Thursday, September 27, 2012

ಕಳೆದು ಹೋದದ್ದು ಪಾಸ್ ವರ್ಡ್, ಸಿಕ್ಕಿದ್ದು ಮಾತ್ರ ಕೊಲೆಗಾರರು..

ಯುದ್ಧಾನಂತರದ ಬ್ರಿಟನ್ ಪರಿಸ್ಥಿತಿ ಹೇಗಿದೆ..? ಅಲ್ಲಿನ ಬೆಳವಣಿಗೆಗಳೇನು..ಮುಂತಾದವುಗಳ ಬಗ್ಗೆ ಪತ್ರಿಕೆಗೆ ಬರೆಯುವ ಕೆಲಸವನ್ನು ನನಗೆ ವಹಿಸಲಾಯಿತು.ನನಗೆ ಆ ಕೆಲಸವೇನೂ ಬೇಕಾಗಿರಲಿಲ್ಲ .ಇಂಗ್ಲೆಂಡಿಗೆ ಹೋಗಿ ಅದನ್ನೆಲ್ಲಾ ಒಂದಷ್ಟು ಅದ್ಯಯನ ಮಾಡಿ ಬರೆದು ಬೀಸಾಕುವುದು ಅಂತಹ ಕಷ್ಟದ ಕೆಲಸವೂ ಅಲ್ಲ. ಹಾಗಾಗಿ ನಾನು ಅಲ್ಲಿಗೆ ಹೋಗಲು ಒಪ್ಪಿಕೊಂಡೆನಾದರೂ ಅಲ್ಲಿ ಹೋಗಲು ಬೇರೆಯದೇ ಆದ ಕಾರಣವಿತ್ತು..ಅದು 'ಆಕೆ'. ನಾನು ಮೊದಲು ಇಂಗ್ಲೆಂಡಿನಲ್ಲಿದ್ದಾಗ ನನ್ನ ಜೊತೆ ಇದ್ದವಳು. ಹಾಗಂತ ಆಕೆ ನನ್ನ ಪ್ರೇಮಿಯಲ್ಲ. ನಾವಿಬ್ಬರು ಸುಮಾರು ಎರಡು ವರ್ಷ ಜೊತೆಗಿದ್ದರೂ ಯಾವ ಕಮಿಟ್ ಮೆಂಟುಗಳಿರಲಿಲ್ಲ ಆಕೆಯ ಬಗ್ಗೆಯಾಗಲಿ, ಆಕೆಯ ಹಿನ್ನೆಲೆಯಾಗಲಿ ನನಗೆ ಗೊತ್ತಿರಲಿಲ್ಲ  ಎನ್ನುವುದಕ್ಕಿಂತ ಅದನ್ನು ಆಕೆ ಹೇಳಿರಲಿಲ್ಲ .ನಾನೇ ಕೆಲವೊಮ್ಮೆ ಆಸಕ್ತಿ ತೋರಿಸಿದರೂ ಆಕೆ ಏನನ್ನೂ ಹೇಳದೆ ಮಾತು ತಿರುಗಿಸುತ್ತಿದ್ದಳು. ಆದರೆ ಆಕೆಯೊಂದಗಿನ ಒಡನಾಟ ಮಾತ್ರ ಅದೆಷ್ಟು ಅಪ್ಯಾಯಮಾನವಾಗಿತ್ತೆಂದರೆ  ಆನಂತರದ ದಿನಗಳಲ್ಲಿ ನಾನು ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಆಕೆಯ ಮೊದಲ ಭೇಟಿಯಲ್ಲೇ ನನಗೆ ಏನೋ ಒಂದು ರೀತಿಯಾದ್ದದ್ದಂತೂ ಸತ್ಯ. ನಮ್ಮ ಅಗಲಿಕೆಯ ದಿನವೂ ಅಷ್ಟೇ ವಿಚಿತ್ರವಾಗಿತ್ತು. ಅಸಾಮಾನ್ಯವಾಗಿತ್ತು. ನಾನು ಆ ಊರನ್ನು ಬಿಟ್ಟು, ಆಕೆಯನ್ನು ಬಿಟ್ಟು ದೂರ ಬಹುದೂರ ಹೋಗುತ್ತೇನೆಂಬ ಭಾವ ಆವತ್ತು ನಮ್ಮಿಬ್ಬರಲ್ಲೂ ಇರಲಿಲ್ಲ . ಆಕೆಯಂತೂ  ನಾನೆಲ್ಲೋ ಹೊರಗೆ ತರಕಾರಿ, ಹಾಲು ತರಲು ಅಂಗಡಿಗೆ  ಹೋಗುತ್ತಿರುವೆನೇನೋ ಎನ್ನುವಂತೆ  ಕೆನ್ನೆಗೊಂದು ಹೂಮುತ್ತನಿತ್ತು ಬೀಳ್ಕೊಟ್ಟಿದ್ದಳು.
