Wednesday, September 5, 2012

ಒ೦ದು ಕಲಾತ್ಮಕ ವಾರಾ೦ತ್ಯ...

 ನಿಮಗೆ ಕೆ.ವಿ.ಅಯ್ಯರ್ ಬಗ್ಗೆ ಗೊತ್ತಿದ್ದರೆ ಖ೦ಡಿತವಾಗಿಯೂ ಅವರ ರೂಪದರ್ಶಿ ಕಾದ೦ಬರಿಯ ಬಗ್ಗೆ ಗೊತ್ತಿರುತ್ತದೆ ಎ೦ಬುದು ನನ್ನ ಅನಿಸಿಕೆ. ಅವರು ಬರೆದಿದ್ದು ಕಡಿಮೆ. ಶಾಂತಲಾ (ಕಾದಂಬರಿ], ರೂಪದರ್ಶಿ (ಕಾದಂಬರಿ), ದೆವ್ವದ ಮನೆ,ಲೀನಾ, ಸಮುದ್ಯತಾ (ಕಥೆಗಳು], ಅಂಗಸಾಧನೆಯ ಬಗೆಗೆ ಕೆಲವು ಪುಸ್ತಕಗಳನ್ನು ಇಂಗ್ಲೀಷಿನಲ್ಲಿ ರಚಿಸಿದ್ದಾರೆ.ಅವರ ಕೃತಿಗಳಲ್ಲಿ ನನಗೆ ಅತ್ಯ೦ತ ಇಷ್ಟವಾದದ್ದು ರೂಪದರ್ಶಿ. ಅದನ್ನು ಓದಿ ಸರಿಸುಮಾರು ಹದಿನೈದು ವರ್ಷಗಳಾಗಿರಬಹುದೇನೋ...ಆದರೂ ಆ ಕಥೆ, ನಾಯಕನ ದುರ೦ತ ಬದುಕು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಹಾಗೆ ಇದೆ.ನಾನೂ ಆಗ ಚಿತ್ರ ಬಿಡಿಸುತ್ತಿದ್ದೆ. ನಮ್ಮಣ್ಣನಿ೦ದಾಗಿ ನನಗೆ ಮೈಕೆಲೆ೦ಜಲೊ, ಪಿಕಾಸೋ, ವ್ಯಾನ್ ಗೋ , ಜೋಸೆಫ್ ಟರ್ನರ್ ಮು೦ತಾದವರ ಪರಿಚಯವಾಗಿತ್ತು. ಆದರೆ ನನ್ನನ್ನ ಆ ನಿಟ್ಟಿನಲ್ಲಿ ಹೆಚ್ಚು ಸೆಳೆದವರು ಮೈಕೆಲೆ೦ಜಲೊ ಮತ್ತು ಡಾ ವಿ೦ಚಿ. ರೂಪದರ್ಶಿಯ ಪ್ರಮುಖ ಪಾತ್ರ ಮೈಕೆಲೆ೦ಜಲೊ. ಇಡೀ ಕಥೆ ಇಟಲಿಯಲ್ಲಿ , ಮೈಕೆಲೆ೦ಜಲೊನ ಕಾಲಘಟ್ಟದಲ್ಲಿ ಜರುಗುತ್ತದೆ. ಚರ್ಚೊ೦ದರ ಒಳಾ೦ಗಣ ವಿನ್ಯಾಸಕ್ಕೆ ಮೈಕೆಲೆ೦ಜಲೊನೆ ಸೂಕ್ತ ವ್ಯಕ್ತಿ ಎ೦ದು ಹಿರಿಯರೆಲ್ಲರೂ ನಿರ್ಧರಿಸಿ, ಆ ಕೆಲಸವನ್ನೂ ಮೈಕೆಲೆ೦ಜಲೊಗೆ ವಹಿಸುತ್ತಾರೆ.ಮೈಕೆಲೆ೦ಜಲೊ ಭಾರಿ ಶ್ರದ್ಧೆ, ಪೂಜ್ಯ ಭಾವನೆಯಿ೦ದ ಆ ಕೆಲಸವನ್ನೂ ಒಪ್ಪಿಕೊಳ್ಳುತ್ತಾನೆ.ಚರ್ಚಿನ ಒಳಾ೦ಗಣದ ಗೋಡೆಯ ಮೇಲೆ ಏಸು  ಕ್ರಿಸ್ತನ ಜೀವನ ಚರಿತ್ರೆಯನ್ನು ಕ್ರಮವಾಗಿ ತನ್ನ ಚಿತ್ರಗಳ ಮೂಲಕ ಹೇಳಬೇಕೆ೦ದು ನಿರ್ಧರಿಸುತ್ತಾನೆ. ಮೊದಲಿಗೆ ಏಸು ಕ್ರಿಸ್ತನ ಜನನ, ಬಾಲ್ಯವನ್ನು ಚಿತ್ರಿಸತೊಡಗುತ್ತಾನೆ. ಬಾಲ ಏಸುವನ್ನು  ಚಿತ್ರಿಸಿದಾಗ ಅದರಲ್ಲಿ ಜೇವ೦ತಿಕೆಯ   ಕೊರತೆ ಎದ್ದು ಕಾಣುತ್ತದೆ.ಆಗ ಆ ತರಹದ ಮುಖ ಇರುವ ಬಾಲಕನಿಗಾಗಿ ಹುಡುಕಿಕೊ೦ಡು ಹೊರಡುತ್ತಾನೆ.ಸುಮಾರು ಊರು ಅಳೆದ ಮೇಲೆ ಒ೦ದು   ಹಳ್ಳಿಯಲ್ಲಿ ಆ ತರಹದ ದೈವ ಕಲೆಯಿರುವ ಬಾಲಕ ಸಿಗುತ್ತಾನೆ. ಆತನನ್ನು ಮಾದರಿಯಾಗಿಟ್ಟುಕೊ೦ಡು  ಅದ್ಭುತ ಚಿತ್ರ ಬಿಡಿಸುತ್ತಾನೆ. ಬಾಲ್ಯಾವಸ್ಥೆಯ ನ೦ತರ ಆ ಹುಡುಗನನ್ನು ವಾಪಸು ಅವರ ಊರಿಗೆ ಕಳುಹಿಸಿ ತನ್ನ ಚಿತ್ರವನ್ನ ಮು೦ದುವರೆಸುತ್ತಾನೆ. ಸುಮಾರು ವರ್ಷಗಳು ಕಳೆದುಹೋಗುತ್ತವೆ.ಬಾಲ್ಯಾವಸ್ಥೆಯ ಮುಗಿದು ಆತನ ಯೌವನದ ಘಟನೆಗಳನ್ನೂ ಬರೆದು ಮುಗಿಸಿ, ಕೊನೆಯ ಹ೦ತದಲ್ಲಿ ಬರುವ ಮೋಸಗಾರ ಜುದಾಸನ ಕಪಟತನ, ಕ್ರೌರ್ಯ ಮು೦ತಾದ ಮುಖಭಾವನೆಯ ವ್ಯಕ್ತಿತ್ವ ಚಿತ್ರಿಸುವಲ್ಲಿ ಮೈಕೆಲ್ ವಿಫಲನಾಗುತ್ತಾನೆ. ಈಗ ಒಬ್ಬ ಕೆಟ್ಟ, ಕಪಟ , ಕ್ರೂರಿಯನ್ನು ಹುಡುಕಿ ಮಾದರಿಯಾಗಿಟ್ಟುಕೊ೦ಡು ರಚಿಸಬೇಕಾದ ಅನಿವಾರ್ಯ ಬ೦ದಾಗ ಆ ತರಹದ ವ್ಯಕ್ತಿಗಾಗಿ ಹುಡುಕ ತೊಡಗುತಾನೆ. ಆಗೊಬ್ಬ ಎಲ್ಲಾ ರೀತಿಯಲ್ಲೂ ಕೆಟ್ಟ , ಕುಡುಕ ಮನುಷ್ಯ ಸಿಗುತ್ತಾನೆ. ಅವನನ್ನು ಹೇಗೋ ಒಪ್ಪಿಸಿ ಕರೆತ೦ದು ಚಿತ್ರ ಬಿಡಿಸಲು ಪ್ರಾರ೦ಭಿಸುತ್ತಾನೆ ಮೈಕೆಲ್. ಚಿತ್ರಗಳು ಮತ್ತೆ ಜೇವ೦ತಿಕೆ ತು೦ಬಿಕೊ೦ಡು ಅದ್ಭುತವಾಗಿ ಮೂಡತೊಡಗುತ್ತವೆ. 
