Friday, June 15, 2012

ವಿ'ಚಿತ್ರ'ಗಳು-2


ಸಿನಿಮಾ ನೋಡುತ್ತಿದ್ದ ಹಾಗೆಯೇ ಕಥೆ ಒಂದು ಘಟ್ಟಕ್ಕೆ ತಲುಪಿದ ಮೇಲೆ ಇನ್ನೇನು ಕೊನೆಯ ಹಂತ ಬಂತು ಎನ್ನುವಷ್ಟರಲ್ಲಿ ತೆರೆಯ ಮೇಲೆ ನೀವು ಅಂಜುಬುರುಕರಾಗಿದ್ದಲ್ಲಿ, ಮೆದು ಹೃದಯದವರಾಗಿದ್ದಲ್ಲಿ ಮುಂದಿನ ದೃಶ್ಯಗಳನ್ನು ನೋಡಲುಸಾಧ್ಯವಿಲ್ಲ.. ಈಗಲೇ ಚಿತ್ರಮಂದಿರದಿಂದ ಹೊರಟುಬಿಡಿ..ಎಂದು ಮೂಡಿದರೆ ನಿಮಗೇನಾಗಬೇಡ..ಇದು ಗ್ಯಾಸ್ಪರ್‌ನೋ ಎಂಬ ನಿರ್ದೇಶಕನ ಐ ಸ್ಟ್ಯಾಂಡ್ ಆಲೋನ್ ಚಿತ್ರದಲ್ಲಿ ಕ್ಲೈಮ್ಯಾಕ್ಸಿಗೂ ಮುನ್ನ ಬರುವ ತೆರೆಬರಹ. ಇದೇ ನಿರ್ದೇಶಕನ ಮತ್ತೊಂದು ಸಿನಿಮಾ ಇದೆ. ಅದೇ ಇರಿವರ್ಸಿಬಲ್. 2002 ರಲ್ಲಿ ತೆರೆಗೆ ಬಂದ ಈ ಚಿತ್ರದ ತಾರಾಗಣದಲ್ಲಿ ಖ್ಯಾತ ನಟಿ ಮೋನಿಕಾ ಬೆಲ್ಲುಚಿ, ವಿನ್ಸೆ೦ಟ ಕೇಸಲ್ ಆಲ್ಬರ್ಟ್  ದ್ಯೂಪನಲ್ ಅಭಿನಯಿಸಿದ್ದಾರೆ.. ಆ ನುಡಿವಾಕ್ಯ ಐ ಸ್ಟ್ಯಾಂಡ್ ಆಲೋನ್ ಸಿನಿಮಾದ ಕೊನೆಯ ದೃಶ್ಯಕ್ಕೆ ಮಾತ್ರ ಅನ್ವಯಿಸಿದರೆ ಇರಿವರ್ಸಿಬಲ್ ಸಿನಿಮಾಗೆ  ಇಡೀ ಚಿತ್ರಕ್ಕೆ ಅನ್ವಯಿಸುತ್ತದೆ.
ಹೆಸರೇ ಸೂಚಿಸುವಂತೆ ಇಡೀ ಚಿತ್ರವೇ ಹಿಂದುಮುಂದಾಗಿದೆ. ಅಂದರೆ ಸಿನಿಮಾದ ಕ್ಲೈಮ್ಯಾಕ್ಸ್ ಮೊದಲು ಬಂದರೆ ಮೊದಲ ದೃಶ್ಯ ಕೊನೆಯಲ್ಲಿ ಬಂದು ಚಿತ್ರ ಮುಗಿಯುತ್ತದೆ. ಒಂದು ಸುಂದರ ಕುಟುಂಬ ಒಂದು ರಾತ್ರಿಯಲ್ಲಿ ನಿರ್ನಾಮವಾಗುವುದೇ ಚಿತ್ರದ ಕಥಾಹಂದರ.
ಈ ತರಹದ ತಿರುಗುಮುರುಗು ನಿರೂಪಣೆಯನ್ನು ನಿರ್ದೇಶಕ ಯಾಕಾಗಿ ಆಯ್ಕೆ ಮಾಡಿಕೊಂಡ ಎಂಬುದಕ್ಕೆ ಇಡೀ ಸಿನಿಮಾದಲ್ಲಿ ಸ್ಪಷ್ಟ ನಿದರ್ಶನವೇನೂ ಕಾಣುವುದಿಲ್ಲ. ಅಥವಾ ಹಾಗೆ ತಿರುಗುಮುರುಗು ಮಾಡಿರುವುದರ ಹಿಂದೆ ಬುದ್ದಿವಂತಿಕೆಯ, ಅಚ್ಚರಿ ತರಿಸುವ ಯಾವ ಅಂಶವೂ ಕಂಡುಬರುವುದಿಲ್ಲ. ಬರೇ ವಿಚಿತ್ರ ನಿರೂಪಣೆಗೋಸ್ಕರ ಈ ಚಿತ್ರ ಆಯ್ದಕೊಂಡಿರಬೇಕೇನೋ ಎನಿಸುತ್ತದೆ.
