂಬ ಕತೆ ಸೃಷ್ಟಿಸುತ್ತಾನೆ. ಹತ್ತನೆಯ ತಾರೀಖು ಏನಾಯಿತು ಎಂದು ಎಲ್ಲರೂ ಪ್ರಶ್ನೆ ಕೇಳುತ್ತಾರೆ. ಆವತ್ತು ನಾಯಕಿಯ ಪಾಲಿಗೆ ಏನೂ ಆಗಿರುವುದಿಲ್ಲ. 
ಇಲ್ಲಿ ಎರಡೂ ಕತೆಗಳಲ್ಲಿ ಸಾಮ್ಯತೆ ಇಲ್ಲ. ಒಂದು ದಿನವನ್ನು ಸೃಷ್ಟಿಸುವ ಪರಿಯಲ್ಲಿ ಸಾಮ್ಯತೆ ಇದೆ. ಹಾಗಾಗಿ ಐಡಿಯಾ ಮಾತ್ರ ತೆಗೆದುಕೊಂಡಿರುವ ಜೀತು ಜೋಸೆಫ್ ದೃಶ್ಯಂ ಗೆ ತಮ್ಮದೇ ಕತೆ ಹೆಣೆದಿದ್ದಾರೆ.
ಇನ್ನು ಕೋರಿಯನ್ ಸಿನಿಮಾದ ವಿಷಯಕ್ಕೆ ಬಂದರೆ ಚಿತ್ರ ತುಂಬಾ ಮಂದಗತಿಯಲ್ಲಿದೆ. ಅದೇಕೆ ಅಷ್ಟೊಂದು ಮಂದಗತಿ ಎಂಬುದು ಪ್ರಶ್ನೆ. ಅದು ಬಿಟ್ಟರೆ ಕಾದಂಬರಿಗೆ ನಿಷ್ಠೆಯಿಂದಿದೆ ಸಿನಿಮಾ.ಆದರೆ ದೃಶ್ಯ ಚಿತ್ರಕ್ಕೆ ಬೇರೆಯದೇ ಕತೆ ಹೆಣೆಯಲಾಗಿದೆ. ಈಗ ಹಿಂದಿಯಲ್ಲಿ ಎರಡೂ ಚಿತ್ರಗಳು ಒಮ್ಮೆಲೇ ಬಿಡುಗಡೆಯಾದರೆ ಹೇಗೆ..?
ಈ ಹಿಂದೆ ಕನ್ನಡದಲ್ಲಿ ಸಾಗರಿ ಮತ್ತು ಆಪ್ತ ಮಿತ್ರ ಚಿತ್ರಗಳ ಕತೆ ಹೀಗೆ ಆಗಿತ್ತು. ಎರಡೂ ಒಂದೇ ಚಿತ್ರದ ಕನ್ನಡ ಅವತರಣಿಕೆ. ಆಪ್ತಮಿತ್ರ ಗೆದ್ದಿತ್ತು.