Thursday, April 2, 2015

ಸೇವ್ ದಿ ಕ್ಯಾಟ್ ಪುಸ್ತಕ ಮತ್ತು ಕೃಷ್ಣಲೀಲಾ ಸಿನಿಮಾ:

ಸೇವ್ ದಿ ಕ್ಯಾಟ್ ಪುಸ್ತಕವನ್ನು ಓದಿರಬಹುದು. ಚಿತ್ರಕತೆ, ಸಿನಿಮಾ ಜಾನ್ರ್ ಬಗ್ಗೆ ಚಿತ್ರಕರ್ಮಿ ಓದಲೇಬೇಕಾದ ಪುಸ್ತಕವದು. ಹಾಗಂತ ಆ ಪುಸ್ತಕದಲ್ಲಿ ಅದ್ಭುತವಾದದ್ದೇನೂ ಹೇಳಿಲ್ಲ. ಸರಳವಾಗಿ ಸಿನಿಮಾ ಹೀಗೆ ಮತ್ತು ಇಷ್ಟೇ ಎಂಬುದನ್ನು ಹೇಳಲಾಗಿದೆ.
ಏಕೆಂದರೆ ಚಿತ್ರದ ಕತೆ ಚಿತ್ರಕತೆಯಲ್ಲಿ ಹಲವಾರು ಗೊಂದಲಗಳಿವೆ. ಹಾಗೆಯೇ ಸ್ಟಾರ್ ಸಿನಿಮಾ, ಇಮೇಜ್, ವಾಸ್ತವ ಕತೆ, ಮಸಾಲೆ, ಮನರಂಜನೆ, ಹಾಸ್ಯ ಹೀಗೆ ಎಲ್ಲವನ್ನೂ ಬೇರೆಯದೇ ಆದ ನಿಟ್ಟಿನಲ್ಲಿ ನೋಡಲಾಗುತ್ತದೆ. ಅದು ಹಾಗಲ್ಲ. ಎಲ್ಲಾ ಒಂದೇ ಎಂಬುದನ್ನು ಪ್ರತಿಪಾದಿಸುವ ಪುಸ್ತಕವದು. ಸಂಪೂರ್ಣವಾಗಿ ಕಥೆ ಮಾಡಿಕೊಳ್ಳಿ, ಚಿತ್ರಕತೆಯ ಅವಶ್ಯವಿಲ್ಲ. ಕತೆ ಚಿಕ್ಕ ಎಳೆಯಾಗಿದ್ದಾಗ ಮಾತ್ರ  ಚಿತ್ರಕತೆ ಬಗ್ಗೆ ತಲೆಕೆಡಿಸಿಕೊಳ್ಳಿ ಎನ್ನುತ್ತಾನೆ ಲೇಖಕ, ಸಿನಿಮಾ ಸಂಶೋಧಕ ಬ್ಲೇಕ್ ಸ್ನೈಡರ್. ಅದು ನಿಜವೂ ಹೌದು. ಕತೆ ವಿಸ್ತೃತ ಮತ್ತು ವಿವರವಾಗಿದ್ದಾಗ ಸ್ಪಷ್ಟವಾಗಿದ್ದಾಗ ಚಿತ್ರಕತೆ ಅಲ್ಲಿಯೇ ಇರುತ್ತದೆ. ಅದಕ್ಕಾಗಿ ವಿಶೇಷವಾಗಿ ಬರೆಯುವ ಅವಶ್ಯಕತೆ ಇಲ್ಲ. ಉದಾಹರಣೆಗೆ ಮಣಿರತ್ನಂ ಅವರ ತಿರುಡಾ ತಿರುಡಾ ಚಿತ್ರದ ಉದಾಹರಣೆ ತೆಗೆದುಕೊಂಡರೆ ಇಲ್ಲಿ ಚಿತ್ರಕತೆಯೇ ಜೀವಾಳ. ಕತೆ ನೆಪಮಾತ್ರವಷ್ಟೇ. ಇತ್ತೀಚಿಗೆ ವಿಸ್ತೃತವಾದ ಕತೆ ಚಿತ್ರಕತೆ ಸರಿಯಾದ ಫಾರ್ಮ್ಯಾಟ್ ನಲ್ಲಿ ಕನ್ನಡದಲ್ಲಿ ಬಂದದ್ದು ಕಡಿಮೆಯೇ. ಸಿನಿಮಾ ಹಿಟ್ ಅಥವಾ ಫ್ಲಾಪ್ ಅದು ವಿಷಯವೇ ಬೇರೆ. ಆದರೆ ಕಸುಬುದಾರಿಕೆ ಮತ್ತು ಕುಸುರಿ ವಿಷಯದಲ್ಲಿ ಅದರ ಕೊರತೆ ಕಂಡದ್ದು ಸತ್ಯ.
