Sunday, December 21, 2014

ಪಿಕೆ

ಚಿತ್ರ ಪ್ರಾರಂಭವಾಗುತ್ತದೆ. ಒಂದು ಹಾರುವ ತಟ್ಟೆ ಬಂದು ನಿಲ್ಲುತ್ತದೆ. ಅದರಿಂದ ಆಮೀರ್ ಖಾನ್ ನಗ್ನವಾಗಿ ಕೆಳಗಿಳಿಯುತ್ತಾರೆ. ಅನ್ಯಗ್ರಹವಾಸಿಯಾದ ಆಮೀರ್ ಯಾನೆ ಪಿಕೆಗೆ ಏನು ಮಾಡುವುದು ಎಂಬುದು ತಿಳಿಯುವದಿಲ್ಲ. ಅಷ್ಟರಲ್ಲಿ ವ್ಯಕ್ತಿಯೊಬ್ಬ ಆಮೀರ್ ಖಾನ್ ತನ್ನ ಗ್ರಹಕ್ಕೆ ವಾಪಸ್ಸಾಗಳು ಅಗತ್ಯವಿದ್ದ ಕೊರಳಿನ ಸರ ಕಿತ್ತು ಓಡಿಬಿಡುತ್ತಾನೆ. ಭೂಮಿಯ ಮೇಲಿನ ವಿಷಯಗಳ ಬಗ್ಗೆ ಕಿಂಚಿತ್ತೂ ಅರಿವಿರದ ಪಿಕೆ ಒಂದೊಂದಾಗಿ ತಿಳಿದುಕೊಳ್ಳುತ್ತಾ ಸಾಗುತ್ತಾನೆ. ಮನುಷ್ಯರೇ ಮಾಡಿದ ವಿಷಯಗಳಿಗೆ ಪ್ರಶ್ನೆ ಹಾಕುತ್ತಾ ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯತ್ನಿಸುತ್ತಾನೆ.
ಹಿರಾನಿ ಅವರ ಕತೆಯ ಚಿತ್ರಕತೆಯ ಬಗೆಗೆ ಏನನ್ನೂ ಹೊಸದು ಹೇಳುವ ಹಾಗಿಲ್ಲ. ಯಾಕೆಂದರೆ ಒಂದು ವಿಷಯವನ್ನು ಹಾಸ್ಯ ಮಿಶ್ರಿತವಾಗಿ ಹೇಳುವಲ್ಲಿ ಹಿರಾನಿ ಅವರನ್ನು ಸರಗಟ್ಟುವವವರು ಚಿತ್ರರಂಗದಲ್ಲಿ ಕಡಿಮೆಯೇ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಯಾವುದನ್ನೇ ಆಗಲಿ ಕನ್ವಿನ್ಸ್ ಮಾಡುವ ಅವರ ನಿರೂಪಣೆಗೆ ಮಾರುಹೋಗದೆ ಇರಲಾರದು.
