Wednesday, August 28, 2013

ಭೂ......!!!

ಅಮ್ಮ ಎಲ್ಲಿ ಪಕ್ಕದ ಮನೆಯ ಆಂಟಿ ಕಾಣಿಸ್ತಿಲ್ಲ.." ಹಾಸ್ಟೆಲ್ಲಿನಿಂದ ಬಂದ ಟೀ ಕುಡಿಯುತ್ತಾ ಅಮ್ಮನನ್ನು ಕೇಳಿದೆ. ಅಮ್ಮ 'ಈವತ್ತು ಅಮಾವಾಸ್ಯೆ ಆಲ್ವಾ..? ಹಾಗಾಗಿ ಅವರು ಮೊನ್ನೇನೆ ಮೈಸೂರಿಗೆ ಹೋಗಿದ್ದಾರೆ..ಬಹುಶ ನಾಳಿದ್ದು ಬರಬಹುದು .." ಎಂದಳು. ನನಗೆ ಒಂದೂ ಅರ್ಥವಾಗಲಿಲ್ಲ. ಅಮಾವಾಸ್ಯೆಗೂ ಪಕ್ಕದ ಮನೆಯ ಆಂಟಿ ಮನೆಬಿಟ್ಟು ಹೋಗುವುದಕ್ಕೂ ಕಾರಣವೇನೂ ಎಂಬುದು ಅರ್ಥವಾಗಲಿಲ್ಲ.ಆದರೂ ಇರಲಿ ಎಂಬಂತೆ ಅವರ ಮನೆಯ ಸುತ್ತಾ ಮುತ್ತಾ ನೋಡಿ ಬಂದೆ. ಇಡೀ ಊರಾಚೆಗೆ ಇದ್ದ ಎರಡೇ ಎರಡು ಮನೆಗಳು ನಮ್ಮವು. ಒಂದರಲ್ಲಿ ನಾವಿದ್ದೆವು. ಮತ್ತೊಂದರಲ್ಲಿ ಅವರಿದ್ದರು.ಅವರ ಯಜಮಾನರು ಸತ್ತ ನಂತರ ಆ ಮನೆಯಲ್ಲಿ ಆಕೆ ಒಂಟಿಯಾಗಿ ವಾಸಿಸುತ್ತಿದ್ದರು. ಅವರ ಮಗ ದೂರದಲ್ಲೆಲ್ಲೋ ಕೆಲಸ ಮಾಡಿಕೊಂಡು ಅಲ್ಲೇ ಇದ್ದು ಬಿಟ್ಟಿದ್ದ. ಇಡೀ ಮನೆಯ ಸುತ್ತಾ ಬೇಲಿ ಬೆಳೆದು ನಿಂತಿತ್ತು. ದೂರದಿಂದ ನೋಡಿದರೆ ಒಂದು ದೊಡ್ಡ ಪೊದೆಯೊಳಗೆ ಮನೆ ಒಂದೇ ಇದೆಯೇನೋ ಎನ್ನುವ ಭಾವನೆ ಬರುವಂತಿತ್ತು. ಒಟ್ಟಿನಲ್ಲಿ ಸ್ವಲ್ಪ ಅಳ್ಳೆದೆಯವನಾಗಿದ್ದರೆ ಎದೆ ನಡುಗುವಂತಿತ್ತು.
ನಾನು ಮನೆಯನ್ನೊಮ್ಮೆ ಸುತ್ತಿ ಹಾಕಿ ಬಂದವನೇ ಅಮ್ಮನನ್ನು ಕೇಳಿದೆ. ಏನಾಯಿತು..? ಅಲ್ಲೇನು ನಡೆಯುತ್ತಿದೆ..? ಅಮ್ಮ ವಿವರವಾಗಿ ನಡೆದ ವಿಷಯವನ್ನು ಹೇಳಿದರು.
ಗಂಡ ಸತ್ತ ಮೇಲೆ ಆಕೆ ಒಬ್ಬಳೇ ಇರುವುದಕ್ಕೆ ಶುರು ಮಾಡಿದ್ದಾರೆ. ಸುಮಾರು ತಿಂಗಳುಗಳ ವರೆಗೆ ಏನೂ ಅಹಿತಕರವಾದ ಘಟನೆ ನಡೆದಿಲ್ಲ. ಆದರೆ ಅದೊಂದು ದಿನ ಮಧ್ಯರಾತ್ರಿಯಲ್ಲಿ ಮಲಗಿದ್ದ ಆಕೆಗೆ ಎಚ್ಚರವಾಗಿದೆ. ಕಣ್ಣು ಬಿಟ್ಟು ಸುಮ್ಮನೆ ಮಲಗಿದ್ದಾಗ, ಹಿಂದುಗಡೆಯ ಬಾಗಿಲನ್ನು ಯಾರೋ ತಟ್ಟಿದಂತೆ ಭಾಸವಾಗಿದೆ. ಮೊದಲಿಗೆ ಅವರಿಗೆ ಅದು ನಾಯಿಯೋ, ಪಕ್ಷಿಯೋ ಬಾಗಿಲನ್ನು ಕೆರೆದಿರಬೇಕು ಎನಿಸಿದೆ. ಆದರೆ ಸ್ವಲ್ಪ ಹೊತ್ತೋಣ ನಂತರ ಬಾಗಿಲು ಬಡಿತದ ಸದ್ದು ಸ್ಪಷ್ಟವಾಗಿ ಕೇಳಿಸಿದೆ. ಅದನ್ನು ಗಮನಿಸಿದ್ದಾರೆ. ಯಾರೋ ಮನುಷ್ಯ ಬಾಗಿಲು ಬಡಿದ ರೀತಿಯಲ್ಲೀ ಸದ್ದು ಆಗಿದೆ. ಆಕೆಗೆ ಎದೆ ಒಮ್ಮೆ ಝಾಲ್ ಎಂದಿದೆ. ಮೈಯೆಲ್ಲಾ ಬೆವರು. ಹೊದಿಕೆಯನ್ನು ಮುಖದ ತುಂಬ ಹೊದ್ದುಕೊಂಡು ಕವುಚಿಕೊಂಡು ಮಲಗಿದ್ದಾರೆ. ಕಿವಿ ಮಾತ್ರ ಬಾಗಿಲ ಹತ್ತಿರವೇ ಇದೆ. 
