Friday, July 26, 2013

ನೀವು ಹುಡುಗೀರು ಇಷ್ಟೇ ಕಣ್ರೆ...

ನೀವು ಹುಡುಗೀರು ಇಷ್ಟೇ ಕಣ್ರೆ...ನಮ್ಮ ಹುಡುಗರನ್ನ ಹಾಳು ಮಾಡ್ತೀರಿ..
ನೀವು ಹುಡುಗೀರಿಗೆ ಪ್ರೀತಿ ಪ್ರೇಮದ ಬೆಲೆ ಗೊತ್ತಿಲ್ಲ, ..ಆದರೆ ನಾವು ಪ್ರೀತಿ ಅಂದ್ರೆ ಪ್ರಾಣ ಬಿಡ್ತೀವಿ..
ನೀವು ಬಿಡಿ..ನಿಮ್ಮ ಖರ್ಚಿಗೆ ಜೊತೆಗೆ ಸುತ್ತಾಡೋಕೆ ಇರಲಿ ಅಂತ ಪ್ರೀತಿಸ್ತೀರಿ, ಆದರೆ ನಾವು ಆಗಲ್ಲ..
ಇತ್ತೀಚಿನ ಚಿತ್ರಗಳಲ್ಲಿ ಹುಡುಗರು, ನಾಯಕರು ಈ ರೀತಿ ಹೇಳುವ ಮಾತು ಕೇಳಿ ಕೇಳಿ ವಾಕರಿಕೆ ಬರುವಂತಾಗಿಬಿಟ್ಟಿದೆ. ಒಂದು ಪ್ರೀತಿಯ ಕಥೆಯಲ್ಲಿ ಮೋಸ ವಂಚನೆ, ಸುಖ, ಜಗಳ ಕದನ ಹೊಡೆದಾಟ ಎಲ್ಲವೂ ಇರುತ್ತದೆ. ಆದರೆ ಬೀದಿಯಲ್ಲಿ ಓಡಾಡಿಕೊಂಡು ತಿಕ್ಕಲು ತಿಕ್ಕಲಾಗಿ ಆಡುವ ಹುಡುಗ ಬೇಜವಾಬ್ದಾರಿ ಪ್ರದರ್ಶಿಸಿದರೂ ಪ್ರೀತಿ ಬಗ್ಗೆ ಈ ರೀತಿಯ ಉದ್ದುದ್ದ ಭಾಷಣ ಬಿಗಿಯುತ್ತಾನೆ.
ಆದರೆ ಒಂದು ಪ್ರಶ್ನೆ. ಯಾಕೆ ಸುಮಾರಷ್ಟು ಜನ ಚಿತ್ರ ನಿರ್ದೇಶಕರು ಹೆಣ್ಣು ಮಕ್ಕಳ ಮೇಲೆ ಈ ಗುರುತರ ಆರೋಪ ಹೊರಿಸುತ್ತಾರೆ ಎಂಬುದು? ಮೊನ್ನೆ ಗೂಗ್ಲಿ ನೋಡುವಾಗ ಪ್ರೀತಿ ಪ್ರೇಮ ಎಂದರೇ ನಾಯಕ ಉರಿದು ಬೀಳುತ್ತಾನೆ. ಕಾರಣ ಅವನಿಗೂ ಗೊತ್ತಿಲ್ಲ, ನಮಗೂ ಗೊತ್ತಿಲ್ಲ. ಒಂದು ಹಾಡಿನಲ್ಲಿ ಹುಡುಗೀರನ್ನು ಹಾವು ಮುಂಗುಸಿ ಹಾಗೆ ಹೀಗೆ ಆಲ್ಕೋಹಾಲು ಎಂದೆಲ್ಲಾ ವರ್ಣಿಸುತ್ತಾನೆ. ಅದು ಸರಿ.ಅದದ ನಂತರ ತಾನೇ ಪ್ರೀತಿಯಲ್ಲಿ ಬೀಳುತ್ತಾನೆ.ಮೊದಲ ನೋಟದಲ್ಲೇ ಪ್ರೀತಿ ಹುಟ್ಟಿ ಬೆಳೆದು ಹೆಮ್ಮರವಾಗುವ ಕಥೆಗಳೂ ಸಾವಿರವಿದೆ. ಆದರೆ ನಾವು ನೋಡುತ್ತಿರುವ ಚಿತ್ರದಲ್ಲಿನ ದೃಶ್ಯದಲ್ಲಿ ನಮ್ಮನ್ನು ಒಪ್ಪಿಸುವ ಗುಣವಿಲ್ಲದಿದ್ದಾಗ ಈ ರೀತಿಯಾಗುತ್ತದಾ..? ಪ್ರಶ್ನೆ ಕಾಡುತ್ತದೆ.
