Saturday, May 12, 2012

ಅಚ್ಚರಿಯ ಬದುಕಿದು ಬದುಕಿಬಿಡು ಒಮ್ಮೆ...ಕೊನೆಯ ಭಾಗರಿ ಎಂದು ಬೆಳಗೆದ್ದ ತಕ್ಷಣ ಸೊಸೆ ಕಾವ್ಯಳ ಜೊತೆ ವಾಕಿಂಗ್ ಪಾರ್ಕಿಗೆ ಹೊರಟುಬಿಡುತ್ತಿದ್ದಳು. ಅಲ್ಲಿ ಸುಮ್ಮನೆ ನಾಲ್ಕಾರು ಸುತ್ತು ಸುತ್ತುಹಾಕುವುದು ಆನಂತರ ಸೀದಾ ಮನೆಗೆ ಬರುವುದು.. ಎರಡು ದಿನ ಕಳೆಯುವಷ್ಟರಲ್ಲಿ ತಮ್ಮ ಜೀವನವೇ ಒಂದು ರೆಕಾರ್ಡೆಡ್ ಪ್ರೋಗ್ರಾಮ್ಮಿನಂತೆ ಅನಿಸಿತು ಸುಶೀಲಮ್ಮನಿಗೆ. ಒಂದು ಬಟ್ಟೆ ಒಗೆಯದ, ಪಾತ್ರೆ ತೊಳೆಯದ ಸೊಸೆ ವಾಕಿಂಗ್ ಎಂದು ಕಷ್ಟಪಡುವುದು ನೋಡಿ, ಅಲ್ಲಾ ಕಣವ್ವಾ..ಬೆಳಗೆದ್ದ ತಕ್ಷಣ ಆ ಪಾರ್ಕತ್ರ ಹೋಗಿ ಸುತ್ತದಕ್ಕಿಂತ ಇಲ್ಲೇ ಪಾತ್ರಪಗಡ ತೊಳ್ಕಂಡ್ರೆ ಕೆಲ್ಸಾನೂ ಆಯ್ತದೆ..ಮೈಗೊಸಿ ಕಸ್ರತ್ತಾಗಿ ಬೆವ್ರ ಬತ್ತದೆ..ಹಂಗೆ ಕರೆಂಟುಬಿಲ್ಲಾ ವಾಟರಬಿಲ್ಲೂ ಈಸ್ಕ..ನಾವೇ ನಡ್ಕಂಡೋಗಿ ಕಟ್ಬುಟ್ಟುಬರಾಣ.. ಎಂಬೊಂದು ಸಲಹೆಕೊಟ್ಟಾಗ ಸೊಸೆ ಕಾವ್ಯ ಸುಶೀಲಮ್ಮನನ್ನು ಒಂಥರಾ ನೋಡಿದ್ದಳು. ಮಾರನೆಯ ದಿನ ಅಶೋಕ ಅಮೌ..ನೀನ್ಯಾಕ ಅವಳನ್ನು ಅಡಿಗೆ ಮಾಡಲ್ಲ ಕಸ ಗೂಡ್ಸಲ್ಲಾ ಅಂದ್ಯಂತೆ..ರಾತ್ರಿ ಬೇಜಾರು ಮಾಡ್ಕೊಂಡಿದ್ಳು..ಅವ್ಳಿಗೆ ಒಸಿ ಸೊಂಟನೋವು.. ಎಂದು ನಯವಾಗಿ ಹೇಳಿದಾಗ ಸುಶೀಲಮ್ಮ ಅಚ್ಚರಿಗೊಂಡಿದ್ದಳು. ಇದ್ಯಾಕೋ ನಮಗೆ ಅರ್ಥವಾಗವಲ್ದು.. ನೀವು ಪ್ಯಾಟೆವ್ರು ನಡೆಯ ಕಡೆ ನಡೆಯಲ್ಲ..ಮಾಡ ಕಡೆ ಮಾಡಲ್ಲ..ಆದ್ರೆ ಅದ್ಕೇ ಬೇರೇ ಬೇರೇ ಟೈಮಿಟ್ಕತ್ತಿದ್ದೀರಿ..ಊರಕಡೆ ಸೊಪ್ಪೌಸ್ತಿ ಅಂದ್ರೆ ಮೂಗು ಮುರೀತೀರಿ..ಇಲ್ಲಿ ಆಯುರ್ವೇದಾನ್ಬುಟ್ಟು ದಂಡಿ ದುಡ್ಡು ಸುರಿತೀರಿ..ನಾ ಅಂದದ್ದು ಅವ್ಳಗಲ್ಲ ಕಣಪ್ಪಾ..ನಿನ್ನೂ ಸೇರೇ ಯೋಳಿದ್ದು..ಅಲ್ಲಾ ನೀನೂ ಬೆಳಗೆದ್ದು ಕಾರ ತಕ್ಕಂಡು ಹೊಗಬುಟ್ಕಂಡು ಅಷ್ಟು ದೂರ ಹೋಬಿಟ್ಟು ಜಿಮ್ಮುಪಮ್ಮು ಅಂತೀಯಲ್ಲ..ಇಲ್ಲೇ ಮಾಡಟೈಮಿಗೆ ಮಾಡಿದ್ರ ಕೆಲ್ಸ ಆಯ್ತದಲ್ಲಾಂತ.. ಎಂದು ಉತ್ತರಿಸಿದ್ದಳು. ನಿಂಗೆ ಬೆಂಗ್ಳೂರಂದ್ರೆ ಗೊತ್ತಾಗಲ್ಲ..ಅದ್ಕೆಲ್ಲಾ ಟೈಮೆಲ್ಲಿದ್ದಮ್ಮಾ..ನಾನು ಆಫ಼ೀಸಿಗೆ ಸರ್ಯಾದ ಟೈಮಿಗೆ ಹೋಗ್ನಿಲ್ಲಾಂದ್ರೆ ಸಾವ್ರಾರು ಜನ ಸ್ಟೂಡೆಂಟುಗಳು ಕಾಯ್ತಿರ್ತಾರಾ..?ಎಂದು ಸ್ವಲ್ಪ ಅಸಹನೆಯಿಂದ ಹೇಳಿದ್ದನು ಅಶೋಕ. ಆದರೆ ಸುಶೀಲಮ್ಮ ಅಷ್ಟು ಸುಲಭವಾಗಿ ಅದನ್ನೆಲ್ಲಾ ಹೂ೦ಗುಟ್ಟುವ ಗಿರಾಕಿಯಲ್ಲ. ನೀನೇ ಯೋಚ್ನೆ ಮಾಡು ಅಶೋಕ..ಈಗ ನೀನು ಊಟದ ಟೈಮಿಗೆ ನಿದ್ರೆ ಮಾಡ್ತೀಯ. ನಿದ್ರೆ ಟೈಮಲ್ಲಿ ಕೆಲ್ಸ ಮಾಡ್ತೀಯ.. ಅದ್ಯಾರೊ ಕಾಯ್ಕಂಡಿರ್ತಾರೇಂತ ನೀನು ಕೆಲ್ಸ ಮಾಡ್ತೀಯ.. ಅವ್ರು ಇನ್ಯಾರ್ಗೋ ಕೆಲ್ಸ ಮಾಡ್ತಾರೆ..ನಿಮಗೆ ನೀವು ಬದ್ಕತಾನೆ ಇಲ್ವೇನೋ ಅನ್ಸುತ್ತೆ ಕಣಪ್ಪಾ..ಸರಿ ಬಿಡು..ಕಾವ್ಯಗೆ ಬೇಜಾರ್ ಮಾಡ್ಕಬೇಡಾಂತ ಹೇಳು.. ಎಂದು ಸುಶೀಲಮ್ಮ ನಿಟ್ಟುಸಿರುಬಿಟ್ಟಿದ್ದಳು.
