Monday, September 22, 2014

ದೆವ್ವದ ಹಿಂದೆ...

ಆಕೆಗೋ ಅವನ ಮೇಲೆ ಪ್ರೀತಿ, ಆದರೆ ಅವನಿಗೆ ಅವಳಷ್ಟು ಚಂದ ಇದ್ದರೂ ಹೀರೋಯಿನ್ ಅವಳೇ ಆಗಿದ್ದರೂ ಅವಳ ಮೇಲೇಕೋ ಮನಸಿಲ್ಲ. ಅವಳು ಬಿಡುವುದಿಲ್ಲ. ಕೊನೆಗೆ ಅವನಿಂದ ತಿರಸ್ಕೃತಳಾಗಿ ಆತ್ಮಹತ್ಯೆ ಮಾಡಿಕೊಂಡು ಸತ್ತು ಆನಂತರ ದೆವ್ವವಾಗಿ ಕಾಡುತ್ತಾಳೆ...
ಅಥವಾ ಅದೊಂದು ಬಂಗಲೆ ನಾಲ್ಕಾರು ಜನ ಹುಡುಗರು ರಜಾ ಕಳೆಯಲೋ, ಸಾಕ್ಷ್ಯಚಿತ್ರ ಮಾಡಲೋ ಕಾಡಿಗೆ ಹೋಗಿ ಅಲ್ಲಿರುವ ಅದೇ ಬಂಗಲೆಗೆ ನುಗ್ಗುತ್ತಾರೆ. ಅಲ್ಲೊಬ್ಬ ಭಯಾನಕ ಮುಖದ/ ಮುಖಭಾವದ ಮನೆ ಆಳು..ಆನಂತರ ಕಾಟ ಇದ್ದದ್ದೇ...
ನನಗೆ ದೆವ್ವದ ಚಿತ್ರ ಭಯ ಹುಟ್ಟಿಸಿದ್ದು ಯಾವುದು ಎಂಬುದರ ಲೆಕ್ಕಾಚಾರದಲ್ಲೇ ಇನ್ನೂ ಇದ್ದೇನೆ. ಶರಪಂಜರದ ದೃಶ್ಯ ಭಯ ತರಿಸಿತ್ತು, ಆನಂತರ ನಾ ನಿನ್ನ ಬಿಡಲಾರೆ ಕೂಡ ಭಯ ತರಿಸಿತ್ತು. ಆವಾಗ ಚಿಕ್ಕವನಾದ್ದರಿಂದಲೋ ಏನೋ? ಆಮೇಲೆ ಕಾಲೇಜು ದಿನಗಳಲ್ಲಿ ಅದ್ಯಾರೋ ಈವಿಲ್ ಡೆಡ್ ಭಯಾನಕ ಸಿನಿಮಾ ಎಂದಿದ್ದರು. ಸಿನಿಮಾದಲ್ಲಿ ಭಯಕ್ಕಿಂತ ಶಾಕ್ ಹೆಚ್ಚಾಗಿತ್ತು. ಅದರ ಹಿನ್ನೆಲೆ ಶಬ್ದ ಭಯಾನಕ ಎನಿಸಿತ್ತು. ಅದು ಬಿಟ್ಟರೆ ದೆವ್ವವನ್ನು ಎದುರಿಸಲು ಅವರು ಗನ್, ಚಾಕು ಮುಂತಾದ ಆಯುಧ ಬಳಸುವುದನ್ನು ನೋಡಿ ನಗು ಬಂದಿತ್ತು. ಆದರೆ ಭಯದ ಜೊತೆಗೆ ಉದ್ವೇಗ ತರಿಸಿತ್ತು ಕೆಲವು ಚಿತ್ರಗಳಿವೆ. ಆದರೆ ನಾನು ಹೆದರಿದ ಚಿತ್ರ ಎಂದರೆ ಜೇಮ್ಸ್ ವ್ಯಾನ್ ನಿರ್ದೇಶನದ ಸಾ. ನನಗೆ ಭಯದ ಪ್ರಶ್ನೆಯಲ್ಲ. ತೆರೆಯ ಮೇಲಿನ ಪಾತ್ರಗಳ ಚಿಂತಾಜನಕ ಸ್ಥಿತಿ ಅದ್ಯಾವ ಸಮಯದಲ್ಲಿ ಅದ್ಯಾರನ್ನು ಹೊತ್ತುಕೊಂಡು ಹೋಗುತ್ತಾನೋ ಅನ್ನುವ ಭಯ. ಒಂದೇ ಏಟಿಗೆ ಕೊಂದರೆ ok. ಅದು ಬಿಟ್ಟು ಡಿಸೈನ್ ಡಿಸೈನ್ ಆಗಿ ನರಕ ಯಂತ್ರಗಳನ್ನು ಮಾಡಿ ಸಾಯಿಸುವ ಅವನ ಪರಿಗೆ ನಮ್ಮ ಜೀವ ಹೋಗದೆ ಇರುತ್ತಿತ್ತೆ..?