ಹಾಗೆಯೇ ನಿರ್ದೇಶಕ ಶಶಾಂಕ್ ಅವರ ಕೃಷ್ಣಲೀಲಾ ಚಿತ್ರವನ್ನು ತೆಗೆದುಕೊಳ್ಳಿ. ಇತ್ತೀಚಿಗಿನ ವಿಸ್ತೃತವಾದ ಮತ್ತು ಸರಿಯಾದ ಫಾರ್ಮ್ಯಾಟ್ ಚಿತ್ರಕತೆಯ ಚಿತ್ರವದು. ಚಿತ್ರದ ದೃಶ್ಯದ ಭಾವ ಮತ್ತು ನಿರ್ದೇಶಕರ ಆಶಯ ಇಲ್ಲಿ ಭಿನ್ನ. ಅದು ನಿರೀಕ್ಷಿತ ಪರಿಣಾಮವನ್ನಂತೂ ಬೀರಿರುವುದು ಸತ್ಯ. ಏಕೆಂದರೆ ಚಿತ್ರದ ದೃಶ್ಯದ ಭಾವ ಗಂಭೀರವಾದದ್ದು, ನಿರ್ದೇಶಕರ ಆಶಯ ಪ್ರೇಕ್ಷಕರಿಗೆ ಮನ ಮುಟ್ಟಿಸುವುದು ಎರಡೂ ಇಲ್ಲಿ ವರ್ಕ್ ಔಟ್ ಆಗಿದೆ. ಅಕಸ್ಮಾತ್ ಏರುಪೇರಾಗಿದ್ದರೆ ನಿರ್ದೇಶಕ ಶಶಾಂಕ್ ಇಲ್ಲಿ ಸೋಲುತ್ತಿದ್ದರು. ಆದರೆ ಅವರ ಅನುಭವ ಮತ್ತು ವಿಶನ್ ಪಕ್ಕಾ ಇದೆ. ನಾವು ಎಷ್ಟೋ ಚಿತ್ರಗಳಲ್ಲಿ ನೋಡಿದ್ದೇವೆ. ಅಲ್ಲಿ ಹಾಸ್ಯ ದೃಶ್ಯವಿದ್ದರೆ ನಾವು ಅಳುತ್ತಿರುತ್ತೇವೆ, ತೆರೆಯ ಮೇಲೆ ಅಳುತ್ತಿದ್ದರೆ ನಾವು ನಗುತ್ತಿರುತ್ತೇವೆ. ಅಂದರೆ ದೃಶ್ಯದ ಭಾವ, ನಿರ್ದೇಶಕರ ಆಶಯ ಒಂದೇ ಇದ್ದರೂ ಅದು ಪ್ರೇಕ್ಷಕನ ಮನಮುಟ್ಟುವಲ್ಲಿ ಸೋತಿರುತ್ತದೆ. ಆದರೆ ಕೃಷ್ಣಲೀಲಾ ಚಿತ್ರದಲ್ಲಿನ ದೃಶ್ಯಗಳನ್ನು ಆಶಯಗಳನ್ನು ಸುಮ್ಮನೆ ಗಮನಿಸಿ.  
ತೆರೆಯ ಮೇಲೆ ಗಂಭೀರವಾಗಿ ಕತೆ ನಡೆಯುತ್ತಿದ್ದರೆ ಪಾತ್ರಧಾರಿಗಳು ಹಿಂಸೆ ಅನುಭವಿಸುತ್ತಿದ್ದರೆ, ಪ್ರೇಕ್ಷಕ ಇಷ್ಟ ಪಡುತ್ತಲೇ ಮರುಗುತ್ತಲೇ ಮನರಂಜನೆ ಪಡೆದುಕೊಳ್ಳುತ್ತಿರುತ್ತಾನೆ. ಹಾಗಾಗಿಯೇ ಇತ್ತೀಚಿನ ಚಿತ್ರಗಳಲ್ಲಿ ವಿಸ್ತೃತವಾದ ಕತೆಯ ಮತ್ತು ಅದಕ್ಕೆ ಅನುರೂಪವಾದ ಚಿತ್ರಕತೆಯ ಚಿತ್ರ ಎಂದರೆ ಕೃಷ್ಣಲೀಲಾ ಎನ್ನಬಹುದು. ಸಿನಿಮಾದ ಬಗೆಗೆ ಅದ್ಯಯನ ಮಾಡಬೇಕು ಎಂದಾಕ್ಷಣ ನಮ್ಮ ಕಣ್ಣು ಹಾರುವುದು ಹಾಲಿವುಡ್ ಬಾಲಿವುಡ್ ಮತ್ತು ವಿಮರ್ಶಾತ್ಮಕವಾಗಿ ಹೆಸರು ಮಾಡಿದ ಚಿತ್ರಗಳ ಮೇಲೆ. ಆದರೆ ಅದಲ್ಲ ಅದ್ಯಯನ. ನಮ್ಮಲ್ಲಿನ ಚಿತ್ರಗಳನ್ನು ಸೂಕ್ಷ್ಮವಾಗಿ ನೋಡಬೇಕು ಎನ್ನುತ್ತಾನೆ ಬ್ಲೇಕ್. ಹಾಗಾಗಿಯೇ ಕೃಷ್ಣಲೀಲಾ ಚಿತ್ರದ ಸ್ಕ್ರಿಪ್ಟ್ ಮತ್ತು ಸಿನಿಮಾ ಉತ್ತಮ ಎನ್ನಬಹುದು. ಭಿನ್ನ ವಿಭಿನ್ನ ವಿಶಿಷ್ಟ ಎಂದೆಲ್ಲಾ ವರ್ಗೀಕರಣ ಮಾಡುವ ಮೊದಲು ಸಿನಿಮಾ ಮಾಡಿ, ನೋಡಿಸಿ, ಅವರ ಅಭಿಪ್ರಾಯ ಪಡೆದುಕೊಳ್ಳಿ ಎನ್ನುವುದು ಅವನ ವಾದ ಕೂಡ.