Saturday, December 14, 2013

ಹಾಡಿನ ಹಿನ್ನೆಲೆಯಲ್ಲಿ...

ಬಟ್ಟಲು ಗನ್ನಿನ ಚಲುವೆ ಲೇಖನವನ್ನೂ ಮೆಚ್ಚಿ ಹಲವಾರು ಗೆಳೆಯರು ಫೋನ್ ಮಾಡಿದ್ದರು. ನನಗೆ ಪರಿಚಯವಿರುವ ಹಿರಿಯ ವ್ಯಕ್ತಿಯಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದು ಈಗ ಅದನ್ನು ಮುಂದುವರೆಸದೆ ಆರಾಮವಾಗಿ ಮನೆಯಲ್ಲಿದ್ದಾರೆ. ಆದರೆ ಸಾಹಿತ್ಯದ ಬಗ್ಗೆ ಸಿನೆಮಾದ ಬಗ್ಗೆ ನಿರರ್ಗಳವಾಗಿ ಆಸಕ್ತಿಯಿಂದ ಗಂಟೆಗಟ್ಟಲೆ ಬೇಕಾದರೆ ಮಾತನಾಡುತ್ತಾರೆ. ನನಗವರ ಪರಿಚಯವಾದದ್ದು ಪಾರ್ಕಿನಲ್ಲಿ. ದಿನ ನಾನು ಒಂದಷ್ಟು ಕಸರತ್ತು[?] ಮಾಡಿ ಅಲ್ಲಿನ ಕಲ್ಲು ಬೆಂಚಿನ ಮೇಲೆ ಕುಳಿತುಕೊಳ್ಳುತ್ತಿದ್ದೆ. ಆಗ ಅದೊಂದು ದಿನ ಅವರೆ ನನ್ನ ಹಿನ್ನೆಲೆ ವಿಚಾರಿಸಿದರು. ನಾನು ಸಿನೆಮಾದವನು, ಜೊತೆಗೊಂದಿಷ್ಟು ಸಾಹಿತ್ಯದ ಜ್ಞಾನವಿದೆ ಎಂಬುದನ್ನು ತಿಳಿದ ಮೇಲಂತೂ ನನ್ನೊಡನೆ ಗೆಳೆತನ ಬೆಳೆಸಿಯೇಬಿಟ್ಟರು. ಅವರ ಕಾಲದ ಸಿನೆಮಾಗಳು ಅದು ಬಿಡುಗಡೆಯಾದ ದಿನಗಳಲ್ಲಿ ನಡೆದ ಆಸಕ್ತಿಕರವಾದ ಘಟನೆಗಳನ್ನೂ ಅಷ್ಟೇ ಆಸಕ್ತಿದಾಯಕವಾಗಿ ಹೇಳುತ್ತಾರೆ. ಆಗಾಗ ನನ್ನ ಬ್ಲಾಗ್ ಕೂಡ ಓದುತ್ತಾರೆ. ನನ್ನ ಲೇಖನ ಓದಿದ್ದ ಅವರು ಆವತ್ತು ಮಾತನಾಡಲು ಸಿದ್ಧರಾಗಿಯೇ ಬಂದಿದ್ದರೆಂದು ಕಾಣಿಸುತ್ತದೆ. ನನ್ನ ಲೇಖನದ ಬಗ್ಗೆ ಮಾತನಾಡಲು ಶುರು ಮಾಡಿದ ಅವರು ಸಿನಿಮಾದ ಹಾಡುಗಳ ಬಗ್ಗೆ ಹೊಸ ಲೋಕವೊಂದನ್ನೇ ತೆರೆದಿಟ್ಟರು.
