Thursday, September 27, 2012

ಕಳೆದು ಹೋದದ್ದು ಪಾಸ್ ವರ್ಡ್, ಸಿಕ್ಕಿದ್ದು ಮಾತ್ರ ಕೊಲೆಗಾರರು..

ಯುದ್ಧಾನಂತರದ ಬ್ರಿಟನ್ ಪರಿಸ್ಥಿತಿ ಹೇಗಿದೆ..? ಅಲ್ಲಿನ ಬೆಳವಣಿಗೆಗಳೇನು..ಮುಂತಾದವುಗಳ ಬಗ್ಗೆ ಪತ್ರಿಕೆಗೆ ಬರೆಯುವ ಕೆಲಸವನ್ನು ನನಗೆ ವಹಿಸಲಾಯಿತು.ನನಗೆ ಆ ಕೆಲಸವೇನೂ ಬೇಕಾಗಿರಲಿಲ್ಲ .ಇಂಗ್ಲೆಂಡಿಗೆ ಹೋಗಿ ಅದನ್ನೆಲ್ಲಾ ಒಂದಷ್ಟು ಅದ್ಯಯನ ಮಾಡಿ ಬರೆದು ಬೀಸಾಕುವುದು ಅಂತಹ ಕಷ್ಟದ ಕೆಲಸವೂ ಅಲ್ಲ. ಹಾಗಾಗಿ ನಾನು ಅಲ್ಲಿಗೆ ಹೋಗಲು ಒಪ್ಪಿಕೊಂಡೆನಾದರೂ ಅಲ್ಲಿ ಹೋಗಲು ಬೇರೆಯದೇ ಆದ ಕಾರಣವಿತ್ತು..ಅದು 'ಆಕೆ'. ನಾನು ಮೊದಲು ಇಂಗ್ಲೆಂಡಿನಲ್ಲಿದ್ದಾಗ ನನ್ನ ಜೊತೆ ಇದ್ದವಳು. ಹಾಗಂತ ಆಕೆ ನನ್ನ ಪ್ರೇಮಿಯಲ್ಲ. ನಾವಿಬ್ಬರು ಸುಮಾರು ಎರಡು ವರ್ಷ ಜೊತೆಗಿದ್ದರೂ ಯಾವ ಕಮಿಟ್ ಮೆಂಟುಗಳಿರಲಿಲ್ಲ ಆಕೆಯ ಬಗ್ಗೆಯಾಗಲಿ, ಆಕೆಯ ಹಿನ್ನೆಲೆಯಾಗಲಿ ನನಗೆ ಗೊತ್ತಿರಲಿಲ್ಲ  ಎನ್ನುವುದಕ್ಕಿಂತ ಅದನ್ನು ಆಕೆ ಹೇಳಿರಲಿಲ್ಲ .ನಾನೇ ಕೆಲವೊಮ್ಮೆ ಆಸಕ್ತಿ ತೋರಿಸಿದರೂ ಆಕೆ ಏನನ್ನೂ ಹೇಳದೆ ಮಾತು ತಿರುಗಿಸುತ್ತಿದ್ದಳು. ಆದರೆ ಆಕೆಯೊಂದಗಿನ ಒಡನಾಟ ಮಾತ್ರ ಅದೆಷ್ಟು ಅಪ್ಯಾಯಮಾನವಾಗಿತ್ತೆಂದರೆ  ಆನಂತರದ ದಿನಗಳಲ್ಲಿ ನಾನು ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಆಕೆಯ ಮೊದಲ ಭೇಟಿಯಲ್ಲೇ ನನಗೆ ಏನೋ ಒಂದು ರೀತಿಯಾದ್ದದ್ದಂತೂ ಸತ್ಯ. ನಮ್ಮ ಅಗಲಿಕೆಯ ದಿನವೂ ಅಷ್ಟೇ ವಿಚಿತ್ರವಾಗಿತ್ತು. ಅಸಾಮಾನ್ಯವಾಗಿತ್ತು. ನಾನು ಆ ಊರನ್ನು ಬಿಟ್ಟು, ಆಕೆಯನ್ನು ಬಿಟ್ಟು ದೂರ ಬಹುದೂರ ಹೋಗುತ್ತೇನೆಂಬ ಭಾವ ಆವತ್ತು ನಮ್ಮಿಬ್ಬರಲ್ಲೂ ಇರಲಿಲ್ಲ . ಆಕೆಯಂತೂ  ನಾನೆಲ್ಲೋ ಹೊರಗೆ ತರಕಾರಿ, ಹಾಲು ತರಲು ಅಂಗಡಿಗೆ  ಹೋಗುತ್ತಿರುವೆನೇನೋ ಎನ್ನುವಂತೆ  ಕೆನ್ನೆಗೊಂದು ಹೂಮುತ್ತನಿತ್ತು ಬೀಳ್ಕೊಟ್ಟಿದ್ದಳು.
