Friday, March 11, 2016

ಕಿರಗೂರು ದೃಶ್ಯರೂಪದಲ್ಲೇನಿದೆ.. ಏನಿಲ್ಲಾ..?

ಒಂದು ಜನಪ್ರಿಯ ಕಾದಂಬರಿಗೆ ದೃಶ್ಯ ರೂಪ ಕೊಡುವ ಕೆಲಸ ಸಾಮಾನ್ಯವಾದುದಲ್ಲ. ಏಕೆಂದರೆ ಬರಹದಲ್ಲಿ ಒಂದು ಸಾಲಿನಲ್ಲಿ ಹೇಳಿದ್ದನ್ನು ತೋರಿಸಲು ಒಂದು ಶಾಟ್ ಸಾಕಾಗಬಹುದು, ಅಥವಾ ದೃಶ್ಯಗಳೇ ಬೇಕಾಗಬಹುದು. ಸುಮನ ಕಿತ್ತೂರು ಈ ಹಿಂದೆ ಎದೆಗಾರಿಕೆ ಮಾಡಿದ್ದಾಗ ಮೂಲ ಕಾದಂಬರಿಗೆ ನ್ಯಾಯ ಒದಗಿಸಬಲ್ಲರೆ ಎನ್ನುವುದು ಪ್ರಶ್ನೆಯಾಗಿತ್ತು. ಏಕೆಂದರೆ ಕಾದಂಬರಿಯಲ್ಲಿ ಹೆಚ್ಚು ಬರುವುದು ಮತ್ತು ನಿರೂಪಿತವಾಗುವುದು ಕಾದಂಬರಿಕಾರನ ಕತೆ. ಅವನ ದೃಷ್ಟಿಕೋನದ ಮೂಲಕ ಕತೆ ಸಾಗುತ್ತದೆ. ಅವನು ವಿವರಿಸುತ್ತಾ ಸಾಗುವ ಕತೆಯಲ್ಲಿ ಪರಿಚಯವಾಗುವುದು "ಅವನ" ಕತೆ. ಅದನ್ನು ಒಬ್ಬ ನಿರ್ದೇಶಕ/ಕಿ ಹೇಗೆ ತೆರೆಯ ಮೇಲೆ ತರಬಹುದು ಎನ್ನುವ ಕುತೂಹಲ ನನಗಂತೂ ಇತ್ತು. ಇತ್ತ ಕಾದಂಬರಿ ಎನಿಸಿಕೊಳ್ಳುವಷ್ಟು ದೊಡ್ಡದೂ ಅಲ್ಲದ, ನೀಳ್ಗತೆ ಎನಿಸಿಕೊಳ್ಳುವಷ್ಟು ಚಿಕ್ಕದು ಅಲ್ಲದ ಎದೆಗಾರಿಕೆಯನ್ನು ನಾನು ಅದೆಷ್ಟು ಸಲ ಓದಿದ್ದೆ ಎಂಬುದು ನನಗೆ ಲೆಕ್ಕವಿರಲಿಲ್ಲ. ಕೊನೆಯಲ್ಲಿ "ಅವನು" ಹೇಗೆ ಡಿಸೈಡ್ ಆಗಿದೆ, ಗನ್ ನಲ್ಲಿ ಸಾಯಿಸುತ್ತೀರಾ..? ಎಂಬರ್ಥದಲ್ಲಿ ಪ್ರಶ್ನಿಸುತ್ತಾನೆ. ನಿರೂಪಕ ಹಾಗೆ ಮೌನವಾಗುತ್ತಾನೆ. ನಿಜಕ್ಕೂ ನನ್ನ ಸ್ಥಿತಿಯೂ ಅದೇ ಆಗಿತ್ತು.  ಆದರೆ  ಸೋನಾ ನ ಕತೆಯನ್ನು ದೃಶ್ಯ ರೂಪದಲ್ಲಿ ಹೆಚ್ಚು ತರುವ ಮೂಲಕ ನ್ಯಾಯ ಒದಗಿಸಿದ್ದರು ಸುಮನಾ ಕಿತ್ತೂರು. ಸಿನಿಮಾ ಖುಷಿ ಕೊಟ್ಟಿತ್ತು.
ಆದರೆ ಅದೇ ಮಾತನ್ನು ಕಿರಗೂರಿಗೆ ಹೇಳುವುದು ಕಷ್ಟ. ಈಗಾಗಲೇ ಕಾದಂಬರಿ ಓದಿದವರಿಗೆ ಕಿರುಗೂರು ಸಿನಿಮಾ ರೂಪ ಖುಷಿ ಕೊಡುವುದೇ..? ಹೇಳುವುದು ಕಷ್ಟ.  ಕಿರಗೂರು ಗಯ್ಯಾಳಿಗಳು ಕತೆಯ ಮುಖ್ಯ ಅಂಶ ಅಲ್ಲಿನ ಹೆಂಗಸರ ಬಜಾರಿತನವಷ್ಟೇ ಅಲ್ಲ, ಅವರ ಮಾತುಗಳು. ಕತೆಯಲ್ಲಿ ಹಲವಾರು ಕೊವೆಗಳಿವೆ. ಆದರೆ ಸಿನಿಮಾ ರೂಪ ಎಂದಾಗ ಅಲ್ಲಿರುವ ಅಷ್ಟೂ ಕತೆಯನ್ನು ಪ್ರತಿ ಪುಟವನ್ನು ತೆರೆಯ ಮೇಲೆ ತರಬೇಕು ಎನ್ನುವಂತಿಲ್ಲ. ಕೆಲವೇ ಪುಟಗಳನ್ನೂ ತೆಗೆದುಕೊಂಡ ಪುಟ್ಟಣ್ಣ ಬೆಳ್ಳಿಮೋಡ ಮಾಡಿ ಗೆದ್ದಿದ್ದಾರೆ,. ಬರೀ ಥೀಮ್ ಅಷ್ಟೇ ತೆಗೆದುಕೊಂಡ ಸ್ಲಂ ಡಾಗ್ ಚಿತ್ರ ಬೇರೆಯದೇ ಕತೆಯಾಗಿ ಇಷ್ಟವಾಗುತ್ತದೆ. ದೃಶ್ಯರೂಪ ಎಂದಾಗ ಬರಹಗಾರ/ಲೇಖಕ ಪಕ್ಕಕ್ಕೆ ಸರಿಯುತ್ತಾನೆ, ಅಲ್ಲಿ ಸಾರ್ವಭಾಮನಾಗುವುದು ಕಲಾವಿದ. ಕಿರಗೂರು ಚಿತ್ರದಲ್ಲಿ ಗಯ್ಯಾಳಿಗಳ ಪಾತ್ರದಲ್ಲಿ ಶ್ವೇತಾ, ಮಾನಸ ಜೋಷಿ, ಸೋನು, ಸುಕೃತ ವಾಗ್ಲೆ ಇದ್ದಾರೆ. ಆದರೆ ಅವರ ಸಂಭಾಷಣೆ ದೇಸಿಯ ವಾಗಿದೆ, ಆದರೆ ಅದನ್ನು ಒಪ್ಪಿಸುವ ಪರಿ ಮಾತ್ರ ಸಹಜವಾಗಿಲ್ಲ. ಏಕೆಂದರೆ ಕಲಾವಿದರಿಗೆ ಆಯಾ ಭಾಷೆಯಾ ಸೊಗಡನ್ನು ಹಾಗೆಯೇ ಸಹಜವಾಗಿ ಒಪ್ಪಿಸಲು ಸಾಧ್ಯವಾಗಿಲ್ಲ. ಅವರ ಬೈಗುಳ, ದಿಟ್ಟತನದ ಮಾತುಗಳು ಮತ್ತು ಶೈಲಿ ಇಲ್ಲಿ ಕೈಕೊಟ್ಟಿದೆ.