ಸಿನಿಮಾವೂ ಅಷ್ಟೆ. ತುಂಬಾ ಹಿಂಸಾತ್ಮಕವಾಗಿದೆ. ಅದರಲ್ಲೂ ಕ್ಯಾಮೆರಾ ಚಲನೆಯಂತೂ ಯಾರೋ ಕ್ಯಾಮೆರ ಕೈಯಲ್ಲಿ ಹಿಡಿದು ಧಾವಂತದಿಂದ ದಿಕ್ಕುದೆಸೆಯಿಲ್ಲದೇ ಎತ್ತೆತ್ತಲೋ ಹೆಜ್ಜೆ ಹಾಕಿದಂತಿದೆ. ಸಿನಿಮಾದ ಮಧ್ಯದಲ್ಲಿ ಬರುವ ಅತ್ಯಾಚಾರದ ಸನ್ನಿವೇಶ ಬಿಟ್ಟರೇ ಬೇರಾವ ದೃಶ್ಯದಲ್ಲೂ ಕ್ಯಾಮೆರಾ ನಿಲ್ಲುವುದೇ ಇಲ್ಲ. ಜೊತೆಗೆ ಗುಂಯ್ ಎನ್ನುವ ಹಿನ್ನೆಲೆ ಸಂಗೀತ ಬೇರೆ. ದೃಶ್ಯಗಳು ಅದೆಷ್ಟು ನೈಜವಾಗಿವೆಯೆಂದರೆ ನೋಡಿ ಅರಗಿಸಿಕೊಳ್ಳುವುದು ಅಸಾಧ್ಯ. ಅದರಲ್ಲೂ ಸಲಿಂಗಿಗಳ ಕ್ಲಬ್ಬಿನಲ್ಲಿ ನಡೆಯುವ ಬರ್ಬರ ಹತ್ಯೆ ಚಿತ್ರೀಕರಿಸಿರುವ ಪರಿಗೆ ನೋಡಲಾಗದೆ  ಕಣ್ಣುಮುಚ್ಚಿಕೊಳ್ಳಲೇ ಬೇಕಾಗುತ್ತದೆ. ಅದೇ ರೀತಿ ಅತ್ಯಾಚಾರದ ಸನ್ನಿವೇಶದಲ್ಲೂ. 
ಸುಮಾರು ಒಂಬತ್ತು ನಿಮಿಷಗಳಷ್ಟು ಉದ್ದವಿರುವ ಈ ಅತ್ಯಾಚಾರದ ದೃಶ್ಯದಲ್ಲಿ ಕ್ಯಾಮೆರಾ ಒಂದುಕಡೆ ಸ್ಥಿರವಾಗಿಬಿಡುತ್ತದೆ. ಆದರೆ ಆ ಇಬ್ಬರು ಕಲಾವಿದರ ಅಭಿನಯ, ದೃಶ್ಯದ ಬರ್ಬರತೆ, ಹಿನ್ನೆಲೆ ಸಂಗೀತ ಮತ್ತು ಬೆಳಕಿನ ಸಂಯೋಜನೆ ಎಲ್ಲಾ ಸೇರಿ ನೋಡುಗನ ಮನಸ್ಸನ್ನು ಘಾಸಿಗೊಳಿಸಿಬಿಡುತ್ತದೆ.
ಒಂದು ಭಿನ್ನ ಪ್ರಯತ್ನ, ವಿಚಿತ್ರ ಪ್ರಯೋಗ ಹಾಗೆ ಹಿಂಸಾತ್ಮಕ ಸಿನಿಮಾಗಳೆಡೆಗೆ ನಿಮ್ಮ ಒಲವಿದ್ದರೆ ಒಮ್ಮೆ ನೋಡಿ ಎನ್ನುವ ಧೈರ್ಯಮಾಡಬಹುದು.
ಇಲ್ಲದಿದ್ದರೆ ಯಾರಿಗೂ ನೋಡಿ ಎಂದು ಹೇಳದಿರುವುದೇ ಒಳ್ಳೆಯದು.


Wednesday, June 13, 2012

ಅನಿರೀಕ್ಷಿತ ಪ್ರವಾಸವೂ...


ಇರುವುದಿಲ್ಲ. ಯಾಕೆಂದರೆ ದಿನದ ಇಪ್ಪತ್ತನಾಲ್ಕು ತಾಸೂ ಚಿತ್ರದ ಕಥೆಯ ಚರ್ಚೆಯಲ್ಲೇ ಕಳೆದು ಹೋಗಿರುತ್ತದೆ. ಸುಮ್ಮನೇ ಹಸಿರು ಪ್ರದೇಶದ, ಹೊಸ ಹೊಸ ಜಾಗದ ನಡುವೆ ನಡೆಯುತ್ತ 'ಹಾಗೇ ಮಾಡೋಣ', 'ಹೀಗೆ ಮಾಡಿದರೆ ಚೆನ್ನಾಗಿರುತ್ತೆ..' ಎಂದು ಮಾತಾಡುಸಿನಿಮಾದ ಕೆಲಸಕ್ಕಾಗಿ ಒಂದು ವಾರ ಭಟ್ಕಳದ ಅಕ್ಕಪಕ್ಕದ ಪ್ರದೇಶಗಳಿಗೆ ಭೇಟಿನೀಡಬೇಕಾಗಿತ್ತು. ಸಿನಿಮಾದ ಬರವಣಿಗೆಯ ಕೆಲಸವೆಂದರೆ ಅಲ್ಲಿ ಸಿನಿಮಾ ನೋಡಲು ಆಸ್ಪದ ತ್ತಾ ಸಾಗುವುದೇ ಒಂದು ವಿಶಿಷ್ಟ ಅನುಭವ. ಅವೇನೂ ಪ್ರವಾಸಿ ತಾಣಗಳಲ್ಲ. ಅಲ್ಲಿನ ಜನರು ಬದುಕುವ ಪರಿ, ಅವರ ಊಟತಿಂಡಿ ವ್ಯವಸ್ತೆ, ಅಲ್ಲಿನ ರಾಜಕೀಯ ಪರಿಸ್ಥಿತಿ, ಅಲ್ಲಿನ ಜನರ ಮನಸ್ಥಿತಿ, ಸಾಹಿತ್ಯ, ಸಿನಿಮಾ, ರಾಜಕೀಯ, ವಿದ್ಯಾಭ್ಯಾಸಗಳೆಡೆಗೆ ಅವರಿಗಿರುವ ದೃಷ್ಟಿಕೋನ ಮುಂತಾದವುಗಳನ್ನು ಗಮನಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿತ್ತದು. ಅದರಲ್ಲೂ ಭಟ್ಕಳ ಅಕ್ಕಪಕ್ಕದ ಸುಮಾರು ಹಳ್ಳಿಗಳಿಗೆ ಬಸ್ಸಿಡಿದು ಆಟೋದಲ್ಲಿ ಓಡಾಡಿಕೊಂಡು ಅಲ್ಲಿನ ಜನರ ಜೊತೆ ಅದೂ ಇದೂ ಮಾತಾಡುವುದೇ ಒ೦ದು ಮಜ. ನಾವಿದ್ದ ಜಾಗದಿಂದ ಮುರಡೇಶ್ವರ ಕೇವಲ ಹನ್ನೆರೆಡು ಕಿಲೋಮೀಟರ್ ಆದ್ದರಿಂದ ಅಲ್ಲೂ ಹೋಗಿಬಂದುಬಿಡೋಣವೆಂದುಕೊಂಡು ಹೊರಟೇಬಿಟ್ಟವು. ವರ್ಷಾನೂ ಗಟ್ಟಲೇ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ ರಾವಣ. ಈಶ್ವರ ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಏನು ಬೇಕೆಂದು ಕೇಳಿದಾಗ ತನಗೆ ಆತ್ಮಲಿಂಗ ಕರುಣಿಸು ಎಂದು ಬೇಡಿಕೊಳ್ಳುತ್ತಾನೆ. ಈಶ್ವರ ತಥಾಸ್ತು ಎಂದು ಆತ್ಮಲಿಂಗ ಕರುಣಿಸುತ್ತಾನೆ. ಆದರೆ ನಾರದ ಮತ್ತು ಗಣಪತಿ ಸೇರಿಕೊಂಡು ಅದು ಲಂಕೆಯ ಪಾಲಾಗುವುದನ್ನು ತಪ್ಪಿಸಬೇಕೆಂದು ಉಪಾಯಮಾಡುತ್ತಾರೆ. ರಾವಣನು ಸಂಧ್ಯಾವಂದನೆ ಮಾಡಬೇಕಾದಾಗ ಗಣಪತಿ ಮಾರುವೇಶ ಧರಿಸಿ ಶಿವನಿಂದ ಆತ್ಮಲಿಂಗವನ್ನು ಪಡೆದುಕೊಂಡು ತಾನು ಮೂರು ಎಣಿಸುವವರೆಗೆ ಬರದಿದ್ದರೆ ಅದನ್ನು ಭೂಸ್ಪರ್ಶಮಾಡಿಬಿಡುತ್ತೇನೆ ಎಂದು ಹೇಳುತ್ತಾನೆ. 'ಸರಿ' ಎಂದು ರಾವಣ ಸಂಧ್ಯಾವಂದನೆಯಲ್ಲಿ ನಿರತನಾದಾಗ ಗಣಪತಿ ಮೂರು ಬಾರಿ ಕೂಗಿ ಕರೆದು ಲಿಂಗವನ್ನು ಭೂಸ್ಪರ್ಶಮಾಡಿಯೇ  ಬಿಡುತ್ತಾನೆ. ಒಮ್ಮೆ ಭೂಸ್ಪರ್ಶವಾದ ಲಿಂಗವನ್ನು ಮತ್ತೆ ತನ್ನ ವಶಕ್ಕೆ ತಗೆದುಕೊಳ್ಳಲು ಪ್ರಯತ್ನಿಸಿ ಸಾಧ್ಯವಾಗದಿದ್ದಾಗ ತನ್ನ ಗದೆಯಿಂದ ಭಾರಿಸುತ್ತಾನಂತೆ ರಾವಣ. ಅವನ ಹೊಡೆತಕ್ಕೆ ಐದು ಚೂರಾಗುವ ಶಿವಲಿಂಗ ಐದು ಕಡೆಗಳಲ್ಲಿ ಬೀಳುತ್ತದೆ. ಅವೇ ಗೋಕರ್ಣ, ಮುರುಡೇಶ್ವರ, ಸಜ್ಜೇಶ್ವರ, ಧಾರೇಶ್ವರ, ಗುಣವಂತೇಶ್ವರ. ಅಲ್ಲಿನ ಪುರಾಣದ ಕಥೆ ಕೇಳಿದ ಮೇಲೆ ಕೊನೆಯ ದಿನ ಆ ಐದು ಪಂಚಕ್ಷೇತ್ರಗಳನ್ನೂ ಸುತ್ತಿಬರಬೇಕೆಂದುಕೊಂಡು ನಾನು ಗೆಳೆಯ ಗಿರಿಬಾಲು ನಿರ್ಧರಿಸಿದೆವು. ನನಗೆ ಪ್ರತಿಸಾರಿಯೂ ಪುರಾಣದ ಕಥೆ ಕೇಳುವಾಗ ಸಿನಿಮಾಕ್ಕೇ ಅದೆಂತಹ ಅದ್ಭುತ ಕುತೂಹಲಕಾರಿ ವಸ್ತು ಎನಿಸುತ್ತದೆ. ನಮ್ಮ ಪುರಾಣದಲ್ಲಿರುವ ರೋಚಕತೆ ಅಬ್ಬಬ್ಬಾ...