 ಆನಂತರದ ದಿನಗಳಲ್ಲಿ ಆಕೆ ನನ್ನನ್ನು ಬಹುವಾಗಿ ಕಾಡಿದ್ದಳು.ಆಕೆಗೊಂದು ಪತ್ರ ಬರೆಯಲಾ, ಫೋನ್ ಮಾಡಲಾ ಎನಿಸಿದ್ದರೂ ಆ ಪ್ರಯತ್ನವನ್ನು ಮಾಡಿರಲಿಲ್ಲ .ಅವಳನ್ನು ಮಿಸ್ ಮಾಡಿಕೊಳ್ಳಬಾರದೆಂದು ಎಷ್ಟೇ ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ .ಈಗ ಮತ್ತೆ ಆಕೆಯನ್ನು ಭೇಟಿಮಾಡುವ ಸದಾವಕಾಶ ಒದಗಿಬಂದಿತ್ತು. ಸೀದಾ ಇಂಗ್ಲೆಂಡಿಗೆ ಬಂದಿಳಿದಾಗ ನನಗೆ 'ಆಕೆ'ಯನ್ನು ಹೊರೆತುಪಡಿಸಿ ಬೇರೇನೂ ನೆನಪಿಗೆ ಬರಲಿಲ್ಲವೆಂದೆ ಹೇಳಬಹುದು.ಹೋಟೆಲ್ಲಿನಲ್ಲಿ ಚೆಕ್ ಇನ್ ಆದ ಮೇಲೆ ತಕ್ಷಣ ಆಕೆಯ ಅಪಾರ್ಟ್ಮೆಂಟಿಗೆ ಧಾವಿಸಿದೆ. ಎದೆಯಲ್ಲಿ ಅವಲಕ್ಕಿ ಕುಟ್ಟಿ ದಂತಾಗುತ್ತಿತ್ತು ..ಅದೆಷ್ಟು ವೇಗವಾಗಿ ಆಕೆಯ ಬಾಗಿಲಿನ ಮುಂದೆ ನಿಂತಿದ್ದೆ  ಎಂದರೆ  ಎಲ್ಲವೂ ಕ್ಷಣಾರ್ಧದಲ್ಲಿ ನಡೆದಂತೆ ಭಾಸವಾಗಿತ್ತು. ಏನೇನೋ ಕಲ್ಪನೆಯಿಂದ ಉದ್ವೇಗದಿಂದ ಬೆಲ್ ಮಾಡಿದೆ...ಆದರೆ ಎಷ್ಟು ಬೆಲ್ ಮಾಡಿದರೂ ಯಾರು ಬಾಗಿಲು ತೆರೆಯಲಿಲ್ಲ...ಎಲ್ಲಾದರೂ ಹೋಗಿರಬಹುದಾ..?
ಪಿಚ್ಚೆನಿಸಿತು. ಅಷ್ಟರಲ್ಲಿ ಹೊರಗೆ ಬಂದ  ಪಕ್ಕದ ಮನೆಯ ಡುಮ್ಮ 'ಯಾರು ಬೇಕಿತ್ತು ' ಎಂದ . ನಾನು ಹೇಳಿದೆ. 'ತುಂಬಾ ತಡವಾಯಿತು ನೀವು ಬಂದಿದ್ದು. ಆಕೆ ಆತ್ಮಹತ್ಯೆ ಮಾಡಿಕೊಂಡು ಸತ್ತುಹೋದಳು..' ಎಂದ. ನನಗೆ ನಿಂತ ನೆಲ ಕುಸಿದಂತಾಯಿತು...ಆದರೂ ಬುದ್ಧಿ ಮಾತ್ರ ವಿವೇಚನೆಯಿಂದ ವರ್ತಿಸಿತು....ಏನೋ ಆಗಿದೆ...ನನಗೆ ಸ್ಪಷ್ಟವಾಗಿ ಗೊತ್ತಿತ್ತು...ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೌದು..ಆಕೆ ಗಟ್ಟಿಗಿತ್ತಿ...ಹಾಗಾದರೆ ಏನು ನಡೆದಿರಬಹುದು?.