ಒಂದು ಸಿನೆಮಾವನ್ನು, ಸಿನೆಮಾದ ಹಾಡುಗಳನ್ನ ಪ್ರತಿನಿಧಿಸುವುದಾದರೂ ಏನು? ನಮಗೆ ಇಷ್ಟವಾದದ್ದು ನಮ್ಮ ಹಿರಿಯರಿಗೆ ಏಕೆ ಇಷ್ಟವಾಗುವುದಿಲ್ಲ...ಈವತ್ತಿನ ನಮ್ಮ ಮೆಚ್ಚಿನ ಚಿತ್ರಗಳನ್ನ ಹಿರಿಯರು ಏಕೆ ಇಷ್ಟ ಪಡುವುದಿಲ್ಲ. ನಮ್ಮ ತಲೆಮಾರಿನ ನಾಯಕರುಗಳನ್ನು ಹಳಬರು ಯಾಕೆ ಇಷ್ಟ ಪಡುವುದಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಆವಾಗಾವಾಗ ಕಾಡುತ್ತಿರುತ್ತದೆ. ಉತ್ತರವೇನೋ ಸುಲಭ. ಅವರವರ ತಲೆಮಾರಿನ ಘಟನೆಗಳು ಚಿತ್ರಗಳು ಅವರವರಿಗೆ ಇಷ್ಟವಾಗುತ್ತವೆ ಎನ್ನುವುದಂತೂ ಖಚಿತ.ಆದರೆ ಅದಷ್ಟೇ ಅಲ್ಲ. ಅಲ್ಲಿ ನೆನಪುಗಳಿರುತ್ತವೆ.
'ಏನಪ್ಪಾ ಈಗ ಯಾಕೆ ಅಂತ ಸಿನೆಮಾಗಳನ್ನೂ ತೆಗೀತೀರಾ...ನಮ್ಮ ಕಾಲದಲ್ಲಿ ಎಷ್ಟೊಳ್ಳೆ ಸಿನೆಮಾಗಳು ಬರ್ತಿದ್ವು ಗೊತ್ತಾ..' ಎಂದರು. ನಾನು 'ಅಜ್ಜ..ನೀವು ಇತ್ತೀಚಿಗೆ ಯಾವ ಸಿನೆಮಾ ನೋಡಿದ್ದೀರಿ...ಎಂಬ ಪ್ರಶ್ನೆಗೆ ಅವರಿಂದ ಯಾವುದೂ ಇಲ್ಲಾ ಯಾಕೆಂದರೆ ಯಾವುದೂ ಚೆನ್ನಾಗಿರಲಿಲ್ಲ ಎನ್ನುವ ಉತ್ತರ ಬಂತು. ಯಾವ ಸಿನೆಮಾವನ್ನೂ ನೋಡದೆ ಚೆನ್ನಾಗಿಲ್ಲ ಎನ್ನುವುದಾದರೂ ಹೇಗೆ. ಹಾಗಾದರೆ ಅವರ ಕಾಲದಲ್ಲಿ ಬಂದ ಎಲ್ಲಾ ಸಿನೆಮಾಗಳೂ ಒಳ್ಳೆಯದಿತ್ತಾ?ಸುಮ್ಮನೆ  ಅವರ ಜೊತೆ ಮಾತಿಗಿಳಿದು ಅವರ ಕಾಲದ ಸಿನೆಮಾಗಳ ಬಗ್ಗೆ ಮಾತನಾಡಿದೆ. ಅವರು ಪ್ರತಿ ಸಿನೆಮಾದ ಹಿಂದೆ ಅವರ ಜೀವನದ ಘಟನೆಗಳನ್ನೂ ನೆನಪು ಮಾಡಿಕೊಂಡು ಹೇಳುತ್ತಿದ್ದರು. ಆ ಸಿನೆಮಾ ಬಂದಾಗ ನಾನು ಕಾಲೆಜಿನಲ್ಲಿದ್ದೆ, ಈ ಸಿನೆಮಾ ಬಂದಾಗ ನನ್ನ ಮದುವೆಯಾಗಿತ್ತು ಹೀಗೆ...ಆಗ ನನಗರ್ಥವಾದದ್ದು ಅವರ ಬದುಕಿನ ಮಜಳುಗಳಲ್ಲಿ ಸಿನೆಮಾಗಳೂ ಹಾಡು ಹೋಗಿದ್ದವು ಎಂಬುದು. ಹೌದು. ಒಂದು ಹಾಡು, ಸಿನಿಮಾದ ಹಿನ್ನೆಲೆಯಲ್ಲಿ ಜೀವನದ ಒಂದೊಂದು ಮಜಲುಗಳಿರುತ್ತವೆ. ಹಾಗಾಗಿ ಅದನ್ನು ಕೇಳಿದಾಗ ಅದ್ಯಾವುದೋ ಅವ್ಯಕ್ತ ಆತ್ಮೀಯ ಭಾವ ನಮ್ಮನ್ನು ಆವರಿಸಿ ಅದನ್ನು ಇಷ್ಟಪಡಿಸಬಹುದು. ಆದರೆ ಆವತ್ತಿನ ಹಿರಿಯರಿಗೆ ಈವತ್ತಿನ ಸಿನೆಮಾಗಳಲ್ಲಿ ಅಂತಹ ನೆನಪುಗಳು ಇರುವ ಸಾಧ್ಯತೆ ಕಡಿಮೆ. 

