Saturday, May 12, 2012

ಅಚ್ಚರಿಯ ಬದುಕಿದು ಬದುಕಿಬಿಡು ಒಮ್ಮೆ...ಕೊನೆಯ ಭಾಗ



ರಿ ಎಂದು ಬೆಳಗೆದ್ದ ತಕ್ಷಣ ಸೊಸೆ ಕಾವ್ಯಳ ಜೊತೆ ವಾಕಿಂಗ್ ಪಾರ್ಕಿಗೆ ಹೊರಟುಬಿಡುತ್ತಿದ್ದಳು. ಅಲ್ಲಿ ಸುಮ್ಮನೆ ನಾಲ್ಕಾರು ಸುತ್ತು ಸುತ್ತುಹಾಕುವುದು ಆನಂತರ ಸೀದಾ ಮನೆಗೆ ಬರುವುದು.. ಎರಡು ದಿನ ಕಳೆಯುವಷ್ಟರಲ್ಲಿ ತಮ್ಮ ಜೀವನವೇ ಒಂದು ರೆಕಾರ್ಡೆಡ್ ಪ್ರೋಗ್ರಾಮ್ಮಿನಂತೆ ಅನಿಸಿತು ಸುಶೀಲಮ್ಮನಿಗೆ. ಒಂದು ಬಟ್ಟೆ ಒಗೆಯದ, ಪಾತ್ರೆ ತೊಳೆಯದ ಸೊಸೆ ವಾಕಿಂಗ್ ಎಂದು ಕಷ್ಟಪಡುವುದು ನೋಡಿ, ಅಲ್ಲಾ ಕಣವ್ವಾ..ಬೆಳಗೆದ್ದ ತಕ್ಷಣ ಆ ಪಾರ್ಕತ್ರ ಹೋಗಿ ಸುತ್ತದಕ್ಕಿಂತ ಇಲ್ಲೇ ಪಾತ್ರಪಗಡ ತೊಳ್ಕಂಡ್ರೆ ಕೆಲ್ಸಾನೂ ಆಯ್ತದೆ..ಮೈಗೊಸಿ ಕಸ್ರತ್ತಾಗಿ ಬೆವ್ರ ಬತ್ತದೆ..ಹಂಗೆ ಕರೆಂಟುಬಿಲ್ಲಾ ವಾಟರಬಿಲ್ಲೂ ಈಸ್ಕ..ನಾವೇ ನಡ್ಕಂಡೋಗಿ ಕಟ್ಬುಟ್ಟುಬರಾಣ.. ಎಂಬೊಂದು ಸಲಹೆಕೊಟ್ಟಾಗ ಸೊಸೆ ಕಾವ್ಯ ಸುಶೀಲಮ್ಮನನ್ನು ಒಂಥರಾ ನೋಡಿದ್ದಳು. ಮಾರನೆಯ ದಿನ ಅಶೋಕ ಅಮೌ..ನೀನ್ಯಾಕ ಅವಳನ್ನು ಅಡಿಗೆ ಮಾಡಲ್ಲ ಕಸ ಗೂಡ್ಸಲ್ಲಾ ಅಂದ್ಯಂತೆ..ರಾತ್ರಿ ಬೇಜಾರು ಮಾಡ್ಕೊಂಡಿದ್ಳು..ಅವ್ಳಿಗೆ ಒಸಿ ಸೊಂಟನೋವು.. ಎಂದು ನಯವಾಗಿ ಹೇಳಿದಾಗ ಸುಶೀಲಮ್ಮ ಅಚ್ಚರಿಗೊಂಡಿದ್ದಳು. ಇದ್ಯಾಕೋ ನಮಗೆ ಅರ್ಥವಾಗವಲ್ದು.. ನೀವು ಪ್ಯಾಟೆವ್ರು ನಡೆಯ ಕಡೆ ನಡೆಯಲ್ಲ..