Thursday, May 22, 2014

ಹೊಸ ಅನುಭವ:

ಮೊನ್ನೆ ಮೊನ್ನೆ ಕನ್ನಡಚಿತ್ರರಂಗದ ಎಂಬತ್ತು ವರ್ಷದ ಸಮಾರಂಭಕ್ಕೆ ನಾನು ಹೋಗಿದ್ದೆ. ಸುಮ್ಮೆನೆ ಅಲ್ಲಿನ ಕಾರ್ಯಾಗಾರ ಭಾಷಣ ಕೇಳುವುದರ ಜೊತೆಗೆ ನನ್ನದೇ ಪುಸ್ತಕವನ್ನು ಅಲ್ಲೊಂದಷ್ಟು ಇಟ್ಟುಕೊಂಡರೆ ಹೇಗೆ ಎಂಬ ಐಡಿಯಾ ಬಂದಿತ್ತು. ಪುಸ್ತಕದ ಪ್ರಚಾರ ಹಾಗೆಯೇ ಮಾರಾಟವಾದರೆ ಸ್ವಲ್ಪ ಹಣ ಜೇಬು ಸೇರುತ್ತದೆ ಎಂಬ ಆಸೆಯಿಂದ ಪುಸ್ತಕ ಇಟ್ಟುಕೊಳ್ಳುವ ಎಂದು ನಿರ್ಧರಿಸಿದೆ.
ನಾನು ಎಲ್ಲಾದರೂ ಹೋದಾಗ ನನ್ನನ್ನು ಸೆಳೆಯುವುದು ಪುಸ್ತಕದ ಅಂಗಡಿ ಮತ್ತು ಸಿನಿಮಾ ಡಿವಿಡಿ ಅಂಗಡಿಗಳು ಮಾತ್ರ. ಉಳಿದವೆಲ್ಲಾ ನನ್ನ ಪಾಲಿಗೆ ನಗಣ್ಯ ಅನಿಸುತ್ತವೆ. ಆದರೆ ಡಿವಿಡಿ ಅಂಗಡಿಗೆ ಹೋಗಿ ಸುಮ್ಮನೆ ಡಿವಿಡಿಗಳನ್ನೂ ನೋಡುವಂತೆ ನೋಡಿ, ಅದರ ಹಿಂಭಾಗದ ಸಾರಾಂಶವನ್ನು ಗಮನಿಸಿ, ಆಸಕ್ತಿಕರ ಎನಿಸಿದರೆ ಬೆಲೆ ನೋಡಿ, ಕೊಳ್ಳುವುದೋ ಬೇಡವೋ ಎಂಬುದನ್ನು ನಿರ್ಧರಿಸುತ್ತೇನೆ. ಡಿವಿಡಿ ಗಳನ್ನ ಮೊದಲು ನೂರರ ಸಂಖ್ಯೆಯಲ್ಲಿ ಒಮ್ಮೆಲೇ ಕೊಳ್ಳುತ್ತಿದ್ದೆ. ಈಗ ಅಂತರ್ಜಾಲದಿಂದಾಗಿ ಹಣ ಉಳಿಸುವ ದುರಾಸೆಯಲ್ಲಿದ್ದೇನೆ. ಆದರೆ ಪುಸ್ತಕದ ವಿಷಯದಲ್ಲಿ ಹಾಗಿಲ್ಲ. ಪ್ರತಿವಾರ ಒಂದಲ್ಲಾ ಒಂದು ಪುಸ್ತಕ ಕೊಂಡುಕೊಳ್ಳುತ್ತೇನೆ.
