Thursday, February 14, 2013

ಹುಲಿರಾಯನಿದ್ದಾನೆ ಎಚ್ಚರಿಕೆ...

ಜಾನ್ ನ ಪ್ಲಾನ್ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಒಂದು ಕೊಲೆ ಮಾಡಿದರೆ ಏನೇ ಬುದ್ದಿವಂತಿಕೆ ತೋರಿಸಿದರೂ ಸಿಕ್ಕಿಕೊಳ್ಳುವುದಂತೂ ಖಚಿತ. ಅದಕ್ಕಾಗಿಯೇ ಜಾನ್ ಈ ಉಪಾಯ ಹುಡುಕಿದ್ದು. ಅವನಿಗೆ ಈಗ ಕೆಲ್ಲಿ ಮತ್ತು ಟಾಮ್ ರಿಂದ ಮುಕ್ತಿ ಬೇಕಾಗಿದೆ. ಹಾಗಂತ ಕತ್ತು ಹಿಡಿದು ಮನೆಯಿಂದ ಆಚೆ ದೂಡಿದರೆ ಅಷ್ಟು ಸುಲಭವಾಗಿ ಹೋಗುವವರಲ್ಲ ಕೆಲ್ಲಿ ಮತ್ತು ಟಾಮ್. ಆಕಸ್ಮಿಕವಾಗಿ ಅವರು ಸತ್ತಂತೆ ಕೊಲೆ ಮಾಡುವುದಾದರೂ ಹೇಗೆ. ಸುಫಾರಿ ಕೊಟ್ಟರೆ ಅದು ದೊಡ್ಡ ರಿಸ್ಕು. ಮತ್ತು ಹಣ ಖರ್ಚು.ಈವತ್ತು ತಪ್ಪಿಸಿಕೊಂಡರೂ ನಾಳೆ ದಿನ ಆ ಕೊಲೆಗಾರರು ಬೇರಾವುದೋ ಕೇಸಿಗೆ ಪೊಲೀಸರಿಗೆ ಸಿಕ್ಕಿಬಿದ್ದು ಎಲ್ಲವನ್ನೂ ಬಾಯಿ ಬಿಡುವ ಸಂಭವ ಇದೆ. ಎಷ್ಟೋ ಅಪರಾಧದ ಕೇಸುಗಳಲ್ಲಿ ಇಂಥ ಘಟನೆ ನಡೆದಿರುವುದು ಜಾನ್ ಗೆ ಗೊತ್ತು. ಹಾಗಾಗಿ ಜಾನ್ ಒಂದು ಮಾಸ್ಟರ್ ಪ್ಲಾನ್ ಮಾಡುತ್ತಾನೆ. 
ಮೊದಲಿಗೆ ಮನೆಯ ಕಿಟಕಿ ಬಾಗಿಲುಗಳನ್ನೆಲ್ಲಾ ಒಮ್ಮೆ ಹಾಕಿದರೆ ತೆಗೆಯಲಾರದಂತೆ ತಾನೇ ನಿಂತು ಆಳುಗಳಲ್ಲಿ ಹೇಳಿ ಕೆಲಸ ಮಾಡುತ್ತಾನೆ. ಒಮ್ಮೆ ಕೆಲ್ಲಿ ಮತ್ತು ಟಾಮ್ ಒಳಗಿದ್ದಾಗ ಬಾಗಿಲು ಹಾಕಿದರೆ ಮುಗಿಯಿತು.ಜಾನ್ ನೆ ಸ್ವತಹ ಬಾಗಿಲು ತೆರೆಯುವವರೆಗೂ ಅವರು ಹೊರಬರುವುದು ಸಾಧ್ಯವಿಲ್ಲ. 
ಒಬ್ಬ ಸರ್ಕಸ್ ಕಂಪನಿಯವನಿಂದ ಒಂದು ಭಯಾನಕ ಅಪಾಯಕಾರಿ ಹುಲಿಯನ್ನು ಖರೀದಿಸುತ್ತಾನೆ. ಹೇಗೋ ಮನೆ ಊರ ಹೊರಗಡೆ ಇರುವುದರಿಂದ ಹುಲಿಯೊಂದು ಬಂದು ದಾಳಿ ಮಾಡಿ ಹತ್ಯೆ ಮಾಡಿತೆಂದರೆ ಅದು ಪೂರ್ವ ನಿಯೋಜಿತವೆಂದು ಯಾವ ಶೆರ್ಲಾಕ್ ಹೋಮ್ಸ್ ನಿಂದಲೂ ಪತ್ತೆ ಮಾಡಲು ಸಾಧ್ಯವಿಲ್ಲ ಎಂಬುದೇ ಅವನ ಯೋಚನೆ. ಆ ರಾತ್ರಿ ಮನೆಗೆ ಹುಲಿಯನ್ನು ಬಿಟ್ಟು ತಾನು ಮಾತ್ರ ಹೊರಬಂದು ಬಾಗಿಲು ಬೀಗ ಹಾಕಿಕೊಳ್ಳುತ್ತಾನೆ. ಈಗ ಮನೆಯಲ್ಲಿ ಒಂದು ಹಸಿದ ಭಯಾನಕ ಅಪಾಯಕಾರಿ ಹುಲಿ, ಕೆಲ್ಲಿ ಮತ್ತು ಟಾಮ್ ಮೂರೇ ಜೀವಗಳು.ಇದಾವುದರ ಅರಿವಿಲ್ಲದ ಕೆಲ್ಲಿ ನೀರು ಕುಡಿಯಲು ಬಂದಾಗ ಅವಳಿಗೆ ಹುಲಿಯಿರುವ ವಿಷಯ ಗೊತ್ತಾಗುತ್ತದೆ.