 ಮೊನ್ನೆ ಮಂಜುನಾಥ್ ಮನೆಗೆ ನಮ್ಮ ಸಿನಿಮಾ ಪುಸ್ತಕದ ವಿಚಾರವಾಗಿ ಮಾತನಾಡಲು ಹೋಗಿದ್ದಾಗ, ಲೀಲಾ ಮಂಜುನಾಥ್ ಹತ್ತಿರ ಜೇಮ್ಸ್ ಹ್ಯಾಡ್ಲಿ ಚೇಸ್ ಪುಸ್ತಕ ನೋಡಿದೆ. ಅವರು ಒಳ್ಳೆ ಓದುಗರೂ, ಅತ್ಯುತ್ತಮ ವಿಮರ್ಶಕಿಯೂ ಹೌದು. ನನಗೆ ಚೇಸ್ ಪುಸ್ತಕಗಳು ಯಾವಾಗಲೂ ಇಷ್ಟ. ಆತನ ಬರಹ ಓದಿಸಿಕೊಂಡಷ್ಟು ವೇಗವಾಗಿ ಬೇರಾವ ಲೇಖಕನ ಬರಹಗಳೂ ಓದಿಸಿಕೊಂಡಿಲ್ಲ. ಹಾಗಾಗಿ ಅದನ್ನು ಎರವಲು ಪಡೆದೆ. ಮತ್ತು ಅದರ ನಾಳೆಯೇ ಓದಿಬಿಟ್ಟೆ ಎನ್ನುವುದಕ್ಕಿಂತ ಆ ಪುಸ್ತಕ  ಓದಿಸಿಕೊಂಡಿತು ಎನ್ನುವುದು ಸೂಕ್ತ.
ಕಾದಂಬರಿಯ ಹೆಸರು ನೋ ಬುಸಿನೆಸ್ ಆಫ್ ಮೈನ್  ಎಂಬುದು. ಹೀಗೆ ಪ್ರಾರಂಭವಾಗುವ ಕಥೆ ಪುಟದಿಂದ ಪುಟಕ್ಕೆ ಕುತೂಹಲ ಕೆರಳಿಸಿಕೊಳ್ಳುತ್ತಾ ಸಾಗುತ್ತದೆ. ಕೊನೆಯ ಪುಟದವರೆಗೂ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ.
ಫ್ರೆಂಚ್ ಭಾಷೆಯ ಕಾಂಪ್ಲಿಸಸ್ ಚಿತ್ರ ನನಗೆ ಸಿಕ್ಕಿದ್ದು ಆಕಸ್ಮಿಕವಾಗಿ. ಆದರೆ ಜೇಮ್ಸ್ ಹ್ಯಾಡ್ಲಿ ಚೇಸ್ ನ ಕಾದಂಬರಿ ಮತ್ತು  ಈ ಸಿನೆಮಾ ಎರಡು ಒಂದೇ ಸಾರಿ ನೋಡಿದ್ದು ಮಾತ್ರ ಕಾಕತಾಳೀಯ ಎನ್ನಬಹುದು.ಯಾಕೆಂದರೆ  ಸಿನೆಮಾ ಕೂಡ ಒಂದು ಕೊಲೆಯ ಸುತ್ತಾ ಸುತ್ತುತ್ತದೆ. ವಿನ್ಸೆಂಟ್ ಹದಿಹರೆಯದ ಹುಡುಗ. ಆತನಿಗೆ ಸೈಬರ್ ಸೆಂಟರ್ ನಲ್ಲಿ ರೆಬೆಕ್ಕಾ ಭೇಟಿಯಾಗುತ್ತಾಳೆ .ಇಬ್ಬರೂ ಬಹುಬೇಗ ಹತ್ತಿರವಾಗುತ್ತಾರೆ. ಅದು ಪ್ರೀತಿಗೂ ತಿರುಗುತ್ತದೆ. ಆದರೆ ಎರಡು ತಿಂಗಳ ನಂತರ ವಿನ್ಸೆಂಟ್ ಕೊಲೆಯಾಗುತ್ತದೆ. ಆತನನ್ನು ಚೆನ್ನಾಗಿ ಹಿಂಸೆ ಮಾಡಿ ಕೊಲೆ ಮಾಡಿರುತ್ತಾರೆ. ರೆಬೆಕ್ಕಾ ಕಾಣೆಯಾಗುತ್ತಾಳೆ . ಇದನ್ನು  ಪತ್ತೆ ಮಾಡಲು ಬರುವ ಪತ್ತೆದಾರರಾದ ಹೆರ್ವೆ ಮತ್ತು ಕರೀನ್ ಗೆ ಕೊಲೆಯಾ ನಿಗೂಢತೆ ಕುತೂಹಲ ತರಿಸುತ್ತದೆ. ಅದನ್ನು ಬೇಧಿಸುತ್ತಾ ಹೋದಂತೆ ಇನ್ನೂ ಗೊಂದಲಗಳು ಹೆಚ್ಚಾಗುತ್ತದೆ. ಬಿಡಿಸಿದಷ್ಟೂ ಸಿಕ್ಕಾಗುತ್ತದೆ...ಮುಂದೆ ಕುತೂಹಲಕರವಾದ ಸತ್ಯ ಚಿತ್ರದಲ್ಲಿನ ಪತ್ತೆದಾರರಿಗೂ, ಪ್ರೇಕ್ಷಕರಿಗೂ ಎದುರಾಗುತ್ತದೆ.