 ಆನಂತರದ ದಿನಗಳಲ್ಲಿ ಆಕೆ ನನ್ನನ್ನು ಬಹುವಾಗಿ ಕಾಡಿದ್ದಳು.ಆಕೆಗೊಂದು ಪತ್ರ ಬರೆಯಲಾ, ಫೋನ್ ಮಾಡಲಾ ಎನಿಸಿದ್ದರೂ ಆ ಪ್ರಯತ್ನವನ್ನು ಮಾಡಿರಲಿಲ್ಲ .ಅವಳನ್ನು ಮಿಸ್ ಮಾಡಿಕೊಳ್ಳಬಾರದೆಂದು ಎಷ್ಟೇ ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ .ಈಗ ಮತ್ತೆ ಆಕೆಯನ್ನು ಭೇಟಿಮಾಡುವ ಸದಾವಕಾಶ ಒದಗಿಬಂದಿತ್ತು. ಸೀದಾ ಇಂಗ್ಲೆಂಡಿಗೆ ಬಂದಿಳಿದಾಗ ನನಗೆ 'ಆಕೆ'ಯನ್ನು ಹೊರೆತುಪಡಿಸಿ ಬೇರೇನೂ ನೆನಪಿಗೆ ಬರಲಿಲ್ಲವೆಂದೆ ಹೇಳಬಹುದು.ಹೋಟೆಲ್ಲಿನಲ್ಲಿ ಚೆಕ್ ಇನ್ ಆದ ಮೇಲೆ ತಕ್ಷಣ ಆಕೆಯ ಅಪಾರ್ಟ್ಮೆಂಟಿಗೆ ಧಾವಿಸಿದೆ. ಎದೆಯಲ್ಲಿ ಅವಲಕ್ಕಿ ಕುಟ್ಟಿ ದಂತಾಗುತ್ತಿತ್ತು ..ಅದೆಷ್ಟು ವೇಗವಾಗಿ ಆಕೆಯ ಬಾಗಿಲಿನ ಮುಂದೆ ನಿಂತಿದ್ದೆ  ಎಂದರೆ  ಎಲ್ಲವೂ ಕ್ಷಣಾರ್ಧದಲ್ಲಿ ನಡೆದಂತೆ ಭಾಸವಾಗಿತ್ತು. ಏನೇನೋ ಕಲ್ಪನೆಯಿಂದ ಉದ್ವೇಗದಿಂದ ಬೆಲ್ ಮಾಡಿದೆ...ಆದರೆ ಎಷ್ಟು ಬೆಲ್ ಮಾಡಿದರೂ ಯಾರು ಬಾಗಿಲು ತೆರೆಯಲಿಲ್ಲ...ಎಲ್ಲಾದರೂ ಹೋಗಿರಬಹುದಾ..?
ಪಿಚ್ಚೆನಿಸಿತು. ಅಷ್ಟರಲ್ಲಿ ಹೊರಗೆ ಬಂದ  ಪಕ್ಕದ ಮನೆಯ ಡುಮ್ಮ 'ಯಾರು ಬೇಕಿತ್ತು ' ಎಂದ . ನಾನು ಹೇಳಿದೆ. 'ತುಂಬಾ ತಡವಾಯಿತು ನೀವು ಬಂದಿದ್ದು. ಆಕೆ ಆತ್ಮಹತ್ಯೆ ಮಾಡಿಕೊಂಡು ಸತ್ತುಹೋದಳು..' ಎಂದ. ನನಗೆ ನಿಂತ ನೆಲ ಕುಸಿದಂತಾಯಿತು...ಆದರೂ ಬುದ್ಧಿ ಮಾತ್ರ ವಿವೇಚನೆಯಿಂದ ವರ್ತಿಸಿತು....ಏನೋ ಆಗಿದೆ...ನನಗೆ ಸ್ಪಷ್ಟವಾಗಿ ಗೊತ್ತಿತ್ತು...ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೌದು..ಆಕೆ ಗಟ್ಟಿಗಿತ್ತಿ...ಹಾಗಾದರೆ ಏನು ನಡೆದಿರಬಹುದು?.
 ಮೊನ್ನೆ ಮಂಜುನಾಥ್ ಮನೆಗೆ ನಮ್ಮ ಸಿನಿಮಾ ಪುಸ್ತಕದ ವಿಚಾರವಾಗಿ ಮಾತನಾಡಲು ಹೋಗಿದ್ದಾಗ, ಲೀಲಾ ಮಂಜುನಾಥ್ ಹತ್ತಿರ ಜೇಮ್ಸ್ ಹ್ಯಾಡ್ಲಿ ಚೇಸ್ ಪುಸ್ತಕ ನೋಡಿದೆ. ಅವರು ಒಳ್ಳೆ ಓದುಗರೂ, ಅತ್ಯುತ್ತಮ ವಿಮರ್ಶಕಿಯೂ ಹೌದು. ನನಗೆ ಚೇಸ್ ಪುಸ್ತಕಗಳು ಯಾವಾಗಲೂ ಇಷ್ಟ. ಆತನ ಬರಹ ಓದಿಸಿಕೊಂಡಷ್ಟು ವೇಗವಾಗಿ ಬೇರಾವ ಲೇಖಕನ ಬರಹಗಳೂ ಓದಿಸಿಕೊಂಡಿಲ್ಲ. ಹಾಗಾಗಿ ಅದನ್ನು ಎರವಲು ಪಡೆದೆ. ಮತ್ತು ಅದರ ನಾಳೆಯೇ ಓದಿಬಿಟ್ಟೆ ಎನ್ನುವುದಕ್ಕಿಂತ ಆ ಪುಸ್ತಕ  ಓದಿಸಿಕೊಂಡಿತು ಎನ್ನುವುದು ಸೂಕ್ತ.