ಮುಂದೆ ಹುಲಿ ಕೆಲ್ಲಿ ಮತ್ತು ಟಾಮ್ ರನ್ನು ಸಾಯಿಸುತ್ತದಾ..?
ಟಾಮ್ ಪ್ಲಾನ್ ಯಶಸ್ವಿಯಾಗುತ್ತದಾ..? ಎಂಬುದೇ ಪ್ರಶ್ನೆ.
ಸಾದಾರಣವಾಗಿ ಸಿನಿಮಾಗಳನ್ನ  ನೋಡಿದವರಿಗೆ ಈ ಎರಡು ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟದ ಕೆಲಸವಲ್ಲ. ಇಷ್ಟು ನೋಡಿದ ಮೇಲೆ ಮುಂದೇನಾಗಬಹುದು ಎಂಬುದನ್ನು ಊಹಿಸುವುದೂ ಕಷ್ಟವಲ್ಲ. 
ಆದರೆ ಸಿನಿಮಾ ನೋಡುವ ಥ್ರಿಲ್ ಇದೆಯಲ್ಲಾ ಅದು ಮಾತ್ರ ಅನೂಹ್ಯ.
ಇದು 2010 ರಲ್ಲಿ ತೆರೆಗೆ ಬಂದ ಕಾರ್ಲೋಸ್ ಬ್ರೂಕ್ ನಿರ್ದೇಶನದ ಬರ್ನಿಂಗ್ ಬ್ರೈಟ್ ಚಿತ್ರದ ಸಾರಾಂಶ. ಕಡಿಮೆ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಲ್ಲದೆ ಅಂತಿಮ ಹಂತದಲ್ಲಿ ನಮ್ಮನ್ನು ಕುರ್ಚಿಯ ತುದಿಗೆ ಕೂರಿಸಿಬಿಡುತ್ತದೆ.ಸುಮಾರು ಒಂದೂವರೆ ಘಂಟೆ ಅವಧಿಯ ಈ ಚಿತ್ರ ಥ್ರಿಲ್ಲರ್ ಪ್ರಿಯರಿಗೆ ಹೇಳಿಮಾಡಿಸಿದಂತಿದೆ.

Tuesday, February 12, 2013

ಪ್ರೇಮಿಗಳ ದಿನದ ನೆನಪಿನಲ್ಲಿ...

2007 ರಲ್ಲಿ ಬಿಡುಗಡೆಯಾದ ಅಟೋನ್ಮೆಂಟ್  ಚಿತ್ರದ ನಿರ್ದೇಶಕರು ಜೋ ರೈಟ್. ಆಸ್ಕರ್ ಪ್ರಶಸ್ತಿ ಗಳಿಸಿದ ಈ ಚಿತ್ರದಲ್ಲಿ ಕೈರಾ ನೈಟ್ಲಿ ಮತ್ತು ಚಂದನೆಯ ನಟ ಜೇಮ್ಸ್ ಮ್ಯಾಕ್ ಅವೇ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಪ್ರೀತಿ, ಯುದ್ಧ, ತ್ಯಾಗವನ್ನೂ ಹದವಾಗಿ ಬೆರೆಸಿದ ಚಿತ್ರವಿದು. ಚಿತ್ರದ ನಾಯಕಿ ದೊಡ್ಡ ಮನೆತನದವಳು. ಶ್ರೀಮಂತರು. ಆ ಮನೆಯ ಕೆಲಸದಾಳಿನ ಮಗ ನಾಯಕ. ಇಷ್ಟು ಹೇಳಿದರೆ ಕಥೆಯನ್ನ ಮುಂದೆ ಊಹಿಸಿಬಿಡಬಹುದು. ಆದರೆ ಚಿತ್ರ ನೋಡಿದರೆ ಕಣ್ಣಂಚಲ್ಲಿ ಒಂದು ಹನಿ ಕಣ್ಣೀರು ಜಾರದಿದ್ದರೆ ಕೇಳಿ. ಸಿನೆಮಾದ ಚಿತ್ರಕಥೆ, ಅಲ್ಲಿನ ತಿರುವುಗಳು ನಮ್ಮನ್ನು ಬೇರೊಂದು ಪ್ರೇಮಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ನೋಡಿಲ್ಲವಾದಲ್ಲಿ ವ್ಯಾಲಂಟೈನ್ಸ್ ಡೆ ಯನ್ನು ಈ ಚಿತ್ರದೊಂದಿಗೆ ಆಚರಿಸಬಹುದು.
