Monday, May 16, 2016

ರಮಾಬಾಯಿ ನೋಡಿದ್ರಾ..? ಇಂಗಳೆ ಯಾರು..?ಬಸವಣ್ಣ ಹೇಳಿದ್ದೇನು..?

ನಾನು ಫೇಸ್ಬುಕ್  ಇನ್ನಿತರ ಸಾಮಾಜಿಕ ಜಾಲತಾಣಗಳನ್ನೂ  ಗಮನಿಸುತ್ತೇನೆ. ಸಿನಿಮಾ, ಸಾಹಿತ್ಯ ಸಂಬಂಧಿ ಪೋಸ್ಟ್ ಗಳನ್ನ ಬಿಟ್ಟರೆ ಬೇರೆ ಪೋಸ್ಟ್ ಗಳಿಗೆ  ಪ್ರತಿಕ್ರಿಯಿಸುವುದಿಲ್ಲ. ಆದರೂ ಈ ಕೆಲವು ಜಾತ್ಯಾತೀತರು, ಜಾತಿವಾದಿಗಳು, ರಾಜಕೀಯಪ್ರಿಯರು, ಸಮಾಜ ಸುಧಾರಕರ ಮುಖವಾಡ ಹೊತ್ತವರು, ಬುದ್ದಿಜೀವಿಗಳೆನಿಸಿಕೊಂಡವರು ಮುಂತಾದವರ ಆರ್ಭಟಗಳನ್ನು ಸುಮ್ಮನೆ ಗಮನಿಸುತ್ತಾ ಸಾಗುತ್ತೇನೆ. ನನಗೆ ರಾಜಕೀಯ ಆಕರ್ಷಿಸುವುದಿಲ್ಲವಾದರೂ ಅದನ್ನು ಉದಾಸೀನ ಮಾಡುವ ಹಾಗಿಲ್ಲ. ಇನ್ನು ಮತ, ಧರ್ಮ, ಜಾತಿ ಬಿಡಿ. ಅದವರ ವೈಯಕ್ತಿಕ. ಎಲ್ಲಾ ಜಾತಿಗಳೂ, ಧರ್ಮಗಳೂ ಸರಿ ಎಂದರೆ ಸರಿ ತಪ್ಪು ಎಂದರೆ ತಪ್ಪು. ತಪ್ಪು ಹುಡುಕಲು ಹೊರಟರೆ ಸಾವಿರಾರು, ಶ್ರೇಷ್ಠ ಎಂದುಕೊಂಡರೆ ಅದೇ ಶ್ರೇಷ್ಠ. ಇರಲಿ. ಆದರೆ ಯಾವುದಾದರೊಂದು ವಿಷಯವಾದಾಗ. ವಿವಾದವಾದಾಗ ಯಾರಾದರೂ ಎಲ್ಲೋ ಮಾತಿನ ಭರದಲ್ಲಿ ಏನೋ ಮಾತಾಡಿದಾಗ, ಅಥವಾ ಇನ್ನೇನೋ ಆದಾಗ ಅದನ್ನಿಡಿದುಕೊಂಡು ಕೆಸರೆರೆಚಾಟ ಮಾಡುವವರನ್ನು ಕಂಡಾಗ ಮತ್ತು ಏನೋ ಒಂದು ತೆರನಾಗುತ್ತದೆ. ಇಡೀ ಸಮಾಜವೇ ಸರಿಯಿಲ್ಲ, ನಾವು ಸರಿಯಾಗಿದ್ದೇವೆ ಎನ್ನುವ ಅವರ ನಡೆ ನುಡಿ ಕಂಡಾಗ ಗಾಬರಿಯೂ ಆಗುತ್ತದೆ. 