ಆದರೆ ಕೆಲವನ್ನು ಅಲ್ಲೇ ಮುನ್ನುಡಿ ಓದುವ ಪ್ರಯತ್ನ ಮಾಡಿ ಆಮೇಲೆ ಕೊಳ್ಳುವ ನಿರ್ಣಯಕ್ಕೆ ಬರುತ್ತೇನೆ. ಆದರೆ ಒಂದಷ್ಟು ಪುಸ್ತಕಗಳನ್ನು ಗುಡ್ಡೆ ಹಾಕಿಕೊಂಡು ಹೋಗಿ ಬರುವವರು, ನೋಡುವವರು ಕೊಂಡು ಕೊಳ್ಳಬಹುದಾ ಇಲ್ಲವಾ ಎಂಬುದನ್ನು ಊಹೆ ಮಾಡುತ್ತಾ  ಅವರು ಪುಸ್ತಕವನ್ನು, ಅದರ ಪುಟಗಳನ್ನೂ ತಿರುವಿ ಹಾಕುವಾಗ, ಅವರ ಮುಖಭಾವವನ್ನು ಓದಲು ಪ್ರಯತ್ನಿಸುವುದು ಒಂದು ಅದ್ಭುತ ಅನುಭವ ಎನ್ನಬಹುದು.
ನಾನು ಪುಸ್ತಕವನ್ನು ನನ್ನ ಮುಂದೆ ಮೇಜಿನ ಮೇಲೆ ಆಲಂಕಾರಿಕವಾಗಿ ಜೋಡಿಸಿ, ಅದರ ಹಿಂದುಗಡೆ ಒಂದು ಖುರ್ಚಿಯಲ್ಲಿ ಕುಳಿತು ಪುಸ್ತಕವನ್ನು ಓದುತ್ತಿದ್ದೆ. ಕೆಲವೊಮ್ಮೆ ಓದುತ್ತಿರುವವನಂತೆ ನಟಿಸುತ್ತಿದ್ದೆ.
ಸುಮಾರು ಜನ ಬರುತ್ತಿದ್ದರು. ನೋಡುತ್ತಿದ್ದರು. ಒಬ್ಬರು ವಯಸ್ಸಾದ ವ್ಯಕ್ತಿ ಬಂದವರು ಇದರಲ್ಲಿ ವಿಷ್ಣುವರ್ಧನ್ ಅಭಿನಯದ ಚಿತ್ರವಿದೆಯೇ ಎಂದು ಕೇಳಿ ಇದೆ ಎಂಬುದನ್ನು ಖಾತರಿ ಮಾಡಿಕೊಂಡು ತೆಗೆದುಕೊಂಡರು.
ಇನ್ನೊಬ್ಬರು ನೀವು 1934 ರಿಂದ 2009 ರವರೆಗಿನ ಕನ್ನಡ ಚಿತ್ರಗಳನ್ನಷ್ಟೇ ಆಯ್ಕೆ ಮಾಡಿದ್ದೀರಿ. ಯಾಕೆ ಇಡೀ ಭಾರತದ ಚಿತ್ರರಂಗದಲ್ಲಿ ಎಲ್ಲಾ ಭಾಷೆಯನ್ನೂ ಒಗ್ಗೂಡಿಸಿ ನೋಡಲೇ ಬೇಕಾದ ನೂರೊಂದು ಭಾರತೀಯ ಚಿತ್ರಗಳು ಎಂಬ ಪುಸ್ತಕ ಬರೆಯಬಾರದು ಎಂಬ ಸಲಹೆ ಪ್ರಶ್ನೆ ಕೇಳಿದ್ದರು. ಅಯ್ಯೋ ಸಾರ್, ಇಡೀ ಭಾರತದ ಚಿತ್ರಗಳನ್ನು ಬರೀ ನೂರು ನೂರು ನೋಡಲೂ ನನಗೆ ಶತಮಾನವೇ ಬೇಕಲ್ಲ ಎಂದಿದ್ದೆ ನಗುತ್ತಾ.