ಕೇವಲ ಒಂದೂವರೆ ಘಂಟೆಯಷ್ಟು ಅವಧಿಯ ಈ ಸಿನೆಮಾ ಆರಾಮವಾಗಿ ನೋಡಿಸಿಕೊಂಡು ಹೋಗಿಬಿಡುತ್ತದೆ.
ಅಂದಹಾಗೆ ನನ್ನ ಫೇಸ್ ಬುಕ್ ಪಾಸ್ ವರ್ಡ್ ಕಳೆದುಹೋಗಿದೆ. ಎಷ್ಟು ಪತ್ತೆ ಮಾಡಿದರೂ ಇನ್ನೂ ನಿಗೂಢವಾಗಿಯೇ ಇದೆ. .

Tuesday, September 25, 2012

ಬರ್ಫೀ ನೋಡಿದಿರಾ?


ಬರ್ಫೀ ನೋಡಿಲ್ಲವಾದರೆ ಒಮ್ಮೆ ನೋಡಿ. ಮರ್ಫೀ ಅಥವಾ ಬರ್ಫೀ ನಾಯಕನ ಹೆಸರು. ಮೂಕ ಮತ್ತು ಕಿವುಡ. ಅದ್ದರಿಂದ ಇಡೀ ಸಿನೆಮಾದಲ್ಲಿ ನಾಯಕನಿಗೆ ಮಾತೆ  ಇಲ್ಲ .ಆದರೆ ಆತ ತನ್ನ ಆಂಗಿಕ ಅಭಿನಯದಿಂದ , ಅದ್ಭುತವಾದ ಮುಗುಳ್ನಗೆಯಿಂದ ಅವನ ಭಾವನೆಯನ್ನ , ಮಾತುಗಳನ್ನು ಮಾತಿಗಿಂತ ಪರಿಣಾಮಕಾರಿಯಾಗಿ ಹೇಳುತ್ತಾನೆ. ಸಿನೆಮಾ ನೋಡುತ್ತಾ ನೋಡುತ್ತಾ ಮಾತಿಲ್ಲ ಎನ್ನುವ ಭಾವ ಮನಸಿಗೆ ಬರುವುದೇ ಇಲ್ಲ. ಕಥೆ, ನಿರೂಪಣೆ, ಮುಖ್ಯವಾಗಿ ಅಭಿನಯ ನಮ್ಮನ್ನು ಬೇರೇನೂ ಯೋಚಿಸಲು ಬಿಡದೆ ಹಾಗೆ ಕುರ್ಚಿಗೆ ಕೂರಿಸಿಬಿಡುತ್ತದೆ. ಇಲ್ಲಿ ಪ್ರಿಯಾಂಕ ಚೋಪ್ರರದು  ಕೂಡ ತುಂಬಾ ಭಿನ್ನವಾದ ಪಾತ್ರ. ಇಬ್ಬರೂ ಕೊನೆಯಲ್ಲಿ ಪುನರ್ಮಿಲನವಾಗುವ ಸನ್ನಿವೇಶ ನಿಮ್ಮ ಕಣ್ಣಲ್ಲೊಂದು ಹನಿ ತರಿಸದಿದ್ದರೆ ಕೇಳಿ. ಹಾಗಂತ ಅದು ನೋವಿನ ಹನಿಯಲ್ಲ ..