ಆಕೆ ನಟಿ. ನಿಮಗೆಲ್ಲಾ ಗೊತ್ತಿರುತ್ತಾರೆ. ಚಲನಚಿತ್ರ, ಧಾರಾವಾಹಿಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುತ್ತಾರೆ. ಅವರ ಮಗಳೂ ಕೂಡ ಈವತ್ತು ನಾಯಕಿಯಾಗಿದ್ದಾರೆ. ಆಕೆ ಹೇಳಿದ ಕತೆ ಇದು.
ಅವರು ಅವರ ತಂದೆ ಜೊತೆ ಇದ್ದರಂತೆ. ಬೆಳಿಗ್ಗೆಯಿಂದ ಯಾವುದೇ ಕೆಟ್ಟ ಅನುಭವವಾಗುತ್ತಿರಲಿಲ್ಲವಂತೆ. ಆದರೆ ರಾತ್ರಿ ಮಲಗಿದ ಮೇಲೆ ಮೈ ತುಂಬಾ ರಗ್ಗು ಹೊದ್ದುಕೊಂಡರೆ ಯಾರೋ ನಿಧಾನಕ್ಕೆ ಮೈ ಮೇಲೆ ಸವರಿದ ಅನುಭವವಾಗುತ್ತಿತ್ತಂತೆ.  ಅದು ಪ್ರಾರಂಭವಾದದ್ದು ಹೀಗೆ. ಅದೊಂದು ದಿನ ಊಟ ಮಾಡಿ ಹಾಸಿಗೆಯ ಮೇಲೆ ಅಡ್ದಾದರಂತೆ. ಸ್ವಲ್ಪ ಸುಸ್ತಾಗಿದ್ದರಿಂದ ಹಠಾತ್ತನೆ ನಿದ್ರೆ ಬಂದಿದೆ. ಮಧ್ಯರಾತ್ರಿಯಲ್ಲಿ ಯಾಕೋ ಎಚ್ಚರವಾಗಿದೆ. ಸುಮ್ಮನೆ ಮಗ್ಗುಲು ಬದಲಿಸಿದವರಿಗೆ ಯಾರೋ ಪಕ್ಕದಲ್ಲಿ ಮಲಗಿದಂತೆ ಭಾಸವಾಗಿದೆ. ಸುಮ್ಮನೆ ಕೈ ಯಾಡಿಸಿದರೆ ಯಾರೂ ಇಲ್ಲ. ಆದರೆ ಉಸಿರಾಟ ನಿಧಾನಕ್ಕೆ ಕ್ಷೀಣವಾಗಿ ಕೇಳಿಸುತ್ತಲೇ ಇದೆ. ಒಂದು ಕ್ಷಣ ಇದು ಕನಸೋ ಭ್ರಮೆಯೋ ಎಂಬುದು ಆಕೆಗೆ ಗೊತ್ತಾಗದ ಸ್ಥಿತಿ. ಜೊತೆಗೆ ಪಕ್ಕದಲ್ಯಾರೋ ಮಲಗಿದ ರೀತಿಯಲ್ಲಿ ಬೆಚ್ಚನೆಯ ಅನುಭವ ಬೇರೆ. ಆಕೆ ಎದ್ದು ಕುಳಿತವರು ಸುಮಾರು ಹೊತ್ತು ನಿದ್ರೆ ಮಾಡದೆ ಭಯದಲ್ಲೇ ಕುಳಿತಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಅದು ಹಾಗೆ ಸರಿದು ಹೋಗಿದೆ.
ಇದಾದ ಮಾರನೆಯ ದಿನದಿಂದ ಅದು ಪುನರಾವರ್ತನೆಯಾಗುತ್ತಾ ಹೋಗಿದೆ. ಆಕೆ ಏನು ಮಾಡಿದರೂ ಯಾವುದೇ ಯಂತ್ರ, ತಾಯತ ಹಾಕಿಸಿದರೂ ಅದು ಹೋಗೆ ಇಲ್ಲ. ಆನಂತರ ಮೈಮೇಲೆ ಆವರಿಸಿಕೊಳ್ಳುವ ತರದಲ್ಲಿ ಫೀಲ್ ಆಗತೊಡಗಿದೆ.
ಸುಮಾರು ಇದೆ ಅನುಭವ ಆದ ನಂತರ ಅದೊಂದು ದಿನ ಎಚ್ಚರವಾದ ಆಕೆಗೆ  ಮಂಚದ  ಪಕ್ಕದಲ್ಲಿ ಯಾರೋ ನಿಂತ ಅನುಭವವಾಗಿದೆ. ಕಣ್ಣು ಬಿಟ್ಟು ನೋಡಿದರೆ ಒಬ್ಬ ಎತ್ತರಕ್ಕಿರುವ ಕಪ್ಪನೆಯ ಮನುಷ್ಯ ನಿಂತಿದ್ದಾನೆ. ಸ್ವಲ್ಪ ಹೊತ್ತು ಇವರನ್ನೇ ನೋಡಿದ ಆತ ನಿಧಾನಕ್ಕೆ ಹಾಗೆ ಸರಿದು ಬಾಗಿಲ ಹತ್ತಿರ ಹೋಗಿದ್ದಾನೆ.
