Thursday, September 20, 2012

ಬೆಳ್ಳಿ ಪರದೆಯ ಗೋಲ್ಡನ್ ಟಾಕೀಸ್ ....

ನಮ್ಮ ಸಿನೆಮಾದ ಕೆಲಸ ಮುಗಿದು ಸೆನ್ಸಾರ್ ಆಯಿತು.ಸ್ವಲ್ಪ ಪ್ರಚಾರಕ್ಕೆ ತಲೆ ಕೆಡಿಸಿಕೊಳ್ಳೋಣ ಎಂದೆನಿಸಿ ಅದಕ್ಕಿರುವ ಲಾಭಕರ ಮಾರ್ಗಗಳನ್ನು ಹುಡುಕತೊಡಗಿದ್ದೆ.ಚಿತ್ರರ೦ಗದಲ್ಲಿ ಸಿನಿಮಾ ಮಾಡುವುದೇ ಒ೦ದು ತೂಕವಾದರೆ ಅದನ್ನು ಬಿಡುಗಡೆಮಾಡುವುದು ಇನ್ನೊ೦ದು ತೂಕ.ಅದೆ೦ತಹ ರಿಸ್ಕಿನ ಕೆಲಸವೆ೦ದರೆ ಮೊದಲಿಗೆ ವ್ಯವಸ್ಥಿತ ಪ್ರಚಾರ ಮಾಡಬೇಕು.ಅನ೦ತರ ಹ೦ಚಿಕೆದಾರರ ನೆರವಿನಿ೦ದ ಚಿತ್ರಮ೦ದಿರಗಳಲ್ಲಿ ಬಿಡುಗಡೆ ಮಾಡಬೇಕು. ಅದರಲ್ಲೂ ನಮ್ಮ೦ತಹ ದೊಡ್ಡ ಸ್ಟಾರ್ ಇಲ್ಲದ ಸಿನೆಮಾಗಳಿಗೆ ಚಿತ್ರದ ಕಥೆ -ನಿರೂಪಣೆಯೇ ಬ೦ಡವಾಳವಾದರೋ ಅದೆಲ್ಲ ಸಿನಿಮಾ ಬಿಡುಗಡೆಯಾದಮೇಲೆ. ಆದರೆ ಬಿಡುಗಡೆಯಾದ ಮೊದಲದಿನ ಜನರನ್ನು ಚಿತ್ರಮ೦ದಿರಕ್ಕೆ ಸೆಳೆಯಬೇಕಾದರೆ ಅದಕ್ಕೆ ದೊಡ್ಡ ಮಟ್ಟದ ಪ್ರಚಾರ ಬೇಕೇಬೇಕು. ನಿರ್ಮಾಪಕರ ಕಿಸೆ ದೊಡ್ಡದಿರಬೇಕು. ಇರಲಿ.ಸಿನಿಮಾ ಬಿಡುಗಡೆಯೆಲ್ಲ ಪಕ್ಕ ಆದಮೇಲೆ ವಿದ್ಯುನ್ಮಾನ ಮತ್ತು ಪತ್ರಿಕಾ ಮಾಧ್ಯಮದಲ್ಲಿ ಪ್ರಚಾರ ಮಾಡೋಣ ಅದಕ್ಕೂ ಮುನ್ನ ಯಾವ್ಯಾವ ಬೇರೆ ಬೇರೆ ದಾರಿಗಳಿವೆ ಎ೦ದು ಹುಡುಕುತ್ತಿದ್ದಾಗ ಗೊತ್ತಾದದ್ದು ಗೋಲ್ಡನ್ ಟಾಕೀಸ್ ಎ೦ಬ ಆನಲೈನ್ ಪಾರ್ಟ್ನರ್ ಇದ್ದಾರೆ ಎ೦ಬುದು. ಇರಲಿ ಎ೦ದು ಅದರ ಕಛೇರಿಗೊಮ್ಮೆ ಎಡತಾಕಿದೆ.
