Saturday, July 6, 2013

ಕಾಡುವ ಬರಹಗಾರರ ಕೃತಿಗಳು..

ನಾನು ಯಂಡಮೂರಿ ವೀರೇಂದ್ರನಾಥರ ಕಾದಂಬರಿಗಳನ್ನು ಓದುತ್ತಿದ್ದಾಗ ನನ್ನ ಹುಡುಕುವ,  ಅವರ ಕಾದಂಬರಿಗಳಿಗಾಗಿ ಪರಿತಪಿಸುವ ಪರಿ ನೋಡಿ ನನ್ನ ಗೆಳೆಯರು ನೀನು ಗ್ರೇಟ್ ಗುರು ಎನ್ನುತ್ತಿದ್ದರು. ನಾನು ಹಾಗೆಯೇ ಇದ್ದೆ. ನಾನು ಮೊದಲು ಯಂಡಮೂರಿಯವರ ಕಾದಂಬರಿ ದುಡ್ಡು ಟು ದಿ ಪವರ್ ಆಫ್ ದುಡ್ಡು ಓದಿದ್ದೆ. ಅದನ್ನು ನಾನು ಓದಿದ ಪರಿಯೇ ಹಾಗಿತ್ತು. ಬೆಳಿಗ್ಗೆ ಹತ್ತು ಘಂಟೆಗೆ ತಿಂಡಿ ತಿಂದು ಕುಳಿತವನು ಮದ್ಯಾಹ್ನ ಊಟವನ್ನೂ ಮಾಡದೆ ಸಂಜೆ ಐದು ಘಂಟೆಗೆ ಪೂರ್ತಿಯಾಗಿ ಓದಿ ಮತ್ತೆ ಪ್ರಮುಖವೆನಿಸಿದ್ದ ಇಷ್ಟವಾಗಿದ್ದ ಪುಟಗಳನ್ನ ಮತ್ತೊಮ್ಮೆ ತಿರುವಿ ಹಾಕಿದ್ದೆ. ಕಾದಂಬರಿಯ ನಿರೂಪಣೆ ಮತ್ತು ಅದರಲ್ಲಿದ್ದ ದ್ರವ್ಯ ನನ್ನನ್ನು ಹಿಡಿದು ಕೂರಿಸಿಬಿಟ್ಟಿತ್ತು. ಪಕ್ಕ ಸಿನಿಮಾ ಶೈಲಿಯ ಕಾದಂಬರಿ ಅದು. ಅಲ್ಲಿಯವರೆಗೆ ನಾನು ಎಸ್.ಎಲ್. ಭೈರಪ್ಪನವರ ಅದುವರೆವಿಗೂ ಪ್ರಕಟವಾಗಿದ್ದ ಕಾದಂಬರಿ ಎಲ್ಲವನ್ನೂ ಓದಿದ್ದೆ. ಹಾಗೆ ಆನಕೃ, ತರಾಸು, ಕೆಟಿ ಗಟ್ಟಿ,ಮಾಸ್ತಿ, ಸಾಯಿಸುತೆ, ...ಹೀಗೆ ಅಸಂಖ್ಯಾತ ಕಾದಂಬರಿಕಾರರ ಕಾದಂಬರಿಗಳನ್ನು ಓದಿದ್ದೆನಾದರೂ ಈ ರೀತಿಯ ಸಿನಿಮೀಯ ಕಾದಂಬರಿ ಓದಿರಲಿಲ್ಲ. ಆವಾಗ ಥ್ರಿಲ್ಲರ್ ಪುಸ್ತಕಗಳಲ್ಲಿ ಬರುತ್ತಿದ್ದ ನರಸಿಂಹಯ್ಯ, ಸಾಕೃ ಪ್ರಕಾಶ, ಸಾಸ್ಕಾಮೂರ್ತಿ, ಕೌಂಡಿನ್ಯ ಮುಂತಾದವರ ಇದೆ ರೀತಿಯ ಕಾದಂಬರಿಗಳನ್ನು ಓದಿದ್ದೆನಾದರೂ ಯಂಡಮೂರಿಯ ಕಾದಂಬರಿ ಕೊಟ್ಟ ಮಜಾವನ್ನು ಅದ್ಯಾವುದೂ ಕೊಟ್ಟಿರಲಿಲ್ಲ. ಅದಾದ ಮೇಲೆ ಶುರುವಾಯಿತು ಯಂಡಮೂರಿಯವರ ಕಾದಂಬರಿ ಓದುವ ಹುಚ್ಚು. ಹುಡುಕಿ ಹುಡುಕಿ ಅವರು ವರ್ಷಗಟ್ಟಲೆ ಬರೆದಿದ್ದನ್ನು ತಿಂಗಳಲ್ಲಿ ಓದಿ ಮುಗಿಸಿದ್ದೆ. ಹಾಗಾಗಿ ನನ್ನ ಬಗ್ಗೆ ಗೆಳೆಯ ಹೊಗಳಿದಾಗ ನನಗೂ ಹಾಗೆಯೇ ಅನಿಸಿತ್ತು. ಹೌದಲ್ಲ ನನ್ನಂತಹ ಯಂಡಮೂರಿಯವರ ಕಾದಂಬರಿ ಅಭಿಮಾನಿ ಜಗತ್ತಿನಲ್ಲಿಯೇ ಇರಲಿಕ್ಕೆ ಸಾಧ್ಯವೇ ಇಲ್ಲ ಎನಿಸಿತ್ತು. ನಾನು ಗರ್ವದಿಂದ ಬೀಗಿದ್ದೆ.