ಮಾಡ ಕಡೆ ಮಾಡಲ್ಲ..ಆದ್ರೆ ಅದ್ಕೇ ಬೇರೇ ಬೇರೇ ಟೈಮಿಟ್ಕತ್ತಿದ್ದೀರಿ..ಊರಕಡೆ ಸೊಪ್ಪೌಸ್ತಿ ಅಂದ್ರೆ ಮೂಗು ಮುರೀತೀರಿ..ಇಲ್ಲಿ ಆಯುರ್ವೇದಾನ್ಬುಟ್ಟು ದಂಡಿ ದುಡ್ಡು ಸುರಿತೀರಿ..ನಾ ಅಂದದ್ದು ಅವ್ಳಗಲ್ಲ ಕಣಪ್ಪಾ..ನಿನ್ನೂ ಸೇರೇ ಯೋಳಿದ್ದು..ಅಲ್ಲಾ ನೀನೂ ಬೆಳಗೆದ್ದು ಕಾರ ತಕ್ಕಂಡು ಹೊಗಬುಟ್ಕಂಡು ಅಷ್ಟು ದೂರ ಹೋಬಿಟ್ಟು ಜಿಮ್ಮುಪಮ್ಮು ಅಂತೀಯಲ್ಲ..ಇಲ್ಲೇ ಮಾಡಟೈಮಿಗೆ ಮಾಡಿದ್ರ ಕೆಲ್ಸ ಆಯ್ತದಲ್ಲಾಂತ.. ಎಂದು ಉತ್ತರಿಸಿದ್ದಳು. ನಿಂಗೆ ಬೆಂಗ್ಳೂರಂದ್ರೆ ಗೊತ್ತಾಗಲ್ಲ..ಅದ್ಕೆಲ್ಲಾ ಟೈಮೆಲ್ಲಿದ್ದಮ್ಮಾ..ನಾನು ಆಫ಼ೀಸಿಗೆ ಸರ್ಯಾದ ಟೈಮಿಗೆ ಹೋಗ್ನಿಲ್ಲಾಂದ್ರೆ ಸಾವ್ರಾರು ಜನ ಸ್ಟೂಡೆಂಟುಗಳು ಕಾಯ್ತಿರ್ತಾರಾ..?ಎಂದು ಸ್ವಲ್ಪ ಅಸಹನೆಯಿಂದ ಹೇಳಿದ್ದನು ಅಶೋಕ. ಆದರೆ ಸುಶೀಲಮ್ಮ ಅಷ್ಟು ಸುಲಭವಾಗಿ ಅದನ್ನೆಲ್ಲಾ ಹೂ೦ಗುಟ್ಟುವ ಗಿರಾಕಿಯಲ್ಲ. ನೀನೇ ಯೋಚ್ನೆ ಮಾಡು ಅಶೋಕ..ಈಗ ನೀನು ಊಟದ ಟೈಮಿಗೆ ನಿದ್ರೆ ಮಾಡ್ತೀಯ. ನಿದ್ರೆ ಟೈಮಲ್ಲಿ ಕೆಲ್ಸ ಮಾಡ್ತೀಯ.. ಅದ್ಯಾರೊ ಕಾಯ್ಕಂಡಿರ್ತಾರೇಂತ ನೀನು ಕೆಲ್ಸ ಮಾಡ್ತೀಯ.. ಅವ್ರು ಇನ್ಯಾರ್ಗೋ ಕೆಲ್ಸ ಮಾಡ್ತಾರೆ..ನಿಮಗೆ ನೀವು ಬದ್ಕತಾನೆ ಇಲ್ವೇನೋ ಅನ್ಸುತ್ತೆ ಕಣಪ್ಪಾ..ಸರಿ ಬಿಡು..ಕಾವ್ಯಗೆ ಬೇಜಾರ್ ಮಾಡ್ಕಬೇಡಾಂತ ಹೇಳು.. ಎಂದು ಸುಶೀಲಮ್ಮ ನಿಟ್ಟುಸಿರುಬಿಟ್ಟಿದ್ದಳು.
