Monday, October 29, 2012

ವೇದಾ ಮೇಡಂ ಜೊತೆ ಇಡೀ ದಿನ... ಭಾಗ-2

ಡೀ ವಾರ ಏನೂ ವಿಶೇಷ ನಡೆಯಲಿಲ್ಲ. ನಾನು ಪುಸ್ತಕ ಕೊಟ್ಟಿದ್ದೆ. ಅಷ್ಟೆಲ್ಲಾ ಆತ್ಮೀಯವಾಗಿ ಮಾತನಾಡಿಸಿದ್ದ ವೇದಾ ಮೇಡಂ ಆಮೇಲಿಂದ ಆ ತರಹದಲ್ಲಿ ನನ್ನೊಂದಿಗಗೇನೂ ವರ್ತಿಸಿರಲಿಲ್ಲ . ಆದರೆ ನಂಗೆ ಮಾತ್ರ ಆಕೆಯ ಆವತ್ತಿನ ನಡವಳಿಕೆಯನ್ನು ಮರೆಯಲು ಸಾಧ್ಯವಾಗಿರಲಿಲ್ಲ . ಈಗೀಗಂತೂ ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ಳಲು ತೊಡಗಿದ್ದೆ. ಆ ಪುಸ್ತಕ ಓದುತ್ತಿರಬಹುದಾ..? ಇಷ್ಟವಾಗಿಲ್ಲವಾ..? ಎಂಬೆಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಕೊಂಡಿದ್ದವು.ಎಷ್ಟೋ ಸಾರಿ ಸುಮ್ಮನೆ ಫೋನ್ ಮಾಡಿ ಒಮ್ಮೆ ಕೇಳೋಣವಾ..?ಎನಿಸಿದರೂ ಆ ಸಾಹಸಕ್ಕೆ ಕೈ ಹಾಕಿರಲಿಲ್ಲ .ಆದರೆ ನಾನು ಮತ್ತೆರೆಡು ಪುಸ್ತಕಗಳನ್ನು ಆಕೆಗಾಗಿ ಎತ್ತಿಟ್ಟುಕೊಂಡಿದ್ದೆ. ಆದರೋ ಇದೆಂತಹ ಸೆಳೆತ ನನ್ನದು ವಿವಾಹಿತೆಯ ಮೇಲೆ ಎಂಬ ಪ್ರಶ್ನೆ ಆವಾಗಾವಾಗ ಹುಟ್ಟುತ್ತಲೇ ಇತ್ತು. ಅದ್ಯಾವ ಸಾಧ್ಯತೆಗಳಿರಬಹುದು ಈ ಸೆಳೆತಕ್ಕೆ ಎನ್ನುವುದೂ ಗೊತ್ತಾಗದೆ ಗೊಂದಲದಲ್ಲಿದ್ದೆ. ನನ್ನ ಸಹೋದ್ಯೋಗಿಗಳಿಗೆ ಹೇಳಿದರೆ ' ಏನು ಗುರು..ಇಮ್ರಾನ್ ಹಶ್ಮಿ ಪಾತ್ರನ ನೀನು ವಹಿಸಿಕೊಂಡಿದ್ದೀಯಾ ಅನ್ಸುತ್ತೆ ...' ಎಂದೆಲ್ಲಿ ಗೇಲಿ ಮಾಡುತ್ತಾರೋ ಎಂಬ ಭಯವಿತ್ತು. ವಿವಾಹಿತ ಹೆಂಗಸಿನ ಸಹವಾಸಕ್ಕೆ ಹೆಸರುವಾಸಿ ಅವನೇ ತಾನೇ...
ನಾನು ಸುಮ್ಮನೆ ಯೋಚಿಸುವುದು ಮಾಡಿದನೆ ಹೊರತು ಬೇರೇನೂ ಮಾಡಲಾಗಲಿಲ್ಲ .ಗೊಂದಲಗಳು ಹಾಗೆಯೇ ಉಳಿದಿದ್ದವು.