Sunday, December 8, 2013

ಹೀಗೊಂದು ವಿಮರ್ಶೆಯ ವಿಮರ್ಶೆ:

ನಾನು ನನಗೆ ಸಿನೆಮಾ ಆಸಕ್ತಿ ಬಂದ ದಿನದಿಂದಲೂ ಚಿತ್ರ ವಿಮರ್ಶೆಗಳನ್ನು ಪತ್ರಿಕೆಗಳಲ್ಲಿ ಓದುತ್ತಲೇ ಬಂದವನು. ಭಾನುವಾರ ಅದಕ್ಕಾಗಿಯೇ ನಾಲ್ಕಾರು ಪತ್ರಿಕೆಗಳನ್ನು ಕೊಂಡು, ಒಂದಷ್ಟನ್ನು ಗ್ರಂಥಾಲಯಗಳಲ್ಲಿ ಓದುತ್ತಿದ್ದೆ. ಹಾಗೆ ಚಿತ್ರ ವಿಮರ್ಶೆಯನ್ನು ಓದಿ ಆನಂತರ ಸಿನಿಮಾ ನೋಡಿದಾಗ ಅಥವಾ ಸಿನೆಮಾ ನೋಡಿ ಚಿತ್ರ ವಿಮರ್ಶೆ ಓದಿದಾಗ ನನ್ನ ಅನಿಸಿಕೆಗೂ ಸಿನೆಮಾಕ್ಕೂ ಮತ್ತು ಬರಹಕ್ಕೂ ತಾಳೆಯಾದಾಗ ಖುಷಿಯಾಗುತ್ತಿದ್ದೆ. ಆ ವಿಮರ್ಶಕರ ಹೆಸರುಗಳನ್ನೂ ನೆನಪಲ್ಲಿಟ್ಟುಕೊಂದು ಅವರ ಚಿತ್ರವಿಮರ್ಶಾ ಬರಹಗಳನ್ನು ತಪ್ಪದೆ ಓದುತ್ತಿದ್ದೆ. ಆದರೂ ಕೆಲವೊಮ್ಮೆ ಅದು ಏರು ಪೇರಾಗುತ್ತಿತ್ತು.