ಪಿಕೆ ಪ್ರಸ್ತುತ ಜಗತ್ತಿಗೆ ಬೇಕಾದ ಚಿತ್ರ. ಪ್ರೇಕ್ಷಕರಿಗೆ ಮಾತ್ರವಲ್ಲ. ಚಿತ್ರಕರ್ಮಿಗಳಿಗೂ. ಮೊದಲಿಗೆ ಪ್ರೇಕ್ಷಕರ ವಿಷಯಕ್ಕೆ ಬಂದರೆ ಪಿಕೆ ಈವತ್ತಿನ ದೇವರು ಅಸ್ತಿತ್ವದ ಬಗೆಗಿನ ಚಿತ್ರ. ಸೂಕ್ಷ್ಮವಾಗಿ ನೋಡಿದರೆ ದೇವರ ಅಸ್ತಿತ್ವಕ್ಕಿಂತ ಆತನ ಅಸ್ತಿತ್ವದ ಬಗೆಗೆ ಮಾನವನಿಗಿರುವ ನಂಬಿಕೆ ಅಪನಂಬಿಕೆ ಮೂಢ ನಂಬಿಕೆ ಮುಂತಾದವುಗಳನ್ನು ಪ್ರಶ್ನಿಸುವ ಚಿತ್ರ. ದೇವರಿದ್ದಾನೆ ಇಲ್ಲ, ಎನ್ನುವುದು ಇಲ್ಲಿನ ವಿಷಯವಲ್ಲ. ದೇವರು ಮಾನವರ ಅಂದರೆ ನಮ್ಮಗಳ ಜೊತೆ ಹೇಗಿದ್ದಾನೆ ಎಂಬುದು ಪ್ರಶ್ನೆ. ಅಥವಾ ನಾವುಗಳು ದೇವರನ್ನು ಹೇಗೆ ಇಟ್ಟುಕೊಂಡಿದ್ದೇವೆ ಎಂಬುದನ್ನು ಹಾಸ್ಯ ಮಿಶ್ರಿತವಾಗಿ ಹಾಗೆಯೇ ಚಿಂತಾನಾತ್ಮಕವಾಗಿ ತೆರೆಯ ಮೇಲೆ ತರುವ ಮತ್ತು ಅದನ್ನು ಒಪ್ಪಿಸುವ ಕೆಲಸ ಸುಲಭವಲ್ಲ. ಹಿರಾನಿ ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕ ಚಿಕ್ಕ ಪ್ರಸಂಗಗಳು, ಅದರಲ್ಲಿ ನಗೆಯುಕ್ಕಿಸುವ ಪರಿ, ವಿಡಂಬನೆ, ಅಲ್ಲಲ್ಲಿ ಬರುವ ಭಾವನಾತ್ಮಕ ಸನ್ನಿವೇಶ ಹೀಗೆ ಚಿತ್ರ ಸಾಗುತ್ತಾ ಸಾಗುತ್ತಾ ಪ್ರೇಕ್ಷಕ ಅತ್ತಿತ್ತ  ಆತನ ಗಮನ ಬೇರೆಡೆಗೆ ಹರಿಯದಂತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಹಾಗಾಗಿ ಚಿತ್ರಕತೆ ಬರೆದ ಹಿರಾನಿ ತಂಡಕ್ಕೆ ನಮನ ಹೇಳಲೇಬೇಕಾಗುತ್ತದೆ.
ಇನ್ನು ಚಿತ್ರಕರ್ಮಿಗಳು ಅಥವಾ ಯುವ ಪೀಳಿಗೆಯ ನಿರ್ದೇಶಕರು ಹಿರಾನಿ ಅವರಿಗೆ ಸಲಾಮು ಹೊಡೆಯುವುದರ ಜೊತೆಗೆ ಅವರನ್ನು ಅನುಕರಿಸಬಹುದು. ಯಾಕೆಂದರೆ ಯಶಸ್ಸು ಗುಣಮಟ್ಟ ಎರಡನ್ನೂ ತಮ್ಮ ಸಿನಿಮಾದಲ್ಲಿ ಸಾಧ್ಯ ಎಂಬುದನ್ನು