
ನಾನು ಪ್ರತಿ ಸಿನೆಮಾವನ್ನು ಗುಣಮಟ್ಟ ಮತ್ತು ವ್ಯಾಪಾರಿ ಮಾನದಂಡಗಳನ್ನಿಟ್ಟುಕೊಂಡು ಸಿನಿಮಾ ನೋಡುತ್ತಿದ್ದೆ. ಸಿನಿಮಾ ನೋಡುತ್ತಾ ನೋಡುತ್ತಾ ಅದರ ಆಗುಹೋಗುಗಳನ್ನೂ ಇಷ್ಟದ ಇಷ್ಟವಾಗದ ಅಂಶಗಳನ್ನು ಸುಮ್ಮನೆ ಮನಸ್ಸಿನಲ್ಲಿಯೇ ಪಟ್ಟಿಮಾಡಿಕೊಳ್ಳುತ್ತಿದ್ದೆ. ಒಬ್ಬ ನಿರ್ದೇಶಕನ ಕನಸನ್ನು ಹೀಗಿರಬೇಕು, ಹಾಗಿರಬೇಕಿತ್ತು ಎನ್ನಲು ನಾವ್ಯಾರು..? ಒಂದು ಸಿನೆಮವಾಗಿ ಅದು ನಮಗೆ ಯಾವ ರೀತಿಯ ಪರಿಣಾಮ ಬೀರಿತು ಎನ್ನುವುದಷ್ಟೇ ಮುಖ್ಯ ಅಲ್ಲವೇ? ಒಬ್ಬ ವಿಮರ್ಶಕನ ವಿಮರ್ಶೆ ಓದುವವರ್ಯಾರು..? ಯಾರಿಗಾಗಿ ಬರೆಯುತ್ತಿದ್ದೇವೆ..? ಎನ್ನುವುದೂ ಮುಖ್ಯವಾಗುತ್ತದೆ. ನಾನು ಸಿನಿಮಾ ನೋಡಿದ ನಂತರ ಒಂದು ಅದರ ಭವಿಷ್ಯದ ಬಗೆಗೆ ಒಂದು ಅಂದಾಜು ಮಾಡಿಕೊಂಡು ನನ್ನ ಡೈರಿಯಲ್ಲಿ ಬರೆದಿಡುತ್ತಿದ್ದೆ. ಮತ್ತು ಅದನ್ನು ಮೂರ್ನಾಲ್ಕು ವಾರಗಳವರೆಗೆ ಗಮನಿಸುತ್ತಿದ್ದೆ. ಖುಷಿಯ ಸಂಗತಿ ಎಂದರೆ ನನ್ನ ಅಂದಾಜಿನ ನಿಖರತೆ ನೂರಕ್ಕೆ ತೊಂಭತ್ತೊಂಭತ್ತು ...ಅಂದರೆ ಈ ಸಿನಿಮಾ ಹೀಗಿದೆ, ನಾನು ಗ್ರಹಿಸಿದ್ದು ಸರಿಯಾಗಿದೆ, ನಾನು ಚಿತ್ರಕರ್ಮಿಗಾಗಲಿ, ನನ್ನ ವಿಮರ್ಶೆ ಓದುವ ಓದುಗನಿಗಾಗಲಿ ಮೋಸ ಮಾಡಿಲ್ಲ ಎನ್ನುವ ತೃಪ್ತಿ ನನಗಿರುತ್ತಿತ್ತು.
ಯಾಕೆಂದರೆ ಯಾರೋ ಒಂದು ಅದ್ಭುತವಾದ ಸಿನಿಮಾ ಎಂದು ಬರೆದಿರುತ್ತಾರೆ, ಅದನ್ನು ನಂಬಿಕೊಂಡು ಚಿತ್ರರಸಿಕ ಚಿತ್ರಮಂದಿರಕ್ಕೆ ದೌಡಾಯಿಸಿದರೆ ಬರುವಾಗ ಸಿನೆಮಾವನ್ನೂ,ಬರೆದು ಹಾದಿ ತಪ್ಪಿಸಿದವನನ್ನೂ ಬೈಯ್ಯದೆ ಇರುತ್ತಾನೆಯೇ..? ಅಥವಾ ಒಂದು ಸಿನಿಮಾ ವೈಯಕ್ತಿಕವಾಗಿ ಇಷ್ಟವಾಗದೆ ಇದ್ದಾಗ ಅದನ್ನು ಸಾರ್ವತ್ರಿಕವಾಗಿ ಬರೆದು, ನೋಡಬೇಕೆಂದುಕೊಂಡವ ಚೆನ್ನಾಗಿಲ್ಲವೆಂದು ಹಿಂದೆ ಸರಿದು ಟಿವಿಯಲ್ಲೋ ಇನ್ನೆಲ್ಲೋ ನೋಡಿ, ಅಯ್ಯೋ ಚೆನ್ನಾಗಿತ್ತಲ್ಲ, ನಾನ್ಯಾಕೆ ನೋಡಲಿಲ್ಲ ಎಂದುಕೊಂಡರೆ ಅದೂ ಸರಿಯಲ್ಲ. ಹಾಗಾಗಿ ಈ ತೂಗುಕತ್ತಿಯಡಿಯಲಿ ಕೆಲಸ ಮಾಡುವ ಅನುಭವವೇ ಬೇರೆ.