ಮೊನ್ನೆ ಬೆಂಗಳೂರು ಸಿನಿಮೊತ್ಸವದಲ್ಲಿ ರಾಮ್ ರೆಡ್ಡಿ ನಿರ್ದೇಶನದ "ತಿಥಿ" ಚಿತ್ರ ನೋಡಿದಾಗ ನನಗನ್ನಿಸಿದ್ದು ಏನೆಂದರೆ ಆ ಸಿನೆಮಾವನ್ನು ಯಾವ ಆಸ್ಕರ್ ಪಡೆದ ನಟನನ್ನು ಕರೆದು ತಂದು ಅಭಿನಯಿಸುವಂತೆ ಮಾಡಿದ್ದರೂ ಆ ಸೊಗಸು ಬರುತ್ತಿರಲಿಲ್ಲವೇನೋ ಎಂಬುದು. ಏಕೆಂದರೆ ಅದೇ ಊರಿನ ಒಂದಷ್ಟು ಜನರನ್ನು ಆಯ್ಕೆಮಾಡಿ ಅವರಿಗೆ ಹೀಗೆ ಹೇಳಿ, ಇಷ್ಟು ಹೇಳಿ ಎಂದು ಅವರ ಕೈಯಲ್ಲಿ ಅಭಿನಯ ತೆಗಿಸಿರುವ ಪರಿ ಅನನ್ಯ. ಹಾಗೆಯೇ ಮೊನ್ನೆ ಮೊನ್ನೆ ಗೀತಾ ಬ್ಯಾಂಗಲ್ ಸ್ಟೋರ್ ಎನ್ನುವ ಸಿನಿಮಾ ಬಂದಿತ್ತು. ಅದರಲ್ಲಿಯೂ ಒಂದು ಪ್ರಾಂತ್ಯದ ಸೊಗಡನ್ನು ನಿರ್ದೇಶಕರು ಅದ್ಭುತವಾಗಿ ತೆರೆಯ ಮೇಲೆ ತಂದಿದ್ದರು. ಆದರೆ ಅದೇ ಕೆಲಸವನ್ನು ಸುಮನ ಕಿತ್ತೂರು ಶ್ರಮಪಟ್ಟರೂ ಸಂಪೂರ್ಣ ತರುವಲ್ಲಿ ಯಶಸ್ವಿಯಾಗಿಲ್ಲ. ಹಾಗೆಯೇ ಚಿತ್ರಕತೆಗೆ ಗೊತ್ತು ಗುರಿಯಿಲ್ಲದಿರುವುದು ಮತ್ತು ನಿರೂಪಣೆಯಲ್ಲಿ ಸ್ಪಷ್ಟತೆ ಇಲ್ಲದಿರುವುದು ಕೂಡ ಚಿತ್ರದ ಮೈನಸ್ ಪಾಯಿಂಟ್. ಉದಾಹರಣೆಗೆ ಚಿತ್ರ ಪ್ರಾರಂಭವಾಗುತ್ತಲೇ ಪರಿಚಯವಾಗುವ ಗಯ್ಯಾಳಿ ಪಾತ್ರಗಳ ಗುಣಾವಗುಣ ಪರಿಚಯವಾದರೂ ಅವರ ಕುಟುಂಬಗಳ ಪರಿಚಯ ಸ್ಪಷ್ಟವಾಗಿಲ್ಲ. ಹಾಗೆಯೇ ಕಿರಗೂರು ನಲ್ಲಿನ ಎರಡು ಜಾತಿಗಳ ನಡುವಣ ಜನರ ಸಂಬಂಧದ ಅನಾವರಣದ ಸ್ಪಷ್ಟತೆ ಕೂಡ ಇಲ್ಲ.
ಇವೆಲ್ಲದರ ನಡುವೆಯೂ ಸಿನಿಮಾ ಓಕೆ ಎನಿಸುವುದು ಅದರ ಕಥಾದೃಷ್ಟಿಯಿಂದ. ಒಂದು ಒಳ್ಳೆಯ ಕತೆಯನ್ನು ಸಿನಿಮಾಕ್ಕೆ ಆಯ್ದುಕೊಳ್ಳುವ ಪದ್ಧತಿ ಮತ್ತು ಸಂಪ್ರದಾಯ ಚಿತ್ರರಂಗಕ್ಕೆ ಅತೀ ಮುಖ್ಯ. ಮಾತೆತ್ತಿದರೆ ರಿಮೇಕ್ ಎನ್ನುವ ಜನರ ನಡುವೆ ಅಥವಾ ಅವರದೇ ಆದ ಕತೆಯನ್ನು, ಅದು ಕತೆ ಎನಿಸದಿದ್ದರೂ ಸಿನಿಮಾ ಮಾಡುವ ಮಂದಿಯ ನಡುವೆ ಇಂತಹ ಚಿತ್ರಗಳನ್ನು ತೆರೆಗೆ ತರುವ ನಿರ್ದೇಶಕರನ್ನು ಪ್ರಶಂಸೆ ಮಾಡಲೇಬೇಕಾಗುತ್ತದೆ. ಆದರೆ ನಿರೀಕ್ಷೆ ಹುಟ್ಟುಹಾಕುವ ಅವರೇ ಅದನ್ನು ತಾಕದಿದ್ದಾಗ ಎಲ್ಲೋ ಒಂದು ಮೂಲೆಯಲ್ಲಿ ಇನ್ನೂ ಚೆನ್ನಾಗಿರಬೇಕಾಗಿತ್ತು ಎನಿಸಿದರೆ ಅದಕ್ಕೆ ಅವರೇ ಕಾರಣವಾಗುತ್ತಾರೆ. ಮತ್ತದೂ ಒಳ್ಳೆಯದು ಕೂಡ. ಹಾಗಾಗಿ ಕಿರಗೂರು ಚಿತ್ರ ನೋಡಬೇಕಾದ ಚಿತ್ರ, ನೋಡಿದ ಮೇಲೆ ಮಾತಾಡಬೇಕಾದ ಚಿತ್ರ, ಅದರ ಬಗ್ಗೆ ಚರ್ಚಿಸಬೇಕಾದ ಚಿತ್ರ. ಅದರ ಒಳ ಹೊರಗನ್ನು ವಿಶದಪಡಿಸಬೇಕಾದ ಚಿತ್ರ. ಹಾಗಾದಾಗ ಆದವರಿಗೆ ತಲುಪಿದಾಗ ಅವರ ಜವಾಬ್ದಾರಿಯೂ ಹೆಚ್ಚುತ್ತದೆ, ನಮ್ಮಂತಹ ಪ್ರೇಕ್ಷಕರಿಗೆ ನೋಡಲು ಮತ್ತೊಂದು ಒಳ್ಳೆಯ ಸಿನಿಮಾ ಅಪ್ಡೇಟ್ ಆಗಿ ಸಿಗುತ್ತದೆ.

Thursday, March 10, 2016

ಸಾಲು ಸಾಲು ಚಿತ್ರಗಳ ನಡುವೆ ನೋಡಬೇಕಾದದ್ದು..

ಪೂಚಂತೇ ಬರಹಗಳು ನನ್ನನ್ನು ಓದಿಸಿಕೊಂಡಿದ್ದು ಬಹಳ. ಅದೆಷ್ಟೇ ಸಲ ಓದಿದ್ದರೂ ಮತ್ತೊಮ್ಮೆ ಓದುವ ಎನ್ನುವಂತೆ ಮಾಡುವುದು ಅವರ ಬರಹಗಳ ವಿಶೇಷ. ಅವರ ಪರಿಸರದ ದಿನಗಳು ಮೊನ್ನೆ ಎಲ್ಲೋ ಹೋದಾಗ ಕೈ ಸಿಕ್ಕಿ ಅದೆಷ್ಟು ಆನಂದವಾಯಿತು ಎಂದರೆ ಅದನ್ನು ಇದಾಗಲೇ ಲೆಕ್ಕವಿಲ್ಲದಷ್ಟು ಸಲ ಓದಿದ್ದರೂ ಮತ್ತೊಮ್ಮೆ ಓದಿ ಆವಾಂತರ ಸೀನಪ್ಪ, ಮಾಸ್ತಿ ಭೈರ ಮುಂತಾದವರನ್ನು ಮನ'ತುಂಬಿಸಿಕೊಂಡದ್ದಾಯಿತು. ಪೂಚಂತೇ ಕಾದಂಬರಿಗಳು ಕತೆಗಳು ಸಿನಿಮಾ ರೂಪ ತಾಳಿವೆ. ಅವರ ತಬರನ ಕತೆ ಈವತ್ತಿಗೂ ಮನ ಮಿಡಿಸುತ್ತದೆ. ಅವರ ಜುಗಾರಿ ಕ್ರಾಸ್ ಸೂಪರ್ ಥ್ರಿಲ್ಲರ್. ಆ ನಿಟ್ಟಿನಲ್ಲಿ ಕಿರಗೂರಿನ ಗಯ್ಯಾಳಿಗಳು ನೀಳ್ಗತೆ ಒಂದು ಜಾಲಿ ರೈಡ್ ಎನ್ನಬಹುದು. ಅಲ್ಲಿನ ಸಂಭಾಷಣೆ ಮತ್ತು ನಡೆಯುವ ಘಟನೆಯೇ ಚಿತ್ರದ ಕತೆಯ ಹೈ ಲೈಟ್. ಅದು ಸಿನಿಮಾ ರೂಪಕ್ಕೆ ಬರುತ್ತಿರುವುದು ಮತ್ತು ಚಿತ್ರಕ್ಕೆ ನಿರ್ದೇಶಕಿ ಆಯ್ಕೆ ಮಾಡಿಕೊಂಡಿರುವ ತಾರಾಗಣ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚು ಮಾಡಿದೆ. ಹಾಗೆಯೇ ಎಂಟು ನಿಮಿಷಗಳ ಟ್ರೈಲರ್ ಮೂಲಕ ಮನಗೆದ್ದ ಸುನಿ ಅವರ ಸಿಂಪಲ್ ಆಗ್ ಇನ್ನೊಂದ್ ಲವ್ ಸ್ಟೋರಿ. ಅವರ ಮೊದಲ ಸಿನಿಮಾ ತೆರೆಗೆ ಬಂದಾಗ ಸ್ವಲ್ಪ ಅಗತ್ಯಕ್ಕಿಂತ ಜಾಸ್ತಿಯೇ ಅಬ್ಬರಿಸಿದ್ದ ಚಿತ್ರತಂಡವದು. ಒಮ್ಮೊಮ್ಮೆಗೆ ತಮ್ಮ ಬ್ಯಾನರ್ ನ ಐದಾರು ಚಿತ್ರಗಳನ್ನು ಘೋಷಣೆ ಮಾಡಿ ಹುಬ್ಬೇರಿಸುವಂತೆ ಮಾಡಿದ್ದ ಸುನಿ ಬಹುಪರಾಕ್ ನಂತರ ತೀರಾ ಮಂಕಾದದ್ದು ವಿಪರ್ಯಾಸ. ಅವರದೇ ನಿರ್ಮಾಣದ ಮತ್ತೊಂದು ಚಿತ್ರ ಉಳಿದವರು ಕಂಡಂತೆಯೇ ಚಿತ್ರದ ಸೋಲು ಅವರನ್ನು ಪೂರ್ತಿಯಾಗಿ ಹಳ್ಳ ಹಿಡಿಸಿದ್ದು ಸತ್ಯ. ಹಾಗೆ ನೋಡಿದರೆ ಎರಡೂ ಚಿತ್ರಗಳು ಹೊಸ ಪ್ರಯೋಗಗಳೇ. ಆದರೆ ಅದೆಲ್ಲೋ ಹಣಕಾಸಿನ ಲೆಕ್ಕಾಚಾರ ಉಲ್ಟಾ ಆಯಿತೇನೋ? ಆ ಎರಡು ಸಿನಿಮಾ ಗೆದ್ದಿದ್ದರೆ ಕನ್ನಡಕ್ಕೆ ಮತ್ತಷ್ಟು ಹೊಸ ನಿರ್ದೇಶಕರ ಪರಿಚಯವಾಗುತ್ತಿತ್ತೇನೋ? ಈಗ ಸದ್ದಿಲ್ಲದೇ ಸುನಿ ಮಾತ್ತೊಂದು ಸಿನಿಮಾ ತಂದಿದ್ದಾರೆ. ಅದರದ್ದೂ ಮಾರುದ್ದದ ಟ್ರೈಲರ್ ಬಿಟ್ಟಿದ್ದರೂ ಆ ಸಿನಿಮಾ ಮಾಡಿದ ಮೋಡಿಯನ್ನು ಈ ಸಿನಿಮಾ ಮಾಡಿಲ್ಲ. ಆದರೂ ಭರವಸೆಯಂತೂ ಇದ್ದೆ ಇದೆ.