ಆವತ್ತು ಶುಕ್ರವಾರ. ನಾನು ಇನ್ನೇನು ಲಾಗ್ ಔಟ್ ಆಗುವುದರಲ್ಲಿದ್ದೆ. ಅಷ್ಟರಲ್ಲಿ ನನ್ನ ಬಳಿ ಬಂದ ವೇದಾ ಮೇಡಂ
'ಏನು..ವೀಕೆಂಡ್ ಪ್ರೋಗ್ರಾಮ್...' ತುಂಬಾ ಸಾಮಾನ್ಯವಾಗಿ ಕೇಳಿದರು. ಅವರ ಧ್ವನಿಯಲ್ಲೆನಾದರೂ ವಿಶೇಷವಿರಬಹುದೇ ಎಂದು ಪರೀಕ್ಷಿಸುವ ಕೆಲಸದಿಂದಾಗಿ ನಾನು ಉತ್ತರಿಸುವುದು ನಿಮಿಷಗಳಷ್ಟು ತಡವಾಗಿತ್ತು.
'ಆ..ಈ ವಾರ ಯಾವುದು ಹೊಸ ಸಿನಿಮಾ ಬಿಡುಗಡೆಯಾಗಿಲ್ಲವಲ್ಲ...ಹಾಗಾಗಿ ಬೇರೇನೂ ಮಾಡೋದು ಅಂತ ಇನ್ನು ಪ್ಲಾನ್ ಮಾಡಿಲ್ಲ.." ಎಂದೆ .
'ಹಾಗಾದ್ರೆ ಸಿಗೊಂವಾ...? ಸುಮ್ನೆ ಮೆಮೊರಬಲ್ ಆಗಿ ವೀಕಂಡ್  ಸ್ಪೆಂಡ್ ಮಾಡೋಣ...' ಈಗಲೂ ಆಕೆಯ ಧ್ವನಿಯಲ್ಲಿ ಏನಾದರೂ ವ್ಯತ್ಯಾಸ ಇರಬಹುದಾ ಎಂಬಂತೆ ನೋಡಿದೆ.ಆದರೆ ಆ ತರಹದ್ದು ಏನೂ ಕಾಣಿಸಲಿಲ್ಲ .
'ಸರಿ..ನೀವು ಹೇಗೆ ಹೇಳಿದರೆ ಹಾಗೆ..' ಎಂದೆ .
''ಏಯ್ ..ಹಾಗೆಲ್ಲಾ ಹೆಂಗಸರಿಗೆ ದಿಡೀರ್ ಅಂತ ಶರಣಾಗಬೇಡ  ಮಾರಾಯಾ..ಆಮೇಲೆ ನಿಂಗೆ ಕಷ್ಟ. ' ಎಂದು ನಕ್ಕಾಗ ನಾನಾಕೆಯ ಮುಖವನ್ನೇ ನೋಡಿದ್ದೆ . ಇನ್ನು ಸುಂದರವಾಗಿ ಕಂಡಿದ್ದರು  ವೇದಾ ಮೇಡಂ. ಅವರ ಮುಂಗುರಳು, ತೀರಾ ತುಂಬಿರದ ಗಲ್ಲಗಳು.ಅವರ ತುಟಿ ..! ನಾನು ಅಗತ್ಯಕ್ಕಿಂತ ಹೆಚ್ಚು ಮಾನಸಿಕವಾಗಿ ಮುಂದುವರೆಯುತ್ತಿರುವೆನಾ ಎನ್ನುವ ಪ್ರಶ್ನೆ ನನ್ನನ್ನು ಕಾಡದಿರಲಿಲ್ಲ .
ಆದರೂ ಅವರ ಮಾತಿಗೆ ಏನು ಹೇಳಬೇಕೆಂದು ತೋಚಲಿಲ್ಲ . ನಗುವುದಾ..?
ನಾನು ಮಾತನಾಡಲಿಲ್ಲ. ನಗುವ ಪ್ರಯತ್ನ ಮಾಡಿದೆ. ಬಹುಶ ಅದು ಪೆಚ್ಚು ನಗೆ ಎನಿಸಿರಬೇಕು.