ಆನಂದ ಭಾಷ್ಪ. ಹೌದು ಕೆಲವು ಸಿನೆಮಾಗಳ ಬಗ್ಗೆ ಬರೆಯಲು ಕುಳಿತಾಗಲೆಲ್ಲಾ ಆ ಸಿನೆಮಾದ ಭಾವ ನನ್ನನ್ನು ಆವರಿಸಿಬಿಡುತ್ತದೆ. ಏನೇ ಬರೆದರೂ ಅದು ಸಿನೆಮಾಕ್ಕೆ ಸಾಟಿಯಿಲ್ಲವೇನೂ ಅನಿಸಿಬಿಡುತ್ತದೆ . ಹಾಗಂತ ಸುಖಾಸುಮ್ಮನೆ ಹೊಗಳಿದರೂ ಅತೀ ಎನಿಸುತ್ತದೆ. ಅಂತಹ ಒಂದು ಸಿನೆಮಾ ಬರ್ಫೀ. ಮೂರು ಮುಖ್ಯ ಪಾತ್ರಗಳು. ಒಂದು ಅತ್ಯುತ್ತಮ ಪ್ರೇಮಕಥೆ ಬರ್ಫೀ ಚಿತ್ರದ್ದು. ಕಿವುಡ ಮೂಕ ಬರ್ಫೀಯ ಮೊದಲ ಪ್ರೀತಿ ಭಗ್ನವಾಗುತ್ತದೆ. ಆದರೆ ಆತನ ಆತ್ಮ ವಿಶ್ವಾಸ ಭರವಸೆ ನಮ್ಮಲ್ಲಿ ಅಚ್ಚರಿ ಮೂಡಿಸುತ್ತದೆ. ತನ್ನ ಅವಗುಣಗಳನ್ನು ಚೆನ್ನಾಗಿಯೇ ಮನವರಿಕೆ ಮಾಡಿಕೊಂಡು, ನಾಯಕಿಯನ್ನು ನಗುನಗುತ್ತಲೇ ಬೀಳ್ಕೊಡುತ್ತಾನೆ .ತಂದೆಯ ಆಪರೇಷನ್ ಗೆ ಲಕ್ಷಲಕ್ಷ ಹಣದ ಅವಶ್ಯಕತೆ ಬಂದಾಗ ಬರ್ಫೀ ಬ್ಯಾಂಕ್  ದರೋಡೆ ಮಾಡುವ ವಿಫಲ ಪ್ರಯತ್ನ ಮಾಡುತ್ತಾನೆ .. ಆನಂತರ ತನ್ನ ಬಾಲ್ಯದ ಗೆಳತಿ  ಪ್ರಿಯಾಂಕ ಚೋಪ್ರಳನ್ನು ಅಪಹರಣ ಮಾಡುವ ನಿರ್ಧಾರ ಕೈಗೊಳ್ಳುತ್ತಾನೆ. ಮುಂದೆ ಅ ನಿರ್ಧಾರವೇ  ಬರ್ಫೀಯ ಜೀವನದಲ್ಲಿ ಅನೂಹ್ಯ ಘಟನೆಗಳಿಗೆ ಕಾರಣವಾದರೆ ಪ್ರೇಕ್ಷಕರಿಗೆ ಒಂದು ಅದ್ಭುತ ಅನುಭವ ಕೊಡುತ್ತದೆ.
ಸಿನೆಮಾದುದ್ದಕೂ ನಗಿಸುವ , ನಗಿಸುತ್ತಲೇ ಕಣ್ತುಂಬಿಸುವ ನಿರ್ದೇಶಕ  ಅನುರಾಗ್ ಬಸುಗೆ ಒಂದು ಸಲ್ಯೂಟ್.
