Monday, October 8, 2012

ಇರುವುದೊಂದೇ ಬದುಕು...

ಹದಿನೈದು ದಿನಗಳು ಅದೇಗೋ ಕಳೆದುಹೋದವು. ನನ್ನ ಸಿನೆಮಾದ ಬಿಸಿಯಲ್ಲಿ ಏನನ್ನು ಬರೆಯಲು ಸಾಧ್ಯವಾಗಲಿಲ್ಲ. ಆದರೆ ಆ ದಿನಗಳಲ್ಲಿ ಕೈಗೆ ಸಿಕ್ಕಿದ್ದನ್ನು ಸಮಯ ಸಿಕ್ಕಾಗಲೆಲ್ಲಾ ನೋಡುತ್ತಿದ್ದೆ. ಕೆಲವು ಸಿನೆಮಾಗಳನ್ನು ಅದರ ಹಿನ್ನೆಲೆ ಏನನ್ನೂ ತಿಳಿಯದೆ ಸುಮ್ಮನೆ ನೋಡಿದೆ. ಅದ್ಯಾರು ನಿರ್ದೇಶಕ ಇದ್ಯಾರು ನಟ, ಅದೇನು ವಿಶೇಷಾ ಇಂಥ ಪ್ರಶ್ನೆಗಳಿಗೆಲ್ಲಾ ಉತ್ತರವೇ ಇರಲಿಲ್ಲ. ಕೆಲವಂತೂ  ಯಾವ ಭಾಷೆಯದೂ ಎಂಬುದು ಗೊತ್ತಾಗಲಿಲ್ಲ .
ಕೆಲವೊಮ್ಮೆ ನನಗೆ ಸುಖಾ ಸುಮ್ಮನೆ  ಸಿನೆಮಾಗಳು  ಸಿಕ್ಕಿ ಬಿಡುತ್ತವೆ. ಹಾಗೆಯೇ ಕೆಲವು ಪುಸ್ತಕಗಳೂ ಸಿಕ್ಕಿ ಓದಿಸಿಕೊಳ್ಳುತ್ತವೆ. 45m2 ಎನ್ನುವ ಸಿನೆಮಾ ನನಗೆ ಅದೇಗೆ ಅದೇಕೆ ಸಿಕ್ಕಿತೋ ಗೊತ್ತಿಲ್ಲ. ಗ್ರೀಕ್ ದೇಶದ ಸಿನೆಮಾ ಅದು. ಕೇವಲ ಕೆಲವೇ ಪಾತ್ರಗಳು ನಾಲ್ಕಾರು ಸ್ಥಳಗಳಲ್ಲಿ ನಡೆಯುವ ಕಥೆ. ಕಥೆ ವಿಷಯಕ್ಕೆ ಬಂದರೆ ಯುವತಿಯೊಬ್ಬಳು ಏಕಾಂಗಿಯಾಗಿ ಬದುಕಲು ಪಡುವ ಕಷ್ಟ ಸುಖಗಳ ಕಥೆಯೇ ಸಿನಿಮಾದ ಕಥೆ. ಎಲ್ಲರ ಮನೆಯಂತೆ ಆ ಮನೆಯಲ್ಲೂ ಸಮಸ್ಯೆಗಳಿವೆ.ಹಾಗೆಯೇ ತಾಯಿಗೆ ತನ್ನ ಮಗಳಿನ್ನೂ ಒಂದು ಕಡೆ ನೆಲೆಯಾಗಿಲಿಲ್ಲವಲ್ಲ, ಅವಳ ಬದುಕು ಹಸನಾಗಲಿಲ್ಲವಲ್ಲ ಎನ್ನುವ ಚಿಂತೆ ಇದೆ. ಊಟ ಮಾಡುವಾಗ , ಕೆಲಸಕ್ಕೆ ಸಿದ್ಧಳಾಗುವಾಗ ತಾಯಿಯದ್ದು ಅದೇ ಮಾತು ಅದೇ ಕಥೆ. ಅದೇ ಮಗಳಿಗೆ ಕಿರಿಕಿರಿ ಎನಿಸುತ್ತದೆ. ಅಮ್ಮ ನನ್ನನ್ನು ನೆಮ್ಮದಿಯಾಗಿ ತಿನ್ನಲು ಬಿಡುವುದಿಲ್ಲ ಎಂದೆಲ್ಲಾ ರೇಗುತ್ತಾಳೆ ಆದರೂ ತಾಯಿ ಮಾತ್ರ ತನ್ನ ಗೊಣಗಾಟ ಮುಂದುವರೆಸುತ್ತಾಳೆ  ತಾಯಿಯ ಮುಂದೆ ಬೈಯುತ್ತಾಳಾದರೂ  ನಾಯಕಿಗೂ ಅದೇ ಚಿಂತೆ. ಆ ಚಿಂತೆ ಅವಳನ್ನು  ಅದೆಷ್ಟರ ಮಟ್ಟಿಗೆ  ನುಂಗಿಹಾಕುತ್ತದೆಂದರೆ ವಿನಾಕಾರಣ ಒಂಟಿತನದಲ್ಲಿ ಕಳೆಯುವ ರೀತಿ ಮಾಡಿಬಿಡುತ್ತದೆ. ಬದುಕು ಅಸಹನೀಯವಾಗುತ್ತದೆ. ಎಲ್ಲಾದರೂ ದೂರ ಹೋಗಿಬಿಡಲಾ ಎನಿಸುತ್ತದೆ.ಆಕೆ ತನ್ನ ಮನೆಬಿಟ್ಟು ಒಂದು ಅಪಾರ್ಟ್ಮೆಂಟಿನಲ್ಲಿ ಬಾಡಿಗೆಗೆ ಮನೆ ಹಿಡಿಯುತ್ತಾಳೆ. ಅಲ್ಲೊಬ್ಬ ಕವಿ,ಕಲಾವಿದ ತನ್ನ ಒಂದಷ್ಟು ಬರಹಗಳನ್ನು ಚಿತ್ರಗಳನ್ನು ಅಲ್ಲಿಯೇ ಬಿಟ್ಟು ತನ್ನ ಕಲಾಸಕ್ತಿಯನ್ನು ಸಾಕಾರಗೊಳಿಸಿಕೊಳ್ಳಲು ದೂರ ಹೋಗಿರುತ್ತಾನೆ . ಆ ಕಲಾಕೃತಿಗಳು, ಆತನ ಬರಹಗಳು ಆಕೆಯಲ್ಲಿ ಹೊಸ ಚೈತನ್ಯ ತುಂಬುತ್ತವೆ. ಬದುಕನ್ನು ಸಹನೀಯವಾಗಿ ಮಾಡಿಬಿಡುತ್ತವೆ . ಇದಿಷ್ಟೇ ಕಥೆ. ನಿರೂಪಣೆಯೂ ತೀರಾ ಸಾದಾರಣ.ಆದರೂ ಇಂಥ ಸಿನಿಮಾಗಳನ್ನು ನೋಡುವುದರಿಂದ  ಆ ದೇಶದ ಸಂಸ್ಕೃತಿ ಮುಂತಾದವು ತಿಳಿಯುತ್ತದೆ.  .2010ರಲ್ಲಿ ಬಂದ ಈ ಚಿತ್ರದ  ಅವಧಿ ಒಂದೂವರೆ ಘಂಟೆಗಳು.ಆಧುನಿಕ ಗ್ರೀಕ್ ನ ಯುವಕ ಯುವತಿಯರ ಮನಸ್ಥಿತಿ, ಅವರ ಬದುಕನ್ನು ಚೆನ್ನಾಗಿ ತೋರಿಸುವ ಚಿತ್ರ 45m2.


No comments:

Post a Comment