 ಆದರೆ ಅದೊ೦ದು ದಿನ ಮೈಕೆಲೆ೦ಜಲೊಗೆ ಆ ದಿನ ಬಾಲ ಏಸುವಿಗೆ ಮಾದರಿಯಾಗಿದ್ದ ಆ ದೈವಕಳೆಯ ಹುಡುಗನೇ  ಈವತ್ತಿನ ಜುದಾಸನ ಮಾದರಿಯಾಗಿರುವ  ಪ್ರೇತಕಳೆಯ ವ್ಯಕ್ತಿ ಎ೦ದು ತಿಳಿದು ಆಘಾತವಾಗುತ್ತದೆ...ಅದಕ್ಕೆ ಕಾರಣವೇನು...ಹೇಗೆ ಒಬ್ಬ ಮುಗ್ಧ ಸಮಾಜದ ಕೆಟ್ಟ ದೃಷ್ಟಿಗೆ ಸಿಕ್ಕಿ ಪಿಶಾಚಿಯಾದ ಎ೦ಬ ಕಥೆ ಕಣ್ಣೀರು ತರಿಸುತ್ತದೆ.ಒಮ್ಮೆ ಓದಿ.
 ಹಾಗೆ  ಮೊನ್ನೆ ಸುಮಾರು ಹತ್ತು ವರ್ಷದ ನ೦ತರ ನಾನೂ ಬ್ರಶ್ ಹಿಡಿದೆ. ಮೊನ್ನೆ ಶನಿವಾರ ಮನೆಯವರೆಲ್ಲರೂ ಸೇರಿದ್ದಾಗ ನನ್ನ ನಾದಿನಿಯ ಮನೆಯಲ್ಲಿ ಚಿತ್ರಬಿಡಿಸಲು ಬೇಕಾದ ಎಲ್ಲಾ ಪರಿಕರಗಳಿದ್ದವು.ಆಕೆ ಈಗೀಗ ಚಿತ್ರ ಬಿಡಿಸುವುದನ್ನು ಗ೦ಭೀರವಾಗಿ  ಕಲಿಯುತ್ತಿದ್ದಾಳೆ. ಬಣ್ಣ ಬ್ರಶ್  ಸಿಕ್ಕಿದ ತಕ್ಷಣ ಏನಾದರೂ ಬರೆಯಲು ಬೇಕು ಎನಿಸಿಬಿಟ್ಟಿತು. ಬಣ್ಣ ಮೆತ್ತಿ ಕ್ಯಾನ್ವಾಸಿನ ಮೇಲೆ ಬಳಿಯುತ್ತ ಹೋದರೆ ಏನೇನೋ ಆಗಿ ಒ೦ದು ಸು೦ದರವಾದ ಬಣ್ಣ ಬರುತ್ತಲ್ಲಾ...ಅದೊ೦ತರ ಖುಷಿ ನನಗೆ. ಈ ಶನಿವಾರ ಮೂರು ಚಿತ್ರ ಬಿಡಿಸಿದೆ. 
ಹಾಗಾಗಿ ಈ ವಾರಾ೦ತ್ಯ ಅರ್ಥಪೂರ್ಣವೆನಿಸಿತು.

ಹಾಗೆ ಇನ್ನೊ೦ದು ವಿಷಯವೆ೦ದರೆ ಕಾದ೦ಬರಿಯಲ್ಲಿ ಬರುವ ಇಟಲಿಯನ್ನು ಯಥಾವತ್ತಾಗಿ ವರ್ಣಿಸಿದ್ದಾರೆ ಕೆ.ವಿ.ಅಯ್ಯರ್..ರಸ್ತೆಗಳು, ಊರುಗಳ ಹೆಸರು ಎಲ್ಲವನ್ನೂ. ಆದರೆ ಅಯ್ಯರ್ ಒಮ್ಮೆಯೂ ಇಟಲಿಗೆ ಹೊಗಿರಲಿಲ್ಲವ೦ತೆ. ನನಗೆ ಅಲ್ಲಿಯ ನಗರದ ಪರಿಚಯ ಬಹುಶ ಪೂರ್ವಜನ್ಮದ್ದಿರಬಹುದು ಎ೦ದು ಹೇಳುತ್ತಿದ್ದರ೦ತೆ.

Monday, September 3, 2012

ಲಲಿತ ಪ್ರಬಂಧ


ನಾಯಿಂದರ ನಾಮ ಸ್ಮರಣೆ......ಲಲಿತ ಪ್ರಬಂಧ
ನಗೆ ಕ್ಷೌರಿಕನೆಂದರೆ ಯಾವಾಗಲೂ ನೆನಪಾಗುವುದು ನಮ್ಮೂರಿನ ಸಿದ್ದಯ್ಯನೇ.ಒಂದು ಬಿಳಿಯದಾದ ಪಂಚೆ ಬಿಳಿ ಶರ್ಟು ಹಾಕಿಕೊಂಡು ಕಂಕುಳಿನಲ್ಲಿ ಮಾಸಿದ ಬ್ಯಾಗಿನಲ್ಲಿದ್ದ ಅವನ ಡಬ್ಬಿಯಿಟ್ಟುಕೊಂಡು ಬರುತ್ತಿದ್ದ ಸಿದ್ದನ ಶಿಸ್ತೇ ಅಂತಹದ್ದು. ಇಡೀ ಊರಿಗೆ ಅವನೊಬ್ಬನೇ ಕ್ಷೌರಿಕನಾದ್ದರಿಂದ ಅವನ ಗತ್ತು ಗೈರತ್ತುಗಳೇ ಬೇರೆಯಾಗಿದ್ದವು. ಅಂದುಕೊಂಡ ದಿನಕ್ಕೇ ಟೈಮಿಗೆ ಯಾವತ್ತೂ ಸಿದ್ದ ಹಾಜರಿರುತ್ತಿರಲಿಲ್ಲ.ಹಾಗಂತ ಅವನನ್ನು ಯಾರೂ ಬೈದಿದ್ದಾಗಲಿ, ಅವನೊಡನೆ ಶರಂಪರ ಜಗಳವಾಡಿದ್ದಾಗಲಿ ನಾನು ನೋಡಿರಲಿಲ್ಲ.ಸುಮ್ಮನೆ ಬಾಯಿ ಮಾತಿನಲ್ಲಿ ಗದರಿಸಿದರೂ ಆನಂತರ ಅವನೊಡನೆ ತಮಾಷೆಯಾಗಿ ಮಾತನಾಡಿ ನೀನು ಬಿಡು ಮಾರಾಯಾ ಮೈಸೂರು ಮಾರಾಜರದ್ದು ಒಂದು ತೂಕವಾದ್ರೆ ನಿಂದೆ ಒಂದು ತೂಕ..ಬೇಕಾದ್ರೆ ಅವ್ರನ್ನ ಹೊತ್ತುಗೊತ್ತಿಗೆ ಹಿಡಿದುಕೂರಿಸ್ಬಿಡ್ಬಹುದು..ನಿನ್ ಹಿಡಿಯಾಕ್‌ಮಾತ್ರ ಆ ಬ್ರಹ್ಮನ ಕೈಲೂ ಸಾಧ್ಯವಿಲ್ಲ ಬಿಡು.. ಎಂಬರ್ಥ ಬರುವ ಮಾತುಗಳಿಂದ ಅವನನ್ನು ತೆಗಳುವ ಹೊಗಳುವ ಕೆಲಸಗಳನ್ನು ಮಾಡುತ್ತಿದ್ದರು. ನಮ್ಮೂರಿನಲ್ಲಿ ಅವನಿಗೆ ಯಾರೂ ಹಣ ಕೊಡುತ್ತಿರಲಿಲ್ಲ. ವರ್ಷಕ್ಕೊಮ್ಮೆ ಅವನಿಗೆ ದವಸ ಧಾನ್ಯ ಕೊಡುತ್ತಿದ್ದರು. ಹೊರೆಗಟ್ಟಲೆ ಸೌದೆ ಕೊಡುತ್ತಿದ್ದರು. ಕಣದ ಹತ್ತಿರಕ್ಕೆ ಜೋಳ, ರಾಗಿ ಈಸಿಕೊಳ್ಳಲು ಬರುತ್ತಿದ್ದವನನ್ನು ಕಂಡದ್ದೆ ವರುಷಕ್ಕೊಮ್ಮೆ ಸಿಗುವ ಆ ಸುಸಂದರ್ಭವನ್ನು ನಮ್ಮೂರ ಜನ ಮಿಸ್ ಮಾಡಿಕೊಳ್ಳದೆ, ಏನೆ ಯೋಳು ಸಿದ್ದಯ್ಯ..ಇದ್ಕ ಮಾತ್ರ ಕರೆಟ್ಟಾಗಿ ಟೈಮಿಗೆ ಬಂದ್ಬುಡ್ತೀಯ ನೋಡುಪ್ಪ..ಅದೆ ಚೌರಮಾಡಕ್ಕೆ ಬಾ ಅನ್ನು ಆಸಾಮಿ ಪತ್ತೆಕ್ಕೆ ಇರಲ್ಲ...ಇನ್ ಮ್ಯಾಕಾದ್ರೂ ಸರ್‍ಯಾಗಿ ಬಾರಯ್ಯೋ.. ಎಂದು ದೌಲತ್ತು ತೋರಿಸಿದರೆ ಹಿಂಗೆ ಹೋಯ್ತಿದಿ..