ಒಂದು ವಾರದಿಂದ ಮೊಮ್ಮಗ ನಟ್ಟೂ ಒಂಥರಾ ಆಡಲು ಶುರು ಮಾಡಿದ್ದ. ಕೇಳಿದರೆ ಮನೆಯಲ್ಲಿ ಯಾರೂ ಹೇಳಲು ತಯಾರಿರಲಿಲ್ಲ. ಕಾವ್ಯ ಮಾತ್ರ ಅದೊಂದು ದಿನ ಏನೂ ಇಲ್ಲಾತ್ತೆ..ಪ್ರೊಜೆಕ್ಟ್ ಮುಗಿಸಕ್ಕೆ ಕೊಟ್ಟಿದ್ದ ಟೈಮು ಮುಗ್ದೋಯ್ತಂತೆ..ಅದ್ಕೆ ಟೆನ್ಷನಲ್ಲೌವನೆ.. ಎಂದು ತೇಲಿಸಿಬಿಟ್ಟಿದ್ದಳು.
ಆದರೆ ಬರುಬರುತ್ತಾ ನಟ್ಟೂನ ವರ್ತನೆ ವಿಚಿತ್ರವಾಗತೊಡಗಿತ್ತು. ಮಾತುಮಾತಿಗೂ ರೇಗುತ್ತಿದ್ದ. ಕೈಗೆ ಸಿಕ್ಕಿದ್ದನ್ನು ಬೀಸಾಕುತ್ತಿದ್ದ, ಎಲ್ಲಾ ನಿಮ್ಮಿಂದ ಎಲ್ಲಾ ನಿಮ್ಮಿಂದ ಎನ್ನುತ್ತಿದ್ದ. ಅದೆಷ್ಟು ಚಟುವಟಿಕೆಯಿಂದಿದ್ದವನು ನಟರಾಜ..ಇದೇನಾಗಿಹೋದ..
ಅಶೋಕ ಅದ್ಯಾರೊ ಡಾಕ್ಟರಿಗೆ ಫೋನ್ ಮಾಡಿದವನು ಅಪಾಯಿಂಟ್‌ಮೆಂಟ್ ತಗೊಂಡಿದೀನಿ..ಒಳ್ಳೇ ಫ಼ೇಮಸ್ ಸೈಕಿಯಾಟ್ರಿಸ್ಟ್..ಹೆಂಗಾರ ಮಾಡಿ ಅವನ್ನು ಒಂದ್ಸಾರಿ ಅವರತ್ರ ಬರೋಕೆ ಒಪ್ಸು.. ಎಂದು ಕಾವ್ಯಳಿಗೆ ಹೇಳಿದ್ದಕ್ಕೆ ನನ್ನ ಮಾತು ಎಲ್ಲಿ ಕೇಳ್ತಾವ್ನೆ..ನೀವೇ ಹೇಳಿ..ಇಲ್ಲಾಂದ್ರೆ ಅವ್ರನ್ನೆ ಇಲ್ಲಿ ಬರ್ಲಿಕ್ಕೇಳಿ..ಅದೇನೋ ಫ಼ೀಸು ಕೋಡೋನಂತೆ.. ಎಂದಳು. ಸುಶೀಲಮ್ಮ ಇಬ್ಬರನ್ನು ಒಮ್ಮೆ ನೋಡಿದವಳು ಅದೇನೂಂತ ಹೇಳ್ರಪ್ಪ..ನಾನು ಬೇಕಾದ್ರೆ ಅವ್ನಿಗೇಳ್ತೀನಿ..ಎಂದಾಗ ಇಬ್ಬರು ಸುಶೀಲಮ್ಮನ ಕಡೆಗೆ ತಿರುಗಿದವರು ಅದೇ ಕಣಮ್ಮಾ..ಹಿಂಗೆಲ್ಲಾ ಆಡ್ತಾವ್ನಲ್ಲಾ..ಅದ್ಕೇ ಡಾಕ್ಟ್ರತ್ರ ತೋರ್ಸವೂಂತ.. ಎಂದ ಅಶೋಕ. ಅಲ್ಲ ಕಣಪ್ಪಾ..ಮೊದ್ಲು ನಟ್ಟೂನ ಏನು ಯಾಕೇಂತ ನೀವು ಕೇಳಿ..ಅದುಬಿಟ್ಟು ಅದಕೇಳಕೂ ಬೇರೆಯವ್ರ ಕೈಲಿ ದುಡ್ಡುಕೊಟ್ಟು ಕೇಳಿಸ್ತಿದ್ದೀರಲ್ಲ..ಏನೇಳಣ ನಿಮ್ಗೆ..ಎಂದಳು. ಅದೆಲ್ಲಾ ಆಗಲ್ಲ ಕಣವ್ವಾ..ಎಂದ ಅಶೋಕ. ಸುಶೀಲಮ್ಮ ಮರುಮಾತಾಡಲಿಲ್ಲ. ಎದ್ದು ಹೊರನಡೆದಳು.. ಎಲ್ಲಿಗೆ ಹೋಗಬೇಕೆಂಬುದು ಗೊತ್ತಾಗಲಿಲ್ಲ.ಈ ಬೆಂಗಳೂರಿಗರ ಬದುಕೇ ವಿಚಿತ್ರ ಎನಿಸಿತು. ಇಲ್ಯಾರು ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳುವುದಿಲ್ಲವಲ್ಲ. ಬೇರೆಯವರ ಕೆಲಸವನ್ನು ಸಂಬಳ ತೆಗೆದುಕೊಂಡು ತಾವು ಮಾಡುತ್ತಾರೆ, ತಮ್ಮ ಕೆಲಸವನ್ನು ಸಂಬಳ ಕೊಟ್ಟು ಬೇರೆಯವರ ಕೈಲಿ ಮಾಡಿಸುತ್ತಿದ್ದಾರೆ..ಇದೊಂಥರ ವಿಚಿತ್ರ ಸೈಕಲ್ ಎನಿಸಿತು..ಹಾಗೆ ಪಾರ್ಕಿನ ಹತ್ತಿರ ನಡೆದಳು..