Friday, October 12, 2012

ಅವಳು, ಆಕೆ ಮತ್ತು ಆತ್ಮ...ಭಾಗ-1

ಸಮಯ 12.30 ಆಗಿತ್ತು.
ನಾನು ಆಗ ತಾನೇ ಇಟಲಿಯ ಸಿನೆಮಾ ಪರಡಿಸೋ ನೋಡಿ ಮುಗಿಸಿದ್ದೆ.ಅ ಚಿತ್ರ ಇನ್ನೂ ನನ್ನ ಕಣ್ಣಲ್ಲಿ ಹಾಗೆಯೇ ಉಳಿದು ಬಿಟ್ಟಿತ್ತು.ಅಲ್ಲಿನ ನಾಯಕ, ಅನೂಹ್ಯ ಪ್ರೇಮಕಥೆಯ ಜೊತೆಗೆ ಅಲ್ಲಿ ಬರುವ ಆಲ್ಫ್ರೆದೋ ಪಾತ್ರ ನನ್ನನ್ನಾವರಿಸಿಕೊಂಡಿದ್ದವು. ಕ್ಲೈಮ್ಯಾಕ್ಸಿನಲ್ಲಿ  ಆಲ್ಫ್ರೆದೋ ತನಗಾಗಿ ಕೊಟ್ಟಿದ್ದ ಚಲನಚಿತ್ರಗಳ ತುಣುಕುಗಳನ್ನು ನೋಡುತ್ತಾ ಕಣ್ತುಂಬಿಕೊಳ್ಳುವ ನಾಯಕನ ಅಭಿನಯ ನನ್ನ ಕಣ್ಣಲ್ಲೂ ನೀರು ತರಿಸಿತ್ತು. ಆ ಚಿತ್ರದ ನಿರ್ದೇಶಕ ಗಿಸಿಪಿಗೆ ಮನದಲ್ಲಿ ಸಾವಿರಾರು ಸಾರಿ ನಮಸ್ಕರಿಸಿದ್ದೆ.
ಆಗ ಮೊಬೈಲ್ ರಿ0ಗಾಗತೊಡಗಿತ್ತು.
ಅದೆಂತಹ ಇಷ್ಟವಾದ ಹಾಡನ್ನೇ ಕರೆಧ್ವನಿಯಾಗಿ ಹಾಕಿಕೊಂಡರೂ ಅದು ರಿಂಗಣಿಸುವಾಗ ಮಾತ್ರ ಅಸಾಧ್ಯ ಕಿರಿಕಿರಿಯಾಗಿಬಿಡುವ ರಹಸ್ಯ ಮಾತ್ರ ಇನ್ನೂ ನನಗೆ ಗೊತ್ತಾಗಿಲ್ಲ. ತಟ್ಟನೆ ನನ್ನ ಕಣ್ಣು ಗೋಡೆಯ ಮೇಲಿದ್ದ ಗಡಿಯಾರದತ್ತ ತಿರುಗಿತು. ಹೌದು.ಮುಲಾಜಿಲ್ಲದೆ ಗಡಿಯಾರ 12.30 ತೋರಿಸುತ್ತಿತ್ತು.
'ಇಷ್ಟೊತ್ತಲ್ಲಿ ನನಗೆ ಫೋನ್ ಮಾಡಿರುವವರು ಯಾರಿರಬಹುದು..? ಮನೆಯವರಿಂದ ಆ ಸರಿರಾತ್ರಿಯಲ್ಲಿ ಕರೆ ಬರಲು ಸಾಧ್ಯವೇ ಇಲ್ಲ ..ಇನ್ನ ಗೆಳೆಯರು..? '
ಮೊಬೈಲ್ ತೆಗೆದುಕೊಂಡು ಅದರ ಪರದೆಯ ಮೇಲೆ ಕಣ್ಣಾಡಿಸಿದೆ.
ವೇದಾ...ವೇದಾ ಮ್ಯಾಡಂ..
ನನಗೆ ಆಶ್ಚರ್ಯವಾಗದೆ ಇರಲಿಲ್ಲ . ಇಷ್ತೊತ್ತಲ್ಲಿ ವೇದಾ ನನಗೇಕೆ ಕರೆ ಮಾಡಿದರು? 
ವೇದಾ ನಮ್ಮ ಟೀಮ್ ಲೀಡರ್. ಅಷ್ಟೇ ಅಲ್ಲ ..ನಮ್ಮ ಕಂಪನಿಯ ಅತಿ ಮುಖ್ಯ ವ್ಯಕ್ತಿ. ವಿವಾಹಿತ ಸುಂದರಿ.  ಆಕೆಗೆ 38 ವರ್ಷ ವಯಸ್ಸು. ಹಾಗಂತ ಆಕೆಯೇ ಸಮಯೋಚಿತವಾಗಿ ಹೇಳಿದರೆ ನಮ್ಮ ಸಹೋದ್ಯೋಗಿಗಳು 'ಸುಮ್ನಿರಿ ಮ್ಯಾ'ಮ್ .ಸಾಧ್ಯಾನೆ ಇಲ್ಲ..' ಎಂದು ಅವರ ಮುಂದೆಯೇ ಉದ್ಗರಿಸಿ ಅವರ ಬೆನ್ನ ಹಿಂದೆ 'ಸುಮ್ನೆ ಸ್ಕೋಪ್ ತಗಳೋದು...ಅಷ್ಟು ವಯಸು ಆಗಿರೋಕೆ ಸಾಧ್ಯಾನೆ ಇಲ್ಲ...' ಎಂದು ಹೀಗಳೆಯುತ್ತಿದ್ದವರಲ್ಲಿ ಭವ್ಯ ಮೊದಲನೆಯವಲಾಗಿದ್ದಳು.
ನಾನು ಸುಮ್ಮನೆ ಕರೆ ಸ್ವೀಕರಿಸದೆ ಆಕೆ ಇಷ್ಟೊತ್ತಲ್ಲಿ ಯಾಕೆ ಕರೆ ಮಾಡಿರುವುದು ಎಂದು ಯೋಚಿಸತೊಡಗಿದೆ. ನಮ್ಮ ಪ್ರಾಜೆಕ್ಟ್ ಸಬ್ಮಿಶನ್ ಗೆ ಇನ್ನೂ ಸಮಯವಿತ್ತು. ಕರೆ ನಿಂತಿತು. ಬೆಳಿಗ್ಗೆ ಕೇಳಿದರೆ ಮಲಗಿದ್ದೆ ಎಂದು ಹೇಳಿದರಾಯಿತು ಎಂದು ಮಲಗಲು ಅನುವಾದೆ.
ಮತ್ತೆ ಮೊಬೈಲ್ ಬಡಿದುಕೊಳ್ಳತೊಡಗಿತು.
ನಿದ್ರೆಯಲ್ಲಿರುವವನಂತೆ ನಟಿಸಲು ಸಿದ್ಧನಾಗಿ ಕರೆ ಸ್ವೀಕರಿಸಿದೆ.
ಹಲೋ..
ಏನು ಮಲಗ್ಬಿಟ್ಟಿ ದ್ದಾ....?