ಒಬ್ಬ ವ್ಯಕ್ತಿ ನೀಟಾಗಿ ಇನ್ಶರ್ಟ್ ಮಾಡಿದ್ದು ಬಂದವನೇ ಪುಸ್ತಕವನ್ನು ನೋಡಿ ಅದನ್ನು ಬಿಡಿಸಿ ನೋಡಲಾರಂಭಿಸಿದ್ದ. ನೋಡಿದವನೇ ನನ್ನ ಮುಖ ನೋಡಿ, ಏನ್ ಪುಸ್ತಕ ಬರೀತಾರೋ ದರಿದ್ರ ಎಂದ. ನಾನು ಯಾಕೆ ಸಾರ್..ಚೆನ್ನಾಗಿಲ್ಲವಾ? ಎಂದು ಕೇಳಿದ್ದಕ್ಕೆ, ನಿಮಗೆ ಈ ಲೇಖಕ ಗೊತ್ತಾ ಎಂದ. ಆತ ಪುಸ್ತಕದ ಒಳಪುಟವನ್ನು ನೋಡಿದ್ದರೂ ಅದರಲ್ಲಿನ ನನ್ನ ಫೋಟೋ ಮತ್ತು ಸಾಕ್ಷಾತ್ ನನಗೂnanagoo ಅಜಗಜಾಂತರ ವ್ಯತ್ಯಾಸವಿತ್ತು. ಹಾಗಾಗಿ ಆತ ನಾನು ಪುಸ್ತಕ ಮಾರುವ ವ್ಯಕ್ತಿ ಎಂದಷ್ಟೇ ತಿಳಿದಿದ್ದ ಎನಿಸುತ್ತದೆ. ನಾನು ಉದ್ದುದ್ದ ಅಡ್ಡಡ್ಡ ತಲೆಯಲ್ಲಾಡಿಸಿದೆ. ಅಲ್ರೀ ಒಂದು ಪುಸ್ತಕ andreಅಂದ್ರೆ ಅದರಲ್ಲೊಂದು ಡಿಸಿಪ್ಲಿನ್ ಇರ್ತದೆ. ಈಗ ಪುಬ್ಲಿಶ್ ಅಂದ್ರೂ ಅದರಲ್ಲಿ ಒಂದಷ್ಟು ಸ್ವರೂಪಗಳಿರ್ತವೆ. ಇವನ್ನು ನೋಡಿ. ಇಡೀ ಪುಸ್ತಕದಲ್ಲಿ ಪರಿವಿಡಿ ಹಾಕಿಲ್ಲ ಎಂದ ಮುಖವನ್ನು ಗಿಂಜುತ್ತಾ. ಅದು ಹಾಗಲ್ಲ ಸಾರ್. ಮೊದಲಿಗೆ ಪರಿವಿಡಿ ಹಾಕಿ, ಚಿತ್ರಗಳ ಪಟ್ಟಿ ಕೊಟ್ಟು ಬಿಟ್ಟರೆ ಆತ ಮುಂದಕ್ಕೆ ಓದುವುದೇ ಇಲ್ಲ.ಪುಸ್ತಕವನ್ನು ಕೊಂಡು ಕೊಳ್ಳುವುದೂ ಇಲ್ಲ. ಸಿನಿಮಾಗಳು ಆತನಿಗೆ ಪರಿಚಿತವಾದ್ದರಿಂದ ಒಮ್ಮೆ ಕಣ್ಣಾಡಿಸಿ ನೋಡಿರದ ಚಿತ್ರವನ್ನು ಸ್ಮೃತಿಯಲ್ಲಿರಿಸಿಕೊಂಡು ಹೋಗಿಬಿಟ್ಟರೆ ಲೇಖಕನ ಪ್ರಕಾಶಕನ ಗೋಳು ಯಾರು ಕೇಳುತ್ತಾರೆ ಎಂದೆ. ಅದಕ್ಕೆ ಅವನಿಷ್ಟ ಬಂದ ಹಾಗೆ ಬರೆದರೆ ಆಗಿಬಿಡುತ್ತಾ ಎಂದವನು, ಪುಸ್ತಕವನ್ನು ಅಲ್ಲೇ ಬೀಸಾಕಿ, ಏನೇ ಮಾಡಿದರೂ ಅದರಲ್ಲಿ ಡಿಸಿಪ್ಲಿನ್ ಇರಲೇ ಬೇಕು ಎಂದು ಬೈದುಕೊಳ್ಳುತ್ತಾ ಅಲ್ಲಿಂದ ಹೋಗಿಯೇಬಿಟ್ಟ.