ಶಾಮಲಾ...ನಾನು..
ಎಂಬ ಮಾತಿನ ಶಬ್ದ ಅಸ್ಪಷ್ಟವಾಗಿ ಕೇಳಿಸಿದಾಗ ಆಕೆಗೆ ಜೀವವೇ ಹೋದ ಅನುಭವವಾಗಿದೆ.
ಅಷ್ಟೇ ಆವತ್ತಿನ ರಾತ್ರಿಯನ್ನು ಜಾಗರಣೆಯಲ್ಲೇ ಕಳೆದಿದ್ದಾರೆ ಆಕೆ.ಬೆಳಿಗ್ಗೆ ಎದ್ದವರೇ ಮೊದಲು ಹಿಂದುಗಡೆ ಬಾಗಿಲ ಹತ್ತಿರ ಪರೀಕ್ಷಿಸಿದ್ದಾರೆ.ಅಲ್ಯಾವುದಾದರೂ ಗುರುತಿದೆಯಾ ಎಂದು ಗಮನಿಸಿದ್ದಾರೆ. ಊಹೂ..ಯಾವುದೂ ಸಿಕ್ಕಿಲ್ಲ. ಸುಮ್ಮನಾಗಿದ್ದಾರೆ. 
ಆದರೆ ಬೆಳಿಗ್ಗೆ ಕ್ಯಾಲೆಂಡರ್ ನೋಡಿದಾಗಲೇ ಅವರಿಗೆ ಗೊತ್ತಾದದ್ದು ಆವತ್ತು ಅಮಾವಾಸ್ಯೆ ಎಂದು.
ಇದಾಗಿ ಹದಿನೈದು ದಿನದವರೆಗೆ ಯಾವ ಸಮಸ್ಯೆಯೂ ಬಂದಿಲ್ಲ. ಆದರೆ ಹದಿನೈದನೆ ದಿನ ಪೌರ್ಣಮಿಯಂದೂ ಅದೇ ಪುನರಾವರ್ತನೆ ಆಗಿದೆ. ಈಗ ನಿಜಕ್ಕೂ ಗಾಬರಿ ಬಿದ್ದ ಆಕೆಗೆ ಅದು ತನ್ನ ಭ್ರಮೆ ಇರಬಹುದಾ? ಎನ್ನುವ ಸಂಶಯವೂ ಕಾಡಿದೆ.
ತನ್ನ ಪರಿಚಿತ ಒಬ್ಬಳನ್ನು ಮುಂದಿನ ಅಮಾವಸ್ಯೆಯಂದೂ ಏನೊಂದು ವಿಷಯ ಹೇಳದೆ ಸುಮ್ಮನೆ ವಿಷಯಾಂತರ ಮಾಡುತ್ತಾ ಮಲಗಲು ಕರೆದುಕೊಂಡು ಬಂದಿದ್ದಾರೆ. ರಾತ್ರಿ ಹನ್ನೊಂದುವರೆವರೆಗೂ ಅದೂ ಇದೂ ಹರಟೆ ಹೊಡೆದು ಮಲಗಿದ್ದಾರೆ.ಆಕೆಗೆ ಸ್ವಲ್ಪ ನಿರುಮ್ಮಳವಾದದ್ದರಿಂದಲೋ ಏನೋ ಗಾಢವಾದ ನಿದ್ರೆ ಮಲಗಿದ ತಕ್ಷಣವೇ ಹತ್ತಿಬಿಟ್ಟಿದೆ. ಆದರೆ ಒಂದು ಘಂಟೆಯ ಹತ್ತಿರಹತ್ತಿರಕ್ಕೆ ಯಾರೋ ಕಿರುಚಿದಂತಾಗಿ ಎಚ್ಚರವಾಗಿ ನೋಡಿದರೆ ಕರೆತಂದಿದ್ದವಳು ನಡುಗುತ್ತಾ ಮೂಲೆಯಲ್ಲಿ ಕುಳಿತಿದ್ದಾಳೆ. ಕಾರಣ ಕೇಳಿದರೆ ತಡವರಿಸಿಕೊಂಡು ಯಾರೋ ಹಿಂದುಗಡೆ ಬಾಗಿಲನ್ನು ಬಡಿಯುತ್ತಿದ್ದಾರೆ ಎಂದಿದ್ದಾಳೆ.
ಅಲ್ಲಿಗೆ ಶ್ಯಾಮಳಗೆ ಪಕ್ಕಾ ಆಗಿದೆ.
ಅಮ್ಮ ಇಷ್ಟು ಕಥೆಯನ್ನು ಹೇಳಿ ಏನೋಪ್ಪಾ ನಿಜಕ್ಕೂ ಅವಳ ಗಂಡ ದೆವ್ವ ಆಗಿದ್ದರೂ ಆಗಿರಬಹುದು ಎಂದು ಸುಮ್ಮನಾದರು. ನನಗೋ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದು ಗೊತ್ತಾಗಲಿಲ್ಲ. ಸುಮ್ಮನಾದೆನಾದರೂ ಕುತೂಹಲ ಮಾತ್ರ ಮನಸಿನಲ್ಲಿ ಹೆಡೆಯೆತ್ತಿತ್ತು.