 ಕುಚ್ ಥೋ ಹೈ  ಚಿತ್ರದ ಮೂಲಕ ಬೆಳಕಿಗೆ ಬಂದ ನಿರ್ದೇಶಕ ಅನುರಾಗ್ ಬಸು.ಆನಂತರ 'ಸಾಯಾ' ನಿರ್ದೇಶಿಸಿದರೂ ಅದು  ನಿರೀಕ್ಷಿಸಿದಷ್ಟು ಚೆನ್ನಾಗಿರಲಿಲ್ಲ ..ಇವೆರೆಡು ಚಿತ್ರಗಳೂ ವಿದೇಶಿ ಸಿನಿಮಾಗಳಿಂದ ಸ್ಪೂರ್ತಿ ಪಡೆದ ಚಿತ್ರಗಳೇ..ಮೊದಲ ಚಿತ್ರ ಕುಚ್ ತೋ ಹೈ ಹಾಲಿವುಡಿನ ಐ  ನೋ ವಾಟ್ ಯೂ  ಡಿಡ್  ಲಾಸ್ಟ್ ಸಮ್ಮರ್ ಚಿತ್ರದಿಂದ ಪ್ರೆರೇಪಣೆಯಾದರೆ 'ಸಾಯ ' ಡ್ರಾಗನ್ ಪ್ಲೈ ಚಿತ್ರದ ನಕಲು.ಆಮೇಲೆ ಬಂದ, ಅತಿ ದೊಡ್ಡ ಯಶಸ್ಸು ಕಂಡ ಮರ್ಡರ್ ಕೂಡ ಖ್ಯಾತ ನಿದೇಶಕ ಅಡ್ರಿಯನ್ ಲಿನ್  ನಿರ್ದೇಶನದ ಅನ್ ಪೈತ್ ಫುಲ್   ಚಿತ್ರದಿಂದ ಸ್ಪೂರ್ತಿಗೊಂಡಿದ್ದು. ಅದರೂ ಅದನ್ನು ಇನ್ನಷ್ಟು ರಂಜಕವಾಗಿ, ಶೃಂಗಾರಮಯವಾಗಿ ತೋರಿಸಿದ್ದು ಅನುರಾಗ್ ಬಸುನ ಹೆಗ್ಗಳಿಕೆ ..ಆನಂತರ 1981ರ ಆರ್ಥರ್ ಚಿತ್ರವನ್ನು ಭಾರತೀಯ ತೆರೆಗೆ ತುಮ್ಸಾ ನಹಿ ದೇಖ ಎನ್ನುವ ಹೆಸರಲ್ಲಿ ಅನುವಾದಿಸಿದರೂ ಅದೂ ಕೂಡ ಗಮನೀಯ ಪ್ರಯತ್ನ ಎನಿಸಲಿಲ್ಲ. ಆನಂತರ ಬಂದ ಗ್ಯಾಂಗ್ ಸ್ಟರ್ ವಿಮರ್ಶಕರಿಂದಲೋ ಪ್ರೇಕ್ಷಕರಿಂದಲೂ ಮೆಚ್ಚಿಸಿಕೊಂಡ ಚಿತ್ರ. ನಿಜಕ್ಕೂ ಈ ಸಿನಿಮಾ ಒಂದು ಒಳ್ಳೆಯ ಪ್ರಯತ್ನ ಎನ್ನಬಹುದು ..ಅಪಾರ್ಟ್ ಮೆಂಟ್[1960], ಪ್ಲೇಯಿಂಗ್ ಬೈ ಹಾರ್ಟ್[1998], ಇನ್ನೋಸೆನ್ಸ್[2000], ಡೇವಿಡ್ ಲೀನ್ ನಿರ್ದೇಶನದ ಬ್ರೀಫ್ ಎನ್ಕೌಂಟರ್ [1945] ನಾಲ್ಕು ಚಿತ್ರಗಳನ್ನಾಧರಿಸಿದ ಚಿತ್ರವೆ ಲೈಫ್ ಇನ್ ಅ ಮೆಟ್ರೋ. ನನಗೆ ಸಿನಿಮಾ ನೋಡುತ್ತಾ ನೋಡುತ್ತಾ ಇದು ಆ ಸಿನಿಮಾದ್ದಲ್ಲವಾ..ಇದು ಈ ಸಿನಿಮಾದ್ದಲ್ಲವಾ ? ಎನಿಸಲಿಕ್ಕೆ ಶುರುವಾದರೂ ಆ ನಾಲ್ಕು ಕಥೆಗಳನ್ನು   ಬಸು ಜೋಡಿಸಿದ ರೀತಿಗೆ ನಿಜಕ್ಕೂ ಮಾರುಹೋಗಿದ್ದೆ.ಎಲ್ಲೂ ಯಾವುದೂ ಅತಿಯಾಗದಂತೆ ಬಸು ಚಿತ್ರಕಥೆಯಲ್ಲಿ
  ಗಮನಹರಿಸಿರುವುದಕ್ಕೆ ಈ ಚಿತ್ರವೇ ಸಾಕ್ಷಿ. ರೀಮೇಕ್ ಆಗಲಿ ಅಥವಾ  ಸ್ಪೂರ್ತಿಯಿಂದ ತಯಾರಾದ ಚಿತ್ರವೇ ಆಗಲಿ ಅದು ಫ್ರೇಮ್ ಟು  ಫ್ರೇಮ್ ಇದ್ದಾಗ ಬೇಸರವಾಗುವುದು ಸಹಜ. ಆದರೆ ಬುದ್ಧಿವಂತಿಕೆಯಿಂದ ಅದನ್ನು ನಮ್ಮ ನೆಲಕ್ಕೆ ಒಗ್ಗಿಸುವುದಿದೆಯಲ್ಲಾ ಅದು ಗ್ರೇಟ್ ಎಂದೇ ಹೇಳಬಹುದು.