ಸಿನಿಮಾದ ಲೆಕ್ಕಾಚಾರಗಳೇ ವಿಚಿತ್ರ. ನಮ್ಮಲ್ಲಿ ಅದರಲ್ಲೂ ಹಣಕಾಸಿನ ವಿಚಾರದಲ್ಲಿ ಅದು ತೀರಾ ಅಧ್ವಾನ. ಕಥೆ -ಚಿತ್ರಕಥೆ ಬರೆಯುವವನಿಗೆ ಹಣ ಕೊಡಲು ಹಿಂದೆ ಮುಂದೆ ನೋಡುತ್ತೇವೆ. ಆದರೆ ಒಂದು ಹಾಡಿಗೋ ಇನ್ನೇತಕ್ಕೋ ಯದ್ವಾತದ್ವಾ ಖರ್ಚು ಮಾಡುತ್ತೇವೆ.ಎಲ್ಲೋ ಲಕ್ಷ ಲಕ್ಷ ಹೋಗುತ್ತಿರುತ್ತದೆ. ಮತ್ತೆಲ್ಲೋ ನೂರು-ಇನ್ನೂರಕ್ಕೆ ಹಿಂಜಾಡುತ್ತಿರುತ್ತೇವೆ. ಹಾಗೆ ಸಿನಿಮಾದ ಪ್ರಚಾರ ಅದು ಇದು ವಿಷಯಗಳಲ್ಲೂ ಅಷ್ಟೇ. ಇದೆಲ್ಲವನ್ನೂ ಮನಸಿನಲ್ಲಿರಿಸಿಕೊಂಡು ಗೋಲ್ಡನ್ ಟಾಕೀಸ್ [www.goldentalkies.com]ಪ್ರಾರಂಭಿಸಿದ್ದಾರೆ ಮೂರ್ನಾಲ್ಕು ಉತ್ಸಾಹಿ ಗೆಳೆಯರು.ಅವರೆಲ್ಲಾ ಸಿನಿಮಾದವರೇ. ಸಿನಿಮಾದಲ್ಲಿ ನಾನಾ ವಿಭಾಗದಲ್ಲಿ ಕೆಲಸ ಮಾಡಿದವರೇ. ಅವರೇ ಹೇಳುವಂತೆ ಅವರುಗಳೆಲ್ಲಾ ಸಿನೆಮಾ ಮಾಡುವಾಗ ಈ ತರಹದ್ದೊಂದು ಅಂತರ್ಜಾಲವ್ಯಾಪಿ ವೆಬ್ ಸೈಟ್ ಕನ್ನಡಕ್ಕೆ ಬೇಕಾಗಿದೆ ಎಂಬ ಸತ್ಯವನ್ನರಿತು ಸುಮಾರು ಕಡೆ ಎಡೆತಾಕಿದ್ದಾರೆ. ಸುಮಾರು ಜನರ ಜೊತೆ ಇದರ ಬಗ್ಗೆ ಚರ್ಚಿಸಿದ್ದಾರೆ. ಎಲ್ಲೂ ಆಶಾದಾಯಕ ಉತ್ತರ ಸಿಕ್ಕಿಲ್ಲ ಐಡಿಯಾ ಚೆನ್ನಾಗಿದೆಯಾದರೂ ಲಾಭ ಮಾತ್ರ ಅಷ್ಟಕಷ್ಟೇ. ಹಾಗಾಗಿ ಇವರೇ ಪ್ರಾರಂಭಿಸಲು ಯೋಚಿಸಿದ್ದಾರೆ. ಹಾಗಂತ ಏನೋ ಒಂದು ಮಾಡಿದರೂ ಅದು ಸಾರ್ಥಕವಾಗುವುದಿಲ್ಲ  ಎಂಬ ಸತ್ಯ ಗೊತ್ತಿದ್ದರಿಂದ ಮೊದಲಿಗೆ ಅದ್ಭುತವಾಗಿ ಯಾವ ಪರಭಾಷಾ ವೆಬ್ ಸೈಟಿಗೂ ಕಮ್ಮಿಯಿಲ್ಲದಂತೆ  ರೂಪಿಸಿಬೇಕೆಂದುಕೊಂಡಿದ್ದಾರೆ.. ಕೇವಲ ಬೆರಳೆಣಿಕೆಯ ಸಂಖ್ಯೆಯ ಕೆಲಸಗಾರರಿರುವ ಗೋಲ್ಡನ್ ಟಾಕೀಸಿನ ಅವರೇ ಅಷ್ಟೂ ಕೆಲಸವನ್ನು ಹಂಚಿಕೊಂಡಿದ್ದಾರೆ. ಈಗ ಕೆಲಸವೇನೋ ಬಿಡುವಿಲ್ಲದಷ್ಟಿದೆ. ಆದರೆ ಇನ್ನೂ ಹಣಕಾಸು ವಿಷಯ ಮಾತ್ರ ತೃಪ್ತಿಕರವಾಗಿಲ್ಲ ..
"ನಮಗೂ ಹಣಕಾಸು ಮುಖ್ಯವೇ...ಹಾಗಂತ ಮೊದಲಿಗೆ ದುಡ್ಡಿಗೆ ನಿಂತರೆ ನಮಗೂ ಬೇರೆಯವರಿಗೂ ಏನು ವ್ಯತ್ಯಾಸ. ನಾವು ಸಿನಿಮಾಕ್ಕಾಗಿ ಎಲ್ಲವನ್ನು ಬಿಟ್ಟು ಬಂದವರು..ಒಂದು ಸಿನಿಮಾದ ರೂಪುರೇಷೆ ಹೀಗಿರಬೇಕು ಎಂದೆಲ್ಲಾ ಕನಸುಕಟ್ಟಿದವರು. ಇದು ನಮ್ಮ ಮೊದಲ ಹೆಜ್ಜೆ.. ಪರಭಾಷೆಗಳಲ್ಲಿನ ಪ್ರೋತ್ಸಾಹ ನಮ್ಮ ಭಾಷೆಯಲ್ಲಿ ಈ ವಿಭಾಗಕ್ಕಿಲ್ಲದೆ ಇರುವುದಕ್ಕೆ ನೂರು ಕಾರಣವಿದೆ. ಆದರೆ ಬಹುಮುಖ್ಯವಾಗಿ ಈ ತರಹದ ಸ್ಪಷ್ಟ ಕಲ್ಪನೆ ಇಲ್ಲದೆ ಇರುವುದು. ನಾವದನ್ನು ಕಷ್ಟಪಟ್ಟು ಮಾಡಿ ತೋರಿಸುತ್ತೇವೆ. ಒಂದು ಕಥೆಯನ್ನು ಒಬ್ಬ ನಿರ್ದೇಶಕ ಹತ್ತಾರು ನಿರ್ಮಾಪಕರಿಗೆ ಹೇಳಿಯೂ ಅದು ಸಫಲವಾಗದಿರುವ ಉದಾಹರಣೆಯಿದೆ. ಹಾಗಂತ ಆತ  ಸುಮ್ಮನೆ ಕುಳಿತುಕೊಳ್ಳಲಾಗುವುದಿಲ್ಲ ..ಸಿನಿಮಾ ಮಾಡಿ ಎಲ್ಲರಿಗೂ ತನ್ನ ಪ್ರತಿಭೆಯನ್ನು ತೋರಿಸಿ ಪ್ರೂವ್ ಮಾಡಬೇಕು...ಮತ್ತದನ್ನು ಆತ ಮಾಡುತ್ತಾನೆ ಕೂಡ . ಹಾಗೆಯೇ ಇದು..ನಾವು ಪ್ರೂವ್ ಮಾಡುತ್ತೇವೆ...' ಸಿನಿಮೀಯ ಶೈಲಿಯಲ್ಲೇ ಹೇಳುತ್ತಾರೆ ಇದರ ವ್ಯವಸ್ಥಾಪಕರು...