ಫೆಬ್ರುವರಿ ಹದಿನಾಲ್ಕು ವ್ಯಾಲೆಂಟೈನ್ಸ್ ಡೇ ಎನ್ನುವುದು ನಮ್ಮ ಕಾಲೇಜಿನಲ್ಲಿ ಗೊತ್ತಿದ್ದರೂ ಅಷ್ಟು ಜೋರಾಗಿ ಯಾರೂ ಆಚರಿಸುತ್ತಿರಲಿಲ್ಲ. ಆದರೆ ಒಂದು ಮಾತ್ರ ಮಾಡುತ್ತಿದ್ದದ್ದುಂಟು. ಅದೆಂದರೆ ಬಟ್ಟೆ ಧರಿಸುವುದು. ಬಣ್ಣ ಬಣ್ಣದ ಬಟ್ಟೆ ಧರಿಸುತ್ತಿದ್ದರು. ಅದರಲ್ಲಿ ಅಡಗಿದ್ದ ಸಂಕೇತಗಳನ್ನು ನಾವು ಕಂಡುಕೊಂಡು ನಮ್ಮ ನಮ್ಮಲ್ಲೇ ನಾವು ಯಾರ್ಯಾರು ಜೋಡಿಗಳಾಗಿದ್ದಾರೆ, ಯಾರ್ಯಾರು ಒಂಟಿ ಎಂಬುದನ್ನು ಗುರುತಿಸುವ ಕೆಲಸವಿಲ್ಲದ ಕೆಲಸ ಮಾಡುತ್ತಿದ್ದೆವು. ಕೆಂಪು ಅಥವಾ ಪಿಂಕ್ ಧರಿಸಿದರೆ ಈಗಾಗಲೇ ಅವರು ಪ್ರೀತಿಯಲ್ಲಿ ಮುಳುಗಿದ್ದಾರೆಂದು, ಹಸಿರಾದರೆ ಪ್ರೀತಿಗೆ ಬೀಳಲು ಸಿದ್ಧರಿದ್ದಾರೆಂದೂ ಬಿಳಿಯಾದರೆ ಸಿದ್ಧವಿಲ್ಲವೆಂದು ತಿಳಿದುಕೊಂಡಿದ್ದವು.ಅದ್ಯಾರು ಅದೇಗೆ ಈ ಎಲ್ಲಾ ನೀತಿ ನಿಯಮಗಳನ್ನೂ ಬಣ್ಣದ ಬಟ್ಟೆಯ ಸಂಕೇತಗಳನ್ನು ಹುಟ್ಟುಹಾಕಿದ್ದರೋ ಗೊತ್ತಿರಲಿಲ್ಲ. ಆದರೆ ಇದರರಿವಿಲ್ಲದ ತಮ್ಮಲ್ಲಿದ್ದ ಬಟ್ಟೆಗಳನ್ನು ಹಾಕಿಕೊಂಡು ಬಂದ ಅಮಾಯಕರು ಇದರಲ್ಲಿ ಸಿಲುಕಿಕೊಂಡು ಪೇಚು ಅನುಭವಿಸುತ್ತಿದ್ದರು. ಯಾವುದಾದರೂ ಹುಡುಗಿ  ಹಾಕಿಕೊಂಡು ಬಂದ ಬಟ್ಟೆಯಲ್ಲಿ ಯಾವುದಾದರೂ ಮೂಲೆಯಲ್ಲಿ ಹಸಿರು ಬಣ್ಣವಿದ್ದರಂತೂ ಮುಗಿದೇಹೋಗುತ್ತಿತ್ತು..'ಇವ್ಳು ನೋಡಪ್ಪಾ ರೆಡಿ ಅವಳೇ..' ಎಂದು ಅವಳನ್ನು ಆಡಿಕೊಂಡು ನಗುತ್ತಿದ್ದರು.
ಪ್ರೇಮಿಗಳ ದಿನ, ಕಾಲೇಜು ಹೈಸ್ಕೂಲು ದಿನಗಳ ಪ್ರೀತಿ ಪ್ರೇಮ ಎಂದರೆ ಎಂಥಹದ್ದೋ ಖುಷಿ. ಅದರ ನೆನಪೇ ಅಪ್ಯಾಯಾಮಾನ. ಆದರೆ ಕೆಲವೊಂದು ಪ್ರೇಮ ಕಥೆಗಳು ನಮ್ಮನ್ನು ಕಾಡುತ್ತವೆ. ಅದರಲ್ಲೂ ಪ್ರೇಮಿಗಳ ದಿನ ಬಂದರೆ ಮೊದಲು ನೆನಪಾಗುವುದು ಇದೆ ಕಥೆ.