ಒಂದು ವಾರದಿಂದ ಮೊಮ್ಮಗ ನಟ್ಟೂ ಒಂಥರಾ ಆಡಲು ಶುರು ಮಾಡಿದ್ದ. ಕೇಳಿದರೆ ಮನೆಯಲ್ಲಿ ಯಾರೂ ಹೇಳಲು ತಯಾರಿರಲಿಲ್ಲ. ಕಾವ್ಯ ಮಾತ್ರ ಅದೊಂದು ದಿನ ಏನೂ ಇಲ್ಲಾತ್ತೆ..ಪ್ರೊಜೆಕ್ಟ್ ಮುಗಿಸಕ್ಕೆ ಕೊಟ್ಟಿದ್ದ ಟೈಮು ಮುಗ್ದೋಯ್ತಂತೆ..ಅದ್ಕೆ ಟೆನ್ಷನಲ್ಲೌವನೆ.. ಎಂದು ತೇಲಿಸಿಬಿಟ್ಟಿದ್ದಳು.
ಆದರೆ ಬರುಬರುತ್ತಾ ನಟ್ಟೂನ ವರ್ತನೆ ವಿಚಿತ್ರವಾಗತೊಡಗಿತ್ತು. ಮಾತುಮಾತಿಗೂ ರೇಗುತ್ತಿದ್ದ. ಕೈಗೆ ಸಿಕ್ಕಿದ್ದನ್ನು ಬೀಸಾಕುತ್ತಿದ್ದ, ಎಲ್ಲಾ ನಿಮ್ಮಿಂದ ಎಲ್ಲಾ ನಿಮ್ಮಿಂದ ಎನ್ನುತ್ತಿದ್ದ. ಅದೆಷ್ಟು ಚಟುವಟಿಕೆಯಿಂದಿದ್ದವನು ನಟರಾಜ..ಇದೇನಾಗಿಹೋದ..
ಅಶೋಕ ಅದ್ಯಾರೊ ಡಾಕ್ಟರಿಗೆ ಫೋನ್ ಮಾಡಿದವನು ಅಪಾಯಿಂಟ್‌ಮೆಂಟ್ ತಗೊಂಡಿದೀನಿ..ಒಳ್ಳೇ ಫ಼ೇಮಸ್ ಸೈಕಿಯಾಟ್ರಿಸ್ಟ್..ಹೆಂಗಾರ ಮಾಡಿ ಅವನ್ನು ಒಂದ್ಸಾರಿ ಅವರತ್ರ ಬರೋಕೆ ಒಪ್ಸು.. ಎಂದು ಕಾವ್ಯಳಿಗೆ ಹೇಳಿದ್ದಕ್ಕೆ ನನ್ನ ಮಾತು ಎಲ್ಲಿ ಕೇಳ್ತಾವ್ನೆ..ನೀವೇ ಹೇಳಿ..ಇಲ್ಲಾಂದ್ರೆ ಅವ್ರನ್ನೆ ಇಲ್ಲಿ ಬರ್ಲಿಕ್ಕೇಳಿ..ಅದೇನೋ ಫ಼ೀಸು ಕೋಡೋನಂತೆ.. ಎಂದಳು. ಸುಶೀಲಮ್ಮ ಇಬ್ಬರನ್ನು ಒಮ್ಮೆ ನೋಡಿದವಳು ಅದೇನೂಂತ ಹೇಳ್ರಪ್ಪ..ನಾನು ಬೇಕಾದ್ರೆ ಅವ್ನಿಗೇಳ್ತೀನಿ..ಎಂದಾಗ ಇಬ್ಬರು ಸುಶೀಲಮ್ಮನ ಕಡೆಗೆ ತಿರುಗಿದವರು ಅದೇ ಕಣಮ್ಮಾ..ಹಿಂಗೆಲ್ಲಾ ಆಡ್ತಾವ್ನಲ್ಲಾ..ಅದ್ಕೇ ಡಾಕ್ಟ್ರತ್ರ ತೋರ್ಸವೂಂತ.. ಎಂದ ಅಶೋಕ. ಅಲ್ಲ ಕಣಪ್ಪಾ..ಮೊದ್ಲು ನಟ್ಟೂನ ಏನು ಯಾಕೇಂತ ನೀವು ಕೇಳಿ..