 ಈಗ ಬರ್ಫೀ ಯಲ್ಲೂ ಹಲವಾರು ಸಿನೆಮಾಗಳ ದೃಶ್ಯಗಳನ್ನು  ಯಥಾವತ್ತು ನಕಲಿಸಿರುವುದನ್ನು ಕಾಣಬಹುದು....
ಅಂದಹಾಗೆ ತುಮ್ಸಾ ನಹೀ ದೇಖ ಎನ್ನುವ ಸಿನೆಮಾ ನಿರ್ದೇಶಿಸುವಾಗ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಸುಗೆ ವೈದ್ಯರು ಎರಡು ತಿಂಗಳಷ್ಟೇ ಬದುಕುವುದು ಎಂದು ಹೇಳಿದ್ದರಂತೆ ...ಆನಂತರ ಕೀಮೋಥೆರಪಿ ಯಾ ಸಹಾಯದಿಂದ ಬಸು ಗುಣಮುಖರಾದರು.
ಸಿನಿಮಾ ಪ್ರಶಸ್ತಿಗಳ ಜೊತೆಗೆ ಅಮೇರಿಕನ್ ಕಾನ್ಸೆರ್  ಸೊಸೈಟಿಯಿಂದ ಪ್ರಶಸ್ತಿ ಪಡೆದಿದ್ದಾರೆ ಅನುರಾಗ್ ಬಸು.

Monday, September 24, 2012

ಟೈಂ ಪಾಸ್ ಫಿಲಂಸ್ - 1

ಒಂದಷ್ಟು ಸಿನಿಮಾಗಳಿವೆ. ಸುಮ್ನೆ ನೋಡುತ್ತಾ ಹೋದಂತೆ ನೋಡಿಸಿಕೊಂಡು  ಹೋಗುತ್ತವೆ. ಮಧ್ಯ ಮಧ್ಯ ಸ್ವಲ್ಪ ಬೇಸರ ತರಿಸಿದರೂ ನೋಡೋಣ ಮುಂದೇನಾಗುತ್ತದೋ ಎಂದು ಕುಳಿತುಬಿಡುತ್ತೇನೆ. ನೋಡಿಯಾದ ಮೇಲೆ ಅದೇನು ಅಷ್ಟು ಕಾಡುವುದಿಲ್ಲ. ನೋಡಿದ ತೃಪ್ತಿಯೂ ಇರುವುದಿಲ್ಲ. ನನ್ನ ಸ್ವಭಾವ ಏನೆಂದರೆ ನಾನು ಯಾವ ಸಿನಿಮಾವನ್ನೂ ಅರ್ಧ ನೋಡುವುದಿಲ್ಲ. ಬೋರಾಗಲಿ, ಬೇಜಾರಾಗಲಿ ಪೂರ್ತ ನೋಡೇ ನೋಡುತ್ತೇನೆ. ಆ  ಚಿತ್ರದ ನಿರ್ದೇಶಕನನ್ನಾಗಲಿ ನಿರ್ಮಾಪಕನನ್ನಾಗಲಿ ಬೈಯಲು ಅಥವಾ ಹೊಗಳಲಾಗಲಿ ನನಗೆ ಸಂಪೂರ್ಣ ಹಕ್ಕು ಬೇಕಲ್ಲ ಅದಕ್ಕೆ. ಆಮೇಲೆ ಕೆಲವು ಸಿನಿಮಾಗಳೂ  ಅಷ್ಟೇ ಪ್ರಾರಂಭದಲ್ಲಿ ಸುಮಾರು ಎನಿಸಿದರೂ ಬರುತ್ತಾ ನಮ್ಮ ನ್ನು ಕುರ್ಚಿಗೆ ಅಂಟಿಸಿಬಿಡುತ್ತವೆ.