ಅದೊಂದು ದಿನ ನಮ್ಮ ಹಾಸ್ಟೆಲ್ಲಿಗೆ ಬಂದ ನನ್ನ ಗೆಳೆಯನ ಗೆಳೆಯ ನನಗೂ ಗೆಳೆಯನಾದ. ಅವನಾಗಲೇ ತನ್ನದೇ ಊರಿನ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆತನೇನೋ ಪಿಯುಸಿಯಲ್ಲಿ ಡುಮ್ಕಿಯಾಗಿದ್ದನಾದರೂ ಆಕೆಯನ್ನು ಪ್ರೀತಿಸುವುದನ್ನು ಬಿಟ್ಟಿರಲಿಲ್ಲ. ಅವಳಿಗಿಂತ ಮುಂಚೆ ಅವಳ ಕಾಲೇಜಿನ ಮುಂದೆ ಹಾಜರಿರುತ್ತಿದ್ದವ ಅವಳಿಗೊಂದು ಸ್ಮೈಲ್ ಕೊಡುತ್ತಿದ್ದ. ಆಕೆ ಮುಖ ಸಿಂಡರಿಸುತ್ತಿದ್ದಳು. ಈತ ಡೋಂಟ್ ಕೇರ್ ಪಾಲಿಸಿಯವನು.ತನ್ನ ಕೆಲಸವಾಯಿತೆಂಬಂತೆ ಅಲ್ಲಿಂದ ಬಂದವನು ಆಕೆಯ ಕಾಲೇಜು ಮುಗಿಯುವ ಮೊದಲೇ ಅಲ್ಲಿಗೆ ಹಾಜರಿದ್ದು ಅವಳನ್ನೊಮ್ಮೆ ನೋಡಿ ಬಸ್ ನಿಲ್ದಾಣದ ವರೆಗೂ ಹಿಂಬಾಲಿಸಿ, ಆಕೆ ಬಸ್ಸು ಹತ್ತಿ ಅದು ಹೊರಟ ಮೇಲೆ ಅಲ್ಲಿಂದ ಕಾಲುಕೀಳುತ್ತಿದ್ದ. ಅವಳು ಯಾವ್ಯಾವ ಬಣ್ಣದ ಬಟ್ಟೆ ಹಾಕಿಕೊಂಡು ಬಂದಿದ್ದಳು, ಅವಳ ಊರು ಯಾವುದು ಎನ್ನುವುದನೆಲ್ಲಾ ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದ. ಆಕೆ ಯಾವ ಹಬ್ಬದ ದಿನ ಯಾವರೀತಿ ಸಿಂಗರಿಸಿಕೊಂಡಿದ್ದಳು, ಯಾವ ಸಮಾರಂಭದಲ್ಲಿ ಯಾವ ರೀತಿ ಇದ್ದಳು ಎಂಬುದರ ದಾಖಲೆ ಯಾವ ಫೋಟೂಕ್ಕಿಂತ ನಿಚ್ಚಳವಾಗಿ ಅವನ ಮನಸ್ಸಿನಲ್ಲಿತ್ತು.
ನನಗೆ ಪರಿಚಯವಾದ ಮೇಲೆ ತನ್ನ ಒಮ್ಮುಖದ ಪ್ರೇಮಕಥೆ ಹೇಳಿದಾಗ ನನಗೆ ಪಿಚ್ಚೆನಿಸಿತ್ತು. ಎರಡು ವರ್ಷಗಳಿಂದ ಈತನ ಯಾವ ಸರ್ಕಸ್ಸಿಗೂ ಸ್ಪಂಧಿಸದ ಆಕೆಯೂ, ಅದಕ್ಕೆ ತಲೆಕೆಡಿಸಿಕೊಳ್ಳದೆ ಇಂದಲ್ಲಾ ನಾಳೆ ನನ್ನ ಪ್ರೀತಿಯನ್ನು ಒಪ್ಪಿಕೊಂಡೆ ಒಪ್ಪಿಕೊಳ್ಳುತ್ತಾಳೆ ಎಂಬ ಆಶಾಭಾವನೆಯಲ್ಲಿ ತನ್ನ ಪ್ರಯತ್ನವನ್ನೂ ಚಾಚೂ ತಪ್ಪದೆ ಸ್ವಲ್ಪವೂ ಉದಾಸೀನ ತೋರಿಸದೆ ಮುಂದುವರೆಸುತ್ತಿರುವ ಈತನೂ ನನಗೆ ವಿಶೇಷ ಎನಿಸಿದ್ದರು. ಆದರೆ ಅವನಲ್ಲಿ ಒಂದು ನಂಬಿಕೆ ಗಟ್ಟಿಯಾಗಿತ್ತು. ಯಾವತ್ತಿದ್ದರೂ ಆಕೆ ನನ್ನ ಪ್ರೀತಿಸುತ್ತಾಳೆ ಎಂಬುದು. ಅದೇಗೆ ಎಂಬುದು ಆ ದೇವರಿಗೂ ಗೊತ್ತಿರಲಿಲ್ಲವೇನೋ? ಪ್ರತಿ ಹಬ್ಬಕ್ಕೆ, ವಿಶೇಷ ದಿನಕ್ಕೆ ಆಕೆಯ ಹುಟ್ಟುಹಬ್ಬಕ್ಕೆ ಮೊದಲ ಕೊಡುಗೆ ಇವನು ಕೊಟ್ಟರೆ ಆಕೆ ತೆಗೆದುಕೊಂಡು 'ನಾನು ನಿನ್ನ ಪ್ರೀತಿಸುವುದಿಲ್ಲ..ನೀನು ನನಗೆ ಇಷ್ಟವಿಲ್ಲ.' ಎಂದು ಹೇಳಿಹೊಗುತ್ತಿದ್ದಳು. ಕೆಲವೊಮ್ಮೆ ಅವನ ಕೊಡುಗೆಗಳನ್ನು ಅಲ್ಲೇ ಬೀಸಾಕುತ್ತಿದ್ದಳು. ಇವನು ಜೋಪಾನವಾಗಿ ಅದನ್ನು ಆಯ್ದುಕೊಂಡು ಮನೆಗೆ ತಂದಿರಿಸಿಕೊಳ್ಳುತ್ತಿದ್ದ. ಅವನ ಪ್ರೇಮವನ್ನು ನಾನೇನೋ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ 'ನಿನಗವಳು ಸಿಕ್ಕೇ ಸಿಗುತ್ತಾಳೆ..ನಿನ್ನನ್ನ  ಪ್ರೀತಿಸದೆ ಬೇರಾರನ್ನು ಪ್ರೀತಿಸೋಕೆ ಸಾಧ್ಯ..' ಎಂಬರ್ಥದ ಮಾತುಗಳನ್ನಾಡಿದರೆ ಸಾಕು ಅವನು ಹಿಗ್ಗೆ ಹೀರೆಕಾಯಿಯಾಗುತ್ತಿದ್ದ. ಆವತ್ತು ರಾತ್ರಿ ಪಾರ್ಟಿ ಖಚಿತವಾಗುತ್ತಿತ್ತು.
ಅವನು ಸಿಕ್ಕಾಗಲೆಲ್ಲಾ ಮಾತನಾಡುತ್ತಿದ್ದ. ಪ್ರತಿ ಮಾತಿನಲ್ಲೂ ಅವಳೇ. ಕೇಳುವವರಿಗೆ ಬೋರ್ ಆಗುತ್ತಿತ್ತು. ನನಗೆ ಒಬ್ಬ ಇಷ್ಟೊಂದು ಉತ್ಕಟವಾಗಿ ಹೇಗೆ ಪ್ರೀತಿಸಲು ಸಾಧ್ಯ ಅದೂ ಪ್ರತಿಕ್ರಿಯೇಯಿಲ್ಲದೆ ಎನಿಸುತ್ತಿತ್ತು.
ಸುಮಾರು ದಿನವಾಯಿತು. ನಾವು ನಮ್ಮ ನಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆವು. ನಾನಂತೂ ಅವನನ್ನು ಮರೆತುಬಿಟ್ಟಿದ್ದೆ . ಅವನೂ ಇತ್ತೀಚಿಗೆ ನಮ್ಮ ಹಾಸ್ಟೆಲ್ಲಿನ ಕಡೆಗೆ ಬಂದಿರಲಿಲ್ಲ. ಆದರೆ ಅದೊಂದು ದಿನ ನನ್ನ ಗೆಳೆಯನ ಮನೆಗೆ ಹೋದಾಗ ಅದೂ ಇದೂ ಮಾತಾಡುತ್ತ ಅವನ ವಿಷಯ ಬಂದಿತ್ತು. ಗೆಳೆಯ ಅವನ ಕಥೆಯನ್ನೂ ಪೂರ್ತಿ ಮಾಡಿದ್ದ. ನಾನು ವಿಷಣ್ಣನಾಗಿ ಕುಳಿತಿದ್ದೆ.
ಹೀಗೆ ದಿನಗಟ್ಟಲೆ ವರ್ಷಗಟ್ಟಲೆ ಅಲೆದವನಿಗೆ ಒಮ್ಮೆ ಇದನ್ನು ಪಕ್ಕ ಮಾಡಿಕೊಳ್ಳಲೇ ಬೇಕೆನಿಸಿದೆ. ಹಾಗಾಗಿಯೇ ಫೆಬ್ರುವರಿ ಹದಿನಾಲ್ಕಕ್ಕೆ ಕಾದವನು ಆ ದಿನ ಒಳ್ಳೆಯ ಬಟ್ಟೆ ಧರಿಸಿ ಒಳ್ಳೆಯ ದುಬಾರಿ ಕೊಡುಗೆಯೊಂದಿಗೆ ಆಕೆಯ ಕಾಲೇಜು ಬಳಿಗೆ ಹೋಗಿದ್ದಾನೆ.ಅವಳನ್ನು ಬೇಟಿ ಮಾಡಿದ್ದಾನೆ. ಪರಿಪರಿಯಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಹೆದರಿಸಿದ್ದಾನೆ. ಗೋಳಾಡಿದ್ದಾನೆ. ಎಲ್ಲದಕ್ಕೂ ಆಕೆ ಒಂದೇ ಉತ್ತರ ಕೊಟ್ಟು ಗಿಫ್ಟನ್ನು ಬೀಸಾಕಿ ಹೊರಟುಹೋಗಿದ್ದಾಳೆ. ಅದಾದ ಮೇಲೆ ಅವನಿಗನ್ನಿಸಿದ್ದು 'ಈಕೆ ಈ ಜನ್ಮದಲ್ಲಿ ತನಗೆ ಸಿಗುವುದಿಲ್ಲ ..' ಎಂದು. ಬೇಸರಗೊಂಡವನು ಮನೆಗೆ ಬಂದು ಅವತ್ತೆಲ್ಲಾ ಆರಾಮವಾಗಿ ಮನೆಯವರ ಜೊತೆ ಕಳೆದಿದ್ದಾನೆ. ಗೆಳೆಯರನ್ನೆಲ್ಲಾ ಮಾತನಾಡಿಸಿದ್ದಾನೆ. ಅಲ್ಲೂ ನಿರಾಶಾದಾಯಕ ಮಾತನ್ನಾಡಿಲ್ಲ.