'ಹೌದು ಮ್ಯಾಂ...ಏನ್ ವಿಷಯ ಮ್ಯಾಂ'
'ಏನಿಲ್ಲಾ..ನೀನು ಮೊನ್ನೆ ಮಾತಾಡುವಾಗ ಅದ್ಯಾರು ಜೇಮ್ಸ್ ಚೆಸು ಕಾದಂಬರಿ ಅಂತೆಲ್ಲಾ ಭಾಳ ಹೋಗಳ್ತಿದ್ದೆಯಲ್ಲಾ...ಆತನ ಪುಸ್ತಕಗಳು ಎಲ್ಲಿ ಸಿಕ್ತವೆ..?
'ಯಾಕೆ ಮೇಡಂ ಇಷ್ಟೊತ್ತಲ್ಲಿ..?
'ಯಾಕೆ..ಆತನ ಪುಸ್ತಕಗಳ ಬಗ್ಗೆ ಕೇಳಬೇಕಾದರೆ ಇಷ್ಟೊತ್ತಿಗೆ ಕೇಳಬೇಕೂಂತ ಪರ್ಟಿಕುಲರ್   ಟೈಮ್ ಇದೆಯಾ..?' ಧ್ವನಿಯಲ್ಲಿ ತುಂಟುತನವಿದ್ದರೂ ನಾನದನ್ನು ಗಮನಿಸದವನತೆ ಮಾತು ಮುಂದುವರೆಸಿದೆ.
'ಅಯ್ಯೋ ..ಹಾಗೇನಿಲ್ಲ..ಅದು ಜೇಮ್ಸ್ ಹ್ಯಾಡ್ಲಿ ಚೆಸ್...ಪತ್ತೆಧಾರಿ ನಾವಲ್ಸ್..'
'ಕರೆಕ್ಟು...ಪುಸ್ತಕ , ಕಾದಂಬರಿ ಅಂದ್ರೆ ನಿದ್ರೆಗಣ್ಣಲ್ಲೂ ಸರ್ಯಾಗಿ ಹೇಳ್ತೀಯ ನೋಡು... ಅವು ಎಲ್ಲಾ ಬುಕ್ ಸ್ಟೊರಿನಲ್ಲಿ ಸಿಕ್ತಾವಾ..? ನಾನೊಂದಷ್ಟು ಓದಬೇಕು...ನೀನು ಚೆನ್ನಾಗಿರುತ್ತೆ ಅಂತ ಹೇಳ್ತಿದ್ದೆಯಲ್ಲಾ..'
ನಾನೀಗ ಎದ್ದು ಕುಳಿತುಕೊಂಡೆ.
'ಮೇಡಂ ನಾನು ಹೇಳಿದೆ ಅಂತ ನೀವು ಓದ್ಲಿಕೆ ಹೋಗಬೇಡಿ... ನನಗೇನೋ ಇಷ್ಟ ಆಗ್ತವೆ...ಹಾಗಂತ ನಿಮಗೆ ಇಷ್ಟ ಆಗಬೇಕು ಅಂತಿಲ್ಲವಲ್ಲ..'
'ಉಹೂ..ಅದೆಲ್ಲಾ ಗೊತ್ತಿಲ್ಲಾ ನೀನು ಹೇಳಿದೆ ಅಂತಾನೆ ಓದ್ತಿರೋದು...ಇಷ್ಟ ಆಗ್ಲೇ ಬೇಕು...ಅಷ್ಟೇ..' ಎಂದರು ಮೊಂಡುತನದ ಭಾವ  ಮಾತಿನಲ್ಲಿತ್ತು.
ನನಗೇನು ಹೇಳಬೇಕೋ ಗೊತ್ತಾಗಲಿಲ್ಲ . ನಾನೇ ಮಾತು ಬದಲಿಸಿದೆ.
'ಸರಿ ಮೇಡಂ..ನನ್ನತ್ರ ಸಾಕಷ್ಟಿದೆ..ನಿಮಗೆ ತಂದು ಕೊಡ್ತೀನಿ...ನೀವು ಓದಬಹುದು..'
'ಹಂಗಾರೆ ನಿನ್ನ ಬೈಯಾಕೆ ಇನ್ನೂ ಹಕ್ಕಿರುತ್ತೆ...ನಾಳೆ ಮಿಸ್ ಮಾಡಬೇಡ...ಈಗ ನೀನು ಮಲಗಬಹುದು.."
ನಾನು ಗುಡ್ ನೈಟ್  ಹೇಳಿದೆ.
ಮೊಬೈಲ್ ಕೆಳಗಿಟ್ಟು ಸುಮ್ಮನೆ ಕುಳಿತುಕೊಂಡೆ. ಆಮೇಲೆ ನನ್ನ ಪುಸ್ತಕಗಳನ್ನು ಇಟ್ಟಿದ್ದ ಅಟ್ಟೆಯ ಹತ್ತಿರ ಹೋಗಿ ಚೇಸ್  ಕಾದಂಬರಿ ತೆಗೆದುಕೊಂಡು ಅವುಗಳ ಕಥೆಯನ್ನು ನೆನಪಿಸಿಕೊಳ್ಳತೊಡಗಿದೆ. ಯಾವುದನ್ನು ಕೊಡುವುದು..? ಯಾವುದೂ ತೀರ ಇಂಟರೆಸ್ಟಿಂಗ್  ಆಗಿರುವುದು ಎಂಬ ಕೋಟಿ ರೂಪಾಯಿಗಳ ಪ್ರಶ್ನೆ ನನ್ನನ್ನು ಕಾಡತೊಡಗಿತು.ನನಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ . ಅದರಲ್ಲಿ ಲೈಕ್ ಎ ಹೋಲ್ ಇನ್ ದಿ ಹೆಡ್ , ಎನ್ನುವ ಕಾದಂಬರಿ ಕೊಡುವುದೆಂದು ನಿರ್ಧರಿಸಿ ನನ್ನ ಬ್ಯಾಗಿಗೆ ಹಾಕಿಕೊಂಡೆ.
ಹಾಸಿಗೆಗೆ ಬಂದಾಗ ವೇದಾ ಮೇಡಂ ನನ್ನ ನೆನಪಿಗೆ ಬಂದರು.ಅಷ್ಟೇ ಅಲ್ಲ ಕನಸಿನಲ್ಲೂ ನನ್ನನ್ನು ಆವರಿಸಿದರು.

******   ******    *******

ಬೆಳಿಗ್ಗೆ ಲಗುಬಗೆಯಿಂದ ಆಫೀಸಿಗೆ ಹೊರಟೆ. ನಾನು ದಿನಾ ತಿನ್ನುವ ಚಿಕ್ಕ ಹೋಟೆಲಿನಲ್ಲಿ ಇಡ್ಲೀ ತಿಂದೆನಾದರೂ ಆದೆಷ್ಟು ಬೇಗ ಆಫೀಸಿಗೆ ತಲುಪುವೇನೋ ಎಂಬ ಕಾತರ ನನ್ನನ್ನು ಉಪಾಹಾರ ಸ್ವಾದಿಸಲು ಬಿಡಲಿಲ್ಲ . ನನಗರಿವಿಲ್ಲದೆ ನನ್ನ ಉಡುಪಿನ ಮೇಲೆ ನಿಗಾ ವಹಿಸಿದ್ದೆ. ಕಾದಂಬರಿ ಇದೆಯೋ ಇಲ್ಲವೋ ಎನ್ನುವುದನ್ನು ಪದೆ  ಪದೆ ಖಾತರಿ ಮಾಡಿಕೊಂಡಿದ್ದೆ . ದಿನದ ಬಸ್ಸು ಆವತ್ತು ಲೇಟ್  ಎನಿಸದಿರಲಿಲ್ಲ .