ನಾನು ಸಿನಿಮಾವನ್ನು ಖಾಲಿ ತಲೆಯಲ್ಲಿ ನೋಡುತ್ತೇನೆ. ನಿರ್ದೇಶಕ ನಟ ನಾಯಕ ನಾಯಕಿ ಕಥೆಗಾರ ಯಾರೇ ಆದರೂ ಸುಮ್ಮನೆ ಚಿತ್ರಮಂದಿರದ ಒಳಗೆ ಕುಳಿತು ನೋಡುತ್ತೇನೆ. ನೋಡುವ ಸಮಯದಲ್ಲಿ ನನ್ನ ತಲೆಗೆ ವಿಮರ್ಶೆಯ ಆಯುಧ ಕೊಡುವುದಿಲ್ಲ. ಅಲ್ಲಿನ ಪ್ರತಿಯೊಂದು ಅಂಶವನ್ನು ಘಟನೆಯನ್ನು ನನ್ನೊಳಗೆ ತುಂಬಿಕೊಳ್ಳುತ್ತೇನೆ ಸಿನಿಮಾ ನೋಡುವಾಗ ನನ್ನಲ್ಲಿ ಇರುವವನು ಸಾಮಾನ್ಯ ಪ್ರೇಕ್ಷಕನೇ ಹೊರತು ಚಿತ್ರಕರ್ಮಿಯಲ್ಲ. ಹಾಗಾಗಿ ನಾನು ಸಿನಿಮಾವನ್ನು ಎಂಜಾಯ್ ಮಾಡುತ್ತೇನೆ. ಬೋರ್ ಹೊಡೆಸಿಕೊಂಡು ತಲೆ ತಲೆ ಚಚ್ಚಿಕೊಳ್ಳುತ್ತೇನೆ. ಎಷ್ಟೇ ಬೋರ್ ಆದರೂ ಕೊನೆಯವರೆಗೂ ನೋಡಿ ಬೈದು ಎದ್ದು ಬರುತ್ತೇನೆ.
ಆದರೆ ನನಗೆ ವಿಮರ್ಶೆಗಳನ್ನು ಪತ್ರಿಕೆ ಇನ್ನಿತರ ಮಾಧ್ಯಮಗಳಲ್ಲಿ ಓದಿದಾಗ ಅವರು ಕೊಟ್ಟು ರೇಟಿಂಗ್ ನೋಡಿದಾಗ ಇವರು ಯಾವ ಆಧಾರದ ಮೇಲೆ ರೇಟಿಂಗ್ ಕೊಟ್ಟಿದ್ದಾರೆ ಎನಿಸುತ್ತದೆ.ಬೆಂಗಳೂರು ವಿಷಯದಲ್ಲಿ ಎಲ್ಲರ ವಿಮರ್ಶೆಯನ್ನೂ ತಪ್ಪದೆ ಓದುತ್ತೇನೆ. ಆಗೆಲ್ಲಾ ನನಗೆ ಕೆಲವೊಮ್ಮೆ ಗೊಂದಲವಾಗುತ್ತದೆ. ಒಂದು ಚಿತ್ರಕ್ಕೆ 5 ಕ್ಕೆ ನಾಲ್ಕು ಸ್ಟಾರ್ ಕೊಡುವ ವಿಮರ್ಶಕ ಅದ್ಯಾವ ದೃಷ್ಟಿಯಿಂದ ಚಿತ್ರ ನೋಡಿರುತತಾನೆ ಎನ್ನುವ ಗೊಂದಲ ಶುರುವಾಗುತ್ತದೆ. ನಾಲ್ಕು ಸ್ಟಾರ್ ಪಡೆದ ಆ ಚಿತ್ರ ಚಿತ್ರಮಂದಿರದಲ್ಲಿ ಒಂದೂ ವಾರವೂ ಓಡಿರುವುದಿಲ್ಲ. ಹಾಗೆಯೇ ನೋಡಿದ ಸಾಮಾನ್ಯ ಪ್ರೇಕ್ಷಕನಿಗೆ ಖುಷಿ ಕೊಟ್ಟಿರುವುದಿಲ್ಲ. ಹಾಗಾದರೆ ಒಬ್ಬ ವಿಮರ್ಶಕ ಯಾರಿಗಾಗಿ ವಿಮರ್ಶೆ ಬರೆಯುತ್ತಾನೆ. ಅವನು ವಿಮರ್ಶಕ, ಅವನಿಗನಿಸಿದ್ದನ್ನು ಕೂಡಿ ಕಳೆದು ಗುಣಿಸಿ ಭಾಗಿಸಿ ವಿಮರ್ಶೆ ಮಾಡಿದ್ದರೆ, ಅದೂ ಪ್ರೇಕ್ಷಕನ ಮಟ್ಟದಲ್ಲಿ ಇಲ್ಲವಾಗಿದ್ದರೆ ಅದನ್ನು ಸಾರ್ವಜನಿಕವಾಗಿ ಯಾಕಾದರೂ ಪ್ರಕಟಿಸಬೇಕು ಎಂಬ ಪ್ರಶ್ನೆ ಕಾಡುತ್ತದೆ. ತನ್ನ ದಿನಚರಿ ಪುಸ್ತಕದಲ್ಲೋ ಬ್ಲಾಗ್ ನಲ್ಲೂ ಅದನ್ನು ಬರೆದಿಟ್ಟುಕೊಂಡರೆ ಮುಗಿಯಿತಲ್ಲ ಎನಿಸುತ್ತದೆ.