ಆ ಸಮಾರಂಭಕ್ಕೆ ಬಂದಿದ್ದ ಸಂಪನ್ಮೂಲ ವ್ಯಕ್ತಿಯೊಬ್ಬರು ಇಂದಿನ ಭಾರತೀಯ ಸಿನಿಮಾ, ನಿರ್ದೇಶಕರು ಬದಲಾಗುತ್ತಿರುವ ಪರಿ ಮತ್ತು ಪ್ರೇಕ್ಷಕರ ನಾಡಿಮಿಡಿತ ಮುಂತಾದವುಗಳನ್ನು ಸಾಧ್ಯಂತವಾಗಿ ವಿವರಿಸಿದ್ದರು. ಜೊತೆಗೆ ಕಿರು ಸಾಕ್ಷ್ಯಚಿತ್ರವನ್ನೂ ಸಿದ್ಧ ಪಡಿಸಿಕೊಂಡು ಬಂದಿದ್ದರು. ಅದರ ಪ್ರದರ್ಶನದ ಜೊತೆಗೆ ಮಾತನಾಡುತ್ತಾ ತುಂಬಾ ಪ್ರೌಢವಾಗಿ ಮತ್ತು ವಸ್ತುನಿಷ್ಠವಾಗಿ ಸಿನಿಮಾದ ಬಗ್ಗೆ ಮಾತನಾಡಿದ್ದರು. ಆದರೆ ಆಕೆಯ ಮಾತುಗಳಿದ್ದದ್ದು ಇಂಗ್ಲಿಷ್ ಭಾಷೆಯಲ್ಲಿ.
ಆಕೆಯ ಮಾತಿನ ನಂತರ ಕಾಫೀ ವಿರಾಮಕ್ಕೆ ಹೊರಬಂದಾಗ ತುಂಬಾ ಜನ ಆಕೆಯ ಸುತ್ತುವರೆದು ಅದೂ ಇದೂ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕನ್ನಡದ ಬೆರಳೆಣಿಕೆಯ ಚಿತ್ರಗಳನ್ನಷ್ಟೇ ನೋಡಿದ್ದ ಆಕೆ ಏನೇನೋ ಹೇಳುತ್ತಿದ್ದರು. ಒಟ್ಟಿನಲ್ಲಿ ಆಕೆಯ ಸುತ್ತ ಇಡೀ ಒಂದು ಗುಂಪೇ ಇತ್ತು. ಆಕೆಯ ಗುಂಪಿನಿಂದ ಮಾರುದೂರದಲ್ಲಿ ನನ್ನ ಕಿರುಪುಸ್ತಕ ಮಳಿಗೆಯ ಹತ್ತಿರ ಯಾರೂ ಕಣ್ಣು ಹಾಯಿಸದೇ ಇದ್ದದ್ದು ನನಗೆ ಒಂಚೂರು ಇರುಸುಮುರುಸು ಉಂಟುಮಾಡಿತ್ತು. ಹೊಸ ಹೊಸ ಸಿನಿಮಾಸಕ್ತ ಹುಡುಗರು ಕಿರುಚಿತ್ರಗಳನ್ನು ಮಾಡಿದ್ದವರು ಆಕೆಗೆ ನಾನಾತರದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆಕೆ ಉತ್ಸಾಹದಿಂದ ಉತ್ತರಿಸುತ್ತಿದ್ದರು. ನಾನು ಆ ಪ್ರಹಸನವನ್ನೇ ನೋಡುತ್ತಿದ್ದೆ.