ಆವತ್ತು ನಾನು ಸರಿ ರಾತ್ರಿಯವರೆಗೆ ಓದುತ್ತಾ ಕಾಲ ಕಳೆದೆ. ಹನ್ನೆರಡಾಯಿತು. ಸುಮ್ಮನೆ ಎದ್ದು ದೀಪ ಹಾಕದೆ ನಿಧಾನಕ್ಕೆ ನಮ್ಮ ಮನೆಯ ಹಿಂಬಾಗಿಲನ್ನು ತೆರೆದೇ. ಸೀದಾ ಅವರ ಮನೆಯ ಹಿಂಬಾಗಿಲ ಹತ್ತಿರಕ್ಕೆ ಹೋದೆ. ಒಮ್ಮೆ ಸುತ್ತಾ ನೋಡಿದವನಿಗೆ ಎದೆ ಝಾಲ್ ಎಂದಿತ್ತು. ಹಾಗಿತ್ತು ಬೇಲಿಯಾ ಆಕೃತಿಗಳು. ಒಮ್ಮೆ ಮೈ ನಡಿಗಿದರೂ ನನ್ನನ್ನು ನಾನು ಸಮಾಧಾನ ಪಡಿಸಿಕೊಂಡು ಸುತ್ತಾ ಮುತ್ತಾ ಪರೀಕ್ಷಿಸಿ ಮತ್ತೆ ಸ್ವಲ್ಪ ಹೊತ್ತು ಅಲ್ಲೇ ಕುಳಿತು ಮನೆಗೆ ಬಂದೆ. ಯಾವ ಸದ್ದೂ ಬರಲಿಲ್ಲ. 
ಮನೆಗೆ ಬಂದು ಮಲಗಲು ಅನುವಾದೆ. ರಗ್ಗನ್ನು ಮುಖದ ತುಂಬಾ ಹೊದ್ದುಕೊಂಡು ಏನೋ ಯೋಚಿಸುತ್ತಿದ್ದೆ. ದದ್ ದಡ ದದ್ ಸದ್ದು ಪಕ್ಕದ ಮನೆಯ ಹಿಂಬಾಗಿಲ ಹತ್ತಿರ ಕೇಳಿ ಬಂದುಬಿಟ್ಟಿತು. ನಾನು ಮೈಯೆಲ್ಲಾ ಕಿವಿಯಾದೆ. ನಿಜಕ್ಕೂ ಅದು ಭ್ರಮೆಯಲ್ಲ ಎಂಬುದನ್ನು ಖಾತರಿ ಮಾಡಿಕೊಂಡೆ. ಇಲ್ಲಾ ಅದು ಸ್ಪಷ್ಟವಾಗಿತ್ತು.ಯಾರೋ ಮನುಷ್ಯನೊಬ್ಬ ಲಯಬದ್ದವಾಗಿ ಬಾಗಿಲು ಬಡಿಯುವ ಸದ್ದಿನ೦ತಿತ್ತು ಅದು. ನನ್ನ ಮೈಯಿಂದ ಬೆವರು ಬರಲಾರಂಭಿಸಿತು.ಮನಸ್ಸು ಬೇಡ ಬೇಡ ವೆಂದರೂ ಕೇಳದೆ ಆದದ್ದೂ ಆಗೇ ಹೋಗಲಿ ಎಂದವನೇ ಸದ್ದು ಮಾಡದೆ ಹಿಂದಿನ ಬಾಗಿಲು ತೆರೆದುಹೊರಬಂದೆ..ಯಾರೂ ಇಲ್ಲ.ಒಂದು ಎಲೆಯೂ ಅಲುಗಾಡುತ್ತಿಲ್ಲ.
ನನಗೆ ಅಚ್ಚರಿ ಭಯ ಎರಡೂ ಆಯಿತು. ಆದರೂ ಸ್ವಲ್ಪ ಹೊತ್ತು ಅಲ್ಲೇ ಕುಳಿತವನು ಆಮೇಲೆ ಮತ್ತೆ ಮನೆಗೆ ಬಂದು ಮಲಗಿದೆ. ಇನ್ನೇನು ರಗ್ಗು ಹೊದೆದುಕೊಳ್ಳಬೇಕು ಆಗ ಶುರುವಾಯಿತು ಬಾಗಿಲ ಬಡಿತ ..ಈ ಸಾರಿ ಗೊರಗೊರ ಸದ್ದು ಬೇರೆ..ಮತ್ತೆ ಎದ್ದೆ..ಹೊರಹೋದೆ..ಒಂದು ಎಲೆಯೂ ಅಲುಗಾಡುತ್ತಿಲ್ಲ..ಹಾಗಾದರೆ ಸದ್ದು ಬಂದದ್ದಾದರೂ ಎಲ್ಲಿಂದ..?
ಆವತ್ತು ರಾತ್ರಿ ಇನ್ನೂ ಮೂರುಸಾರಿ ಅದೇ ಪುನರಾವರ್ತನೆಯಾಯಿತು.
ಆನಂತರ ಅದನ್ನು ಕಂಡು ಹಿಡಿಯಲು ಎಷ್ಟೋ ಪ್ರಯತ್ನ ಪಟ್ಟೆ. ಸುಳಿವು ಸಿಗಲಿಲ್ಲ. ಆಯಮ್ಮ ಆ ಮನೆಯನ್ನೇ ಬಿಟ್ಟು ಹೊರಟುಹೋದರು.ಆನಂತರ ನಾನು ದೆವ್ವಗಳ ಬಗ್ಗೆ ಆಸಕ್ತಿ ವಹಿಸಿ ದೆವ್ವ ಬಿಡಿಸುವವರ ಹತ್ತಿರವೆಲ್ಲಾ ಹೋಗಿಬಂದೆ..ಅಲ್ಲಿನ ದೃಶ್ಯಗಳಾವುವು ನನಗೆ ಹೆದರಿಸಲಿಲ್ಲ.
ಆದರೆ ಅದೊಂದು ದಿನ ನನ್ನ ಬದುಕಿನಲ್ಲಿ ನಡೆದ ಘಟನೆ ನನ್ನನ್ನು ವರ್ಷಗಳ ಕಾಲ ನಿದ್ರೆ ಮಾಡದಂತೆ ಮಾಡಿಬಿಟ್ಟಿತು.