ಆಫೀಸಿಗೆ ಹೋದತಕ್ಷಣ ವೇದಾ ಮೇಡಂ ಚೇಂಬರಿಗೆ ಎಡೆತಾಕಿದರೆ ಆಕೆಯಿನ್ನೂ ಬಂದಿರಲಿಲ್ಲ . ಸಮಯ ನೋಡಿಕೊಂಡೆ. ನಾನು ಅನಾಮತ್ತು ಅರ್ಧ ಘಂಟೆ ಮುಂಚಿತವಾಗಿಯೇ ಆಫೀಸಿಗೆ ಬಂದಿದ್ದೆ. ಏನು ಮಾಡುವುದು ತೋಚದೆ ಸೀದಾ ಕ್ಯಾಂಟೀನಿಗೆ ಹೋಗಿ ಕುಳಿತುಕೊಂಡೆ.ಚೇಸ್ ಪುಸ್ತಕಗಳನ್ನು ಬ್ಯಾಗಿನಿಂದ ಹೊರತೆಗೆದು ಮತ್ತೊಮೆ ಕಣ್ಣಾಡಿಸತೊಡಗಿದೆ.
ಅಷ್ಟರಲ್ಲಿ ಅಭಯ ಬಂದ. ರೋಹಿತ್ ಬಂದ. ಭವ್ಯ , ರುಕ್ಮಾಂಗದ ಬಂದರು. ನಾನವರ ಬಳಿ ಏನೂ ಹೇಳಲಿಲ್ಲ .. ಮತ್ತೆ ನಮ್ಮ ನಮ್ಮ ಡೆಸ್ಕ್ ಗೆ ಬಂದೆವು. ಇಮೇಲ್ ಚೆಕ್ ಮಾಡಿದೆವು. ಅಷ್ಟರಲ್ಲಿ ವೇದಾ ಬಂದರು. ನಾನು ಅವರೆಡೆಗೆ ನೋಡಿದೆನಾದರೂ ಅವರೇನೂ  ನನ್ನೆಡೆಗೆ ವಿಶೇಷ ದೃಷ್ಟಿ ಬೀರಲಿಲ್ಲ. ತಮ್ಮ ದೈನಂದಿನ ಮಂದಹಾಸದೊಂದಿಗೆ ಎಲ್ಲರಿಗೂ ನೋಡಿ ನನ್ನ ಬಳಿ ಬಂದರು. 'ಹೇಗೆ ನಡೀತಿದೆ...ಸರ್ಕೂಟ್  ಕಂಪ್ಲೀಟ್  ಆಯ್ತಾ?'
'ನಾನು ಯಾ ..ಅಂ 'ಎಂದವನು 'ಮೇಡಂ ಅದೇ ಬುಕ್ ತಂದಿದೀನಿ..' ಎಂದು ಬ್ಯಾಗಿಗೆ ಕೈ ಹಾಕಿದೆ. ಆದರೆ ವೇದಾ..'ಓಕೆ ಓಕೆ ..ಆಮೇಲೆ ಕೊಡುವಿಯಂತೆ...ಕಂಟಿನ್ಯೂ...'ಎಂದು ಹೋಗಿಬಿಟ್ಟರು. ನನಗೆ ಅವಮಾನವಾದಂತೆನಿಸಿತು . ರಾತ್ರಿಯೆಲ್ಲ ನಿದ್ರೆಗೆಡಿಸಿ ಈಗ ಇಷ್ಟೊಂದು  ನಿರಾಸಕ್ತಿ ತೋರಿಸುತ್ತಿರುವವಳಲ್ಲ...ಛೆ ನಾನು ತರಲೆಬಾರದಿತ್ತು ಎನಿಸಿತು. ರಾತ್ರಿ ಆಕೆ ಬಡಬಡಿಸಿದ್ದನ್ನು ನಾನು ಗಂಭೀರವಾಗಿ ತೆಗೆದುಕೊಂಡದ್ದು ಪಿಚ್ಚೆನಿಸಿತು.
ನನ್ನ ಮೂಡ ಸರಿಹೋಗಲಿಲ್ಲ ಯಾಕೋ ಬೇಸರ ಉಕ್ಕುಕ್ಕಿ ಬರುತ್ತಿತ್ತು. ಇಂದು ಸಂಜೆ ಬೇಗ ಮನೆಗೆ ಹೋಗಿಬಿಡಬೇಕು. ಸಂಜೆ ಆಕೆಗೆ ಪುಸ್ತಕ ಕೊಡಲು ಹೋಗಬಾರದು. ಆಕೆಯೇ ತಾನಾಗೆ ಕೇಳಿದರೆ ಮಾತ್ರ ನೆನಪಿಸಿಕೊಂಡವನಂತೆ ನಾಟಕ ಆಡಬೇಕು..
ಎಂದೆಲ್ಲಾ ಯೋಚಿಸಿದ ಮೇಲೆ ಮನಸು ಒಂದು ತಹಬದಿಗೆ ಬಂದಿತು.
ಸಂಜೆ ನಾನು ಬೇಗನೆ ಲಾಗೌಟ್  ಆದೆ. ನಂತರ ಹೊರಡಲನುವಾಗುವಷ್ಟರಲ್ಲಿ ವೇದಾ ನನ್ನ ಬಳಿ ಬಂದವರು ' ಬಾ ಹೋಗೋಣ ..' ಎಂದರು. ಎಲ್ಲಿಗೆ ಎನ್ನುವ ಪ್ರಶ್ನೆ ಹುಟ್ಟಿತಾದರೂ ನಾಲಿಗೆಗೆ  ಅದನ್ನು ಹೊರಹಾಕುವ ಧೈರ್ಯ ಬರಲಿಲ್ಲ.
ಸುಮ್ಮನೆ ಆಕೆಯನ್ನು ಹಿಂಬಾಲಿಸಿದೆ. ಆಕೆಯೂ ನನ್ನ ಜೊತೆ ಮಾತಾಡಲಿಲ್ಲ . ನಾವು ಆಫೀಸಿನ ಮೆಟ್ಟಿಲಿಳಿದು ಹೊರಬಂದೆವು.
'ಇಲ್ಲೇ ಇರು..ಕಾರ್ ತರ್ತೀನಿ..' ಎಂದ ವೇದಾ ನನ್ನ ಪ್ರತಿಕ್ರಿಯೆಗೆ ಕಾಯದೆ ಅಲ್ಲಿಂದ ಕಾರ್ ಪಾರ್ಕಿಂಗ್ ಕಡೆಗೆ ಹೊರಟುಹೋದರು. ನಾನು ಸುಮ್ಮನೆ ಇದ್ದೆ. ನನ್ನನ್ನು ಯಾರೋ ನಿಯಂತ್ರಿಸುತ್ತಿದ್ದಾರೆನೋ ಎನಿಸಿತ್ತು.