ಹಾಗಂತ ಗುಣಮಟ್ಟದ ದೃಷ್ಟಿಯಿಂದ ವಿಮರ್ಶಕ ಅಳೆದಿರುತ್ತಾನೆ ಹಾಗಂತ ಯಾವ ಯಾವ ಚಿತ್ರಕ್ಕೋ ರೇಟಿಂಗ್ ಕೊಡಲಾಗುವುದಿಲ್ಲ, ಎನ್ನಬಹುದೇನೋ..ಅಂದರೆ ಗುಣಮಟ್ಟ ಎಂದರೇನು? ಉದಾಹರಣೆಗೆ ಒಂದು ವಯಸ್ಕರ ಚಿತ್ರ ಬಿಡುಗಡೆಯಾಗಿ ನೂರಾರು ದಿನ ಓಡಿ ಹಣಗಳಿಕೆ ಮಾಡಿದಾಗ ಅದರ ವಿಮರ್ಶೆ ಮಾಡುವಾಗ ಅದನ್ನು ಉತ್ತಮ ಚಿತ್ರ ಎನ್ನಲು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆಯೂ ಬರುತ್ತದೆ. ಆದರೆ ನಾನಿಲ್ಲಿ ಮಾತನಾಡುತ್ತಿರುವುದು ಒಂದು ಮನರಂಜನಾತ್ಮಕ ಚಿತ್ರದ ಬಗ್ಗೆ. ಹಾಗಾದರೆ ಕಾಸರವಳ್ಳಿ ಚಿತ್ರಗಳಾವುವು ನೂರು ದಿನ ಓಡಿದ ಉದಾಹರಣೆ ಇಲ್ಲ.ಹಾಗಂತ ಅವರ ಚಿತ್ರಕ್ಕೆ ಒಂದು ಸ್ಟಾರ್ ಕೊಡಲಾಗುತ್ತದೆಯೇ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ. ಆದರೆ ನನ್ನ ಪ್ರಕಾರ ಕಾಸರವಳ್ಳಿ ಚಿತ್ರದ ಗುಣಮಟ್ಟ ಹೆಚ್ಚಿಸಿದರೆ ಹೊರತು ಪ್ರೇಕ್ಷಕರನ್ನು ಬೆಳಸಲಿಲ್ಲ. ಚಿತ್ರ ಮಾಡಿ ಕೊಟ್ಟು ಸುಮ್ಮನಿದ್ದು ಬಿಟ್ಟರಾ? ಅದನ್ನು ಹೋರಾಡಿ ಹೊಡೆದಾಡಿ ಚಿತ್ರಮಂದಿರಕ್ಕೆ ಬಿಡುಗಡೆ ಮಾಡಲು ಪ್ರಯತ್ನಿಸಲಿಲ್ಲವಾ..? ಅಥವಾ ನನ್ನ ಸಿನೆಮಾಕ್ಕೆ ಇಷ್ಟೇ ಸಾಕು ಎಂಬ ನಿರ್ಧಾರಕ್ಕೆ ಬಂದು ಬಿಟ್ಟರಾ?
ಸುಮ್ಮನೆ ಗಮನಿಸಿ ಪ್ರೇಕ್ಷಕ ಕೇಳುವುದು ಗಟ್ಟಿ ಕಥೆಯನ್ನು. ನಾಯಿ ನೆರಳು ಕೂರ್ಮಾವತಾರ ಚಿತ್ರಗಳನ್ನು ನೋಡಿದವನು ಅರ್ಧಕ್ಕೆ ಎದ್ದು ಹೋಗಲು ಸಾಧ್ಯವೇ ಇಲ್ಲ. ನಮ್ಮಲ್ಲಿ ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ ಚಿತ್ರಗಳು ನೂರಾರು ದಿನ ಓಡಿ ದಾಖಲೆ ಗಳಿಸಿವೆ. 