ಅದ್ಕೆ ಬಂದದ್ದು ಕಣಕ್ಕ..ಇದ್ಕಿಯ ಅಂತ ಬಂದದ್ದಲ್ಲಾ.. ಎಂದು ಸಿದ್ದಯ್ಯ ಹಲ್ಲು ಗಿಂಜುತ್ತಿದ್ದ. ಅದಕ್ಕೇ ಅವನು ಬಂದಿರುವುದೂ ಎಂದು ಗೊತ್ತಿದ್ದರೂ ಮುಂದಕ್ಕೆ ಮಾತನಾಡಲಾಗಲಿ, ಕಿಚಾಯಿಸುವುದಾಗಲಿ ಜನರು ಮಾಡುತಿರಲಿಲ್ಲ. ಹಾಗೇನಾದರೂ ಮಾಡಿದರೆ ಜಾತ್ರೆಯ ಸಮಯಕ್ಕೆ, ಮದುವೆಯ ಸಮಯಕ್ಕೆ ಕೈಕೊಟ್ಟುಬಿಡುವ ಭಯವಿತ್ತು. ಇಡೀ ಊರಲ್ಲಿ ಸರ್ಕಾರಿ ನೌಕರಿ ಮಾಡುತ್ತಿದ್ದದ್ದು ನಮ್ಮ ತಂದೆಯಾದ್ದರಿಂದ ಊರಿನಲ್ಲಿ ಹಣ ಕೊಡುತ್ತಿದ್ದದ್ದು ನಾವು ಮಾತ್ರ. ಅದಕ್ಕೆ ಸಿದ್ದಯ್ಯ ಮಾತ್ರ ನಮ್ಮ ಮನೆಗೆ ಸರಿಯಾದ ಸಮಯಕ್ಕೆ ಬಂದುಬಿಡುತ್ತಿದ್ದ. ಬಂದವನು ತನ್ನ ಬಿಳಿ ಬಟ್ಟೆ, ಪಂಚೆ ಬಿಚ್ಚಿ ಅದನ್ನು ಒಂಚೂರು ಧೂಳು ತಾಕದಂತೆ ಮಡಚಿ ತನ್ನ ಬ್ಯಾಗಿನಲ್ಲಿಟ್ಟಿರುತ್ತಿದ್ದ ಪೇಪರು ತೆರೆದು ಅದರಲ್ಲಿ ಸುತ್ತಿಡುತ್ತಿದ್ದ. ಈಗ ಬರೇ ದೊಗಳೆಯಾದ ಮಂಡಿಯಿಂದ ಒಂದಿಂಚು ಕೆಳಗಿದ್ದ ಚಡ್ಡಿ, ಮಾಸಲು ಬನಿಯನ್ನುಧಾರಿಯಾಗಿ ನಿಂತುಬಿಡುತ್ತಿದ್ದ. ನಮ್ಮಪ್ಪ ಅವನ ಮುಂದೊಂದು ಮಣೆಹಾಕಿಕೊಂಡು ಕುಳಿತುಕೊಳ್ಳುತ್ತಿದ್ದರು. ಬೀಡಿಯೊಂದಕ್ಕೆ ಬೆಂಕಿ ತಾಗಿಸಿ ತುಟಿಯಲ್ಲಿ ಕಚ್ಚಿಕೊಂಡು ಕತ್ತರಿ ಹಿಡಿದು ನಮ್ಮಪ್ಪನ ಮುಂದೆ ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಸಿದ್ದಯ ಇಡೀ ಬೀಡಿಯನ್ನು ಒಂದುಸಾರಿಯೂ ಕೈಯಲ್ಲಿ ಮುಟ್ಟದೇ ನಮ್ಮಪ್ಪ ಕೂದಲು ಕತ್ತರಿಸಿ, ಮುಖ ಕ್ಷೌರ ಮಾಡುತ್ತಿದ್ದ.ಅವನು ಹೇರ್‌ಕಟ್ ಮಾಡುವಾಗ ಅವನು ಕತ್ತರಿಯನ್ನು ಕಚಕಚನೇ ಸದ್ದು ಮಾಡುವ ಪರಿ ಮತ್ತು ಬೀಡಿಯಿಂದ ಬುಸು ಬುಸು ಹೊಗೆ ಬಿಡುತ್ತ ಅದನ್ನು ತುಟಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ನಾಲಿಗೆಯಿಂದ ತಳುತ್ತಾ, ಕಟುವಾಯಿಯನ್ನು ಇಷ್ಟೇಇಷ್ಟು ತೆರೆದು ಹೊಗೆ ಬಿಟ್ಟರೂ ಬೀಡಿಯ ಮೇಲಿನ ಹಿಡಿತ ತಪ್ಪದಂತೆ ಬ್ಯಾಲೆನ್ಸ್‌ಮಾಡುವ, ಅದರ ಜೊತೆಗೆ ಊರಿನ ಬೇಕು ಬೇಡದ ವಿಷಯವನ್ನೂ ಮಾತಾಡುವ ಅವನ ಕರಾಮತ್ತನ್ನು ನೋಡುವುದೇ ನನಗಂತೂ ಸೋಜಿಗದ ವಿಷಯವಾಗಿತ್ತು. ಅದರಲ್ಲೂ ನಮಗೆ ಮಕ್ಕಳಿಗೆ ಹೇರ್‌ಕಟ್ ಮಾಡುವಾಗಲಂತೂ ಪ್ರಾಣ ಹಿಂಡಿಬಿಡುತ್ತಿದ್ದ. ಇಡೀ ಬುರುಡೆಯನ್ನು ಕೈಯಲ್ಲಿ ಹಿಡಿದು ತನಗೆ ಬೇಕಾದ ಪೊಶಿಷನ್ನಿಗೆ ತಿರುಗಿಸಿಬಿಟ್ಟನೆಂದರೆ ಅವನು ಬೇರೊಂದು ಪೊಶಿಷಸನ್ ಕೊಡುವವರೆಗೂ ಆ ಕಡೆ ಈ ಕಡೆ ತಿರುಗುವುದಿರಲಿ, ಸ್ವಲ್ಪ ತಲೆ ಅಲುಗಿಸಿದರೂ ಪಟ್ ಎಂದು ತಲೆಯ ಮೇಲೆ ಭಾರಿಸಿ, ಅಲ್ಲೇ ಕುಳಿತಿದ್ದ ಹಿರಿಯರಿಗೆ ನೋಡಿ ಸಾಮಿ ಎಂಗಾಡ್ತಾನೆ..ಒಂಚೂರು ಕತ್ತಿ ಅತ್ತಗಿತ್ತಾಗ್ ಹೋಯ್ತುಂದ್ರೆ ಕಿವಿ ಕೆಪ್ಪಾಗೊಯ್ತದೆ ಅಂತೊಸಿ ತಿಳಿ ಯೋಳಿ.. ಎಂದು ಆರೋಪಿಸಿ ಅವರ ಕೈಯಿಂದಲೂ ಬೈಯ್ಸುತ್ತಿದ್ದ. ಕೆಲವು ಹುಡುಗರಂತೂ ಸದ್ದಾದರೆ, ಯಾರಾದರೂ ಬಂದರೆ ಅತ್ತ ತಿರುಗಿಬಿಡುತ್ತಿದ್ದರಿಂದ ಸಿದ್ದಯ್ಯನೂ ಅಂಥವರನ್ನೂ ಗುರುತಿಟ್ಟುಕೊಳ್ಳುತ್ತಿದ್ದವನು ಹೋದ ತಕ್ಷಣ ಅವನನ್ನು ಕೂರಿಸಿ, ಅಕ್ಕೌ..ಒಂದು ಕರ್ಚೀಪು ಕೊಡಿ.. ಎಂದು ಈಸಿಕೊಂಡು ಅದನ್ನು ಅವನ ಕಣ್ಣಿಗೆ ಕಟ್ಟಿಬಿಟ್ಟರೇ ಬಿಚ್ಚುತ್ತಿದ್ದದ್ದು ಹೇರ್ಕಟ್ ಮುಗಿದ ಮೇಲೆಯೇ. ಸಿದ್ದಯ್ಯನ ಹೇರ್ ಕಟ್ಟಿನಲ್ಲಿ ನಮೂನೆಗಳಿರಲಿಲ್ಲ. ಅವನಿಗೆ ಗೊತ್ತಿದ್ದದ್ದು ಒಂದೇ. ಬೆಳೆದಿರುವ ಕಡೆ ಕತ್ತರಿಸುವುದು. ಹಾಗೆ ದೊಡ್ಡವರ ಗಡ್ಡ ಬೋಳಿಸಲು ಬಳಸುತ್ತಿದ್ದ ಚಾಕುವನ್ನು ಅವರ ಮುಂದೆಯೇ ಕಲ್ಲಿಗೆ ತಿಕ್ಕಿ ಸಾಣೆಹಿಡಿಯುತ್ತಿದ್ದ.