ಸಿನಿಮಾದ ಚಿತ್ರಗಳು, ದೃಶ್ಯಗಳು ಮುಂತಾದವುಗಳನ್ನು ಗೋಲ್ಡನ್ ಟಾಕೀಸ್ ಗೆ ಕೊಟ್ಟುಬಿಟ್ಟರೆ ಮುಗೀತು.ಅವರೇ ಹಲವಾರು ಸೋಸಿಯಲ್  ನೆಟ್ ವರ್ಕ್  ಮೂಲಕ ವ್ಯವಸ್ಥಿತ ಪ್ರಚಾರ ಮಾಡುತ್ತಾರೆ. ವೈರಲ್ ಮಾರ್ಕೆಟಿಂಗ್ ತಂತ್ರವನ್ನು ಅಳವಡಿಸಿಕೊಂಡಿರುವ ಮತ್ತು ಕನ್ನಡದಲ್ಲಿ ಅಧಿಕೃತವಾದ ವೆಬ್ ಸೈಟ್ ಗೋಲ್ಡನ್ ಟಾಕೀಸ್ ಒಂದೇ. ವ್ಯವಸ್ಥಿತವಾಗಿ ಮತ್ತು ನಿರಂತರವಾಗಿ ಸ್ಟೇಟಸ್ ಅಪ್ ಡೇಟ್ ಮಾಡುತ್ತಾರೆ..ಅದ್ಭುತವಾದ ಪ್ರೆಸ್ ಕಿಟ್  ತಯಾರಿಸಿಕೊಡುತ್ತಾರೆ. ಪೋಸ್ಟರ್ ಗಳನ್ನೂ ಅಪ್ಡೇಟ್ ಮಾಡುತ್ತಾರೆ. ಟ್ರೈಲರ್ ಹಾಕಿ ಅದರ ಲಿಂಕನ್ನು ಹಲವಾರು ಸಿನಿಪ್ರೇಕ್ಷಕರಿಗೆ ತಲುಪುವಂತೆ ಮಾಡುತ್ತಾರೆ. ಒಟ್ಟಿನಲ್ಲಿ ಸಿನಿಮಾ ಬಿಡುಗಡೆಗೆ ಮುನ್ನವೆ ಆ ಸಿನಿಮಾದ ಬಗ್ಗೆ ಒಂದಷ್ಟು ನಿರೀಕ್ಷೆ ಮೂಡುವಂತೆ ಮಾಡುತ್ತಾರಲ್ಲದೆ ಒಂದಷ್ಟು ಜನ ಅದರ ಬಗ್ಗೆ ಮಾತಾಡುವಂತೆ ಮಾಡುತ್ತಾರೆ. ಹಾಗೆ ಅತೀ ಕಡಿಮೆ ಬೆಲೆಯಲ್ಲಿ ಚಿತ್ರದ ವೆಬ್ಸೈಟ್ ತಯಾರಿಸಿಕೊಡುತ್ತಾರೆ.
ಸಿನಿಮಾ ಎಂಬ ಮಾಯಾಲೋಕ ಇನ್ನು ಎಷ್ಟೆಷ್ಟು ವರೈಟಿಯ ಕನಸುಗಾರರನ್ನು ಹೊಂದಿದೆಯೋ ಎಂಬ ಕಲ್ಪನೆ ಆಶ್ಚರ್ಯ ತರಿಸುತ್ತದೆ.


Tuesday, September 18, 2012

ಚಿತ್ರಕಲೆ, ಸಿನೆಮಾ ಮತ್ತು ಪ್ರಶಸ್ತಿ...

ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ನಾನು ಬಿಡಿಸಿದ ಸಂಖ್ಯಾ ಗಣಪ.