ಅದುಬಿಟ್ಟು ಅದಕೇಳಕೂ ಬೇರೆಯವ್ರ ಕೈಲಿ ದುಡ್ಡುಕೊಟ್ಟು ಕೇಳಿಸ್ತಿದ್ದೀರಲ್ಲ..ಏನೇಳಣ ನಿಮ್ಗೆ..ಎಂದಳು. ಅದೆಲ್ಲಾ ಆಗಲ್ಲ ಕಣವ್ವಾ..ಎಂದ ಅಶೋಕ. ಸುಶೀಲಮ್ಮ ಮರುಮಾತಾಡಲಿಲ್ಲ. ಎದ್ದು ಹೊರನಡೆದಳು.. ಎಲ್ಲಿಗೆ ಹೋಗಬೇಕೆಂಬುದು ಗೊತ್ತಾಗಲಿಲ್ಲ.ಈ ಬೆಂಗಳೂರಿಗರ ಬದುಕೇ ವಿಚಿತ್ರ ಎನಿಸಿತು. ಇಲ್ಯಾರು ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳುವುದಿಲ್ಲವಲ್ಲ. ಬೇರೆಯವರ ಕೆಲಸವನ್ನು ಸಂಬಳ ತೆಗೆದುಕೊಂಡು ತಾವು ಮಾಡುತ್ತಾರೆ, ತಮ್ಮ ಕೆಲಸವನ್ನು ಸಂಬಳ ಕೊಟ್ಟು ಬೇರೆಯವರ ಕೈಲಿ ಮಾಡಿಸುತ್ತಿದ್ದಾರೆ..ಇದೊಂಥರ ವಿಚಿತ್ರ ಸೈಕಲ್ ಎನಿಸಿತು..ಹಾಗೆ ಪಾರ್ಕಿನ ಹತ್ತಿರ ನಡೆದಳು..ಪಾರ್ಕಿನಲ್ಲಿನ ಸರ್ಕಸ್ಸುಗಳನ್ನು ನೋಡುವುದೇ ಸುಶೀಲಮ್ಮನಿಗೆ ಆನಂದ. ಚಂಪಾಂಜಿಗಳಂತೆ ಚಪ್ಪಾಳೆ ತಟ್ಟಿಕೊಂಡು ಕೃತಕವಾಗಿ ನಗುವವರು, ಮನೆಯಲ್ಲಿ ಒಂದು ಕಡ್ಡಿಯನ್ನು ಅತ್ತಿತ್ತ ಸರಿಸದೇ ಅಲ್ಲಿ ಬಂದು ಕುಣಿಯುವವರು, ಪಾರ್ಕಿನವರೆಗೇ ಬೈಕಿನಲ್ಲಿ ಬಂದು ಅಲ್ಲಿ ಸುತ್ತುಗಳನ್ನು ಎಣಿಸಿಕೊಂಡು ಬೆವರು ಬರುವಂತೆ ನಡೆಯುವವರು.. ದಿನನಿತ್ಯ ಮಾಡಬಹುದಾದದ್ದಕ್ಕೆ ಟೈಮ್ ಟೇಬಲ್ ಹಾಕಿಕೊಂಡು ಮಾಡುವ ಜನರೇ ವಿಚಿತ್ರ ಎನಿಸಿತು. ಹಾಗೆ ಪಾರ್ಕಿಗೆ ಬಂದವಳಿಗೆ ನಟ್ಟು ಕಾಣಿಸಿದ. ತಲೆ ತಗ್ಗಿಸಿ ಪಾರ್ಕಿನ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ. ಸುಶೀಲಮ್ಮ ಸದ್ದು ಮಾಡದೇ ಅವನ ಹತ್ತಿರ ಹೋಗಿ ಕುಳಿತಳು. ಆದರೆ ನಟ್ಟೂವಿಗೆ ಇದಾವುದರ ಪರಿವೇ ಇರಲಿಲ್ಲ. ನಟರಾಜ.. ಅಜ್ಜಿ ದನಿ ಕೇಳಿ ತಲೆಯೆತ್ತಿ ನೋಡಿದ ನಟ್ಟೂ ಮುಖ ಸಿಂಡರಿಸಿದ. ಇಲ್ಯಾಕೆ ಬಂದೆ ಎನ್ನುವಂತೆ ನೋಡಿದ. ಆದರೆ ಅದ್ಯಾವುದನ್ನೂ ಸುಶೀಲಮ್ಮ ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಅವನ ತಲೆ ನೇವರಿಸಿದಳು. ಮೊದಮೊದಲಿಗೆ ಕೊಸರಿಕೊಂಡನಾದರೂ ಆಮೇಲೆ ಹಾಗೆ ಸುಮ್ಮನೆ ಕುಳಿತುಕೊಂಡ. ನಟರಾಜ ನೀನು ಚಿಕ್ಕವಾಗಿದ್ದಾಗ ಎಷ್ಟು ಚೆನ್ನಾಗಿ ಗೋಡೇಮೇಲೆಲ್ಲಾ ಚಿತ್ರ ಬರೀತಿದ್ಯಲ್ಲಪ್ಪಾ..ಈಗ ಬರೆಯೊಲ್ಲವೇನೋ..ಎಂದಳು. ಅವಳ ದನಿಯಲ್ಲಿದ್ದ ಆರ್ದ್ರತೆ ಅವನನ್ನು ಕರಗಿಸಿಬಿಟ್ಟಿತ್ತು. ಬರೀಲಿಕ್ಕೇ ಶನಿಗಳು ಬಿಡಬೇಕಲ್ಲ..ಯಾವಾಗಲೂ ಕೆಲ್ಸ ಕೆಲ್ಸಾಂತ ಸಾಯಿಸ್ತಾವೆ.. ಎಂದವನು ಕುಳಿತಿದ್ದ ಬೆಂಚಿಗೆ ಜೋರಾಗಿ ಗುದ್ದಿದ. ಅಲ್ಲಾಪ್ಪಾ..ಇಷ್ಟ್ ದೊಡ್ಡ ಸಿಟೀಲಿ ಮನೆಯಿದೆ..ಕಾರಿದೆ..ಇನ್ನೂ ಯಾತಿಕಪ್ಪ ಇಷ್ಟು ಕೆಲ್ಸ ಮಾಡ್ಬೇಕು.. ಅದು ನಮ್ಮಪ್ಪ ಅನ್ನವ್ನಿಗೆ ಗೊತ್ತಾಗಬೇಕಲ್ಲಜ್ಜಿ..ನಾನು ಚಿತ್ರಕಲಾಪರಿಷತ್ತಿಗೆ ಸೇರ್ಕೋತೀನಂದೆ.. ಬರೋಡಕ್ಕೆ ಹೋಗ್ತೀನಿ ಅಂದೆ.. ಇಲ್ಲಾ ಅದ್ರೆಲೆಲ್ಲಾ ಸಂಪಾದನೆಯಿಲ್ಲಾಂದ..ಹೋಗ್ಲಿ ಒಂದಷ್ಟು ದಿನ ಕೆಲ್ಸ ಮಾಡಿ ಆಮೇಲೆ ನಂಗಿಷ್ಟ ಬಂದದ್ದು ಮಾಡೋಣ ಅಂತ ಈ ಕಂಪ್ಯುಟರ್ ಚಾಕ್ರಿ ಮಾಡ್ಕಂಡಿವ್ನಿ..ಮೊದಲಿಗೆ ಎಜ್ಯುಕೇಷನ್ ಲೋನು, ಆಮೇಲೆ ಮನೇದು, ಆಮೇಲೆ ಕಾರುದು.. ಮುಗಿಯಂಗೇ ಕಾಣಿಸ್ತಿಲ್ಲ..