ಆದರೆ ಅದೊಂದು ದಿನ ಗೆಳೆಯ ಚಂದ್ರ ಅವನ ಸಹಪಾಠಿಯನ್ನು ನನಗೆ ಪರಿಚಯಿಸಿದ್ದ. ‘ಇವನೂ ಯಂಡಮೂರಿಯ ಅಭಿಮಾನಿ ..ನೋಡು ನಿನಗೆ ಜೋಡಿ ಸಿಕ್ಕಂತಾಯಿತು..” ಎಂದ. ನನಗೂ ಖುಷಿಯಾಯಿತು. ಓದಿದ ಮೇಲೆ, ನೋಡಿದ ಮೇಲೆ ಅದರ ಬಗ್ಗೆ ಮಾತನಾಡಲು ಯಾರೂ ಇರದಿದ್ದರೆ ಹೇಗೆ..? ಆದರೆ ನಾನೇ ಯಂಡಮೂರಿ ಕಾದಂಬರಿಯ ಅದ್ಭುತ ಅಭಿಮಾನಿ ಓದುಗನಾಗಿರುವುದರಿಂದ ಇವನ್ಯಾವ ಲೆಕ್ಕ ಎನಿಸದಿರಲಿಲ್ಲ. ಆದರೆ ವಿಷಯವೇ ಬೇರೆಯಿತ್ತು. ಮೈಸೂರಿನ ಪಕ್ಕದ ಆತ ಒಂದು ಯಂಡಮೂರಿಯವರ ಕನ್ನಡ ಅನುವಾದಿತ ಕೃತಿ ಓದಿದ್ದಾನೆ. ಇಷ್ಟವಾಗಿದೆ. ಆದರೆ ಅದು ಅನುವಾದ ಎಂದು ಗೊತ್ತಾದಾಗ ಅದ್ಯಾಕೋ ಒರಿಜಿನಲ್ ಎನಿಸಿಲ್ಲ. ಯಂಡಮೂರಿಯವರೇ ಬರೆದ ತೆಲುಗು ಮೂಲ ಕೃತಿಯನ್ನೇ ಓದಬೇಕೆನ್ನಿಸಿ ನಿರ್ಧರಿಸಿದ್ದೆ ತೆಲುಗು ಕಲಿಯಲು ಪ್ರಾರಂಭಿಸಿ, ಕಲಿತು ಒಂದಷ್ಟು ಓದಿ ಆನಂತರ ಯಂಡಮೂರಿಯವರ ಎಲ್ಲಾ ಕಾದಂಬರಿಯನ್ನೂ ತೆಲುಗು ಭಾಷೆಯಲ್ಲಿ ಓದಿಬಿಟ್ಟಿದ್ದ ಆಸಾಮಿ ಅದ್ಭುತ ಅಭಿಮಾನಿ ಅವನು.
ಅವನ ಬಗ್ಗೆ ಗೊತ್ತಾದ ನಂತರ ನಾನೇ ಅದ್ಭುತ ಓದುಗನೆಂದು ಕುಣಿದಾಡುತ್ತಿದ್ದ ನನಗೆ ತಕ್ಕ ಶಾಸ್ತಿಯಾದಂತೆನಿಸಿತ್ತು.
ವಿಷಯ ಅದಲ್ಲ. ಒಬ್ಬ ಬರಹಗಾರನ ತಾಕತ್ತೇ ಅಂತಹದು. ಅದಾದ ಮೇಲೆ ತುಂಬಾ ಬರಹಗಾರರ ಕಾದಂಬರಿ ಓದಿದ್ದೇನೆ. ಅವುಗಳಲ್ಲಿ ಸ್ಲಮ್ ಡಾಗ್ ಮಿಲಿಯನರ್ ಕಾದಂಬರಿಯನ್ನು ಅದೇ ರೀತಿ ಓದಿದ್ದೆ. ನನಗಿಷ್ಟವಾದದ್ದು ವಿಕಾಸ್ ಸ್ವರೂಪ್ ಶೈಲಿ ಮತ್ತು ಚಿಕ್ಕಚಿಕ್ಕ ವಿಷಯಕ್ಕೂ ಅವರು ಕೊಡುವ ವಿವರ. ಉದಾಹರಣೆಗೆ ಸ್ಲಮ್ ಡಾಗ್ ಕಾದಂಬರಿಯನ್ನು ಓದುವಾಗ ನನ್ನ ಕಣ್ಣ ಮುಂದೆಯೇ ಮುಂಬಯಿಯ ಸ್ಲಂ ಎದ್ದು ಬಂದಂತೆ ಭಾಸವಾಗಿತ್ತು. ಅದಾದ ನಂತರ ಅವರದೇ ಸಿಕ್ಸ್ ಸಸ್ಪೆಕ್ಟ್ಸ್ ಓದಿದೆ. ಅದರಲ್ಲಿ ಆರು ವಿಭಿನ್ನ ವರ್ಗದವರ ಕಥೆಯಿದೆ. ವಿಷಯ ಅದಲ್ಲ. ಆರು ಜನರ ಹಿನ್ನೆಲೆಯನ್ನು ವಿಕಾಸ್ ನಮ್ಮ ಮುಂದಿಡುವ ಪರಿ ಅದ್ಭುತ . ಒಂದು ಕಾದಂಬರಿಗಾಗಿ ಅವರ ಅದ್ಯಯನ ಇದೆಯಲ್ಲ ನಿಜಕ್ಕೂ ಮೆಚ್ಚಲಾರ್ಹ. ಹಾಗಂತ ಬರೀ ಸಂಶೋಧನೆಯೇ ಉತ್ತಮ ಕಾದಂಬರಿ ಆಗಲಾರದು. ಅದಕ್ಕೆ ತಕ್ಕಂತಹ ಸೃಜನಶೀಲತೆಯೂ ಬೇಕು.