ನನಗೆ ಗಣಪತಿಯೆಂದರೆ ಯಾಕೋ ಇಷ್ಟ. ಮೊಟ್ಟ ಮೊದಲ ಭಾರಿಗೆ ಚಿತ್ರ ಬರೆಯಲು ಶುರು ಮಾಡಿದಾಗ ಲಕ್ಷ್ಮಿ , ಸರಸ್ವತಿ ಪಾರ್ವತಿ, ಶಿವ ಇವರೆಲ್ಲರಿಗಿಂತ ಗಣಪತಿಯೇ ಸುಲಭ ಎನಿಸುತ್ತದೆ. ಯಾಕೆಂದರೆ ಗಣಪನದು ಆನೆ ಮುಖವಾದುದರಿಂದಾಗಿ ಬರೆದುಬಿಡಬಹುದು.ನಾನು ಮಾನಸ ಗಂಗೋತ್ರಿಯಲ್ಲಿ ಓದುತ್ತಿದ್ದಾಗ ಮಾನಸ 2000 ಎಂಬ ವಾರ್ಷಿಕ ಕಾರ್ಯಕ್ರಮ ಮಾಡಿದ್ದೆವು. ಪ್ರತಿ ವಿಭಾಗದಲ್ಲೂ ಆ ವಿಭಾಗಕ್ಕೆ ಸಂಬಂಧಿಸಿದ ಪ್ರದರ್ಶನಗಳಿದ್ದವು. ನಮ್ಮದು ಗಣಿತ ವಿಭಾಗವಾದ್ದರಿಂದ ನಾನು ಸಂಖ್ಯಾ ಗಣಪನನ್ನು ಬಿಡಿಸಿದ್ದೆ. ಅಂದರೆ ಸೊನ್ನೆ ಯಿಂದ ಒಂಬತ್ತು ಅಂಕಿಗಳಿಂದ ಗಣೇಶನ ಚಿತ್ರ ಬಿಡಿಸುವುದು. ಇಡೀ ಗಣಿತ ವಿಭಾಗದ ಪ್ರದರ್ಶನದಲ್ಲಿಯೇ ಹೈಲೈಟ್  ಆಗಿದ್ದ ಚಿತ್ರ ಅದು. ಕಲೆ ಮತ್ತು ಗಣಿತದ ಸಂಗಮ ಎಂದೆಲ್ಲಾ ಗೆಳೆಯರು ನನ್ನನ್ನು ಮರಹತ್ತಿಸಿದ್ದರು.
ನನ್ನ ಪದವಿಯಲ್ಲಿದ್ದಾಗ ಗಣೇಶ ಹಬ್ಬವನ್ನು ಜೋರಾಗಿ ಆಚರಿಸುತ್ತಿದ್ದೆವು. ಕಾಲೇಜಿನಲ್ಲಿ ದೊಡ್ಡ ಗಣಪತಿ ಮೂರ್ತಿಯನ್ನು ಕೂರಿಸುತ್ತಿದ್ದೆವು. ವಿವಿಧ ಸ್ಪರ್ಧೆಗಳೂ ಇರುತ್ತಿದ್ದವು.. ಎಲ್ಲಾ ರೀತಿಯ ಸ್ಪರ್ಧೆಯಿದ್ದರೂ ಚಿತ್ರಕಲೆ ಸ್ಪರ್ಧೆಯಿರಲಿಲ್ಲ . ಕಾರಣ ಯಾರೂ ಭಾಗವಹಿಸುತ್ತಿರಲಿಲ್ಲ ಕಾಲೇಜಿನ ಪ್ರಾರಂಭದ ದಿನಗಳಲ್ಲಿ ಪರಿಚಯ ಮಾಡಿಕೊಳ್ಳುವಾಗ ನಮ್ಮ ನಮ್ಮ ಪರಿಚಯ ಮಾಡಿಕೊಳ್ಳುವಾಗ ,ಹವ್ಯಾಸದ ಪ್ರಸ್ತಾಪ ಬಂದಾಗ ಚಿತ್ರಕಲೆ ಎಂದವರನ್ನು ನಾನು ಗುರುತಿಟ್ಟು ಕೊಳ್ಳುತ್ತಿದ್ದೆ. ಹೇಗೋ ಏನೋ ಒಂದು ಸ್ಪರ್ಧೆ ಮುಗಿದರೆ ಆಮೇಲೆ ಯಾರೂ ಸ್ಪರ್ಧಿಸುತ್ತಿರಲಿಲ್ಲ. ನಿನ್ನ ಮುಂದೆ ಹೇಗಪ್ಪಾ ಎನ್ನುತ್ತಿದ್ದರು. ಕಡಿಮೆಯೆಂದರೆ ಐದು ಜನ ಸ್ಪರ್ಧಿಗಳಿಲ್ಲದೆ ಸ್ಪರ್ಧೆ ಇಡುತ್ತಿರಲಿಲ್ಲ ನನಗೋ ಒಂದು ಪ್ರಶಸ್ತಿ ಮಿಸ್ ಆಗುತ್ತದಲ್ಲಾ ಎನ್ನುವ ಹಪಾಹಪಿ.. ನನ್ನ ಗೆಳೆಯರನ್ನು ಸುಮ್ನೆ ಬಂದು ಕೂತ್ಕೊಳ್ರೋ ..ನಾನೇ ಏನಾದರೂ ಬರೆದುಕೊಡ್ತೀನಿ ..ಎಂದೆಲ್ಲಾ ಪೂಸಿಹೊಡೆಯುತ್ತಿದ್ದೆ.
