Tuesday, October 30, 2012

ಎದೆಗಾರಿಕೆಯ ದೃಶ್ಯರೂಪದ ನಿರೀಕ್ಷೆಯಲ್ಲಿ....

ಹಿಂದೆ ಮುಂದೆ ಕಣ್ಣಾಡಿಸಿ ಅವನು ಕೇಳಿದ ; 'ಹೇಗೆ ಮುಗಿಸಬೇಕೆಂದು ತೀರ್ಮಾನಿಸಿದ್ದೀರಿ..'
ಅಗ್ನಿ ಶ್ರೀಧರ್ ರವರ  'ಎದೆಗಾರಿಕೆ' ಕಿರುಕಾದಂಬರಿಯಲ್ಲಿ ಕೊನೆಯ ಸನ್ನಿವೇಶದಲ್ಲಿ ಬರುವ ಮಾತುಗಳಿವು. ಆತನನ್ನು ಮುಗಿಸಬೇಕೆಂದು ಆಗಲೇ ನಿರ್ಧರಿಸಿ  ಆಗಿದೆ. ಅದಕ್ಕಾಗಿಯೇ ಆತನನ್ನು ಅಲ್ಲಿರಿಸಲಾಗಿದೆ . ಮತ್ತದು ಆತನಿಗೂ ಗೊತ್ತಿದೆ . ಹಾಗಂತ ಆತ ಅಮಾಯಕ ಅಲ್ಲ. ಸುಫಾರಿ ಹಂತಕ. ಶಾರ್ಪ್ ಶೂಟರ್. ಆದರೆ ಸಾವು ಇನ್ನೇನು ಇಂಚುಗಳಷ್ಟು ದೂರವಿದೆ ಎನಿಸುವಾಗ ಎಂತಹ ದಿಟ್ಟನಾದರೂ ವಿಚಲಿತನಾಗುವುದು ಸಹಜ. ಆದರೆ 'ಎದೆಗಾರಿಕೆ'ಯ ಆ ಪಾತ್ರ ಅದನ್ನು ಅಷ್ಟೇ ನಿರ್ಲೀಪ್ತವಾಗಿ ತೆಗೆದುಕೊಳ್ಳುತ್ತದೆ. ಕೊಲೆ ಮಾಡುವವರು ಬೆವರುತ್ತಿದ್ದರೆ , ಉದ್ವೇಗಕ್ಕೊಳಗಾಗುತ್ತಿದ್ದರೆ  ಆತ  ಮಾತ್ರ  ಅದನ್ನ ತೀರಾ ಸಾಮಾನ್ಯವೆನ್ನುವಂತೆ ತೆಗೆದುಕೊಳ್ಳುತ್ತಾನೆ .
ಕಾದಂಬರಿಯ ಈ ಸನ್ನಿವೇಶ ಅದೆಂತಹದ್ದೋ ವೇದನೆ  ಉಂಟುಮಾಡಿದ್ದು ನಿಜ. ದಿನಗಟ್ಟಲೆ ವಾರಗಟ್ಟಲೆ ನಾನು ಹಾಗೆ ಅದರ ಮೆಲುಕಲ್ಲೇ ಕಳೆದುಹೋಗಿದ್ದೇನೆ. ಅದರ ಮೂಡಿಂದ ಈವತ್ತಿಗೂ ಹೊರಬರಲು ಸಾಧ್ಯವಾಗಿಲ್ಲ . ಬೇಸರವಾದಗಳೆಲ್ಲಾ ಎದೆಗಾರಿಕೆ ಕೈಗೆತ್ತಿಕೊಳ್ಳುತ್ತೇನೆ .ಕೇವಲ 72 ಪುಟಗಳ ಪುಸ್ತಕ ಬೀರುವ ಪರಿಣಾಮ ಮಾತ್ರ ವರ್ಣಿಸಲಾಗದ್ದು.
ಅದನ್ನು  ಅವಕಾಶ ಸಿಕ್ಕರೆ ಸಿನಿಮಾ ಮಾಡುವ ಮಹದಾಸೆ ನನಗಿತ್ತು. ನಾನೂ ನನ್ನ ಮಿತಿಯಲ್ಲಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ ಕೂಡ. ಆವಾಗಾವಾಗ ಅದನ್ನು ನೆನಪಿಸಿಕೊಂಡು ರೋಮಾಂಚಿತನಾಗುತ್ತಿದ್ದೆ . 