ಅದಿರಲಿ. ಈವತ್ತಿಗೂ ದೆವ್ವ ಪೀಡೆ, ಪಿಶಾಚಿ ಭೂತಗಳ ಜಗತ್ತು ಆಕರ್ಷನೀಯವೇ. ಅದರಲ್ಲೂ ನಮಗೆ ನಮ್ಮ ಸಿನಿಮಾದವರಿಗೆ ಅದೊಂತರ ಅದ್ಭುತ ಜಗತ್ತು.ಜಗತ್ತಿನ ಬಹುತೇಕ ಎಲ್ಲಾ ಭಾಷೆಗಳಲ್ಲೂ ಭಯಾನಕ ಸಿನಿಮಾಗಳು ಬಂದಿವೆ. ಮತ್ತು ಅವುಗಳು ಸಂಖ್ಯೆಯಲ್ಲೂ ಹೆಚ್ಚೇ ಇವೆ ಎನ್ನಬಹುದು. ಅದನ್ನು ಭಿನ್ನಭಿನ್ನವಾಗಿ ತೋರಿಸಿದ್ದಾರೆ. ಹಾಗಾದರೆ ಅದೆಲ್ಲಾ ಸತ್ಯವಾ..? ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಕುತೂಹಲವಂತೂ ಇದ್ದೆ ಇದೆ.
ಇದೆಲ್ಲವನ್ನೂ ಈಗ ಪ್ರಸ್ತಾಪಿಸಿದ ಕಾರಣವೆಂದರೆ ನಾನು ನನ್ನ ಮುಂದಿನ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಯಾಕೋ ಭಯಾನಕ ಚಿತ್ರವೊಂದನ್ನು ಈ ಸಾರಿ ಮಾಡಬೇಕೆಂಬ ತುಡಿತ ಕಾಡುತ್ತದೆ. ಕಾರಣ ಗೊತ್ತಿಲ್ಲ. ಹಾಗಾಗಿ ಹೇಗೆ ಜನರನ್ನು ಚಿತ್ರಮಂದಿರದೊಳಗೆ ಹೆದರಿಸಬಹುದು..? ಕಥೆ ಹೇಗಿರಬೇಕು ಎಂಬ ಮೂಲಭೂತ ಪ್ರಶ್ನೆಗಳು ನನ್ನನ್ನು ಕಾಡುತ್ತವೆ. ಸಹಾಯ ಮಾಡುವವರಿದ್ದರೆ ಸುಸ್ವಾಗತ.
ಬನ್ನಿ ಎಲ್ಲಾ ಸೇರಿ ಒಂದಷ್ಟು ಹೆದರಿಸೋಣ.
ಎಲ್ಲೋ ಒಂದು ಭೂತಬಂಗಲೆಗೆ ಸಿಲುಕುವ ಒಂದಷ್ಟು ಜನರು, ಪ್ರೀತಿಸಿ ಸೋತು ಸತ್ತು ದೆವ್ವವಾಗಿ ಕಾಡುವ ಹೆಣ್ಣು ದೆವ್ವ, ದ್ವೇಷಕ್ಕಾಗಿ ಭೂತವಾಗುವ ದೆವ್ವಾ...ಹೀಗೆ ಹಲವಾರು ಕಥೆಗಳು ಈಗಾಗಲೇ ಬಂದಿವೆ. ನಾನು ಇದರಲ್ಲೂ ಸ್ವಲ್ಪ ಮಟ್ಟಗಿನ  ಪ್ರಯೋಗ ಮಾಡಬೇಕೆಂದುಕೊಂಡಿದ್ದೇನೆ/ ಆದರೆ ಅದಕ್ಕೆ ಮೊದಲಿಗೆ ಒಳ್ಳೆಯ ಬರವಣಿಗೆ/ಕಥೆ ಎಳೆ ಬೇಕು. ನಿಮ್ಮ-ನಮ್ಮ ಬಿಡುವಿನ ಸಮಯದಲ್ಲಿ ಚರ್ಚಿಸೋಣ ಎಂದರೆ ನಾನು ರೆಡಿ..ಕಲಾವಿದರೂ, ಹೊಟ್ಟೆಯ ಆರು ಮಡಿಕೆಗಳೂ..


ನಮಗೆಲ್ಲಾ ಗೊತ್ತಿರುವಂತೆ ಕ್ರಿಶ್ಚಿಯನ್ ಬೇಲ್ ದಿ ಮಷನಿಸ್ಟ್ ಚಿತ್ರದಲ್ಲಿ, ಮ್ಯಾಟ್ ದಮಾನ್, ಇನ್ಫಾರ್ಮ೦ಟ ಚಿತ್ರದಲ್ಲಿ ಕಾಸ್ಟ್ ಅವೆಯ್ ಚಿತ್ರದಲ್ಲಿ ಟಾಮ್ ಹಾನ್ಕ್ಸ್ ದೇಹಸ್ವರೂಪವನ್ನು ಏರುಪೇರು ಮಾಡಿಕೊಂಡಿದ್ದು ಗೊತ್ತೇ ಇದೆ. ಕಮಲ್ ಹಾಸನ್ ಆಗಾಗ ಈ ರೀತಿಯ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. 
ಒಬ್ಬ ನಟನ ಅಂಗಸೌಸ್ಟವ ಚೆನ್ನಾಗಿರಬೇಕು. ನೋಡಲಿಕ್ಕೆ ಫಿಟ್ ಆಗಿ ಕಂಡರೆ ನಾಯಕ ಎನ್ನುವುದಕ್ಕೂ ಸರಿಹೋಗುತ್ತದೆ ಎಂದೆಲ್ಲಾ ಯೋಚಿಸಬಹುದು. 