ಕರೆಮಾಡಿ ಬೈದವರಿದ್ದಾರೆ, ಬೇಡಿಕೊಂಡವರಿದ್ದಾರೆ, ಖ್ಯಾತ ನಿರ್ದೇಶಕರೊಬ್ಬರು ಕರೆ ಮಾಡಿ, ಹೀಗೆಲ್ಲಾ ಬರೆದರೆ ಅಷ್ಟೇ, ನಿನ್ನನ್ನು ಪ್ರೆಸ್ ಮೀಟ್ ಕರೆದು ಮಾನ ಕಳೆಯುತ್ತೇನೆ ಎಂದು ಧಮಕಿ ಹಾಕಿದ ಉದಾಹರಣೆಯಿದೆ..ಬೇಕಿದ್ರೆ ನೋಡಿಕೊಳ್ಳುವ ಒಂದಷ್ಟು ಬಿಲ್ಡ್ ಅಪ್ ಕೊಟ್ಟು ಬರೆಯಿರಿ ಅಂದಿದ್ದಾರೆ,.. ಹೀಗೆ. ನಾನು ಒಟ್ಟೊಟ್ಟಿಗೆ ಎರಡು ಎರಡು ಮಾಧ್ಯಮಗಳಿಗೆ ವಿಮರ್ಶೆ ಬರೆದಿದ್ದೇನೆ. ಹೆಸರು ಹಾಕಿಕೊಳ್ಳದೆ ಬರೆದಿದ್ದೇನೆ..ಇಲ್ಲಿ ಬರಹವಷ್ಟೇ ಮುಖ್ಯ ಎನ್ನುವಂತೆ ಬೀಗಿದ್ದೇನೆ. ನೀನೊಂದು ಸಿನಿಮಾ ಮಾಡು ಆವಾಗ ಗೊತ್ತಾಗುತ್ತೆ ಎಂದು ಗದರಿದ ಸಿನಿಕರ್ಮಿಗೆ ಅದನ್ನು ಮೊದಲು ಮಾಡಿದ್ದೇನೆ ಸರ್ ಎಂದು ಅಳಲುತೋಡಿಕೊಂಡಿದ್ದೇನೆ. ನಿನಗೇನೂ ಶುಕ್ರವಾರ ಆಯಿತು ಎಂದರೆ ಸಾಕು, ಸಿನಿಮಾ ನೋಡಿ, ಅವರ ಮಾನ ಕಳೆಯಲು ನಿಂತುಬಿಡುತ್ತೀಯ ಎಂದು ಗದರಿದ್ದಾರೆ, ಗಾಂಧಿನಗರದಲ್ಲಿ ನೀನು ಸಿಕ್ಕರೆ ಗ್ಯಾರಂಟಿ ಎಂದು ಸ್ನೇಹಿತರು ನಕ್ಕಿದ್ದಾರೆ.. ಇದೆಲ್ಲದಕ್ಕೂ ಒಂದು ಅಲ್ಪವಿರಾಮ ಇಡುವ ಸಮಯ ಬಂದಿದೆ. ಏಕೆಂದರೆ ನಾನೇ ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ. ಅದರ ಕೆಲಸದ ನಡುವೆ ಬರೆಯುವುದು ಕಷ್ಟ ಎಂದಲ್ಲ. ಆದರೆ ಬರೆಯಲು ಮನಸ್ಥಿತಿ ಬೇಕಲ್ಲ..
ಇನ್ನೇನಿದ್ದರೂ ಸಧ್ಯಕ್ಕೆ ವಿಮರ್ಶೆ ಯ ಕಡೆಗೆ ತಲೆ ಹಾಕುವುದಿಲ್ಲ. ಬಹುಶಃ ಕೋಟಿಗೊಬ್ಬ-2 ನನ್ನ ವೃತ್ತಿಪರ ವಿಮರ್ಶೆಯ ಕೊನೆಯ ಚಿತ್ರವಾಗಬಹುದೇನೋ? ಆನಂತರವೇನಿದ್ದರೂ ನನ್ನ ಸಿನಿಮಾ ಇರುತ್ತದೆ, ಬೈಯ್ಯುವವರ, ಹೊಗಳುವವರ ಮಾತುಗಳಿಗೆ ಕಿವಿ ತೆರೆದು ಕುಳಿತು ಪುಳಕ ಅನುಭವಿಸುವ ಖುಷಿಯಷ್ಟೇ ನನ್ನದಾಗಲಿದೆ...