ಈಗ ಸುಮನಾ ಕಿತ್ತೂರುರವರ  ನಿರ್ದೇಶನದಲ್ಲಿ ಕಾದಂಬರಿ ಸಿನಿಮಾ ರೂಪ ತಾಳಿದೆ. ಅದರ ಪ್ರೊಮೊ ನೋಡಿದ ಮೇಲೆ ಸಿನೆಮಾ ನೋಡುವ ತವಕ ಹೆಚ್ಚಾಗುತ್ತಿದೆ. ಕಾದಂಬರಿಯ ಅಕ್ಷರ ಅಕ್ಷರವೂ ನನಗೆ ಗೊತ್ತಿರುವುದರಿಂದ ಅದರ ದೃಶ್ಯರೂಪದ ಬಗ್ಗೆ ಅತೀವ ಕುತೂಹಲವಿದೆ. ಮೊದಲ ದಿನವೇ ನೋಡುವುದು ಖಾತರಿಯಾಗಿದೆ.
 ಓದಿರುವ ಕಾದಂಬರಿಗಳು, ಕಥೆಗಳು ಸಿನಿಮಾ ರೂಪವೋ ನಾಟಕ ರೂಪವೋ ತಾಳಿದಾಗ ಅದನ್ನು ನೋಡುವ ಖುಷಿಯೇ ಬೇರೆ. ಮುಂದೇನಾಗುತ್ತದೆ ಎಂದು ಗೊತ್ತಿದ್ದರೂ ಅದನ್ನು ಅಷ್ಟೇ ತವಕದಿಂದ ನೋಡುವ ಮನಸಾಗುತ್ತದೆ . ಹಾಗಂತ ಇಡೀ ಪುಸ್ತಕವೇ ಸಿನಿಮಾ ರೂಪ ತಾಳಲು ಸಾಧ್ಯವಿಲ್ಲ ಸಿನಿಮಾಕ್ಕೂ , ಬರಹ ರೂಪಕ್ಕೂ ನಡುವೆ ಇತಿ ಮಿತಿ ಸಾಧ್ಯತೆಗಳಲ್ಲಿ ಸಾಕಷ್ಟು ವ್ಯತ್ಯಾಸ  ಅಂತರಗಳಿವೆ. ನೀವು ಪ್ಯಾಪಿಲಾನ್ ಸಂಪೂರ್ಣ ಕಾದಂಬರಿ ಓದಿದ್ದರೆ ಚಿತ್ರ ಅಷ್ಟು ಖುಷಿ ಕೊಡಲಾರದು. ಆದರೆ ವೆ ಬ್ಯಾಕ್ ಹಾಗಲ್ಲ. ಲಾಂಗ್ ವಾಕ್ ಪುಸ್ತಕದ ತದ್ರೂಪು ಅದು. 3 ಈಡಿಯಟ್ಸ್  ಮತ್ತು ಫೈವ್ ಪಾಯಿಂಟ್ ಸಮೋನ್ ನಡುವೆ ವ್ಯತ್ಯಾಸ ಬಹಳವಿದ್ದರೂ ಪುಸ್ತಕಕ್ಕಿಂತ ಸಿನಿಮಾದ ತೂಕ ಜಾಸ್ತಿ. ಸ್ಲಮ್ ಡಾಗ್ ಮಿಲಿಯೇನರ್  ಪುಸ್ತಕ ರೂಪದಲ್ಲಿರುವ ಮಜಾವೇ ಬೇರೆ. ದೃಶ್ಯದ ರೂಪದ ಸೊಗಸೇ  ಬೇರೆ.  ನನ್ನ ಪ್ರಕಾರ ಕನ್ನಡದಲ್ಲಿ ಬರಹ ರೂಪವನ್ನು ಅಚ್ಚುಕಟ್ಟಾಗಿ ಭಾವಕ್ಕೆ ಧಕ್ಕೆ ತರದಂತೆ ದೃಶ್ಯರೂಪಕ್ಕಿಳಿಸಿದವರಲ್ಲಿ ಮೊದಲಿಗರೆಂದರೆ ಪುಟ್ಟಣ್ಣ ಕಣಗಾಲ್, ಗಿರೀಶ ಕಾಸರವಳ್ಳಿಯವರು. ಅವರು ಸಿನಿಮಾಗಳಿಗಾಗಿ ಸಾಕಷ್ಟು ಬದಲಾವಣೆ  ಮಾಡಿಕೊಂಡರೂ ಅವುಗಳಾವುವು ಕಾದಂಬರಿಯ ಭಾವಕ್ಕೆ ಧಕ್ಕೆ ತರುವಂತದ್ದಾಗಿರಲಿಲ್ಲ. ಪುಟ್ಟಣ್ಣನವರು  ಕನ್ನಡದಲ್ಲಿ 24 ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅವುಗಳಲ್ಲಿ 16 ಕಾದಂಬರಿ, 2 ಸಣ್ಣ ಕಥೆಯಾಧರಿಸಿದ್ದು.
ಈಗ ಎದೆಗಾರಿಕೆ ನಿರೀಕ್ಷೆ ಹುಟ್ಟಿಸಿದೆ .

No comments:

Post a Comment