ವಾರಕ್ಕೆ ಆರಾರು ಚಿತ್ರಗಳು ಬಿಡುಗಡೆಯಾಗುತ್ತಿದೆ. ಒಂದು ಸಿನಿಮಾ ಮಾಡುವುದು ವರ್ಷಗಟ್ಟಲೆ ಸಮಯದ ನೂರಾರು ಜನರ ಶ್ರಮದ ಮತ್ತು ಕೋಟ್ಯಾಂತರ ರೂಪಾಯಿಗಳ ಖರ್ಚಿನ ವಿಷಯ. ಆದರೆ ಕೆಲವೊಮ್ಮೆ ಅದನ್ನೂ ಅಷ್ಟೇ ಸುಲಭವಾಗಿ ಮಾಡಿಬಿಡುವ ನಿರ್ದೇಶಕರಿಗೆ ಒಂದೊಂದು ದೊಡ್ಡ ಸಲಾಂ ಹೊಡೆಯಲೇ ಬೇಕಾಗುತ್ತದೆ. ಫೆಬ್ರವರಿ ತಿಂಗಳಿನಲ್ಲಿ ಭಾಗ್ಯರಾಜ್, ದೇವರ ನಾಡಲ್ಲಿ, ಗಜಪಡೆ, ಜ್ವಲಂತಂ, ನಾನಿಲ್ದೆ ನೀನಿರ್ತೀಯ, ಪ್ರಿಯಾಂಕ, ಶಿವಯೋಗಿ ಪುಟ್ಟಯ್ಯಜ್ಜ, ಬನವಾಸಿ, ಪ್ರೀತಿಯಲ್ಲಿ ಸಹಜ, ಶಿವಲಿಂಗ, ಆಕ್ಟರ್, ಭಲೆಜೋಡಿ, ಮಧುರ ಸ್ವಪ್ನ, ನನ್ನ ಲವ್ ಟ್ರ್ಯಾಕ್, ರಾಜ್ ಬಹದ್ದೂರ್, ಯು ದಿ ಎಂಡ್ ಎ, 400, ಗೇಮ್. ಕೃಷ್ಣರುಕ್ಕು, ಮರೆಯಲಾರೆ, ಪ್ರೀತಿ ಕಿತಾಬು, ವಾಟ್ಸ್ ಅಪ್ ಲವ್ ಬಿಡುಗಡೆಯಾಗಿವೆ. ಅಂದರೆ ವಾರಕ್ಕೆ ಆರು ಚಿತ್ರಗಳು. ಅದರಲ್ಲಿ ಯಾವುದೂ ಗಮನ ಸೆಳೆದಿಲ್ಲ. ನೋಡುಗ ವಾರಕ್ಕೆರೆಡು ನೋಡಿದರೂ ಸಿನಿಮಾಗಳು ದಂಡಿಯಾಗಿ ಬಾಕಿ ಉಳಿಯುತ್ತವೆ. ಇವುಗಳಲ್ಲಿ ಕೆಲವಂತೂ ಕೆಲವು ಊರನ್ನು ಕಾಣುವುದೇ ಇಲ್ಲ. ಬೆಂಗಳೂರಿನ ಒಂದೆರೆಡು ಚಿತ್ರಮಂದಿರಗಳಲ್ಲಿ ಕಾಣಿಸಿಕೊಂಡರೆ ಆಮೇಲೆ ಅವನ್ನು ನಾವು ನೋಡುವುದಕ್ಕೂ ಸಾಧ್ಯವಿಲ್ಲ. ಮೊದಲೆಲ್ಲಾ ಮಿಸ್ಸಾದರೆ ಟಿವಿಯಲ್ಲಿ ಬರುತ್ತೆ ಎನ್ನಬಹುದಾಗಿತ್ತು. ಈಗ ಟಿವಿಯಲ್ಲಿ ಬರುವುದಿಲ್ಲ. ಬೇರೆ ತಾಲೂಕು, ಹೋಬಳಿ, ದೊಡ್ಡ ಊರುಗಳ ಟೆಂಟ್ ನಲ್ಲಿ ಕಾಣಿಸುವುದಿಲ್ಲ. ಹಾಗಾಗಿ ಬಂದದ್ದಷ್ಟೆ.. ಹೋದದ್ದಷ್ಟೇ. ಆನಂತರ ಆ ಸಿನಿಮಾ, ಆ ನಿರ್ದೇಶಕ, ಆ ನಿರ್ಮಾಪಕ, ಆ ಹಣ ಎಲ್ಲವೂ ಮಂಗಮಾಯ. ಆದರೂ ಸಿನೆಮಾವನ್ನು ಅಧ್ಯಯನ ಮಾಡದಯೇ ಕಣ್ಮುಚ್ಚಿಕೊಂಡು ಸಿನಿಮಾ ಮಾಡುವ ಅದನ್ನು ಬಿಡುಗಡೆ ಮಾಡುವವರಿಗೇನೂ ಕಡಿಮೆಯಿಲ್ಲ ಎನ್ನುವುದು ಬೇಸರದ ಸಂಗತಿ. ಹಾಗೆಯೇ ಈ ವಾರವೂ ಸಿನಿಮಾಗಳಿವೆ. ಎಲ್ಲವನ್ನೂ ನೋಡುವ ಎನಿಸಿದರೂ ಎ ಎರಡು ಚಿತ್ರಗಳು ಭರವಸೆ ಹುಟ್ಟಿಸಿವೆ.