ಇವೆಲ್ಲಾ ವೈಯಕ್ತಿಕ ಪ್ರಲಾಪದ ನಡುವೆಯೂ ಸಿಡ್ನೀ ಶೆಲ್ಡನ್ ಮಾತ್ರ ನನ್ನನ್ನು ಬಿಡುತ್ತಿಲ್ಲ. ಅವನ ದಿ ನೇಕಡ್ ಫೇಸ್ ಓದಿದೆ. ತುಂಬಾ ರೋಮಾಂಚಕಾರಿ ಕಾದಂಬರಿ ಅದು. ಒಬ್ಬ ಮನಶಾಸ್ತ್ರದ ವೈದ್ಯನ ಸುತ್ತಮುತ್ತ ನಡೆಯುವ ಕಥೆ ಅದ್ಯಾವ ಪರಿ ಓದಿಸಿಕೊಂಡಿತೆಂದರೆ ಕೆಲಸದ ನಡುನಡುವೆ ಸ್ವಲ್ಪ ಸಮಯ ಸಿಕ್ಕರೂ ಪುಟಬಿಡಿಸುವಂತೆ ಮಾಡುತ್ತಿತ್ತು. ಓದುಗ ಏನನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಾಗದಂತಹ ವೇಗದಲ್ಲಿ ಕಾದಂಬರಿ ಓಡುತ್ತದೆ. ಪ್ರತಿ ನಿರೀಕ್ಷೆಯನ್ನೂ ಸುಳ್ಳು ಮಾಡುವ ಶೆಲ್ಡನ್, ಅನಿರೀಕ್ಷಿತ ತಿರುವುಗಳನ್ನು ಕೊಟ್ಟು ಓದುಗರನ್ನು ಅಚ್ಚರಿಗೀಡುಮಾಡುತ್ತಾನೆ. ಕೊನೆಯ ಹತ್ತು ಹದಿನೈದು ಪುಟಗಳು ಸ್ವಲ್ಪ ಉದ್ದವಾಯಿತೇನೋ ಅನಿಸಿದ್ದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗೆ ರವಿಬೆಳೆಗೆರೆಯವರ ಹಿಮಾಗ್ನಿಯನ್ನೂ ಓದಿ ಮುಗಿಸಿದೆ. ಸುಮಾರು ನಾಲ್ಕು ನೂರು ಪುಟಗಳು ಎರಿಕ್ ಬಾನಾ ಅಭಿನಯದ ಮ್ಯೂನಿಕ್ ಚಿತ್ರದ ಕನ್ನಡ ರೂಪಾಂತರ ಎನಿಸಿದರೂ ಕೊನೆಯ ನೂರು ಪುಟಗಳು ಬೇರೆಯದೇ ಆದ ತಿರುವನ್ನು ತೆಗೆದುಕೊಳ್ಳುತ್ತದೆ.  ಏನೆಲ್ಲಾ ಸಾಹಸಮಾಡಿ, ಪ್ರಾಣದ ಹಂಗು ತೊರೆದು ಭಯೋತ್ಪಾದಕರ ಮೂಲ ವ್ಯಕ್ತಿಗಳನ್ನು ಬಗ್ಗು ಬಡಿಯುವ ನಾಯಕ ಕೊನೆಯಲ್ಲಿ ತನ್ನ ಸಂಬಳಕ್ಕಾಗಿ ತನ್ನವರ ವಿರುದ್ಧವೇ ಹೋರಾಡುವ ಅಂಶ ರೋಚಕ ಎನಿಸಿತು.ಈಗ ಸಿಡ್ನೀ ಶೆಲ್ಡನ್ ರಚಿತ ಕಾದಂಬರಿ ದಿ ಅದರ್ ಸೈಡ್ ಆಫ್ ಮಿಡ್‌ನೈಟ್ ಪುಸ್ತಕ ತಂದಿಟ್ಟುಕೊಂಡಿದ್ದೇನೆ.ಈಗಾಗಲೇ ಇದೇ ಕಾದಂಬರಿ ಆಧಾರಿತ ಸಿನಿಮಾವನ್ನು ನೋಡಿರುವುದರಿಂದ ಅದರ ಪಾತ್ರಗಳು ಅಚ್ಚಳಿಯದೇ ಮನಸ್ಸಿನಲ್ಲಿ ಹಾಗೇ ಉಳಿದಿವೆ. ಮತ್ತೇ ಅದನ್ನೇ ಬರಹದ ರೂಪದಲ್ಲಿ ಮನತುಂಬಿಕೊಳ್ಳುವ ಪುಳಕಕ್ಕೆ ಸಮಯಬೇಡುತ್ತಿದ್ದೇನೆ.