ಆಕೆ ಒಂದಷ್ಟು ಮಾತನಾಡಿದ ನಂತರ ಸುಮ್ಮನೆ ನೋಡುವಾಗ ನನ್ನತ್ತ ನೋಡಿದವರು ಸೀದಾ ಹತ್ತಿರಕ್ಕೆ ಬಂದರು. ನಾನು ಎದ್ದುನಿಂತೆ. ಆಕೆ ಇಂಗ್ಲೀಷಿನಲ್ಲಿ ಇದೇನಿದು ಎಂದರು. ನಾನು ಉತ್ತರಿಸಲು ಬಾಯಿ ತೆರೆದೇ. ಅಷ್ಟರಲ್ಲೇ ನನಗೆ ಅಲ್ಲೇ ಪರಿಚಯವಾಗಿದ್ದವರು ತಮ್ಮ ಹರಕು ಮುರುಕು ಇಂಗ್ಲಿಷ್ನಲ್ಲಿ ಉತ್ಸಾಹದಿಂದ ಉತ್ತರಿಸತೊಡಗಿದರು. ಅವರ ಸಂಭಾಷಣೆ ಮಜಾ ಇಲ್ಲಿದೆ.
ಮೇಡಂ..ದಿಸ್ is ಇಸ್ ಬುಕ್..
ನನಗೊತ್ತು ..ಯಾವ ಪುಸ್ತಕ..?[ಇಂಗ್ಲಿಷ್ ನಲ್ಲಿ]
ಬುಕ್..ಸಿನಿಮಾಸ್ ಯುವರ್ ಡೆತ್ ವಾಚ್..
ವಾಟ್..?
ಯು ವಾಚ್ ಡೆಡ್ ಸಿನಿಮಾ ಹಂಡ್ರೆಡ್ ಒನ್ ಫಿಲಂಸ್ ಕನ್ನಡ ..
ಆಕೆಗೆ ಇನ್ನಷ್ಟು ಗೊಂದಲ ಏರ್ಪಟ್ಟಿದ್ದರಿಂದ ನಾನು ಉತ್ತರಿಸಬೇಕಾಯಿತು. ಆಕೆಗೆ ಆ ಪುಸ್ತಕ ಕೇಳಿ ಖುಷಿಯಾಗಿ ನನಗೆ ಕನ್ನಡ ಬರುವುದಿಲ್ಲ. ಆದರೂ ಇದರ ಲೇಖಕನಿಗೆ ಪ್ರಶಂಸಿಸಬೇಕು. ಎಂದವರೇ ಒಂದು ಪುಸ್ತಕ ತೆರೆದು ಅಲ್ಲಿದ್ದ ಸಿನಿಮಾ ಪಟ್ಟಿಯನ್ನು ಗಮನಿಸತೊಡಗಿದರು. ಆದರೆ ಅವರಿಗೆ ಕನ್ನಡ ಲಿಪಿ ಬರುತ್ತಿರಲಿಲ್ಲ. ಅಲ್ಲಿದ್ದ ಕುಬಿ ಮತ್ತು ಇಯಾಲ ಚಿತ್ರವನ್ನು ಗಮನಿಸಿದರು.
ಇದ್ಯಾವ ಸಿನಿಮಾ?
ಕುಬಿ ಅಂಡ್ ಇಯಾಲ.
ಒಹ್. ಕನ್ನಡ
ಯು ನೋ ಕನ್ನಡ ಪೊಯೆಟ್ ಕುಗೆಂಪು. ಹಿಸ್ ಸನ್..ಫುಲ್ ಮೂನ್ ತೇಜಸ್ವಿ. ಹೀ ರೈಟ್ಸ್ ಸ್ಟೋರಿ. ಅಂಡ್ ಫಿಲಂ ಮೇಕ್ಸ್.
ಯು ವಾಚ್ ಮೇಡಂ. ಡೆಡ್ ಫಿಲಂ ಬಿಫೋರ್...ಆಕ್ಚುವಲ್ಲಿ ರಾಜಣ್ಣ ಬಿಗ್ ಆಕ್ಟರ್. ಹೀ ಡೆಡ್ ವೀರಪ್ಪನ್..
ಏನು? ವೀರಪ್ಪನ್ ಕೊಂದದ್ದು ರಾಜಕುಮಾರಾ?