ಮೊನ್ನೆ ಕನ್ನಡದ ನಟ ಹೇಮಂತ್ ಹೃದಾಯಘಾತದಿಂದ ಮೃತ ಪಟ್ಟಿದ್ದು ಗೊತ್ತಿರುವ ಸಂಗತಿಯೇ. ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಹೊಸದೇನಾದರೂ ಮಾಡಬೇಕೆಂದುಕೊಂಡು ಅದಕ್ಕಾಗಿ ಶ್ರಮ ಪಡುವುದು ತಪ್ಪಲ್ಲ. ಆದರೆ ವಿಪರೀತ ದೇಹದಂಡನೆ ಸರಿಯೇ ಎಂಬುವುದೇ ಪ್ರಶ್ನೆ.ನಟ ಹೇಮಂತ್ ಸಾವಿಗೆ ಅವರು ದೇಹ ಧಾರ್ಡ್ಯತೆಗಾಗಿ ಮತ್ತು ಅತೀ ವೇಗದಲ್ಲಿ ಮೈಕಟ್ಟಿನ ರಚನೆಗಾಗಿ ತೆಗೆದುಕೊಂಡ ಅಧಿಕ ಪ್ರೋಟೀನ್ ಅಂಶವೆ ಕಾರಣ ಎಂಬುದು ವೈದ್ಯಕೀಯ ಮೂಲಗಳಿಂದ ದೃಢಪಟ್ಟಿದೆ. ವಿಷಯ ಅದಲ್ಲ. ಇಂದಿನ ಯುವ ನಟರೇಕೆ ಮೈಕಟ್ಟಿನ ಹಿಂದೆ ಬಿದ್ದಿದ್ದಾರೆ ಎಂಬುದು.
ಈವತ್ತು ಸಿಕ್ಸ್ ಪ್ಯಾಕ್ ಅಬ್ಸ್ ಎಂಬುದು ಜನರಲ್ಲಿ ಜನಜನಿತ. ಆದರೆ ನಾನು ಕಂಡ ಮಟ್ಟಿಗೆ ನಮ್ಮ ದಕ್ಷಿಣಭಾರತದ ಚಿತ್ರರಂಗದಲ್ಲಿ ಮೊದಲಿಂದಲೂ ಮೈಕಟ್ಟಿಗೆ ಅಂತಹ ಬೆಲೆಯಿರಲಿಲ್ಲ. ಕನ್ನಡದಲ್ಲಿ ವರನಟ ರಾಜ್ ಬಿಟ್ಟರೆ ಬೇರೆ ನಟರು ಬೊಜ್ಜಿಲ್ಲದೆ ವೃತ್ತಿ ಜೀವನದ ಪೂರ್ತಿ ಸಂಭಾಳಿಸಿದ್ದು ಕಡಿಮೆ ಎನ್ನಬಹುದು. ಹಾಗಂತ ರಾಜ್ ಏನೂ ಬಾಡಿ ಬಿಲ್ಡರ್ ಅಲ್ಲ. ಅವರ ನಿಯಮಿತವಾದ ಯೋಗ ಅವರನ್ನು ಅವರ ದೇಹಸಿರಿಯನ್ನು ಕಾಪಾಡಿಕೊಂಡಿತ್ತು ಎನ್ನಬಹುದು.ಆವಾಗಲೆಲ್ಲಾ ದೊಡ್ಡ ದೇಹವೆಂದರೆ ಖಳರದ್ದು.ಟೈಗರ್ ಪ್ರಭಾಕರ್, ಫೈಟರ್ ಬೋರಯ್ಯ ಮುಂತಾದವರೆಲ್ಲಾ ದೊಡ್ಡ ದೇಹವನ್ನು ಹೊಂದಿ ನಾಯಕರಿಂದ ಏಟು ತಿಂದು ಸೋತು ಮಲಗುತ್ತಿದ್ದರು. ಆದರೆ ಬಾಲಿವುಡ್ ನಲ್ಲಿ ಹಾಗಲ್ಲ. ಅಲ್ಲಿ ಆವಾಗಿನಿಂದಲೂ ಕಟ್ಟು ಮಸ್ತಾದ ದೇಹಕ್ಕೆ ಒಂದು ಮಟ್ಟಗಿನ ಪ್ರಾಧಾನ್ಯತೆ ಇತ್ತೇ ಇತ್ತು.
ಸಲ್ಮಾನ್ ಖಾನ್, ಸಂಜಯ್ ದತ್, ಸುನೀಲ್ ಶೆಟ್ಟಿ, ಆಮೀರ್ ಖಾನ್ ಕಟ್ಟು ಮಸ್ತಾದ ಕೆತ್ತಿದ ಶಿಲ್ಪದಂತಹ ದೇಹಸಿರಿಯೊಂದಿಗೆ ಚಿತ್ರರಂಗಕ್ಕೆ ಕಾಲಿರಿಸಿದವರು. ಆದರೆ ಅದರ ನಡುವೆ ಬಿರುಗಾಳಿಯಂತೆ ನುಗ್ಗಿದ್ದು ಶಾರುಕ್ ಖಾನ್. ಸಾಮಾನ್ಯವರ್ಗದ ಸಾಮಾನ್ಯ ರೂಪಿನ ಸಾಮಾನ್ಯ ದೇಹಸಿರಿಯ ಶಾರುಕ್ ಅವರೆಲ್ಲರನ್ನೂ ಮೀರಿ ಬೆಳೆದುಬಿಟ್ಟರು.ಅವರ ಮುಗುಳ್ನಗೆ, ಅವರ ಹಾವ ಭಾವ ಗಳು ಚಿತ್ರರಸಿಕರನ್ನು ಹುಚ್ಚೆಬ್ಬಿಸಿದ್ದವು.