ಹಾಗಾಗಿ ಒಂದು ಚಿತ್ರವನ್ನು ಅದರ ಗತಿಗೆ ತಕ್ಕಂತೆ ನೋಡಿ ಪ್ರೇಕ್ಷಕರಲ್ಲಿ ಪ್ರೇಕ್ಷಕನಾಗಿ ವಿಮರ್ಶಕ ಚಿತ್ರ ನೋಡಿ ಬರೆದರೇ ಆಗ ವಸ್ತು ನಿಷ್ಠತೆ ಸಾಧ್ಯವೇನೋ? ಆದರೆ ನಮ್ಮ ಮಾಧ್ಯಮದವರು ಹಾಗೆ ಮಾಡುವುದಿಲ್ಲ. ಉದಾಹರಣೆಗೆ ಕಳೆದವಾರ ಬಿಡುಗಡೆಯಾದ 6-5=2 ಚಿತ್ರದ ಜೊತೆಗೆ ಇನ್ನೂ ಎರಡೂ ಚಿತ್ರಗಳು ಬಿಡುಗಡೆಯಾದವು. ಈ ಚಿತ್ರ ಯಾವ ಪ್ರಚಾರವಿಲ್ಲದೆ ತಾರಾಮೌಲ್ಯವಿಲ್ಲದೆ ಬಿಡುಗಡೆಯಾದರೆ ಇನ್ನೆರಡು ಅದ್ದೂರಿ ಪ್ರಚಾರದ ಜೊತೆಗೆ ಬಿಡುಗಡೆಯಾಯಿತು. ನಮ್ಮ ಬಹುತೇಕ ಮಾಧ್ಯಮಗಳು ಅವೆರಡನ್ನೂ ವಿಮರ್ಶೆ ಮಾಡಿದವು. ಈ ಚಿತ್ರವನ್ನು ನಿರ್ಲಕ್ಷಿಸಿದರು. ಆದರೆ ಕಥೆಯ ಸತ್ವ ಮತ್ತು ಭಿನ್ನತೆ, ನಿರೂಪಣೆಯಿಂದ ಆ ಚಿತ್ರ ಗೆದ್ದಿತು. ಈಗ ಆ ಚಿತ್ರದ ಬಗ್ಗೆ ಎಲ್ಲಾ ಮಾತಾಡುತ್ತಾರೆ. ಅಂದರೆ ನಮ್ಮ ಮಾಧ್ಯಮಗಳು ಒಂದು ಸತ್ವಯುತ ಚಿತ್ರವನ್ನು ತಾವೇ ನೋಡಿ ವೀಕ್ಷಿಸಿ ಪರಾಮರ್ಶಿಸಿ ವಿಮರ್ಶೆ ನೀಡುವುದಿಲ್ಲ ಅಂದ ಹಾಗಾಯಿತಲ್ಲ. ಅವೂ ಕೂಡ ಎದ್ದೆತ್ತಿನ ಬಾಲ ಹಿಡಿಯುವವು ಎಂದರೆ ಬೇಸರದ ಸಂಗತಿ ತಾನೇ.
