![]() |
ನಾನು ಬಿಡಿಸಿದ ಸಂಖ್ಯಾ ಗಣಪ. |
ನನ್ನ ಪದವಿಯಲ್ಲಿದ್ದಾಗ ಗಣೇಶ ಹಬ್ಬವನ್ನು ಜೋರಾಗಿ ಆಚರಿಸುತ್ತಿದ್ದೆವು. ಕಾಲೇಜಿನಲ್ಲಿ ದೊಡ್ಡ ಗಣಪತಿ ಮೂರ್ತಿಯನ್ನು ಕೂರಿಸುತ್ತಿದ್ದೆವು. ವಿವಿಧ ಸ್ಪರ್ಧೆಗಳೂ ಇರುತ್ತಿದ್ದವು.. ಎಲ್ಲಾ ರೀತಿಯ ಸ್ಪರ್ಧೆಯಿದ್ದರೂ ಚಿತ್ರಕಲೆ ಸ್ಪರ್ಧೆಯಿರಲಿಲ್ಲ . ಕಾರಣ ಯಾರೂ ಭಾಗವಹಿಸುತ್ತಿರಲಿಲ್ಲ ಕಾಲೇಜಿನ ಪ್ರಾರಂಭದ ದಿನಗಳಲ್ಲಿ ಪರಿಚಯ ಮಾಡಿಕೊಳ್ಳುವಾಗ ನಮ್ಮ ನಮ್ಮ ಪರಿಚಯ ಮಾಡಿಕೊಳ್ಳುವಾಗ ,ಹವ್ಯಾಸದ ಪ್ರಸ್ತಾಪ ಬಂದಾಗ ಚಿತ್ರಕಲೆ ಎಂದವರನ್ನು ನಾನು ಗುರುತಿಟ್ಟು ಕೊಳ್ಳುತ್ತಿದ್ದೆ. ಹೇಗೋ ಏನೋ ಒಂದು ಸ್ಪರ್ಧೆ ಮುಗಿದರೆ ಆಮೇಲೆ ಯಾರೂ ಸ್ಪರ್ಧಿಸುತ್ತಿರಲಿಲ್ಲ. ನಿನ್ನ ಮುಂದೆ ಹೇಗಪ್ಪಾ ಎನ್ನುತ್ತಿದ್ದರು. ಕಡಿಮೆಯೆಂದರೆ ಐದು ಜನ ಸ್ಪರ್ಧಿಗಳಿಲ್ಲದೆ ಸ್ಪರ್ಧೆ ಇಡುತ್ತಿರಲಿಲ್ಲ ನನಗೋ ಒಂದು ಪ್ರಶಸ್ತಿ ಮಿಸ್ ಆಗುತ್ತದಲ್ಲಾ ಎನ್ನುವ ಹಪಾಹಪಿ.. ನನ್ನ ಗೆಳೆಯರನ್ನು ಸುಮ್ನೆ ಬಂದು ಕೂತ್ಕೊಳ್ರೋ ..ನಾನೇ ಏನಾದರೂ ಬರೆದುಕೊಡ್ತೀನಿ ..ಎಂದೆಲ್ಲಾ ಪೂಸಿಹೊಡೆಯುತ್ತಿದ್ದೆ.