ನಿಮ್ಮ  ಸಮಾಚಾರವೇನು..?



Monday, June 11, 2012

ನೀಲ ಚಿತ್ರಿಕೆಗಳು-1

ಮೊನ್ನೆ ಅರವಿಂದ್ ಕೌಶಿಕ್ ಕನ್ನಡದಲ್ಲೊಂದು ಸಿಂಗಲ್ ಶಾಟ್ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿಕೆ  ಕೊಟ್ಟಿದ್ದು ಪತ್ರಿಕೆಗಳಲ್ಲಿ ಪ್ರಕಟವಾಯಿತು.ಕನ್ನಡದ ಮಟ್ಟಿಗೆ  ಮತ್ತು ಇಡೀ ಭಾರತದಲ್ಲೇ ಇದೊ೦ದು ಶ್ಲಾಘನೀಯ ಸಾಧನೆಯೇ ಸರಿ.ಅದು ಕಾರ್ಯ ರೂಪಕ್ಕೆ ಬಂದದ್ದೇ ಆದರೆ ಚಿತ್ರೀಕರಣದ ಅವಧಿಯನ್ನು ಪರಿಗಣಿಸಿ ಮಾಡಲಾಗುವ ದಾಖಲೆಗಳಿಗೆ ಒ೦ದು ಪೂರ್ಣ ವಿರಾಮ ಇಟ್ಟಂತಾಗುತ್ತದೆ.ಕನ್ನಡದ ಮಟ್ಟಿಗೆ ಅತೀ ಕಡಿಮೆ ಅವಧಿಯಲ್ಲಿ ಚಿತ್ರೀಕರಿಸಿದ ಚಿತ್ರವೆಂದರೆ ಮೊನ್ನೆ ಮೊನ್ನೆ ಬಂದ ಥ್ರಿಲ್ಲರ್ ಮಂಜು ರವರ ನಿರ್ದೇಶನದ ಪೋಲಿಸ್ ಸ್ಟೋರಿ -3. ಅಂಕಿಅಂಶಗಳ ಪ್ರಕಾರ ಕೇವಲ ಹದಿಮೂರು ಘಂಟೆಗಳಲ್ಲಿ ಚಿತ್ರೀಕರಿಸಿದ ಚಿತ್ರ ಇದು.ಚಿತ್ರ ಯಾವುದೇ ರೀತಿ ಪರಿಣಾಮ ಬೀರದಿದ್ದದ್ದು ಬೇರೆ ಮಾತು.ಹಾಗೆ ಶಿವರಾಜ್ ಕುಮಾರ್ ಅಭಿನಯದ 'ಸುಗ್ರೀವ' ಕನ್ನಡದಲ್ಲಿ ಕೇವಲ ಹದಿನೆಂಟು ಘಂಟೆಗಳಲ್ಲಿ ಚಿತ್ರೀಕರಿಸಿದ ಚಿತ್ರ.ಅದು ಮಲಯಾಳಂ ಚಿತ್ರದ ರಿಮೇಕ್. ಮತ್ತದು denzel  washington  ಅಭಿನಯದ ಜಾನ್ ಕ್ಯು ಚಿತ್ರದ ರೀಮೇಕ್. ಇದಕ್ಕೂ ಮುಂಚೆ ನಿರ್ದೇಶಕ ರಿಚರ್ಡ್ ಕ್ಯಾಸ್ತಲಿನೋ ಸೆಪ್ಟೆಂಬರ್ 8 ಎನ್ನುವ ಚಿತ್ರವನ್ನು ಇಪ್ಪತ್ತಮೂರುವರೆ ಘಂಟೆಗಳಲ್ಲಿ ಚಿತ್ರೀಕರಿಸಿದ್ದರು.ದಿನೇಶ್ ಬಾಬು ಸಹ ನಲವತ್ತೆಂಟು ಘಂಟೆಗಳ ಅವಧಿಯಲ್ಲಿ 'ಇದು ಸಾಧ್ಯ' ಎನ್ನುವ ಥ್ರಿಲ್ಲರ್ ಚಿತ್ರವನ್ನು ತೆರೆಗೆ ತಂದಿದ್ದರು..
ರೋಪ್  ಚಿತ್ರದ ದೃಶ್ಯ.