ಜೀವನಪೂರ್ತಿ ನಾನು ಹಿಂಗೇ ಇರ್ಬೇಕನ್ನಿಸ್ಬಿಟ್ಟಿದೆ ಅಜ್ಜಿ..ಇದ್ಕೆ ಯಾಕೆ ಬದುಕಬೇಕೇಳು..ಎಂದ. ಕೊನೆಯ ಮಾತುಗಳು ಸ್ವಗತದಂತಿತ್ತು. ಅಜ್ಜಿ ನನ್ನ ಕನಸು ಬೇರೆಯಿತ್ತಜ್ಜಿ..ನಾನು ಟರ್ನರ್ ಥರಾನೊ, ಕೆ.ಕೆ.ಹೆಬ್ಬಾರ ತರಾನೋ ಕಲಾವಿದ ಆಗ್ಬೇಕು..ಸಾಧನೆ ಮಾಡಬೇಕು ಅನ್ಕೊಂಡಿದ್ದೆ..ಈಗ ಅದೇನೂ ಮಾಡ್ತಿಲ್ಲ..ಕೂಲಿ ಮಾಡ್ತಿದೀನಿ ಅಜ್ಜಿ.. ಕೂಲಿ ಮಾಡ್ತಿದೀನಿ .. ನಟ್ಟೂ ಬಿಕ್ಕಿ ಬಿಕ್ಕಿ ಅಳತೊಡಗಿದ. ಸುಶೀಲಮ್ಮ ಅವನನ್ನು ತನ್ನ ಎದೆಗೆ ಒರಗಿಸಿಕೊಂಡು ತಲೆ ನೇವರಿಸಿದಳು. ನೀನು ಮಾಡ್ತಿರೋದು ಸಾಧನೇನೆ ಅಲ್ವಾಪ್ಪಾ..ಇಂಥ ದೊಡ್ಡ ಪೇಟೇಲಿ ಇಂಥ ಪರಿ ಹಣ ಸಂಪಾದನೆ ಮಾಡೋದು ಸಾಧನೆ ಕಣಪ್ಪ..ಎಂದಳು. ಸುಮ್ಕಿರು ಅಜ್ಜಿ ಆ ದುಡ್ಡಿಗಷ್ಟು ಬೆಂಕಿ ಬೀಳ್ಲಿ..ನೆಮ್ಮದಿ ಇಲ್ಲಾಜ್ಜಿ..ನಾವೇನು ಕೆಲಸ ಮಾಡ್ತಿದ್ದೀವಿ ಗೊತ್ತಾಜ್ಜಿ..ಚಿಕ್ಕದು ಮಾಡೋದು..ಇನ್ನಾ ಚಿಕ್ಕದು ಮಾಡೋದು..ಇಕ ಈ ಮೊಬೈಲು..ಮೊದಲು ಮಾತಾಡ್ತಿದ್ವಿ..ಆಮ್ಯಾಕೆ ರೇಡಿಯೋ ಬರಂಗೆ ಮಾಡಿದ್ವಿ..ಆಮ್ಯಾಕೆ ಟಿವಿ..ಇಂಟೇರ್ನೆಟ್ಟೂ ಹಿಂಗೆ ಇರದ್ನೆ ಸೇರ್ಸದು..ಇದೆಂಥಾ ಸಾಧನೆ ದರಿದ್ರ.. ಸುಶೀಲಮ್ಮನಿಗೆ ಯಾವುದೂ ಅರ್ಥವಾಗಲಿಲ್ಲ.ಮಾತು ಹೆಂಗೇ ಮುಂದುವರೆಸಬೇಕೆಂದೂ ಗೊತ್ತಾಗಲಿಲ್ಲ. ಹಂಗಾರೆ ಇರದ್ನೇ ಒಂದಕ್ಕೆ ಯಾಕಪ್ಪ ತುಂಬುತಿದ್ದೀರಿ..ಈ ತರ ನಿದ್ರೆ ಕೆಡಿಸ್ಕಂಡು ಕೆಲಸ ಮಾಡಿ ದುಡ್ಡು ಸಂಪಾದ್ನೆ ಮಾಡ್ಕಂಡು ಡಾಕ್ಟ್ರ ಶಾಪಿಗೆ ಯಾಕೆ ಸುರದರೀ ಮಂತೆ.. ಎಂದಳು. ಹುಚ್ಚು ಕಣಮ್ಮ..