ಒಂದೊಮ್ಮೆ ಚಿತ್ರಕಲಾ ಸ್ಪರ್ಧೆ ಇಲ್ಲದ್ದರಿಂದ ರಂಗೋಲಿ ಸ್ಪರ್ಧೆಗೆ ಸ್ಪರ್ಧಿಸಿದ್ದೆ. ರಂಗೋಲಿ ಪುಡಿಯಲ್ಲಿ ಗಣಪತಿಯನ್ನು ಬಿಡಿಸಿದ್ದೆ. ಕಾಮರ್ಸಿನ ವಿದ್ಯಾರ್ಥಿನಿಯೊಬ್ಬಳು ಅದು ರಂಗೊಲಿಯಲ್ಲ..ರಂಗೋಲಿಗೆ ಚುಕ್ಕಿ ಇಟ್ಟು ಬಿಡಿಸಬೇಕು..ಚಿತ್ರ ಬಿಡಿಸಿದ್ದಾನೆ ಬಹುಮಾನ ಕೊಡುವ ಹಾಗಿಲ್ಲ ಎಂದು ರಚ್ಚೆ ಹಿಡಿದಿದ್ದಳು...ನಾನು ಅದಕ್ಕೇನಂತೆ ನಾನು ಚುಕ್ಕಿ ಇಟ್ಟೆ ಬಿಡಿಸುತ್ತೇನೆ ಎಂದದ್ದಕ್ಕೆ 'ಹಾಗಲ್ಲಾ.ಚಿತ್ರ ಬಿಡಿಸುವಾ ಹಾಗೆ ಇಲ್ಲಾ..ಎಂದೆಲ್ಲಾ ವಾದಿಸಿದ್ದಳು..ಕೊನೆಯಲ್ಲಿ ನಾನು ಆ ಸ್ಪರ್ಧೆಯಿಂದ ಹೊರಗುಳಿದಿದ್ದೆ. ನೋಡಲು ಬಂದವರೆಲ್ಲಾ 'ನನ್ನ ರಂಗೋಲಿ ಗಣಪತಿ'ಯ ಮುಂದೆ ನಿಂತು ಮೆಚ್ಚಿಕೊಂಡು ಹೋಗುತ್ತಿದ್ದರೆ ಅವಳು ಮಾತ್ರ 'ಅದು ಕಾಂಪಿಟೆಶನ್ ಗೆ ಇಲ್ಲಾ.' ಎಂದು ಸಾರುತ್ತಿದ್ದಳು.
ಮೊನ್ನೆ ಜನಶ್ರೀ ವಾಹಿನಿಯಿಂದ ಕರೆ ಬಂದಿತ್ತು. ಅವರು ನಡೆಸುವ ಫ್ರೀ ಸ್ಟೈಲ್ ಕಿರುಚಿತ್ರಕಾರ್ಯಕ್ರಮಕ್ಕೆ ನಮ್ಮ ಕಿರುಚಿತ್ರ 'ನಿರಾಕೃತ ' ಕಳುಹಿಸಿದ್ದೆ. ಅದರ ಪ್ರಶಸ್ತಿ ಪ್ರಧಾನ ಸಮಾರಂಭವಿದೆ ಬನ್ನಿ ಎಂದರು.ನನಗೆ ಬಂದಿದೆಯಾ ಎಂದು ಕೇಳಿದ್ದಕ್ಕೆ ಅದೆಲ್ಲಾ ಆವತ್ತೇ ಗೊತ್ತಾಗುತ್ತದೆ ಎಂದರು.
ನನಗೆ ಪ್ರಶಸ್ತಿ ಎಂದಾಗಲೆಲ್ಲಾ ನೆನಪಾಗುವುದು ನನ್ನ ಶಾಲಾ ಕಾಲೇಜು ದಿನಗಳು.ಅದರಲ್ಲೂ ನಾನು ಮೈಸೂರಿನ ಹಾಸ್ಟೆ ಲಿನಲ್ಲಿದ್ದಾಗ ಯಾವುದಾದರೂ ಡ್ರಾಯಿಂಗ್ ಸ್ಪರ್ಧೆಯೆಂದರೆ ಬಹುಮಾನ ಏನಿದೆ ಎಂದು ನೋಡುತ್ತಿದ್ದೆ. ಅದರಲ್ಲೇನಾದರೂ 'ಹಣ' ಬಹುಮಾನವಿದ್ದರೆ ನಾನು ಸ್ಪರ್ಧಿಸುತ್ತಿದ್ದೆ. ಅದು ಬಿಟ್ಟು ಪ್ರಶಸ್ತಿ ಪತ್ರ , ಪದಕ ಎಂದರೆ ಸ್ಪರ್ಧಿಸುತ್ತಿರಲಿಲ್ಲ ಗೆಳೆಯರು ಒತ್ತಾಯಮಾಡಿದರೆ 'wise man never competes ' ಎಂದು ಜಂಭಕೊಚ್ಚುತ್ತಿದ್ದೆ.