
ನಂಗೆ ಈ ಲಿಂಗಪರಿವರ್ತಿತರ ಸಿನಿಮಾ ಎಂದಾಗ ನನ್ನನ್ನು ಹೆಚ್ಚು ಕಾಡುವುದು ಬ್ಯೂಟಿಫುಲ್ ಬಾಕ್ಸರ್. ಚಿತ್ರದ ಶೀರ್ಷಿಕೆ ಇಷ್ಟವಾಗಿತ್ತು. ಸಿಂಗಪೂರ್ ಮೂಲದ ಚಿತ್ರವನ್ನು ಏಕಚೈ ಉಕ್ರೋಗಾತಂ ಎನ್ನುವ ಹೆಸರಿನ ನಿರ್ದೇಶಕರು ನಿರ್ದೇಶನ ಮಾಡಿದ್ದರು. ಗಂಡಾಗಿ ಹುಟ್ಟಿದ ಪರಿನ್ಯಾ ತನ್ನೊಳಗಿನ ಹೆಣ್ತನವನ್ನು ಸಾಕಾರಗೊಳಿಸಿಕೊಳ್ಳಲು ಗಂಡಸ್ತನವಿಲ್ಲದ ಗಂಡಸ್ತನವನ್ನು ಹೆಣ್ಣಾಗಿ ಮಾಡಿಕೊಳ್ಳಲು ಪಡುವ ಪಾಡಿನ ಕತೆಯದು. ಬಾಲ್ಯದಿಂದಲೇ ಹೆಣ್ತನದ ಸೆಳೆತದಿಂದಾಗಿ ಲಿಪ್ ಸ್ಟಿಕ್ ಹಾಕಿಕೊಳ್ಳುವುದು ಹೆಣ್ಣಂತೆ ಸಿಂಗರಿಸಿಕೊಳ್ಳುವುದು ಮಾಡುವ ಪರಿನ್ಯಾ ಆ ಕಾರಣದಿಂದಲೇ ಅದ್ಭುತವಾಗಿ ವಾಲಿಬಾಲ್ ಆಡುತ್ತಿದ್ದರೂ ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗುವುದಿಲ್ಲ. ಹಾಗಾಗಿ ಬಾಕ್ಸಿಂಗ್ ಗೆ ಇಳಿಯುವ ಪರಿನ್ಯಾಳ ಗುರಿ ಹಣ ಸಂಪಾದಿಸುವುದು ಮತ್ತು ಆ ಹಣದಿಂದ ಹೆಣ್ಣಾಗುವುದು. ಗುದ್ದಾಡಿ ಗುದ್ದಾಡಿ ಗಂಡಸರನ್ನು ಮಣ್ಣು ಮುಕ್ಕಿಸುವ ಪರಿನ್ಯಾ ಹಣ ಸಂಪಾದನೆ ಮಾಡಿ ಅದನ್ನು ತನ್ನ ಲಿಂಗ ಬದಲಾವಣೆಯಾ ಕನಸು ನನಸು ಮಾಡಿಕೊಳ್ಳುತ್ತಾನೆ, ಆ ಮೂಲಕ ಅವನು ಅವಳಾಗುತ್ತಾನೆ.ಚಿತ್ರದ್ದು ನೈಜಕತೆ ಎಂದು ತಿಳಿದಾಗ ಅದನ್ನು ಮತ್ತೆ ಮತ್ತೆ ನೋಡಿದ್ದೆ.
ಈ ನಿಟ್ಟಿನಲ್ಲಿ ನನಗೆ ಹಲವಾರು ಸಿನಿಮಾಗಳು ಕಾಡಿವೆ. ಹಾಗೆಯೇ ವಸುಧೇಂದ್ರ ಬರೆದ ಮೋಹನಸ್ವಾಮೀ ಕಥಾ ಸಂಕಲನದಲ್ಲಿನ ಒಂದು ಕತೆ ತುಂಬಾ ಕನಲುವಂತೆ ಮಾಡಿತ್ತು. ಊರಲ್ಲಿ ಹೆಣ್ಣಿಗನಾಗಿದ್ದ ಶಂಕರಗೌಡ ಅದೊಂದು ದಿನ ಊರು ಬಿಟ್ಟು ಮರೆಯಾಗುತ್ತಾನೆ. ಆದರೆ ಒಂದಷ್ಟು ದಿನದ ನಂತರ ವಾಪಸ್ಸು ಊರಿಗೆ ಬರುವ ಶಂಕರ ಹೆಣ್ಣಾಗಿರುತ್ತಾನೆ. ಊರ ಜನ ಅವನನ್ನು ಅಚ್ಚರಿಯಿಂದ ನೋಡುವಂತೆ ಮಾಡಿಬಿಡುತ್ತಾನೆ. ತನ್ನದೇ ಮನೆಗೆ ಹೋಗಿ ನಾನೀಗ ಹೆಣ್ಣು ಎಂದು ಘೋಷಣೆ ಮಾಡುತ್ತಾನೆ, ನನಗೆ ಆಸ್ತಿಯಲ್ಲಿ ಪಾಲು ಬೇಕು ಎನ್ನುತ್ತಾನೆ. ಊರ ಗಂಡಸರ ಸಹವಾಸ ಮಾಡುತ್ತಾನೆ. ತನಗಿಷ್ಟ ಬಂದ ಹಾಗೆ ಬದುಕುವ ಶಂಕರನನ್ನು ಅವನೇ ಮನೆಯವರೇ ಸಾಯಿಸಿ ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿಬಿಡುತ್ತಾರೆ. ಕತೆ ಓದಿ ತುಂಬಾ ದಿನ ಯೋಚಿಸಿದ್ದೆ. ಇಲ್ಲಿ ಯಾರ ತಪ್ಪು, ಯಾರು ಸರಿ ಎಂಬುದಕ್ಕಿಂತ ಹೀಗೆ ನಡೆಯಿತಲ್ಲಾ ಎನ್ನುವ ವಿಷಾದ ನನ್ನನ್ನು ಬಹುದಿನಗಳವರೆಗೆ ಕಾಡಿತ್ತು.