ಮಾರನೆಯ ದಿನ ಬೆಳಿಗ್ಗೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಡಾಕ್ಟರು ಅಪ್ಪನಿಗೆ ಬರೆದುಕೊಟ್ಟಿದ್ದ ಮಾತ್ರೆಯ ಚೀಟಿಯನ್ನು ಮಾತ್ರ ತೆಗೆದುಕೊಂಡು, ಬೇರಾವುದೇ ರೀತಿಯ ತನ್ನನ್ನು ಗುರುತಿಸಬಹುದಾದ ವಸ್ತುಗಳನ್ನೂ ತೆಗೆದುಕೊಳ್ಳದೆ  ಎಲ್ಲರನ್ನೂ ಮಾತನಾಡಿಸಿ ಹೋಗಿದ್ದಾನೆ. ಆ ಚೀಟಿಯಲ್ಲಿದ್ದ ನಿದ್ರೆಯ ಮಾತ್ರೆಗಳನ್ನು ಯಾವ ಮೆಡಿಕಲ್ಲಿನವರೂ ಅಗತ್ಯಕ್ಕಿಂತ ಹೆಚ್ಚುಕೊಡುವುದಿಲ್ಲ ಎಂಬುದು ಮೊದಲೇ ಗೊತ್ತಿದ್ದರಿಂದ ಸುಮಾರು ಅಂಗಡಿಗಳಿಗೆ ಹೋಗಿ ಅದೇ ಮಾತ್ರೆಗಳನ್ನು ತೆಗೆದುಕೊಂಡಿದ್ದಾನೆ. ಆನಂತರ ಊರಿಂದ ನಡೆಯುತ್ತಲೇ ಸಾಗಿದ್ದಾನೆ. ಸಂಜೆಯವರೆಗೂ ನಡೆದವನು ಅಲ್ಲಿ ನಿದ್ರೆ ಮಾತ್ರೆ ನುಂಗಿ ಮಲಗಿಬಿಟ್ಟಿದ್ದಾನೆ.
ಮಗ ಎರಡ್ಮೂರು ದಿನ ಕಳೆದರೂ ಮನೆಗೆ ಬರದಿದ್ದಾಗ ಮನೆಯವರು ಗಾಬರಿಯಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಗೆಳೆಯರೂ ಅಕೆಯ ಬಳಿ ಹೋಗಿ ವಿಷಯ ಹೇಳಿದಾಗ ಗಾಬರಿಯಾದ ಆಕೆ 'ಅವನನ್ನು ಕರೆತನ್ನಿ ನಾನು ಅವನನ್ನು ಮದುವೆಯಾಗುತ್ತೇನೆ..' ಎಂದು ಗೋಳಾಡಿದ್ದಾಳೆ.
ಅಲ್ಲಿ ಪೊಲೀಸರಿಗೆ ಹೆಣ ಸಿಕ್ಕಿದರೂ ಗುರುತು ಹಚ್ಚಲಾಗಿಲ್ಲ. ಕೊನೆಗೆ ಶರ್ಟಿನ ಕಾಲರಿನಲ್ಲಿದ್ದ ಟೈಲರ್ ವಿಳಾಸ, ಮತ್ತು ಜೇಬಿನಲ್ಲಿದ್ದ ಮಾತ್ರೆ ಚೀಟಿಯಿಂದ ಮನೆಯವರನ್ನು ಕಂಡುಹಿಡಿದು ಹೆಣ ತಲುಪಿಸಿದ್ದಾರೆ.
ಒಂದು ನವಿರಾಗಿ ಬದುಕು ರೂಪಿಸಬೇಕಾಗಿದ್ದ ಪ್ರೀತಿ ಒಬ್ಬನ ಬಳಿ ತೆಗೆದುಕೊಂಡರೆ ಆಕೆಯನ್ನು ಜೀವನವಿಡೀ ಕೊರಗುವಂತೆ ಮಾಡಿದೆ. ಇದಕ್ಕೆ ಹೊಣೆ ಮಾಡುವುದಾದರೂ ಯಾರನ್ನು?

Sunday, February 10, 2013

ಇವಾನ್ಸ್ ವುಮನ್ ಬೆನ್ನುಬಿದ್ದು.