ಪಾರ್ಕಿನಲ್ಲಿನ ಸರ್ಕಸ್ಸುಗಳನ್ನು ನೋಡುವುದೇ ಸುಶೀಲಮ್ಮನಿಗೆ ಆನಂದ. ಚಂಪಾಂಜಿಗಳಂತೆ ಚಪ್ಪಾಳೆ ತಟ್ಟಿಕೊಂಡು ಕೃತಕವಾಗಿ ನಗುವವರು, ಮನೆಯಲ್ಲಿ ಒಂದು ಕಡ್ಡಿಯನ್ನು ಅತ್ತಿತ್ತ ಸರಿಸದೇ ಅಲ್ಲಿ ಬಂದು ಕುಣಿಯುವವರು, ಪಾರ್ಕಿನವರೆಗೇ ಬೈಕಿನಲ್ಲಿ ಬಂದು ಅಲ್ಲಿ ಸುತ್ತುಗಳನ್ನು ಎಣಿಸಿಕೊಂಡು ಬೆವರು ಬರುವಂತೆ ನಡೆಯುವವರು.. ದಿನನಿತ್ಯ ಮಾಡಬಹುದಾದದ್ದಕ್ಕೆ ಟೈಮ್ ಟೇಬಲ್ ಹಾಕಿಕೊಂಡು ಮಾಡುವ ಜನರೇ ವಿಚಿತ್ರ ಎನಿಸಿತು. ಹಾಗೆ ಪಾರ್ಕಿಗೆ ಬಂದವಳಿಗೆ ನಟ್ಟು ಕಾಣಿಸಿದ. ತಲೆ ತಗ್ಗಿಸಿ ಪಾರ್ಕಿನ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ. ಸುಶೀಲಮ್ಮ ಸದ್ದು ಮಾಡದೇ ಅವನ ಹತ್ತಿರ ಹೋಗಿ ಕುಳಿತಳು. ಆದರೆ ನಟ್ಟೂವಿಗೆ ಇದಾವುದರ ಪರಿವೇ ಇರಲಿಲ್ಲ. ನಟರಾಜ.. ಅಜ್ಜಿ ದನಿ ಕೇಳಿ ತಲೆಯೆತ್ತಿ ನೋಡಿದ ನಟ್ಟೂ ಮುಖ ಸಿಂಡರಿಸಿದ. ಇಲ್ಯಾಕೆ ಬಂದೆ ಎನ್ನುವಂತೆ ನೋಡಿದ. ಆದರೆ ಅದ್ಯಾವುದನ್ನೂ ಸುಶೀಲಮ್ಮ ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಅವನ ತಲೆ ನೇವರಿಸಿದಳು. ಮೊದಮೊದಲಿಗೆ ಕೊಸರಿಕೊಂಡನಾದರೂ ಆಮೇಲೆ ಹಾಗೆ ಸುಮ್ಮನೆ ಕುಳಿತುಕೊಂಡ. ನಟರಾಜ ನೀನು ಚಿಕ್ಕವಾಗಿದ್ದಾಗ ಎಷ್ಟು ಚೆನ್ನಾಗಿ ಗೋಡೇಮೇಲೆಲ್ಲಾ ಚಿತ್ರ ಬರೀತಿದ್ಯಲ್ಲಪ್ಪಾ..ಈಗ ಬರೆಯೊಲ್ಲವೇನೋ..ಎಂದಳು. ಅವಳ ದನಿಯಲ್ಲಿದ್ದ ಆರ್ದ್ರತೆ ಅವನನ್ನು ಕರಗಿಸಿಬಿಟ್ಟಿತ್ತು. ಬರೀಲಿಕ್ಕೇ ಶನಿಗಳು ಬಿಡಬೇಕಲ್ಲ..ಯಾವಾಗಲೂ ಕೆಲ್ಸ ಕೆಲ್ಸಾಂತ ಸಾಯಿಸ್ತಾವೆ.. ಎಂದವನು ಕುಳಿತಿದ್ದ ಬೆಂಚಿಗೆ ಜೋರಾಗಿ ಗುದ್ದಿದ. ಅಲ್ಲಾಪ್ಪಾ..ಇಷ್ಟ್ ದೊಡ್ಡ ಸಿಟೀಲಿ ಮನೆಯಿದೆ..ಕಾರಿದೆ..ಇನ್ನೂ ಯಾತಿಕಪ್ಪ ಇಷ್ಟು ಕೆಲ್ಸ ಮಾಡ್ಬೇಕು.. ಅದು ನಮ್ಮಪ್ಪ ಅನ್ನವ್ನಿಗೆ ಗೊತ್ತಾಗಬೇಕಲ್ಲಜ್ಜಿ..ನಾನು ಚಿತ್ರಕಲಾಪರಿಷತ್ತಿಗೆ ಸೇರ್ಕೋತೀನಂದೆ.. ಬರೋಡಕ್ಕೆ ಹೋಗ್ತೀನಿ ಅಂದೆ.. ಇಲ್ಲಾ ಅದ್ರೆಲೆಲ್ಲಾ ಸಂಪಾದನೆಯಿಲ್ಲಾಂದ..ಹೋಗ್ಲಿ ಒಂದಷ್ಟು ದಿನ ಕೆಲ್ಸ ಮಾಡಿ ಆಮೇಲೆ ನಂಗಿಷ್ಟ ಬಂದದ್ದು ಮಾಡೋಣ ಅಂತ ಈ ಕಂಪ್ಯುಟರ್ ಚಾಕ್ರಿ ಮಾಡ್ಕಂಡಿವ್ನಿ..ಮೊದಲಿಗೆ ಎಜ್ಯುಕೇಷನ್ ಲೋನು, ಆಮೇಲೆ ಮನೇದು, ಆಮೇಲೆ ಕಾರುದು.. ಮುಗಿಯಂಗೇ ಕಾಣಿಸ್ತಿಲ್ಲ..ಜೀವನಪೂರ್ತಿ ನಾನು ಹಿಂಗೇ ಇರ್ಬೇಕನ್ನಿಸ್ಬಿಟ್ಟಿದೆ ಅಜ್ಜಿ..ಇದ್ಕೆ ಯಾಕೆ ಬದುಕಬೇಕೇಳು..ಎಂದ. ಕೊನೆಯ ಮಾತುಗಳು ಸ್ವಗತದಂತಿತ್ತು. ಅಜ್ಜಿ ನನ್ನ ಕನಸು ಬೇರೆಯಿತ್ತಜ್ಜಿ..ನಾನು ಟರ್ನರ್ ಥರಾನೊ, ಕೆ.ಕೆ.ಹೆಬ್ಬಾರ ತರಾನೋ ಕಲಾವಿದ ಆಗ್ಬೇಕು..ಸಾಧನೆ ಮಾಡಬೇಕು ಅನ್ಕೊಂಡಿದ್ದೆ..ಈಗ ಅದೇನೂ ಮಾಡ್ತಿಲ್ಲ..ಕೂಲಿ ಮಾಡ್ತಿದೀನಿ ಅಜ್ಜಿ.. ಕೂಲಿ ಮಾಡ್ತಿದೀನಿ .. ನಟ್ಟೂ ಬಿಕ್ಕಿ ಬಿಕ್ಕಿ ಅಳತೊಡಗಿದ. ಸುಶೀಲಮ್ಮ ಅವನನ್ನು ತನ್ನ ಎದೆಗೆ ಒರಗಿಸಿಕೊಂಡು ತಲೆ ನೇವರಿಸಿದಳು. ನೀನು ಮಾಡ್ತಿರೋದು ಸಾಧನೇನೆ ಅಲ್ವಾಪ್ಪಾ..