ವಿಕಾಸ್ ಒಂದರ ಹಿಂದೆ ಒಂದರಂತೆ ಕಾದಂಬರಿ ಬರೆದವರೂ ಅಲ್ಲ. ಇದುವರೆವಿಗೂ ಬರೀ ಮೂರೇ ಕಾದಂಬರಿ ಬರೆದಿರುವ ವಿಕಾಸ್ ಪ್ರತಿ ಕಾದಂಬರಿಯ ವಸ್ತು-ವಿಷಯಕ್ಕೆ ವರ್ಷಗಟ್ಟಲೆ ಅದ್ಯಯನ ಮಾಡಿರುವುದು ಕಾದಂಬರಿ ಓದುವಾಗ ನಮಗೆ ಗೊತ್ತಾಗುತ್ತದೆ. ಅವರ ಮೊದಲ ಕಾದಂಬರಿ ಕ್ಯೂ ಅಂಡ್ ಎ [ಸ್ಲಂ ಡಾಗ್ ಮಿಲಿಯನರ್] ಬಿಡುಗಡೆಯಾದದ್ದು 2005 ರಲ್ಲಿ. ಅದಾದ ನಂತರ ಸಿಕ್ಸ್ ಸಸ್ಪೆಕ್ತ್ಸ್ 2008 ರಲ್ಲಿ ಬಿಡುಗಡೆಯಾಯಿತು. ಅದಾದ ಐದು ವರ್ಷಗಳ ನಂತರ ಅವರ ಈ ಹೊಸ ಕಾದಂಬರಿ ಆಕ್ಸಿಡೆಂಟಲ್ ಅಪ್ಪ್ರೆಂಟೈಸ್ ಬಿಡುಗಡೆಯಾಗಿದೆ. ಅಂದರೆ ಗಮನಿಸಿ ಪ್ರತಿ ಕಾದಂಬರಿಯ ನಡುವಿನ ಅಂತರವನ್ನು.ಮೊನ್ನೆ ಗೊತ್ತಾದಾಗ ಮತ್ತೆ ಓದಲಿಕ್ಕೆ ಏನೋ ಸಿಕ್ಕಿದೆ ಎನಿಸಿ ಖುಷಿಯಾದ್ದಂತೂ ನಿಜ. ಹಾಗಾಗಿ ಅದನ್ನು ಉತ್ಸುಕತೆಯಿಂದ ಓದಲು ಕಾಯುತ್ತಿದ್ದೇನೆ. ಓದಿದ ಮೇಲೆ ಬೇಕಾದರೆ ಅದರ ಬಗ್ಗೆ ಒಂದಷ್ಟು ಮಾತಾಡಬಹುದು.
ನಿಮ್ಮನ್ನು ಆ ರೀತಿ ಕಾಡಿ ಕಾಡಿ ಓದಿಸಿಕೊಂಡ ಕಾದಂಬರಿ/ಕಾದಂಬರಿಕಾರ ಯಾವುದು/ಯಾರು? 

Monday, July 1, 2013

ಚಿತ್ರಗಳು..ವಿಚಿತ್ರಗಳು..

ಕಳೆದವಾರ ಕನ್ನಡದಲ್ಲಿ ನಾಲ್ಕು ಚಿತ್ರಗಳು ಬಿಡುಗಡೆಯಾದವು. ಬಿಡಲಾರೆ ಎಂದೂ ನಿನ್ನ, ಚಂದ್ರ, ನಮ್ ದುನಿಯಾ ನಮ್ ಸ್ಟೈಲ್ ಮತ್ತು ಸೈಕಲ್  ಹಾಗೂ ಹಿಂದಿಯಲ್ಲಿ  ಘನ್ ಚಕ್ಕರ್. ಹಠಕ್ಕೆ ಬಿದ್ದು ಐದೂ ಚಿತ್ರಗಳನ್ನು ಒಂದೂವರೆ ದಿನದಲ್ಲಿ ನೋಡಿಯಾದ ಮೇಲೆ ಐದೂ ಚಿತ್ರಗಳು ತಲೆಯಲ್ಲಿ ಕುಣಿಯತೊಡಗಿದ್ದವು.ಘನ ಚಕ್ಕರ್ ಒಂದೊಳ್ಳೆ ಕಥಾ ಎಳೆಯಿರುವ ಚಿತ್ರ. ನಿರ್ದೇಶಕ ರಾಜಕುಮಾರ್ ಗುಪ್ತ ತಮ್ಮ ನೋ ಒನ್ ಕಿಲ್ಲೆಡ್ ಜೆಸ್ಸಿಕಾ ಚಿತ್ರದಲ್ಲೇ ತಮ್ಮ ಖದರ್ ತೋರಿಸಿದ್ದವರು. ಘನಚಕ್ಕರ್ ಕೂಡ ಅವರಲ್ಲಿನ ಕಥೆಯ ಆಲೋಚನೆಯ ನಾವೀನ್ಯತೆಗೆ ಸಾಕ್ಷಿಯಾಗುವ ಚಿತ್ರ.
