
ನಾನಾಗ ಹತ್ತನೆಯ ತರಗತಿಯಲ್ಲಿದ್ದೆ. ಎಂಟನೆಯ ತರಗತಿಯಲ್ಲಿ ಮೊದಲ ಕಥೆ ಬರೆದಿದ್ದೆನಾದರೂ ಸಿನೆಮಾದ ಗೀಳು ನನಗೆ ಹತ್ತನೇ ತರಗತಿಯಲ್ಲಿ ಹತ್ತಿದ್ದು. ಅದ್ಯಾಕೆ ಹತ್ತಿತು ನನಗಿನ್ನೂ ಗೊತ್ತಿಲ್ಲ. ನಮ್ಮೂರಿದ್ದದ್ದು ಬೆಂಗಳೂರಿನಿಂದ ನೂರಾನಲವತ್ತು ಕಿಲೋಮೀಟರ್ ದೂರದಲ್ಲಿರುವ ಮೈಸೂರಿನಿಂದ 25 ಕಿಲೋಮೀಟರು ದೂರದಲ್ಲಿರುವ ನಂಜನಗೂಡಿನಿಂದ ಒಂಬತ್ತು ಕಿಲೋಮೀಟರು ದೂರದಲ್ಲಿ. ಅಲ್ಲಿ ಯಾವುದೇ ರೀತಿಯ ಸಿನಿಮಾ ಸಂಬಂಧಿ ಚಟುವಟಿಕೆಗಳು ನಡೆಯಲು ಸಾಧ್ಯವೇ ಇರಲಿಲ್ಲ. ಆಗೊಂದು ಈಗೊಂದು ಚಿತ್ರೀಕರಣ ತಂಡ ಬಂದು ಚಿತ್ರೀಕರಣ ಮಾಡುತ್ತಿದ್ದರೂ ಅದೆನೆಗೆ ತಲುಪುತ್ತಿರಲಿಲ್ಲ. ನನಗೆ ಸಿನಿಮಾ ಶೂಟಿಂಗ್ ನೋಡುವ ಆಸೆಯಿದ್ದರೂ ಸಾಧ್ಯವಾಗಿರಲಿಲ್ಲ. ಪೀಯುಸಿಗೆ ಬಂದ ಮೇಲೆ ನಂಜನಗೂಡಿಗೆ ಕಾಲೇಜು ಸೇರಿಕೊಂಡವನು ಮೊದಲಿಗೆ ಸಾರ್ವಜನಿಕ ಗ್ರಂಥಾಲಯಕ್ಕೆ ಲಗ್ಗೆಯಿಟ್ಟಿದ್ದೆ. ಸಿನಿಮಾ ಸಂಬಂಧಿ ಪುಸ್ತಕಗಳನ್ನ ತಡಕಾಡಿದ್ದೆ. ನಂಗೆ ಬೇಕಾದದ್ದು ಸಿನೆಮಾದ ಬಗೆಗಿನ ತಾಂತ್ರಿಕ ಜ್ಞಾನ ಮತ್ತು ತಯಾರಿಕೆಯ ಹಂತಗಳು. ಆದರೆ ಅದಕ್ಕೆ ಸಂಬಂಧ ಪಟ್ಟ ಪುಸ್ತಕಗಳು ಇರಲಿಲ್ಲ. ಸಿನೆಮಾದ ಕಥೆಯನ್ನ ನನ್ನಲ್ಲೇ ಹುಟ್ಟುಹಾಕುತ್ತಿದ್ದೆನಾದರೂ ಸಿನೆಮಾಕ್ಕೆ ಅದನ್ನು ಚಿತ್ರಕಥೆಯಾಗಿ ಬರಹ ರೂಪದಲ್ಲಿ ಹೇಗೆ ಬರೆಯಬೇಕೆಂಬ ರೀತಿನೀತಿಯ ಮಾದರಿ ನನಗೆ ಗೊತ್ತಿರಲಿಲ್ಲ. ಇಡೀ ಗ್ರಂಥಾಲಯ ಹುಡುಕಿದ ಮೇಲೆ ಒಂದೇ ಒಂದು ಪುಸ್ತಕ ಸಿಕ್ಕಿದ್ದು ನನಗೆ ಭಗವದ್ಗೀತೆ ಸಿಕ್ಕಿದ ಹಾಗಾಗಿತ್ತು. ಅದರಲ್ಲಿ ಒಂದಷ್ಟು ಅಮೂಲ್ಯ ವಿಷಯಗಳೂ ಇದ್ದವು.