'ನೋಡು..ಏನಾದರೂ ಮಾತಾಡೋ ಹಂಗಿದ್ರೆ ಮಾತಾಡಿಬಿಡಬಹುದು...ಈ ಪ್ರಶ್ನಾರ್ಥಕ ಚಿಹ್ನೆನ ಮುಖದಲ್ಲಿ ಹೊತ್ಕಂಡ್ರೆ  ಸ್ವಲ್ಪ  ಕಷ್ಟ ನೋಡು... '
ಈಗಲೂ ನಂಗೆ ಏನೂ ಮಾತಾಡುವುದೆಂದು ತೋಚಲಿಲ್ಲ .ಹಾಗಂತ ಸುಮ್ಮನಿರುವುದು ಸರಿಯಲ್ಲ ಎನಿಸಿ ,
' ಹಾಗಲ್ಲ  ಮೇಡಂ. ನೀವು ದೊಡ್ದವರಲ್ವಾ.? ಸರ್ಯಾಗೆ ಹೇಳಿರ್ತೀರ ..ಅದಕ್ಕೆ ಸುಮ್ಮನಾದೆ'  ಎಂದೆ .
'ಅಂದ್ರೆ ನನ್ನ ಆಂಟಿ ಲಿಸ್ಟಿಗೆ ಸೇರ್ಸಿಬಿಟ್ಟೆ  ಅನ್ನು...' ಎಂದರು. ದನಿಯಲ್ಲಿ ಅದೇ ತುಂಟತನ.
'ನನಗೇನೂ ಬೇಜಾರಿಲ್ಲ..ಆದರೂ ನೀವು ಹುಡುಗ್ರು ಆಂಟಿ ಅಂತ ಯಾವ್ಯಾವ ಅರ್ಥ  ಇಟ್ಕೊಂಡು ಪಟ್ಟ ಕೊಡ್ತೀರೋ ಯಾರಿಗ್ಗೊತ್ತು ?'
ಆಕೆ ನಗದೆ ಗಂಭೀರವಾಗಿ ನನ್ನನ್ನೇ ನೋಡಿದರು. ನಾನು ಕಕ್ಕಾಬಿಕ್ಕಿಯಾದೆ.ಏನು ಮಾಡುವುದು? ಆದರೆ ನಿಮಿಷ ತಡೆದ ಆಕೆ ನಕ್ಕುಬಿಟ್ಟರು.
ನನಗೆ ನಿರಾಳವೆನಿಸಿತು..
ನಾನು ನಕ್ಕೆ . ಆಕೆಯೂ ನಕ್ಕು ಬಾಯ್  ಹೇಳಿ ಹೊರಟುಹೋದರು. ಅದೇಕೋ ನಂತರದ ಕ್ಷಣ, ಜಾಗ ಎಲ್ಲಾ ಬರಡುಬರಡೆನಿಸಿತು.
'ಎಷ್ಟು ಚೆನ್ನಾಗಿದ್ದಾರಲ್ವಾ..? ಹಾಗೆ ಮಾತೂ ಆಡ್ತಾರೆ..' ಯಾರಿಗೋ ಹೇಳುವಂತೆ ನನಗೆ ನಾನೇ ಹೇಳಿಕೊಂಡೆ .ಆಮೇಲೆ ನಿಧಾನಕ್ಕೆ ಆಫೀಸಿನಿಂದ ಹೊರಬಂದು  ಮೆಟ್ಟಿಲಿಳಿಯ ತೊಡಗಿದೆ ಮನಸು ಮಾತ್ರ ಎಲ್ಲೋ ಇತ್ತು. ನನಗದು ಗೊತ್ತಾಗುತ್ತಲೂ  ಇತ್ತು. ಆದರೆ ನನ್ನ ಮನಸಿಗೆ ನಾನು ಕಡಿವಾಣ ಹಾಕಲು ಹೋಗಲಿಲ್ಲ .

*************    ***************    ***************

'ಬದುಕು ಅಂದ್ರೆ ಏನಿರಬಹುದು? ಮದುವೆ, ಮನೆ , ಕೆಲಸ , ಹೆಂಡತಿ ಮಕ್ಕಳು..ಇಷ್ಟೇನಾ.?' ಬೈಕಿನ ಹಿಂದೆ ಕುಳಿತಿದ್ದೆ . ಹಾಗೆ  ಬಾಗಿ ಸಂಧ್ಯಾಳ ಕಿವಿಯಲ್ಲಿ ಉಸುರಿದ್ದೆ . ಅವಳ ಲಹರಿಯಲ್ಲಿ ಅವಳಿದ್ದಳು .