ಆದರೆ ಅವರೇ ಓಂ ಶಾಂತಿ ಓಂ ಚಿತ್ರಕ್ಕೆ ಮೊಟ್ಟ ಮೊದಲಿಗೆ ಸಿಕ್ಸ್ ಪ್ಯಾಕ್ ಮಾಡಿದರು ನೋಡಿ, ಅಲ್ಲಿಯವೆರೆಗೆ ನೇಪಥ್ಯದಲ್ಲಿದ್ದ ಸಿಕ್ಸ್ ಪ್ಯಾಕ್ ಅಬ್ಸ್ ಎನ್ನುವುದು ಎಲ್ಲರ ಕಣ್ಮನಿಯಾಯಿತು. ಯಾಕೆ ನಾವು ಒಮ್ಮೆ ಪ್ರಯತ್ನಿಸಬಾರದು ಎಂದುಕೊಳ್ಳುವುದಕ್ಕೆ ಕಾರಣ ಇದೆ ಶಾರುಕ್. ಅದೇ ಆಮೀರ್, ಸಲ್ಮಾನ್ ಸಿಕ್ಸ್ ಪ್ಯಾಕ್ ಮಾಡಿದ್ದರೆ ಜನರು ತಲೆಕೆಡಿಸಿ ಕೊಳ್ಳುತ್ತಿರಲಿಲ್ಲ. ಆದರೆ ಶಾರುಕ್ ನಮ್ಮ ನಿಮ್ಮಂತೆ ಸಾದಾರಣ ದೇಹಸಿರಿಯ ವ್ಯಕ್ತಿಯಾದ್ದರಿಂದ ಆ ಭಾವನೆ ಜೀವಂತವಾಯಿತು. ತದನಂತರ ಶುರುವಾಯಿತು ಕಲಾವಿದರಲ್ಲಿ ಸಿಕ್ಸ್ ಪ್ಯಾಕ್ ಹುಚ್ಚು. ಒಂದಲ್ಲಾ ಒಂದು ರೀತಿಯಲ್ಲಿ ಸೋತವರು ಗಮನಸೆಳೆಯಲು ಸಿಕ್ಸ್ ಪ್ಯಾಕ್ ದಾರಿ ಕಂಡುಕೊಂಡರು. ಮೂರು ತಿಂಗಳಲ್ಲಿ ಆರು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ಮಾಡುವುದು ಹೇಗೆ ಎಂಬುದರ ಬಗ್ಗೆಯಲ್ಲಾ ವರದಿಗಳು, ಲೇಖನಗಳು, ಚಿತ್ರಣಗಳು. ಕಾರ್ಯಕ್ರಮಗಳು ಎಲ್ಲೆಲ್ಲೂ ಹರಿದಾಡಿದವು. ಈವತ್ತು ನಟರಿಗೆ ಇದೊಂದು ಮುಖ್ಯವಾದ ಅಂಗವೆನಿಸಿದೆ.
ಶಾರುಕ್ ನಟನಾಗಿ ಯಶಸ್ಸಾದ ಮೇಲೆ ಸಿಕ್ಸ್ ಪ್ಯಾಕ್ ಮಾಡಿದ್ದರು ಮತ್ತು ಆ ಚಿತ್ರ ಎಲ್ಲ ರೀತಿಯಿಂದಲೂ ಚೆನ್ನಾಗಿತ್ತು. ಆಮೀರ್ ಘಜಿನಿ ಯಲ್ಲಿ ಎಂಟು ಅಬ್ಸ್ ಮಾಡಿದಾಗಲೂ ಚಿತ್ರ ಅದರಿಂದ ಯಶಸ್ವಿಯಾಗಿರಲಿಲ್ಲ.
ಆದರೆ ನಮ್ಮಲ್ಲಿ ಎಲ್ಲರೂ ಹಿಂದೆ ಮುಂದೆ ನೋಡದೆ ಸಿಕ್ಸ್ ಪ್ಯಾಕ್ ಎಂದು ಒದ್ದಾಡುತ್ತಿದ್ದಾರೆ. ಹಾಸ್ಯನಟನಾಗಿ ಅದ್ಭುತ ಯಶಸ್ಸು ಗಳಿಸಿದ ತೆಲುಗು ನಟ ಸುನೀಲ್ ಸಿಕ್ಸ್ ಪ್ಯಾಕ್ ಮಾಡಿಕೊಂಡರಷ್ಟೇ.ಕನ್ನಡದಲ್ಲಿ ಸಂಚಾರಿ ಮಾಡಿ ಸೋತ ರಾಜ್ ಮುಂದಿನ ಚಿತ್ರ ಜಟಾಯು ವಿಗೆ ತಾವೂ ಹೊಟ್ಟೆಯಲ್ಲಿ ಆರು ಭಾಗಗಳ ಚಿತ್ತಾರ ಮಾಡಿಕೊಂಡರು.ಈಗೀಗ ಅಜೇಯ ರಾವ್, ಪ್ರೇಂ ,ಚೇತನ್ ಚಂದ್ರ , ನಟಿ ಮಮತಾ ರಾವತ್...ಹೀಗೆ ಎಲ್ಲರೂ ಸಿಕ್ಸ್ ಪ್ಯಾಕ್ ಹಿಂದೆ ಬಿದ್ದಿದ್ದಾರೆ... ಪ್ರೇಕ್ಷಕನಿಗೆ ಬೇಕಿರುವುದು ಅತ್ಯುತ್ತಮ ಕಥೆಯಿರುವ ಒಳ್ಳೆಯ ಚಿತ್ರವೇ ಹೊರತು ನಟನ ದೇಹ ಸಿರಿಯಲ್ಲ.  ಹಾಗೆಯೇ ನಟ ಜಾಗ್ರತೆ ವಹಿಸಬೇಕಾದದ್ದು ಕಥೆಯ ಆಯ್ಕೆಯಲ್ಲಿ..ಕಲಿಯಬೇಕಾದದ್ದು ಅಭಿನಯವನ್ನು. ಅದೆಲ್ಲವನ್ನೂ ಪಕ್ಕಕ್ಕಿರಿಸಿ ಬರೀ ಹೊಟ್ಟೆಯ ಕಡೆಗೆ ಮಾತ್ರ ಗಮನ ಹರಿಸಿದರೆ ಹೇಗೆ..? ಎಂಬುದೇ  ಪ್ರಶ್ನೆ.