ನಮ್ಮ ಚಿತ್ರ ಮಾರ್ಚ್ 23 ಪೂರ್ವ ಚಿತ್ರೀಕರಣದಲ್ಲಿ ಬರವಣಿಗೆಗೆ ನಾವು ನಮ್ಮ ತಂಡ ತೆಗೆದುಕೊಂಡ ಒಟ್ಟು ಅವಧಿ ಸರಿ ಸುಮಾರು ಎಂಟು ತಿಂಗಳುಗಳು. ದೊಡ್ಡ ಸ್ಟಾರ್ ಇಲ್ಲದ ದೊಡ್ಡ ಬಜೆಟ್ ಇಲ್ಲದ್ದರಿಂದ ನಾನಂದುಕೊಂಡದ್ದನ್ನು ಸಾಧಿಸಲು ಪೂರ್ವ ತಯಾರಿ ಅತ್ಯಗತ್ಯವಾಗಿತ್ತು. ಹಾಗಾಗಿ ಸಂಭಾಷಣೆಯ ನಂತರ ದೃಶಿಕೆಯನ್ನು ವಿಂಗಡಿಸಿ, ಅದಕ್ಕೆ ಸ್ಟೋರಿ ಬೋರ್ಡ್ ಮಾಡತೊಡಗಿದೆ. ನನ್ನ ಚಿತ್ರಕಲೇ ಈ ವಿಷಯದಲ್ಲಿ ನೆರವಿಗೆ ಬಂತು. ಇಡೀ ಸಿನೆಮಾಕ್ಕೆ ಸ್ಟೋರಿ ಬೋರ್ಡ್ ಮಾಡುವಷ್ಟರಲ್ಲಿ ತಿಂಗಳುಗಳೇ ಕಳೆದುಹೋಗಿದ್ದವು. ನಿರ್ಮಾಪಕರು ನನ್ನ ಪೂರ್ವತಯಾರಿ ನೋಡಿ ಖುಷಿ ಪಟ್ಟಿದ್ದರು.
 |
ನಮ್ಮ ಚಿತ್ರಕ್ಕೆ ನಾನು ಬಿಡಿಸಿದ ಸ್ಟೋರಿ ಬೋರ್ಡ್. |
ಆ ಅನುಭವದ ನಂತರವೇ ನನಗನಿಸಿದ್ದು ಒಂದು ಚಿತ್ರಕ್ಕೆ ಪೂರ್ವ ತಯಾರಿ ಎಷ್ಟು ಮುಖ್ಯ ಎನ್ನುವುದು. ನಾವು ಹಾಲಿವುಡ್ ಚಿತ್ರಗಳನ್ನ ಗಮನಿಸಿದಾಗ ಇದು ನಮಗರಿವಾಗುತ್ತದೆ. ಇಡೀ ಚಿತ್ರದ ಗತಿ, ಮೂಡನ್ನು ಸ್ವಲ್ಪವೂ ತುಳಿಯದೆ ಹೊತ್ತೊಯ್ಯುವ ಅವರ ಆ ಪ್ರಾವಿಣ್ಯತೆಗೆ ಆ ಪೂರ್ವ ತಯಾರಿಯೇ ಕಾರಣ. ಮೊನ್ನೆ ದಿ ಆವೆಂಜರ್ಸ್ ನೋಡಿದಾಗ ಅದರ ಪ್ರತಿಯೊಂದು, ದೃಶ್ಯ, ಅದಕ್ಕೆ ತಕ್ಕ ಗ್ರಾಫಿಕ್ಸ್, ಬೆಳಕು ಎಲ್ಲವೂ ಪೂರ್ವತಯಾರಿಯಿಂದ ಮಾತ್ರ ಸಾಧ್ಯ ಎನಿಸಿತು. ತೀರ ಮಹತ್ವದ ಚಿತ್ರವಲ್ಲವಾದರೂ ಒಮ್ಮೆ ನೋಡಿ ಖುಶಿಪಡಬಹುದಾದ ಚಿತ್ರ. ಸಾಹಸ, ಗ್ರಾಪಿಕ್ಸ್ ನಾಯಕರುಗಳು ಚಿತ್ರವನ್ನ ಬೋರಾಗದಂತೆ ಮಾಡುತ್ತವೆ.