ರಿಯಲ್ ಫಿಕ್ಷನ್ ಚಿತ್ರದ ಪೋಸ್ಟರ್

ಇದು ಕನ್ನಡದ ಮಟ್ಟಿಗಾಯಿತು. ಜಾಗತಿಕ ಮಟ್ಟದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಚಿತ್ರೀಕರಿಸಿರುವ ಚಿತ್ರಗಳಿವೆಯೇ..?ಹೌದು..ಆದರೆ ಅವುಗಳ ಕೇವಲ ದಾಖಲೆಗಳಿಗಷ್ಟೇ ಮಾಡಿದ ಚಿತ್ರಗಳಲ್ಲ.ಕಥೆಯ ಒಘಕ್ಕಾಗಿ ಮಾಡಿದ ಚಿತ್ರಗಳಾದರೂ ಅವುಗಳ ಹಿಂದಿನ ಪರಿಶ್ರಮ ಪೂರ್ವ ಯೋಜನೆಗಳು ನಮಗೆ ಆ ಚಿತ್ರಗಳ ಸ್ವರೂಪದಲ್ಲಿ ಸಿಗುತ್ತವೆ.ಉದಾಹರಣೆಗೆ  ಅಲ್ಫ್ರೆಡ್ ಹಿಚ್ಕಾಕ್  ಅವರ ರೋಪ್  ಚಿತ್ರ.ಆ ಕಾಲದಲ್ಲಿ digital ಕ್ಯಾಮೆರಾಗಳು ಬಂದಿರಲಿಲ್ಲ.ಇದ್ದದ್ದು  ಫಿಲಂ ನೆಗೆಟಿವ್  ಮಾತ್ರ.ಅದನ್ನೇ ಬಳಸಿ ಕೇವಲ ಹತ್ತು ಶಾಟ್ ಗಳಲ್ಲಿ ರೋಪ್ ಚಿತ್ರವನ್ನು ನಿರ್ದೆಶಿಸಿದ್ದಾನೆ ಹಿಚ್ ಕಾಕ್..ಒ೦ದೇ ಸ್ಥಳದಲ್ಲಿ ನಡೆಯುವ ಈ ಥ್ರಿಲ್ಲರ್ ಚಿತ್ರವನ್ನು ಹಿಚ್ ಕಾಕ್ ಒ೦ದೇ ಶಾಟಿನಲ್ಲಿ ಚಿತ್ರೀಕರಿಸಲು ಯೋಚಿಸಿದ್ದನೇನೋ ಎನಿಸುವುದು ಸಿನೆಮಾದಲ್ಲಿನ transision ಗಳನ್ನು ನೋಡಿದಾಗ.ಒ೦ದು ದೃಶ್ಯದಿಂದ ಇನ್ನೊ೦ದು ದೃಶ್ಯಕ್ಕೆ ಬದಲಾಗುವಾಗ ಹಿಚ್ ಕಾಕ್ ಬಳಸಿರುವ transision  ತಂತ್ರಗಳು ನಿಜಕ್ಕೂ ನಮ್ಮಲ್ಲಿ ಬೆರಗು ಮೂಡಿಸುತ್ತವೆ.ಇಡೀ ಚಿತ್ರ ಒ೦ದೇ ಶಾಟಿನಲ್ಲಿ ಚಿತ್ರೀಕರಿಸಿದಂತೆಯೇ ಭಾಸವಾಗುತ್ತದೆ.  .ಅದು ಬಿಟ್ಟರೆ ಹಂಗರ್ ಚಿತ್ರದಲ್ಲಿ ಸರಿ ಸುಮಾರು 17.5 ನಿಮಿಷಗಳಷ್ಟು ಉದ್ದದ ದೃಶ್ಯವೊ೦ದಿದೆ. ಬಹುಶ ಇದೆ ಫಿಲಂ ನೆಗೆಟಿವ್ ನಲ್ಲಿ ಈವತ್ತು ಇರುವ ಸಾಧ್ಯತೆಗಳನ್ನು ಬಳಸಿ ಚಿತ್ರೀಕರಿಸಬಹುದಾದ ಗರಿಷ್ಠ ಉದ್ದ ಎನ್ನ ಬಹುದು.ಯಾಕೆ೦ದರೆ ಒ೦ದು ಸಿನೆಮಾದ ಕ್ಯಾಮೆರ ಮ್ಯಾಗಜಿನ್  ಅಥವಾ ರೋಲ್ 19 ನಿಮಿಷಗಳಷ್ಟನ್ನು ಮಾತ್ರ ಒಮ್ಮೆಲೇ ಚಿತ್ರೀಕರಿಸುವ ಸಾಮರ್ಥ್ಯ ಹೊಂದಿರುತ್ತದೆ.
ಅದು ಬಿಟ್ಟರೆ 'ಮೈ ಹೂ ನಾ'  ಹಿಂದಿ ಚಿತ್ರದಲ್ಲಿ ಒ೦ದು ಹಾಡನ್ನು ಎರಡೇ ಶಾಟುಗಳಲ್ಲೂ , ಕನ್ನಡದ ಶಿಶಿರ  ಚಿತ್ರದಲ್ಲಿ ಮೂರುವರೆ ನಿಮಿಷದ ಇಡೀ ಹಾಡನ್ನು ಒ೦ದೇ ಶಾಟಿನಲ್ಲೂ ಚಿತ್ರೀಕರಿಸಲಾಗಿತ್ತು.