ಒಂದು ದರೋಡೆಯ ನಂತರ ಹಣವನ್ನೆಲ್ಲಾ ಒಬ್ಬನ ಕೈಗೊಪ್ಪಿಸಿ ಅದನ್ನು ಪಾಲು ಮಾಡಿಕೊಳ್ಳಬೇಕು ಎಂದಾಗ ಆತ ನನಗ್ಯಾವುದೂ ನೆನಪಿಲ್ಲ ಎಂದು ಬಿಟ್ಟರೆ..? ಇಲ್ಲೂ ಅದೇ ಆಗುತ್ತದೆ. ಮೊದಲಿಗೆ ಈ ದರೋಡೆಕೋರ ಘಜಿನಿಯನ್ನ ಅವನ ಸಹಚರರು ನಂಬುವುದಿಲ್ಲ. ಆದರೆ ಹೇಗೆ ಬಾಯಿ ಬಿಡಿಸುವುದು. ಅವರು ಮಾಡುವ ಪ್ರಯತ್ನಗಳು.. ಮೊದಲಾರ್ಧ ಚಿತ್ರ ಸೂಪರ್. ಆದರೆ ತದನಂತರ ಸ್ವಲ್ಪ ಮಟ್ಟಗಿನ ದಾರಿ ತಪ್ಪುವ ನಿರ್ದೇಶಕರು ಬರು ಬರುತ್ತಾ ಚಿತ್ರದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಳ್ಳುತ್ತಾರೆ. ಮುಂದೆ..ಸುಮ್ಮನೆ ಒಮ್ಮೆ ನೋಡಲು ಮೋಸವಲ್ಲದ ಚಿತ್ರ.
ಇದೆ ಮಾತನ್ನು ಕನ್ನಡದ ನಾಲ್ಕೂ ಚಿತ್ರಗಳಿಗೆ ಹೇಳಲಾಗುವುದಿಲ್ಲ. ಹೋಲಿಸಿದರೆ ಬಿಡಲಾರೆ ಎಂದೂ ನಿನ್ನ ಚಿತ್ರ ಸಿದ್ಧ ಸೂತ್ರದಿಂದ ಒಂದು ಚೂರು ಆಚೆ ಸರಿಯದ ಚಿತ್ರ. ಆದರೆ ಬಜೆಟ್ ಕಡಿಮೆಯಿರುವುದರಿಂದ ಇರುವುದನ್ನೇ ಬಡಿಸಬೇಕೆನ್ನುವುದು  ನಿರ್ದೇಶಕನ ಆಶಯ. ಅದು ಅನಿವಾರ್ಯ ಕೂಡ. ಹೆಸರಲ್ಲಿ ಕಥೆಯಿದೆ. ಅವಳು ಸಿಕ್ಕಳು, ನಕ್ಕಳು ಪ್ರೀತಿಸಿದಳು, ಒಪ್ಪದಿದ್ದಾಗ ಸತ್ತಳು, ಮತ್ತೆ ದೆವ್ವವಾದಳು..ಇದಿಷ್ಟೇ ಕಥೆ.
ಇನ್ನು ಚಂದ್ರನನ್ನು ಯಾವರೀತಿಯಿಂದಲೂ ಭರಿಸಲು ನನಗೆ ಸಾಧ್ಯವಾಗಲಿಲ್ಲ. ಅಪ್ಪಾ ಚಿತ್ರವೇ ಮುಂದಕ್ಕೆ ಹೋಗುವುದಿಲ್ಲ. ಅವರು ಅಲ್ಲೇ ಅದೇ ಮಾತು. ಇಬ್ಬರೂ ಚಂದ್ರರೇ..ಪ್ರೀತಿಸಿದರು. ರಾಜಕುಮಾರಿ ಮತ್ತು ಮೇಸ್ಟರ ಮಗ. ಆಮೇಲೆ..ಬರೀ ಸ್ವಲ್ಪ ಮಟ್ಟಗಿನ ಶ್ರೀಮಂತನ ಮಗಳಿಗೆ ಲೈನು ಹೊಡೆದರೆ ಬಿಡುವುದಿಲ್ಲ..ಇನ್ನೂ ರಾಜಕುಮಾರಿಯನ್ನು ಪ್ರೀತಿಸಿದರೆ ಯಾರು ಒಪ್ಪುತ್ತಾರೆ..ವಿರೋಧ, ಪ್ರತಿರೋಧ. 