ನಮ್ಮಮ್ಮನಿಗೆ ಅವಾಗಾವಾಗ ತಲೆನೋವು ಬರುತ್ತಿತ್ತು. ಅದೊಂದು ಭಾನುವಾರ ಹೀಗೆ ನಮ್ಮಪ್ಪ ಕೂದಲುಕಟ್ ಮಾಡಿಸುತ್ತಿದ್ದಾಗ ತಲೆನೋವಿನ ಪ್ರಸ್ತಾಪ ಬಂದಿತ್ತು. ಸಿದ್ದಯ್ಯ ಬೀಡಿಯುಗಳದೆಯೇ ಯೇನೇ ಹೇಳಿ ಸಾ..ಈ ಮಾತ್ರ ಗೀತ್ರ ಕನ್ನಡಕ ತಕ್ಕಳದೆಲ್ಲಾ ವೇಸ್ಟು..ನನ್ತಾವು ಒಂದೊಳ್ಳೆ ಐಡ್ಯಾ ಅದೆ..ಹಂಗ್ಮಾಡಿದ್ರೆ ತಲೆ ನೋವು ಈ ಜನ್ಮದಾಕೆ ಬರಂಗಿಲ್ಲ.. ಅಂದ. ಅವನು ಹಾಗೆಯೆ. ಎಲ್ಲಾ ವಿಷಯಕ್ಕೂ ತನ್ನದೇ ಆದ ತರಲೆ ತರಲೆಯಾದ ಅಭಿಪ್ರಾಯವನ್ನೂ, ಪರಿಹಾರವನ್ನೂ ಹೇಳುತ್ತಿದ್ದ. ನಮ್ಮಪ್ಪ ಅದನ್ನು ತಲೆಗೆ ಹಾಕಿಕೊಳ್ಳುತ್ತಿರಲಿಲ್ಲವಾದರೂ ಸುಮ್ಮನೆ ಮಜಾ ತೆಗೆದುಕೊಳ್ಳಲು ಕೇಳುತ್ತಿದ್ದರು. ಅದೇನಯ್ಯಾ ಅಂತದ್ದು.. ಎಂದದ್ದಕ್ಕೆ ಸಿದ್ದಯ್ಯ ಕೊಟ್ಟ ಉತ್ತರ ಕೇಳಿ ಹೌಹಾರಿ ಬಿಟ್ಟಿದ್ದರು. ಏನೂ ಇಲ್ಲಾ ಸಾ..ಹಣೆ ಹತ್ರ ಒಂದು ನರ ಇರ್ತದೆ..ತಲೆನೋಯ ಟೈಮ್ನಲ್ಲಿ ನೀವೆ ನೋಡಿ.. ಪಟಿಪಟೀಂತ ಹಾವು ತರ ಹೊಳ್ಳಾಡ್ತಿರ್ತದೆ..ಅದನ್ನ ಪಟ್ ಅಂತ ಕತ್ರೀಲಿ ಒಂದೇಟ್ ಕೊಟ್ಟು ಕೆಟ್ಟ ರಕ್ತಾನೆಲ್ಲಾ ಹೊರಕ್ಕೆ ಸುರಿಸಿಬಿಟ್ರೆ ಇನ್ಮಾಕೆ ತಲೆನೋವೇ ಬರಲ್ಲ..ಅಂದಿದ್ದ.
ಆನಂತರ ಅವನ ಮಗ ಮಾದೇವ ಕುಲಕಸುಬನ್ನು ಮುಂದುವರೆಸಿದನಾದರೂ ಪಕ್ಕದ ನಂಜನಗೂಡಿಗೆ ಹೋಗಿ ಒಂದಷ್ಟು ಬೇರೆ ಬೇರೇ ತರಹದ ಕೇಶಶೈಲಿಯನ್ನು ಕಲಿತುಬಂದಿದ್ದನಾದ್ದರಿಂದ ಅವನ ಸ್ಟೈಲೇ ಬೇರೆಯಿತ್ತು. ವಯಸ್ಸಾದವರ ತಲೆಗೆ ಅವನೂ ಜಪ್ಪಯ್ಯ ಅಂದರೂ ಕತ್ತರಿಹಾಕುತ್ತಿರಲಿಲ್ಲ. ಇರದ ನಾಕು ಕೂದಲಿಗೆ ಹೇರ್ಕಟ್ ಬೇರೇ ಕೇಡು..ಬಿಸಿಬಿಸಿಯಾಗಿ ಸ್ನಾನ ಮಾಡ್ಕಂಡು ಜೋರಾಗಿ ತಲೇನ ಒದ್ರುಬುಟ್ರೇ ಅವೇ ಉದ್ರೋಯ್ತವೆ..ಅದಕೆ ಕುಂತ್ಕಂಡು ಕಟ್ ಮಾಡ್ಬೇಕಂತೆ.. ಎಂದು ಮೂದಲಿಸುತ್ತಿದ್ದನಲ್ಲದೇ ನಮ್ಮಪ್ಪಂಗೇಳ್ತೀನಿ ಅವನ ಕೈಲಿ ಮಾಡಿಸ್ಕಳ್ಳಿ.. ಎನ್ನುತ್ತಿದ್ದ. ನಮ್ಮೂರಿನಲ್ಲಿ ಸ್ಕೂಲಿಗೆ ಹೋಗುವವರಿಗೆ, ಕಾಲೇಜಿಗೆ ಹೋಗುವವರಿಗೆ ಮೊದಲ ಆದ್ಯತೆ ಕೊಡುತ್ತಿದ್ದ ಮಾದೇವ ತಾನು ಮಾತ್ರ ಮೈಸೂರಿನಲ್ಲಿ ಹೇರ್‍ಕಟ್ ಮಾಡಿಸುತ್ತಿದ್ದನಂತೆ. ಇಡೀ ಸುತ್ತಮೌತ್ತಲ ಯಾವ ಊರಿನಲ್ಲೂ ನನ್ನ ವರೈಟಿಯ ಸ್ಟೈಲ್ ಹೇರ್‌ಕಟ್ ಯಾವನ್ಗೂ ಮಾಡಕ್ ಬರಲ್ಲಾ..ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದ. ನನಗೆ ಮೊದಲಿಂತಲೂ ನನ್ನ ಕೂದಲಿನ ಮೇಲೆ ಬಗೆಬಗೆಯ ಪ್ರಯೋಗ ಮಾಡಬೇಕೆಂಬಾಸೆ ಇತ್ತೇಇತ್ತು. ಆದರೆ ಸಿದ್ದಯ್ಯನ ಜಮಾನದಲ್ಲಿ ಅದು ಸಾಧ್ಯವಾಗೇ ಇರಲಿಲ್ಲ. ನಾನು ಮಾದೇವನಿಗೆ ಮಾದೇವ ನಿನಗೆ ಮಷ್ರೂಮ್ ಹೇರ್‌ಕಟ್ ಬತ್ತದಾ..? ಎಂದು ಕಿಚಾಯಿಸುತ್ತಿದ್ದೆ. ಅದಕ್ಕವನು ಹೆಸರು ಗೊತ್ತಿಲ್ಲಾ ಆದ್ರೆ ಬತ್ತದೆ..ಹೆಂಗೇ ಹೇಳು? ಎಂದು ನನ್ನನ್ನೇ ಕೇಳುತ್ತಿದ್ದ. ನಾನು ಕನ್ನಡಿಯ ಸಹಾಯದಿಂದ ಇಲ್ಲಿ ಕಟ್ಟು ಮಾಡು, ಅಲ್ಲಿ ಸ್ವಲ್ಪ ತೆಗಿ..