ಹಾಗೆಯೇ ನಮ್ಮವರು ಒಂದು ಚಿತ್ರಕ್ಕೆ ಒಂದಷ್ಟು ಸ್ಟಾರ್ ಕೊಟ್ಟು ಹೊಗಳಿದಾಗ ಚಿತ್ರ ನೋಡಿದಾಗ ಬೋರ್ ಹೊಡೆದರೆ ಏನನ್ನುವುದು. ವಿಮರ್ಶೆ ನಂಬಿ ಚಿತ್ರಕ್ಕೆ ಹೋಗುವುದಾ..? ಹಿಂದಿ ಚಿತ್ರ ಸಿಂಘಂಗೆ ಬೈಯ್ದಿದ್ದರು ವಿಮರ್ಶಕರು.ಆದಕ್ಕೆ ಕಾರಣ ಅದೊಂದು ಮಸಾಲೆ, ರೀಮೇಕ್ ಎನ್ನುವುದಾಗಿತ್ತು. ಆದರೆ ಚಿತ್ರ ಯಶಸ್ವೀಯಾಯಿತು.ಆದರೆ ಚಿತ್ರ ನೋಡಿದರೆ ಅದು ರೀಮೇಕ್ ಆದರೂ ಚಿತ್ರಕತೆ ಗಟ್ಟಿಯಾಗಿತ್ತು. ಕಥೆಯ ತಿರುಳನ್ನಷ್ಟೇ ತೆಗೆದುಕೊಂಡಿದ್ದ ರೋಹಿತ್ ಶೆಟ್ಟಿ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದರು. ವಿಮರ್ಶಕರು ಅದನ್ಯಾಕೆ ಗಮನಿಸಲಿಲ್ಲ. 
ನನ್ನ ಪ್ರಕಾರ ವಿಮರ್ಶಕ ನೋಡುಗನಾಗಬೇಕು. ಆ ಚಿತ್ರದ ಲಯಕ್ಕೆ ತಕ್ಕಂತೆ ಚಿತ್ರವನ್ನು ನೋಡಬೇಕು. ಅದು ಮಸಾಲೆ ಚಿತ್ರವಾಗಿದ್ದರೆ ಆ ನಿಟ್ಟಿನಲ್ಲಿ, ಕಲಾತ್ಮಕ ಚಿತ್ರವಾಗಿದ್ದರೆ ಆ ನಿಟ್ಟಿನಲ್ಲಿ, ಮನರಂಜನೀಯ ಚಿತ್ರವಾಗಿದ್ದರೆ ಆ ನಿಟ್ಟಿನಲ್ಲಿ ನೋಡಬೇಕು. ಹಾಗಾದಾಗ ಮಾತ್ರ ಆಯಾ ಚಿತ್ರಕ್ಕೆ ತಕ್ಕಂತೆ ಬಹುಪಾಲು ವಸ್ತು ನಿಷ್ಠ ವರದಿ ಮಾಡಲು ಸಾಧ್ಯವೇನೋ? ನಾನು ಎಲ್ಲಾ ಪತ್ರಿಕೆಗಳ ಎಲ್ಲರ ವಿಮರ್ಶೆ ಓದುತ್ತೇನೆ. ಹಲವರು ನನಗೆ ನಿಜಕ್ಕೂ ಇಷ್ಟವಾಗುತ್ತಾರೆ. ಅವರ ಬರಹದ ಶೈಲಿ , ವಸ್ತುನಿಷ್ಠತೆ ಖುಷಿ ಕೊಡುತ್ತದೆ. ಹೆಸರಿಸಬೇಕೆಂದರೆ ಬೆಂಗಳೂರು ಮಿರ್ರರ್ ನ ಶ್ಯಾಮ್ ಪ್ರಸಾದ್ ಚಿತ್ರ ವಿಮರ್ಶೆ ನನಗೆ ಇಷ್ಟವಾಗುತ್ತವೆ. ಅದಕ್ಕೆ ಕಾರಣ ಆ ವ್ಯಕ್ತಿಗಿರುವ ಚಿತ್ರಮಾಹಿತಿ ಮತ್ತು ದೃಷ್ಟಿಕೋನ ಎನ್ನಬಹುದು. ಹಾಗೆಯೇ ಅವರ ಬಹುತೇಕ ಚಿತ್ರಗಳ ಬಿಡುಗಡೆಯಾದ ಎರಡನೆಯ ದಿನದ ವಿಮರ್ಶೆಗೂ ವಾರದ ಫಲಿತಾಂಶಕ್ಕೂ ಹೆಚ್ಚು ಕಡಿಮೆ ತಾಳೆಯಾಗುತ್ತದೆ..ಒಬ್ಬ ವಿಮರ್ಶಕ ಗೆಲ್ಲುವುದು ನನ್ನ ಪ್ರಕಾರ ಅಲ್ಲಿಯೇ. ಓದಿದ್ದೇ ಒಂದು ಬರೆದಿದ್ದು ಒಂದು ಫಲಿತಾಂಶವೇ ಒಂದು ಎಂದಾದಲ್ಲಿ ಅದನ್ನು ನಂಬುವುದಾದರೂ ಹೇಗೆ?