ಇಂಥ ದೊಡ್ಡ ಪೇಟೇಲಿ ಇಂಥ ಪರಿ ಹಣ ಸಂಪಾದನೆ ಮಾಡೋದು ಸಾಧನೆ ಕಣಪ್ಪ..ಎಂದಳು. ಸುಮ್ಕಿರು ಅಜ್ಜಿ ಆ ದುಡ್ಡಿಗಷ್ಟು ಬೆಂಕಿ ಬೀಳ್ಲಿ..ನೆಮ್ಮದಿ ಇಲ್ಲಾಜ್ಜಿ..ನಾವೇನು ಕೆಲಸ ಮಾಡ್ತಿದ್ದೀವಿ ಗೊತ್ತಾಜ್ಜಿ..ಚಿಕ್ಕದು ಮಾಡೋದು..ಇನ್ನಾ ಚಿಕ್ಕದು ಮಾಡೋದು..ಇಕ ಈ ಮೊಬೈಲು..ಮೊದಲು ಮಾತಾಡ್ತಿದ್ವಿ..ಆಮ್ಯಾಕೆ ರೇಡಿಯೋ ಬರಂಗೆ ಮಾಡಿದ್ವಿ..ಆಮ್ಯಾಕೆ ಟಿವಿ..ಇಂಟೇರ್ನೆಟ್ಟೂ ಹಿಂಗೆ ಇರದ್ನೆ ಸೇರ್ಸದು..ಇದೆಂಥಾ ಸಾಧನೆ ದರಿದ್ರ.. ಸುಶೀಲಮ್ಮನಿಗೆ ಯಾವುದೂ ಅರ್ಥವಾಗಲಿಲ್ಲ.ಮಾತು ಹೆಂಗೇ ಮುಂದುವರೆಸಬೇಕೆಂದೂ ಗೊತ್ತಾಗಲಿಲ್ಲ. ಹಂಗಾರೆ ಇರದ್ನೇ ಒಂದಕ್ಕೆ ಯಾಕಪ್ಪ ತುಂಬುತಿದ್ದೀರಿ..ಈ ತರ ನಿದ್ರೆ ಕೆಡಿಸ್ಕಂಡು ಕೆಲಸ ಮಾಡಿ ದುಡ್ಡು ಸಂಪಾದ್ನೆ ಮಾಡ್ಕಂಡು ಡಾಕ್ಟ್ರ ಶಾಪಿಗೆ ಯಾಕೆ ಸುರದರೀ ಮಂತೆ.. ಎಂದಳು. ಹುಚ್ಚು ಕಣಮ್ಮ..ದುಡ್ಡಿನ ಹುಚ್ಚು..ನಮ್ಮಪ್ಪಂಗೆ ಹೇಳಿದೆ ಕೆಲ್ಸ ಬಿಡ್ತೀನಿ..ಕಲಾವಿದ ಆಯ್ತೀನಿ ಅಂದ್ರೆ ಸಾಫ಼್ಟವೇರ್ ಕೆಲ್ಸ ಬಿಟ್ಟು ಬೋರ್‍ಡ್ ಬರೆಯೋಕೆ ಹೋಗ್ತೀಯ ಅಂತಾನೆ..ಎಂದು ಅಪ್ಪನನ್ನು ಬೈಯಲು ಶುರು ಮಾಡಿದ ನಟ್ಟೂ. ಸುಶೀಲಮ್ಮನಿಗೆ ಯಾಕೋ ಇದಾವುದೂ ಸರಿ ಹೋಗುತ್ತಿಲ್ಲವೆನಿಸಿತು. ಅವನನ್ನು ಹಾಗೆ ಬೈಯಲು ಬಿಟ್ಟುಬಿಟ್ಟಳು. ಸುಮಾರು ಹೊತ್ತು ಹಾಲಿನ ಕುಕ್ಕರಿನಂತೆ ಕುಂಯ್‌ಗುಟ್ಟಿದ ನಟರಾಜು ಚಿಕ್ಕ ಮಗುವಿನಂತೆ ಅಜ್ಜಿ ಕಡೆ ತಿರುಗಿ ಈಗ ನಾನೇನ್ಮಾಡ್ಲಿ ಅಜ್ಜಿ ..ಎಂದ. ಒಂದ ಮಾತು ಹೇಳ್ಲಾ ಕಂದ..ನಂಗೂ ಯಾಕೋ ಈ ಊರು ಒಗ್ತಿಲ್ಲ ಕಣಪ್ಪಾ..ನಾವೇ ರೋಗ ತರಿಸ್ಕಂಡು ಅದನ ಸರಿ ಪಡಿಸ್ಕಬೇಕು ಇಲ್ಲಿ..ಎಲ್ಲಾನೂ ಅಷ್ಟೇ..ಯಾವುದು ಇಲ್ಲಿ ನಮ್ಮ ಕೈಲಿಲ್ಲಾನ್ಸತದೆ..ಅದ್ಕೆ ಹೆಂಗಿದ್ರೂ ಊರ್ನಾಗೆ ನಮ್ಮನೆ ಅದೆ..ಒಂಚೂರು ಹೊಲ ಅದೆ..ನೀನೂ ನಂಜೊತೆ ಬಂದ್ಬುಡಪ್ಪ..ಅದೇನ ಚಿತ್ರಗಿತ್ರ ಬರೀ ನಂಜೊತೆ ಇರು..ಎಂದಳು. ತಟ್ಟನೇ ತಲೆಯೆತ್ತಿ ನೋಡಿದ ನಟರಾಜ. ಇದೊಂದು ದಾರಿ ಇದೆಯೆಂಬುದು ಅವನಿಗೆ ಗೊತ್ತೇ ಇರಲಿಲ್ಲ. ಅಥವಾ ಅವನ ಗಮನಕ್ಕೇ ಬಂದಿರಲಿಲ್ಲ.ಬರೀ ಲಾಜಿಕ್ಕೂ ಕಂಪ್ಯೂಟರು ಸಾಫ಼್ಟವೇರುಗಳು, ಡೆಡ್‌ಲೈನುಗಳೂ ಬೆಂಗಳೂರಿನ ಟ್ರಾಫ಼ಿಕ್ಕಿಗಿಂತಲೂ ದಟ್ಟವಾಗಿ ಜಾಮಾಗಿ ಅವನ ಯೋಚನಮಾರ್ಗದ ಸಣ್ಣಸಣ್ಣ ಸಂದಿಗಳನ್ನೂ ದ್ವಿಚಕ್ರವಾಹನದವರು ದಾಳಿಯಿಟ್ಟು ಅದನ್ನೂ ಜಾಮುಮಾಡುವಂತೆ ಮಾಡಿಬಿಟ್ಟಿದ್ದವು. ಅವನು ಏನೂ ಮಾತಾಡಲಿಲ್ಲ.
