ಎಂಬ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತದೆ.ಬರ್ಫೀ ಚಿತ್ರದಲ್ಲಿನ ಆ ಸೊಬಗು ನವಿರುತನ ಡಿ ಡಿ ಎಲ್ ಜೆ ಚಿತ್ರಗಳಂತೆ ಪ್ರೀತಿಗೆ ಸಿಕ್ಕ ಮೆರುಗೇಕೆ ನಮ್ಮ ಸಿನೆಮಾದಲ್ಲಿಲ್ಲ ಇತ್ತೀಚಿಗೆ ಸಿಗುತ್ತಿಲ್ಲ ಅಥವಾ ಇಲ್ಲ ಎಂಬ ಭಾವ ಕಾಡ ತೊಡಗುತ್ತದೆ. ಸುಮ್ಮನೆ ಕೆಲವು ಹಳೆಯ ಸಿನೆಮಾಗಳನ್ನು ನೋಡಿ. ಒಂದೆ ಭಾವ... ಕೊನೆಯಲ್ಲಿ ಪ್ರೇಮಿಗಳು ಒಂದಾದರು ಎಂಬ ಕ್ಲೈಮ್ಯಾಕ್ಸ್..ಮೊನ್ನೆ ಮೈನಾ ಸಿನೆಮಾ ನೋಡಿದಾಗ ಅದೇ ಭಾವ ಕಾಡತೊಡಗಿತು. ಅಲ್ಲ ಅಷ್ಟೊಂದು ಅತೀವ ಪ್ರೀತಿಗೆ ಏಕೆ ಜಯ ಸಿಗಲಿಲ್ಲ. ಸುಮಾರು ಪ್ರೇಮಕಥೆಯ ಸಿನೆಮಾಗಳನ್ನೂ ಗಮನಿಸಿದಾಗ ನನಗನ್ನಿಸುವುದು ಇದೆ. ಯಾಕೆ ಪ್ರೀತಿಯಲ್ಲಿ ನವಿರು ಭಾವನೆಯಿಲ್ಲ ಎಂಬುದು. ಇದೇ ನಿರ್ದೇಶಕರ ಹಿಂದಿನ ಚಿತ್ರದಲ್ಲೂ ಅದೇ ಆಗಿತ್ತು. ಅಲ್ಲಿ ಪ್ರೀತಿಗಿಂತ ಹೆಚ್ಚಾಗಿ ಅತ್ಯಾಚಾರ, ಅನ್ಯಾಯ ಮೋಸವೇ ವೈಭವೀಕರಿಸಿತ್ತು. ಇಲ್ಲೂ ಅದೇ ಮುಂದುವರೆದಿದೆ ಎನಿಸಿತು ನನಗೆ.
ಒಂದು ಪ್ರೇಮಕಥೆ ಸುಖಾಂತ್ಯವಾಗಲೇ ಬೇಕೆಂದೇನಿಲ್ಲ. ಅಥವಾ ಅದು ಹೀಗೆ ಇರಬೇಕು.ಪ್ರೇಮಿಗಳು ಚೆನ್ನಾಗಿರಬೇಕು ಎನ್ನುವಂತಹ ಸಿದ್ಧ ಸೂತ್ರಗಳು ಇರಲೆಬೇಕು ಅಂತಲೂ ಅಲ್ಲ.


ಪ್ರೀತಿಯಲ್ಲಿ ಏನೇ ಇದ್ದರೂ ಆ ಲವಲವಿಕೆ ಇದ್ದರೆ ನೋಡಲು ಚೆನ್ನ.ಎಲ್ಲೋ ಸಿಕ್ಕುವ ಹುಡುಗ ಎಲ್ಲೋ ಸಿಕ್ಕುವ ಹುಡುಗಿ ಅದೇಗೋ ಭೇಟಿಯಾಗಿ ಅದೇಗೋ ಪ್ರೀತಿ ಹುಟ್ಟಿ...ಸಮಸ್ಯೆಗಳು ಬಂದಾಗಲೂ ದೂರ ಆಗದೆ ಅಥವಾ ತ್ಯಾಗ ಮಾಡಿ ನೆನಪಿಸಿ ಕೊರಗಿ, ಅಥವಾ ಸತ್ತೆ ಹೋಗಿ ..ಹೀಗೆ ಪ್ರೇಮಕಥೆಯ ಕವಲುಗಳು ಒಂದೆ ಎರಡೇ..?ಆದರೆ ಪ್ರೀತಿಯಿಲ್ಲದೆ ಯಾವ ಭಾಷೆಯಲ್ಲೂ ಸಿನೆಮಾರಂಗ ಪೂರ್ತಿಯಾಗುವುದಿಲ್ಲ.