ದುಡ್ಡಿನ ಹುಚ್ಚು..ನಮ್ಮಪ್ಪಂಗೆ ಹೇಳಿದೆ ಕೆಲ್ಸ ಬಿಡ್ತೀನಿ..ಕಲಾವಿದ ಆಯ್ತೀನಿ ಅಂದ್ರೆ ಸಾಫ಼್ಟವೇರ್ ಕೆಲ್ಸ ಬಿಟ್ಟು ಬೋರ್‍ಡ್ ಬರೆಯೋಕೆ ಹೋಗ್ತೀಯ ಅಂತಾನೆ..ಎಂದು ಅಪ್ಪನನ್ನು ಬೈಯಲು ಶುರು ಮಾಡಿದ ನಟ್ಟೂ. ಸುಶೀಲಮ್ಮನಿಗೆ ಯಾಕೋ ಇದಾವುದೂ ಸರಿ ಹೋಗುತ್ತಿಲ್ಲವೆನಿಸಿತು. ಅವನನ್ನು ಹಾಗೆ ಬೈಯಲು ಬಿಟ್ಟುಬಿಟ್ಟಳು. ಸುಮಾರು ಹೊತ್ತು ಹಾಲಿನ ಕುಕ್ಕರಿನಂತೆ ಕುಂಯ್‌ಗುಟ್ಟಿದ ನಟರಾಜು ಚಿಕ್ಕ ಮಗುವಿನಂತೆ ಅಜ್ಜಿ ಕಡೆ ತಿರುಗಿ ಈಗ ನಾನೇನ್ಮಾಡ್ಲಿ ಅಜ್ಜಿ ..ಎಂದ. ಒಂದ ಮಾತು ಹೇಳ್ಲಾ ಕಂದ..ನಂಗೂ ಯಾಕೋ ಈ ಊರು ಒಗ್ತಿಲ್ಲ ಕಣಪ್ಪಾ..ನಾವೇ ರೋಗ ತರಿಸ್ಕಂಡು ಅದನ ಸರಿ ಪಡಿಸ್ಕಬೇಕು ಇಲ್ಲಿ..ಎಲ್ಲಾನೂ ಅಷ್ಟೇ..ಯಾವುದು ಇಲ್ಲಿ ನಮ್ಮ ಕೈಲಿಲ್ಲಾನ್ಸತದೆ..ಅದ್ಕೆ ಹೆಂಗಿದ್ರೂ ಊರ್ನಾಗೆ ನಮ್ಮನೆ ಅದೆ..ಒಂಚೂರು ಹೊಲ ಅದೆ..ನೀನೂ ನಂಜೊತೆ ಬಂದ್ಬುಡಪ್ಪ..ಅದೇನ ಚಿತ್ರಗಿತ್ರ ಬರೀ ನಂಜೊತೆ ಇರು..ಎಂದಳು. ತಟ್ಟನೇ ತಲೆಯೆತ್ತಿ ನೋಡಿದ ನಟರಾಜ. ಇದೊಂದು ದಾರಿ ಇದೆಯೆಂಬುದು ಅವನಿಗೆ ಗೊತ್ತೇ ಇರಲಿಲ್ಲ. ಅಥವಾ ಅವನ ಗಮನಕ್ಕೇ ಬಂದಿರಲಿಲ್ಲ.ಬರೀ ಲಾಜಿಕ್ಕೂ ಕಂಪ್ಯೂಟರು ಸಾಫ಼್ಟವೇರುಗಳು, ಡೆಡ್‌ಲೈನುಗಳೂ ಬೆಂಗಳೂರಿನ ಟ್ರಾಫ಼ಿಕ್ಕಿಗಿಂತಲೂ ದಟ್ಟವಾಗಿ ಜಾಮಾಗಿ ಅವನ ಯೋಚನಮಾರ್ಗದ ಸಣ್ಣಸಣ್ಣ ಸಂದಿಗಳನ್ನೂ ದ್ವಿಚಕ್ರವಾಹನದವರು ದಾಳಿಯಿಟ್ಟು ಅದನ್ನೂ ಜಾಮುಮಾಡುವಂತೆ ಮಾಡಿಬಿಟ್ಟಿದ್ದವು. ಅವನು ಏನೂ ಮಾತಾಡಲಿಲ್ಲ.