ಸಿಕ್ಸ್ ಪ್ಯಾಕ್ , ದಪ್ಪಗಾಗುವುದು, ಸಣ್ಣಗಾಗುವುದು ಇವೆಲ್ಲವೂ ಆ ಪಾತ್ರಕ್ಕೆ ಬೇಕೇ ಬೇಕಾಗಿದ್ದು ಒಬ್ಬ ಕಲಾವಿದ ಅದಕ್ಕಾಗಿ ಶ್ರಮ ತೆಗೆದುಕೊಂಡರೆ ಅದು ಮೆಚ್ಚಲಾರ್ಹ ಸಂಗತಿಯೇ. ಆದರೆ ಬರೀ ಸಿಕ್ಸ್ ಪ್ಯಾಕ್ ಮಾಡಿದರೆ ಅದೇ ಚಿತ್ರದಲ್ಲಿ ವಿಭಿನ್ನತೆ ಕೊಡುತ್ತದೆ ಎಂದರೆ ಅದು ಒಪ್ಪಿಕೊಳ್ಳಲಾಗದ ಸಂಗತಿ ಎನ್ನಬಹುದು

Tuesday, August 27, 2013

ಇದು ನನ್ನದೇ ಕಥೆ..


ನಾನು ಚಿತ್ರ ಬಿಡಿಸುತ್ತೇನೆ. ಅದು ನನಗೆ ಹುಟ್ಟಿದಾಗಿನಿಂದಲೇ ಬಂದದ್ದು. ಅದನ್ನು ನಾನು ಕಲಿತದ್ದಾದರೂ ಹೇಗೆ? ಅದೆಷ್ಟೇ ನೆನಪಿಸಿಕೊಂಡರೂ ನಂಗೆ ಗೊತ್ತಾಗುತ್ತಿಲ್ಲ. ಆದರೆ ಒಂದನ್ನು ಮಾತ್ರ ಸ್ಪಷ್ಟವಾಗಿ ಹೇಳಬಲ್ಲೆ. ನಂಗೆ ಬುದ್ದಿ ಬಂದಾಗಿಲಿಂದ ನಾನು ಬರೆಯುತ್ತೇನೆ. ಕೈಗೆ ಸಿಕ್ಕಿದ್ದರಲ್ಲಿ ಚಿತ್ರ ಬಿಡಿಸುತ್ತೇನೆ. ಮೊದಲೆಲ್ಲಾ ಇದ್ದಿಲನ್ನು ತೆಗೆದುಕೊಂಡು ಗೋಡೆಯ ಮೇಲೆ ಚಿತ್ರ ಬಿಡಿಸುತ್ತಿದ್ದೆ. ಹೂವುಗಳು, ಚಂದನೆಯ ಸೊಂಟದ ಮೇಲೆ ನೀರಿನ ಬಿಂದಿಗೆ ಹೊತ್ತುಕೊಂಡು ಹೊರಟ ಹೆಂಗಸರು, ಆಟವಾಡುತ್ತಿರುವ ಮಕ್ಕಳು,..ಹೀಗೆ. ಎಲ್ಲವನ್ನು ನನ್ನ ಕಲ್ಪನೆಯೊಂದಿಗೆ ಪುನರ್ರಚಿಸುತ್ತಿದ್ದೆ. ಆವಾಗೆಲ್ಲಾ ನನ್ನನ್ನು ನನ್ನ ಕಲೆಯನ್ನು ಮೆಚ್ಚಿಕೊಳ್ಳದಿದ್ದವರು ಯಾರು?
ಆದರೆ ಬೆಳೆಯುತ್ತಾ ಬೆಳೆಯುತ್ತಾ ಅದು ನನ್ನ ಹವ್ಯಾಸವಾಗಲಿಲ್ಲ.ಅದು ನಾನೇ ಆಯಿತು. ಅದನ್ನೇ ಗಂಭೀರವಾಗಿ ವೃತ್ತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದೆ. ಆವಾಗಲಿಂದ ನನ್ನ ಪರಿಸ್ಥಿತಿ ಬಿಗಡಾಯಿಸಿತು ಎನ್ನಬಹುದು. ಎಲ್ಲಾ ತಲೆಕೆಳಗಾಯಿತು. ಕಲೆಗೆ ಪ್ರಪಂಚದಲ್ಲಿ ಬೆಲೆಯಿದೆ ಆದರೆ ಅದು ಹಣದ ರೂಪದಲ್ಲಿಲ್ಲ ಎಂಬ ಸತ್ಯ ಗೋಚರವಾಗುವಷ್ಟರಲ್ಲಿ ನನ್ನ ಜೀವನದ ಅರ್ಧ ಭಾಗವೇ ಕಳೆದುಹೋಗಿತ್ತು. ಸರಿ ಇನ್ನೇನು ಮಾಡುವುದು. ಮಾಡುವ ಮಾಡಿದ ಕೆಲಸವೆಲ್ಲಾ ಮಣ್ಣು ಎಂಬಂತಾಯಿತು. ಈ ಕಾರಣದಿಂದಲೇ ಎಷ್ಟೋ ಮಹಾನ ಕಲಾವಿದರುಗಳು ಆತ್ಮಹತ್ಯೆ ಮಾಡಿಕೊಂಡದ್ದು ಎನಿಸಿತು. 
ಹೌದು. ಈ ಜಗತ್ತಿನಲ್ಲಿ ನಾನು ಬದುಕಿ ಮಾಡುವಂತಹದ್ದಾದರೂ ಏನು? ಯಾಕಾಗಿ ಬದುಕಬೇಕು.? ನಾನು ಬದುಕಿದರೆ ಸಂತಸ ಪಡುವವರಾದರೂ ಯಾರು? ಸತ್ತರೆ ಯಾರಾದರೂ ಅಳುತ್ತಾರಾ..?
ಎಲ್ಲಾ ಪ್ರಶ್ನೆಗಳಿಗೆ 'ಇಲ್ಲಾ' ಎನ್ನುವ ಒಂದೆ ಉತ್ತರವಾದರೆ, ನಾನಾದರೂ ಯಾಕೆ ಬದುಕಬೇಕು ಎನಿಸಿತು.
ಇಂತಹವು ಅದೆಷ್ಟೋ ಆಲೋಚನೆಗಳು ನನ್ನ ತಲೆಗೆ ಬಂದಾಗ ಅದನ್ನು ಕಾರ್ಯ ರೂಪಕ್ಕೆ ತರಲು ನಾನು ತಡಮಾಡಿದ್ದೆ. ಯಾಕೋ ಇದನ್ನು ತಡ ಮಾಡಬಾರದು ಎನಿಸಿತು.