ಆರ್ಯ ಸಿನೆಮಾದ ನಾಯಕ ಫೀಲ್ ಮೈ ಲವ್ ಎಂದುಕೊಂಡೆ, ಆ ಮಾತಿಗೆ ಕೊನೆಯವರೆಗೂ ನಿಷ್ಠನಾಗಿರುತ್ತಾನೆ.ನೀನು ಯಾರನ್ನಾದರೂ ಪ್ರೀತಿಸು, ನಾನು ನಿನ್ನನ್ನು ಪ್ರೀತಿಸುತ್ತೇನೆ ಎನ್ನುತ್ತಾನೆ. ಟೈಟಾನಿಕ್ ಚಿತ್ರದ ನಾಯಕ ಆಕೆಯನ್ನು ಉಳಿಸಿ ಆಕೆಯ ಮನದಾಳದಲ್ಲಿ ಕೊನೆಯವರೆಗೂ ಜೀವಂತವಾಗುತ್ತಾನೆ. ವೆರಿ ಲಾಂಗ್ ಎಂಗೇಜ್ ಮೆಂಟ್ ನ ನಾಯಕಿ ನಾಯಕನ ಬಗ್ಗೆ ಹಲವಾರು ದುರಂತಗಳ ಕಥೆ ಹೇಳಿದರೂ ಅವನನ್ನು ಹುಡುಕುತ್ತಾ ಸಾಗುತ್ತಾಳೆ, ಮುಂಗಾರುಮಳೆಯ ಪ್ರೀತಂ ಹಿಂದೆಬಿದ್ದು ಕಾಡಿಬೇಡಿ ಆಕೆಯನ್ನು ಒಲಿಸಿಕೊಂಡು ಕುಟುಂಬಕ್ಕೆ ಸಮಾಜಕ್ಕೆ ಬೆಲೆಕೊಟ್ಟು ಪ್ರೀತಿಯನ್ನು ಎದೆಯಲ್ಲಿಟ್ಟುಕೊ೦ಡು ಹೊರಟುಬಿಡುತ್ತಾನೆ, ಗೀತಾಂಜಲಿಯ ಪ್ರಕಾಶ್ ತನಗೆ ಕ್ಯಾನ್ಸರ್ ಇದೆ ಎಂದು ಗೊತ್ತಿದ್ದೂ ಗೀತಾಂಜಲಿಯ ಪ್ರೀತಿಯಲ್ಲಿ ಬೀಳದಿರಲು ಸಾಧ್ಯವಾಗುವುದಿಲ್ಲ, ಹಾಲು ಜೇನು ಚಿತ್ರದ ನಾಯಕ ಹೆಂಡತಿಯನ್ನೂ ಕೊನೆಯ ಕ್ಷಣದವರೆಗೂ ಸುಖವಾಗಿಡಲು ಮಾಡುವ ಪ್ರಯತ್ನಗಳು ಅದೆಷ್ಟು ಭಾವನಾತ್ಮಕ.., ಸತ್ಯ ಚಿತ್ರದ ಸತ್ಯ ಭೂಗತಲೋಕದಲ್ಲಿದ್ದುಕೊಂಡೆ ಪ್ರೀತಿಸಿ, ಆಕೆಗೆ ಸತ್ಯ ತಿಳಿಸಲು ಸಾವನ್ನೇ ಸ್ವೀಕರಿಸುತ್ತಾನೆ...ಪ್ರೀತಿಗೆಲ್ಲಲ್ಲು ಶಕ್ತಿ ಮೀರಿ ಪ್ರಯತ್ನಸುವ ಪ್ರೈಸ್ ಲೆಸ್ ಚಿತ್ರದ ನಾಯಕ ಜಾನ್, ಮತ್ತೆ ಬರುವೆ, ನಮ್ಮ ಪ್ರೀತಿಯನ್ನು ಎಲ್ಲಿಗೆ ನಿಲ್ಲಿಸಿದ್ದೆವೋ ಅಲ್ಲಿಂದಲೇ ಮುಂದುವರೆಸೋಣ ಎಂದು ಭರವಸೆ ಕೊಟ್ಟು ಯುದ್ಧಭೂಮಿಗೆ ಹೆಜ್ಜೆಯಿಡುವ ಅಟೋನ್ ಮೆಂಟ್ ಚಿತ್ರದ ಬ್ರಿಯೋನಿ ತ್ರಾಲಿಸ್ ,ವಾಲ್ ಇ ಚಿತ್ರದಲ್ಲಿ ಈ ವಾ ಳನ್ನು ಪ್ರೀತಿಸುವ ರೋಬೋಟ್...ಹೀಗೆ ಇಂತಹ ಪಾತ್ರಗಳನ್ನೂ ಅದರ ಹಿ೦ದಿನ ಪ್ರೇಮಕಥೆಯನ್ನು ಅವು ಕೊಡುವ ಅನನ್ಯ ಭಾವವನ್ನು ಮರೆಯುವುದಾದರೂ ಹೇಗೆ..?
ಅದಕ್ಕೆ ಪ್ರೇಮಕತೆಗಳು ಯಾವತ್ತೂ ಜೀವಂತ...ಅಂತಹ ನವಿರುತನದ, ಮನಮಿಡಿಯುವ ಪ್ರೇಮಕಥೆಗಳು ಕನ್ನಡಲ್ಲಿ ಹೆಚ್ಚೆಚ್ಚು ಬರಲಿ ಎನ್ನುವ ಆಶಯದೊಂದಿಗೆ...ನಿಮಗಿಷ್ಟವಾದ ಪ್ರೇಮಕಥೆಯ ಸಿನೆಮಾ ಯಾವುದು ಎಂಬ ಪ್ರಶ್ನೆಯನ್ನ ನಿಮ್ಮ ಮುಂದಿಡುತ್ತಿದ್ದೇನೆ...