ನಮ್ ದುನಿಯಾ ನಮ್ ಸ್ಟೈಲ್. ಕನ್ನಡದ ಮಟ್ಟಿಗೆ ಎಲ್ಲವೂ ಇರುವ ಏನೂ ಇಲ್ಲದ ಚಿತ್ರ.ಮೂರು ಜನ ನಾಯಕರು ಎಂದಾಗ ನಾವೆಲ್ಲಾ ದಿಲ್ ಚಾಹತಾ ಹಾಯ್, 3 ಈಡಿಯಟ್ ಸ್ ಗುಂಗಿನಲ್ಲಿರುತ್ತೇವೆ. ಹಾಗಂತ ಪ್ರೀತಂ ಗುಬ್ಬಿ ಇರಬೇಕಲ್ಲ. ಅವರು ಇಲ್ಲೇ ಇದ್ದಾರೆ. ಸುಮ್ಮನೆ ಹುಡುಗಿಯರನ್ನು ಕಂಡ ತಕ್ಷಣ ನಮ್ಮ ಜನ್ಮ ವೆ ಪ್ರೀತಿಸುವುದಕ್ಕೋಸ್ಕರ ಎಂದು ತಿಳಿದಿರುವ ಮೂರು ಜನರು ನಾಯಕಿಯರ ಹಿಂದೆ ಮುಂದೆ ಓಡಾಡಿ ಪ್ರೀತಿಸುತ್ತಾರೆ ಎಂಬುದನ್ನು ಯಾವುದೇ ಸ್ವಾರಸ್ಯವಿಲ್ಲದೆ ನೀರಸವಾಗಿ ಬೋರಾಗಿ ಬೇಸರವಾಗುವಂತೆ ಪ್ರೀತಂ ಗುಬ್ಬಿ ನಮ್ಮ ಮುಂದಿಟ್ಟಿದ್ದಾರೆ.
ಸ್ಸೈಕಲ್ ತುಳಿಯುವುದಕ್ಕೆ ಮಾತ್ರವಲ್ಲ ಧಮ್ ಬೇಕಿರುವುದು ನೋಡುವುದಕ್ಕೂ ಎನ್ನುವುದನ್ನು ಸೂಕ್ತ ಉದಾಹರಣೆ, ಉಪಕಥೆಗಳ ಮೂಲಕ ಸಾಧಿಸಿ ತೋರಿಸುವ ಚಿತ್ರ.
** ನಾಯಕಿಗೆ ನಾಯಕನ ಮೇಲೆ ಪ್ರಾಣ. ಹಾಗಾಗಿ ಹಾಡಿನಲ್ಲಿ ಕನಸಿನ ಲೋಕಕ್ಕೆ ತೆರಳಿ ಒಂದು ಸುತ್ತು ಕುಣಿಯುತ್ತಾಳೆ.  ಆದರೆ ಉಪನಾಯಕಿಗೆ ಪಕ್ಕದಲ್ಲೇ ಅತ್ತೆ ಮಗನಿದ್ದಾನೆ ಮತ್ತವನ ಜೊತೆ ಆಕೆ ಚೆನ್ನಾಗಿದ್ದು ಮದುವೆಗೂ ಒಪ್ಪಿಕೊಂಡಿದ್ದಾಳೆ. ಆದರೂ ಇರಲಿ ಎಂಬಂತೆ ಇನ್ನರ್ಧ ಹಾಡಿನಲ್ಲಿ ನಾಯಕನ ಜೊತೆ ತಾನೂ ಕುಣಿಯುತ್ತಾಳೆ.
**ಮಲೇಶಿಯಾದಲ್ಲಿ ಜಾಸ್ತಿ ತಮಿಳರಿದ್ದಾರೆ ಎಂದು ಅಲ್ಲಿಗೆ ಹೋಗಿ ಬಂದವರು ಹೇಳುತ್ತಾರೆ. ಆದರೆ ನಮ್ಮ ನಾಯಕರ ಅದೃಷ್ಟಕ್ಕೆ ಮಲೇಶಿಯಾದಲ್ಲಿ ಸಿಗುವವರೆಲ್ಲರೂ ಕನ್ನಡಿಗರೇ. ಮೂವರಲ್ಲಿ ಒಬ್ಬ ನಿರ್ದೇಶಕರನ್ನೇ ಹೇಗಾದರೂ ಯಾಮಾರಿಸಬೇಕು ಎಂದು ಮಲೇಷಿಯಾದ ಹುಡುಗಿಯನ್ನೇ ಪ್ರೀತಿಸಿದರೂ ಅವಳ ತಂದೆ ಕನ್ನಡಿಗನನ್ನೇ ಮಾಡಿ ನಿರ್ದೇಶಕರು ಹುಬ್ಬೇರಿಸುತ್ತಾರೆ.
**ಅದು ಕಲಾತ್ಮಕ ಇದು ಕಮರ್ಷಿಯಲ್ ಎಂದು ತನ್ನ ಎರಡೂ ಚಿತ್ರಗಳನ್ನು ವಿಂಗಡಿಸಿದ್ದರು ರೂಪಾ ಅಯ್ಯರ್. ಹಾಗಾದರೆ ಕಮರ್ಷಿಯಲ್ ಅಂದರೆ ಮನರಂಜನೆ ಎಂದು ನಾವೆಲ್ಲಾ ತಿಳಿದುಕೊಂಡಿರುವುದು ತಪ್ಪೇ ಎಂಬ ಪ್ರಶ್ನೆ ನಮ್ಮನ್ನು ನಿಮ್ಮನ್ನು ಚಿತ್ರ ನೋಡಿದ ಮೇಲೆ ಕಾಡದೆ ಇರದು.