ನಾನು ಸಾಯಲು ನಿರ್ಧರಿಸಿದೆ. ಆತ್ಮಹತೆಯಂತಹ ಮಹಾಪಾಪಕ್ಕೆ ಕೈ ಹಾಕಲು ಯೋಚಿಸಿದೆ.
ಆದರೆ ಇಲ್ಲಿ ಸತ್ತರೆ ಒಂದಷ್ಟು ಜನಕ್ಕಾದರೂ ನಾನು ಗೊತ್ತು.ಅವರು ಮರುಗುವುದಕ್ಕಿಂತ ಬದುಕಲಾರದೆ ಸತ್ತ..? ಎಂದು ಮೂಗು ಮುರಿಯುವುದು ಶತಸಿದ್ದ. ಹೌದು. ಇಲ್ಲಿಯವರೆಗೆ ಒಂದು ಸ್ವಲ್ಪವೂ ಸಹಾಯಕ್ಕೆ ಬಾರದ ಜನರ ಕೈಯಲ್ಲಿ ಏನೇನೋ ಯಾಕೆ ಮಾತನಾದಿಸಿಕೊಳ್ಳಬೇಕು.
ದೂರದ ಊರಿಗೆ ಹೋಗಿ ಸತ್ತರೆ ಯಾರಿಗೂ ನಾನು ಯಾರು ಎಂಬುದು ಗೊತ್ತಾಗಿವುದಿಲ್ಲ.
ಅದಕ್ಕೆ ನಾನು ದೂರದ ಊರಿನ ಹಾದಿ ಹಿಡಿದೇ.
ಸಾಯಲು ನಿರ್ಧರ್ಸಿದ ಮೇಲೆ ಅದಕ್ಯಾಕೆ ಅವಸರ. ನಿಧಾನಕ್ಕೆ ಸಾವಧಾನಕ್ಕೆ ಸತ್ತರಾಯಿತು ಎಂದುಕೊಂಡೆ. ಹಾಗಂತ ಸಾಯುವ ನಿರ್ಧಾರವನ್ನೇನೂ ಬಿಡಲಿಲ್ಲ. 
ಆದರೆ ಆಕೆ ನನ್ನ ಅಷ್ಟೂ ಯೋಚನೆ ಯೋಜನೆಯನ್ನು ತಲೆಕೆಳಗು ಮಾಡಿಬಿಟ್ಟಿದ್ದಳು. ಅವಳು ವಿಧವೆ. ಒಂಟಿಯಾಗಿದ್ದಳು. ಅಕಸ್ಮಾತ್ತಾಗಿ ಗೊತ್ತು ಗುರಿತಿಲ್ಲದ ಊರಿನಲ್ಲಿ ಕಣ್ಣಿಗೆ ಬಿದ್ದಿದ್ದಳು. 
ಹೌದು. ನಾನಾಕೆಯ ಪ್ರೀತಿಯಲ್ಲಿ ಬಿದ್ದಿದ್ದೆ. ಸಾವಿನ ತುದಿಯಲ್ಲಿದ್ದವನಿಗೆ ಪಟಾರನೆ ಹಿಂದಕ್ಕೆ ಜಿಗಿಯುವ ಹಂಬಲವಾಯಿತು.ಜಿಗಿದುಬಿಡಲಾ ..? ಬೇಡವಾ..? ಪ್ರಶ್ನೆಗೆ ಉತ್ತರ ಹುಡುಕುವುದೇ ಕಷ್ಟವಾಯಿತು.
2002 ರಲ್ಲಿ ಬಿಡುಗಡೆಯಾದ ಸ್ಪ್ಯಾನಿಷ್ ಭಾಷೆಯಲ್ಲಿ ಜಪೋನ್ ಎನ್ನುವ ಚಿತ್ರವೊಂದಿದೆ.ಕಾರ್ಲೋಸ್ ರೆಯ್ಗದಾಸ್ ಅದರ ನಿರ್ದೇಶಕ. ಆತನ ಹಿಂದಿನ ಚಿತ್ರಗಳಾದ ಬ್ಯಾಟಲ್ ಇನ್ ದಿ ಹೆವನ್, ಸೈಲೆಂಟ್ ಲೈಟ್ ಚಿತ್ರಗಳನ್ನು ನೀವು ನೋಡಿದ್ದರೆ ಆತನ ಬಗ್ಗೆ ಸ್ವಲ್ಪವಾದರೂ ಗೊತ್ತಿರುತ್ತದೆ. ಸ್ವಲ್ಪ ಮಂದಗತಿಯ ನಿರೂಪನೆಯಾದರೂ ಚಿತ್ರದ ಕಥೆಯಲ್ಲಿ ಚಿತ್ರಕಥೆಯಲ್ಲಿ ಅದೆಂತಹದ್ದೋ ಸೆಳೆತವಂತೂ ಇದ್ದೆ ಇರುತ್ತದೆ. ಆತನ ಚಿತ್ರಗಳ ಪಾತ್ರಧಾರಿಗಳೂ ಅಷ್ಟೇ. ತನ್ಮಯರಾಗಿ ನಟಿಸುತ್ತಾರೆ. ಜಪೋನ್ ಚಿತ್ರದಲ್ಲೂ ಅಷ್ಟೇ .. ನಿರೂಪಣೆ ಮತ್ತು ಕಥೆ ನಿಧಾನಕ್ಕೆ ಸಾಗುತ್ತದೆ. ಕಥೆಯ ಹಿಂದು ಮುಂದೆ ನಮಗೆ ಗೊತ್ತಾಗಿಬಿಡುತ್ತದೆ. ಮುಂದೇನೂ ಕುತೂಹಲಗಳು ಉಳಿಯುವುದಿಲ್ಲ. ಆದರೂ ನೀವು ಚಿತ್ರವನ್ನು ಪೂರ್ತಿಯಾಗಿ ನೋಡದೆ ಇರಲಾರಿರಿ.