ಒಂದೊಮ್ಮೆ ಚಿತ್ರಕಲಾ ಸ್ಪರ್ಧೆ ಇಲ್ಲದ್ದರಿಂದ ರಂಗೋಲಿ ಸ್ಪರ್ಧೆಗೆ ಸ್ಪರ್ಧಿಸಿದ್ದೆ. ರಂಗೋಲಿ ಪುಡಿಯಲ್ಲಿ ಗಣಪತಿಯನ್ನು  ಬಿಡಿಸಿದ್ದೆ. ಕಾಮರ್ಸಿನ ವಿದ್ಯಾರ್ಥಿನಿಯೊಬ್ಬಳು ಅದು ರಂಗೊಲಿಯಲ್ಲ..ರಂಗೋಲಿಗೆ ಚುಕ್ಕಿ ಇಟ್ಟು  ಬಿಡಿಸಬೇಕು..ಚಿತ್ರ ಬಿಡಿಸಿದ್ದಾನೆ ಬಹುಮಾನ ಕೊಡುವ ಹಾಗಿಲ್ಲ ಎಂದು ರಚ್ಚೆ ಹಿಡಿದಿದ್ದಳು...ನಾನು ಅದಕ್ಕೇನಂತೆ ನಾನು ಚುಕ್ಕಿ ಇಟ್ಟೆ  ಬಿಡಿಸುತ್ತೇನೆ ಎಂದದ್ದಕ್ಕೆ 'ಹಾಗಲ್ಲಾ.ಚಿತ್ರ ಬಿಡಿಸುವಾ ಹಾಗೆ ಇಲ್ಲಾ..ಎಂದೆಲ್ಲಾ ವಾದಿಸಿದ್ದಳು..ಕೊನೆಯಲ್ಲಿ ನಾನು ಆ ಸ್ಪರ್ಧೆಯಿಂದ ಹೊರಗುಳಿದಿದ್ದೆ. ನೋಡಲು ಬಂದವರೆಲ್ಲಾ 'ನನ್ನ ರಂಗೋಲಿ ಗಣಪತಿ'ಯ  ಮುಂದೆ ನಿಂತು ಮೆಚ್ಚಿಕೊಂಡು ಹೋಗುತ್ತಿದ್ದರೆ ಅವಳು ಮಾತ್ರ 'ಅದು ಕಾಂಪಿಟೆಶನ್ ಗೆ ಇಲ್ಲಾ.' ಎಂದು ಸಾರುತ್ತಿದ್ದಳು.
ಮೊನ್ನೆ ಜನಶ್ರೀ ವಾಹಿನಿಯಿಂದ ಕರೆ ಬಂದಿತ್ತು. ಅವರು ನಡೆಸುವ ಫ್ರೀ ಸ್ಟೈಲ್  ಕಿರುಚಿತ್ರಕಾರ್ಯಕ್ರಮಕ್ಕೆ ನಮ್ಮ ಕಿರುಚಿತ್ರ 'ನಿರಾಕೃತ ' ಕಳುಹಿಸಿದ್ದೆ. ಅದರ ಪ್ರಶಸ್ತಿ ಪ್ರಧಾನ ಸಮಾರಂಭವಿದೆ ಬನ್ನಿ ಎಂದರು.ನನಗೆ ಬಂದಿದೆಯಾ ಎಂದು ಕೇಳಿದ್ದಕ್ಕೆ ಅದೆಲ್ಲಾ ಆವತ್ತೇ ಗೊತ್ತಾಗುತ್ತದೆ ಎಂದರು.
ನನಗೆ ಪ್ರಶಸ್ತಿ ಎಂದಾಗಲೆಲ್ಲಾ ನೆನಪಾಗುವುದು ನನ್ನ ಶಾಲಾ ಕಾಲೇಜು ದಿನಗಳು.ಅದರಲ್ಲೂ ನಾನು ಮೈಸೂರಿನ ಹಾಸ್ಟೆ ಲಿನಲ್ಲಿದ್ದಾಗ ಯಾವುದಾದರೂ ಡ್ರಾಯಿಂಗ್ ಸ್ಪರ್ಧೆಯೆಂದರೆ ಬಹುಮಾನ ಏನಿದೆ ಎಂದು ನೋಡುತ್ತಿದ್ದೆ. ಅದರಲ್ಲೇನಾದರೂ 'ಹಣ' ಬಹುಮಾನವಿದ್ದರೆ ನಾನು ಸ್ಪರ್ಧಿಸುತ್ತಿದ್ದೆ. ಅದು ಬಿಟ್ಟು ಪ್ರಶಸ್ತಿ ಪತ್ರ , ಪದಕ ಎಂದರೆ ಸ್ಪರ್ಧಿಸುತ್ತಿರಲಿಲ್ಲ ಗೆಳೆಯರು ಒತ್ತಾಯಮಾಡಿದರೆ 'wise man never competes ' ಎಂದು ಜಂಭಕೊಚ್ಚುತ್ತಿದ್ದೆ.ಅದಕ್ಕೆ ನನ್ನ ಗೆಳೆಯ ದಿನ ಪತ್ರಿಕೆ ನೋಡುವಾಗ ಎಲ್ಲಾದರೂ ಚಿತ್ರಕಲ ಸ್ಪರ್ಧೆಯಿದ್ದರೆ ಸುಮ್ಮನೆ ನನ್ನ ಜೊತೆ ಬರುತ್ತಿದ್ದ, ಅವರಲ್ಲಿ ಏನಿದೆ ಪ್ರಶಸ್ತಿ ಎಂದು ಹೇಗೋ ತಿಳಿದುಕೊಳ್ಳುತ್ತಿದ್ದ..'ಹಣ' ಎಂದು ಗೊತ್ತಾದರೆ ಸಾಕು..ನಾನು ರೆಡಿಯಾಗುತ್ತಿದ್ದೆ..ರೇಖಾಚಿತ್ರ, ಬಣ್ಣದ ಚಿತ್ರ, ನಿಸರ್ಗ ಚಿತ್ರ, ಭಾವ ಚಿತ್ರ, ಅಸಂಗತ, ಕಾರ್ಟೂನ್ ಯಾವುದೇ ಆಗಲಿ ಭಾಗವಹಿಸುತ್ತಿದ್ದೆ. ಮೊದಲರ್ಧ ಘಂಟೆ ಸುಮ್ಮನೆ ಅಲೆದಾಡುತ್ತಿದ್ದೆ. ಸ್ಪರ್ಧಿಗಳು ಏನೇನೆಲ್ಲಾ ಬಿಡಿಸುತ್ತಿದ್ದಾರೆ ಎಂದು ಗಮನಿಸುತ್ತಿದ್ದೆ. ಆನಂತರ ಅವರಿಗಿಂತ ಭಿನ್ನವಾದುದೊಂದನ್ನು ಬಿಡಿಸುತ್ತಿದ್ದೆ. ಮೂರರಲ್ಲಿ ಯಾವುದಾದರೊಂದು ಬಹುಮಾನ ಸಿಕ್ಕೆ ಸಿಗುತ್ತಿತ್ತು...
ಬೆಂಗಳೂರಿಗೆ ಸಿನಿಮಾಕ್ಕಾಗಿ ಬಂದ ದಿನಗಳು.ಮನೆಯಲ್ಲಿ ಬೆಂಗಳೂರಲ್ಲಿ ಟೀಚರ್ ಕೆಲಸ ಮಾಡುತ್ತಿದ್ದೇನೆಂದು ಸುಳ್ಳು ಹೇಳಿದ್ದೆ.ಆದರೆ ಇಲ್ಲಿ ಯಾವ ಕೆಲಸವೂ ಸಿಗದೇ ಲಾಟರಿ ಹೊಡೆಯುತ್ತಿದ್ದೆ. ಯಾವ ಸಿನೆಮಾದಲ್ಲೂ, ಧಾರಾವಾಹಿಯಲ್ಲೂ ಯಾರೂ ಪರಿಚಯವಿರಲಿಲ್ಲ ..ಆರೇ ತಿಂಗಳಲ್ಲಿ ನಾನು ಗಿರಿಬಾಲು ಬರ್ಬಾದಾಗಿಹೋಗಿದ್ದೆವು.ನಮ್ಮ ಭರವಸೆ ಕುಸಿದುಹೊಗಿತ್ತು.ಊಟ ತಿಂಡಿಗೆ ಗತಿಯಿಲ್ಲದಾದಾಗ ಯಾವುದಾದರೂ ಕೆಲಸಕ್ಕೆ ಸೇರಿಕೊಳ್ಳೋಣ ಎಂದು ನಿರ್ಧರಿಸಿ ಶಾಲೆಯೊಂದಕ್ಕೆ ಅರ್ಜಿ ಹಾಕಿದಾಗ ಅವರು ಸಂದರ್ಶನಕ್ಕೆ ಕರೆದಿದ್ದರು. ನನ್ನ ಮಾರ್ಕ್ಸ್ ಕಾರ್ಡ್ ನೋಡಿ ನೀವ್ಯಾಕೆ ಸರ್ಕಾರಿ ಹುದ್ದೆಗೆ ಅರ್ಜಿ ಹಾಕಿಲ್ಲ ಎಂದು ಕೇಳಿದ್ದರು. ನನ್ನದು ಬಿ.ಎಡ್ . ಆಗಿದ್ದರಿಂದ ಆಗ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಕರೆಮಾಡಿದ್ದರು. 'ನನಗೆ ಸರ್ಕಾರಿ ಕೆಲಸ ಇಷ್ಟವಿಲ್ಲ ಎಂದು ಹೇಳಿದ್ದೆ...