Friday, March 11, 2016

ಕಿರಗೂರು ದೃಶ್ಯರೂಪದಲ್ಲೇನಿದೆ.. ಏನಿಲ್ಲಾ..?

ಒಂದು ಜನಪ್ರಿಯ ಕಾದಂಬರಿಗೆ ದೃಶ್ಯ ರೂಪ ಕೊಡುವ ಕೆಲಸ ಸಾಮಾನ್ಯವಾದುದಲ್ಲ. ಏಕೆಂದರೆ ಬರಹದಲ್ಲಿ ಒಂದು ಸಾಲಿನಲ್ಲಿ ಹೇಳಿದ್ದನ್ನು ತೋರಿಸಲು ಒಂದು ಶಾಟ್ ಸಾಕಾಗಬಹುದು, ಅಥವಾ ದೃಶ್ಯಗಳೇ ಬೇಕಾಗಬಹುದು. ಸುಮನ ಕಿತ್ತೂರು ಈ ಹಿಂದೆ ಎದೆಗಾರಿಕೆ ಮಾಡಿದ್ದಾಗ ಮೂಲ ಕಾದಂಬರಿಗೆ ನ್ಯಾಯ ಒದಗಿಸಬಲ್ಲರೆ ಎನ್ನುವುದು ಪ್ರಶ್ನೆಯಾಗಿತ್ತು. ಏಕೆಂದರೆ ಕಾದಂಬರಿಯಲ್ಲಿ ಹೆಚ್ಚು ಬರುವುದು ಮತ್ತು ನಿರೂಪಿತವಾಗುವುದು ಕಾದಂಬರಿಕಾರನ ಕತೆ. ಅವನ ದೃಷ್ಟಿಕೋನದ ಮೂಲಕ ಕತೆ ಸಾಗುತ್ತದೆ. ಅವನು ವಿವರಿಸುತ್ತಾ ಸಾಗುವ ಕತೆಯಲ್ಲಿ ಪರಿಚಯವಾಗುವುದು "ಅವನ" ಕತೆ. ಅದನ್ನು ಒಬ್ಬ ನಿರ್ದೇಶಕ/ಕಿ ಹೇಗೆ ತೆರೆಯ ಮೇಲೆ ತರಬಹುದು ಎನ್ನುವ ಕುತೂಹಲ ನನಗಂತೂ ಇತ್ತು. ಇತ್ತ ಕಾದಂಬರಿ ಎನಿಸಿಕೊಳ್ಳುವಷ್ಟು ದೊಡ್ಡದೂ ಅಲ್ಲದ, ನೀಳ್ಗತೆ ಎನಿಸಿಕೊಳ್ಳುವಷ್ಟು ಚಿಕ್ಕದು ಅಲ್ಲದ ಎದೆಗಾರಿಕೆಯನ್ನು ನಾನು ಅದೆಷ್ಟು ಸಲ ಓದಿದ್ದೆ ಎಂಬುದು ನನಗೆ ಲೆಕ್ಕವಿರಲಿಲ್ಲ. ಕೊನೆಯಲ್ಲಿ "ಅವನು" ಹೇಗೆ ಡಿಸೈಡ್ ಆಗಿದೆ, ಗನ್ ನಲ್ಲಿ ಸಾಯಿಸುತ್ತೀರಾ..? ಎಂಬರ್ಥದಲ್ಲಿ ಪ್ರಶ್ನಿಸುತ್ತಾನೆ. ನಿರೂಪಕ ಹಾಗೆ ಮೌನವಾಗುತ್ತಾನೆ. ನಿಜಕ್ಕೂ ನನ್ನ ಸ್ಥಿತಿಯೂ ಅದೇ ಆಗಿತ್ತು.  ಆದರೆ  ಸೋನಾ ನ ಕತೆಯನ್ನು ದೃಶ್ಯ ರೂಪದಲ್ಲಿ ಹೆಚ್ಚು ತರುವ ಮೂಲಕ ನ್ಯಾಯ ಒದಗಿಸಿದ್ದರು ಸುಮನಾ ಕಿತ್ತೂರು. ಸಿನಿಮಾ ಖುಷಿ ಕೊಟ್ಟಿತ್ತು.