ಹಿಂಗ ಮಾಡು, ಹಂಗ ಮಾಡು...ಎಂದೆಲ್ಲಾ ನನಗಿಷ್ಟ ಬಂದಹಾಗೆ ಕೇಶವಿನ್ಯಾಸ ಮಾಡಿಸಿಕೊಳ್ಳುತ್ತಿದ್ದೆ.ಒಮ್ಮೊಮ್ಮೆ ಮನೆಯ ಹತ್ತಿರಕ್ಕೆ ಬರುತ್ತಿದ್ದ ಸಿದ್ದಯ್ಯ ಮಾತ್ರ ಮಗನನ್ನು ಎರ್ರಾಬಿರ್ರಿ ಬೈಯುತ್ತಿದ್ದ. ನೋಡಿ ಸಾ..ಇಡೀ ಊರಿಗೆಲ್ಲಾ ಕೂದಲು ಕತ್ರಿಸಿದ್ ದುಡ್ಡು ತಗಂಡೋಗಿ ಒಂದೇ ಸಲಕ್ಕೆ ಮೈಸೂರಿನಲ್ಲಿ ತನ್ನ ಕೂದಲ್ಕಟ್ಟುಮಾಡಿಸ್ಕಂಡು ಬತ್ತಾನೆ..ನೀವಾರು ಒಸಿ ಹೇಳಿ ಸಾ..ಇವನ್ ಮುಸುಡಿಗೆ ಮೈಸ್ಸೂರ್ ಹೇರ್ ಕಟ್ ಬೇಕಸಾ..ನಿಮ್ಮಗ ಕಾಲೇಜಿಗ್ ಹೋಯ್ತಾನೆ..ಅವ್ನೇ ಮಾದೇವ್ನ ಕೈಲಿ ಮಾಡಿಸ್ಕತಾನೆ.. ಎನ್ನುತ್ತಿದ್ದ. ಅದರ ಜೊತೆಗೆ ನಾ ಹತ್ಸಾವ್ರ ಕೊಡಬೇಕಂತೆ ನೋಡಿ..ಈ ಊರ್ನಾಗೆ ಶಾಪಿಡ್ತಾನಂತೆ..ಶಾಪಿಟ್ಕಂದು ನಾವು ಬದ್ಕಕಾಯ್ತದಾ..ಎಂದೆಲ್ಲಾ ಹೊಸಹೊಸ ರೀತಿಯ ಅರೋಪ ಹೊರಿಸಿ ಬೈಯುತ್ತಿದ್ದ. ಆದರೆ ಮಾದೇವ ಮಾತ್ರ ಅವನ ಆರೋಪವೆಲ್ಲವನ್ನೂ ಒಂದೇ ಏಟಿಗೆ ನಿವ್ವಾಳಿಸಿ ಬೀಸಾಕಿ, ಸುಮ್ಕಿರಿ ಸಾ  ಈ ಅಡಪ ಇಡ್ಕಂದು ಊರ್‍ನೆಲ್ಲಾ ಅಲೀಬೇಕು..ಶಾಪಿಟ್ಕಂದು ಕೂತ್ಕಂಡ್ರೆ ನಾವಿರ ಜಾಗಕ್ಕೆ ಬತ್ತಾರೆ..ಮಾಡಿಸ್ಕಂದು ಹೋಯ್ತಾರೆ..ಮನೆ ಮುಂದ ಹೋದ್ರ ಮರ್ಯಾದೆ ಕಮ್ಮಿ ಸಾ..ಎಂದು ಅವನದೇ ವರಾತೆ ತೆಗೆಯುತ್ತಿದ್ದ. ಒಂದು ಬೋರ್ಡು..ಅದ್ರಲ್ಲಿ ಇಂತಿಂಥ ಹೇರ್‌ಕಟ್ಗೆ ಇಷ್ಟಿಟ್ಟು ದುಡ್ಡು ಅಂತ ಬರೆದು ನೇತಾಕ್ಬುಟ್ರೆ ಮುಗೀತು..ಎಂದೆಲ್ಲಾ ನನಗೆ ಹೇಳುತ್ತಿದ್ದ. ಆವಾಗ ತಮಿಳಿನಲ್ಲಿ ಕಾದಲರ್ ದಿನಮ್ ಎಂಬೊಂದು ಸಿನಿಮಾ ಬಂದಿತ್ತು. ಅದರಲ್ಲಿ ನಾಯಕನಿಗಿದ್ದ ಹೇರ್‌ಸ್ಟೈಲ್ ನನಗೆ ಇಷ್ಟವಾಗಿ ಅವನ ಫೋಟೊ ಒಂದನ್ನು ಮಾದೇವನಿಗೆ ತೋರಿಸಿ ಇದೇ ರೀತಿ ಮಾಡಿಕೊಡಬೇಕೆಂದು ಹೇಳಿದೆ. ಅದ್ಯಾವ ಮಾ..ನಂಗೆ ಫೋಟೋ ನೋಡೋದೆ ಬ್ಯಾಡ ..ಹಂಗೆ ಮಾಡ್ತೀನಿ ಅಂದನಾದರೂ ತಲೆ ನನ್ನದಾದ್ದರಿಂದ ಆ ಫೋಟೊ ಹಿಡಿದುಕೊಂಡೇ ಪ್ರಯೋಗಕ್ಕೆ ಕುಳಿತುಕೊಂಡೆವು. ಅದೊಂತರ ವಿಚಿತ್ರ ಹೇರ್‌ಕಟ್.ಕಿವಿಯಿಂದ ಕಿವಿಯವರೆಗೆ ಬುಡದಲ್ಲಿ ಕೂದಲನ್ನು ತುಂಡಾಗಿ ಕತ್ತರಿಸಿ ಇಡೀ ಬುರುಡೆಯೇ ಅಣಬೆಯಂತೆ ಕಾಣುವಂತೆ ಮಾಡುವ ಹೇರ್‌ಕಟ್ ಅದು.ಮಾಡುತ್ತ ಮಾಡುತ್ತ ಮಾದೇವನಿಗೆ ಹದ ತಪ್ಪಿತು. ಹೇಗೇಗೊ ಆಯಿತು. ಕೊನೆಯಲ್ಲಿ ಬುರುಡೆ ಬೋಳಿಸಿ ಎರಡ್ಮೂರು ದಿನ ಬಿಟ್ಟರೆ ಎಷ್ಟು ಕೂದಲು ಬರುತ್ತದೋ ಅಷ್ಟರವರೆಗೆ ಕೂದಲನ್ನು ತುಂಡು ಮಾಡಿಬಿಟ್ಟ. ಕೊನೆಗೆ ಹೇಗೇಗೋ ಆದರೂ ಮಾದೇವ ಮಾತ್ರ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಅದೊಂತರ ಹುಡ್ಗೀರಂಗೆ ಕಾಣ್ತದೆ ಅದಕ್ಕೆ ಪೋಲೀಸ್‌ಸ್ಟೋರಿ ಹೇರ್‌ಕಟ್ ಮಾಡೀನಿ..ಗಂಡ್ಸಂಗೆ..ಯಾವ ಪೋಲೀಸಂಗೂ ಕಮ್ಮಿಯಿಲ್ಲ..ಎಂದು ತಿಪ್ಪೆ ಸಾರಿಸಿದ್ದ.