ಮೊನ್ನೆ ಮೊನ್ನೆ ರಮಾಬಾಯಿ ಎನ್ನುವ ಚಿತ್ರ ಬಿಡುಗಡೆಯಾಗಿತ್ತು. ಚಿತ್ರಮಂದಿರದಲ್ಲಿ ಬೆರೆಳೆಣಿಕೆಯ ಜನರೂ ಇರಲಿಲ್ಲ. ರಮಾಬಾಯಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊದಲ ಪತ್ನಿ.  ಅಂಬೇಡ್ಕರ್ ಜನ್ಮದಿನದಂದೇ ಬಿಡುಗಡೆಯಾದ ಈ ಚಿತ್ರದಲ್ಲಿ ಅಂಬೇಡ್ಕರ್ ಅವರ ಬದುಕನ್ನು ಅವರ ಪತ್ನಿಯ ದೃಷ್ಟಿಕೋನದಲ್ಲಿ ನಿರೂಪಿಸಲಾಗಿತ್ತು. ಆದರೆ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ, ಅವರ ಏಳಿಗೆಗಾಗಿಯೇ ದುಡಿಯುತ್ತಿದ್ದೇವೆ ಎನ್ನುವ ರೀತಿ ಫೇಸ್ಬುಕ್ ನಲ್ಲಿ ಪೋಸ್ ಕೊಡುವ ಒಬ್ಬರೂ ಆ ಚಿತ್ರದ ಬಗ್ಗೆ ಬರೆದದ್ದು ಕಾಣಿಸಲಿಲ್ಲ. ಕೊನೆಗೆ ಹೀಗೊಂದು ಅಪರೂಪದ ಸಿನೆಮಾವನ್ನು ಮಾಡಿದ್ದಾರೆ, ಒಮ್ಮೆ ನೋಡೋಣ ಎಂದಾಗಲಿ, ನೋಡಿದೆ, ಹೀಗಿದೆ, ಹೀಗಿರಬೇಕಿತ್ತು ಎಂದಾಗಲಿ ಒಬ್ಬರೂ ಅದರ ಬಗ್ಗೆ ಪ್ರಸ್ತಾಪಿಸಲಿಲ್ಲ. ಈವತ್ತು ಸಿನಿಮಾ ಮಾಡುವುದು ಸುಲಭದ ಅಥವಾ ಕಡಿಮೆ ಕರ್ಚಿನ ವಿಷಯವಲ್ಲ. ಏನೇ ಕಡಿಮೆ ಎಂದರೆ ಲಕ್ಷಗಟ್ಟಲೆ ಹಣ ಬೇಕೇ ಬೇಕು. ಹಾಗಾಗಿಯೂ ಒಬ್ಬ ವ್ಯಕ್ತಿ ಅಂತಹ ಅಪರೂಪದ ಪ್ರಯತ್ನ ಪಟ್ಟಾಗ ಅದರ ಬಗ್ಗೆ ಮಾತೇ ಆಡದವರು ಅಂಬೇಡ್ಕರ್ ಬಗ್ಗೆ, ಹಿಂದುಳಿದ ವರ್ಗಗಳ ಏಳಿಗೆಯ ಬಗ್ಗೆ, ಸರ್ಕಾರ ಮಾಡದ ಕಾರ್ಯಗಳ ಬಗ್ಗೆ ಮಾತಾಡುತ್ತಾರಲ್ಲ ಅದೆಲ್ಲ ಒಣ ಪ್ರತಿಷ್ಠೆಯಿರಬಹುದಾ..? ಎನಿಸದಿರಲಿಲ್ಲ. ಹಾಗೆಯೇ ಇದಕ್ಕೂ ಮುನ್ನ ಕನ್ನಡದಲ್ಲಿಯೇ ಇಂಗಳೆಮಾರ್ಗ  ಚಿತ್ರ ಬಂದಿತ್ತು. ಘನಶ್ಯಾಮ್ ಭಾಂಡಗೆ ನಿರ್ಮಿಸಿದ್ದ  ಈ ಚಿತ್ರವೂ ದೇವರಾಯ ಇಂಗಳೆ ಅವರ ಜೀವನ ಚರಿತ್ರೆಯನ್ನು ಆಧರಿಸಿರಿತ್ತು. 2014 ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನೂ ಪ್ರೋತ್ಸಾಹಿಸಿದ್ದು ಕಡಿಮೆ. ಹಾಗೆಯೇ ಗಾಂಧಿಜಿ ಕುರಿತಾದ ಚಿತ್ರಗಳು ಲೇಖನಗಳು, ಅಂಬೇಡ್ಕರ್ ಅವರ ಭಾಷಣದ ವಿವರಣೆ ಮುಂತಾದವುಗಳ ಬಗೆಗೆ ಬರೆದದ್ದಕ್ಕಿಂತ ಅವರು ಹೀಗೆಂದರು ಇವರು ಹಾಗಂದರು ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಯಾಕೆ ಮಾತನಾಡುತ್ತಾರೆ ಎಂಬುದು ನನ್ನ ಪ್ರಶ್ನೆ. 