**ಬೆಂಗಳೂರೆಂದರೆ ಇಡೀ ಪಾತಕ, ರೌಡಿಗಳ ಲೋಕವೇ..? ಹೌದು ಎನ್ನುತ್ತಾರೆ ನಮ್ಮ ನಿರ್ದೇಶಕರು. ಅದಕ್ಕೆ ಎಲ್ಲಾ ಬಿಟ್ಟು ಬೆಂಗಳೂರಿಗೆ ಬಂದವರು ಬೇಗನೆ ರೌಡಿಯಾಗಿಬಿಡುತ್ತಾರೆ...
ಕೊನೆಯ ಮಾತು:
ಕೆಲವೊಮ್ಮೆ ಚಿತ್ರವನ್ನು ಕೆಲವು ಮಾರ್ಜಿನ್ ಕೊಟ್ಟು ಸಿನಿಮಾ ನೋಡಬೇಕಾಗುತ್ತದೆ. ಆದರೆ ಒಂದು ಚಿತ್ರಕ್ಕೆ ಸಾಮಾನ್ಯವಾಗಿ ಎಲ್ಲವೂ ಇದ್ದರೂ ಕಥೆಯಲ್ಲಿ ಮಾತ್ರ ತಿರುಳಿಲ್ಲ ಎಂದಾಗ ದುಡ್ಡು ಕೊಟ್ಟದ್ದಕ್ಕೆ ದಿನವನ್ನು ವ್ಯರ್ಥ ಮಾಡಿದ್ದಕ್ಕೆ ಬೇಸರವಾಗುತ್ತದೆ. ಕೆಟ್ಟ ಸಿನೆಮಾಗಲಿಲ್ಲದ ಚಿತ್ರರಂಗವಿಲ್ಲ. ಆದರೆ ಸುಖಾ ಸುಮ್ಮನೆ ಚಿತ್ರ ಮಾಡುವುದು ಅದೆಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಇಟ್ಟುಕೊಂಡು ಇದನ್ನು ಬರೆದಿದ್ದೇನೆ.
ಈ ಪ್ರಶ್ನೆ ನಿಮಗೆ.
 ಮೇಲಿನವುಗಳಲ್ಲಿ  ಯಾವ ಚಿತ್ರವನ್ನು ನೀವು ನೋಡಿದಿರಿ..? ನಿಮಗೇನನ್ನಿಸಿತು..?

ಪ್ರಾಣ ಕೊಡುವ, ಪ್ರಾಣ ತೆಗೆಯುವ ಪ್ರೇಮಿಗಳು...

ಆತ ಬುದ್ದಿ ನೆಟ್ಟಗಿರದವ. ಚಿತ್ರ ಪ್ರಾರಂಭವಾದ ಹತ್ತು ನಿಮಿಷಕ್ಕೆ ಇದು ನೋಡುಗನಿಗೆ ಗೊತ್ತಾಗಿ ಬಿಡುತ್ತದೆ.ಆಕೆ ಬುದ್ದಿ ಮಾಂದ್ಯ ಹೆಣ್ಣು ಮಗಳು. ಅವಳ ಪರಿಸ್ಥಿತಿಯಿಂದಾಗಿ ಆಕೆ ಮನೆಯವರಿಗೆ ಭಾರ. ಆದರೆ ಸಂಬಂಧಗಳ ಕೊಂಡಿಯಿಂದ ಸುಲಭವಾಗಿ ಕಳಚಿಕೊಳ್ಳುವುದಾದರೂ ಹೇಗೆ..ಎಂಬುದು ಮನೆಯವರ ಪ್ರಶ್ನೆ. ಇವನೋ ತನ್ನ ಹುಚ್ಚು ಹುಚ್ಚಾಟಗಳಿಂದ ಮನೆಯವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಹಿಂಸಾಜೀವಿಯಾಗಿದ್ದಾನೆ. ವಯಸ್ಸು ಮೂವತ್ತಾದರೂ ಜವಾಬ್ದಾರಿಯಿಲ್ಲ ಎಂಬುದು ಮನೆಯವರ ಆರೋಪ. ಮದುವೆಯಾಗಿಲ್ಲ.
ಅದೊಂದು ದಿನ ಅಕೆಯನ್ನು ಸಂಧಿಸುವ ಅವಕಾಶ ಆಚನಾಕ್ಕಾಗಿ ನಮ್ಮ ನಾಯಕನಿಗೆ ಒದಗಿಬರುತ್ತದೆ. ಅವರ ಮನೆಗೆ ಶುಭಾಶಯ ಕೋರಲು ಹೋಗುವವನಿಗೆ ಆ ಮನೆಯವರು ಆಕೆಯನ್ನು ದೂರತಳ್ಳುವ ಹುನ್ನಾರ ಮಾಡಿರುವುದು ಗೊತ್ತಾಗುತ್ತದೆ. ಮುಂದೆ ಆಕೆಯನ್ನು ನಾಯಕ ಸಂಧಿಸುತ್ತಾನೆ. ಇಡೀ ಚಿತ್ರ ಅಪರೂಪದ ಪ್ರೇಮಕಥೆಯ ಚಿತ್ರವಾಗಿ ಮಾರ್ಪಡುತ್ತದೆ.