ಅದಕ್ಕೆ ನನ್ನ ಗೆಳೆಯ ದಿನ ಪತ್ರಿಕೆ ನೋಡುವಾಗ ಎಲ್ಲಾದರೂ ಚಿತ್ರಕಲ ಸ್ಪರ್ಧೆಯಿದ್ದರೆ ಸುಮ್ಮನೆ ನನ್ನ ಜೊತೆ ಬರುತ್ತಿದ್ದ, ಅವರಲ್ಲಿ ಏನಿದೆ ಪ್ರಶಸ್ತಿ ಎಂದು ಹೇಗೋ ತಿಳಿದುಕೊಳ್ಳುತ್ತಿದ್ದ..'ಹಣ' ಎಂದು ಗೊತ್ತಾದರೆ ಸಾಕು..ನಾನು ರೆಡಿಯಾಗುತ್ತಿದ್ದೆ..ರೇಖಾಚಿತ್ರ, ಬಣ್ಣದ ಚಿತ್ರ, ನಿಸರ್ಗ ಚಿತ್ರ, ಭಾವ ಚಿತ್ರ, ಅಸಂಗತ, ಕಾರ್ಟೂನ್ ಯಾವುದೇ ಆಗಲಿ ಭಾಗವಹಿಸುತ್ತಿದ್ದೆ. ಮೊದಲರ್ಧ ಘಂಟೆ ಸುಮ್ಮನೆ ಅಲೆದಾಡುತ್ತಿದ್ದೆ. ಸ್ಪರ್ಧಿಗಳು ಏನೇನೆಲ್ಲಾ ಬಿಡಿಸುತ್ತಿದ್ದಾರೆ ಎಂದು ಗಮನಿಸುತ್ತಿದ್ದೆ. ಆನಂತರ ಅವರಿಗಿಂತ ಭಿನ್ನವಾದುದೊಂದನ್ನು ಬಿಡಿಸುತ್ತಿದ್ದೆ. ಮೂರರಲ್ಲಿ ಯಾವುದಾದರೊಂದು ಬಹುಮಾನ ಸಿಕ್ಕೆ ಸಿಗುತ್ತಿತ್ತು...
ಬೆಂಗಳೂರಿಗೆ ಸಿನಿಮಾಕ್ಕಾಗಿ ಬಂದ ದಿನಗಳು.ಮನೆಯಲ್ಲಿ ಬೆಂಗಳೂರಲ್ಲಿ ಟೀಚರ್ ಕೆಲಸ ಮಾಡುತ್ತಿದ್ದೇನೆಂದು ಸುಳ್ಳು ಹೇಳಿದ್ದೆ.ಆದರೆ ಇಲ್ಲಿ ಯಾವ ಕೆಲಸವೂ ಸಿಗದೇ ಲಾಟರಿ ಹೊಡೆಯುತ್ತಿದ್ದೆ. ಯಾವ ಸಿನೆಮಾದಲ್ಲೂ, ಧಾರಾವಾಹಿಯಲ್ಲೂ ಯಾರೂ ಪರಿಚಯವಿರಲಿಲ್ಲ ..ಆರೇ ತಿಂಗಳಲ್ಲಿ ನಾನು ಗಿರಿಬಾಲು ಬರ್ಬಾದಾಗಿಹೋಗಿದ್ದೆವು.ನಮ್ಮ ಭರವಸೆ ಕುಸಿದುಹೊಗಿತ್ತು.ಊಟ ತಿಂಡಿಗೆ ಗತಿಯಿಲ್ಲದಾದಾಗ ಯಾವುದಾದರೂ ಕೆಲಸಕ್ಕೆ ಸೇರಿಕೊಳ್ಳೋಣ ಎಂದು ನಿರ್ಧರಿಸಿ ಶಾಲೆಯೊಂದಕ್ಕೆ ಅರ್ಜಿ ಹಾಕಿದಾಗ ಅವರು ಸಂದರ್ಶನಕ್ಕೆ ಕರೆದಿದ್ದರು. ನನ್ನ ಮಾರ್ಕ್ಸ್ ಕಾರ್ಡ್ ನೋಡಿ ನೀವ್ಯಾಕೆ ಸರ್ಕಾರಿ ಹುದ್ದೆಗೆ ಅರ್ಜಿ ಹಾಕಿಲ್ಲ ಎಂದು ಕೇಳಿದ್ದರು. ನನ್ನದು ಬಿ.