ಬೆಂಗಳೂರು ಚಿತ್ರೋತ್ಸವದಲ್ಲಿ ಇವಾನ್ಸ್ ವುಮನ್ ಎನ್ನುವ ಚಿಲಿಯನ್ ಚಲನಚಿತ್ರವಿತ್ತು. ಮೊದಲಿಗೆ ಆ ಚಿತ್ರದ ಕಥೆ ಏನೂ ಎಂಬುದು ಅರ್ಥವಾಗಲಿಲ್ಲ. ಅಪಹರಣಕಾರನೊಬ್ಬ ಹುಡುಗಿಯೊಬ್ಬಳನ್ನು ಅಪಹರಿಸಿದ ನಂತರ ಆಕೆಯೊಂದಿಗೆ ಬಾಂಧವ್ಯ ಬೆಳೆಸಿಕೊಳುವ ಕಥೆ ಅದು. ಆದರೆ ಚಿತ್ರದ ಪ್ರಾರಂಭ ಹಿನ್ನೆಲೆ ಮುಂತಾದವುಗಳ ಬಗ್ಗೆ ನಿರ್ದೇಶಕಿ ತಲೆಕೆಡಿಸಿಕೊಳ್ಳದೆ ಇದ್ದುದರಿಂದ ಪ್ರೇಕ್ಷಕನಿಗೆ ಯಾವುದು ಅರ್ಥವಾಗದ ರೀತಿಯಲ್ಲಿತ್ತು ಚಿತ್ರ. ಮಾರನೆಯ ದಿವಸ ಚಿತ್ರೋತ್ಸವದಲ್ಲಿ ಸಿಕ್ಕಿದ ಗೆಳೆಯರ ಜೊತೆ ಮಾತನಾಡುವಾಗ ಆ ಚಿತ್ರದ ಬಗ್ಗೆ ಪ್ರಸ್ತಾಪಿಸಿದಾಗ ಅವರಿಗೂ ಅದೂ ಅರ್ಥವಾಗದ್ದು ಹಾಗಿರಲಿ, ಇನ್ನೊಂದು ದೊಡ್ಡ ಅನರ್ಥವಾಗೇ ಇತ್ತು. ಚಿತ್ರದಲ್ಲಿ ಅಪಹೃತೆ ಚಿಕ್ಕ ಹುಡುಗಿಯಾಗಿದ್ದಾಗಲಿನ ದೃಶ್ಯ ಒಂದಿದೆ. ಅದನ್ನು ನೋಡಿದ್ದವರೆಲ್ಲಾ ಅದೊಂದು ತಂದೆ ಮಗಳ ನಿಷಿದ್ಧ ಸಂಬಂಧದ ಕಥೆ ಎಂದೆ ತಿಳಿದುಕೊಂಡಿದ್ದರು. ಅಷ್ಟೇ ಅಲ್ಲದೆ 'ಏನು ಗುರು...ತಂದೇನೆ ಮಗಳನ್ನ ಆ ತರಹ ಕೂಡಿಹಾಕಿ ಅನುಭವಿಸೋದು ಎಂಥ ಕೆಟ್ಟೆದ್ದಲ್ವಾ...ಅದೇನು ದರಿದ್ರದ ಸಿನಿಮಾ ತಗಿತಾರಪ್ಪಾ...' ಎಂದೆಲ್ಲಾ ಬೈದಿದ್ದರು. ಆದರೆ ಎಲ್ಲೆಲ್ಲೂ ತಂದೆ ಮಗಳ ಪ್ರಸ್ತಾಪ ಬರದಿದ್ದುದರಿಂದ ನನಗೆ ಅದೊಂದು ಅನುಮಾನ ಇದ್ದೆ ಇತ್ತು.
ಮನೆಗೆ ಬಂದ ಮೇಲೆ ಆ ಚಿತ್ರದ ಬಗ್ಗೆ ಒಂದಷ್ಟು ಹುಡುಕಾಡಿದೆ.
ಆಗ ತಿಳಿದುಬಂದ ವಿವರಗಳು ಒಂದಷ್ಟು ಕುತೂಹಲಕರವಾಗಿದ್ದವು. ಇವಾನ'ಸ್ ವುಮನ್ ಚಿತ್ರ ನೈಜ ಘಟನೆಯಾಧಾರಿತ ಚಿತ್ರ. ನತಾಸ್ಚ ಕಾಂಪುಶ್ ಎನ್ನುವ ಆಸ್ಟ್ರಿಯನ್ ಮಹಿಳೆಯ ಕಥೆ ಆಧರಿಸಿದ ಚಿತ್ರ. ನತಾಶ್ಚ ಹತ್ತು ವರ್ಷದವಳಾಗಿದ್ದಾಗ ಪ್ರಿಕ್ಲೋಪಿಲ್ ಎಂಬಾತ ಆಕೆಯನ್ನು ಅಪಹರಿಸಿದ್ದ. ಪೊಲೀಸರು ಈ ಕೇಸನ್ನು ಬಗೆಹರಿಸಲು ಶತಪ್ರಯತ್ನ ಪಟ್ಟಿದ್ದರು.ಯಾವುದೇ ಉಪಯೋಗವಾಗಿರಲಿಲ್ಲ. ಅಪಹರಣಕಾರನ ಬಗ್ಗೆ ಯಾವ ಮಾಹಿತಿಯೂ ದೊರೆತಿರಲಿಲ್ಲ. ಅಪಹರಣವಾದಾಗ 12 ವರ್ಷದ ಹುಡುಗ ಮಿನಿ ಬಸ್ಸೊಂದರಲ್ಲಿ ಬಂದವರು ಕಿಡ್ನಾಪ್ ಮಾಡಿದ್ದರು ಎಂದು ಸಾಕ್ಷಿ ನುಡಿದಿದ್ದರಿಂದ ಅಲ್ಲಿದ್ದ 776 ವ್ಯಾನುಗಳನ್ನು ತಪಾಸಣೆ ನಡೆಸಿದ್ದರು. ಪಿಲ್ ನನ್ನೂ ಕೂಡ ಪರೀಕ್ಷೆಗೆ ಒಳಪಡಿಸಿದಾಗ ತಾನು ಆ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬನೇ ಇದ್ದೆ ಎಂದು ಸುಳ್ಳುಹೇಳಿ ತಪ್ಪಿಸಿಕೊಂಡಿದ್ದ. ಇದೆಲ್ಲಾ ನಡೆದದ್ದು 1998ರಲ್ಲಿ. ಅದಾದ ಎಂಟು ವರ್ಷದ ನಂತರ ನತಾಶ್ಚ ಅಲ್ಲಿಂದ ತಪ್ಪಿಸಿಕೊಂಡು ಬಂದಾಗಲೇ ಅವಳ ಕಥೆ ಎಲ್ಲರಿಗೂ ತಿಳಿದುಬಂದದ್ದು. 