ಮಾರನೆಯ ದಿನ ನಾನು ಕಾಲೆಜಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆ. ನಮ್ಮ ಮನೆ ಪಕ್ಕದ ನರ್ಸಮ್ಮನೂ ಕಾಯುತ್ತಿದ್ದರು. ನರ್ಸಮ್ಮ ನಮ್ಮೂರಿನಲ್ಲೆ ಬೈಗುಳಕ್ಕೆ ಫೇಮಸ್ಸು. ಯಾರೇ ಆದರೂ ಕೇರ್ ಮಾಡುತ್ತಿರಲಿಲ್ಲ. ಮುಖಮೋರೆ ನೋಡುತ್ತಿರಲಿಲ್ಲ. ಬೈಯುವುದಕ್ಕೆ ಬಾಯಿ ತೆರೆದರೆ ಗಂಡಸರೂ ಕಿವಿ ಮುಚ್ಚಿಕೊಳ್ಳುತ್ತಿದ್ದರು. ಆವತ್ತು ಬಸ್ಸು ಎಂದಿನಂತೆ ಲೇಟಾದ್ದರಿಂದ ನರ್ಸಮ್ಮನ ಅಸಹನೆ ಮೇರೆ ಮೀರಿತ್ತು. ಬಸ್ಸಿನ ಕಂಡಕ್ಟರು, ಡ್ರೈವರು ಎಲ್ಲರನ್ನೂ ಒಕ್ಕೊರಳಿನಿಂದ ಎಲ್ಲಾ ರೀತಿಯ ಬೈಗುಳಗಳಿಂದ ಎಕ್ಕಿಳಿದು ಆಗಿತ್ತು. ಬಹುಶ ಆ ಸಮಯದಲ್ಲಿ ಆ ಡಿಪಾರ್ಟ್‌ಮೆಂಟಿಗೆ ಸಂಬಂಧಪಟ್ಟವರ್ಯಾರಾದರೂ ಸಿಕ್ಕಿದ್ದರೆ ಹೊಡದೇಬಿಡುತ್ತಿದ್ದರೇನೋ..ಅಂಥ ಸಮಯದಲ್ಲಿ ನಾನೂ ಅದೇ ಬಸ್ಸಿಗಾಗಿ ಕಾದಿದ್ದೆ. ಮಾದೇವನೂ ಬಸ್ಸಿಗಾಗಿಯೇ ಕಾಯುತ್ತಿದ್ದ. ಬೈಯ್ಯುವ , ಉಗಿಯುವ ಕೆಲಸವೆಲ್ಲಾ ಮುಗಿದು ಇನ್ನೇನು ಇಲ್ಲ ಎಂದಾಗ ನರ್ಸಮ್ಮನ ಚಿತ್ತ ನನ್ನ ಮೇಲೆ, ಅಂದರೆ ನನ್ನ ತಲೆಯ ಮೇಲೆ ಬಿದ್ದುಬಿಟ್ಟಿತ್ತು. ಅದೇ ಬೈಯುವ ವರಸೆಯಲ್ಲಿಯೇ ಯಾರೋ ಅದು ನಿನ್ ಹೇರ್‌ಕಟ್ ಮಾಡಿದವ್ನು..? ಎಂಬೊಂದು ಪ್ರಶ್ನೆ ಹಾಗೆ ತೂರಿಬಂದುಬಿಡಬೇಕೆ.? ಆ ಕಡೆ ತಿರುಗಿಕೊಂಡಿದ್ದ ಮಾದೇವ ಮೈಯೆಲ್ಲಾ ಕಿವಿಯಾಗಿಸಿದ. ನಾನು ಪ್ರತಿಸಾರಿಯು ಅವನ ಕೈಯಲ್ಲಿ ಹೇರ್‌ಕಟ್ ಮಾಡಿಸುವಾಗ ನಮ್ಮ ಕಾಲೇಜಿನಲ್ಲಿ ಎಲ್ಲಾ ಹೊಗಳ್ತಿದ್ರು ಮಾರಾಯ..ಎಲ್ಲಿ ಮಾಡಿಸ್ತೀಯ ಹೇರ್‌ಕಟ್‌ನಾ ಅಂತ..ನಾನು ನಮ್ಮೂರ್ಲಿ ಅಂದ್ರೆ ಯಾರೂ ನಂಬ್ತಾನೆ ಇಲ್ಲ..ಸಾಧ್ಯನೇ ಇಲ್ಲ ಅಂತಾರೆ ನೋಡು.. ಎಂದೆಲ್ಲಾ ಬೂಸಿ ಬಿಟ್ಟರೆ ಅದನ್ನೆ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿದ್ದ ಮಾದೇವ, ಬರಕ್ಕೇಳು ಅವ್ರಿಗೆ..ಎದ್ರುಗೇ ಮಾಡ್‌ತೋರ್ಸ್ತೀನಿ..ಬರೀ ಸಿಟೀಲೇ ಮಾಡ್ತಾರೆ ಅನ್ಕಂಡುಬುಟ್ಟವ್ರೆ.. ನನ್‌ಮಕ್ಳು ಒಂದ್ ಶಾಪಿಟ್ಕಂಡು ಕುಣಿದಾಡ್ತಾರೆ..ನಮ್ಮಪ್ಪಂಗೆ ಬಡ್ಕತೀನಿ..ಕೇಳಾಕೆ ಇಲ್ಲಾ..ಹಿಂಗ ಈ ಡಬ್ಬಿ ಹಿಡ್ಕಂಡು ಅಲೀ ಅಂತಾನೆ..ಒಂದ್ ಶಾಪಿಟ್ಕಂಡ್ರೆ ನಾವು ಕುಂತಿರ್ತವ್ಕೆ ಬತಾರಪ್ಪ.. ಎಂದೆಲ್ಲಾ ಜಂಭ ಕೊಚ್ಚಿಕೊಳ್ಳುತ್ತಿದ್ದ. ಆದರೆ ಇಲ್ಲಿ ಇಡೀ ಪರಿಸ್ಥಿತಿಯೇ ಉಲ್ಟಾ ಆಗಿತ್ತು. ನಾನು ಬೇರೆ ದಾರಿ ಕಾಣದೆ, ಅದೇ ಕಣಮ್ಮೋ..ನಮ್ ಮಾದೇವ.. ಅಂದೆ. ಅಷ್ಟೆ. ಮೊದಲೆ ಯಾರನ್ನಾದರೂ ಹಿಗ್ಗಾಮುಗ್ಗ ಝಾಡಿಸಬೇಕೆಂಬ ಉಮ್ಮೇದು ಹತ್ತಿದ್ದ ನರ್ಸಮ್ಮನಿಗೆ ಯಾವಾಗ ಮಾದೇವನ ಹೆಸರು ಕಿವಿಗೆ ಬಿತ್ತೋ ಬಸ್ಸು ತಡವಾಗಿರುವುದರಿಂದಾದ ಕೋಪ ಸರಕ್ಕನೇ ಮಾದೇವನ ಕಡೇ ತಿರುಗಿಯೇಬಿಟ್ಟಿತು ಬಡ್ಡೀಮಗಂಗೆ ಸರ್ಯಾಗಿ ಕೆಲ್ಸ ಮಾಡ್ಲಿಕ್ಕೂ ಬರಲ್ಲಾ..ಅಲ್ಲಾ ಈ ತರ ಇಲೀ ಕೆರದಂಗೆ ಕೆರದಾಕವ್ನಲ್ಲಾ..ಇದು ಬಿಟ್ಕಂದು ಹೆಂಗೋಯ್ತೀಯ ಕಾಲೇಜಿಗೆ..ಅವ್ನಿಗೆ ತಲೆ ಬ್ಯಾಡ್ವಾ..ಕಾಲೇಜಿಗೆ ಹೋಗೋವ್ರಿಗೆ ಹೆಂಗ್ ಹೇರ್‌ಕಟ್ ಮಾಡ್ಬೇಕೂಂತಾನೂ ಗೊತ್ತಾಗಲ್ವಾ..ಈ ಅವ್ತಾರದ ತಲೆಕಟ್ ಮಾಡಕ್ಕೆ ಪ್ಯಾಂಟಾಕೊಂಡು ಇಲ್ದಿರ ಸ್ಟೈಲ್ ಮಾಡ್ಕಂಡು ತಿರ್ಗಾಡ್ತಾನಲ್ಲಾ ..ಸಿಕ್ಲಿ ನನ್ ಕೈಗೆ.. ಎಂದೆಲ್ಲಾ ಬೈದಾಡಿಬಿಟ್ಟಳು. ಅಷ್ಟರಲ್ಲಿ ಬಸ್ಸು ಬಂದಿದ್ದರಿಂದ ಸಹಸ್ರನಾಮ ಅಷ್ಟಕ್ಕೆ  ಮುಗಿದಿತ್ತಾದರೂ ಆವತ್ತು ಸಂಜೆ ಸಿಕ್ಕಿದ ಮಾದೇವ ಇನ್ಮುಂದೆ ನೀನು ಹೇಳ್ದಂಗೆಲ್ಲಾ ನಾನು ಕಟ್ ಮಾಡಲ್ಲಾ..ನಿನ್ನಿಂದಾಗಿ ನಾನು ಬೋಯ್ಸಕಬೇಕಾಯ್ತು.. ಎಂದು ಖಡಾಖಂಡಿತವಾಗಿ ಹೇಳಿಬಿಟ್ಟ.