ಸಾಧಿಸಿತೋರಿಸಿರುವ ಹಿರಾನಿ ಅವರ ಚಿತ್ರ ಇತಿಹಾಸವನ್ನು ಗಮನಿಸಿದರೆ ಅವರು ತೆಗಯುಕೊಳ್ಳುವ ವಸ್ತು ಗಿಂತ ಅವರ ಚಿತ್ರಕತೆಯ ತಾಕತ್ತು ಮತ್ತು ದೃಶ್ಯ ರಚನೆ ತಾಕತ್ತು ದೊಡ್ಡದು ಎನಿಸುತ್ತದೆ. ಹಾಗಾಗಿ ಸಮಯ ತೆಗೆದುಕೊಂಡು ಸಿನಿಮಾ ಮಾಡುವ ಹಿರಾನಿ ಆ ಸಮಯವನ್ನು ಒಂದು ಕ್ಷಣವೂ ವ್ಯರ್ಥ ಮಾಡಿಲ್ಲ ಎನಿಸುವುದು ಅವರ ಚಿತ್ರಗಳನ್ನು ನೋಡಿದ ಮೇಲೆಯೇ. ಸುಮ್ಮನೆ ಸಿನಿಮಾ ಮಾಡುವ, ಯಶಸ್ಸು ನೀಡುವ ಅಥವಾ ಗಂಭೀರ ಸಮಸ್ಯೆ ಚಿತ್ರ ತೆಗೆದು ಪ್ರಶಸ್ತಿ ತನ್ನದಾಗಿಸಿಕೊಳ್ಳುವುದಕ್ಕಿಂತ ಒಟ್ಟಾರೆಯಾಗಿ ಎಲ್ಲವನ್ನು ಒಂದೇ ಚಿತ್ರದಲ್ಲಿ ಮಾಡಬಹುದು ಎಂಬುದನ್ನು ಅವರಿಂದ ಕಲಿಯಬೇಕಾಗುತ್ತದೆ.
ಅಮೀರ್ ಖಾನ್ ಸ್ಟಾರ್ ನಟ ಎಂಬುದನ್ನು ಮರೆತು ಚಿತ್ರ ಮಾಡಿದ್ದಾರೆ ಅಥವಾ ಅವರು ಸ್ಟಾರ್ ಆಗಿರುವುದರಿಂದಲೇ ಈ ಪಾತ್ರ ನಿರ್ವಹಿಸಿದ್ದಾರೆ. ಅವರ ಹಾವ ಭಾವ ಪಾತ್ರ ಪೋಷಣೆ ಸೂಪರ್. ಉಳಿದ ತಾರಾಗಣ, ಛಾಯಾಗ್ರಹಣ, ತಂತ್ರಜ್ಞರ ಬಗ್ಗೆ ಬಿಡಿಬಿಡಿಯಾಗಿ ಹೇಳುವುದಕ್ಕಿಂತ ಯಥಾ ರಾಜ ತಥಾ ಪ್ರಜಾ ಎಂಬೊಂದು ವಾಕ್ಯವನ್ನು ಹೇಳಿ ಅರ್ಥೈಸಿಬಿಡಬಹುದು.
ಇದೆಲ್ಲದರ ಜೊತೆಗೆ ಕೆಲವು ಅಂಶಗಳನ್ನು ವಾದಿಸಬಹುದು. ಚಿತ್ರದಲ್ಲಿ ಓ ಮೈ ಗಾಡ್ ನೆರಳಿದೆ. ಪಾತ್ರ ಪೋಷಣೆ, ಕಥಾ ಹಂದರದಲ್ಲಿ ಅಮೆರಿಕಾದ ಟಿವಿ ಸರಣಿಯ  ಸರಕು ಕಾಣಿಸುತ್ತದೆ, ಹಿರಾನಿ ಹಿಂದಿನ ಚಿತ್ರ ನೋಡಿದವರಿಗೆ ಚಿತ್ರದಲ್ಲಿನ ಪಾತ್ರ ಪೋಷಣೆ ಹೊಸದು ಎನಿಸುವುದಿಲ್ಲ ಹೀಗೆ. ಆದರೆ ಇಂತಹ ಚಿತ್ರದ ಮಟ್ಟಿಗೆ ಈವತ್ತಿಗೆ ಇದೆಲ್ಲಾ ಅಪ್ರಸ್ತುತ ಎನಿಸುತ್ತದೆ.
ಒಮ್ಮೆ ಮನೆಮಂದಿಯಲ್ಲ ನೋಡಲೇ ಬೇಕಾದ ಚಿತ್ರವಿದು.