ಹಾಗೆಯೆ ಕೆಲವು ವಿಮರ್ಶಕರಂತೂ ಸಿನಿಮಾ ಹೇಗಿದೆ ಎಂಬುದನ್ನೂ ತಮ್ಮ ಬರಹದ ಮೂಲಕ ತೋರಿಸುವುದಕ್ಕಿಂತ ತಮ್ಮ ಬರಹದ ಶೈಲಿ ತೋರಿಸುವುದಕ್ಕೆ ಕಷ್ಟ ಪಡುತ್ತಾರೆ. ಸುಮ್ಮನೆ ಅಂತರ್ಜಾಲದಲ್ಲಿ ಒಂದಷ್ಟು ವಿಮರ್ಶೆ ಓದಿದಾಗ ನನಗನಿಸಿದ್ದು ಇದು. ದೊಡ್ಡ ದೊಡ್ಡ ಪದಗಳ ಬಳಕೆ, ಕಾವ್ಯಾತ್ಮಕ ವಾಕ್ಯ ರಚನೆ ಮತ್ತು ಉಪಮೆ ಮೂಲಕ ನಾವು ಓದುತ್ತಿರುವುದು ಸಿನಿಮಾ ವಿಮರ್ಶೆಯ ಅಥವಾ ಸಾಹಿತ್ಯವಾ? ಎಂಬ ಅನುಮಾನ ಬರುವಂತೆ ಮಾಡುತ್ತಾರೆ..
ಹಾಗಂತ ಪರಿಪೂರ್ಣವಾಗಿ ಒಂದು ಚಿತ್ರಕ್ಕೆ ವಿಮರ್ಶೆಯ ಮೂಲಕ, ಅದರ ಫಲಿತಾಂಶಕ್ಕೆ ನ್ಯಾಯ ಒದಗಿಸುವುದು ಸಾಧ್ಯವೇ ಇಲ್ಲ. ಬರೆದದ್ದು ಸತ್ಯವಾಗಿದ್ದರೂ ಅದರ ಫಲಿತಾಂಶ ಏರುಪೇರಾಗಬಹುದು. ಆದರೆ ಒಬ್ಬ ನಿರ್ದೇಶಕನನನ್ನು ನೋಡಿ, ಆತನ ಹಿನ್ನೆಲೆ ತಿಳಿದುಕೊಂಡು ವಿಮರ್ಶೆ ಮಾಡುವುದಕ್ಕೆ ನನ್ನ ವಿರೋಧವಿದೆ.ಸುಮ್ಮನೆ ಚಿತ್ರ ನೋಡಿ ಅನಿಸಿದ್ದನ್ನು ಬರೆಯಬೇಕಾದರೂ ಅದಕ್ಕೂ ಒಂದು ದೂರದೃಷ್ಟಿ ಸಿನಿಮಾ ಜ್ಞಾನ, ನೋಡುಗನಿಗೆ ಇರಬೇಕಾದ ಆಸಕ್ತಿ ಕುತೂಹಲ ಇರಬೇಕು. ಮತ್ತದನ್ನು ಕೆಲಸ ಎಂದು ಮಾಡದೆ ಪ್ರವೃತ್ತಿಯ ತರಹ ಮಾಡಿದಾಗ ಸಾಧ್ಯವಾದಷ್ಟು ನ್ಯಾಯ ಒದಗಿಸಬಹುದೇನೋ?
ಈ ವಿಷಯದ ಬಗ್ಗೆ ಒಂದಷ್ಟು ಚರ್ಚಿಸಬಹುದಾ?