ನಮ್ಮೂರಿಗೆ ಹೇರ್‌ಕಟ್ ಸಲೂನ್ ಬಂದಾಗ ನಮ್ಮೂರು ಒಂದು ರೀತಿಯಲ್ಲಿ ಮುಂದುವರೆದಿತ್ತೆಂದೇ ಹೇಳಬಹುದು. ಟಿ.ವಿ ಅಂಟೆನಾಗಳು ಮಾಯವಾಗಿ ಕೇಬಲ್ ಬಂದಿತ್ತು. ರೋಡಿನ ಇಕ್ಕೆಲಗಳಲ್ಲಿದ್ದ ಅಂಗಡಿಯ ಮುಂದೆ ಕಾಯಿನ್‌ಬೂತ್‌ಗಳು ಬಂದಿದ್ದವು. ಊರಲ್ಲಿ ನಾಲ್ಕಾರು ಮೋಟರ್‌ಬೈಕುಗಳು, ಒಂದು ಮಾರುತಿ800 ಕಾರು ಬಂದಿತ್ತು. ಇಂತಹ ಸಮಯದಲ್ಲೇ ಬಂಗಾರಿ ತನ್ನ ಸವಿತಾಹೇರ್‌ಕಟ್ಟಿಂಗ್ ಸಲೂನ್ ತೆರೆದಿದ್ದು. ನಮ್ಮೂರಿನಲ್ಲೇ ಗಯ್ಯಾಳಿಯೆಂದು ಹೆಸರುವಾಸಿಯಾಗಿದ್ದ ಕಮಲಮ್ಮನ ಮನೆಯ ಒಂದು ಪಾರ್ಶ್ವವನ್ನು ತನ್ನ ಸಲೂನಾಗಿ ಪರಿವರ್ತಿಸಿದ್ದ ಬಂಗಾರಿ ಮೂಲತಹ ನಮ್ಮೂರಿನವನಲ್ಲ.ಅವ ಯಾವ ಊರಿನವನೆಂದು ಯಾರಿಗೂ ನಿಖರವಾಗಿ ಗೊತ್ತಿರಲಿಲ್ಲ. ಯಾವುದು ಕೇಸಿಗೆ ಸಿಲುಕಿಕೊಂಡು ಇಡೀ ಮಾದೇವನ ಕುಟುಂಬ ಊರಿನಿಂದ ಗುಳೆ ಹೋದ ಮೇಲೆ ನಮ್ಮೂರಿನವರಿಗೆ ಕಟ್ಟಿಂಗ್ ಶೇವಿಂಗಿಗೆ ಭಾರಿ ತೊಂದರೆಯಾಗಿದ್ದ ಸಮಯದಲ್ಲಿ ದೇವರಂತೆ ಊರಿಗೆ ಬಂದವನೇ ಈ ಬಂಗಾರಿ. ಅವನು ಕ್ಷೌರಿಕ ಎಂದು ತಿಳಿದೊಡನೆ ಅವನಿಗೆ ರಾಜಾಹ್ವಾನ ದೊರೆತಿತ್ತು. ಪ್ರತಿಸಾರಿಯು ಪಕ್ಕದ ನಂಜನಗೂಡಿಗೆ, ಹುಲ್ಲಹಳ್ಳಿಗೆ ಬರೀ ಕೂದಲುಸಲುವಾಗಿ ಹೋಗಿ ಹೈರಾಣಾಗಿದ್ದವರಿಗೆ ಅವನು ಬಂದದ್ದೇ ಊರಿಗೆ ದೇವರು ಬಂದಷ್ಟೇ ಸಂತೋಷವಾಗಿತ್ತು. ಅವನು ಊರಿಗೆ ಬಂದವನು ಜನರೆಲ್ಲಾ ಜಾತಕ ಪಕ್ಷಿಯಂದೇ ಕಾಯುತ್ತಿದ್ದರೂ ವಾರದ ಮಟ್ಟಿಗೆ ಅವನು ಯಾರ ತಲೆಗೂ ಕತ್ತರಿ ಹಾಕಲು ಹೋಗಿರಲಿಲ್ಲ. ನಾನು ಹಾಗೆಲ್ಲಾ ಬೀದಿಬೀದಿಯಲ್ಲಿ ಚೌರ ಮಾಡುವವನಲ್ಲ, ನಂಗೆ ಯಾವ್ದೇ ಆಗ್ಲಿ ಸಿಸ್ಟಮ್ಮಾಗಿರ್ಬೇಕು.. ಎಂದೆಲ್ಲಾ ಜಂಬ ಕೊಚ್ಚಿಕೊಂಡಿದ್ದ. ಕಮಲಮ್ಮನ ಮನೆಯ ಬಲಬದಿಯನ್ನು ಸಲೂನಿಗೆ ಬೇಕಾದ ಹಾಗೆ ಮಾರ್ಪಾಟು ಮಾಡಿದ. ಅದರ ಸೂರಿಗೆ ಬಣ್ಣಬಣ್ಣದ ಕಾಗದದ ಜೊತೆಜೊತೆಗೆ ವಿಷ್ಣುವರ್ಧನ್, ಅಂಬರೀಶ್, ರಾಜ್‌ಕುಮಾರ್ ಮುಂತಾದವರ ಚಿತ್ರಗಳನ್ನು ಅಂಟಿಸಿದ್ದ.ಆದರೆ ಅವನ ಪಾಲಿನ ಯಡವಟ್ಟು ಬೇರೆಯದೇ ರೀತಿಯಲ್ಲಿ ಕಾದು ಕುಳಿತಿತ್ತು. ಅವನ ಯಾವಾಗ ಕಮಲಮ್ಮನ ಮನೆಗೆ ಬಾಡಿಗೆಗೆ ಬಂದನೋ ಆಗಲೆ ಜನರೆಲ್ಲಾ ಇನ್ನಿವನು ಬರ್ಕತ್ತಾಗೋದಿಲ್ಲ ಎಂದೆಲ್ಲಾ ಮಾತಾಡಿಕೊಂಡರು. ಕಮಲಮ್ಮನ ಮನೆಗೆ ಆಕೆ ಲೈಟಾಕಿಸಿರಲಿಲ್ಲ. ಕರೆಂಟಿರಲಿಲ್ಲ. ನೀನು ಬಂದೀಂತ ಕರೆಂಟೆಳಿಸ್ಬೇಕು ನೋಡಪಾ..ಒಂದ್ವಾರ ತಡ್ಕಾ ಮಾರಾಯ..ಲೈನ್‌ಮ್ಯಾನಿಗೆ ಹೇಳೀನಿ.. ಎಂದು ತಿಪ್ಪೆ ಸಾರಿಸಿದ್ದಳು ಕಮಲಮ್ಮ. ಕಮಲಮ್ಮನ ಈ ಯಾವ ಹಿಕಮತ್ತುಗಳೂ ತಿಳಿಯದ ಬಂಗಾರಿ ಮಾತ್ರ ತನ್ನ ಅಂಗಡಿಯ ಒಳಗೆ ದೊಡ್ಡ ದೊಡ್ಡ ಕನ್ನಡಿಗಳು, ಒಳಗೊಂದು ವಿಧವಿಧದ ಕೇಶಶೈಲಿಯಿರುವ ಕ್ಯಾಲೆಂಡರ್ ನೇತುಹಾಕಿ ಅದರ ಮುಂದೆ ಅದರ ಬೆಲೆ ಬರೆದಿದ್ದದ್ದು ಮಾತ್ರ ನಮ್ಮೂರಿನ ಜನಕ್ಕೆ ಅದೆಂತದ್ದೊ ಹೇಳಲಾಗದ ಸಂಭ್ರಮ ತರಿಸಿತ್ತು. ಆದರೆ ವಾರ ಕಳೆದರೂ ಕಮಲಮ್ಮ ಮಾತ್ರ ವಿದ್ಯುಚ್ಛಕ್ತಿಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಕೇಳೀದ್ದಕ್ಕೆ, ಯೋ ಬಂಗಾರಿ, ರಾತ್ರಿ ಹೊತ್ತು ಕಟ್ ಮಾಡ್ತಿದ್ಯಾ ತಕಾ..ಹಂಗೆ ಹೊತ್ತು ಮುಳುಗಿದ್ಮ್ಯಾಲ ಮಾಡ್ಲೂ ಬಾಡ್ದು..ದರಿದ್ರ ಅದು..ನಮಗೂ ಸುತ್ಕತದೆ..