ನಾನು ಕಾರಲ್ಲಿ ಅವರ ಪಕ್ಕ ಕುಳಿತಿದ್ದೆ. ಆಕೆ ನಿಧಾನಕ್ಕೆ ಡ್ರೈವ್ ಮಾಡುತ್ತಿದ್ದರು. ನಾನು ಕಿಟಕಿಯ ಕಡೆಗೊಮ್ಮೆ ಹೊರಗೊಮ್ಮೆ ನೋಡುತ್ತಿದ್ದೆ. ಅಪ್ಪಿತಪ್ಪಿಯೂ ಆಕೆಯೆಡೆಗೆ ನೋಡಬಾರದೆಂಬ ನನ್ನ ನಿರ್ಧಾರವನ್ನು ಪಾಲಿಸಲೆಬೇಕಿತ್ತು.
'ಏನೋ ಯೋಚನೆ ಮಾಡ್ತಿದ್ದೀಯಾ ಅನ್ಸುತ್ತೆ..ನೋಡು ಅಫೀಸಿದು..ಆಫೀಸಿಗೆ ಬಿಟ್ಬಿಡಬೇಕು...' ಎಂದರು. ನನಗೆ 'ಎಲ್ಲಿ ಆಫೀಸು..ಮನಸೆಲ್ಲಾ ಹಾಳು  ಮಾಡ್ಬಿಟ್ಟು..' ಮುಂದಕ್ಕೆ ಮೌನದಲ್ಲೂ ಮಾತು ಮುಂದುವರೆಯಲಿಲ್ಲ ನಾನೇಕೆ ಹೀಗಾಡುತ್ತಿದ್ದೇನೆ ಎನಿಸಿತು ಕೂಡ.
ಕಾರು ನಿಂತಿತು . ನಾನು ನನ್ನ ಆಲೋಚನೆಯಲ್ಲಿ ಎಲ್ಲಿಗೆ ಬಂದೆವು, ಕಾರು ಎಲ್ಲಿ ಹೋಗುತ್ತಿದೆ ಎಂಬುದನ್ನೂ ಗುರುತಿಟ್ಟುಕೊಂಡಿರಲಿಲ್ಲ. ನಿದ್ರೆಯಿಂದ ಎಚ್ಚೆತ್ತವನಂತೆ ಸುತ್ತಾ ಮುತ್ತ್ತಾ ನೋಡಿದೆ ಅದೊಂದು ಪಾರ್ಕಿಂಗ್ ಲಾಟ್. ಮತ್ತೆಲ್ಲಿಬಂದೆವು...?
ಯಾಂತ್ರಿಕವಾಗಿ ಕಾರು ಇಳಿದೆ. ಆಕೆಯೂ ಕಾರು ಇಳಿದು ನನ್ನ ಬಳಿ ಬಂದು,
'ನನಗೆ ಒಂದೊಂದ್ಸಾರಿ ಭಯ...ನೀನು ಹೇಳಿದೆ ಅಂತ ಬುಕ್ ಗಿಕ್ ಅಂತೆಲ್ಲಾ ತಲೆಕೆಡಿಸಿಕೊಳ್ತಿದ್ದೀನಿ. ನಿನ್ನ ತರಾ ಆಗ್ಬಿಡ್ತೀನಾಂತ...ಹೀಗೆ...ಭಾವಾಲೋಕದಲ್ಲಿ ವಿಹರಿಸೋ...' ಎಂದು ಮಾತನ್ನು ಅರ್ಧ ಮಾಡಿ ನಕ್ಕರು . ಕೊನೆಯ ಸಾಲುಗಳನ್ನು ಕಾವ್ಯಮಯ ಶೈಲಿಯಲ್ಲಿ ಹೇಳಿದ್ದು ನನಗೂ ನಗು ತರಿಸಿತು .
ಅದು ಕಾಫೀ ಡೇ .
 ಒಳಗೆ ಬಂದೆವು. ಕೇವಲ ಬೆರಳೆಣಿಕೆಯ ಜನರಿದ್ದರು.  ಒಂದು ಕಡೆ ಕುಳಿತೆವು ಎದುರುಬದುರಾಗಿ.
'ಈಗ ಬುಕ್ ಕೊಡು. ನೀನು ನನಗೋಸ್ಕರ ಬುಕ್ ಹುಡ್ಕಂಡು ತಗೊಂಡ್ ಬಂದಿರ್ತೀಯ..ಒಂದ್ ಕಾಫೀ ಕೂಡ ಕುಡಿಸದೆ ಹೇಗೆ ತಗಳೋದು..ಅದಕ್ಕೆ ಬೆಳಿಗ್ಗೆ ತಗೊಳ್ಳಲಿಲ್ಲ.' ಎಂದರು. ನನ್ನ ಬೇಸರ ಜರಕ್ಕನೆ ಇಳಿದುಹೋಯಿತು.
ಅಷ್ಟರಲ್ಲಿ ವೈಟರ್ ಬಂದ.
'ಏನು ತಗೋತೀಯಾ.'
ನನಗೆ ನಿಜವಾಗಲೂ ಅಲ್ಲಿ ಏನೇನೆಲ್ಲಾ ಸಿಗುತ್ತದೆಂಬ ಪರಿಕಲ್ಪನೆ ಇರಲಿಲ್ಲ . ನಾನು ಮೊದಲ ಬಾರಿಗೆ ಕಾಫೀ ಡೇಗೆ ಬಂದಿದ್ದು. ಹೆಸರು ಕಾಫೀ ಡೆ  ಆದ್ದರಿಂದ ಕಾಫೀಯಂತೂ ಸಿಕ್ಕೆ ಸಿಗುತ್ತದೆಂಬ ಭರವಸೆ ಇತ್ತು.
'ನನಗೆ ಕಾಫೀ ಸಾಕು..'
ಸರಿ ಮಾರಾಯಾ..ಅದೇ ಯಾವ್ದೂಂತ ..?'
'ನನಗೆ ಗೊತ್ತಿಲ್ಲ ಮೇಡಂ. ನಾನು ಫಸ್ಟ್ ಟೈಮ್ ಬರ್ತಿರೋದು...ನಿಮಗೆ ಗೊತ್ತಿರೋದು ನೀವೇ ಹೇಳಿ..' ಎಂದುಬಿಟ್ಟೆ. ಆಕೆ ವೈಟರ್ ಕಡೆಗೆ ತಿರುಗಿ ಅದ್ಯಾವುದೋ  ಇಂಗ್ಲಿಷಿನಲ್ಲಿ ಹೇಳಿದರು. ಆತ ಹೋದ ಮೇಲೆ ನನ್ನ ಕಡೆಗೆ ತಿರುಗಿ 'ಫಸ್ಟ್ ಟೈಮ್ ಅಂದ್ರೆ ನನ್ನ ಜೊತೆ ಬರ್ತಿರೋದು ಫಸ್ಟ್ ಟೈಮ್ ಅಂತಾನಾ.? ಅಥವಾ ಯಾವುದೇ ಹುಡುಗಿ ಜೊತೆ ಬರ್ತಿರೋದು ಫಸ್ಟ್ ಟೈಮ್ ಅಂತಾನಾ..ಅಥವಾ ಕಾಫೀ ಡೇಗೆ ಬರ್ತಿರೋದು ಫಸ್ಟ್ ಟೈಮ್ ಅಂತಾನಾ...' ನನ್ನನ್ನೇ ನೇರವಾಗಿ ದಿಟ್ಟಿಸುತಾ ಕೇಳಿದರು. ನಾನು 'ಮೂರು ಪ್ರಶ್ನೆಗಳಿಗೆ ಒಂದೇ ಉತ್ತರ ಮೇಡಂ...ಎಸ್ ' ಎಂದೆ .