ಆದರೆ ಅದೇ ಮಾತನ್ನು ಕಿರಗೂರಿಗೆ ಹೇಳುವುದು ಕಷ್ಟ. ಈಗಾಗಲೇ ಕಾದಂಬರಿ ಓದಿದವರಿಗೆ ಕಿರುಗೂರು ಸಿನಿಮಾ ರೂಪ ಖುಷಿ ಕೊಡುವುದೇ..? ಹೇಳುವುದು ಕಷ್ಟ.  ಕಿರಗೂರು ಗಯ್ಯಾಳಿಗಳು ಕತೆಯ ಮುಖ್ಯ ಅಂಶ ಅಲ್ಲಿನ ಹೆಂಗಸರ ಬಜಾರಿತನವಷ್ಟೇ ಅಲ್ಲ, ಅವರ ಮಾತುಗಳು. ಕತೆಯಲ್ಲಿ ಹಲವಾರು ಕೊವೆಗಳಿವೆ. ಆದರೆ ಸಿನಿಮಾ ರೂಪ ಎಂದಾಗ ಅಲ್ಲಿರುವ ಅಷ್ಟೂ ಕತೆಯನ್ನು ಪ್ರತಿ ಪುಟವನ್ನು ತೆರೆಯ ಮೇಲೆ ತರಬೇಕು ಎನ್ನುವಂತಿಲ್ಲ. ಕೆಲವೇ ಪುಟಗಳನ್ನೂ ತೆಗೆದುಕೊಂಡ ಪುಟ್ಟಣ್ಣ ಬೆಳ್ಳಿಮೋಡ ಮಾಡಿ ಗೆದ್ದಿದ್ದಾರೆ,. ಬರೀ ಥೀಮ್ ಅಷ್ಟೇ ತೆಗೆದುಕೊಂಡ ಸ್ಲಂ ಡಾಗ್ ಚಿತ್ರ ಬೇರೆಯದೇ ಕತೆಯಾಗಿ ಇಷ್ಟವಾಗುತ್ತದೆ. ದೃಶ್ಯರೂಪ ಎಂದಾಗ ಬರಹಗಾರ/ಲೇಖಕ ಪಕ್ಕಕ್ಕೆ ಸರಿಯುತ್ತಾನೆ, ಅಲ್ಲಿ ಸಾರ್ವಭಾಮನಾಗುವುದು ಕಲಾವಿದ. ಕಿರಗೂರು ಚಿತ್ರದಲ್ಲಿ ಗಯ್ಯಾಳಿಗಳ ಪಾತ್ರದಲ್ಲಿ ಶ್ವೇತಾ, ಮಾನಸ ಜೋಷಿ, ಸೋನು, ಸುಕೃತ ವಾಗ್ಲೆ ಇದ್ದಾರೆ. ಆದರೆ ಅವರ ಸಂಭಾಷಣೆ ದೇಸಿಯ ವಾಗಿದೆ, ಆದರೆ ಅದನ್ನು ಒಪ್ಪಿಸುವ ಪರಿ ಮಾತ್ರ ಸಹಜವಾಗಿಲ್ಲ. ಏಕೆಂದರೆ ಕಲಾವಿದರಿಗೆ ಆಯಾ ಭಾಷೆಯಾ ಸೊಗಡನ್ನು ಹಾಗೆಯೇ ಸಹಜವಾಗಿ ಒಪ್ಪಿಸಲು ಸಾಧ್ಯವಾಗಿಲ್ಲ. ಅವರ ಬೈಗುಳ, ದಿಟ್ಟತನದ ಮಾತುಗಳು ಮತ್ತು ಶೈಲಿ ಇಲ್ಲಿ ಕೈಕೊಟ್ಟಿದೆ.