ನನ್ನ ಪ್ರೊಫೈಲ್ ನೋಡುತ್ತಾ ಹವ್ಯಾಸ ಎಂದಿದ್ದ ಕಡೆ ಡ್ರಾಯಿಂಗ್ ಎಂದು ಬರೆದಿದ್ದನ್ನು ನೋಡಿ, ಏನು ಡ್ರಾ ಮಾಡ್ತೀರಿ ಎಂದರು. ನಾನು ಏನಾದರೂ ಅಂದದ್ದಕ್ಕೆ ನನ್ನ ಬರಿತೀರಾ...ಎಂದರು..ಸರಿ ಎಂದವನೇ ಪೆನ್ನಿನಲ್ಲಿ ಅವರ ರಫ್ ಸ್ಕೆಚ್ ಹಾಕಿದೆ.ಅದನ್ನು ನೋಡಿ ಖುಷಿಯಾದ ಅವರು, ಅಲ್ಲಿದ್ದ ಶಿಕ್ಷಕಿಯನ್ನು ಕರೆದು ಇವರನ್ನು ಬಿಡಿಸಿ ಎಂದರು..ಅವರದೂ ಸ್ಕೆಚ್ ಹಾಕಿದೆ, ಆನಂತರ ಅಲ್ಲಿನ ಕಾರ್ಯದರ್ಶಿಗೆ  ಬರಹೇಳಿ ಅವರದೂ ರಫ್ ಸ್ಕೆಚ್ ಹಾಕಿಸಿದರು..'ನಾಳೆಯಿಂದ ನೀವು ಬಂದು ಸೇರಿಕೊಳ್ಳಿ..ಒಳ್ಳೆ ಕ್ಲಾಸ್ ಟೀಚರ್ ಆಗ್ತೀರಿ 'ಎಂದುಬಿಟ್ಟರು. ಅದೇ ಖುಷಿಯಲ್ಲಿ ಇಬ್ಬರೂ ರೂಮಿಗೆ ಬಂದೆವು.ರಾತ್ರಿ ಮಲಗುವಾಗ ಗಿರಿ 'ಅಲ್ಲಾ ನೀನು ಮೇಸ್ಟ್ರಾಗೋದಿಕ್ಕೇ ಬೆಂಗಳೂರಿಗೆ ಬರಬೇಕಾ.ಮೈಸೂರಲ್ಲಿ ನೂರಾರು ಸ್ಕೂಲಿದೆ...ಸಿನೆಮಾದಲ್ಲಿ ಏನಾದರೂ ಮಾಡೋಣ ಅಂತ ಬಂದದ್ದಲ್ವಾ...' ಎಂದುಬಿಟ್ಟ. ಪಾಠ ಮಾಡಲು ಯಾವಯಾವ ಸಬ್ಜೆಕ್ಟ್ ಇದೆ ಎಂದು ನೋಡುತ್ತಿದ್ದವನಿಗೆ  ಆ ಮಾತು ಸರಿಯಾಗಿಯೇ ತಟ್ಟಿತ್ತು .ಹಠ ಮತ್ತೆ ಗರಿಗೆದರಿತ್ತು.




Monday, September 17, 2012

ವಿ'ಚಿತ್ರ'ಗಳು-4

ನಿಮಗೆ ಟುಲ್ಪಾ  ಅಥವಾ thought form ಗೊತ್ತಿರಬಹುದು.ಟಿಬೆಟಿನ ಬೌದ್ಧಧರ್ಮದಲ್ಲಿನ ಉಪಾಯಗಳಲ್ಲೊಂದು.ಮಾನಸಿಕ ಸೃಷ್ಟಿಯನ್ನು ಮೂರ್ತ ರೂಪಕ್ಕೆ ತರುವ ಮಾರ್ಗವೇ ಟುಲ್ಪಾ .ಅಂದರೆ ಮನಸ್ಸಿನಲ್ಲಿನ ಕೋಪ, ತಾಪ, ದುಖ ಸುಖ, ಹಾಗೆ ನಮ್ಮಲ್ಲುಂಟಾಗುವ ಆಲೋಚನೆಗಳನ್ನ ಭೌತಿಕವಾಗಿ ಸಾಕಾರಗೊಳಿಸುವ ಏಕೈಕ ಮಾರ್ಗ.ಮನಸ್ಸಿನಲ್ಲಿ ಏನೇನೋ ಚಿತ್ರಗಳು ಕಲ್ಪಿತವಾಗುತ್ತವೆ. ಅದಕ್ಕೆ ಒಂದು ರೀತಿಯಲ್ಲಿ ಮನಸ್ಸೇ ಸ್ಪಷ್ಟ ರೂಪ ಕೊಟ್ಟುಬಿಡುತ್ತಾದರೂ ಭೌತಿಕವಾಗಿ ಅದನ್ನು ತೋರಿಸಲು ಸಾಧ್ಯವೇ..? ಎಂಬ ಪ್ರಶ್ನೆಗೆ 'ಟುಲ್ಪಾ'ದಲ್ಲಿ 'ಹೌದು' ಎನ್ನುವ ಅಚ್ಚರಿಯ ಉತ್ತರವಿದೆ.