2002 ರಲ್ಲಿ ಬಿಡುಗಡೆಯಾದ ಓಯಸಿಸ್ ಚಿತ್ರದ ಕಥೆ ಕೇಳುವುದರಲ್ಲಿ ಮಜಾವಿಲ್ಲ. ನೋಡುವುದರಲ್ಲಿ ಸೊಬಗಿದೆ. ಒಂದು ಅನನ್ಯವಾದ ಚಿತ್ರ ನೋಡಾದ ಮೇಲೆ ನಮ್ಮನ್ನು ಆವರಿಸುತ್ತದೆ. ಕಲಾವಿದರಿಬ್ಬರೂ ನಟಿಸಿದ್ದಾರಾ..ಅಥವಾ ಅವರು ಇರುವುದೇ ಹಾಗಾ ಎಂಬ ಅನುಮಾನ ಮೂಡುತ್ತದೆ ಎಂದರೆ ಅದು ಅತಿಶಯೋಕ್ತಿ ಎನಿಸದು.  
ಒಬ್ಬ ಒಳ್ಳೆಯ ಪ್ರೇಮಿ ಯಾರು ಎನ್ನುವ ಪ್ರಶ್ನೆ ನನ್ನನ್ನು ಆವಾಗಾವಾಗ ಕಾಡತೊಡಗುತ್ತದೆ. ಮೊನ್ನೆ ರಾ೦ಝನಾ ಚಿತ್ರವನ್ನು ನೋಡಿದಾಗ ನನಗೆ ಒಂದು ಪ್ರಶ್ನೆ ಕಾಡತೊಡಗಿತು. ಪ್ರತಿಕ್ರಿಯೆ ಬರದಿದ್ದರೂ ಒಬ್ಬ ಹುಡುಗಿಯನ್ನು ಅಂಥಾ ಪರಿ ಪ್ರೀತಿಸಬೇಕಾ.? ಎಂದು. ಈಗ ನೋಡಿ ಹಿಂದೆ ಬೀಳುವುದು ಅವಳನ್ನು ಒಲಿಸಿಕೊಳ್ಳುವುದು ಓಕೆ. ಆದರೆ ಆಕೆ ಪ್ರತಿಕ್ರಿಯಿಸದಿದ್ದಾಗ ಅಥವಾ ಸಂಪೂರ್ಣವಾಗಿ ನಾವೇ ಆಕೆಗೆ ಬೇಡದಾದಾಗ ಅಥವಾ ನಮ್ಮ ಮೇಲೆ ಅಂತಹ ಭಾವನೆ ಆಕೆಗೆ ಬರದಿದ್ದಾಗಳೂ ಆಕೆಯನ್ನು ಪ್ರೀತಿಸುವುದು, ನನ್ನನ್ನು ಪ್ರೀತಿಸಲೇ ಬೇಕೆಂದು ಹಠ ಮಾಡುವುದು ಸರಿಯಾ..? ಡರ್ರ್ ಚಿತ್ರದ ಶಾರುಕ್ ಖಾನ್ ಪ್ರೀತಿಸುವ ನೆಪದಲ್ಲಿ ಕೊಟ್ಟ ಕಿರುಕುಳ ಎಂತಹದ್ದು ನಮಗೂ ನಿಮಗೂ ಗೊತ್ತಿದೆ. ಫೋನ್ ಬಂದರೆ ಸಾಕು ಆಕೆ ಬೆಚ್ಚಿ ಬೆದರಬೇಕು ಆ ರೀತಿ ಕಾಡಿದ, ಒಂದು ಕ್ಷಣವೂ ನೆಮ್ಮದಿಯಿಂದ ಇರಲು ಬಿಡದ ಅವನನ್ನು ಪ್ರೀತಿಸುವುದಾದರೂ ಹೇಗೆ ಮತ್ತು ಏಕೆ..?
ಅಕಸ್ಮಾತ್ ಒಂದು ಹುಡುಗಿ ನಮಗೆ ಇಷ್ಟವಿಲ್ಲದಿದ್ದರೂ ನಮ್ಮ ಹಿಂದೆ ಬಿದ್ದರೆ ನಮಗೆನನ್ನಿಸುತ್ತದೆ.?
ಆ ಕಾರಣದಿಂದಾಗಿಯೇ ನನಗೆ ಕುಂದನ್ ಪಂಡಿತ್ ಗಿಂತ ಆರ್ಯ ಇಷ್ಟವಾಗುತ್ತಾನೆ. ಆಕೆಯ ಮೇಲೆ ಅಪಾರ ಮನಸಿದೆ. ಆದರೆ ಈಗಾಗಲೇ ಆಕೆ ಬೇರೆಯವರನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದಾಗ ಅವಳನ್ನು ಆಕೆಯ ಪ್ರಿಯಕರನ ಜೊತೆ ಒಂದು ಮಾಡುವುದಕ್ಕೆ ನಿಲ್ಲುವ ಆರ್ಯ ತ್ಯಾಗಮಯಿ ಎನಿಸುವುದಿಲ್ಲ, ಇಡೀ ಚಿತ್ರದಲ್ಲಿ ಆ ಪಾತ್ರ ಎಲ್ಲೂ ಸ್ವಕರುಣೆಯಿಂದ ನರಳುವುದಿಲ್ಲ.