ಓದಿ ಮೆಚ್ಚಿದ್ದು:
ನಾನು ಕಾಲೇಜು ಮುಗಿಸಿ ಮನೆ ಸೇರುತ್ತಿದ್ದದ್ದು ರಾತ್ರಿ ಹತ್ತು ಘಂಟೆಗೆ. ಮನೆಯವರೆಲ್ಲಾ ಮಲಗಿಬಿಡುತ್ತಿದ್ದರಾದರೂ ನನ್ನ ತಂಗಿ ನನಗೆ ಊಟ ಬಡಿಸಲು ಎದ್ದಿರುತ್ತಿದ್ದಳು. ಊಟ ಮಾಡುವಾಗ ಅವಳಿಗೆ ಹೊಸದಾಗಿ ಬಿಡುಗಡೆಯಾದ ಸಿನೆಮಾದ ಕಥೆಯನ್ನೂ , ಓದಿದ್ದನ್ನೋ ರಸವತ್ತಾಗಿ ಹೇಳುತ್ತಿದ್ದೆ. ಕೆಲವೊಮ್ಮೆ ಕುಚೇಷ್ಟೆಗೆ ಸಾಂಸಾರಿಕ ಸಿನೆಮಾದ ಕಥೆಯನ್ನ ಕುತೂಹಲಕ್ಕೆ ಕೇಳಿದರೆ ನಾನು ಸಿನೆಮಾ ನೋಡಿರದಿದ್ದರೂ ಸುಮ್ಮನೆ ಏನೇನೋ ಕಲ್ಪಿಸಿ ಅವಳಿಗೆ ಹೇಳುತ್ತಿದ್ದೆ. ಅವಳು ' ಆ ಸಿನೆಮಾ ಹಾಗಿರುವಾ ಹಾಗೆ ಕಾಣುವುದಿಲ್ಲವಲ್ಲ...ಒಳ್ಳೆ ಕಥೆಯಿದದ್ದ ಹಾಗಿದೆ. ನೀನು ನೋಡಿದ್ರೆ ರಕ್ತ ಕೊಲೆ ಅಂತ ಏನೇನೋ ಹೇಳ್ತಿದ್ದೀಯಾ..' ಎಂದು ಅನುಮಾನ ವ್ಯಕ್ತ ಪಡಿಸುತ್ತಿದ್ದಳು. ಆಮೇಲೆ ಸಿನೆಮಾ ನೋಡಿದ ಮೇಲೆ ಬೈದರೆ ಆವಾಗ ಹಾಗೆ ಇತ್ತು. ಈಗ ಬದಲಾಗಿದೆ ಎಂದು ನಗುತ್ತಿದ್ದೆ.ಆವಾಗಿನಿಂದಲೂ ನನಗೆ ನಾನು ನೋಡಿ ಖುಶಿಪಟ್ಟೆದ್ದನ್ನು ಎಲ್ಲರಿಗೂ ಹೇಳಿ ತಲೆ ತಿನ್ನುವ ಚಟ ಬಂದುಬಿಟ್ಟಿದೆ. ನನ್ನ ಗೆಳೆಯರ ತಂಡವೂ ಹಾಗೆ ಇದೆ. ಏನನ್ನಾದರೂ ನೋಡಿದಾಕ್ಷಣ, ಓದಿದಾಕ್ಷಣ ಫೋನ್ ಮಾಡಿ ಮಾತಾಡಲೇ ಬೇಕು.
ನನ್ನ ಹಡಗು ನನ್ನದು ನನ್ನ ತೀರ ನನ್ನದು ಬ್ಲಾಗಿನಲ್ಲಿನ
ಸ್ಫೂರ್ತಿ ಕವನ ತುಂಬಾ ಹಿಡಿಸಿತು.
ಚಿಗುರೊಡೆಯಿತು ಇನ್ನೊಮ್ಮೆ ನನ್ನೊಳಗಿದ್ದ,
ಮಗುವಿನ ಮನಸು
ನೆನಪಾಯಿತು ಅಪ್ಪ -ಅಮ್ಮ ನನಗಾಗಿ,
ಕಂಡ ಕನಸು
ಸಾಲುಗಳು ಇಷ್ಟವಾಯಿತು. ತೀರಾ ಪ್ರಾ ಸದ ಹಂಗಿಲ್ಲದ ಕವನ ನಿಮಗೂ ಇಷ್ಟವಾಗಬಹುದು.