2004 ರಲ್ಲಿ ಬಿಡುಗಡೆಯಾದ ಜರ್ಮನ್ ಭಾಷೆಯ ಚಲನಚಿತ್ರದ ಹೆಸರು 'ಟೀರ್ಸ್  ಆಫ್ ಕಾಳಿ '. ನಮ್ಮ ಪಾರ್ವತಿಯ ಅವತಾರವಾದ ಕಾಳಿ, ದೇವಿ, ಶಕ್ತಿ ಈ ಮೂರು ಅವತಾರಗಳನ್ನಾಧರಿಸಿದ ವಿಚಿತ್ರ ಕಥೆಯನ್ನು ಈ ಚಿತ್ರ ತೆರೆದಿಡುತ್ತದೆ. 1983ರಲ್ಲಿ ಪೂನಾದಲ್ಲಿ ನಡೆಯಿತೆನ್ನಲಾದ ವಿಚಿತ್ರ ಪ್ರಯೋಗಗಳ ಆಧರಿಸಿದ ಈ ಚಿತ್ರ ಕಥೆ ವಿಭಿನ್ನ ಮತ್ತು ವಿಶೇಷವಾದದ್ದು ಎಂದೇ ಹೇಳಬಹುದು. ಸಿನಿಮಾವನ್ನು ಮೂರು ವಿಭಾಗಗಳಾಗಿ ವಿಂಗಡಿಸಿದ್ದಾರೆ ನಿರ್ದೇಶಕರು. ಮೊದಲನೆಯದು ಶಕ್ತಿ.ಟುಲ್ಪಾ ದ ಪ್ರಸ್ತಾಪ ಬರುವುದು ಈ ಕಥೆಯಲ್ಲೇ. ಒಂದು ಕೊಲೆ ಬರ್ಬರವಾಗಿ ನಡೆಯುತ್ತದೆ. ಅದನ್ನು ಮಾಡಿದ ಕೊಲೆಗಾರ್ತಿ ಕೂಡ ಸಿಕ್ಕಿಕೊಂಡರೂ ಆಕೆ ತಾನೇ ಕೊಲೆ ಮಾಡಿದ್ದೆಂದು ಒಪ್ಪಿಕೊಂಡರೂ ಅನುಮಾನಗಳು ಕಾಡದೆ ಬಿಡುವುದಿಲ್ಲ ಯಾಕೆಂದರೆ ಕೊಲೆಯಾದ ಸಮಯದಲ್ಲಿ ಆಕೆ ಅಲ್ಲಿರುವುದೇ ಇಲ್ಲ ..ಅಂದರೆ ಆಕೆ ಶಕ್ತಿಗೆ ರೂಪ ಕೊಟ್ಟಳಾ ...ತನ್ನ ದ್ವೇಷಕ್ಕೆ ಮೂರ್ತ ರೂಪ ಕೊಟ್ಟು ಕೊಲೆ ಮಾಡಲು ಕಳುಹಿಸಿದ್ದಳಾ ...?ಮುಂದಿನ ಕಥೆಯನ್ನು ಸಿನಿಮಾ ನೋಡಿ ಅನುಭವಿಸುವುದೇ ಚಂದ.
ಅಂದಹಾಗೆ ಇದೊಂದು ಹಾರರ್ ಚಿತ್ರ. ದೆವ್ವ ಭೂತಗಳಿಗಿಂತ ಮಾನವನ ಆಂತರಿಕ ಶಕ್ತಿ, ಅಥವಾ ಭಾವನೆ ಅದೆಷ್ಟು ಕ್ರೂರ, ಭಯಾನಕವೆನ್ನುವುದನ್ನು ತೋರಿಸಿಕೊಡುವ ಚಿತ್ರ. ಭಯಾನಕ ಚಿತ್ರಕ್ಕೆ ಬೇಕಾದ ರೀತಿಯ ಛಾಯಾಗ್ರಹಣ ಮತ್ತು ಅದ್ಭುತ ಹಿನ್ನೆಲೆ ಸಂಗೀತ ಈ ಚಿತ್ರದ ಆಸ್ತಿ.
ಆಂಡ್ರಿಯಾಸ್  ಮಾರ್ಷಲ್ ನಿರ್ದೇಶನದ ಈ ಚಿತ್ರ  ಒಂದು ಘಂಟೆ ನಲವತ್ತಾರು ನಿಮಿಷಗಳಷ್ಟು ಉದ್ದವಿದೆ.
ಹಾರರ್ ಪ್ರಿಯರಿಗೆ ಈ ಚಿತ್ರ ಹೇಳಿಮಾಡಿಸಿದ ಚಿತ್ರವಾದರೂ ಚಿತ್ರದಲ್ಲಿ ಬರುವ ಕೆಲದೃಶ್ಯಗಳ ಬರ್ಬರತೆ ಸಹನೀಯವಾಗಿಲ್ಲ.ಕಣ್ಣ ರೆಪ್ಪೆಯನ್ನು ಕತ್ತರಿಯಿಂದ ಕತ್ತರಿಸಿಕೊಳ್ಳುವ, ಇಡೀ ಮೈ ಚರ್ಮವನ್ನು ಬ್ಲೇಡಿನ ಸಹಾಯದಿಂದ ಕುಯ್ದು, ಸುಲಿದುಕೊಳ್ಳುವಂತಹ ಚಿತ್ರಣ ಕಣ್ಣು ಮುಚ್ಚುವಂತೆ ಮಾಡುತ್ತದೆ. ಹಾಗೆ ನಮ್ಮಲ್ಲಿರುವ ವಾಮಾಚಾರದ ವಿದ್ಯೆಗಳನ್ನು, ಮಾಟ  ಮಂತ್ರಗಳನ್ನೂ ಹೊರೆತುಪಡಿಸಿ ಭಾರತದ್ದೆ ಆದ ವಿಭಿನ್ನವಾದ ಭಯಾನಕ ತಾಂತ್ರಿಕ ಪ್ರಯೋಗ ಹುಡುಕಿ ಅದರ ಮೇಲೆ ಕಥೆ ಮಾಡಿ ಜರ್ಮನಿ ಭಾಷೆಯಲ್ಲಿ ಸಿನಿಮಾಮಾಡಿರುವುದು ಅಚ್ಚರಿ ತರಿಸುತ್ತದೆ.