'ಈಗ ನೋಡಪ್ಪಾ ಚಾರ್ಜ್ ಆದೆ. ಇಷ್ಟೊತ್ತು ಒಂಥರಾ ಇದ್ದೆ...' ಎಂದರು.
ನನಗೆ ತಟ್ಟನೆ ನೆನಪಿಗೆ ಬಂದದ್ದು ಸಂಧ್ಯಾ. ಆಕೆ ನಾನೂ ಅದೆಷ್ಟು ಸಾರಿ ಟೀ  ಕಾಫಿ ಕುಡಿದಿಲ್ಲ. ಆದರೆ ನಾವೆಂದೂ ಕಾಫೀ ಡೇಗೆ ಹೋದವರಲ್ಲ . ನಮ್ಮೂರಿನಲ್ಲಿ ಕಾಫೀ ಡೇ  ಇರಲಿಲ್ಲವಲ್ಲ. ಟೀ  ಇಲ್ಲದೆ ನನಗೆ ಆಗುವುದಿಲ್ಲ ..ಆಕೆ ಬೈಯುತ್ತ ಬೈಯುತ್ತಾ ತಾನೂ ಟೀ  ಕುಡಿಯುವುದನ್ನು ರೂಡಿಮಾಡಿಕೊಂಡಿದ್ದಳು. ಅಲ್ಲಿದ್ದ ಮೈಲಾರಿ ರೆಸ್ಟೋರೆಂಟ್ ಗೆ ತಪ್ಪದೆ ಹೋಗುತ್ತಿದ್ದೆವು. ಹೆಸರಿಗೆ ರೆಸ್ಟೋರೆಂಟ್ . ಆದರೂ ಅದೊಂದು ಚಿಕ್ಕಾತಿಚಿಕ್ಕ ಹೋಟೆಲು. ಅಲ್ಲಿನ ಹುಡುಗ ನಮಗೆ ಪರಿಚಯವಿದ್ದ . ನಾವಲ್ಲಿ ಕುಳಿತು ಗಂಟೆಗಟ್ಟಲೆ ಹರಟುತ್ತಿದ್ದೆವು. ನಾನು ಸಿನಿಮಾ ಕಾದಂಬರಿ ಎಂದರೆ ಆಕೆ ಮನೆ, ಕುಟುಂಬ, ಕೆಲಸ ಎನ್ನುತ್ತಿದ್ದಳು.ಅದೆಷ್ಟು ಚೆನ್ನಾಗಿತ್ತು..?
'ಹಲೋ ನೋ ಮೋರ್ ಪ್ಲಾಶ್ ಬ್ಯಾಕ್...' ಮುಖದ ಮುಂದೆ ಕೈತಂದು ಚಿಟಿಕೆ ಹೊಡೆದರು ವೇದಾ. ನಾನು ವಾಸ್ತವಕ್ಕೆ ಬಂದೆ.
ತಲೆ ತಗ್ಗಿಸಿದೆ. ಆಕೆ ಮುಂದೆ ಏನನ್ನೂ ಕೇಳಲಿಲ್ಲ ಮತ್ತದನ್ನು ಗಂಭೀರವಾಗಿಯೂ ಪರಿಗಣಿಸಲಿಲ್ಲ .
'ಯಾವುದನ್ನೇ ಮಾಡಿದರೂ ಅದು ಮೆಮೊರಬಲ್ ಆಗಿರಬೇಕು..ಆಲ್ವಾ...ಈಗ ನೋಡು.ನೀನೆ.ಇದೆ ತರಾ ನೀನ್ಯಾವತ್ತಾದರೂ ಕಾಫೀ ಡೇಗೆ ಹೋದರೆ ನನ್ನ ನೆನಪಿಸಿಕೊಳ್ಳಬೇಕು....ಅದಕ್ಕೆ ಇಲ್ಲಿ ಕರ್ಕೊಂಡುಬಂದೆ...ನನ್ನನ್ನು ನೆನಪಿಸಿಕೊಳ್ತೀಯಾ...ಆಲ್ವಾ..?
ನನಗೆ ಪ್ರಶ್ನೆ ವಿಚಿತ್ರವೆನಿಸಿತು. ಕಣ್ಮುಂದೆ ಇರುವಾಕೆಯನ್ನು ನೆನಪಿಸಿಕೊಳ್ಳುವ ಪ್ರಮೇಯ ಎಲ್ಲಿಯದು? ಆದರೆ ಆಕೆಯ ದ್ವನಿಯಲ್ಲಿದ ಆರ್ದ್ರತೆ ನನ್ನನ್ನು ಒಂದು ಕ್ಷಣ ಯೋಚಿಸುವಂತೆ ಮಾಡಿತ್ತು.
ಅಷ್ಟರಲ್ಲಿ ಎರಡು ಉದ್ದನೆಯ ಗಾಜಿನ ಲೋಟದಲ್ಲಿ ಕಪ್ಪು ಬಿಳಿ ಮಿಶ್ರಿತ ವಿಚಿತ್ರ ಅರೆಪಾನೀಯವನ್ನು ವೇಟರ್ ತಂದಿಟ್ಟ.
ಮುಂದೆ ಸುಮಾರು ಅರ್ಧ ಗಂಟೆ ನಾವು ಜೊತೆಯಲ್ಲಿದ್ದೆವು. ನಾನು ಕಾದಂಬರಿ ಬಗ್ಗೆ ಹರಟಿದೆ . ಆಕೆ ಏನೋ ಮಾತಾಡಿದರು. ಒಟ್ಟಿನಲ್ಲಿ ನನಗೆ ಹೊಸ ಅನುಭವವಾಗಿತ್ತು
'ಸರಿ ಹೊರಡೋಣ್ವಾ ..?' ಎಂದು ಕೇಳಿದರು.
ಹಾಗೆ ನನ್ನ ಉತ್ತರಕ್ಕೂ ಕಾಯದೆ ಬಿಲ್ ಪೆ ಮಾಡಿದರು.
ಅಲ್ಲಿಂದ ಹೊರಬಂದ ಮೇಲೆ
'ಮೇಡಂ ನನ್ನನ್ನು ಯಾವುದಾದರೂ ಬಸ್ ಸ್ಟಾಪ್ ಗೆ ಡ್ರಾಪ್ ಮಾಡಿ..' ಎಂದೇ.ಆಕೆ 'ಸರಿ 'ಎಂದರು.
ಹತ್ತಿರದಲ್ಲಿದ್ದ ಬಸ್ ಸ್ಟಾಪ್ ನಲ್ಲಿ ಇಳಿದೆ.