'ಏನು.' ಎಂದಳು . ಅವಳ ಸ್ಕೂಟಿ ಆ ಕಡೆ ಈ ಕಡೆ ವಾಲಾಡಿತು . ನಾನು ಮತ್ತೊಮ್ಮೆ ಅದನ್ನೇ ಹೇಳಲು ಅನುವಾದೆ . ಆದರೆ ಅವಳದನ್ನು ಸ್ಪಷ್ಟವಾಗೆ ಕೇಳಿಸಿಕೊಂಡಿದ್ದಳು. ಅದನ್ನು ಜೀರ್ಣಿಸಿಕೊಳ್ಳಲು ಸಮಯ ಹಿಡಿದಿತ್ತು ಅಷ್ಟೇ .
'ನೀನು ಬರ್ತಾ ಬರ್ತಾ ಅಬ್ ನಾರ್ಮಲ್ ಆಗ್ತಿದಿಯಾ ..ಸರಿ ಅದು ಬಿಟ್ಟು ಬೇರೆ ಏನು ಹೇಳಪ್ಪಾ..?' ಎಂದಳು. ಸ್ಕೂಟಿ ಈಗ ತಹಬದಿಗೆ ಬಂದಿತ್ತಾದರೂ ಅದರ ವೇಗ ಕಡಿಮೆಯಾಗಿತ್ತು . 
'ಏನಿರಬಹುದು...? ' ಅದಕ್ಕೆ ಉತ್ತರ ನನಗೂ ಗೊತ್ತಿರಲಿಲ್ಲ . ಆದರೆ ಇಂತಹ ಪ್ರಶ್ನೆಗಳು ಆವಾಗವಾಗ ನನ್ನನ್ನು ನಿದ್ರೆ ಮಾಡಲು ಬಿಡುತ್ತಿರಲಿಲ್ಲ .
'ನೋಡು..ಬದುಕು ಅಂದ್ರೆ ಚೆನ್ನಾಗಿ ಬದುಕೋದಷ್ಟೇ ..ಅದು ಬಿಟ್ಟು ಹಾಗೆ ಹೀಗೆ ಅಂತ ತಲೆ ಕೆಡಿಸಿಕೊಂಡ್ರೆ ಲೈಫು ಕಾಂಪ್ಲಿ ಕೇಟ್  ಆಗುತ್ತೆ ನೋಡು...ಹೀಗೆ ಸುಮಾರು ಜನ ತಲೆ ಕೆಡಿಸ್ಕೊಂಡು ಹೆಂಡ್ತಿ ಬಿಟ್ಟು ಜನ ಬಿಟ್ಟು ಊರು ಬಿಟ್ಟು  ಅಳೆದು ಹುಡುಕಿ ಆಮೇಲೆ ಕೊನೇಲಿ ಬದುಕು ಅಂದ್ರೆ ಬದುಕೋದು ಅಷ್ಟೇ ಅನ್ನೋ ತೀರ್ಮಾನಕ್ಕೆ ಬಂದ್ಬಿಟ್ಟಿದ್ದಾರೆ..'