ಶಾಜಹಾನ್ ಪ್ರೀತಿಗೋಸ್ಕರ ತಾಜ್ ಮಹಲ್ ಕಟ್ಟಿದ, ನೀವೇನು ಕಟ್ಟಿದ್ದೀರಿ ಎಂಬ ಒಂದು ಸಂಭಾಷಣೆಯನ್ನು ಯಾವುದೋ ಚಿತ್ರದಲ್ಲಿ ಕೇಳಿದ ನೆನಪು. ಭಗ್ನ ಪ್ರೇಮಿಯ ಚಿತ್ರಗಳಲ್ಲಂತೂ ಹೆಣ್ಣುಮಕ್ಕಳಿಗೆ ಬಾಯಿಗೆ ಬಂದಂತೆ ಬೈಯ್ಯದೆ ನಾಯಕ ಬಿಡುವುದಿಲ್ಲ. ಆದರೆ ಕಿಶೋರ್, ಮೊಹಮ್ಮದ್ ರಫೀ, ಕನ್ನಡದಲ್ಲಿ ಸುಮಾರಷ್ಟು , ಇತ್ತೀಚೆಗೆ ಬಂದ ಭಟ್ ಚಿತ್ರಗಳ ವಿರಹ ಗೀತೆಗಳನ್ನು ಕೇಳಿದಾಗ ಪ್ರೀತಿಯಲ್ಲಿ ಸೋಲುವುದರಲ್ಲೂ ಮಜಾವಿದೆಯಲ್ಲ ಎಂದು ನನಗೇ ಎಷ್ಟೋ ಸಾರಿ ಅನಿಸಿದ್ದಿದೆ. ಅದರಲ್ಲೂ ಕಿಶೋರ್ ರ ನೋವಿನ ಗೀತೆಗಳು ಅದೆಷ್ಟು ಚೆಂದ ಎನಿಸುತ್ತವೆ ಎಂದರೇ ಸುಮ್ಮನೇ ಯವ ವಿರಹವನ್ನೂ ಅನುಭವಿಸದೇ ಅದನ್ನು ಕೇಳುವುದರಲ್ಲಿ ಅದೆಂತಹ ಮಜಾ, ಯಾವುದಾದರೂ ಚಂದನೆಯ, ಒಳ್ಳೆಯ ಹುಡುಗಿ ಅದ್ಭುತವಾಗಿ ಪ್ರೀತಿಸಿ ಕೈಕೊಟ್ಟರೇ ಅದೆಷ್ಟು ಚೆನ್ನ ಎನಿಸುತ್ತದೆ. ಮುಸ್ಸಂಜೆಯ ಹೊತ್ತಿನಲ್ಲಿ ಸುಖಾ ಸುಮ್ಮನೇ ಕಣ್ಣಲ್ಲಿ ನೀರು ತುಂಬಿಕೊಂಡು ಹಾಡನ್ನು ಮಂದ್ರಸ್ಥಾಯಿಯಲ್ಲಿ ಕೇಳುತ್ತಿದರೇ ಅದೆಷ್ಟು ಚೆನ್ನಾಗಿರುತ್ತದೆ ಎಂದು ನನಗೆ ಅನಿಸಿ, ಹಾಗೆ ನನ್ನ ಬದುಕಲ್ಲಿ ಘಟಿಸದೇ ಇರುವುದನ್ನು ನೆನದು ಬೇಸರವಾಗುತ್ತದೆ.