***
ಅಲ್ಲ ಕಣಮ್ಮ ಆ ಊರಿಗೆ ಬಂದು ಅವನೇನು ಮಾಡೀನು..ಚಿತ್ರ ಬರ್ಕಂಡು ಬದುಕೋಕೆ ಆದೀತಾ.. ಅಶೋಕ ದನಿಯೇರಿಸಿ ಕೂಗಿದ. ನಮ್ಮದೇನೂ ಹೆಚ್ಚುಕಡಿಮೆ ಮುಗೀತು..ನಾವು ಅವ್ನುಗೋಸ್ಕರ ತಾನೆ ಹೇಳ್ತಿರೋದು.. ಅಸಹನೆಯಿಂದ ಅಶೋಕನ ಬಿಪಿ ಏರುತ್ತಿತ್ತು. ಸುಶೀಲಮ್ಮ ಅದೇ ಕಣಪ್ಪಾ ಮಾತು ಮಾತಿಗೂ ಅವನಿಗೋಸ್ಕರ ಅವನಿಗೋಸ್ಕರ ಅಂತೀರಿ..ಆದ್ರೆ ನಿಮ್ಮಿಷ್ಟ ಬಂದಂಗೆ ಇರು ಅಂತೀರೀ..ನಿಮ್ದೆಲ್ಲಾ ಮುಗಿದಮೇಕೆ ಅಂವ ಅವನಿಗೇನಿಷ್ಟಾನೋ ಹಂಗಿರ್ಲಿ ಬಿಡಪ್ಪಾ..ಎಂದಳು. ಒಂದ್ ಮಾತೇಳ್ಲಾ ಅಶೋಕ..ನಿಮ್ಮಪ್ಪ ಕಷ್ಟಪಟ್ಟು ಕೂಲಿ ಮಾಡಿ ನಿನ್ನನ್ನು ಓದಿಸಿ ಪಾಠ ಮಾಡೋ ಲೆಕ್ಚರ್ ಮಾಡುದ್ರು..ಆದ್ರೆ ನೀನು ನಿನ್ನ ಮಗನ್ನ ಚೆನ್ನಾಗಿ ಓದ್ಸಿ ಅದ್ಯಾಕಪ್ಪ ಕೂಲಿ ಮಾಡಕ್ಕೆ ಕಳಿಸ್ತೀದ್ದೀಯ..?ಅಂದುಬಿಟ್ಟಳು. ಅಮ್ಮನ ಕೊನೆಯ ಮಾತು ಅಶೋಕನಿಗೆ ನಾಟಿ ಬಿಟ್ಟಿತ್ತು.ಮುಂದೇನೋ ಮಾತನಾಡಲು ಬಾಯಿ ತೆರೆದವನು ಹಾಗೆ ಬಾಯಿತೆರೆದುಕೊಂಡೇ ಇದ್ದ.ಸುಶೀಲಮ್ಮನೂ ಮುಂದೇನೊ ಹೇಳುತ್ತಾನೆಂದು ಕಾಯತೊಡಗಿದಳು.ಸುಮ್ಮನೆ ತಲೆ ತಗ್ಗಿಸಿದ ಅಶೋಕ ಮತ್ತೆ ತಲೆಯೆತ್ತಿದಾಗ ಅವನ ಕಣ್ಣು ತುಂಬಿಬಂದಿತ್ತು. ಆ ಕ್ಷಣದಲ್ಲಿ ಅದಕ್ಕೆ ಕಾರಣವೇನಿರಬಹುದೆಂಬುದು ಇಬ್ಬರಿಗೂ ಸ್ಪಷ್ಟವಾಗಿ ಗೊತ್ತಿರಲಿಲ್ಲ. [ಮುಗಿಯಿತು]

ಒ೦ದು ಜಿಜ್ಞಾಸೆ...

ಒಂದಷ್ಟು ನೋಡಲೇ ಬೇಕಾದ ಸಿನೆಮಾಗಳ ಪಟ್ಟಿ ತಯಾರಿಸುವಾಗ ಯಾವ ಗುಣಾತ್ಮಕ ಅಂಶಗಳನ್ನಾಧರಿಸಿ ಅವುಗಳನ್ನ ವಿಂಗಡಿಸಬೇಕು ಎನ್ನುವ ಜಿಜ್ಞಾಸೆಗೆ ಬೀಳುವುದು ಸಹಜ. ಎಷ್ಟೋ ವಿಮರ್ಶೆಗಳಲ್ಲಿ ನಂಬರ್ ಒನ್ ಎನಿಸಿಕೊಂಡ ಹಲವಾರು ಅವಾರ್ಡ್ ತೆಗೆದುಕೊಂಡ ಚಿತ್ರಗಳು ನೋಡಲು ಕುಳಿತ ಐದೇ ನಿಮಿಷದಲ್ಲಿ ಬೇಸರ ತರಿಸಿಬಿಡಬಹುದು. ಉದಾಹರಣೆಗೆ ನಿಮಗೆ ಗುಸ್ ವ್ಯಾನ್ ಸ್ಯಾ೦ಟ್ ಎಂಬ ನಿರ್ದೇಶಕ ಗೊತ್ತಿರಬಹುದು.ಎರಡು ಬಾರಿ ಪ್ರಖ್ಯಾತ ಆಸ್ಕರ್ ಪ್ರಶಸ್ತಿಗೆ ನಾಮಾ೦ಕಿತನಾಗಿದ್ದ ಪ್ರತಿಭಾವಂತ ನಿರ್ದೇಶಕ. ವಿಲಿಯಂ ಶೇಕ್ಸ್ ಫಿಯರ ನಾಟಕ ಆಧಾರಿತ ಮೈ ಪ್ರೈವೇಟ್ ಇಡಾಹೋ ಇರಬಹುದು, ಮ್ಯಾಟ್ ದಾಮನ್ ಅಭಿನಯದ ಗುಡ್ ವಿಲ್ ಹ೦ಟಿ೦ಗ್ ಇರಬಹುದು ಅಥವಾ ಮೊನ್ನೆ ಮೊನ್ನೆ ಉತ್ತಮ ನಟ ಪ್ರಶಸ್ತಿ ಪಡೆದ ಮಿಲ್ಕ್ ಚಿತ್ರ  ಇರಬಹುದು. ಆತನ ಸಿನೆಮಾಗಳಲ್ಲಿನ ದೃಶ್ಯ ಮತ್ತು ಆತ ಚಿತ್ರೀಕರಿಸುವ ರೀತಿಯೇ ಚೆನ್ನ. ಆದರೆ ಇದೆ ನಿರ್ದೇಶಕನ ಎಲಿಫ೦ಟ್ ಎನ್ನುವ ಸಿನೆಮಾ ಒ೦ದಿದೆ.ಸುಮಾರು ಒ೦ದೂವರೆ ಗ೦ಟೆಗಳ ಈ ಚಿತ್ರದಲ್ಲಿ ಕಥೆಯಿರುವುದು ಅಥವಾ ಇರುವ ಕಥೆಗೆ ಚಿತ್ರದ ಅವಧಿ ಬೇಕಾದದ್ದು ಹತ್ತು ನಿಮಿಷಗಳಿರಬಹುದು. ಒಬ್ಬ ವ್ಯಕ್ತಿ ರಸ್ತೆಯ ಆ ಕೊನೆಯಿ೦ದ ಈ ಕೊನೆಗೆ  ಬ೦ದ ಎಂಬುದನ್ನು ದೃಶ್ಯ ಮಾಧ್ಯಮದಲ್ಲಿ ಸೂಚ್ಯ ಚಿತ್ರಿಕೆಯೊ೦ದಿಗೆ ನಿರೂಪಿಸಿಬಿಡುತ್ತೇವೆ. ಆದರೆ ಈ ಚಿತ್ರದಲ್ಲಿ ಯಾವ ಬೇರೆಯ ಉದ್ದೇಶವಿಲ್ಲದೆ  ಪಾತ್ರಧಾರಿ ಸುಮ್ಮನೆ ಆ ತುದಿಯಿ೦ದ ಈ ತುದಿಗೆ ನಡಿದುಕೊ೦ಡಿ ಬರುತ್ತಾನೆ..ಈ ಸಿನೆಮಾವು ಕೂಡ ಸಾಕಷ್ಟು ಹೆಸರು ಗಳಿಸಿದೆ. ವಿಮರ್ಶಕರು ಮೆಚ್ಚಿದ್ದಾರೆ..ಆದರೆ ನೋಡಲು ಕುಳಿತರೆ ಬೋರೋಬೋರು..ಹಾಗಾದರೆ ಯಾವ ಸಿನೆಮಾ ನೋಡಲೇಬೇಕಾದ ಸಿನೆಮಾ ಎನ್ನುವುದು ನನಗೆ ಪ್ರತಿಸಾರಿಯೂ ಯಕ್ಷ ಪ್ರಶ್ನೆಯಾಗಿ ಕಾಡುತ್ತದೆ. ನನ್ನ ಪ್ರಕಾರ ಯಾವ ಸಿನೆಮಾವು ತನ್ನ ಕಥೆಯ ಆಶಯವನ್ನ, ನಿರ್ದೇಶಕನ ಆಶಯವನ್ನಾ ನೇರವಾಗಿ ನೋಡುಗನಿಗೆ ತಲುಪಿಸುತ್ತದೆಯೋ ಅದು ಒಳ್ಳೆಯ ಸಿನೆಮಾ ಅನಿಸುತ್ತದೆ. ಅಲ್ಲಿ ನಾಯಕ-ನಾಯಕಿ ಗೋಳಾಡುತ್ತಿದ್ದಾರೆ ಚಿತ್ರಮ೦ದಿರದಲ್ಲಿ ಕುಳಿತಿರುವ ನೋಡುಗರು ಗೊಣಗುತ್ತಿದ್ದರೆ, ತಮಾಷೆ ಮಾಡುತ್ತಿದ್ದರೆ ನೀವೇ ಯೋಚಿಸಿ..ಆ ಸಿನೆಮಾವನ್ನು ಯಾವ ಪಟ್ಟಿಯಲ್ಲಿ ಸೇರಿಸಬಹುದು ಎ೦ದು?