'ಬೈ ಸೀ ಯೂ ಟುಮಾರೋ ..' ಇಳಿದವನು ಕಾರಿನ ಬಾಗಿಲು ಮುಚ್ಚಿ ಕಿಟಕಿಯಿಂದ ತಲೆ ಹಾಕಿ ಹೇಳಿದೆ.
'ಸೀ ಯೂ..ಅಂದಹಾಗೆ ನೆಕ್ಸ್ಟ್ ಟೈಮ್ ಮನೆಗೆ ಕರೀತೀಯಲ್ವಾ..?' ಎಂದದ್ದೆ ಅಲ್ಲಿಂದ ಹೊರಟುಹೋದರು.
ನಾನು ಸುಮಾರು ಹೊತ್ತು ಬಸ್ ಸ್ಟಾಂಡಿನಲ್ಲಿ ಕುಳಿತಿದ್ದೆ. ಆಕೆಯೊಂದಿಗೆ ಕಳೆದ ಸಮಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೆ. ವಿಚಿತ್ರವಾದ ಭಾವ ನನ್ನನ್ನು ಆವರಿಸಿಕೊಳ್ಳುತ್ತಿತ್ತು.  ಹಾಗೆ ನನ್ನ ಪರ್ಸ್  ತೆಗೆದೇ.ಒಳಗಿಟ್ಟಿದ್ದ ಸಂಧ್ಯಾಳ ಫೋಟೋ ದಿಟ್ಟಿಸಿದೆ. ಅವಳು ಹಾಗೆಯೇ ನಗುತ್ತಿದ್ದಳು.
ಮತ್ತೆ ಫೋಟೋ ಒಳಗೆ ಹಾಕಿದೆ. ಈಗ ಮತ್ತೆ ನನ್ನ ಕಣ್ಮುಂದೆ ವೇದಾ ಇದ್ದರು. ವಿವಾಹಿತೆಯಾದರೂ ಅಷ್ಟೊಂದು ಚೆಂದಕ್ಕೆ ಸ್ಲಿಮ್ ಇರಲು ಸಾಧ್ಯವಾ ಎನ್ನುವ ಮೂರ್ಖ ಪ್ರಶ್ನೆ ನನ್ನಲ್ಲೊಮ್ಮೆ ಹಾದು  ಹೋಯಿತು. ಕಣ್ಮುಚ್ಚಿಕೊಂಡು ಅವರ ಚಿತ್ರವನ್ನು ಮನಸ್ಸಿನಲ್ಲಿ ಪುನರ್ ಚಿತ್ರಿಸತೊಡಗಿದೆ .
ತಟ್ಟನೆ ನಾನೇ ಬೆಚ್ಚಿದೆ. ಅದ್ಯಾವ ಆತ್ಮ ಸಾಕ್ಷಿ ನನ್ನನ್ನು ಎಚ್ಚರಿಸಿತೋ ಗೊತ್ತಾಗಲಿಲ್ಲ.ನಾನೇನು ಯೋಚಿಸುತ್ತಿದ್ದೇನೆ ಎನಿಸಿತು. ಆಕೆ ಒಂದು ಕಾದಂಬರಿ ಕೇಳಿದಳು. ನಾನು ಕೊಟ್ಟೆ. ಜೊತೆಯಾಗೊಂದು ಕಾಫೀ ಕುಡಿದೆವು. ಮುಗಿತಲ್ಲ..ಇದ್ಯಾವ ರೀತಿ? ಎನಿಸಿತು.
ಆದರೂ ಯಾವುದೋ ಭಾವ ನನ್ನನ್ನಾವರಿಸಿದ್ದು ನನಗೆ ಸ್ಪಷ್ಟವಾಗಿತ್ತು.

Wednesday, October 10, 2012

ಒಂದೇ ಶಾಟ್..ಪಿಚ್ಚರ್ ಫಿನಿಶ್...


ಅಡ್ರೆನಾಲಿನ್ ಹೆಸರೇ ಹೇಳುವಂತೆ ಇದೊಂದು ಸಾಹಸ, ಕುತೂಹಲಭರಿತ ಚಿತ್ರ. ಬಹಳ ವೇಗವಾಗಿ ಓಡುವ ದೃಶ್ಯಗಳನ್ನೊಳಗೊಂಡಿರುವ ಈ ಚಿತ್ರದ ಕಥೆಯೂ ಅಂತಹದ್ದೆ. ಚಿತ್ರದ ವಿಶೇಷವೆಂದರೆ ಇಡೀ ಚಿತ್ರವನ್ನು ಕೇವಲ ಒಂದೇ ಒಂದು ಚಿತ್ರಿಕೆಯಲ್ಲಿ ನಿರೂಪಿಸಿರುವುದು ಇಂಗ್ಲಿಷ್ ನಲ್ಲಿ ಬಂದ ಫೋನ್ ಭೂತ್ ಚಿತ್ರದ ಕಥೆಯ ಹೋಲಿಕೆಯಿರುವ ಈ ಚಿತ್ರದ ಚಿತ್ರಣ ಮಾತ್ರ ಆ ಚಿತ್ರಕ್ಕಿಂತ ಬೇರೆಯದೆ ಆದ ಶೈಲಿಯಲ್ಲಿದೆ.
ಒಂದೇ ಶಾಟ್ ನಲ್ಲಿ ಚಿತ್ರಿತವಾಗಿರುವ ಈ ಚಿತ್ರದಲ್ಲಿ ದೃಶ್ಯಗಳ ಬದಲಾವಣೆಯಾಗಲಿ, ಸ್ಥಳಗಳ ಬದಲಾವಣೆಯಾಗಲಿ, 86 ನಿಮಿಷದ ನಾಗಾಲೋಟಕ್ಕೆ ಮತ್ತು ಒಂದೇ ಒಂದು ಚಿತ್ರಿಕೆಯ ಚಿತ್ರೀಕರಣಕ್ಕೆ ಅಡ್ಡಿ ಮಾಡುವುದಿಲ್ಲ. ಪಾನ್ ಅಂಗಡಿಯಿಂದ, ಕ್ರೀಡೋಪಕರಣಗಳ ಅಂಗಡಿಗೆ, ಅಲ್ಲಿಂದ ಬ್ಯಾಂಕ್ ಗೆ ಹರಿದಾಡುವ ಸಿನಿಮಾದ ಕಥೆಗೆ ತಕ್ಕಂತೆ ಕೆಮೆರಾವನ್ನು ಓಡಾಡಿಸಿರುವ ಛಾಯಾಗ್ರಾಹಕನ ಕೆಲಸವನ್ನು ಪ್ರಶಂಸಿಸಬೇಕಾಗುತ್ತದೆ.