ಸೋಲಲಿ, ಗೆಲ್ಲಲಿ.. ಪ್ರೀತಿಯಲ್ಲಿರುವ ಈ ಅನನ್ಯ ಭಾವಗಳ್ಯಾಕೆ ನಮ್ಮ ನಡುವಿನ ನಿರ್ದೇಶಕರಿಗೆ ಅರಿವಾಗುವುದಿಲ್ಲ. ಬದಲಿಗೆ ಪ್ರೀತಿ ಹಾಗೇ ಹೀಗೆ ಎಂದೆಲ್ಲಾ ವ್ಯಾಖ್ಯಾನ ಕೊಟ್ಟು ಮುಂದಿನ ಬೆಂಚಿನ ಪ್ರೇಕ್ಷಕರಿಂದ ಶಿಳ್ಳೆ ಗಳಿಸಿ, ಅವರನ್ನೂ ದಾರಿ ತಪ್ಪಿಸುತ್ತಾರಲ್ಲಾ ಎನಿಸಿ ಬೇಸರವಾಗುತ್ತದೆ.
ಗ್ಯಾಂಗ್ ಸ್ಟರ್ ಚಿತ್ರದಲ್ಲಿನ ದಯಾನ ಪ್ರೀತಿಗೆ ನಾನೇ ಸ್ವತ ಕಣ್ಣೀರಾಗಿದ್ದೇನೆ. ಇಡೀ ಚಿತ್ರದಲ್ಲಿ ಪಂಚಿಂಗ್ ಡೈಲಾಗ್ ಇರಲಿ ಒಂದೂ ಮಾತಾಡದಾ ಬರ್ಫಿಯ ಪ್ರೇಮಕಥೆ ಕಣ್ಣಿಗೆ ಕಟ್ಟಿದಂತಿದೆ. ಸಮಾಜಕ್ಕಾದರೂ ನನ್ನೊಡನೆ ಇರು ಎಂದು ತನ್ನೊಡನೆ ಕರೆದೊಯ್ಯುವ ಪೇಂಟೆಡ್ ವೇಲ್ ಚಿತ್ರದ ವಾಲ್ತರ್ ಫೈನ್, ಬಂಧನ ಚಿತ್ರದ ಹರೀಶ್, ತಾನು ಸತ್ತು ರೊಸ್ ಳ ಪ್ರೀತಿಯನ್ನು ಜೀವಂತವಾಗಿಡುವ ಟೈಟಾನಿಕ್ ಚಿತ್ರದ ಜಾಕ್... ಹೀಗೆ ಅದೆಷ್ಟು ಪ್ರೇಮಿಗಳ ಕಥೆ ಕಣ್ಣಲ್ಲಿ ಅಳಿಸದ ಚಿತ್ರವಾಗಿ ಉಳಿದುಬಿಟ್ಟಿದೆಯಲ್ಲ ಎನಿಸುತ್ತದೆ. ಆದರೆ ಇತ್ತೀಚಿನ ಪ್ರೇಮಕಥಾ ಕನ್ನಡ ಚಿತ್ರಗಳ್ಯಾಕೆ ಹಾಗೆ ಮನಸ್ಸಿಗೆ ತಟ್ಟುವುದಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡರೇ ಉತ್ತರ ಸಿಗುವುದೇ ಇಲ್ಲ. ಬದಲಿಗೆ ನೀವು ಹುಡುಗೀರು ಅಂದ್ರೆ ಗೊತ್ತಲ್ಲ.. ಎಂಬ ಡೈಲಾಗ್ ನೆನಪಿಗೆ ಬಂದು ನಗು ಬರುತ್ತದೆ, ಹಾಗೆ ಬೇಸರವೂ ಆಗುತ್ತದೆ.