ಹಾಗೆ ಇಡೀ ಚಿತ್ರವನ್ನು ಒ೦ದೇ ಶಾಟಿನಲ್ಲಿ ಪರಿಣಾಮಕಾರಿಯಾಗಿ ಚಿತ್ರೀಕರಿಸಿರುವ ಸಿನಿಮಾ ಎಂದರೆ ಸೈಲೆಂಟ್ ಹೌಸ್ .ಕಥೆ ಮತ್ತು ನಿರೂಪಣೆಯಿ೦ದ ಮೊದಲಿಗೆ ಮನಗೆಲ್ಲುವ ಈ ಚಿತ್ರದಲ್ಲಿರುವುದು ಒ೦ದೇ ಶಾಟ್.ಒ೦ದು ಹಾರರ್ ಚಿತ್ರವನ್ನು ಸಿಂಗಲ್ ಶಾಟಿನಲ್ಲಿ ಚಿತ್ರಿಸ ಹೊರಡುವುದೇ ಒ೦ದು ಸಾಹಸ. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ ನಿರ್ದೇಶಕ ಗುಸ್ತಾವೋ .ಹಾಗೆ ರಶಿಯನ್ ಆರ್ಕ್ , ಅಡ್ರೆನಲಿನ್, pvc -೧ , ಕಟ್ ', ರಿಯಲ್ ಫಿಕ್ಷನ್  ಮುಂತಾದ ಚಿತ್ರಗಳೂ ಕೂಡ ಸಿಂಗಲ್ ಶಾಟಿನಲ್ಲಿ ಚಿತ್ರೀಕರಿಸಿದಂತವೆ.ರಶಿಯನ್ ಆರ್ಕ್ ಸುಮಾರು ೨೦೦೦ ಕಲಾವಿದರನ್ನು ಬಳಸಿ ತೆಗೆದಂತಹ ಸಿಂಗಲ್ ಶಾಟ್ ಚಿತ್ರ.ನಿರ್ದೇಶಕ ಅಲೆಕ್ಷಾನ್ಡರ್ ಸುಕುರೋವ್.ರಶಿಯನ್ ಭಾಷೆಯಲ್ಲಿದೆ.ಒ೦ದು ದೊಡ್ಡ ಅರಮನೆಯಂತಹ ಸಂಗ್ರಹಾಲಯ.ಸುಮಾರು ೩೩ ಕೋಣೆಗಳು.ಕ್ಯಾಮೆರ ಹೊರಗಡೆಯಿಂದ ತನ್ನ ಪ್ರಯಾಣ ಆರಂಭಿಸಿ ಎಲ್ಲೂ ಅಡೆ-ತಡೆಯಿಲ್ಲದೆ ಅಷ್ಟೂ ಕೋಣೆಗಳನ್ನು ಹಾಯ್ದು ಇಡೀ ರಷ್ಯಾದ ಇತಿಹಾಸವನ್ನು ನಮಗೆ ಸಾದರಪಡಿಸುತ್ತದೆ.ಚಿತ್ರಕಾಗಿ ನಾಲ್ಕು ಟೇಕ್ ತೆಗೆದರಂತೆ..ನಾಲಕ್ಕನೇ ಟೇಕ್ ಓಕೆ ಆಯಿತಂತೆ.
ಇನ್ನು ಪಿವಿಸಿ-೧ ಬಗ್ಗೆ ಹೇಳಬೇಕೆಂದರೆ ಇದೊ೦ದು ಸ್ಪ್ಯಾನಿಶ್ ಭಾಷೆಯ  ಥ್ರಿಲ್ಲರ್. ಚಿತ್ರ ನಿರ್ದೇಶಕರೆ ಹೇಳುವಂತೆ ನಿಜವಾದ ಘಟನೆ ಆಧರಿಸಿ ತಯಾರಾದ ಚಿತ್ರ. ಮನೆಯೊ೦ದಕ್ಕೆ ನುಗ್ಗುವ ದುಷ್ಕರ್ಮಿಗಳು ಇಡೀ ಮನೆಯವರನ್ನು ಕಟ್ಟಿಹಾಕಿ ಮನೆಯ ಯಜಮಾನಿಯ ಕೊರಳಿಗೆ ರಿಮೋಟ್ ನಿಯಂತ್ರಿತ ಬಾಂಬ್ ಕಟ್ಟಿ ದುಡ್ಡು ಕೊಡದಿದ್ದರೆ ಸ್ಫೋಟಿಸುವುದಾಗಿ ಹೇಳಿ ಹೋಗಿಬಿಡುತ್ತಾರೆ.ಆಗ ಆಕೆಯ ಗಂಡ ಸ್ಥಳೀಯ ಪೋಲೀಸರ ನೆರೆವಿನಿ೦ದ ಆ ಬಾಂಬ್ ನಿಷ್ಕ್ರಿಯ ಗೊಳಿಸಲು ಪ್ರಯತ್ನಿಸುವುದೇ ಚಿತ್ರದ ಕಥಾ ಹಂದರ.ಸಿನಿಮಾದ ಕಥೆಯೂ ಹಾಗೆ ಇದೆ.ಕ್ಯಾಮೆರಾವೂ ಚಲಿಸುತ್ತಿರುತ್ತದೆ.ಕಥೆಯಲ್ಲಿನ ಪಾತ್ರಧಾರಿಗಳು ಓಡುತ್ತಲೇ ಇರುತ್ತಾರೆ.