ಜೆ.ವಿ.ಸಿ. ಕಂಪೆನಿಯ ಹೊಸ    GY-HD100U  ಕೆಮೆರಾ ಬಳಸಿ ತಯಾರಿಸಿರುವ ಈ ಚಿತ್ರ, ಹಿಂದಿನ ಪುಟಗಳಲ್ಲಿ ನೀವು ಓದಿದ ಚಿತ್ರಗಳದೇ ಪ್ರಾರಂಭಿಕ ಸಮಸ್ಯೆಗಳನ್ನೆದುರಿಸಿದೆ. ಇಡೀ 86 ನಿಮಿಷಗಳಷ್ಟು ಚಿತ್ರಣವನ್ನ ಹಿಡಿದಿಟ್ಟುಕೊಳ್ಳಬೇಕಾದರೆ ಮಿನಿ ಡಿ.ವಿ ಟೇಪ್ ಸಾಲದಾದ್ದರಿಂದ ನೇರವಾಗಿ ಎರಡು ಹಾರ್ಡ್ ಡ್ರೈವ್ ಗಳನ್ನು ನೇರವಾಗಿ ಜೆವೈಸಿ ಕೆಮರಾಗೆ ಸಂಪರ್ಕಿಸಲಾಗಿತ್ತು. ತಿಂಗಳುಗಟ್ಟಲೇ ಕಲಾವಿದರಿಗೆ ಕಾರ್ಯಗಾರಮಾಡಿ ಅವರಿಗೆ  ತರಬೇತಿ ನೀಡಲಾಯಿತು. ಆ ನಂತರ ಚಿತ್ರೀಕರಣಕ್ಕೆ ಬೇಕಾದ ಪರಿಕರಗಳನ್ನು ಮೊದಲೆ ಸಿದ್ಧಮಾಡಿಟ್ಟುಕೊಳ್ಳಲಾಯಿತು. ಚಿತ್ರೀಕರಣಕ್ಕೆ ಸರ್ವಸಿದ್ಧತೆಗಳನ್ನು  ಮಾಡಿಕೊಂಡು ಒಂದು ಭಾನುವಾರ ಇಡೀ ಚಿತ್ರವನ್ನು ಅಥವ ಒಂದು ಶಾಟನ್ನು ಚಿತ್ರೀಕರಿಸಲಾಯಿತು. ಒಂದುಸಾರಿ ಕೆಮೆರಾ ಆನ್ ಮಾಡಿ ಆಕ್ಷನ್ ಹೇಳಿದ ಮೇಲೆ ಕಟ್ ಹೇಳುವವರೆಗೆ ಇಡೀ ಸಿನಿಮಾವೇ ಮುಗಿದುಹೋಗಿತ್ತು.
 ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ ಕ್ರಿಸ್‌ಥಾಮ್ಸನ್ ತನ್ನ ಹೊಸ ಕಾರೊಂದನ್ನು ಕೊಂಡುಕೊಂಡಿದ್ದಾನೆ. ಅದನ್ನು ತೆಗೆದುಕೊಂಡು ಖುಷಿಯಿಂದ ಮನೆಗೆ ಹೋಗ ಬೇಕೆನ್ನುವಷ್ಟರಲ್ಲಿ ಅವನಿಗೆ ಗೊತ್ತಾಗುವ ವಿಷಯವೆಂದರೆ ಕಾರಿನ ಉಪಗ್ರಹ ಸೇವೆಯ ಪಾಸ್ ವರ್ಡನ್ನು ಕದ್ದಿರುವ ವ್ಯಕ್ತಿಯೊಬ್ಬ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾನೆಂಬುದು, ಈಗ ತಾನು ಹೇಳುವ ಹಾಗೆ ಕೇಳದಿದ್ದರೆ ಅಪಹರಿಸಿರುವ ಕ್ರಿಸ್ ಥಾಮ್ಸನ್ ಮಗಳನ್ನು ಕೊಂದು ಬಿಡುವುದಾಗಿ ಹೆದರಿಸುತ್ತನೆ. ತನ್ನ ಮಗಳ ಪ್ರಾಣ ರಕ್ಷಣೆಗಾಗಿ ಅಪಹರಣಕಾರನ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಒಂದಾದ ಮೇಲೊಂದು ಅಪರಾಧ ಕೃತ್ಯಗಳನ್ನ ಮಾಡುತ್ತ ಸಾಗುತ್ತಾನೆ ಕ್ರಿಸ್. ಆದರೆ ಎಲ್ಲೂ ಅಮಾಯಕರಿಗೆ ತೊಂದರೆಯಾಗದಂತೆ ಬೇರೆ ಆಯ್ಕೆಯಿಲ್ಲದೆ ಅವರ ಕೆಲಸಗಳನ್ನು ನೆರವೇರಿಸಿ ಮಗಳನ್ನು ಕಾಪಾಡಿಕೊಳ್ಳುವುದೇ ಚಿತ್ರದ ಕಥಾವಸ್ತು.
ನೀವು ಈ  ಸಿನಿಮಾವನ್ನು ಒಂದೇ ಶಾಟ್ ನಲ್ಲಿ ಚಿತ್ರೀಕರಿಸಿದ ಉದ್ದೇಶವೇನು ?  ಎಂಬ ಪ್ರಶ್ನೆಗೆ ನಿರ್ದೇಶಕ ರಾಬರ್ಟ್ ಲಿನ್ ಪ್ರಾಮಾಣಿಕವಾಗಿ ಹೇಳುವುದಾದರೆ, ಮುಖ್ಯ ಪಾತ್ರಧಾರಿಯ ತುಮುಲವನ್ನು, ಅವನ ಹೊಯ್ದಾಟವನ್ನು, ಹೋರಾಟವನ್ನ ನೇರವಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಕೂರಿಸಬೇಕಾಗಿತು. ಎಂದುತ್ತರಿಸಿದ್ದಾನೆ.
ಅದೇನೆ ಇರಲಿ ಮನರಂಜನೆಯ ಮಾಧ್ಯಮವಾದ ಚಲನಚಿತ್ರ ಕ್ಷೇತ್ರದಲ್ಲಿ ಆಗಾಗ ಇಂತಹ ಪ್ರಯೋಗಗಳು ಕಾಲಕಾಲಕ್ಕೆ ನಡೆದುಕೊಡೇ ಬಂದಿವೆ. ಒಂದು ಕಥೆಯನ್ನು ಪ್ರೇಕ್ಷಕರ ಮುಂದಿಡಲು ನಿರ್ದೇಶಕರು ನಾನಾ ಕಸರತ್ತು ಗಳನ್ನು ಮಾಡಿದ್ದಾರೆ. ಮತ್ತು ಯಶಸ್ವಿಯೂ ಆಗಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಚಿತ್ರದ ಒಟ್ಟು ಪರಿಣಾಮವನ್ನ ತುಲನೆ ಮಾಡುವುದಕ್ಕಿಂತ ಅವರ ಪ್ರಯತ್ನಗಳಿಗೆ ನವನವೀನ ನಿರೂಪಣೆ ಶೈಲಿ, ರಚನಾತ್ಮಕ ಚಿಂತನೆಗೆ ಒಂದು ಶಹಬ್ಬಾಸ್ ನೀಡಲೇಬೇಕಾಗುತ್ತದೆ.
ಈ ಚಿತ್ರ 2007 ರಲ್ಲಿ ಬಿಡುಗಡೆಯಾಯಿತು.


Monday, October 8, 2012

ಇರುವುದೊಂದೇ ಬದುಕು...