Monday, July 22, 2013

ಸಬ್ ಟೈಟಲ್

ನನಗೆ ಗೊತ್ತಿರುವಂತೆ ಇರಾನಿ ಚಿತ್ರಗಳು ಪಕ್ಕಾ ಸೊಗಡಿನ ಚಿತ್ರಗಳು ಎನಿಸುತ್ತವೆ.ಅಲ್ಲಿನ ನಿರ್ದೇಶಕರು ಪಾಶ್ಚಿಮಾತ್ಯ ಚಿತ್ರರಂಗದಿಂದ ನಮ್ಮ ತರಹ ಸ್ಪೂರ್ತಿಗೊಂಡಿದ್ದು ಕಡಿಮೆ. ತಮಗೆ ತೋಚಿದಂತೆ ತಮ್ಮದೇ ಕಥೆಯನ್ನು ಹೇಳುತ್ತಾ ಸಾಗಿದವರು ಅವರು. ಹಾಗಾಗಿಯೇ ನಮಗೆ ಹಾಲಿವುಡ್ ತಂತ್ರಜ್ಞಾನವಾಗಲಿ ನಿರೂಪಣಾ ಶೈಲಿಯಾಗಲಿ ಇರಾನಿ ಚಿತ್ರಗಳಲ್ಲಿ ಕಾಣಸಿಗದು. ಹಾಗೆಯೇ ಅವರ ಚಿತ್ರಗಳಲ್ಲಿ ಆತುರವಿಲ್ಲ. ಎಲ್ಲವೂ ನಿಧಾನ ಅನ್ನುವುದಕ್ಕಿಂತ ನಿಜಸಮಯದಲ್ಲಿ ಕಣ್ಮುಂದೆ ನಡೆಯುತ್ತಿದೆಯೇನೋ ಎನ್ನುವಂತಿರುತ್ತವೆ. ಪ್ರತಿಯೊಂದು ಕ್ರಿಯೆ, ಪ್ರತಿಕ್ರಿಯೆಯನ್ನು ತೋರಿಸುವುದರಲ್ಲಿ ಅವರದು ಎತ್ತಿದ ಕೈ.ದಿ ಕಲರ್ ಆಫ್ ಪ್ಯಾರಡೈಸ್ ಮಜಿದ್ ಮಜಿದಿ ನಿರ್ದೇಶನದ ಇರಾನಿ ಚಿತ್ರ. ಅಂಧ ಹುಡುಗನ ಕಥೆಯಿರುವ ಈ ಚಿತ್ರವನ್ನು ನೋಡುತ್ತಾ ನೋಡುತ್ತಾ ನಾನು ಅದೆಷ್ಟು ಸಲ ಪರವಶನಾಗಿದ್ದೀನೋ..? ಆ ಹುಡುಗ ಅಂಧ ಹುಡುಗನ ಅಭಿನಯ ಕಥೆಯ ನಿರೂಪಣೆ ಮತ್ತು ಸಂಭಾಷಣೆ ನನ್ನನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗಿದೆ.