ಇಲ್ಲಿ  ಬರೀ ಸಿನಿಮಾದ ವಿಷಯವಷ್ಟನ್ನೇ ಮಾತಾಡುವುದಾದರೆ ಒಬ್ಬ ವ್ಯಕ್ತಿಯ ತತ್ವಗಳನ್ನು ನಾವು ಅನುಸರಿಸುವಾಗ, ಗೌರವಿಸುವಾಗ ಅವರ ಬಗೆಗೆ ಒಬ್ಬ ವ್ಯಕ್ತಿ ತೆಗಳಿದರೆ, ವ್ಯತಿರಿಕ್ತವಾಗಿ ಮಾತನಾಡಿದರೆ ಅದನ್ನು ವಿರೋಧಿಸುವುದು ಸರಿ. ಆದರೆ ಅವರ ಬಗೆಗೆ ಚಿತ್ರವನ್ನೋ, ಪುಸ್ತಕವನ್ನೂ ಬರೆದಾಗ ಅದನ್ನು ಪ್ರಶಂಸಿಸಬಹುದಲ್ಲವೇ..? ಆ ಸಿನೆಮಾವನ್ನು ನೋಡಿ, ಮತ್ತೊಂದಷ್ಟು ಜನರನ್ನು ನೋಡುವಂತೆ ಪ್ರೇರೇಪಿಸಿ., ಅದರ ಬಗೆಗೆ ಚರ್ಚೆ ನಡೆಸಿದ್ದರೆ ಅದನ್ನು ನಿರ್ಮಿಸಿದ್ದವರಿಗೆ, ನಿರ್ದೇಶನ ಮಾಡಿದ್ದವರಿಗೆ ಉತ್ತೇಜನ ಸಿಕ್ಕಿರುತ್ತಿತ್ತಲ್ಲವೇ..?
ಮೇಲ್ನೋಟಕ್ಕೆ ಗಮನಿಸಿದಾಗ ಇಲ್ಲಿ  ಆಗುತ್ತಿರುವುದು ಇದೆ. ಮೋದಿ ಕೇರಳವನ್ನು ಸೋಮಾಲಿಯ ಎಂದರು, ಸೋಮಯಾಗಕ್ಕೆ ಮೇಕೆ ಬಲಿ ಕೊಟ್ಟರು ಎಂಬೊಂದು ಸುದ್ದಿಯನ್ನು ಒಬ್ಬರು ಸುದ್ದಿ ಮಾಡಿ ಅದರ ಬಗ್ಗೆ ಮಾತಾಡಿ ವಿರೋಧಿಗಳಿಂದ, ಪರವಾದಿಗಳಿಂದ ಲೈಕ್, ಡಿಸ್ ಲೈಕ್ ಪಡೆದು ಮಾತಾಡಿದರೆ, ಮತ್ತೊಬ್ಬರು ಸಿದ್ಧರಾಮಯ್ಯ ಸಭೆಯಲ್ಲಿ ನಿದ್ರೆ ಮಾಡಿದರು, ಸೋನಿಯಾ ಗಾಂಧೀ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್ ನಲ್ಲಿಟ್ಟಿದ್ದಾರೆ, ರಾಹುಲ್ ಗಾಂಧಿ ಪೆದ್ದ ಎಂಬುದಾಗಿ ಪೋಸ್ಟ್ ಹಾಕಿ ಮತ್ತದೇ ಲೈಕ್ ಡಿಸ್ ಲೈಕ್ ಆಟ ಆಡುವುದಾದರೂ ಏತಕ್ಕೆ..? ಗೋಮಾಂಸ ತಿನ್ನುವುದು