ಮೊನ್ನೆ ಬೆಂಗಳೂರು ಸಿನಿಮೊತ್ಸವದಲ್ಲಿ ರಾಮ್ ರೆಡ್ಡಿ ನಿರ್ದೇಶನದ "ತಿಥಿ" ಚಿತ್ರ ನೋಡಿದಾಗ ನನಗನ್ನಿಸಿದ್ದು ಏನೆಂದರೆ ಆ ಸಿನೆಮಾವನ್ನು ಯಾವ ಆಸ್ಕರ್ ಪಡೆದ ನಟನನ್ನು ಕರೆದು ತಂದು ಅಭಿನಯಿಸುವಂತೆ ಮಾಡಿದ್ದರೂ ಆ ಸೊಗಸು ಬರುತ್ತಿರಲಿಲ್ಲವೇನೋ ಎಂಬುದು. ಏಕೆಂದರೆ ಅದೇ ಊರಿನ ಒಂದಷ್ಟು ಜನರನ್ನು ಆಯ್ಕೆಮಾಡಿ ಅವರಿಗೆ ಹೀಗೆ ಹೇಳಿ, ಇಷ್ಟು ಹೇಳಿ ಎಂದು ಅವರ ಕೈಯಲ್ಲಿ ಅಭಿನಯ ತೆಗಿಸಿರುವ ಪರಿ ಅನನ್ಯ. ಹಾಗೆಯೇ ಮೊನ್ನೆ ಮೊನ್ನೆ ಗೀತಾ ಬ್ಯಾಂಗಲ್ ಸ್ಟೋರ್ ಎನ್ನುವ ಸಿನಿಮಾ ಬಂದಿತ್ತು. ಅದರಲ್ಲಿಯೂ ಒಂದು ಪ್ರಾಂತ್ಯದ ಸೊಗಡನ್ನು ನಿರ್ದೇಶಕರು ಅದ್ಭುತವಾಗಿ ತೆರೆಯ ಮೇಲೆ ತಂದಿದ್ದರು. ಆದರೆ ಅದೇ ಕೆಲಸವನ್ನು ಸುಮನ ಕಿತ್ತೂರು ಶ್ರಮಪಟ್ಟರೂ ಸಂಪೂರ್ಣ ತರುವಲ್ಲಿ ಯಶಸ್ವಿಯಾಗಿಲ್ಲ. ಹಾಗೆಯೇ ಚಿತ್ರಕತೆಗೆ ಗೊತ್ತು ಗುರಿಯಿಲ್ಲದಿರುವುದು ಮತ್ತು ನಿರೂಪಣೆಯಲ್ಲಿ ಸ್ಪಷ್ಟತೆ ಇಲ್ಲದಿರುವುದು ಕೂಡ ಚಿತ್ರದ ಮೈನಸ್ ಪಾಯಿಂಟ್. ಉದಾಹರಣೆಗೆ ಚಿತ್ರ ಪ್ರಾರಂಭವಾಗುತ್ತಲೇ ಪರಿಚಯವಾಗುವ ಗಯ್ಯಾಳಿ ಪಾತ್ರಗಳ ಗುಣಾವಗುಣ ಪರಿಚಯವಾದರೂ ಅವರ ಕುಟುಂಬಗಳ ಪರಿಚಯ ಸ್ಪಷ್ಟವಾಗಿಲ್ಲ. ಹಾಗೆಯೇ ಕಿರಗೂರು ನಲ್ಲಿನ ಎರಡು ಜಾತಿಗಳ ನಡುವಣ ಜನರ ಸಂಬಂಧದ ಅನಾವರಣದ ಸ್ಪಷ್ಟತೆ ಕೂಡ ಇಲ್ಲ.
ಇವೆಲ್ಲದರ ನಡುವೆಯೂ ಸಿನಿಮಾ ಓಕೆ ಎನಿಸುವುದು ಅದರ ಕಥಾದೃಷ್ಟಿಯಿಂದ. ಒಂದು ಒಳ್ಳೆಯ ಕತೆಯನ್ನು ಸಿನಿಮಾಕ್ಕೆ ಆಯ್ದುಕೊಳ್ಳುವ ಪದ್ಧತಿ ಮತ್ತು ಸಂಪ್ರದಾಯ ಚಿತ್ರರಂಗಕ್ಕೆ ಅತೀ ಮುಖ್ಯ. ಮಾತೆತ್ತಿದರೆ ರಿಮೇಕ್ ಎನ್ನುವ ಜನರ ನಡುವೆ ಅಥವಾ ಅವರದೇ ಆದ ಕತೆಯನ್ನು, ಅದು ಕತೆ ಎನಿಸದಿದ್ದರೂ ಸಿನಿಮಾ ಮಾಡುವ ಮಂದಿಯ ನಡುವೆ ಇಂತಹ ಚಿತ್ರಗಳನ್ನು ತೆರೆಗೆ ತರುವ ನಿರ್ದೇಶಕರನ್ನು ಪ್ರಶಂಸೆ ಮಾಡಲೇಬೇಕಾಗುತ್ತದೆ. ಆದರೆ ನಿರೀಕ್ಷೆ ಹುಟ್ಟುಹಾಕುವ ಅವರೇ ಅದನ್ನು ತಾಕದಿದ್ದಾಗ ಎಲ್ಲೋ ಒಂದು ಮೂಲೆಯಲ್ಲಿ ಇನ್ನೂ ಚೆನ್ನಾಗಿರಬೇಕಾಗಿತ್ತು ಎನಿಸಿದರೆ ಅದಕ್ಕೆ ಅವರೇ ಕಾರಣವಾಗುತ್ತಾರೆ. ಮತ್ತದೂ ಒಳ್ಳೆಯದು ಕೂಡ. ಹಾಗಾಗಿ ಕಿರಗೂರು ಚಿತ್ರ ನೋಡಬೇಕಾದ ಚಿತ್ರ, ನೋಡಿದ ಮೇಲೆ ಮಾತಾಡಬೇಕಾದ ಚಿತ್ರ, ಅದರ ಬಗ್ಗೆ ಚರ್ಚಿಸಬೇಕಾದ ಚಿತ್ರ. ಅದರ ಒಳ ಹೊರಗನ್ನು ವಿಶದಪಡಿಸಬೇಕಾದ ಚಿತ್ರ. ಹಾಗಾದಾಗ ಆದವರಿಗೆ ತಲುಪಿದಾಗ ಅವರ ಜವಾಬ್ದಾರಿಯೂ ಹೆಚ್ಚುತ್ತದೆ, ನಮ್ಮಂತಹ ಪ್ರೇಕ್ಷಕರಿಗೆ ನೋಡಲು ಮತ್ತೊಂದು ಒಳ್ಳೆಯ ಸಿನಿಮಾ ಅಪ್ಡೇಟ್ ಆಗಿ ಸಿಗುತ್ತದೆ.

2 comments:

  1. ಈ ಸಿನಿಮಾ ಎಷ್ಟರ ಮಟ್ಟಿಗೆ ಚೆನ್ನಾಗಿ ಬಂದಿದೆ ಅನ್ನುವುದಕ್ಕೂ ಮೊದಲು ಹೇಳಲೇಬೇಕಾದ ವಿಷಯವೆಂದರೆ ಚಿತ್ರವನ್ನು ನೋಡುವಾಗ ನಮಗೆ ಕನ್ನಡದ ಹಿರಿಯ ನಟರಾದ ಧಿರೇಂದ್ರ ಗೋಪಾಲ್​, ಲೋಕೇಶ್​, ಮುಸುರಿ ಕೃಷ್ಣಮೂರ್ತಿ ರಾಜಾನಂದ್​ ಹೀಗೆ ಹಲವು ಮುಖಗಳು ನೆನಪಿಗೆ ಬರುತ್ತವೆ. ಎಲ್ಲಕ್ಕೂ ಮಿಗಿಲಾಗಿ ನಿರ್ದೇಶಕರಾದ ಸಿದ್ಧಲಿಂಗಯ್ಯ, ಪುಟ್ಟಣ್ಣ ಕಣಗಾಲ್​​, ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್​ ನೆನಪಾಗುತ್ತಾರೆ. ಏಕೆಂದರೆ ಒಂದು ಗ್ರಾಮೀಣ ಸೊಗಡಿರುವ ಕಥೆಗೆ ಯಾವ ಕಲಾವಿದರಿಂದ ಯಾವ ರೀತಿ ಅಭಿನಯ ಮಾಡಿಸಬೇಕು ಅನ್ನುವುದು ಅವರಿಗೆ ಗೊತ್ತಿತ್ತು. ಈ ವಿಚಾರದಲ್ಲಿ ಕಿರಗೂರಿನ ಸಿನಿಮಾ ಸ್ವಲ್ಪ ಬೇಸರ ತರುತ್ತದೆ, ಅಲ್ಲದೆ ಚಿತ್ರಕತೆಯಲ್ಲಿ ಇನ್ನು ಗಟ್ಟಿತನ ಇರಬೇಕಿತ್ತು ಎಂದೆನಿಸುತ್ತದೆ.
    -ಕಾವ್ಯಕಾಂತಿ

    ReplyDelete
    Replies
    1. ನಿಜ... ತೇಜಸ್ವಿ ಕಥನ ಸಿನಿಮಾ ರೂಪದಲ್ಲಿ ವಾಚ್ಯವಾಗಿ, ಗಯ್ಯಾಳಿಗಳು ಬೈಗುಳಹೆಂಗಸರಾಗಿ ಪರಿವರ್ತನೆಯಾಗಿರುವುದು ವಿಷಾದನೀಯ...

      Delete