ಅ೦ದ ಹಾಗೆ ಈ ಬ್ಲಾಗಲ್ಲಿ ಇಲ್ಲೀವರೆಗೆ ಪ್ರಕಟವಾದ ನೋಡಲೇಬೇಕಾದ ಚಿತ್ರಗಳ ಪಟ್ಟಿಯಲ್ಲಿ ಯಾವ ಯಾವ ಸಿನೆಮಾ ನೋಡಿದಿರಿ. ? ಯಾವುದೂ ಇಷ್ಟವಾಗಲಿಲ್ಲ..? ಯಾವುದು ಇಷ್ಟವಾಯಿತು..ಹ೦ಚಿಕೊ೦ಡರೆ ಒ೦ದು ಚರ್ಚೆ ಮಾಡಬಹುದು..ಎನ೦ತೀರಾ..?

Monday, May 7, 2012

ನೋಡಲೇ ಬೇಕಾದ ಚಿತ್ರಗಳು-5

ಒಂದಷ್ಟು ತಿಂಗಳುಗಳು ಬರೀ ಕಲಾತ್ಮಕ, ಪ್ರಶಸ್ತಿ ವಿಜೇತ ಚಿತ್ರಗಳನ್ನ ನೋಡಿ ನೋಡಿ ಒಂದು ರೀತಿಯ ಜಡವಾಗಿಬಿಟ್ಟಿತ್ತು ಮನಸ್ಸು.ಯಾವುದೋ ವಿಷಯಕ್ಕಾಗಿ ಅಥವ ಯಾವುದೋ ಅನ್ಯಾಯದ ವಿರುದ್ಧ ನೈಜರೀತಿಯಲ್ಲಿ ಹೋರಾಡುವ ಅಥವಾ ಮಕ್ಕಳ ದೃಷ್ಟಿಯಿಂದ , ವಯಸ್ಸಾದವರ ದೃಷ್ಟಿಯಿಂದ ಜಗತ್ತನ್ನು ನೋಡುವಂತಹ ಚಿತ್ರಗಳೂ, ಮಂದಗತಿಯ ನಿರೂಪಣೆಯ ಚಿತ್ರಗಳು, ಮಬ್ಬು ಮಬ್ಬಾದ ಕತ್ತಕತ್ತಲೆಯ ಚಿತ್ರಗಳು ಹೀಗೆ ಇಂತಹ ಸಿನೆಮಾಗಳನ್ನೂ ಗುಡ್ಡೆ ಹಾಕಿಕೊಂಡು ನೋಡಿದ್ದೆ. ಬೆಂಗಳೂರು ಅಂತರರಾಷ್ಟ್ರೀಯ ಫೆಸ್ಟಿವಲ್ಸ್ ನ ಚಿತ್ರಗಳು, ಚೆನ್ನೈ ಫೆಸ್ಟಿವಲ್ಸ್ ನ ಚಿತ್ರಗಳಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ, ವಿಮರ್ಶೆಗೊಳಗಾದ, ಮೆಚ್ಚುಗೆಗೊಳಗಾದ ಸಿನೆಮಾಗಳನ್ನೆಲ್ಲ ಹುಚ್ಚು ಹಿಡಿದವನಂತೆ ದಿನಕ್ಕೆರೆಡರ೦ತೆ ನೋಡಿಬಿಟ್ಟಿದ್ದೆ.  ಆದರೆ ಆಮೇಲಾಮೇಲೆ ಒಂದಷ್ಟು ರೆಗ್ಯುಲರ್ ಸಿನೆಮಾ ನೋಡಬೇಕೆನ್ನಿಸಿತ್ತು. ಹೊಡಿ ಬಡಿಯ, ಅಥವಾ ಹುಡುಗ ಹುಡುಗಿ ಏನೇನೋ ಕೆಲಸವಿಲ್ಲದೇ ಪ್ರೀತಿಸುವ೦ತಹ ಸಿನೆಮಗಳನ್ನು ಏನೊಂದು ಯೋಚಿಸದೆ ನೋಡಿಬಿಡಬೇಕೆನಿಸಿಬಿಟ್ಟಿತ್ತು. ಆಗ ಸಿಕ್ಕಿದ್ದೇ ಈ ಸಿನೆಮಾ.. 