ಅಪರಾಧ ಎಂದೂ, ಅದು ತಿನ್ನುವುದು ನಮ್ಮ ಹಕ್ಕೆಂದೂ, ಹಿಂದೂ ಧರ್ಮದಲ್ಲಿ ಹುಳುಕಿದೆ ಎಂದೂ, ಅವನು ಸರಿ, ಇವನು ಸರಿ, ಅವನು ತಪ್ಪು ಇವನು ತಪ್ಪು ಎನ್ನುವ ಕೆಸರೆರಚಾಟಕ್ಕೆ ಅಂಬೇಡ್ಕರ್, ಬಸವಣ್ಣ, ಬುದ್ಧ, ಗಾಂಧೀ ಅವರ ಉದ್ದೇಶ, ಬರಹ, ಮಾತುಗಳನ್ನು ಭಗವದ್ಗೀತೆ, ಕುರಾನ್, ಬೈಬಲ್ ನಲ್ಲಿನ ಉಲ್ಲೇಖಗಳನ್ನು ಉಲ್ಲೇಖಿಸುವುದು ಅದೆಷ್ಟರ ಮಟ್ಟಿಗೆ ಸರಿ...?
ಈ ಮಾತನ್ನು ಬರೀ ಈ ಎರಡು ಚಿತ್ರಕ್ಕಷ್ಟೇ ನಾನು ಹೇಳುತ್ತಿಲ್ಲ. ಅಥವಾ ಬರೀ ಸಿನಿಮಾದ ವಿಷಯವೇ ಅಲ್ಲ. ನಾವು ಮುಂದಿನ ಪೀಳಿಗೆಗೆ ಅವರ ಉದ್ದೇಶ-ಸಾಧನೆಯನ್ನು ವಿಶದಪಡಿಸುತ್ತಿಲ್ಲ. ಬದಲಿಗೆ ಅವರನ್ನು ನಮ್ಮವರು-ನಿಮ್ಮವರು ಎಂದು ವಿಂಗಡಣೆ ಮಾಡಿಬಿಡುತ್ತಿದ್ದೇವೆ. ಕ್ರಾಂತಿಕಾರಿ ಬಸವಣ್ಣ ಸಿನೆಮಾವನ್ನು ನೋಡಿದವರೆಷ್ಟು ಜನ ಅದರ ಬಗ್ಗೆ ಮಾತನಾಡುತ್ತಾರೆ. ಸರ್ದಾರ್ ಚಿತ್ರವನ್ನು ಯಾರು ಏಕೆ ಉಲ್ಲೇಖಿಸುವುದಿಲ್ಲ, ಮಮ್ಮುಟ್ಟಿ ಅಭಿನಯದ ಅಂಬೇಡ್ಕರ್, ಕನ್ನಡದ್ದೇ ಬಾಲಕ ಅಂಬೇಡ್ಕರ್,  ನೇತಾಜಿ ಸುಭಾಶ್ ಚಂದ್ರ ಬೋಸ್, ಇಂದಿರಾಗಾಂಧಿ:ದಿ ಡೆತ್ ಆಫ್ ಮದರ್ ಇಂಡಿಯ.. ಮುಂತಾದ ಸಾಧಕರ ಚಿತ್ರಗಳನ್ನು ನಾವೇಕೆ ಪುರಸ್ಕರಿಸುವುದಿಲ್ಲ. ನಾವೆಲ್ಲಾ ಅವರ ಸಾಧನೆಯ ಹಾದಿಯ ಬಗೆಗೆ ಮಾತನಾಡುವುದಕ್ಕಿಂತ ಅವರನ್ನಿಟ್ಟುಕೊಂಡು ವಾದ ವಿವಾದ ಮಾಡುವುದೇ ಜಾಸ್ತಿಯಾಗಿದೆಯಲ್ಲ ಎನಿಸುತ್ತದೆ.