ಹೀಗೆ ಕಾಣುತ್ತದೆ ಕನ್ನಡ ಸಬ್ ಟೈಟಲ್
ನಾನು ಮೊದಲೇ ಹೇಳಿದಂತೆ ನಾನು ಗೆಳೆಯ ಫಿಲಿಪ್ ಕನ್ನಡ ಅಡಿಬರಹ/ಸಬ್ ಟೈಟಲ್ ಗಾಗಿ ಒದ್ದಾಡಿ ಕೊನೆಗೆ ವಸುಧೇಂದ್ರರ ಹತ್ತಿರ ಪ್ರಸ್ತಾಪವಿಟ್ಟದ್ದು, ಅವರು ಅದನ್ನು ಆರು ತಿಂಗಳು ಪ್ರಯತ್ನಿಸಿ ಯಶಸ್ವಿಯಾದದ್ದು ನಿಮಗೆ ಗೊತ್ತೇ ಇದೆ. ಮೊನ್ನೆ ನಾನು ವಸುಧೇಂದ್ರ ಭೇಟಿಯಾದಾಗ ಅವರು ದಿ ಕಲರ್ ಆಫ್ ಪ್ಯಾರಡೈಸ್ ಚಿತ್ರವನ್ನು ಪ್ರದರ್ಶಿಸುತ್ತಿದ್ದೇನೆ, ಹಾಗಾಗಿ ನನಗೆ ಕನ್ನಡ ಸಬ್ ಟೈಟಲ್ ಮಾಡಿಕೊಡು ಎಂದರು. ತುಂಬಾ ಒಳ್ಳೆಯ ಜಗತ್ತಿನ ಚಿತ್ರಗಳನ್ನು ನಾವೆಲ್ಲಾ ನಮಗೆ ಗೊತ್ತಿರುವ ಹರಕು ಮುರುಕು ಇಂಗ್ಲೀಷಿನ ಸಬ್ ಟೈಟಲಿನ ಸಹಾಯದಿಂದ ನೋಡಿ ಅರ್ಥ ಮಾಡಿಕೊಳ್ಳುತ್ತೇವೆ. ಆದರೆ ಇಂಗ್ಲೀಷ್ ಬಾರದವರ ಗತಿ ಏನು ಎಂಬುದು ನಮ್ಮ ಪ್ರಶ್ನೆ. ಹಾಗೆಯೇ ಸುಮಾರಷ್ಟು ಭಾಷೆಯಲ್ಲಿ ಸಬ್ ಟೈಟಲ್ ಇದ್ದರೂ ಕನ್ನಡದಲ್ಲಿ ಇಲ್ಲವಲ್ಲ ಎನ್ನುವ ಬೇಸರ. ಹಾಗಾಗಿ ನಾವೇ ಏಕೆ ಒಂದು ಗುಂಪು ಮಾಡಿಕೊಂಡು ನಮನಮಗಿಷ್ಟದ ಜಗತ್ತಿನ ಚಿತ್ರಗಳಿಗೆ ಸಬ್ ಟೈಟಲ್ ಮಾಡಿದರೇ ಕನ್ನಡದಲ್ಲಿ ಸಬ್ ಟೈಟಲ್ ಮಾಡಿದ ಹಾಗೆ ಆಗುತ್ತದೆ ಎಂದರು ವಸುಧೇಂದ್ರ.  ಸಬ್ ಟೈಟಲ್ ಮಾಡುವುದು ತುಂಬಾ ಸುಲಭ. ಇಂಗ್ಲೀಷಿನಲ್ಲಿನ ಸಬ್ ಟೈಟಲ್ಲನ್ನು ಕನ್ನಡಕ್ಕೆ ಅನುವಾಧಿಸುವುದು ಅಷ್ಟೆ. 
ಈಗ ಸಧ್ಯಕ್ಕೆ ಕನ್ನಡದ ಅನ್ಸಿಕೋಡ್ ಲಿಪಿಯನ್ನು ಮಾತ್ರ ವಿ.ಎಲ್.ಸಿ.ಮೀಡಿಯ ಪ್ಲೇಯರ್, ಎಮ್.ಪಿ.ಸಿ.ಪ್ಲೇಯರ್ ಸಪೋರ್ಟ್ ಮಾಡುತ್ತಿದೆ.
ವಿ.ಎಲ್.ಸಿ.ಯಲ್ಲಾದರೇ ಅಲ್ಲಿನ ಟೂಲ್ಸ್ ಗೆ ಹೋಗಿ ಅಲ್ಲಿ ಪ್ರಿಫೆರೆನ್ಸೆಸ್ ಗೆ ಹೋಗಿ ಅಲ್ಲಿ ಸಬ್ ಟೈಟಲ್ ಎಂಬಲ್ಲಿ ಲಿಪಿಯನ್ನು ಕನ್ನಡದ ನುಡಿಗೋ, ಬರಹಕ್ಕೋ ಬದಲಾಯಿಸಿದರೇ ಆಯಿತು. ಮೊದಲೇ ನಿಮ್ಮ ಕಂಪ್ಯೂಟರ್ ನಲ್ಲಿ ಕನ್ನಡ ಲಿಪಿ ಇನ್ ಸ್ಟಾಲ್ ಆಗಿರಬೇಕು ಎಂಬುದು ಗಮನದಲ್ಲಿರಲಿ.