ಅಡ್ರೆನಾಲಿನ್ ಇಂಗ್ಲಿಷ್ ಭಾಷೆಯ ಚಿತ್ರದ ನಿರ್ದೇಶಕ ರಾಬರ್ಟ್ ಆರ್ಚರ್ ಲಿನ್. ಇದು ಕೂಡ ಥ್ರಿಲ್ಲರ್.ಇದರ ಕಥೆ ಇಂಗ್ಲೀಷಿನಲ್ಲಿ ಬಂದ ಫೋನ್ ಬೂತ್ ಚಿತ್ರದ ಕಥೆಗೆ ಸ್ವಲ್ಪ ಹೋಲುತ್ತದೆ. ಬ್ಲಾಕ್ ಮೇಲ್ ಗೆ ಒಳಗಾದ ನಾಯಕ ವಿಧಿಯಿಲ್ಲದೇ ಬ್ಲಾಕ್ ಮೈಲರ್ ಹೇಳಿದಂತೆ ಕೇಳುತ್ತ ಹೋಗುವುದೇ ಚಿತ್ರದ ಕಥಾಸಾರ.ಇನ್ನು ರಿಯಲ್ ಫಿಕ್ಷನ್ ನಿರ್ದೇಶಕ
ಕಿಮ್ ಡಿ ಡಕ್  ಚಿತ್ರಗಳು ಕಡಿಮೆ ಮಾತಿನ  ದೃಶ್ಯಕಾವ್ಯಗಳು.ಇದು ಕೂಡ ಅಷ್ಟೇ.ಕಥೆಯ ವಿಷಯದಲ್ಲಿ ಅಂತಹ ಗಮನಾರ್ಹವಿಲ್ಲದಿದ್ದರೂ ದಾಖಲೆಯ ವಿಷಯದಲ್ಲಿ ಉತ್ತಮ ಪ್ರಯತ್ನ..
ಅದೇನೇ ಇರಲಿ.ಚಿತ್ರರಂಗವನ್ನು ಸಂಶೋಧನಾ ಶಾಲೆಯನ್ನಾಗಿ ಪರಿಗಣಿಸಿ ಇಂತಹ ಪ್ರಯತ್ನಗಳನ್ನು ಮಾಡುವ ಚಿತ್ರಕರ್ಮಿಗಳಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕಾಗುತ್ತದೆ.ಆದರೆ ಕೆಲವೊ೦ದು ದಾಖಲೆಗಳ ಹುಚ್ಚಿಗೆ ಬಿದ್ದು ಚಲನಚಿತ್ರದ ಭಾವವನ್ನು ಕಡಿತಗೊಳಿಸದಿದ್ದರೆ, ಕಥೆಯ ತೀವ್ರತೆಯನ್ನು ಕಡಿಮೆಯಾಗಿಸದಿದ್ದರೆ ಮಾತ್ರ ಅಂತಹ ಪ್ರಯತ್ನಗಳು ಗಮನಾರ್ಹವೆನಿಸಿಕೊಳ್ಳುತ್ತವೆ..ಯಾಕೆಂದರೆ ಸಿನಿಪ್ರಿಯ ದಾಖಲೆಗಳನ್ನು ಕೇಳುವುದಿಲ್ಲ ..ಉತ್ತಮ ನವನವೀನ ನಿರೂಪಣೆಯ ಚಿತ್ರಗಳನ್ನಷ್ಟೇ ಕೇಳುತ್ತಾನೆ..ಯಾವುದೇ ಹೊಸ  ಪ್ರಯೋಗವೂ ಕಥೆಯ ಚಿತ್ರಕಥೆಯ ಚೌಕಟ್ಟಿನಲ್ಲೇ ಇದ್ದು  ನಿರೂಪಣೆಗೆ ಪೂರಕವಾಗಿದ್ದಾಗ ಮಾತ್ರ ಇತಿಹಾಸ ಬರೆಯಲು ಸಾಧ್ಯವಾಗುತ್ತದೆ.ಹಾಗಾಗಿ ಕನ್ನಡದಲ್ಲಿ ಸಿಂಗಲ್ ಶಾಟ್ ಚಿತ್ರವನ್ನು ತೆರೆಗರ್ಪಿಸುತ್ತಿರುವುದು ಒಳ್ಳೆ ಸುದ್ದಿಯಾದರೂ ಅದರಲ್ಲಿ ನಾವೇ ಮೊದಲಲ್ಲ ಎಂಬುದು ನಮ್ಮಲ್ಲಿ, ಚಿತ್ರಕರ್ಮಿಗಳ ನೆನಪಲ್ಲಿದ್ದರೆ ಒಳ್ಳೆಯದು.ಕೌಶಿಕರ ಪ್ರಯತ್ನಕ್ಕೆ ಆಲ್ ದಿ ಬೆಸ್ಟ್ ಹೇಳುತ್ತಲೇ  ದಾಖಲೆಯ ಜೊತೆಗೆ ಉತ್ತಮ ಕಥೆ -ಚಿತ್ರಕಥೆ ನಿರೂಪಣೆ ಇರಲಿ ಎಂಬ ಕೋರಿಕೆಯನ್ನು ಮು೦ದಿಡೋಣ ..ಯಾಕೆಂದರೆ ಪ್ರೇಕ್ಷಕನಿಗೆ ಬೇಕಿರುವುದು ದಾಖಲೆಯಲ್ಲ.. ಉತ್ತಮ ಸಿನಿಮಾ ಅಷ್ಟೇ..ಅಲ್ಲವೇ..?
ಅ೦ದಹಾಗೆ  ಈ ಅ೦ಕಣದಲ್ಲಿ ನಾನು ನೋಡಿದ ಸಿಂಗಲ್ ಶಾಟ್ ಸಿನೆಮಾಗಳನ್ನ ಪರಿಚಯಿಸುತ್ತಾ ಹೋಗುತ್ತೇನೆ.