ಆ ಎಂಟು ವರ್ಷದಲ್ಲಿ ಅವಳನ್ನು ಸೆಲ್ಲಾರ್ ಒಂದರಲ್ಲಿ ಕೂಡಿಹಾಕಿದ್ದ ಪಿಲ್ ಆಕೆಗೆ ಪುಸ್ತಕಗಳನ್ನೂ ಕೊಡುತ್ತಿದ್ದ. ಓದಿಸುತ್ತಿದ್ದ. ಮನೆಯಲ್ಲಿ ಓಡಾಡಲು ಅವಕಾಶ ಕೊಟ್ಟಿದ್ದನಾದರೂ ಮನೆಯಿಂದ ಹೊರಹೋಗದಂತೆ ನಿರ್ಬಂಧ ಹಾಕಿದ್ದ. ಆ ಪ್ರಯತ್ನ ಮಾಡಿದರೆ ಕೊಳ್ಳುತ್ತೇನೆಂದು ಬೆದರಿಕೆಯನ್ನೂ ಹಾಕಿದ್ದ.
ಆದರೆ ಅದೊಂದು ದಿನ ಆಕೆ ಸಮಯ ಸಾಧಿಸ ತಪ್ಪಿಸಿಕೊಂಡಿದ್ದಳು. ಪೊಲೀಸರು ತನ್ನ ಬೆನ್ನ ಹಿಂದೆ ಬಿದ್ದಿದ್ದಾರೆಂದು ತಿಳಿದಾಕ್ಷಣ ಪಿಲ್ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡ. ಹಾಗಾಗಿ ಆತನ ಉದ್ದೇಶವೆನಿತ್ತೆಂಬುದು ಯಾರಿಗೂ ಗೊತ್ತಾಗಲಿಲ್ಲ. ಆನಂತರ ನತಾಶ್ಚ ತನ್ನದೇ ಕಥೆಯನ್ನೂ ನತಾಶ್ಚ ಕಾಂಪುಶ್  3,096 ದಿನಗಳು ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಹೊರತಂದಳು. ಅವಳನ್ನು ಕುರಿತ ಟಿವಿಯಲ್ಲಿ ಕಾರ್ಯಕ್ರಮವೂ ಒಂದು ಪ್ರಸಾರವಾಯಿತು.
ಅವಳ ಈ ಕಥೆಯನ್ನ  ಆಧರಿಸಿ ಫ್ರಾನಿಸ್ಕ ಸಿಲ್ವಾ ಸ್ಪಾನಿಶ್ ಭಾಷೆಯಲ್ಲಿ ಇವಾನ'ಸ್ ವುಮನ್  ಚಿತ್ರ ಮಾಡಿರುವುದು. ಆದರೆ ಸ್ವಲ್ಪ ಹಿನ್ನೆಲೆಯೊಂದಿಗೆ ಚಿತ್ರಕಥೆಯಲ್ಲಿ ಇನ್ನೂ ತಲೆಕೆಡಿಸಿಕೊಂಡಿದ್ದರೆ ಒಂದು ಅತ್ಯುತ್ತಮ ಚಿತ್ರವಾಗಿರುತ್ತಿತ್ತಲ್ಲದೆ ಅದ್ಭುತವಾದ ಥ್ರಿಲ್ಲರ್ ಕೂಡ ಆಗುವ ಸಾಧ್ಯತೆ ಇತ್ತು. ಒಂಟಿತನ, ಹೆಣ್ತನದ ತಳಮಳ, ಯವ್ವನದ ಒಳಗುದಿಯನ್ನು ವ್ಯಕ್ತಪಡಿಸಲು ಕಥೆಯಲ್ಲಿಯೇ ಸಾಕಷ್ಟು ಅವಕಾಶಗಳಿತ್ತು.ಆದರೆ ಹೊಸತನ, ಪ್ರಯೋಗದ ದೆಸೆಯಿಂದಾಗಿ ಚಿತ್ರ ಯಾವ ಭಾವವನ್ನು ಸರಿಯಾಗಿ ವ್ಯಕ್ತಪಡಿಸದೆ ಸಾದಾರಣ ಚಿತ್ರವೂ ಆಗದಂತಾಗಿಹೋದದ್ದು ಬೇಸರದ ಸಂಗತಿ.