***
ಅಲ್ಲ ಕಣಮ್ಮ ಆ ಊರಿಗೆ ಬಂದು ಅವನೇನು ಮಾಡೀನು..ಚಿತ್ರ ಬರ್ಕಂಡು ಬದುಕೋಕೆ ಆದೀತಾ.. ಅಶೋಕ ದನಿಯೇರಿಸಿ ಕೂಗಿದ. ನಮ್ಮದೇನೂ ಹೆಚ್ಚುಕಡಿಮೆ ಮುಗೀತು..ನಾವು ಅವ್ನುಗೋಸ್ಕರ ತಾನೆ ಹೇಳ್ತಿರೋದು.. ಅಸಹನೆಯಿಂದ ಅಶೋಕನ ಬಿಪಿ ಏರುತ್ತಿತ್ತು. ಸುಶೀಲಮ್ಮ ಅದೇ ಕಣಪ್ಪಾ ಮಾತು ಮಾತಿಗೂ ಅವನಿಗೋಸ್ಕರ ಅವನಿಗೋಸ್ಕರ ಅಂತೀರಿ..ಆದ್ರೆ ನಿಮ್ಮಿಷ್ಟ ಬಂದಂಗೆ ಇರು ಅಂತೀರೀ..ನಿಮ್ದೆಲ್ಲಾ ಮುಗಿದಮೇಕೆ ಅಂವ ಅವನಿಗೇನಿಷ್ಟಾನೋ ಹಂಗಿರ್ಲಿ ಬಿಡಪ್ಪಾ..ಎಂದಳು. ಒಂದ್ ಮಾತೇಳ್ಲಾ ಅಶೋಕ..ನಿಮ್ಮಪ್ಪ ಕಷ್ಟಪಟ್ಟು ಕೂಲಿ ಮಾಡಿ ನಿನ್ನನ್ನು ಓದಿಸಿ ಪಾಠ ಮಾಡೋ ಲೆಕ್ಚರ್ ಮಾಡುದ್ರು..ಆದ್ರೆ ನೀನು ನಿನ್ನ ಮಗನ್ನ ಚೆನ್ನಾಗಿ ಓದ್ಸಿ ಅದ್ಯಾಕಪ್ಪ ಕೂಲಿ ಮಾಡಕ್ಕೆ ಕಳಿಸ್ತೀದ್ದೀಯ..?ಅಂದುಬಿಟ್ಟಳು. ಅಮ್ಮನ ಕೊನೆಯ ಮಾತು ಅಶೋಕನಿಗೆ ನಾಟಿ ಬಿಟ್ಟಿತ್ತು.ಮುಂದೇನೋ ಮಾತನಾಡಲು ಬಾಯಿ ತೆರೆದವನು ಹಾಗೆ ಬಾಯಿತೆರೆದುಕೊಂಡೇ ಇದ್ದ.ಸುಶೀಲಮ್ಮನೂ ಮುಂದೇನೊ ಹೇಳುತ್ತಾನೆಂದು ಕಾಯತೊಡಗಿದಳು.ಸುಮ್ಮನೆ ತಲೆ ತಗ್ಗಿಸಿದ ಅಶೋಕ ಮತ್ತೆ ತಲೆಯೆತ್ತಿದಾಗ ಅವನ ಕಣ್ಣು ತುಂಬಿಬಂದಿತ್ತು. ಆ ಕ್ಷಣದಲ್ಲಿ ಅದಕ್ಕೆ ಕಾರಣವೇನಿರಬಹುದೆಂಬುದು ಇಬ್ಬರಿಗೂ ಸ್ಪಷ್ಟವಾಗಿ ಗೊತ್ತಿರಲಿಲ್ಲ. [ಮುಗಿಯಿತು]

No comments:

Post a Comment