ಆಕೆ ಸರಾಗವಾಗಿ ಹೇಳುತ್ತಿದ್ದಳು . ಸಂಧ್ಯಾ ಯಾವಾಗಲೂ ಅಷ್ಟೇ . ಅವಳಲ್ಲಿ ಗೊಂದಲಗಳು ಕಡಿಮೆ . ಯಾವುದನ್ನೂ ಅಳೆದು ತೂಗಿ ನೋಡುವ ಜಾಯಮಾನ ಅವಳದಲ್ಲ . ಎಲ್ಲಾ ಸೀದಾಸಾದಾ ಮತ್ತು ಸಲೀಸು . ಅದು ಅಂದ್ರೆ ಅದು , ಇದು ಅಂದ್ರೆ ಇದು. ಅಷ್ಟೇ. ಯಾವದನ್ನು ಅಷ್ಟು ಸಲೀಸಾಗಿ, ಆರಾಮವಾಗಿ ತೆಗೆದುಕೊಳ್ಳಲು  ಹೇಗೆ ಸಾಧ್ಯ ? ನಾನು ಮುಂದಕ್ಕೇನೂ  ಮಾತಾಡಲಿಲ್ಲ . ನಮ್ಮ ಪದವಿಯ ಅಂತಿಮ ವರ್ಷ ಬಂದಿತ್ತು. ಇನ್ನು ಹೀಗೆ ತಿರುಗಾಡಲು ಹೆಚ್ಚು ಸಮಯವಿಲ್ಲ . ಕೊನೆಯ ಪರದೆಗೆ ಸಿದ್ಧರಾಗಬೇಕಿತ್ತು . ಆದರೆ ನಾನು ಇನ್ನು  ಸಿದ್ಧವಾಗಿರಲಿಲ್ಲ . ಮಾನಸಿಕವಾಗಿ ಇನ್ನು ಗೊಂದಲದಲ್ಲಿದ್ದೆ . ಪ್ರೀತಿ, ಪ್ರೇಮ ತಿರುಗಾಟದ ನಂತರ ಮದುವೆ...ಮಧ್ಯ ಒಂದು ಗ್ಯಾಪ್ ಬೇಕೇನೋ ಎನ್ನಿಸಿತ್ತು . ಆದರೆ ಅದನ್ನು ಏನಾದರೂ ಹೇಳಿದರೆ 'ನಾನು ಮಾನಸಿಕವಾಗಿ ಆರೋಗ್ಯಕರವಾಗಿಲ್ಲಾ 'ಎಂದು ಸಂಧ್ಯಾ ಹಿಂದೆ ಮುಂದೆ ನೋಡದೆ ಬಿರುದುಕೊಟ್ಟುಬಿಡುತ್ತಿದ್ದಳು. ಅವಳಾಗಲೇ ಎಲ್ಲದಕ್ಕೂ ಸಿದ್ಧವಾಗಿ ಬಿಟ್ಟಿದ್ದಳು . ಪರೀಕ್ಷೆಯ ಫಲಿತಾಂಶ ಬರುತ್ತಿದ್ದ ಹಾಗೆ ಮನೆಯವರ ಮುಂದೆ ನಮ್ಮ ವಿಷಯ ಪ್ರಸ್ತಾಪ ಮಾಡುವುದು . ಅದಕ್ಕೂ ಮುನ್ನ ಕೆಲಸಕ್ಕೆ  ಅರ್ಜಿ ಗುಜರಾಯಿಸಿ, ಅದನ್ನು ಪಕ್ಕಾ ಮಾಡಿಕೊಳ್ಳುವುದು. ಇಬ್ಬರಲ್ಲಿ ಯಾರಿಗಾದರೋಬ್ಬರಿಗೆ ಕೆಲಸ ಸಿಗುವನ್ತಾಯಿತಾದರೆ ಸಾಕು ಮದುವೆಗೆ ತಡ ಮಾಡುವಂತಿಲ್ಲ . ಮದುವೆಯಾದ ಮೇಲೆ ಇಬ್ಬರೂ ಕೆಲಸ   ಮಾಡುವುದಾ ಇಲ್ಲಾ ಒಬ್ಬರು ಮಾತ್ರ ಅಂದ್ರೆ ತಾನು ಮಾತ್ರ ಮನೆಯಲ್ಲಿದ್ದು ಪಕ್ಕಾ ಗೃಹಿಣಿಯಂತೆ ಮನೆ ಸಂಭಾಳಿಸಿಕೊಂಡು ..ಹೀಗೆ ಆಕೆಯ ಯೋಚನಾಲಹರಿಯ ವಿಸ್ತಾರ ದೊಡ್ಡದಿತ್ತು. ಮತ್ತವಳ ದೃಷ್ಟಿಯಲ್ಲಿ ಅದೆಲ್ಲಾ ಸಾಧ್ಯ. 
ಆದರೆ ನನಗೆ? 
 ಮೊದಲಿಗೆ ಮನೆಯಲ್ಲಿ   ಅದೇಗೆ ನಾನು ಮದುವೆಯಾಗುತ್ತೇನೆ ಅಥವಾ ನನಗೆ ಮಾಡುವೆ ಮಾಡಿ ಎಂದು ಕೇಳುವುದು?  ಎರಡನೆಯದಾಗಿ ಒಂದು ಹುಡುಗಿಯನ್ನು ಪ್ರೀತಿಸುತ್ತಿರುವ ವಿಷಯ ಹೇಳುವುದಾದರೂ ಹೇಗೆ..? ಅಕಸ್ಮಾತ್ ಒಪ್ಪದಿದ್ದರೆ ಸಂಧ್ಯಾ ಹೇಳುವಂತೆ ಹಠ ಮಾಡುವುದು ಹೇಗೆ? 
ಸಂಧ್ಯಾಳ  ಹತ್ತಿರ ಈ ಎಲ್ಲ ಪ್ರಶ್ನೆಗಳಿಗೂ ಉತ್ತರವಿತ್ತು. ಅವಳ ಪ್ರಕಾರ ಮೊದಲು ಮನೆಯವರ ಮುಂದೆ ವಿಷಯ ಪ್ರಸ್ತಾಪ ಮಾಡುವುದು.. ಅವರನ್ನು ಒಪ್ಪಿಸುವುದಕ್ಕೆ ಪ್ರಯತ್ನಿಸುವುದು ..ಅತ್ತು ಕರೆದು ಮಾಡುವುದು..ಆಗಲೂ ಒಪ್ಪದಿದ್ದಾಗ ನಮ್ಮ ಮುಂದಿನ ದಾರಿ ನಾವು ನೋಡಿಕೊಳ್ಳುವುದು...ಇಷ್ಟನ್ನು ಸಂಧ್ಯಾ ಅದೆಷ್ಟು ಸರಳವಾಗಿ ಸಾಮಾನ್ಯ ವಿಷಯವೆನ್ನುವಂತೆ ಹೇಳುತ್ತಿದ್ದಳೆಂದರೆ  ನನಗೆ ನನ್ನ ಬಗ್ಗೆಯೇ ಅನುಮಾನ ಬಂದುಬಿಡುತ್ತಿತ್ತು . 'ಸರಳವಾಗಿರುವ ವಿಷಯವನ್ನು ನಾನೇ  ಕ್ಲಿಷ್ಟಕರವನ್ನಾಗಿಸುತ್ತಿದ್ದೆನಾ 'ಎನಿಸುತ್ತಿತ್ತು . ನಾಲ್ಕು ವರ್ಷದ ಪ್ರೀತಿಗೊಂದು ಗಂಟು ಹಾಕುವ ಕೆಲಸಕ್ಕೆ ಮನಸು ಮಾತ್ರ ಹಿಂದೆ ಸರಿಯುತ್ತಿತ್ತು . ಹಾಗಂತ ಸಂಧ್ಯಾಳ ಹೊರತುಪಡಿಸಿ ನನಗೆ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವೂ ಇರಲಿಲ್ಲ . ಆಕೆಯ ಪ್ರತಿಯೊಂದು ನಡವಳಿಕೆ, ಸಿಟ್ಟು , ಕೋಪ ತಾಪ ಎಲ್ಲವೂ ನನಗೆ ನನ್ನ ಪ್ರಾಣಕ್ಕಿಂತ ಹೆಚ್ಚು ಇಷ್ಟವಾಗುತ್ತಿತ್ತು . ಆದರೆ ಸಮಸ್ಯೆಯಿದ್ದದ್ದು ಎಲ್ಲಿ..?ಸುಮ್ಮನೆ ಕುಳಿತು ಮನೆಯವರ ಬಗ್ಗೆ  ಯೋಚಿಸಿದರೆ  ಮನೆಯವರೂ ಅಂತಹ ಸಮಸ್ಯೆ ತಂದೊಡ್ಡಬಹುದು ಅನಿಸಿರಲಿಲ್ಲವಾದರೂ ಅವರ ಮುಂದೆ ಹೇಗೆ ಕೇಳುವುದೇ ಎನ್ನುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು .
ಆ ಮಾತನ್ನು ಅಷ್ಟಕ್ಕೇ  ಬಿಟ್ಟವಳು,
'ನಾಳೆ  ಗುರುವಾರ. ಬೆಳಿಗ್ಗೆ ಬೇಗನೆ ಎದ್ದು ರಾಯರ ಮಠದ ಹತ್ತಿರ ಬಾ 'ಎಂದು ಅಪ್ಪಣೆ ಹೊರಡಿದಳು ಸಂಧ್ಯಾ . ರಾಯರ ಮಠಕ್ಕೆ ಹೋಗುವುದೇನೂ ಕಷ್ಟದ ಕೆಲಸವಲ್ಲ ಆದರೆ ಬೆಳಿಗ್ಗೆ ಐದು ಘಂಟೆಗೆ ಎದ್ದು ಸಿದ್ಧವಾಗಿ ಅಲ್ಲೀವರೆಗೆ ನಡೆದುಕೊಂಡು ಹೋಗುವುದಿತ್ತಲ್ಲಾ ಅದೇ ಹಿಂಸೆಯಾಗುತ್ತಿತ್ತು. ಆದರೆ ಸಂಧ್ಯಾಳ  ಪ್ರಕಾರ 'ಈಗ ನಮಗೆ ಎಲ್ಲವೂ ಸುಸೂತ್ರವಾಗಿ ನಡೆಯಬೇಕಿತ್ತು . ಹಾಗಾಗಿ ದೇವರ ಸ್ಮರಣೆ ಜಪತಪ ಮಾಡಿದರೆ ಅಡ್ಡಿ ಆತಂಕಗಳು ಇಲ್ಲವಾಗುತ್ತವೆ ..'.ಎಂಬುದು ಆಕೆಯ ಬಲವಾದ ನಂಬಿಕೆ.  ನಾನೇನೂ ನಾಸ್ತಿಕನಲ್ಲವಾದರೂ ಜಪತಪ ದೂರದ ಮಾತಾಗಿತ್ತು.
ಆವತ್ತಿನ ತಿರುಗಾಟ ಕನಸು ಹಂಚಿಕೊಂಡು ರೂಮಿಗೆ ಬಂದಾಗ ಹತ್ತು ಗಂಟೆಯಾಗಿತ್ತು .
'ಬೆಳಿಗ್ಗೆ ಮರೆಯಲೇ ಬೇಡ ನಮಗೆ ಒಳ್ಳೆದಾಗಬೇಕು ಅಂದ್ರೆ ದೇವರ ಕೃಪೆ ಬೇಕಲೇ ಬೇಕು ಸಂಧ್ಯಾ ಒತ್ತಿ ಒತ್ತಿ ಹೇಳಿದ್ದಳು. ನಾನು ತಲೆಯಲ್ಲಾಡಿಸಿದ್ದೆ.
ಆದರೂ ಬೆಳ್ಳಿಗ್ಗೆ ಬೇಗ ಎದ್ದು ಹೋಗಲೇಬೇಕೆಂದು  ನನ್ನ ಗಡಿಯಾರಕ್ಕೆ ಅಲಾರ್ಮ್ ಕೊಟ್ಟು ಮಲಗಿದ್ದೆ .

****************   ******************  **************

ಟ್ರಿನ್... ಟ್ರಿನ್ ನ್  ನ್ ನ್ನ್ ನ್ನ್ ನ್...
ಅಲಾರ್ಮ್ ಗೆ ಬೆಚ್ಚಿ ಎದ್ದು ಕುಳಿತುಕೊಂಡೆ. ಸಮಯ ನೋಡಿದೆ. ಐದು ಘಂಟೆ ತೋರಿಸುತ್ತಿತ್ತು . ಒಂದು ಕ್ಷಣ ನಾನು ಗೊಂದಲಕ್ಕೆ ಬಿದ್ದೆ. ನನಗೆ ವೇದಾ ಮೇಡಂ ಸಿಗಲಿಕ್ಕೆ ಹೇಳಿದ್ದು  ಮದ್ಯಾಹ್ನ ಹನ್ನೆರೆಡು ಘಂಟೆಗೆ . ನಾನು ಐದು ಘಂಟೆಗೆ ಅಲಾರ್ಮ್ ಯಾಕಿಟ್ಟೆ ? ಯಾಕೋ ಪಾಪ ಪ್ರಜ್ಞೆ ಕಾಡ  ತೊಡಗಿತು.