ಮೊನ್ನೆ ಬ್ಲೈಂಡ್ ಎನ್ನುವ ಸಿನೆಮಾ ನೋಡಿದೆ. ಕೊರೆಯನ್ ಭಾಷೆಯ ಚಲನಚಿತ್ರ ಅದು. ಚಿತ್ರದ ನಾಯಕಿ ಪೋಲಿಸ್ ಅಧಿಕಾರಿ. ಆಕೆಯ ಸಾಕು ತಮ್ಮನಿಗೆ ಡ್ಯಾನ್ಸ್ ರಾಪ್ ಸಂಗೀತದ ಹುಚ್ಚು . ತಾನು ಸಂಗೀತದಲ್ಲೇ, ಡ್ಯಾನ್ಸಿನಲ್ಲೇ ಏನಾದರೂ ಸಾಧಿಸಬೇಕೆ0ಬಾಸೆ ಆತನದು. ಆದರೆ ನಾಯಕಿಗೆ ಇಷ್ಟವಿಲ್ಲ ಅದೊಂದು ದಿನ ಆತನನ್ನು ಕರೆದುಕೊಂಡು ಬರುವಾಗ ಆತ  ಜೀಪಿನಿಂದ ಜಿಗಿದು ಹೋಗದಿರಲೆಂದು ಆತನ ಒಂದು ಕೈಯಿಗೆ ಕೊಳ ಹಾಕಿ ಅದನ್ನು ವಾಹನಕ್ಕೆ ಬಿಗಿಯುತ್ತಾಳೆ. ಕರೆದುಕೊಂಡು ಬರುವಾಗ ಅವಳ ವಾಹನಕ್ಕೆ ಮತ್ತೊಂದು ವಾಹನ ಢಿಕ್ಕಿ ಹೊಡೆದು ಹೋಗಿಬಿಡುತ್ತದೆ. ನಾಯಕಿ ಜೀಪಿನಿಂದ ಹೊರಗೆಸೆಯಲ್ಪಡುತ್ತಾಳೆ.ವಾಹನ ಸೇತುವೆಯ ತುದಿಗೆ ನಿಂತು ಆಗಲೋ ಈಗಲೋ ಬೀಳುವಂತಾದಾಗ ತಮ್ಮ ತನ್ನ ಕೈಕೋಳದಿಂದ ಮುಕ್ತನಾಗುವುದು ಸಾಧ್ಯವಾಗುವುದಿಲ್ಲ ..ನಾಯಕಿಗೂ ಬಲವಾದ ಪೆಟ್ಟು ಬಿದ್ದಿರುತ್ತದೆ. ಆಕೆಯ ಕಣ್ಣುಮುಂದೆಯೇ ಜೀಪು ತಮ್ಮನ ಸಮೇತ ಕೆಳಬೀಳುತ್ತದೆ. ಆತ  ಸಾವನ್ನಪ್ಪುತ್ತಾನೆ. ನಾಯಕಿಯ ಕಣ್ಣು ಹೋಗಿ ಕುರುಡಾಗುತ್ತಾಳೆ.ಜೊತೆಗೆ ಅವಳ ಕೊರಗು ಹಾಗೆ ಉಳಿದುಬಿಡುತ್ತದೆ. ಆ ವಾಹನ ಯಾವುದೆಂದು ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ. ಅದರ ಬಗ್ಗೆ ವಿವರ ಹೇಳಿದರೂ ಪೋಲಿಸ್ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆಮೇಲೆ ನಾಯಕಿ ಕುರುಡಿಯಾದ್ದರಿಂದ ಇಲಾಖೆ ಅವಳನ್ನು ಕೆಲಸದಿಂದ ತೆಗೆದುಹಾಕುತ್ತದೆ.
ಅದೊಂದು ದಿನ ಆಕೆಗೆ  ಅದೇ ಹಿಟ್ ಅಂಡ್ ರನ್ ಕೇಸ್ ನ ವ್ಯಕ್ತಿಯನ್ನು ಆಕಸ್ಮಿಕವಾಗಿ ಭೇಟಿಮಾಡುವ ಸಂದರ್ಭ ಬರುತ್ತದೆ...ತನ್ನ   ಬುದ್ದಿವಂತಿಕೆಯಿಂದಾಗಿ ಅದರ ಬೆನ್ನೆತ್ತುವ ನಾಯಕಿ ಒಂದು ದೊಡ್ಡ ರಹಸ್ಯವನ್ನೇ ಬಯಲಿಗೆಳೆಯುತ್ತಾಳೆ. ಅಪರಾಧಿಯನ್ನು ಕಂಡು ಹಿಡಿಯುತ್ತಾಳೆ ..
ಇದು ಚಿತ್ರದ ಕಥೆ. ಪ್ರಾರಂಭದಲ್ಲಿ ಸ್ವಲ್ಪ ಬೋರ್ ಎನಿಸುತ್ತದೆ.  ಆದರೆ ಮೊದಲ ಇಪ್ಪತ್ತು ನಿಮಿಷ ಕಳೆದ ಮೇಲೆ ಸಿನೆಮಾ ತುಂಬಾ ಇಂಟರೆಸ್ಟಿಂಗ್ ಎನಿಸಿಕೊಳ್ಳುತ್ತದೆ.