ಹದಿನೈದು ದಿನಗಳು ಅದೇಗೋ ಕಳೆದುಹೋದವು. ನನ್ನ ಸಿನೆಮಾದ ಬಿಸಿಯಲ್ಲಿ ಏನನ್ನು ಬರೆಯಲು ಸಾಧ್ಯವಾಗಲಿಲ್ಲ. ಆದರೆ ಆ ದಿನಗಳಲ್ಲಿ ಕೈಗೆ ಸಿಕ್ಕಿದ್ದನ್ನು ಸಮಯ ಸಿಕ್ಕಾಗಲೆಲ್ಲಾ ನೋಡುತ್ತಿದ್ದೆ. ಕೆಲವು ಸಿನೆಮಾಗಳನ್ನು ಅದರ ಹಿನ್ನೆಲೆ ಏನನ್ನೂ ತಿಳಿಯದೆ ಸುಮ್ಮನೆ ನೋಡಿದೆ. ಅದ್ಯಾರು ನಿರ್ದೇಶಕ ಇದ್ಯಾರು ನಟ, ಅದೇನು ವಿಶೇಷಾ ಇಂಥ ಪ್ರಶ್ನೆಗಳಿಗೆಲ್ಲಾ ಉತ್ತರವೇ ಇರಲಿಲ್ಲ. ಕೆಲವಂತೂ  ಯಾವ ಭಾಷೆಯದೂ ಎಂಬುದು ಗೊತ್ತಾಗಲಿಲ್ಲ .
ಕೆಲವೊಮ್ಮೆ ನನಗೆ ಸುಖಾ ಸುಮ್ಮನೆ  ಸಿನೆಮಾಗಳು  ಸಿಕ್ಕಿ ಬಿಡುತ್ತವೆ. ಹಾಗೆಯೇ ಕೆಲವು ಪುಸ್ತಕಗಳೂ ಸಿಕ್ಕಿ ಓದಿಸಿಕೊಳ್ಳುತ್ತವೆ. 45m2 ಎನ್ನುವ ಸಿನೆಮಾ ನನಗೆ ಅದೇಗೆ ಅದೇಕೆ ಸಿಕ್ಕಿತೋ ಗೊತ್ತಿಲ್ಲ. ಗ್ರೀಕ್ ದೇಶದ ಸಿನೆಮಾ ಅದು. ಕೇವಲ ಕೆಲವೇ ಪಾತ್ರಗಳು ನಾಲ್ಕಾರು ಸ್ಥಳಗಳಲ್ಲಿ ನಡೆಯುವ ಕಥೆ. ಕಥೆ ವಿಷಯಕ್ಕೆ ಬಂದರೆ ಯುವತಿಯೊಬ್ಬಳು ಏಕಾಂಗಿಯಾಗಿ ಬದುಕಲು ಪಡುವ ಕಷ್ಟ ಸುಖಗಳ ಕಥೆಯೇ ಸಿನಿಮಾದ ಕಥೆ. ಎಲ್ಲರ ಮನೆಯಂತೆ ಆ ಮನೆಯಲ್ಲೂ ಸಮಸ್ಯೆಗಳಿವೆ.ಹಾಗೆಯೇ ತಾಯಿಗೆ ತನ್ನ ಮಗಳಿನ್ನೂ ಒಂದು ಕಡೆ ನೆಲೆಯಾಗಿಲಿಲ್ಲವಲ್ಲ, ಅವಳ ಬದುಕು ಹಸನಾಗಲಿಲ್ಲವಲ್ಲ ಎನ್ನುವ ಚಿಂತೆ ಇದೆ. ಊಟ ಮಾಡುವಾಗ , ಕೆಲಸಕ್ಕೆ ಸಿದ್ಧಳಾಗುವಾಗ ತಾಯಿಯದ್ದು ಅದೇ ಮಾತು ಅದೇ ಕಥೆ. ಅದೇ ಮಗಳಿಗೆ ಕಿರಿಕಿರಿ ಎನಿಸುತ್ತದೆ. ಅಮ್ಮ ನನ್ನನ್ನು ನೆಮ್ಮದಿಯಾಗಿ ತಿನ್ನಲು ಬಿಡುವುದಿಲ್ಲ ಎಂದೆಲ್ಲಾ ರೇಗುತ್ತಾಳೆ ಆದರೂ ತಾಯಿ ಮಾತ್ರ ತನ್ನ ಗೊಣಗಾಟ ಮುಂದುವರೆಸುತ್ತಾಳೆ  ತಾಯಿಯ ಮುಂದೆ ಬೈಯುತ್ತಾಳಾದರೂ  ನಾಯಕಿಗೂ ಅದೇ ಚಿಂತೆ. ಆ ಚಿಂತೆ ಅವಳನ್ನು  ಅದೆಷ್ಟರ ಮಟ್ಟಿಗೆ  ನುಂಗಿಹಾಕುತ್ತದೆಂದರೆ ವಿನಾಕಾರಣ ಒಂಟಿತನದಲ್ಲಿ ಕಳೆಯುವ ರೀತಿ ಮಾಡಿಬಿಡುತ್ತದೆ. ಬದುಕು ಅಸಹನೀಯವಾಗುತ್ತದೆ. ಎಲ್ಲಾದರೂ ದೂರ ಹೋಗಿಬಿಡಲಾ ಎನಿಸುತ್ತದೆ.ಆಕೆ ತನ್ನ ಮನೆಬಿಟ್ಟು ಒಂದು ಅಪಾರ್ಟ್ಮೆಂಟಿನಲ್ಲಿ ಬಾಡಿಗೆಗೆ ಮನೆ ಹಿಡಿಯುತ್ತಾಳೆ. ಅಲ್ಲೊಬ್ಬ ಕವಿ,ಕಲಾವಿದ ತನ್ನ ಒಂದಷ್ಟು ಬರಹಗಳನ್ನು ಚಿತ್ರಗಳನ್ನು ಅಲ್ಲಿಯೇ ಬಿಟ್ಟು ತನ್ನ ಕಲಾಸಕ್ತಿಯನ್ನು ಸಾಕಾರಗೊಳಿಸಿಕೊಳ್ಳಲು ದೂರ ಹೋಗಿರುತ್ತಾನೆ . ಆ ಕಲಾಕೃತಿಗಳು, ಆತನ ಬರಹಗಳು ಆಕೆಯಲ್ಲಿ ಹೊಸ ಚೈತನ್ಯ ತುಂಬುತ್ತವೆ. ಬದುಕನ್ನು ಸಹನೀಯವಾಗಿ ಮಾಡಿಬಿಡುತ್ತವೆ . ಇದಿಷ್ಟೇ ಕಥೆ. ನಿರೂಪಣೆಯೂ ತೀರಾ ಸಾದಾರಣ.ಆದರೂ ಇಂಥ ಸಿನಿಮಾಗಳನ್ನು ನೋಡುವುದರಿಂದ  ಆ ದೇಶದ ಸಂಸ್ಕೃತಿ ಮುಂತಾದವು ತಿಳಿಯುತ್ತದೆ.  .2010ರಲ್ಲಿ ಬಂದ ಈ ಚಿತ್ರದ  ಅವಧಿ ಒಂದೂವರೆ ಘಂಟೆಗಳು.ಆಧುನಿಕ ಗ್ರೀಕ್ ನ ಯುವಕ ಯುವತಿಯರ ಮನಸ್ಥಿತಿ, ಅವರ ಬದುಕನ್ನು ಚೆನ್ನಾಗಿ ತೋರಿಸುವ ಚಿತ್ರ 45m2.