ನಾರ್ವೆ ಸಿನೆಮಾಗಳು ಅದರಲ್ಲೂ ಅಲ್ಲಿನ ಥ್ರಿಲ್ಲರ್ ಗಳೂ ಯಾವತ್ತಿಗೂ ರೋಮಾಂಚಕ. ವೆಯಂ ವರ್ಗ ಸರಣಿಯ ಚಿತ್ರಗಳೇ ಇದಕ್ಕೆ ಸಾಕ್ಷಿ. ಹಾಗೆ  2011 ರಲ್ಲಿ ತೆರೆಗೆ ಬಂದ  ಹೆಡ್ ಹ೦ಟರ್  ಅತ್ಯುತ್ತಮ ಸಸ್ಪೆನ್ಸ್ ಥ್ರಿಲ್ಲರ್.ಒಂದೂವರೆ ಗಂಟೆಗಳಷ್ಟು ಉದ್ದವಿರುವ ಈ ಸಿನಿಮಾ ಒಂದು ನಿಮಿಷವನ್ನೂ ಬೋರಹೊಡಿಸುವುದಿಲ್ಲ. ಹಾಗೆ ನಮ್ಮ ಕಣ್ಣನ್ನು ಆ ಕಡೆ ಈ ಕಡೆ ನೋಡಲು ಬಿಡುವುದಿಲ್ಲ. ಅಂತಹ ವಾಟರ್ ಟೈಟ್  ಚಿತ್ರಕಥೆ ಈ ಸಿನೆಮಾದ್ದು..ಸಿನೆಮಾದಲ್ಲಿ ಕ್ರೌರ್ಯವನ್ನು ಮತ್ತು ಆ ಟೆನ್ಶನ್ ಅನ್ನು ಹರಿಯಗೊಟ್ಟಿರುವ ರೀತಿ ನಿಜಕ್ಕೂ ಸೂಪರ್. ಅದರಲ್ಲು ಒಂದು ದೃಶ್ಯವಿದೆ. ಖಳನಾಯಕ ಹೀರೋ ಮತ್ತು ಪೊಲೀಸರಿದ್ದ ಜೀಪನ್ನು ದೊಡ್ಡ ಟ್ರಕ್ ನಿಂದ ಗುದ್ದಿಸಿ ಪ್ರಪಾತಕ್ಕೆ ತಳ್ಳುತ್ತಾನೆ. ಇಡೀ ಪೊಲೀಸ ವಾಹನ ತಲೆಕೆಳಗಾಗಿ ಬೀಳುತ್ತದೆ. ನಾಯಕನನ್ನು ಒರೆತು ಪಡಿಸಿ ಜೀಪಲ್ಲಿದ್ದವರೆಲ್ಲಾ ಸತ್ತುಹೋಗಿರುತ್ತಾರೆ.ನಾಯಕ ಕೈಯಲಿದ್ದ ಸಂಕೊಲೆಯನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾನೆ, ತಲೆಕೆಳಗಾಗಿಯೇ.ಆಗ ಖಳನಾಯಕ ಎಲ್ಲರೂ ಸತ್ತಿದ್ದಾರೆಯೇ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ಅಥವಾ ಯಾರಾದರೂ ಜೀವ೦ತವಾಗಿದ್ದಾರೆಯೇ ಎಂದು ಪರೀಕ್ಷಿಸಲು ಬಂದಾಗ ನಾಯಕ  ಸತ್ತಿರುವವನಂತೆ ಕಣ್ಗಳನ್ನು ಎವೆಯಿಕ್ಕದೆ ಖಳನತ್ತಲೇ ನೋಡುತ್ತಾ ನಿಶ್ಚಲನಾಗುವ ದೃಶ್ಯವೊದೇ ಸಾಕು ನಿರ್ದೇಶಕನ ಪ್ರತಿಭೆಯನ್ನು ತೋರಿಸಲು.ಸಿನೆಮಾದ ಡಿವಿಡಿ ಹಾಕಿ ನಿಮ್ಮ ಟಿವಿಯ ಮುಂದೆ ಕುಲಿತುಕೊಳ್ಳಿ. ಸಿನೆಮಾ ಮುಗಿಯುವವರೆಗೆ ಬೇರಾರು ನಿಮ್ಮನ್ನು ಅಲ್ಲಿಂದ ಎಬ್ಬಿಸಲಾರರು..

ಸುಮ್ನೆ..ತಮಾಷೆಗೆ-1

 ಒಬ್ಬ ಉತ್ಸಾಹಿ, ಮಡಿವಂತ ಪತ್ರಕರ್ತನೊಬ್ಬ ಅರೇಬ ದೇಶಕ್ಕೆ ಹೋಗಿದ್ದ. ಅಲ್ಲಿ ಒಬ್ಬನನ್ನು ನಿಲ್ಲಿಸಿ 'ಈ ಊರಲ್ಲಿ ನಡೆದ ಯಾವುದಾದರೋ ಅದ್ಭುತವಾದ , ವಿಚಿತ್ರವಾದ ಘಟನೆ ಹೇಳು..?' ಎಂದ. ಅದಕ್ಕೆ ಆ ಅರಬ ಗಡ್ಡ ನೀವಿಕೊಳ್ಳುತ್ತಾ , 'ಇಲ್ಲಿ ಆ ತರಹದ್ದು ಏನೂ ನಡಿಯಲ್ಲ ಅನ್ಕೊಡಿದ್ದೀರಾ..? ಕೇಳಿ ಒಂದ್ಸಾರಿ ನಮ್ ಪಟೇಲರ ಕತ್ತೆ ಕಳೆದುಹೋಗಿತ್ತು ಸ್ವಾಮೀ..ನಾವೊಂದಷ್ಟು  ಜನ ಎಣ್ಣೆ ತು೦ಬಿಸ್ಕ೦ದು ಮರಳುಗಾಡಲ್ಲಿ ಹುಡುಕ್ತಾ ಹೊರಟ್ವೀ..ಕತ್ತೆಯೇನೋ ಸಿಕ್ತು.. ಆದ್ರೆ  .ರಾತ್ರಿಯಾಗಿತ್ತು..ಸರಿ ಇನ್ನೇನು ಮಾಡೋದು ಅಲ್ಲೇ ಮಲಗಿ ಬೆಳಿಗ್ಗೆ ಎದ್ದು ಹೋದ್ರಾಯ್ತು ಅಂತ ಅಲ್ಲಿ ಗುಂಡು ಹಾಕಿದ್ವಿ..ಗುಂಡು ಹಾಕಿದ ಮೇಲೆ ಏನೇನೋ ಬೇಕು ಅನ್ನಿಸ್ತು..ಉದ್ರೇಕ ತಡೀಲಾರದೆ ಒಬ್ಬರಾದ ಮೇಲೆ ಒಬ್ಬರಂತೆ ಕತ್ತೆನಾ ..' ಪತ್ರಕರ್ತ ಅವನನ್ನು ಅಷ್ಟಕ್ಕೇ ತಡಿದುಬಿಟ್ಟ..'ಥೂತ್ ಇದೆಂತಹ ಅಸಹ್ಯಾ..ಯಾವುದಾದರೂ ಶೃ೦ಗಾರಮಾಯವಾದ ಕೇಳೋದಿಕ್ಕೆ  ಮಜಾ ಅನ್ಸೋ ಘಟನೆ ಯಾವುದಾದರು ಇದ್ರೆ ಹೇಳು..' ಎಂದ .ಮತ್ತೆ ಆ ಅರಬ ಗಡ್ಡ ನೀವಿಕೊಳ್ಳುತ್ತಾ  'ಇಲ್ಲಿ ಆ ತರಹದ್ದು ಏನೂ ನಡಿಯಲ್ಲ ಅನ್ಕೊಡಿದ್ದೀರಾ..? ಕೇಳಿ ಒಂದ್ಸಾರಿ ನಮ್ ಪಟೇಲರ ಮಗಳು ಕಳೆದುಹೋಗಿದಳು  ಸ್ವಾಮೀ..ನಾವೊಂದಷ್ಟು  ಜನ ಎಣ್ಣೆ ತು೦ಬಿಸ್ಕ೦ದು ಮರಳುಗಾಡಲ್ಲಿ ಹುಡುಕ್ತಾ ಹೊರಟ್ವೀ..ಹುಡುಗಿಯೇನೋ ಸಿಕ್ತು.. ಆದ್ರೆ  .ರಾತ್ರಿಯಾಗಿತ್ತು..ಸರಿ ಇನ್ನೇನು ಮಾಡೋದು ಅಲ್ಲೇ ಮಲಗಿ ಬೆಳಿಗ್ಗೆ ಎದ್ದು ಹೋದ್ರಾಯ್ತು ಅಂತ ಅಲ್ಲಿ ಗುಂಡು ಹಾಕಿದ್ವಿ..ಗುಂಡು ಹಾಕಿದ ಮೇಲೆ ಏನೇನೋ ಬೇಕು ಅನ್ನಿಸ್ತು..ಉದ್ರೇಕ ತಡೀಲಾರದೆ ಒಬ್ಬರಾದ ಮೇಲೆ ಒಬ್ಬರಂತೆ ಆ ಹುಡುಗೀನಾ..' ಈಗ ಮತ್ತೆ ಹೌಹಾರಿದ ಪತ್ರಕರ್ತ ರೇಗಿಯೇಬಿಟ್ಟ. 'ಬಾಯಿ ಮುಚ್ಚಯ್ಯ ಸಾಕು..ದರಿದ್ರ..ಹಾಳಾಗೋಗ್ಲಿ..ಯಾವುದಾದರೂ ಕರುಣಾಜನಕವಾದ, ದುಃಖ ತರೋ ಘಟನೆಯಿದ್ರೆ ಹೇಳು..' ಎಂದ.ಆ ಮಾತು ಕೇಳಿದ ತಕ್ಷಣ ತುಂಬಾ ನೊ೦ದುಕೊ೦ಡ ಅರಬ ಅಳುತ್ತಲೇ ಹೇಳಲು ಪ್ರಾರಂಭಿಸಿದ..'ಒಂದ್ಸಾರಿ ನಾನೇ ಕಳೆದುಹೋಗಿದ್ದೆ ಮಾರಾಯಾ..'