 ಆವತ್ತು ಇದೆ ರೀತಿ ಅಲಾರ್ಮ್ ಹೊಡೆದಿತ್ತು. ಎದ್ದು ಓಡಾಡಿ ನಿದ್ರೆ ತಡೆಯಲಾರದೆ ಮತ್ತೆ ಮಲಗಿಬಿಟ್ಟಿದ್ದೆ. ಆಮೇಲೆ ಸಂಧ್ಯಾ ಕೇಳಿದಾಗ 'ಬೆಳಿಗ್ಗೆ ವಿಪರೀತ ತಲೆನೋವು ಬಂದಿತ್ತು.'ಎಂದಿದ್ದೆ . ಸಂಧ್ಯಾ ಅನುಮಾನ ಪಡುವವಳೇ ಅಲ್ಲ .
'ರಾತ್ರಿ ತುಂಬಾ ಹೊತ್ತು  ಎಚ್ಚರವಾಗಿರ್ತೀಯ ಅದಕ್ಕೆ ಇರ್ಬೇಕು ..'ಎಂದು ಅವಳೇ ಕಾರಣವನ್ನೂ ಹೇಳಿದ್ದಳು . ಆಗ ನನಗೆ ನಿಜಕ್ಕೂ ಬೇಸರವಾಗಿತ್ತು . 'ಇಂಥ ಹುಡುಗಿಗೆ ಸುಳ್ಳು ಹೇಳಬೇಕಾ.?' ಎನಿಸಿತ್ತು.
'ಬಹುಶ  ಇದೆಲ್ಲವನ್ನು ನೋಡಿಯೇ ಏನೋ ರಾಘವೇಂದ್ರ ನಮ್ಮನ್ನು ದೂರ ಮಾಡಿದನಾ? ' ಎಂಬ ತಲೆಹರಟೆಯ ಪ್ರಶ್ನೆ ಬಂದು ಹೋಯಿತು.
 ಸಂಧ್ಯಾಳನ್ನು ನೆನಪಿಸಿಕೊಳ್ಳಬಾರದು ಎಂದು ನಿರ್ಧರಿಸಿದ್ದರೂ ಆಗಾಗ ಹೀಗಾಗುತ್ತಿತ್ತು.
ಮತ್ತೆ ಹಾಸಿಗೆಗೆ ಬಿದ್ದೆ. ಆದರೆ ಆವತ್ತು ಬಂದ ನಿದ್ರೆ ಈವತ್ತು  ಬರಲೇ ಇಲ್ಲ. ಈವತ್ತು ವೇದಾ ಮೇಡಂ ನನ್ನನ್ಯಾಕೆ  ಕರೆದಿರಬಹುದು ಎಂಬ ಪ್ರಶ್ನೆಯೇ ಪುಳಕನೀಡುತ್ತಿತ್ತು ಕಣ್ಣು ಮುಚ್ಚಿದರೂ ನಿದ್ರೆ ಹತ್ತಿರಕ್ಕೆ ಸುಳಿಯಲಿಲ್ಲ . ಯಾವ ಬಟ್ಟೆ ಹಾಕಿಕೊಳ್ಳಬೇಕು ಯಾವ ಸೆಂಟ್ ಹಾಕಿಕೊಳ್ಳಬೇಕು ಎಂಬುದನ್ನು ರಾತ್ರಿಯೇ ನಿರ್ಧರಿಸಿ ಎತ್ತಿಟ್ಟಿದ್ದರಿಂದ ಈಗ ಮಾಡುವಂತ ಕೆಲಸವೇನೂ ಇರಲಿಲ್ಲ, ನಿದ್ರೆಯೊಂದನ್ನು ಬಿಟ್ಟು.
ಆದರೆ ನಿದ್ರೆ ಮಾತ್ರ ಹತ್ತಿರ ಸುಳಿಯದೇ ಸತಾಯಿಸುತ್ತಿತ್ತು.
                                                                                                                                                    [ಸಶೇಷ ]

No comments:

Post a Comment