ಕಾದಂಬರಿಯ ಹೆಸರು ನೋ ಬುಸಿನೆಸ್ ಆಫ್ ಮೈನ್  ಎಂಬುದು. ಹೀಗೆ ಪ್ರಾರಂಭವಾಗುವ ಕಥೆ ಪುಟದಿಂದ ಪುಟಕ್ಕೆ ಕುತೂಹಲ ಕೆರಳಿಸಿಕೊಳ್ಳುತ್ತಾ ಸಾಗುತ್ತದೆ. ಕೊನೆಯ ಪುಟದವರೆಗೂ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ.
ಫ್ರೆಂಚ್ ಭಾಷೆಯ ಕಾಂಪ್ಲಿಸಸ್ ಚಿತ್ರ ನನಗೆ ಸಿಕ್ಕಿದ್ದು ಆಕಸ್ಮಿಕವಾಗಿ. ಆದರೆ ಜೇಮ್ಸ್ ಹ್ಯಾಡ್ಲಿ ಚೇಸ್ ನ ಕಾದಂಬರಿ ಮತ್ತು  ಈ ಸಿನೆಮಾ ಎರಡು ಒಂದೇ ಸಾರಿ ನೋಡಿದ್ದು ಮಾತ್ರ ಕಾಕತಾಳೀಯ ಎನ್ನಬಹುದು.ಯಾಕೆಂದರೆ  ಸಿನೆಮಾ ಕೂಡ ಒಂದು ಕೊಲೆಯ ಸುತ್ತಾ ಸುತ್ತುತ್ತದೆ. ವಿನ್ಸೆಂಟ್ ಹದಿಹರೆಯದ ಹುಡುಗ. ಆತನಿಗೆ ಸೈಬರ್ ಸೆಂಟರ್ ನಲ್ಲಿ ರೆಬೆಕ್ಕಾ ಭೇಟಿಯಾಗುತ್ತಾಳೆ .ಇಬ್ಬರೂ ಬಹುಬೇಗ ಹತ್ತಿರವಾಗುತ್ತಾರೆ. ಅದು ಪ್ರೀತಿಗೂ ತಿರುಗುತ್ತದೆ. ಆದರೆ ಎರಡು ತಿಂಗಳ ನಂತರ ವಿನ್ಸೆಂಟ್ ಕೊಲೆಯಾಗುತ್ತದೆ. ಆತನನ್ನು ಚೆನ್ನಾಗಿ ಹಿಂಸೆ ಮಾಡಿ ಕೊಲೆ ಮಾಡಿರುತ್ತಾರೆ. ರೆಬೆಕ್ಕಾ ಕಾಣೆಯಾಗುತ್ತಾಳೆ . ಇದನ್ನು  ಪತ್ತೆ ಮಾಡಲು ಬರುವ ಪತ್ತೆದಾರರಾದ ಹೆರ್ವೆ ಮತ್ತು ಕರೀನ್ ಗೆ ಕೊಲೆಯಾ ನಿಗೂಢತೆ ಕುತೂಹಲ ತರಿಸುತ್ತದೆ. ಅದನ್ನು ಬೇಧಿಸುತ್ತಾ ಹೋದಂತೆ ಇನ್ನೂ ಗೊಂದಲಗಳು ಹೆಚ್ಚಾಗುತ್ತದೆ. ಬಿಡಿಸಿದಷ್ಟೂ ಸಿಕ್ಕಾಗುತ್ತದೆ...ಮುಂದೆ ಕುತೂಹಲಕರವಾದ ಸತ್ಯ ಚಿತ್ರದಲ್ಲಿನ ಪತ್ತೆದಾರರಿಗೂ, ಪ್ರೇಕ್ಷಕರಿಗೂ ಎದುರಾಗುತ್ತದೆ.
ಕೇವಲ ಒಂದೂವರೆ ಘಂಟೆಯಷ್ಟು ಅವಧಿಯ ಈ ಸಿನೆಮಾ ಆರಾಮವಾಗಿ ನೋಡಿಸಿಕೊಂಡು ಹೋಗಿಬಿಡುತ್ತದೆ.
ಅಂದಹಾಗೆ ನನ್ನ ಫೇಸ್ ಬುಕ್ ಪಾಸ್ ವರ್ಡ್ ಕಳೆದುಹೋಗಿದೆ. ಎಷ್ಟು ಪತ್ತೆ ಮಾಡಿದರೂ ಇನ್ನೂ ನಿಗೂಢವಾಗಿಯೇ ಇದೆ. .

No comments:

Post a Comment