ಇನ್ನು ಎಸ್.ಆರ್.ಟಿ. ಫೈಲ್ ಅನ್ನು ನೋಟ್ ಪ್ಯಾಡ್ ನಲ್ಲಿ ತೆರೆದುಕೊಂಡರೇ, ಅಲ್ಲಿ ಫಾಂಟ್ ಎನ್ನುವಲ್ಲಿ ನುಡಿಗೋ, ಬರಹಕ್ಕೋ ಬದಲಾಯಿಸಿದರೇ ಆಯಿತು. ನೀವು ಕನ್ನಡ ಸಬ್ ಟೈಟಲ್ಲಿನ ಜೊತೆಗೆ ಚಿತ್ರವನ್ನು ಆರಾಮವಾಗಿ ನೋಡಬಹುದು.ನಾನು ನನ್ನ ಮೊದಲ ಸಬ್ ಟೈಟಲ್ ಮಾಡಿದ್ದು ದಿ ಕಲರ್ ಆಫ್ ಪ್ಯಾರಡೈಸ್ ಚಿತ್ರಕ್ಕೆ. 
ನಿಮ್ಮಲ್ಲೂ ಕನ್ನಡ ಸಬ್ ಟೈಟಲ್ ಮಾಡಲು ಆಸಕ್ತಿ ಇರುವವರು ನಮ್ಮೊಡನೆ ಕೈ ಜೋಡಿಸಿದರೇ ಸುಮಾರಷ್ಟು ಚಿತ್ರಕ್ಕೆ ಕನ್ನಡ ಸಬ್ ಟೈಟಲ್ ಮಾಡಿಬಿಡಬಹುದು. ನಮ್ಮವರಿಗೆ ಜಗತ್ತಿನ ಚಿತ್ರಗಳನ್ನು ತೋರಿಸಬಹುದು. ಸರಿಯಾಗಿ ಕುಳಿತುಕೊಂಡರೆ 3 ತಾಸಿನ ಕೆಲಸವದು. ನಾವೆಲ್ಲರೂ ಒಂದು ಗುಂಪು ಮಾಡಿಕೊಂಡು ಯಾವಯಾವ ಚಿತ್ರಕ್ಕೆ ಯಾರು ಯಾರು ಸಬ್ ಟೈಟಲ್ ಮಾಡುತ್ತಿದ್ದೇವೆ ಎಂಬುದನ್ನು ಮೊದಲೇ ತಿಳಿದುಕೊಂಡರೇ ಇಬ್ಬಿಬ್ಬರು ಒಂದೇ ಚಿತ್ರಕ್ಕೆ ಸಬ್ ಟೈಟಲ್ ಮಾಡುವುದು ತಪ್ಪುತ್ತದೆ.
ದಯವಿಟ್ಟು ಎಲ್ಲರೂ ಕೈಜೋಡಿಸಿ ಎಂಬ ಮನವಿ. ನನ್ನ ಈಮೇಲ್ ವಿಳಾಸಃ swapnageleya@gmail.com
ಹಾಗೆಯೇ ದಿ ಕಲರ್ ಆಫ್ ಪ್ಯಾರಡೈಸ್ ಚಿತ್ರದ ಕನ್ನಡ ಸಬ್ ಟೈಟಲ್ ಗೆ ಇಲ್ಲಿ ಕ್ಲಿಕ್ ಮಾಡಿ.
color of paradise_KAN_SUB
ಅದರ ಪಾಸ್ ವರ್ಡ: ravindratalkies.
ಬನ್ನಿ ಎಲ್ಲರೂ ಸೇರಿ ಒಂದಷ್ಟು ಚಿತ್ರಗಳಿಗೆ ಕನ್ನಡ ಸಬ್ ಟೈಟಲ್ ಮಾಡೋಣ. ನಿಮ್ಮ ಈಮೇಲ್ ಎದುರು ನೋಡುತ್ತಿರುತ್ತೇನೆ.