ಆದರೆ ಕುಂದನ್ ಪಂಡಿತ್ ಜೊತೆಯಲ್ಲಿ ತಾನು ಜೊಯಳನ್ನು ಪ್ರೀತಿಸಿದ್ದಷ್ಟೇ ತನ್ನನ್ನು ಪ್ರೀತಿಸುತ್ತಿರುವ ತನ್ನ ಗೆಳತಿಯ ಕಡೆಗೆ ಗಮನವನ್ನೇ ಹರಿಸುವುದಿಲ್ಲ. ಆಕೆಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾನೆಯೇ ಹೊರತು ಆಕೆಯ ಪ್ರೀತಿಯನ್ನು ಕೊನೆಯವರೆಗೂ ಅರ್ಥ ಮಾಡಿಕೊಳ್ಳುವುದಿಲ್ಲ. ಜೋಯಾಳಿಗೆ ಮದುವೆ ನಿಶ್ಚಯವಾಗಿದೆ ಎಂದು ತಿಳಿದಾಕ್ಷಣವೇ ಹಠಕ್ಕಾಗಿ ಗೆಳತಿಯನ್ನು ಮದುವೆಯಾಗಲು ಸಿದ್ಧನಾಗಿ ಆಕೆಯ ಮುಂದೆ ದೊಡ್ಡ ದೊಡ್ಡ ಮಾತನ್ನಾಡುವ ಕುಂದನ್ ಜೋಯಾಳ ಮದುವೆ ನಿಂತ ಗಡಿಬಿಡಿಯಲ್ಲಿ ತನ್ನ ಮದುವೆಯನ್ನು ನಿಲ್ಲಿಸುತ್ತಾನೆ. ಪಾಪ ಆಕೆಯ ಗತಿ..? ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಕುಂದನ್ ಹೇಗೆ ಹೀರೋ ಆಗುತ್ತಾನೆ..
ಇದೆ ಕುಂದನ್ ಹಿನ್ನೆಲೆ ಸಾಧುತನದ್ದು. ಹಾಗಾಗಿ ಬಚಾವ್..ಅಕಸ್ಮಾತ್ ಒರಟು ಹಿನ್ನೆಲೆಯವನೋ, ಕಟು ಮನಸ್ಸಿನವನೋ ಆಗಿದ್ದರೆ..
ಮುಖಕ್ಕೆ ಬ್ಲೇಡ್ ಹಾಕುತ್ತಿದ್ದನಾ..?ಮುಖಕ್ಕೆ ಆಸಿಡ್ ಎರಚುತ್ತಿದ್ದನಾ..? ಸಾಧ್ಯತೆಗಳು ಇಲ್ಲ ಎನ್ನುವಂತಿಲ್ಲ.
ಇರಲಿ. ಇದೊಂದು ಸುಮ್ಮನೆ ತಲೆಹರಟೆಯ ಆಲೋಚನೆಗಳು ಮೊನ್ನೆ ಶೋಭಾ ಡೇ ಬರೆದ ಲೇಖನವನ್ನು ಓದಿದ ಮೇಲೆ ತಲೆಯಲ್ಲಿ ಹಾದುಹೋಯಿತು.
ಕೊಸರು: ಹೀಗೆ ರಸ್ತೆಯಲ್ಲಿ ಹೋಗುವಾಗ ಚಂದ್ರ ಚಿತ್ರದ ಪೋಸ್ಟರ್ ಕಣ್ಣಿಗೆ ಬಿದ್ದಿತು. ಅತ್ಯುತ್ತಮ ವಸ್ತ್ರವಿನ್ಯಾಸವನ್ನು ಹೊಂದಿರುವ ಸುಂದರಿ ಶ್ರೇಯಳನ್ನು ಹಿಂದಿನಿಂದ ಪ್ರೇಂ ಬಳಸಿರುವ ರೋಮ್ಯಾಂಟಿಕ್ ಪೋಸ್ಟರ್ ಅದು. ಎಲ್ಲಾ ಸರಿ. ಆದರೆ  ಲಹರಿಯಲ್ಲಿರುವ ಶ್ರೇಯಾಳ ಕೊರಳಿಗೆ ನಾಯಕ ನಟ ಪ್ರೇಂ, ದಂಡುಪಾಳ್ಯ ಹಂತಕನೋಪಾದಿಯಲ್ಲಿ ತನ್ನ ಖಡ್ಗವನ್ನು ಹಿಡಿದು ನಮ್ಮೆಡೆಗೆ ವೀರಾವೇಶದಿಂದ ನೋಡುತ್ತಿರುವುದು ಏನನ್ನು ಸೂಚಿಸುತ್ತದೆ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು.ಅಂತಹ ರೋಮ್ಯಾಂಟಿಕ್ ಮೂಡಿನಲ್ಲೂ ಕೊರಳಿಗೆ ಖಡ್ಗ ಹಿಡಿದು ಯಾರನ್ನೂ ಹೆದರಿಸುತ್ತಿರಬಹುದು ಅಥವಾ ಮೆಚ್ಚಿಸುತ್ತಿರಬಹುದು..?
ರೂಪಾ ಅಯ್ಯರ್ ಅವರನ್ನೇ ಕೇಳಬೇಕು.