ಆವತ್ತೇ ಕೊನೆ. ಆಮೇಲಿಂದ ಆತ ಕಾಣಿಸಿಕೊಂಡೆ ಇಲ್ಲ.
"ಆತನ ಮುಖ ನನಗೆ ಚೆನ್ನಾಗಿ ನೆನಪಿದೆ. ಕಪ್ಪಗಿದ್ದ. ಮೀಸೆ ಬಿಟ್ಟಿದ್ದ. ದಪ್ಪ ದಪ್ಪ ಕಣ್ಣುಗಳಿದ್ದವು. ಅದಾದ ಸುಮಾರು ವರ್ಷದವರೆಗೆ ಯಾರಾದ್ರೂ ನಿಂತ ಕಡೆ ಅವನನ್ನೇ ಹುಡುಕುತ್ತಿದ್ದೆ. ಅದೇ ಮುಖ ಚಹರೆ ಹೋಲುವ ಯಾವನಾದರೂ ಇರಬಹುದಾ.. ಅಥವಾ ಬದುಕಿದ್ದನಾ? ನನಗ್ಯಾಕೆ ಕಾಣಿಸಿಕೊಂಡ ಎನ್ನುವುದು ಇನ್ನೂ ನಿಗೂಡವಾಗಿದೆ ..ಈಗಲೂ ಆತನ ಮುಖ ಚಹರೆ ಹೋಲುವ ವ್ಯಕ್ತಿ ಯನ್ನು ಹುಡುಕುತ್ತಿದ್ದೇನೆ.." ಎಂದರವರು.
ಒಟ್ಟಿನಲ್ಲಿ ಕೆಲವು ಘಟನೆಗಳು ನಮ್ಮ ನಿಲುಕಿಗೆ ಸಿಕ್ಕುವುದಿಲ್ಲ ಎಂಬುದಷ್ಟೇ ಸತ್ಯ ಎನಿಸಿತು. ಹೀಗೆ ಆಯಿತು ಎಂದಷ್ಟೇ ಹೇಳಬಹುದು.. ಅದೇನು..? ಅದ್ಯಾಕೆ ಎಂಬ ಪ್ರಶ್ನೆಗೆ ಹೇಗೆ ಉತ್ತರ ಹುಡುಕಲು ಸಾಧ್ಯ?
ಚಿತ್ರದ ಕತೆ ಸಿದ್ಧ ಮಾಡಲು ಘಟನೆ ಹುಡುಕುತ್ತಾ ಹೋದವನಿಗೆ ಸಿಕ್ಕ ಅನುಭವಗಳಲ್ಲಿ ಇದೂ ಒಂದು. ಒಂದೊಂದು ಭಯಾನಕವಾಗಿದ್ದರೆ, ಕೆಲವು ತಮಾಷೆಯಾಗಿರುವವು ಇವೆ. ಅಂದರೆ ಈ ವ್ಯಕ್ತಿಗಳು ಸುಮ್ಮನೆ ಸುಳ್ಳು ಹೇಳುತ್ತಿರುವರಾ? ಎನ್ನುವ ಅನುಮಾನವನ್ನು ಮೂಡಿಸುತ್ತವೆ ಕೆಲವು.
ಆದರೆ ಅದೊಂದು ವೀಡಿಯೊ ನೋಡಿದ ಮೇಲೆ ನನಗೆ ಯಾವುದೇ ನಿರ್ಧಾರ ತಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇರಲಿ. ಈಗ ಕತೆ ಒಂದು ಹಂತಕ್ಕೆ ಮುಗಿದಿದೆ, ಇನೇನಿದ್ದರೂ ಸಂಭಾಷಣೆ, ಚಿತ್ರಕತೆ ಇತ್ಯಾದಿ. ಮುಖ್ಯ ತಂತ್ರಜ್ಞರ ಆಯ್ಕೆಯಾಗಿದೆಯಾದರೂ ಕಲಾವಿದರ ಶೋಧ ನಡೆಯುತ್ತಿದೆ.ಇನ್ನೂ ಫೋಟೋಶೂಟ್ ಆಗಿಲ್ಲದ ಕಾರಣ ಗೆಳೆಯ ಒಂದಷ್ಟು ಇಂಟರ್ನೆಟ್ ಆಧರಿಸಿ ಅಲ್ಲಿನ ಫೋಟೋಗಳಿಂದ ಒಂದಷ್ಟು ಪೋಸ್ಟರ್ ಸಿದ್ಧ ಮಾಡಿದ್ದಾರೆ.