ಹೀಗ್ಯಾತಕ ಕರೆಂಟು.. ಎಂದು ತಿಪ್ಪೆ ತಾರಿಸಿದ್ದಳು. ಆದರೆ ಸಲೂನನ್ನು ಸಿಂಗರಿಸುವ ಭರದಲ್ಲಿ ಸುತ್ತಮುತ್ತೆಲ್ಲಾ ಸಿಂಗರಿಸಿ, ಕವರ್ ಮಾಡಿಬಿಟ್ಟಿದ್ದರಿಂದ ಒಳಗೆ ಬೆಳಕೇ ಇರಲಿಲ್ಲ. ಇಷ್ಟೆಲ್ಲಾ ಸಲೂನನ್ನು ಸಿಂಗಾರ ಮಾಡಿ ಬಂದಬಂದವರಿಗೆ ಸಲೂನಿನ ಹೊರಗೆ ಕುಳಿತು ಹೇರ್‌ಕಟ್ ಮಾಡುವ ಪರಿಸ್ಥಿತಿ ಬಂಗಾರಿಗೆ ಬಂದದ್ದು ಅವನಿಗೆ ಸಹಿಸಲಾಗದ ಸಿಟ್ಟು ಬರಿಸಿತ್ತು. ಆದರೆ ಕಮಲಮ್ಮ ಮಾತ್ರ ಅದಕ್ಕೆಲ್ಲಾ ಸೊಪ್ಪು ಹಾಕುತ್ತಿರಲಿಲ್ಲ.. ಈಗೇನಾ ಇರಂಗಿದ್ರಾ ಇರು..ಇಲ್ಲಾಂದ್ರ ನಾಳಿಕ್ಕೇ ಹೊಂಟೋಯ್ತ ಇರು..ದುಡ್ನ ಈ ಸಲ ಕುಯ್ಲಾದ ಮ್ಯಾಲ ಬಂದೀಸ್ಕಾ.. ಅಂದುಬಿಟ್ಟಿದ್ದಳು. ಈಗ ಬಂಗಾರಿಗೆ ಸಲೂನಿನ ಜಗಲಿ ಕಟ್ಟೆಯೇ ಖಾಯಂ ಆಗಿಹೋಗಿತ್ತು. ಬಂದಬಂದವರಿಗೆಲ್ಲಾ ಕಮಲಮ್ಮನ ಹೊಸವರಸೆಯನ್ನೂ, ತನ್ನ ದೈನೇಸಿ ಸ್ಥಿತಿಯನ್ನೂ ಕಣ್ಣೀರು ಬರುವಂತೆ ವಿವರಿಸುವುದೂ ಅವನ ಹೇರ್‌ಕಟ್ಟಿನಷ್ಟೇ ಅನಿವಾರ್ಯವಾಗಿಬಿಟ್ಟಿತ್ತು. ಆದರೆ ಕೇಳಿಸಿಕೊಳ್ಳುವವರು ಮಾತ್ರ ತಮ್ಮ ಕೆಲಸವಾಗುವವರೆಗೆ ತಲೆಯಲ್ಲಾಡಿಸದೇ ವಿನಮ್ರವಾಗಿ ಕೇಳಿಸಿಕೊಂಡು ಆನಂತರ ಈ ಕಮಲಮ್ಮಂಗೆ ಅವ್ಳ ಗಂಡ್ನೇ ಹೆದ್ರಕ್ಕಂಡು ಪೇರಿಕಿತ್ತವ್ನೆ..ಇನ್ಯಾವನು ಬಾಯಿ ಕೊಡೋಕಾದದು..ಹೊಡೆದು ಬೈಯ್ದು ಬುದ್ದಿ ಹೇಳಾವ ಅಂದ್ರ ಹೆಣ್ಣೆಂಗ್ಸು..ಹೆಂಗೋ ನೀನೇ ಅಡ್ಜಸ್ಟ್ ಮಾಡ್ಕ ಬಂಗಾರಿ.. ಎಂದು ನಿಟ್ಟುಸಿರುಬಿಡುತ್ತಾ ಹೇಳಿಹೋಗುತ್ತಿದ್ದರು. ಹೇಗೋ ಒಂದು ವರ್ಷದವರೆಗೆ ಕಾಲ ನೂಕಿದ ಬಂಗಾರಿ ಆನಂತರ ಕಮಲಮ್ಮನ ಕೈಯಲ್ಲಿ ಮುಂಗಡ ಹಣ ಬಾಕಿ ಈಸಿಕೊಂಡು ಊರಿಂದ ಪೇರಿಕಿತ್ತಿದ್ದ. ಸಧ್ಯ..ಹ್ವಾದ್ನಲ್ಲಾ..ಇಡೀ ಮನೇಲ್ಲಾ ಕೂದಲು ಕಯ್ಯೋ..ಊಟದ್ ತಟ್ಟೇಲಿ ಕೂದ್ಲು..ದೇವ್ರ ದೀಪದತವು ಕೂದಲು..ಎಲ್ಲ್ಯಂದ್ರಲ್ಲಿ ಕೂದ್ಲು ಸಿಕ್ತಿತ್ತು..ಅದ್ಕೇ ಅವ ಬುಟ್ಟೋಗ್ಲಿ ಅಂತಾನೆ ಹಂಗ್ಮಾಡ್ದೆ.. ಎಂದು ಕಮಲಮ್ಮ ಆನಂತರದ ದಿನಗಳಲ್ಲಿ ಪೇಚಾಡುತ್ತಿದ್ದರೆ, ಜನರೆಲ್ಲಾ ಸುಮ್ಕಿರಮ್ಮ..ನಾಟ್ಕ ಆಡ್ಬೇಡಾ..ಅನ್ಯಾವಾಗಿ ಬದ್ಕವನ್ನಾ ಊರ್ ಬುಡಂಗ ಮಾಬುಟ್ಟೇ.. ಎಂದು ಬೈದರೇ ಸುಮ್ಮನಿರುವವಳೇ ಕಮಲಮ್ಮ! ಯ್ಯೋ..ಅಂತೋನು ಕರ್ಕಂಡೋಗಿ ಮನೇಲಿರ್ಸಕಬೇಕಿತ್ತು..ದೋಡ್ದಾಗಿ ಯೋಳಕ್ ಬಂದ್ಬುಟ್ಟಾ.. ಎಂದು ಅವರಿಗೇ ಜೋರು ಮಾಡುತ್ತಿದ್ದಳು.
ಈಗಲೂ ಕ್ಷೌರದಂಗಡಿ ಅನಿವಾರ್ಯವೇ..ಆದರೆ ಪ್ರತಿಸಾರಿಯೂ ಕ್ಷೌರದಂಗಡಿಗೆ ಕಾಲಿಕ್ಕಿದಾಗಲೆಲ್ಲಾ ನನ್ನನ್ನು ಕಾಡುವವರು ಇದೇ ಸಿದ್ದ, ಬಂಗಾರಿ ಮತ್ತು ಮಾದೇವ ಮಾತ್ರ. ಈ ಮೂವರ ಹೊರತಾಗಿ ನನಗೆ ಬೇರಾವ ಕ್ಷೌರಿಕನೂ ಕಾಡಿಲ್ಲ. ಆಮೇಲೆ ಅದೆಷ್ಟು ಜನ ಬಂದುಹೋದರೋ.. ಕ್ಷೌರದಂಗಡಿಗೆ ಕಾಲಿಕ್ಕಿದಾಕ್ಷಣ ನಾನವರ ಮುಖ ಕೂಡ ಸರಿಯಾಗಿ ನೋಡುವುದಿಲ್ಲ. ಪಕ್ಕದಲ್ಲಿರುವ ಪತ್ರಿಕೆ, ಇಲ್ಲದಿದ್ದರೆ ಗೋಡೆಯ ಮೂಲೆಯಲ್ಲಿರುವ ಟಿವಿಯನ್ನು ನೋಡಿಕೊಂಡು ಕುಳಿತುಬಿಡುತ್ತೇನೆ. ನಮ್ಮ ನಮ್ಮ ನಡುವೆ ಸ್ವಲ್ಪ ಈ ಕಡೆ, ಹಾಗೆ, ಇಲ್ಲಿ ನೋಡಿ ಇಷ್ಟ್ ಸಾಕಾ? ಎಂಬಿತ್ಯಾದಿ ಸಂಭಾಷಣೆಗಳು ಹಾದುಹೋಗುತ್ತವೆ. ತೀರ ಪರಿಚಿತರಾದರೆ ಒಂದು ಮುಗುಳ್ನಗೆಗಷ್ಟೇ ಅದು ಸೀಮಿತವಾಗಿ ಬಿಡುತ್ತದೆ. ನನ್ನ  ಕೇಶಸಂಬಂಧಿ ನೆನಪಿನ ಪುಟ ತಿರುವಿದರೆ ಪುಳಕ ಕೊಡುವ, ನಗು ಬರಿಸುವ, ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಪ್ರೇರೇಪಿಸುವ ಘಟನೆಗಳು ಬರೇ ಇವರುಗಳಿಗೇ ಮುಗಿದುಹೋಯಿತೇನೋ ಎನಿಸುತ್ತದೆ. ಆಮೇಲಿನಿದೆಲ್ಲಾ ಬರೇ ಯಾಂತ್ರಿಕವಾದವು, ನೀರಸವಾದವು ಅಷ್ಟೇ ಎನಿಸಲು ಪ್ರಾರಂಭಿಸಿ ಪಿಚ್ಚೆನಿಸುತ್ತದೆ.
                                                                *******