ಎಡ್ . ಆಗಿದ್ದರಿಂದ ಆಗ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಕರೆಮಾಡಿದ್ದರು. 'ನನಗೆ ಸರ್ಕಾರಿ ಕೆಲಸ ಇಷ್ಟವಿಲ್ಲ ಎಂದು ಹೇಳಿದ್ದೆ...ನನ್ನ ಪ್ರೊಫೈಲ್ ನೋಡುತ್ತಾ ಹವ್ಯಾಸ ಎಂದಿದ್ದ ಕಡೆ ಡ್ರಾಯಿಂಗ್ ಎಂದು ಬರೆದಿದ್ದನ್ನು ನೋಡಿ, ಏನು ಡ್ರಾ ಮಾಡ್ತೀರಿ ಎಂದರು. ನಾನು ಏನಾದರೂ ಅಂದದ್ದಕ್ಕೆ ನನ್ನ ಬರಿತೀರಾ...ಎಂದರು..ಸರಿ ಎಂದವನೇ ಪೆನ್ನಿನಲ್ಲಿ ಅವರ ರಫ್ ಸ್ಕೆಚ್ ಹಾಕಿದೆ.ಅದನ್ನು ನೋಡಿ ಖುಷಿಯಾದ ಅವರು, ಅಲ್ಲಿದ್ದ ಶಿಕ್ಷಕಿಯನ್ನು ಕರೆದು ಇವರನ್ನು ಬಿಡಿಸಿ ಎಂದರು..ಅವರದೂ ಸ್ಕೆಚ್ ಹಾಕಿದೆ, ಆನಂತರ ಅಲ್ಲಿನ ಕಾರ್ಯದರ್ಶಿಗೆ ಬರಹೇಳಿ ಅವರದೂ ರಫ್ ಸ್ಕೆಚ್ ಹಾಕಿಸಿದರು..'ನಾಳೆಯಿಂದ ನೀವು ಬಂದು ಸೇರಿಕೊಳ್ಳಿ..ಒಳ್ಳೆ ಕ್ಲಾಸ್ ಟೀಚರ್ ಆಗ್ತೀರಿ 'ಎಂದುಬಿಟ್ಟರು. ಅದೇ ಖುಷಿಯಲ್ಲಿ ಇಬ್ಬರೂ ರೂಮಿಗೆ ಬಂದೆವು.ರಾತ್ರಿ ಮಲಗುವಾಗ ಗಿರಿ 'ಅಲ್ಲಾ ನೀನು ಮೇಸ್ಟ್ರಾಗೋದಿಕ್ಕೇ ಬೆಂಗಳೂರಿಗೆ ಬರಬೇಕಾ.ಮೈಸೂರಲ್ಲಿ ನೂರಾರು ಸ್ಕೂಲಿದೆ...ಸಿನೆಮಾದಲ್ಲಿ ಏನಾದರೂ ಮಾಡೋಣ ಅಂತ ಬಂದದ್ದಲ್ವಾ...' ಎಂದುಬಿಟ್ಟ. ಪಾಠ ಮಾಡಲು ಯಾವಯಾವ ಸಬ್ಜೆಕ್ಟ್ ಇದೆ ಎಂದು ನೋಡುತ್ತಿದ್ದವನಿಗೆ ಆ ಮಾತು ಸರಿಯಾಗಿಯೇ ತಟ್ಟಿತ್ತು .ಹಠ ಮತ್ತೆ ಗರಿಗೆದರಿತ್ತು.
Super. Congrats for all the prizes and adventures :)
ReplyDelete:-) Sankhya Ganapathi is real nice!!
ReplyDeleteMALATHI S