***********************
 ಮೂರು ಹೊತ್ತು ಊಟ ಬಿಟ್ಟರೆ ಬೇರೇನೂ ಮಾಡದ ಉಂಡಾಡಿ ಗು೦ಡನಿಗೊಮ್ಮೆ ಕೆಲಸ ಮಾಡಬೇಕೆನ್ನಿಸಿ ಸರ್ಕಸ್ ಕಂಪನಿಗೆ ಹೋಗಿ ಕೆಲಸ ಕೇಳಿದ.ಅದರ ಮಾಲೀಕ ಇವನ ಆಳ್ತನ ನೋಡಿ 'ನಿನಗೆ ಕೆಲಸ ಕೊಟ್ಟರೆ ಏನು ಮಾಡಬಲ್ಲೆ ..? ಎಂದು ಕೇಳಿದ್ದಕ್ಕೆ 'ಸ್ವಾಮೀ ನನಗೆ ತಿನ್ನುವುದು ಬಿಟ್ಟರೆ ಬೇರೇನೂ ಬರುವುದಿಲ್ಲ..' ಎಂದು ವಿನಮ್ರವಾಗಿ ಉತ್ತರಿಸಿದ. 'ಸರಿ ಹಾಗಾದ್ರೆ ಒಂದ್ ಕೆಲಸ ಮಾಡು..ಸರ್ಕಸ್ಸಿನಲ್ಲಿ ನಿನ್ನದೆ ಒಂದು ಷೋ ಇರುತ್ತೆ..ಬರೀ ತಿನ್ನ ಬೇಕಷ್ಟೇ..' ಎಂದ. ಉಂಡಾಡಿ ಖುಷಿಯಿಂದ ಒಪ್ಪಿಕೊಂಡ.
ಮಾರನೆಯ ದಿನದಿಂದ ಉಂಡಾಡಿ ಗುಂಡನ ಬಕಾಸುರ ಷೋ ಭಾರೀ ಪ್ರಸಿದ್ಧವಾಯಿತು. ಒಬ್ಬ ಮನುಷ್ಯ ಇಷ್ಟನ್ನು ಒ೦ದು ಹೊತ್ತಿನಲ್ಲಿ ಹೇಗೆ ತಿನ್ನಲು ಸಾಧ್ಯ ..ಇಲ್ಲೇನೋ ಕಣ್ಕಟ್ಟಿದೆ ಎಂದು ಜನ ಮಾತಾಡಿಕೊಂಡು ಷೋ ನೋಡಲು ಬರುತ್ತಿದ್ದರು. ದಿನವೂ ಷೋ ಹೌಸ್ ಫುಲ್ ಆಗತೊಡಗಿತ್ತು. ದಿನಕ್ಕೊ೦ದೆ ಷೋ ಇದ್ದದ್ದು ಎರಡಾಯಿತು. ಜನರಿಗೆ ಆಶ್ಚರ್ಯ ! ಎರಡನೇ ಶೋನಲ್ಲೂ ಅಷ್ಟೇ ತಿ೦ತಾನಾ..? ಜನ ಪುನಃ ಪುನಃ ಬರತೊಡಗಿದರು. ಈಗ ದಿನಕ್ಕೆ ಷೋ ಮೂರಾಯಿತು. ಜನ ಇನ್ನೂ ಕಿಕ್ಕಿರಿದರು.ದಿನಕ್ಕೆ ನಾಲ್ಕಾಯಿತು. ಜನರಂತೂ ನಾಲ್ಕೂ ಶೋನಲ್ಲಿ ಒಬ್ಬನೇ ಅಷ್ಟೊಂದು ತಿನ್ನಲು ಹೇಗೆ ಸಾಧ್ಯ ಎಂದು ಯೋಚಿಸಿ ಯೋಚ್ಸಿ ನಿದ್ದೆ ಕಳೆದುಕೊಂಡರು.ಜನರ ಒತ್ತಾಯ ತಡಿಯಲಾರದೆ ಮಾಲೀಕ ದಿನಕ್ಕೆ ಐದು ಷೋ ಮಾಡಿದ. ಆಗ ಮಾಲೀಕನ ಹತ್ತಿರ ಬಂದ ಉಂಡಾಡಿ ತನ್ನ ರಾಜೀನಾಮೆ ಪತ್ರ ಕೊಟ್ಟ.
ಮಾಲೀಕ ಹೌಹಾರಿದೆ. ಈಗ ತನ್ನ ಸರ್ಕಸ್ಸು ಕಂಪನಿಯ ಬಹು ಮುಖ್ಯ ಐಟಮ್ ಅಂದ್ರೆ ಬಕಾಸುರ ಷೋ..
'ಯಾಕಪ್ಪ..ಸಂಬಳ ಕಮ್ಮಿಯಾಯ್ತಾ..ಯೋಚನೆ ಮಾಡಬೇಡ..ಈ ತಿಂಗಳಿಂದ ಡಬ್ಬಲ್ ಅಲ್ಲಾ ತ್ರಿಬ್ಬಲ್ ಮಾಡ್ತೀನಿ..ಕೆಲಸ ಮಾತ್ರ ಬಿಡಬೇಡ ' ಎಂಡು ಗೋಗೆರೆದ.
'ಸಾಧ್ಯಾನೆ ಇಲ್ಲಾ..' ನಿಖರವಾದ ದನಿಯಲ್ಲಿ ಹೇಳಿದ ಗುಂಡ
'ಸರಿ..ಯಾಕೆ ಕೆಲಸ ಬಿಡ್ತಿದ್ದೀಯ..ಅದನಾದ್ರೂ ಹೇಳು..'.
'ಅಯ್ಯೋ ಹೋಗ್ರೀ ..ಮೂರ್ ಹೊತ್ತೂ ಕೆಲ್ಸಾ..ಕೆಲ್ಸಾ..ಕೆಲ್ಸಾ..ಊಟ ತಿಂಡಿಗೆ ಟೈ ಮೇ ಇಲ್ಲಾ...'