ಯಾಕೋ ಮಾತುಕತೆ ಹಳಿ ತಪ್ಪಿ ಆಕೆ ಏನನ್ನೋ ಅರ್ಥ ಮಾಡಿಕೊಂಡು ಈ ಅತ್ಯುತ್ಸಾಹಿ ಏನನ್ನೋ ಹೇಳಿ ಯಡವಟ್ಟು ಆಗುತ್ತದೆ ಎಂಬುದು ಗೊತ್ತಾದದ್ದೇ ನಾನು ಮಾತಾಡಲೇಬೇಕಾಯಿತು. ಆದರೆ ಆಕೆ ಬಂದು ಮಾತಾಡಿ ಹೋದದ್ದೇ ನನ್ನ ಪುಸ್ತಕಕ್ಕೆ ಇನ್ನಿಲ್ಲದ ಮಹತ್ವ ಬಂದದ್ದು ಸತ್ಯ. ಆಕೆ ಪುಸ್ತಕ ನೋಡಿ, ಅಲ್ಲಿದ್ದ ಕೆಲವರಿಗೆ ನನ್ನ ಪುಸ್ತಕವನ್ನು ಹೆಸರಿಸಿ, ಹೊಗಳಿ ನನ್ನ ಮೊಬೈಲ್ ನಂಬರ್ ತೆಗೆದುಕೊಂಡು ಹೋದ ಮೇಲೆ ಅಷ್ಟು ಹೊತ್ತು ನನ್ನ ಪುಸ್ತಕದ ಕಡೆ ಕಣ್ಣೆತ್ತಿಯೂ ನೋಡದವರು ಒಮ್ಮೆ ನನ್ನ ಬಳಿ ಬಂದು ನನ್ನ ಪುಸ್ತಕವನ್ನು ತಿರುಗಿಸಿ ಮುರುಗಿಸಿ ನೋಡಿ ಹಾಳೆ ಬಿಡಿಸಿ ಓದಿ ನನ್ನೆಡೆ ಮೆಚ್ಚುಗೆಯ ಮಂದಹಾಸ ಬೀರಿದ್ದರು.
ಕನ್ನಡದ ಹೊಸ ಅಲೆಯ ನಿರ್ದೇಶಕ, ನಿರ್ದೇಶಕಿ ಮತ್ತು ನಟ ನಿರ್ದೇಶಕ ಮೂವರು ಆ ಸಮಾರಂಭದಲ್ಲಿ ಭಾಗವಹಿಸಿದ್ದರು. ನನ್ನಿಂದ ಮಾರುದೂರದಲ್ಲಿ ನಿಂತು ಕನ್ನಡ ಚಿತ್ರರಂಗದ ಸ್ಥಿತಿಗತಿಯ ಬಗ್ಗೆ ಕಳಕಳಿಯಿಂದ ಚರ್ಚಿಸುತ್ತಿದ್ದರು. ಆದರೆ ಅವರು ಹೋಗುವಾಗ, ಬರುವಾಗ ನಿಂತು ಮಾತಾಡುವಾಗ ಕೇವಲ ಮಾರುದೂರದಲ್ಲಿ ಬೇಡವೆಂದರೂ ಕಣ್ಣಿಗೆ ಬೀಳುವಂತಿದ್ದ ಪುಸ್ತಕದ ಕಡೆಗೆ ಸುಮ್ಮನೆ ಕೂಡ ತಿರುಗಿಯೂ ನೋಡಲಿಲ್ಲ ಎಂಬುದು ಬೇಸರದ ಸಂಗತಿ ಎನ್ನಬಹುದು. ಒಂದಷ್ಟು ಸಿನಿಮಾದ ಒಲವಿದ್ದ ಮೇಲೆ ಯಾವುದೇ ರೀತಿಯ ಸಿನಿಮಾ ಸಂಬಂಧ ಪಟ್ಟ ಪುಸ್ತಕವೋ ಡಿವಿಡಿಯೋ ಇದ್ದರೇ ಕುತೂಹಲಕ್ಕಾದರೂ ಒಮ್ಮೆ ನೋಡುವುದು ಸಹಜ. ಅದರಲ್ಲಿ ನಾವು ನೋಡುವುದೇನಿದೆ...ನಾವು ಅದನ್ನೆಲ್ಲಾ ಮೀರಿದವರು ಎಂಬ ಮನೋಭಾವ ಅವರದ್ದಾಗಿತ್ತು.